ಶೇಗುಣಸಿಯಲ್ಲಿ ಬಸವಪುರಾಣ:
ಬಸವತತ್ವಕ್ಕೆ ವಿಶ್ವಮಾನ್ಯತೆ ಪಡೆದ ಶಕ್ತಿ ಇದೆ….ಜಗದ್ಗುರುನಿಡಸೋಸಿ ಪೂಜ್ಯರು.
ವರದಿ. ರೋಹಿಣಿ ಯಾದವಾಡ
ಅಲ್ಲಮಪ್ರಭುಗಳು ಹೇಳಿದಂತೆ ” ಅಪರಿಮಿತ ಕತ್ತಲೆಯೊಳಗೆ ಬೆಳಕನ್ನಿತ್ತವರು” ಎಂಬ ಮಾತು ೧೨ ನೇ ಶತಮಾನದಲ್ಲಿ ಕತ್ತಲೆಯನ್ನು ಕಳೆದು, ಜ್ಞಾನದ ಬೆಳಕನ್ನು ಇಟ್ಟ ಬಸವಣ್ಣನವರು. ಅಂಧಶೃದ್ದೆಗಳಿಂದ ಕೂಡಿದ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವದರೊಂದಿಗೆ ಮಹಿಳೆಯರಿಗೆ ಸಮಾನತೆ ನೀಡಿದರು. ಅಕ್ಷರ ಕಲಿಯದ ಮಹಿಳೆಯರಿಗೆ ಅಕ್ಷರಜ್ಞಾನ ನೀಡಿ ದೇಶ ವಿದೇಶಗಳಲ್ಲಿ ಚಿಂತನೆಗೈಯುವಂತ ವಚನ ಬರೆಯುವಂತೆ ಮಾಡಿದ್ದು ಮೇಲಿನ ಮಾತಿಗೆ ಸಾಕ್ಷಿಯಾಗಿದೆ. ವಚನ ಸಂಸ್ಕಾರ ಪಡೆದ ನಿರಜ ಪಾಟೀಲರಂತವರಿಂದ ಇಂದು ಬಸವಣ್ಣ ಮೂರ್ತಿ ಲಂಡನ್ ದಲ್ಲಿ ವಿರಾಜಮಾನವಾಗಿ ವಿಶ್ವಖ್ಯಾತಿ ಪಡೆಯುವಂತಾಗಿದೆ. ಇದು ಬಸವತತ್ವದ ಮಹಿಮೆ ಎಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.
ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ವಿರಕ್ತಮಠದ ಪೂಜ್ಯ ಶಂಕರ ಮಹಾಸ್ವಾಮಿಗಳ ಅಮೃತಮಹೋತ್ಸವ, ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬ ಹಾಗೂ ಡಾ.ಮಹಾಂತ ದೇವರು ಅವರ ನಿರಂಜನ ಪಟ್ಟಾಧಿಕಾರ ಮಹೋತ್ಸವದಂತಹ ತ್ರಿವಿಧ ಸಂಗಮ ಕಾರ್ಯಕ್ರಮಗಳ ಅಂಗವಾಗಿ ಒಂದು ತಿಂಗಳು ಪರ್ಯಂತ ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮಿಗಳವರಿಂದ ನಡೆಯುವ ಭೀಮಕವಿಯ ” ಬಸವಪುರಾಣ” ದ ಉದ್ಘಾಟನೆ ನೆರವೇರಿಸಿ ಮೇಲಿನಂತೆ ಆರ್ಶೀವಚನ ನೀಡುತ್ತ ಪುರಾಣಗಳು ಮನಸ್ಸು ಪರಿಶುದ್ಧಗೊಳಿಸುತ್ತವೆ ಕೇಳಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಿ ಎಂದರು.
ಪ್ರವಚನಕಾರರಾದ ಹಂದಿಗುಂದದ ಪೂಜ್ಯ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತ, ಬಸವಣ್ಣನವರು ವಿಶ್ವವಂದಿತರು, ಅವರನ್ನು ಅರ್ಥೈಸಿಕೊಳ್ಳಲು ಬಸವಪುರಾಣ ಕೇಳಬೇಕು. ಇಂದು ಕೇಳುವ ಸಂಸ್ಕೃತಿ ನಶಿಸಿ ನೋಡುವ ಸಂಸ್ಕೃತಿ ಹೆಚ್ಚುತ್ತಿರುವುದು ವಿಪರ್ಯಾಸ. ಮೊಬೈಲ್ ಟಿವಿ ನೋಡುವುದು ಕಡಿಮೆಯಾಗಬೇಕು. ಕರುಣೆ, ದಾನ, ಅನುಭಾವ , ಕಾಯಕ, ದಾಸೋಹದಂತಹ ತತ್ವ ತಿಳಿದು , ಬಸವತತ್ವ ಕೇಳಿದೆ ಅರಿತುಕೊಂಡು ಆಚರಿಸುವಂತಾಗಬೇಕು. ೧೨ ನೇ ಶತಮಾನ ಈಗ ೨೧ ನೇ ಶತಮಾನದಲ್ಲಿ ಬಸವ ಯುಗವಾಗಿ ಮರುಕಳಿಸುವಂತಾಗಬೇಕೆಂದರು.
ಹುಕ್ಕೇರಿಮಠದ ಪೂಜ್ಯ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಬಸವಪುರಾಣ ಆಲಿಕೆಯಿಂದ ಮನದ ಕತ್ತಲೆ ಕಳೆದು ಸುಜ್ಞಾನವನ್ನು ನೀಡಿ ನಮ್ಮ ಕರ್ಮ ಕಳೆಯುವುದು. ಬಸವ ಪುರಾಣ ಕೇಳಿ ನಿಮ್ಮ ಸಂಕಲ್ಪ ಈಡೇರಿಸಿಕೊಳ್ಳಿ ಎಂದರು.
ಪ್ರಾರಂಭದಲ್ಲಿ ಶೇಗುಣಸಿಯ ಡಾ.ಮಹಾಂತ ದೇವರು ಸ್ವಾಗತಿಸಿಕೊಂಡರು, ನಿಡಸೋಸಿ ಜಗದ್ಗುರುಗಳು ಜ್ಯೋತಿ ಬೆಳಗಿಸಿ ಪ್ರವಚನಕ್ಕೆ ಚಾಲನೆ ನೀಡಿದರು. ಶಿವಾನಂದ ಶ್ರೀಗಳು ವಿದ್ಯುಕ್ತವಾಗಿ ಪ್ರವಚನ ಹೇಳಿದರು.
ಈ ಸಮಯದಲ್ಲಿ ಬಾಗೇವಾಡಿಯ ಶ್ರೀ ಶಿವಾನಂದ ಸ್ವಾಮೀಜಿ, ಚಿಮ್ಮಡದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಶೇಗುಣಸಿಯ ಶ್ರೀ ಶಂಕರ ಮಹಾಸ್ವಾಮಿಗಳು, ಗುರುಸಿದ್ಧ ಸ್ವಾಮೀಜಿ, ನದಿಇಂಗಳಗಾವಿಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಗಳು ಉಪಸ್ಥಿತರಿದ್ದರು.
ಗ್ರಾಮದ ಹಿರಿಯರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಶ್ರೀಶೈಲ ನಾರಗೊಂಡ, ಶ್ರೀ ತಮ್ಮಣ್ಣಪ್ಪ ತೇಲಿ, ಪ್ರಗತಿ ಪರ ರೈತರಾದ ಶಿವರಾಯ ಯಲಡಗಿ, ಅಶೋಕ ಅಮ್ಮಣಗಿ, ಗುರುರಾಜ ಪಾಟೀಲ, ಕುಮಾರಗೌಡ ಸತ್ತಿಗೌಡರ, ಸುನೀಲ ಅವಕ್ಕನವರರವರು ಸೇರಿದಂತೆ ಶೇಗುಣಸಿ ಗ್ರಾಮದ ಎಲ್ಲ ಹಿರಿಯರು, ಯುವಕರು, ಗ್ರಾಮಸ್ಥರು ಭಾಗವಹಿಸಿದ್ದರು. ಬಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು .ಶ್ರೀ ತಳವಾರ ಸರ್ ನಿರೂಪಿಸಿದರು. ಮೇ ೪ ರವರೆಗೆ ನಿತ್ಯ ಸಾಯಂಕಾಲ ೭ ರಿಂದ ೯ ಪ್ರವಚನ ನಡೆಯಲಿದೆ.