ಅರ್ಥ ಅಪಾರ್ಥಗಳ ಅರಿವಿನಲೆಯಲಿ

 

ಅರ್ಥ ಅಪಾರ್ಥಗಳ ಅರಿವಿನಲೆಯಲಿ

ಈ ಜಗತ್ತಿನಲ್ಲಿ ಬಹುದೊಡ್ಡ ಜವಾಬ್ದಾರಿ ಯಾವುದು ಗೊತ್ತೆ? ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು! ಆ ಸಂಬಂಧಗಳ ನಿಭಾಯಿಸುವುದು!! ಇದನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಳ್ಳುತ್ತ ಬಂದಿರುವೆ ಎನಿಸಿದರೂ, ಎಲ್ಲೋ ಒಂದು ಕಡೆ ಮನದ ಮೂಲೆಯಲ್ಲಿ ಕಾಡುವ ಒಂದು ಆತಂಕ ಇದ್ದೇ ಇದೆ. ನಾನೇನೊ ನಿಭಾಯಿಸಿದೆ. ಆದರೆ ನನಗೆ ಮತ್ತೆ ಹಿಂದಿರುಗಿ ಏನು ಸಿಕ್ಕಿದೆ? ಎಷ್ಟು ಪ್ರೀತಿ ಹಂಚಿದೆ! ಆದರೆ ದಕ್ಕಿದ್ದೇನು? ಪ್ರಶ್ನೆ ಮನದಾಳದಲ್ಲಿ ಎದ್ದು ನಿಂತಿದೆ. ಈ ಸಂಬಂಧಗಳ ನಿಭಾಯಿಸುವ ಗುತ್ತಿಗೆ ನಾನೇ ಏಕೆ ತೆಗೆದುಕೊಳ್ಳಬೇಕು? ನಾನೇ ಏಕೆ ಹಿಂಸೆ ಪಡಬೇಕು? ಎನ್ನುವ ಮೊಂಡುತನವಿದ್ದರೂ, ಅಷ್ಟೇ ರೋಸಿ ಹೋದ ಮನ ನೊಂದು ಸುಮ್ಮನಾಗುತ್ತದೆ.

ಈ ಮನಸು ಎಷ್ಟೆಲ್ಲಾ ಹೊಂದಾಣಿಕೆ ಮಾಡಿಕೊಳ್ಳುತ್ತ, ಯಾವುದೇ ತಕರಾರಿಲ್ಲದೆ, ಬಂದದ್ದೆಲ್ಲಾ ಬರಲಿ ಬರಲಿ ಎಂದುಕೊಳ್ಳುತ್ತ, ಎಲ್ಲವನ್ನೂ ಸುಸೂತ್ರವಾಗಿ ಎಳೆದುಕೊಂಡು ಹೋಗುತ್ತಿರುತ್ತದೆ. ಹಾಗೆ ಹೋಗುವ ಭರವಸೆಯೊಂದು ಮೂಡಿ ಆಶಾದಾಯಕ ನಿರೀಕ್ಷೆ. ಇಷ್ಟರ ಮಧ್ಯದಲ್ಲಿ ತ್ಯಾಗದ ಭಾವ, ವೈರಾಗ್ಯದ ಮನಸ್ಥಿತಿ, ಶಾಂತ ಚಿತ್ತ ರೂಢಿಸಿಕೊಂಡಿರುವೆ ಎನ್ನುವ ಭ್ರಮೆ. ಹಾಗೆನಿಸಿದಾಗ, ಭ್ರಮನಿರಸನ!

ಇಂತಹ ದ್ವಂದ್ವಗಳ ನಡುವೆ ನಾನು ಯಾರು? ನನ್ನ ಅಸ್ತಿತ್ವ ಏನು? ಎಲ್ಲಿಗೆ ಹೊರಟಿರುವೆ? ನಾನು ತಲುಪಲಿರುವ ಗಮ್ಯವಾದರೂ ಯಾವುದು? ಹೀಗೆ ಏಳುವ ಜೀವನದ ಪ್ರಶ್ನೆಗಳು ಪ್ರಶ್ನೆಗಳೇ ಹೊರತು ಉತ್ತರ ಸಿಗುವ ಮಾತೇ ಇಲ್ಲ. ಆದರೂ ನನ್ನ ವ್ಯಕ್ತಿತ್ವದಲ್ಲಿರುವ ತ್ಯಾಗ ಗುಣ, ಸೇವಾ ಮನೋಭಾವ, ಪ್ರೀತಿ ಹಂಚುವ ಮಧುರ ಭಾವನೆಗಳು, ಇವುಗಳೆಲ್ಲದರ ನಡುವೆ ಜೀವನ ಸುಸೂತ್ರವಾಗಿ ಸಾಗುತ್ತಲೇ ಇದೆ. ಅಂತ್ಯದಲ್ಲಿ ನನಗಾಗಿ ಏನು? ಇದಕ್ಕೆ ನಿರುತ್ತರಳಾಗಿ ಸೋತ ಭಾವದಿಂದ ನಾ ಮೌನಿ!

ಪ್ರೀತಿಯ ಅಗಾಧ ಕಡಲು ನನ್ನ ಸಿರಿವಂತಿಕೆ. ಅದುವೇ ಆಸ್ತಿ. ಆದರೂ ನನ್ನಂತರಂಗ ಸದಾ ಖಾಲಿ ಖಾಲಿ ಎನಿಸಲು ಕಾರಣದ ಹುಡುಕಾಟ ಶುರು.

ಒಮ್ಮೆ ‘ನೀ’ ಹೀಗೇ ಸಿಕ್ಕಾಗ ‘ನಾವು’ ಆಗಬಹುದೆಂಬ ಊಹೆಯೂ ಇರಲಿಲ್ಲ. ಅದರ ಪರಿಕಲ್ಪನೆ ಇಲ್ಲದ ನಾ ಆ ಗೋಜಿಗೆ ಹೋಗದೆ ನನ್ನ ಪಾಡಿಗೆ ನಾ ಇದ್ದವಳು. ಅದೇನೋ ಒಂದು ರೀತಿಯ ನಿರ್ಲಿಪ್ತತೆ ನನ್ನನ್ನಾವರಿಸಿತ್ತು. ಅದು ನನಗೇ ತಿಳಿಯದಂತೆ ಆಕ್ರಮಿಸಿಕೊಂಡು ಏನೂ ಮಾಡಲಾಗದೆ ಸುಮ್ಮನಿರುತ್ತಿದ್ದೆ. ಇದು ಸೋಜಿಗ ಎನಿಸಿದರೂ ಸತ್ಯ!

ನೀ ನನ್ನ ಕಂಡಾಕ್ಷಣವೇ ನಾ ನಿನ್ನ ಸರ್ವಸ್ವವಾಗಿಬಿಟ್ಟೆ. ಇಡೀ ಜಗತ್ತು ಒಂದು ಕಡೆಯಾದರೆ, ನಾನೇ ನಿನ್ನ ಜಗತ್ತಾಗಿ ಹೋದೆ. ಅದನ್ನರಿಯದೆ ಒಂದಿಷ್ಟು ಕಣ್ಣಾಮುಚ್ಚಾಲೆ ಆಡಿದ್ದೇ ಆಡಿದ್ದು. ನಿನ್ನೊಳಗೊಂದು ವಿಶಾಲವಾದ ಭಾವನಾತ್ಮಕ ಲೋಕದ ಭಾವಕೋಶವಿದ್ದರೂ ವಾಸ್ತವ ದೃಷ್ಟಿಕೋನ ಗಟ್ಟಿಯಾಗಿತ್ತು. ನನ್ನ ಭ್ರಮೆಗಳನ್ನೆಲ್ಲಾ ಕಳಚಿ ವಾಸ್ತವದಲ್ಲಿ ಪ್ರೀತಿಯ ಗೂಡು ಕಟ್ಟುವಲ್ಲಿ ನೀ ಯಶಸ್ವಿಯಾದೆ.

ಪ್ರೀತಿ ಕೊಡುವುದು ಗೊತ್ತಿತ್ತು, ಸ್ವೀಕರಿಸುವುದು ಗೊತ್ತಿರಲಿಲ್ಲ. ಬರೀ ಕೊಟ್ಟು ಕೊಟ್ಟು ಬಡವಾಗಿರುವ ವಿಷಯ, ನೀ ನನ್ನ ಜೀವನದಲ್ಲಿ ಪದಾರ್ಪಣೆ ಮಾಡಿದಾಗಲೇ ತಿಳಿದದ್ದು. ಪ್ರೀತಿ, ಪ್ರೇಮ, ಒಲವು, ಅನುರಾಗದ ಬೆಸುಗೆ ಮನದಲಿ ಮೂಡಿಸಿದವನು ನೀನು! ಇದೇ ಮೊದಲ ಬಾರಿಗೆ ಮಧುರ ಭಾವಗಳ ಪ್ರೀತಿಯ ಹೂಮಳೆಯಡಿಯಲಿ ಮಿಂದೇಳುವ ಸುಂದರ ಸಮಯ. ನಾ ಹುಚ್ಚಿಯಂತೆ, ಇದನ್ನು ನಂಬಲು ಆಗದ ಸ್ಥಿತಿ ತಲುಪಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ. ಅದಕ್ಕೊಂದೇ ಉತ್ತರ ‘ನೀನು!’ ಇದಕೆಲ್ಲಾ ನೀನೇ ಕಾರಣ ಎಂದು ತಿಳಿದಾಗ ಮನಸು ನಿರಾಳ.

ನಾ ಜೀವನದಲ್ಲಿ ಬಹಳ ನೊಂದುಕೊಂಡವಳೆಂಬ ಅನುಕಂಪ ನಿನ್ನಲ್ಲಿ. ನೀ ಆಲೋಚಿಸಿ ಆಲೋಚಿಸಿ ಅಪಾರ ಆರ್ದ್ರತೆಯಿಂದ ಮನಸ್ಸನ್ನು ಹದಗೊಳಿಸಿಕೊಂಡಿದ್ದೆ. ಬದುಕಿನುದ್ದಕ್ಕೂ ಕಷ್ಟಗಳ ಸರಮಾಲೆಯನ್ನೇ ಹೊತ್ತು ತಿರುಗಾಡಿದ್ದು, ನೀ ಹೇಳುವವರೆಗೆ ಅರಿವಿಗೇ ಬಂದಿರಲಿಲ್ಲ. ಹೌದಲ್ಲ? ಎಷ್ಟು ಅರಿವುಗೇಡಿ ಎನಿಸಿದ್ದಿದೆ. ಇದನ್ನು ಮೂರ್ಖತನ ಎನ್ನಲೊ? ಅಮಾಯಕತೆ ಎನ್ನಲೊ? ಒಂದೂ ಅರ್ಥವಾಗದು. ಇರಲಿ ಬಿಡು. ಆದರೆ ಅದರಿಂದ ನಾ ಪಡೆದುದು ಈ ಜಗತ್ತಿನಲ್ಲೇ ಬಹಳ ಮಹತ್ವದ್ದು. ಅಂಥದ್ದೇನು ಪಡೆದುಕೊಂಡೆ? ಎಂದು ನೀನು ಕೇಳಿದರೆ, ಹೇಗೆ? ಈ ಜೀವಜಗದಲಿ ನೀ ಕೊಟ್ಟ ಪ್ರೀತಿಗೆ ಏನು ಸಮ? ಯಾವುದಕ್ಕೆ ಹೋಲಿಸಲಿ? ನಿಜಕ್ಕೂ ನಾ ಧನ್ಯೆ! ಇದೇ ಪ್ರಶ್ನೆ ಮತ್ತೆ ಮತ್ತೆ ಕೇಳಿದರೆ ನಾ ಹೆಚ್ಚು ಹೆಚ್ಚು ಭಾವುಕಳಾಗಿ ಮೂಕಳಾಗುತ್ತೇನೆಯೆ ಹೊರತು ಮಾತು ಆಡಲಾರೆ.

ಗಂಡಿನ ಬಗ್ಗೆ ಯಾವುದೇ ಭಾವನೆ, ಸೆಳೆತ, ಆಕರ್ಷಣೆಗಳಿರದ ನನ್ನಲ್ಲಿ, ನೀ ತೀವ್ರ ತರದ ಭಾವದಲೆಯ ಎಬ್ಬಿಸಿ, ಬಿರುಗಾಳಿ ಬೀಸುವಂತೆ ಮಾಡಿದೆ. ನನ್ನ ನಾ ಹತೋಟಿಯಲಿ ಹಿಡಿದಿಟ್ಟುಕೊಳ್ಳುವುದಾದರೂ ಹೇಗೆ? ಪ್ರಕೃತಿ ಸಹಜ ಎಂದ್ಹೇಳಲು ಮನಸಾಗುವುದಿಲ್ಲ. ಎಂದೂ ಯಾವತ್ತೂ ಕರಗದ ನನ್ನಂತರಂಗದ ಆಳವನ್ನೇ ಬುಡ ಮೇಲು ಮಾಡಿದ ನಿನ್ನ ಮಾಂತ್ರಿಕ ಶಕ್ತಿಗೆ ಏನೆಂದು ಹೆಸರಿಸಲಿ? ಅಬ್ಬಾ! ಹೀಗೆ ನಿನ್ನೆಲ್ಲಾ ಆಣತಿಗೆ ಎಲ್ಲದಕ್ಕೂ ಒಪ್ಪಿ ಮುನ್ನಡೆವುದೇ ಸ್ವಭಾವವಾಯಿತು.

ಈಗ ‘ನಾನು’, ‘ನೀನು’ ಒಬ್ಬರಿಗೊಬ್ಬರು ಎಷ್ಟು ಅರ್ಥ ಆಗಿದ್ದೇವೆ ಅಂದರೆ, ಅಲ್ಲಿ ಅರ್ಥೈಸಿಕೊಳ್ಳುವಾಗ ಅಪಾರ್ಥ ಮಾಡಿಕೊಳ್ಳಲು ಒಂದಿಷ್ಟೂ ಅವಕಾಶವೇ ಇಲ್ಲ. ಆದರೂ ಈ ಬದುಕು ಎಷ್ಟು ವಿಚಿತ್ರ ನೋಡು. ಜೀವನದ ಹಾದಿಯಲಿ ಯಾವ ಘಳಿಗೆ ತಪ್ಪು ತಿಳಿದು ತಪ್ಪು ದಾರಿ ಹಿಡಿಯುತ್ತೇವೊ? ಹೇಳುವುದು ಕಷ್ಟ. ಕೆಲವೊಮ್ಮೆ ನಮಗರಿವಿಲ್ಲದೆ ಅಪಾರ್ಥ ಮಾಡಿಕೊಂಡಿರುತ್ತೇವೆ. ಆ ಗೊಂದಲ ಬಿಡಿಸುವವರು ಯಾರು ಹೇಳು?

ಸಂಬಂಧದಲ್ಲಿ ಭಾವನೆಗಳ ಎಳೆಗಳು ಎಷ್ಟು ಸೂಕ್ಷ್ಮವಾಗಿರುತ್ತವೆಂದರೆ ಕೂದಲೆಳೆಯ ವ್ಯತ್ಯಾಸವೂ ಬಹುದೊಡ್ಡ ಕಂದಕ. ನೀನು ಒಂದೇ ಒಂದು ಕ್ಷಣ ನನ್ನ ಮೇಲೆ ಬೇಸರಿಸಿಕೊಂಡರೆ, ನನ್ನಿಂದ ವಿಚಲಿತನಾದರೆ, ಈ ಮನಸಿಗೆ ಆಗುವ ಆಘಾತ ಹೇಗೆ ಹೇಳಲಿ? ಇಡೀ ಜಗತ್ತೇ ಸುಸ್ತಾಗಿ, ಸೋತ ಭಾವದಲಿ ಶೂನ್ಯದಾವರಿಸುವಿಕೆ. ಇಂಥ ಸಮಯದಲ್ಲಿ ಕಾಡುವ ಮನಸಿರಿಯ ಬಡತನವ ಹೇಗೆ ವರ್ಣಿಸಲಿ? ಎಲ್ಲವೂ ಇದ್ದು ಏನೂ ಇಲ್ಲದ ತಿರುಪೆತನ.

ನೀ ನಾನಂದುಕೊಂಡಷ್ಟು ಗಟ್ಟಿ ಹೃದಯಿ, ಕಠೋರ ಮನಸುಳ್ಳವನಲ್ಲ. ಎರಡೂ ಕಡೆ ಆ ಹೊಯ್ದಾಟ ಇದ್ದೇ ಇರುತ್ತದೆ. ನಾ ವಿಲಿವಿಲಿ ಒದ್ದಾಡಿದರೆ ನೀ ಸತ್ತೇ ಹೋದಂತೆ ಭಾವಿಸುತ್ತಿ. ಮರುಕ್ಷಣವೇ ನಿನ್ನಿಂದ ಕಾಲ್! ನನ್ನ ಮನಸು ಗರಿಗೆದರಿದ ನವಿನಂತೆ ಕುಣಿದು ಕುಪ್ಪಳಿಸಿ ಬಿಡುತ್ತದೆ.

‘ಹೋಗಲಿ ಬಿಡು… ಯಾಕಿಷ್ಟು ಒದ್ದಾಟ? ಅ’ಪಾ’ರ್ಥದ ನಡುವಿನ ‘ಪಾ’ ತೆಗೆದು ಬಿಡು. ಆಗ ನಿನಗೆ ನಾ ನನಗೆ ನೀ! ಅಷ್ಟೆ. ನಾವಾಗಿ ಇರುವುದು ತಪ್ಪಿದ್ದಲ್ಲ. ಬಾ ಖುಶಿ ಖುಶಿಯಿಂದ ಮುಂದೆ ಸಾಗೋಣ…’
ನಿನ್ನ ಮಾತು ನಮ್ಮ ಪ್ರೀತಿಯನ್ನು ಮತ್ತೆ ಹಳಿಯ ಮೇಲೆ ತಂದು ನಿಲ್ಲಿಸುತ್ತದೆ!
ಮತ್ತೆ ಸಾಗುತಲಿದೆ…
ಜೀವನ ಜೊತೆ ಜೊತೆಯಲಿ…
ಅರಿವಿನಲೆಯಲಿ….

ಸಿಕಾ, ಕಲಬುರ್ಗಿ

Don`t copy text!