ನ.23ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲು ನಿರ್ಧಾರ

e-ಸುದ್ದಿ ಮಾನ್ವಿ:
ತಾಲ್ಲೂಕಿನ ತಡಕಲ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮಕ್ಕೆ ಶಾಲೆಯ ಎಸ್‍ಡಿಎಂಸಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಎಂಸಿ ಅಧ್ಯಕ್ಷ ಶ್ರೀಶೈಲಗೌಡ, ‘ ಮಹರ್ಷಿ ವಾಲ್ಮೀಕಿ ಜಯಂತಿ ದಿನದಂದು ಶಾಲೆಯಲ್ಲಿ ನಡೆದಿದ್ದ ಆಕಸ್ಮಿಕ ಘಟನೆ ಬಗ್ಗೆ ನೀಡಲಾದ ದೂರಿನನ್ವಯ ಮುಖ್ಯ ಶಿಕ್ಷಕರನ್ನು ತಾತ್ಕಾಲಿಕ ನಿಯೋಜನೆ ಆಧಾರದಲ್ಲಿ ಬೇರೆ ಶಾಲೆಗೆ ವರ್ಗಾಯಿಸಲಾಗಿದೆ. ಸದರಿ ಘಟನೆಯಲ್ಲಿ ಮುಖ್ಯ ಶಿಕ್ಷಕರು ಯಾವುದೇ ತಪ್ಪು ಮಾಡಿಲ್ಲ ಎಂದು ಮಕ್ಕಳ ಪಾಲಕರು ಹಾಗೂ ಎಸ್‍ಡಿಎಂಸಿ ಪದಾಧಿಕರಿಗಳು ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನಾಲ್ಕೈದು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆ, ಕಟ್ಟಡ, ಮೂಲಸೌಕರ್ಯ ಸೇರಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಈಗ ಏಕಾಏಕಿ ಮುಖ್ಯ ಶಿಕ್ಷಕರ ವರ್ಗಾವಣೆಗೆ ಮುಂದಾಗಿರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಖಂಡಿಸಿ ಎಲ್ಲಾ ಎಸ್‍ಡಿಎಂಸಿ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಲು ನಿರ್ಧರಿಸಲಾಗಿದೆ. ಮುಖ್ಯ ಶಿಕ್ಷಕರ ವರ್ಗಾವಣೆ ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.23 ಸೋಮವಾರದಂದು ಗ್ರಾಮಸ್ಥರಿಂದ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು’ ಎಂದು ಅವರು ತಿಳಿಸಿದರು.
ಎಸ್‍ಡಿಎಂಸಿ ಸದಸ್ಯರಾದ ಲಕ್ಷ್ಮೀಪತಿಗೌಡ, ವೆಂಕೋಬ ನಾಯಕ, ಅಮರೇಶ, ಲಿಂಗಪ್ಪ, ಸೂಗುರೇಶ ಇದ್ದರು.

Don`t copy text!