ಸಾಯೊನಿ ಘೋಷ್, ಬೆಂಗಾಲದ ಸಿಡಿಗುಂಡು ಬೆಡಗಿ

ಸಾಯೊನಿ ಘೋಷ್, ಬೆಂಗಾಲದ ಸಿಡಿಗುಂಡು ಬೆಡಗಿ

 

 

 

 

 

 

 

 

 

 

 

 

ಪಶ್ಚಿಮ ಬಂಗಾಳದಲ್ಲೀಗ ಸಾರ್ವತ್ರಿಕ ಚುನಾವಣೆಯ ಚಂಡಮಾರುತ. ದೀದಿ ಮತ್ತು ಮೋದಿ ನಡುವಿನ ಯುದ್ಧಕಾಂಡ. ಅಲ್ಲಿನ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಟೆಗೆ ಲಗ್ಗೆ ಇಡುವ ಬಿಜೆಪಿಯ ಎಲ್ಲ ತಂತ್ರ ಕುತಂತ್ರಗಳಿಗೆ ಬರೋಬ್ಬರಿ ಸೆಡ್ಡು ಹೊಡೆಯುವ ಬಹುದೊಡ್ಡ ಯುವಪಡೆಯನ್ನೇ ಆಡಳಿತಾರೂಢ ಟಿ.ಎಂ.ಸಿ. ಸಿದ್ದಗೊಳಿಸಿದೆ.

ಆ ಯುವ ಪಡೆಯಲ್ಲಿ ಸಾಯೊನಿ ಘೋಷ್ ಎಂಬ ಯುವ ಸಂಸದೆ ಮುಂಚೂಣಿಯಲ್ಲಿದ್ದಾಳೆ. ಅವಳ ಚುನಾವಣಾ ಭಾಷಣಕ್ಕೆ ಬಂಗಾಲಿ ಬಾಬು, ಬೆಹನ್ ಗಳು ಮುರಕೊಂಡು ಮುಗಿ ಬೀಳುತ್ತಾರೆ. ಅವಳದು ತಾರಾ ವರ್ಚಸ್ಸಿನ ಚೆಲುವು ತುಂಬಿದ ಮೈ ಮಾಟದ ಮೋಹಕ ಮಾತುಗಳು. ಬೆಂಗಾಲಿ, ಭೋಜ್ಪುರಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಅರಳು ಹುರಿದಂತೆ ಮಾತಾಡುತ್ತಾಳೆ.

ಹಿಂದಿ ಚಿತ್ರಗೀತೆಗಳ ಮಾದರಿಯೊಂದಿಗೆ ಚುನಾವಣಾ ಪ್ರಣೀತ ಟ್ರೆಂಡಿಂಗ್ ಸಾಂಗ್ಸಗಳನ್ನು ಹಾಡುತ್ತಾ ಮೈ ಮನ ಕುಲುಕಿಸುತ್ತಾಳೆ. ತನ್ಮೂಲಕ ಲಕ್ಷ ಲಕ್ಷ ಸಂಖ್ಯೆಯ ಜನಸ್ತೋಮ ಮಂತ್ರಮುಗ್ಧಗೊಳಿಸುವಲ್ಲಿ ಅವಳಿಗಿರುವುದು ಜನಚಿತ್ತ ಸೆಳೆಯುವ ಚಿತ್ರಕಶಕ್ತಿ. ಅದಕ್ಕೆ ಅವಳಿಗೆ ಅವಳೇ ಸಾಟಿ. ಅವುಗಳ ಜತೆ ಜತೆಯಲಿ ಸ್ಥಳೀಯ ನುಡಿಗಟ್ಟುಗಳನ್ನು, ಲೋಕಸಂಗೀತದ ಝಲಕ್ಕುಗಳನ್ನು ಪೋಣಿಸಿ, ಸಿರಿಕಂಠದ ದೇಹಭಾಷೆ ಕುಣಿಸಿ ಮಾತಾಡುವಲ್ಲಿ ಆಕೆ ನಿಷ್ಣಾತೆ. ಅವಳ ಮಾತುಗಳಿಗೆ ಬೆಂಗಾಲದ ರಸಗುಲ್ಲ ಮತ್ತು ಝಲ್ಮುರಿ(ಚುರುಮುರಿ) ರುಚಿಯ ಘಮಲು.

 

 

 

 

 

 

 

 

 

 

ಹವಾಯಿ ಪಾದರಕ್ಷೆ, ಬಿಳಿಹತ್ತಿ ಸೀರೆಯ ಸರಳ ಮಹಿಳೆ ಮಮತಾ ಬ್ಯಾನರ್ಜಿ ಬಂಗಾಲಿಗರ ಮನಸು ಗೆದ್ದ ಮಹಿಳಾ ಮುಖ್ಯಮಂತ್ರಿ. ಆಕೆ ಬಂಗಾಳದ ದಿಲ್ ಧಡ್ಕನ್. ಅಷ್ಟಕ್ಕೂ ಬೆಂಗಾಲಿ ಮಮತಾ ದೀದಿಗೆ ವರ್ಷಕ್ಕಾಗುವಷ್ಟೂ ಹತ್ತಿ ನೂಲಿನ ಸೀರೆಗಳನ್ನು ನೇಯ್ದು ಕೊಡುವ ನೇಕಾರರು ಕನ್ನಡನಾಡಿನ ಉಡುಪಿಯವರು.

ನಮ್ಮ ಉಡುಪಿಯ ಸರಳ ಉಡುಪಿನ ಮಮತಾ ದೀದಿಯ ಗರಡಿ ಮನೆಯಲ್ಲೊಬ್ಬ ತರುಣಿ ಇದ್ದಾಳೆ, ಅವಳೇ ಸಾಯೊನಿ ಘೋಷ್. ಆಕೆ ವರ್ತಮಾನ ಭಾರತ ರಾಜಕಾರಣದ ಅದ್ಭುತ ಪ್ರತಿಭೆ. ಮುವತ್ಮೂರರ ಪ್ರಾಯದ ಸಾಯೊನಿ ಘೋಷ್ ಆಕರ್ಷಕ ವ್ಯಕ್ತಿತ್ವದ ಸುಂದರ ಯುವತಿ, ಮೇಲಾಗಿ ಚೆಲುವಿನ ಚಿತ್ತಾರದ ಸಿನೆಮಾ ನಟಿ.

 

ಸಂಸದೆಯಾಗಿರುವ ಆಕೆ ಪಾರ್ಲಿಮೆಂಟ್ ಸಭೆಯಲ್ಲಿ ಆಡುವ ಮಾತುಗಳಿಗೆ ರಾಷ್ಟ್ರೀಯ ಮಹತ್ವದ ಗುಣಮೌಲ್ಯ. ವಿರೋಧ ಪಕ್ಷದ ನಾಯಕಿಯೊಬ್ಬರಿಗೆ ಇರಬೇಕಾದ ಪ್ರಖರ ಚಾರಿಷ್ಮಾ ಮತ್ತು ಧಾರ್ಷ್ಟ್ಯ ಅವಳಿಗಿದೆ ಎನ್ನುವುದನ್ನು ಬಂಗಾಲಿಗರು ಒಪ್ಪಿದ್ದಾರೆ. ತಮ್ಮ ನೇರನಿಷ್ಠುರ ಮತ್ತು ಹರಿತ ಮಾತುಗಳ ಮೂಲಕ ಆಡಳಿತ ಪಕ್ಷದ ಪ್ರಮುಖರಿಗೆ ಮುಜುಗರ ತರುವ ಸಿಡಿಗುಂಡುಗಳಂತೆ ಅವಳ ಮಾತಿನ ಚಟಾಕಿಗಳು. ಜಾದವಪುರ (ಕಾಮ್ರೇಡ್ ಸೋಮನಾಥ ಚಟರ್ಜಿ ಸ್ಪರ್ಧಿಸುತ್ತಿದ್ದ ಕ್ಷೇತ್ರ) ಲೋಕಸಭಾ ಕ್ಷೇತ್ರದ ಈ ತರುಣ ಸಂಸದೆ ಪಾರ್ಲಿಮೆಂಟಲ್ಲಿ ಕ್ಷಿಪಣಿಯಂತೆ ಉಡಾಯಿಸುವ ಹೇಳಿಕೆಗಳು ನಿರೀಕ್ಷೆ ಮೀರಿ ವೈರಲ್ ಆಗುತ್ತವೆ.

ಅವಳ ಹೇಳಿಕೆಗಳ ಟ್ರೋಲ್ ಗಳಿಗೆ ಅಪಾರ ಬೇಡಿಕೆ. ಆಧುನಿಕ ಭಾರತದ ರಾಜಕಾರಣಕ್ಕೆ ಹೇಳಿ ಮಾಡಿಸಿದ ಸೆಲೆಬ್ರಿಟಿಯಾಗಿ ರೂಪುಗೊಂಡಿದ್ದಾಳೆ. ಈ ಯುವತಿಯ ಕಂಠ ಸಿರಿಯಿಂದ ಎಲ್ಲ ವರ್ಗದ ಮನಸುಗಳನ್ನು ಗಾಢವಾಗಿ ಸೆಳೆಯಬಲ್ಲ ಅಸ್ಖಲಿತ ಭಾಷಾ ಮೋಹಕತೆ. ಚುರುಕಾದ ಹಾಡುಗಳು. ಅದೇನೋ ಅನೂಹ್ಯ ಆಕರ್ಷಣೆಯ ಸಂದೇಶಗಳಿರುತ್ತವೆ. ಆಕೆಯ ಮಾತು, ಮಾತಿನ ಶೈಲಿ, ಫಿಜಿಕಲ್ ಲಾಂಗ್ವೇಜ್, ಉಡುಪು ಅಷ್ಟೇ ಮನಮೋಹಕ.

ಅದಕ್ಕೆ ಕೋಮಲ ಚಿತ್ತದ ಸರಳ ಸುಂದರತೆ ಮತ್ತು ಸಿಂಹಗರ್ಜನೆಯ ತಾಕತ್ತು ಇರುವುದನ್ನು ಮರೆಯಲಾಗದು. ದೂರದ ಪಶ್ಚಿಮ ಬಂಗಾಳದ ಈ ತರುಣಿ ರಾಜಕೀಯವಾಗಿ ಹಲವು ಸಂವೇದನೆಗಳನ್ನು ಗರ್ಭೀಕರಿಸಿಕೊಂಡಂತೆ ಮಾತಾನಾಡುವುದೇ ಭಲೇ ಭಲೇ ಅನಿಸದಿರದು. ರಾಜಕೀಯ ರಂಗದಲ್ಲಿ ಹುಡುಕಿದರೆ ನಮ್ಮಲ್ಲಿ ಅಂತೊಬ್ಬ ತರುಣಿ ಪ್ರಾಯಶಃ ನನ್ನ ಗಮನಕ್ಕೆ ಬಂದಿಲ್ಲ. ಕೆಲಕಾಲ ಸಂಸದೆಯಾಗಿದ್ದ ಮಂಡ್ಯದ ರಮ್ಯಾ ಆ ಲೆವಲ್ಲಿಗಲ್ಲ ಅನಿಸುತ್ತದೆ. ನಿಮಗೆ ಹೆಚ್ಚಿಗೆ ಗೊತ್ತಿದ್ದರೆ ತಿಳಿಸಿರಿ.

 

 

 

 

 

 

 

 

 

 

 

-ಮಲ್ಲಿಕಾರ್ಜುನ ಕಡಕೋಳ
9341010712

One thought on “ಸಾಯೊನಿ ಘೋಷ್, ಬೆಂಗಾಲದ ಸಿಡಿಗುಂಡು ಬೆಡಗಿ

Comments are closed.

Don`t copy text!