ಸೂರ್ಯನ್ ಪರ್ಪಂಚದಲ್ಲೊಂದು ಪರ್ಯಟನೆ

ಸೂರ್ಯನ್ ಪರ್ಪಂಚದಲ್ಲೊಂದು ಪರ್ಯಟನೆ

ಸೂರ್ಯ ಸಖ ಪ್ರಸಾದ್ ಕುಲಕರ್ಣಿ ಎಂಬ ಕವಿ / ಲೇಖಕರ ಪರಿಚಯ ಎಲ್ಲರಿಗೂ ಇದ್ದೆ ಇದೆ. ಇವರು ನನಗೆ ಮುಖಪುಟದಲ್ಲಿ ಪರಿಚಯವಾದ ಸ್ನೇಹಜೀವಿ.ಅದ್ಬುತ ವ್ಯಕ್ತಿಯಲ್ಲ ಶಕ್ತಿ.
ಇವರು ಬರೆದ ಕಾದಂಬರಿ “ಸೂರ್ಯನ್ ಪರ್ಪಂಚ” ಕೃತಿಯ ಕುರಿತು ಬರೆಯುವಷ್ಟು ಬುದ್ಧಿವಂತಳು ನಾನಲ್ಲ.
ಈ ಪುಸ್ತಕದ ಕುರಿತು ಬಹಳಷ್ಟು ಬರಹಗಾರರು ಸೊಗಸಾಗಿ ವಿಮರ್ಶೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕೃತಿಗಳ ಸ್ಥಾನದ ಸಾಲಿಗೆ ಇವರ ಈ “ಸೂರ್ಯನ್ ಪರ್ಪಂಚ” ಸೇರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಳೆಯನ್ನು ತಣಿಸಲು ಮೋಡ ಕರಗಿ ಮಳೆಹನಿಯಾಗಿ ಸುರಿದು ಭೂವಿಯ ನಾಚಿಕೆ ನೋಡಲು ಇಣಕುವ ಕಾಮನಬಿಲ್ಲು ನೋಡುಗರ ತನುಮನ ಸೆಳೆಯುವಂತೆ.. ಓದುಗರ ಹೃದಯ ಸೆಳೆದು ಅನೇಕ ಕೌತುಕಗಳೊಂದಿಗೆ ತನ್ನದೇ ಪ್ರಪಂಚಕ್ಕೆ ಕರೆದೊಯ್ದು ಬಹುಪಾತ್ರಗಳ ಜೊತೆ ಸಾಗುತ್ತಾ ಒಂದಿಷ್ಟು ನೋವು, ಬೇಸರ,ಸಂತಸ ತೃಪ್ತಿಭಾವ , ಮುಖದಲ್ಲಿ ಮಂದಹಾಸ ಮೂಡಿಸುವ ಕಾದಂಬರಿಯೇ “ಸೂರ್ಯನ ಪರ್ಪಂಚ”

ಹೌದು ಇದೊಂದು ವಿಭಿನ್ನ ರೀತಿಯ ವಾಸ್ತವದಲ್ಲಿ ಮನುಷ್ಯನ ಗುಣ ಅವಗುಣಗಳನ್ನು ಪರಿಚಯಿಸುವುದರ ಜೊತೆಗೆ ಇಂತಹಾ ಮನಸ್ಥಿತಿಯ ಜನರು ಬಹಳ ಇದ್ದಾರೆ ಎನ್ನುವುದು ನಮಗೆ ಮನದಟ್ಟು ಮಾಡಿಸುವ ಕೃತಿ.

ಸೂರ್ಯನ ಪ್ರಪಂಚದಲ್ಲಿ ಸುಮಾರು ದಿನಗಳಿಂದ ಸಾಗಿದ ಪಯಣ ನನ್ನದು .ಅದರಂತೆ ಈ ಸೂರ್ಯನ ಪ್ರಪಂಚ ಕೃತಿಯನ್ನು ಪ್ರೀತಿಯಿಂದ ಪ್ರಸಾದ್ ಸರ್ ಅವರು ಕಳುಹಿಸಿದಾಗ ಅದು ನನಗೆ ತಲುಪಿದ ದಿನದಿಂದಲೇ ಅದನ್ನು ಓದಲು ಪ್ರಾರಂಭಿಸಿದೆ.

ಈ ಕಾದಂಬರಿಯಲ್ಲಿ ಬಹುಪಾತ್ರಗಳು ಬಂದು ಹೋಗುತ್ತವೆ. ಪ್ರತಿಯೊಂದು ಪಾತ್ರಗಳು ಸಹ ಕಥೆಯಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿವೆ. ಇದು ಲೇಖಕರ ಜಾಣ್ಮೆ ಮತ್ತು ತಾಳ್ಮೆ.
ಕೇಶವ ಎನ್ನವ ಒಂದು ಪುಟ್ಟ ಮಂದಬುದ್ಧಿಯ ಬಾಲಕ ಕೂಡ ಕಥೆಯಲ್ಲಿ ಮುಖ್ಯವಾಗುತ್ತಾನೆ.

ಕಥೆಯಲ್ಲಿ ಬರುವ ವಿಭಿನ್ನ ಪಾತ್ರಗಳು ಹಾಗಿವೆ. ವೃಶಾಲಿ, ಸೂರ್ಯರ ಪರಿಚಯದಿಂದ ಶುರುವಾಗಿ ನಡು ನಡುವೆ ಬೇರೆ ಬೇರೆ ಪ್ರಾತಗಳ ಪ್ರವೇಶ ಆಗಿ ಇವರಿಗೂ ಕಥಾನಾಯಕರಿಗೂ ಏನು ಸಂಬಂಧ ಕಥೆ ಎಲ್ಲಿ ಸಾಗುತ್ತಾ ಇದೆ ಎಂದು ಒಂದಿಷ್ಟು ಗೊಂದಲ ಸೃಷ್ಟಿಯಾಗುವುದು ನಿಜವಾದರೂ
ನಂತರ ಕಥೆ ಪೂರ್ಣಗೊಳಿಸದೆ ಪುಸ್ತಕ ಮುಚ್ಚಿಡಲು ಮನಸಾಗುವುದೇ ಇಲ್ಲ. ಹಾಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಈ ಕೃತಿ ಓದಿದ ಮೇಲೆ ಪ್ರಸಾದ್ ಕುಲ್ಕರ್ಣಿ ಅವರ ಜ್ಞಾನ, ತಾಳ್ಮೆ ಎಷ್ಟರ ಮಟ್ಟಿಗೆ ಇರಬಹುದು ! ಅಬ್ಬಾ … ಎನಿಸದಿರದು.ನಿಜಕ್ಕೂ ಲೇಖಕರಿಗೆ ಒಂದು ಸಲಾಂ.

ಸೂರ್ಯ ನಾರಾಯಣ ಕರಿಕಟ್ಟೆ ಕಥೆಯ ನಾಯಕ .
ಕಾದಂಬರಿಯನ್ನು ಓದಿದಾಗ ಸೂರ್ಯ ಮತ್ತು ವೃಶಾಲಿಯರ ಪರಿಶುದ್ಧ ಸ್ನೇಹ ಎಲ್ಲರ ಮನವನ್ನು ಗೆಲ್ಲುತ್ತದೆ . ಸ್ನೇಹ ಎಂದರೆ ಇವರಂತೆ ಇರಬೇಕು ಎನಿಸುವ ಭಾವ ಮೂಡುತ್ತದೆ.

ಅಂಗವಿಕಲೆಯಾದ ವೃಶಾಲಿಯು ತನ್ನ ಏಳನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡುದ್ದು, ಪುಣ್ಯಕೋಟಿ ಗೋವಿನ ಹಾಡು ನೆನೆದು ಅತ್ತಾಗ ನನ್ನ ಕಣ್ಣು ಒದ್ದೆಯಾಗಿದ್ದು ಉಂಟು.
ವೃಶಾಲಿ ದಿಟ್ಟ ಧೀರ ಮಹಿಳೆ ವಕೀಲೆಯಾಗಿ ತನ್ನ ಸಂಬಂಧಿಕರ ವಿಷಯದಲ್ಲಿ ಲಾಭವಿಲ್ಲದಿದ್ದರು ಸಹಾಯ ಮಾಡುವ ಆಕೆಯ ಗುಣ ಅನುಕರಣೀಯ. ನಿಜಕ್ಕೂ ಹೆಣ್ಣೆಂದರೆ ಹೀಗಿರಬೇಕು.
ಎಲ್ಲಾ ಕುಹಕು, ಅಪವಾದ,ಅಪಮಾನಗಳ ಮೆಟ್ಟಿ ನಿಂತು ಬಾಳಸಂಗಾತಿಯಾದ ಪ್ರಕಾಶನಂತ ಅಲ್ಪಬುದ್ಧಿಯ ವ್ಯಕ್ತಿಯ ವರ್ತನೆ, ಮಾತುಗಳ ಸಹಿಸಿಕೊಂಡು ಆತನಿಗೆ ಚಿಕಿತ್ಸೆ ಕೊಡಿಸುತ್ತಾ ತನ್ನ ವೃತ್ತಿಯಲ್ಲಿ ತೊಡಗುವುದರ ಜೊತೆಗೆ ಗಂಡನ ಬಗ್ಗೆ ಆರೋಗ್ಯದ ಕಡೆ ಗಮನ ಹರಿಸಿ ಸಹನೆಯಿಂದ ಬಾಳ್ವೆ ನಡೆಸಿ ಭಾರತೀಯ ನಾರಿಯರ ಕರ್ತವ್ಯವನ್ನು ಸಮರ್ಥಿಸಿಕೊಂಡಿದ್ದಾಳೆ.

ಸೂರ್ಯ ಒಬ್ಬ ಸ್ನೇಹ ಜೀವಿ, ಮಿಂಚು ಪತ್ರಿಕೆಯ ಸಂಪಾದಕ ,ಸ್ನೇಹಿತ ಅರುಣ ಅವರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಅವರ ಮನೆಯಲ್ಲಿ ಇರುತ್ತಾನೆ ಅತ್ಯುತ್ತಮ ಕಥೆಗಾರ, ಪತ್ರಕರ್ತನು ಕೂಡ ಆಗಿರುತ್ತಾನೆ ನಮ್ಮ ಕಥೆಯ ನಾಯಕ ಸೂರ್ಯ ನಾರಾಯಣ ಕರಿಕಟ್ಟೆ.

ಈ ಕಾದಂಬರಿಯಲ್ಲಿ ಬರೀ ಸ್ನೇಹ ಮಾತ್ರ ಅಲ್ಲ ಪ್ರೀತಿ, ಪ್ರೇಮ,ಪ್ರಣಯ, ಕಾಮುಕತನ, ಕೊಲೆ, ಮಾಟಮಂತ್ರ, ಪ್ರಕೃತಿಯ ಸೌಂದರ್ಯವನ್ನು ವರ್ಣಿಸುತ್ತಾ ಕಾನೂನಿನ ಒಂದಿಷ್ಟು ಪರಿಚಯವೂ ಓದುಗರಿಗೆ ಆಗುತ್ತದೆ.

ಮಾಧವ ಮಂದಿರದಲ್ಲಿ ಶುರುವಾದ ಶ್ರೀವತ್ಸ ಮತ್ತು ರಾಗಿಣಿಯ ಪ್ರೇಮ ಕಥೆಯನ್ನು ಸೊಗಸಾಗಿ ಹೇಳಿದ್ದಾರೆ.
ಜಾತಿ ಬೇರೆ ಇದ್ದರೂ ಮದುವೆಯಾದ ರಾಗಿಣಿ ಶ್ರೀವತ್ಸರ ದಾಂಪತ್ಯ ಜೀವನ ಸುಖಮಯವಾಗಲಿಲ್ಲ.
ರಾಗಿಣಿಯ ಮಿತಿಮೀರಿದ ದುರಹಂಕಾರ ,ಸ್ವಾರ್ಥ ಪ್ರೀತಿ
ಶ್ರೀವತ್ಸ ಮತ್ತು ಮನೆಯವರನ್ನು ನೋಯಿಸಿ ಕೊನೆಗೆ ವೃಶಾಲಿಯ ಸಲಹೆಯಂತೆ ಡೈವೋರ್ಸ್ ಆಗುತ್ತದೆ.

ಶಾಲ್ಮಲೆ ಕಥೆ ಮಾತ್ರ ಬಹಳ ಕೂತೂಹಲ ಮೂಡಿಸುತ್ತದೆ.
ಗುರುರಾಜ ಎನ್ನುವ ಸಂಬಂಧಿಯನ್ನು ಪ್ರೀತಿಸಿ, ಅವನು ದುಷ್ಟ ಎಂದು ತಿಳಿದು ಅವನಿಂದ ದೂರ ಸರಿದು ಶ್ರೀನಿವಾಸ ಎನ್ನುವ ವ್ಯಕ್ತಿಯನ್ನು ಮದುವೆಯಾಗಿ, ಮಾಧು ಎನ್ನುವ ಕಾಮುಕ ಮೈದುನನ ನೀಚ ನಡತೆಯಿಂದ ನೆಮ್ಮದಿ ಕಳೆದುಕೊಂಡು, ಗಂಡನ ಅಸಹಾಯಕತೆಯಿಂದ ರೋಸಿ ಹೋಗಿ ಕೊನೆಗೆ ತೋಟದಲ್ಲಿ ಕೊಲೆಯಾದ ಮೈದುನನ ಕೊಲೆ ಆರೋಪ ಹೊತ್ತುಕೊಂಡು, ನಂತರ ಆರೋಪದಿಂದ ಮುಕ್ತಿ ಪಡೆದು ಸುಖಜೀವನ ನಡೆಸುತ್ತಾಳೆ.

ಕಥೆಗಾರ ಸೂರ್ಯನಿಗೆ ಕಥೆಯ ವಸ್ತು ಶಾಮಿ ..ಮುಖ್ಯ ಕತೆಯೂ ಅವಳದೇ. ವಿಶ್ವೇಶ್ವರ ಭಟ್ಟರು ಎನ್ನುವವರ ಹಣದ ಮೋಹ ಶಿವಾನಿ, ಭವಾನಿ ಎನ್ನುವ ಅಸಹಾಯಕ ಹೆಣ್ಣುಮಕ್ಕಳ ಆತ್ಮಹತ್ಯೆ ..ಹೀಗೆ ಕಥೆ ಒಂದೊಂದು ದಿಕ್ಕಿನಲ್ಲಿ ಸಾಗುತ್ತದೆ.

ಈ ಪಾತ್ರಗಳಿಗೆ ಸಾಕ್ಷಿ ಸೂರ್ಯ ಮತ್ತು ವೃಶಾಲಿ. ಬರೀ ಮಾತಿನಲ್ಲಿ ಹೇಳಿದರೆ ಚಂದ ಅಲ್ಲ ಪ್ರತಿಯೊಬ್ಬರು ಓದಿ “ಸೂರ್ಯನ ಪರ್ಪಂಚ”ದಲ್ಲಿ ವಿಹರಿಸಿದಾಗಲೇ ಅರ್ಥವಾಗುತ್ತದೆ.

ಒಟ್ಟಿನಲ್ಲಿ ಈ ಕಾದಂಬರಿ ಒಂದು ಸುಖಾಂತ್ಯ ಕಂಡುಕೊಳ್ಳತ್ತದೆ. ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳಲ್ಲಿ ನನಗೆ ಇಷ್ಟ ಆಗಿದ್ದು ಮಾತ್ರ ವೃಶಾಲಿಯ ಪತಿ ಪ್ರಕಾಶ್.. ಏಕೆಂದರೆ ಆತನ ಮಾತಿನ ಚಾಕಚಕ್ಯತೆ ,ಅರ್ಥ ,ಬುದ್ಧಿವಂತಿಕೆ ಅದ್ಭುತ.
ಸೂರ್ಯನ ಸ್ನೇಹ ಮನೋಭಾವ, ಆತನ ತಾಳ್ಮೆ ಓದುಗರ ಸೆಳೆಯುತ್ತದೆ.

ಲೇಖಕ ಸೂರ್ಯಸಖ ಪ್ರಸಾದ್ ಕುಲ್ಕರ್ಣಿಯವರು ಓದುಗರಿಗೆ ಎಂದು ಮರೆಯಲು ಆಗದಂತೆ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ಉಳಿಯುವ ಒಂದು ವಿಶಿಷ್ಟ- ವಿಶೇಷವಾದ ಕಾದಂಬರಿಯನ್ನು ನೀಡಿದ್ದಾರೆ. ಅವರಿಗೆ ಶುಭವಾಗಲಿ. ಇನ್ನಷ್ಟು ಮತ್ತಷ್ಟು ಕೃತಿಗಳು ಇವರಿಂದ ಕನ್ನಡಮ್ಮನ ಪಾದಕ್ಕೆ ಅರ್ಪಿತವಾಗಲಿ ಎಂದು ಹಾರೈಸುತ್ತೇನೆ.

ಕಾದಂಬರಿಗೆ ಲೇಖಕರಾದ ಶ್ರೀ ಸುರೇಶ್ ಕೊರಕೊಪ್ಪ ಮುನ್ನುಡಿ ಬರೆದಿದ್ದರೆ ಬೆನ್ನುಡಿಯನ್ನು ಶ್ರೀ ವಾಸುದೇವ ನಾಡಿಗರು ಬರೆದಿದ್ದಾರೆ.
ಶ್ರೀ ಪೀರಸಾಬ ನದಾಫರ ಆಶಯ ನುಡಿ ಇರುವ ಈ ಕಾದಂಬರಿಯನ್ನು
HSRA ಪ್ರಕಾಶನ ಪ್ರಕಟಿಸಿದೆ. ಬೆಲೆ 250 ರೂ ಗಳು.

ನೀವಿನ್ನೂ ಓದಿಲ್ಲವಾದರೆ ಒಮ್ಮೆ ಓದಿ ಬಿಡಿ ಸೂರ್ಯನ್ ಪರ್ಪಂಚದ ಪರ್ಯಟನೆ ನಿಮಗೆ ಬೋರು ಹೊಡೆಸದು.

ಶ್ರೀಮತಿ ಕವಿತಾ ಹಿರೇಮಠ
ಕವಿತಾಳ

Don`t copy text!