ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್
ಮೊದ ಮೊದಲು ಅಲ್ಲ, ಮೊದಲ ಸಲ ಎಂಬುದು ಎಲ್ಲ ಕಾಲಕ್ಕೂ ಅವಿಸ್ಮರಣೀಯವಾದುದು. ಅಂತಹ ಅನನ್ಯತೆಯ ‘ಮೊದಲು’ ಎಂಬುದು ಎಲ್ಲರ ಬದುಕಲ್ಲೂ ಅಮೂಲ್ಯವೇ. ಮೊದಲ ಮಹತ್ವಕ್ಕೆ ಹತ್ತು ಹಲವು ಉಮೇದಿನ ಹೆಸರು. ಅದು ಮಗುವಿನ ಮೊದಲ ತೊದಲ ಮಾತು, ಮಗುವಿನ ಮೊದಲ ಹೆಜ್ಜೆ.., ಹೀಗೆ ಮಗುವಿನ ಎಲ್ಲ ಮೊದಲುಗಳು ಮುದ್ದು ಮುದ್ದು ಮತ್ತು ಮೋಹಕವೇ. ಅಂದಹಾಗೆ ನಮ್ಮ ದಾವಣಗೆರೆ ರಂಗಾಯಣದ ಮೊದಲ ನಾಟಕವೂ ಅಂತಹದೇ ಹದುಳ ಮನಸಿನ ಹಸುಳೆಯ ಖುಷಿ ಉಕ್ಕಿಸಿದ್ದು ಅಕ್ಷರಶಃ ಸುಳ್ಳಲ್ಲ.
ನಮ್ಮ ರಂಗಾಯಣದ ಮೊದಲ ನಾಟಕದ ಟೀಮಿನಲ್ಲಿ ಒಂದಿಬ್ಬರನ್ನು ಬಿಟ್ಟರೆ ಬಾಕಿ ಎಲ್ರೂ ನಾಟಕ ರಂಗಕ್ಕೆ ಹೊಸಬರೇ. ಆದರೆ ಎಲ್ಲರೂ ಪ್ರತಿಭಾಶಾಲಿಗಳು ಎನ್ನುವುದನ್ನು ಅಲ್ಲಗಳೆಯಲಾಗದು. ಹಾಗೆ ನೋಡಿದರೆ ಮನುಷ್ಯನೆಂಬುದೇ ಪ್ರತಿಭೆ ಮತ್ತು ಸೃಜನಶೀಲತೆಗೆ ಮತ್ತೊಂದು ಹೆಸರು. ತಿಂಗಳೊಪ್ಪತ್ತು ನಾಟಕದ ರಿಹರ್ಸಲ್, ರಂಗತಾಲೀಮು. ನಂತರ ಪ್ರದರ್ಶನದು ನಿರೀಕ್ಷೆ ಮೀರಿದ ಯಶಸ್ಸು. ನಮ್ಮದು ವೃತ್ತಿ ರಂಗಭೂಮಿ ರಂಗಾಯಣ ಎಂಬ ಸಂವೇದನಾಶೀಲ ‘ಪ್ರಜ್ಞೆ’ ನಾಟಕದ ಸಿದ್ಧತೆಯ ಉದ್ದಕ್ಕೂ ನನ್ನನ್ನು ಎಚ್ಚರಿಸುತ್ತಿತ್ತು. ಅದರಾಗೂ ಬಯೋಪಿಕ್ ಕಥನ ನಾಟಕ ಆಗಿಸುವಾಗ ಸವಾಲಿನ ಸೂಕ್ಷ್ಮತೆಗಳು ಎದುರಾಗುತ್ತವೆ. ಪ್ರದರ್ಶನಕ್ಕೆ ಮುನ್ನವೇ ನಮ್ಮೊಳಗಿನ ಕೆಲವರು ಅಸಡ್ಡೆತನ ತೋರುತ್ತಿದ್ದರು. ಮತ್ತೆ ಕೆಲವರದು ಶ್ರೇಷ್ಠತೆಯ ಹೈಟೆಕ್ ವ್ಯಸನ. ಈ ಎರಡೂ ಅಸಡ್ಡೆತನಗಳಿಗೆ ಸೆಡ್ಡು ಹೊಡೆದಂತಹ ‘ಉತ್ತರ’ ದೊರಕಿಸಿಕೊಟ್ಟ ನಮ್ಮ ರಂಗತಂಡಕ್ಕೆ ಮೊದಲು ಮನದುಂಬಿದ ಅಭಿನಂದನೆಗಳು.
ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸರಿನ ನಾಟಕದ ಪ್ರಾಣಶಕ್ತಿಯೇ ಗೋಹರಬಾಯಿ. ಆ ಹೆಸರನ್ನು ಹೇಳುವಾಗ ತುಸು ಫರಕ್ಕಾಗಿ ಎಂಬಂತೆ “ಗೋರಾಬಾಯಿ” ಅಂತ ಉಚ್ಛರಿಸಿದವರೇ ಅಧಿಕ. ರಂಗ ಪ್ರಯೋಗವೊಂದರ ಸಂದರ್ಭದಲ್ಲಿ ಕವಿಯು ಬರೆದ ಜಳಕ ಮಾಡಿದಂತಹ ಭಾಷೆಗೆ ಕಲಾವಿದ ಭಾವದ ತಳಕು ಹಾಕಬೇಕಾಗುತ್ತದೆ. ಅಷ್ಟಕ್ಕೂ ಈ ನಾಟಕವು ಮುಂಬೈ ಮತ್ತು ಮುಂಬೈ ಕರ್ನಾಟಕದ ಪ್ರಾಂತ್ಯಗಳಲ್ಲಿ ಜರುಗುವ ಬಯೋಪಿಕ್ ಕಥನ. ಹೀಗಾಗಿ ಆ ಭಾಗದ ಭಾಷೆ, ನಡೆನುಡಿ, ಆಡುನುಡಿಯ ಧ್ವನಿವೈಖರಿ, ಅಲ್ಲಿನ ಪರಿಸರದ ಪ್ರಖರ ಪ್ರಭಾವ ಬಿಂಬಿಸುವುದು ಇಲ್ಲಿನವರಿಗೆ ಖರೇನ ತ್ರಾಸ ಅನಿಸದಿರದು. ಆದರೆ ಅಜಮಾಸು ಅರ್ಧ ಶತಮಾನದಷ್ಟು ಹಿಂದೆಯೇ ನನಗೆ ಅಮೀರಬಾಯಿ ಮತ್ತು ಗೋಹರಬಾಯಿ ಸಹೋದರಿಯರ ಹೆಸರಿನ ಪರಿಚಯವಾಗಿತ್ತು.
ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆ ಬೀಳಗಿ ಬಳಿಯ ತುಂಬರಮಟ್ಟಿಯ ಈ ಸೋದರಿಯರು ತೀರಿಹೋಗಿ ಅದೇ ಆಗ ಏಳೆಂಟು ವರುಷಗಳು ಕಳೆದಿರಬಹುದಾದ ಅವಧಿ. ಅದೇ ಅವಧಿಯಲ್ಲಿ ಆಗ ನಾವು ನಾಟಕವೊಂದರ ತಾಲೀಮಿಗೆ ತೊಡಗಿದ್ದೆವು. ಈ ಇಬ್ಬರು ಕಲಾವಿದೆಯರನ್ನು ಒಡನಾಡಿದ ಹಿರಿಯ ನಾಟಕಕಾರ ಬಿ. ಎಸ್. ಬಾಳೀಮಠ ಅವರು ನಮಗೆ ಈ ಸೋದರಿಯರ ಪ್ರತಿಭಾಶಾಲಿ ಹಾಡು, ನೃತ್ಯ, ಅಭಿನಯ ಕುರಿತು ಪರಿಣಾಮಕಾರಿಯಾಗಿ ತಾಲೀಮಿನಲ್ಲಿ ವರ್ಣಿಸುತ್ತಿದ್ದರು. ಅಷ್ಟಲ್ಲದೇ ಆ ಕಾಲದ ಸ್ತ್ರೀ ಪಾತ್ರಕ್ಕೆ ವಿನೂತನ ಭಾಷ್ಯ ಬರೆದ ಬಾಲಗಂಧರ್ವರ ಬಗ್ಗೆ ಅವರಿಂದ ವರ್ಣಾತೀತ ಮಾತುಗಳು.
ಅಷ್ಟಕ್ಕೂ ಬಾಳೀಮಠ ಅವರು ನಮಗೆ ಆಗ “ಸುವರ್ಣ” ಎಂಬ ವೃತ್ತಿ ಕಂಪನಿ ಶೈಲಿಯ ನಾಟಕದ ನಿರ್ದೇಶನ ಮಾಡುತ್ತಿದ್ದರು. ನನಗಿನ್ನು ಆಗ ಗಂಟಲ ಕವಚದಲ್ಲಿ ಬಾಲ್ಯಸ್ವರದ ಧ್ವನಿಪೆಟ್ಟಿಗೆ ಇತ್ತು. ಅದಿನ್ನೂ ಪ್ರೌಢಾವಸ್ಥೆಗೆ ತಿರುಗಿರಲಿಲ್ಲ. ಆಗ ಅವರು ಬಾಲಗಂಧರ್ವರ ಸ್ತ್ರೀ ಪಾತ್ರದ ಬಗ್ಗೆ ಉಮೇದು ತುಂಬಿ ಹೇಳುತ್ತಿದ್ದರು. ಏಕೆಂದರೆ ನಾನು ಆಗ ಮಾಡುತ್ತಿದ್ದುದು ಸುವರ್ಣ ಎಂಬ ನಾಯಕಿಯ ‘ಸ್ತ್ರೀ’ ಪಾತ್ರ. ಅವರಿಗೋ ‘ಗಂಧರ್ವ ಸಂಗೀತ ನಾಟಕ ಮಂಡಳಿ’ಯ ಅದಮ್ಯ ಪ್ರಭಾವ. ಅವೆಲ್ಲ ಅವರ ಅನುಭವದ ಮಾತು ಸಂವಾದದ ನೆನಪುಗಳು ಇದೀಗ ನೆರವಿಗೆ ನಿಂತವು.
ಗೋಕರ್ಣದ ಸುರೇಂದ್ರಗೌಡ ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳ ನಾಟಕಗಳಲ್ಲಿ ಖಳನಾಯಕ ಪಾತ್ರ ಮಾಡಿ ಹೆಸರು ಮಾಡಿದಾತ. ಆದರೆ ನಾಯಕನಾಗಿಯೂ ಅದೇ ವಿಲನ್ ಫೇಸಿಯಲ್ ಮತ್ತು ಫಿಜಿಕಲ್ ಎಕ್ಸಪ್ರೆಶನ್ ಆತನದಾಗಿತ್ತು. ಆತನ ದೇಹ ಮತ್ತು ಧ್ವನಿಯ ಅಭಿವ್ಯಕ್ತಿ ಥೇಟ್ ವಿಲನ್ ತರಹವೇ ಇರುತ್ತಿತ್ತು. ಅದನ್ನು ಆತನಿಗೆ ಮನವರಿಕೆ ಮಾಡಿದಾಗ ವಾರವೊಪ್ಪತ್ತಿನಲ್ಲೇ ಖಳನಾಯಕ ಸುರೇಂದ್ರ, ನಾಯಕ ಬಾಲಗಂಧರ್ವನ ಅಭಿವ್ಯಕ್ತಿಗೆ ಸ್ಥಿತ್ಯಂತರಗೊಂಡ. ಪ್ರದರ್ಶನದ ದಿನದಂದು ಅತ್ಯಂತ ಪ್ರಬುದ್ಧ ಅಭಿನಯವನ್ನೇ ಮೆರೆದ.
ರಂಗ ತರಬೇತಿಯ ನಡು ನಡುವೆ ಬಿಡುವಿನ ವೇಳೆ ಹುಡುಗಾಟ, ನವಿರು ನವಿರಾದ ತುಂಟಾಟ ಮತ್ತು ಥಿಯೇಟರ್ ಎಕ್ಸರ್ಸೈಜಸ್ ಮನೋಲ್ಲಾಸ ತರುತ್ತಿದ್ದವು. ಕನ್ನಡ ಓದಲು ಬರೆಯಲು ಬಾರದ ‘ಪ್ರಕೃತಿ’ ಎಂಬ ತರುಣಿ ಇಂಗ್ಲೀಷಿನಲ್ಲಿ ಬರೆದುಕೊಂಡು ಕನ್ನಡದ ಸಂಭಾಷಣೆಗಳನ್ನು ಸೊಗಸಾಗಿ ಕಲಿಯುತ್ತಿದ್ದಳು. ಆಕೆ ಆಂಗ್ಲಮಾಧ್ಯಮದ ಸೆಂಟ್ರಲ್ ಸಿಲೆಬಸ್ ವ್ಯಾಸಂಗಿ. ಆದರೆ ಆಕೆಯ ಕನ್ನಡ ಕಲಿಕೆಯ ಹಂಬಲ ಮಾತ್ರ ಚುರುಕಾಗಿತ್ತು. ಮೇಲಾಗಿ ಸಣ್ಣದೊಂದು ಕೆಲಸ ಹೇಳಿದರೆ ಸಾಕು, ನಾವು ಪ್ರಾಕ್ಟೀಸ್ ಮಾಡುತ್ತಿದ್ದ ದೃಶ್ಯಕಲಾ ಮಹಾವಿದ್ಯಾಲಯದ ಕ್ಯಾಂಪಸ್ಸಿನ ಸಂದಿಗೊಂದಿ ಹುಡುಕಿ ತಂದುಬಿಡುವ ಸಾಹಸಿ. ಅವಳ ರಂಗಶ್ರದ್ಧೆ ನನಗಂತೂ ಬಹಳೇ ಮೆಚ್ಚುಗೆ.
ಹಾಗೆಂದು ಇತರರು ಮೆಚ್ಚುಗೆಗೆ ಹೆಚ್ಚು ಪಾತ್ರರಲ್ಲ ಎಂದು ಅರ್ಥವಲ್ಲ. ಮತ್ತೆ ಹೆತ್ತವರಿಗೆ ಹೆಗ್ಗಣ ಮುದ್ದು ಎಂದೂ ಭಾವಿಸಬೇಕಿಲ್ಲ. ನಾಟಕ ಯಾವತ್ತೂ ಸಮೂಹ ಕಲೆ. ಅದರ ಯಶಸ್ಸಿನ ಹಿಂದೆ ಸಮೂಹ ಶಕ್ತಿಯೇ ಹೆಚ್ಚು ಕಾರಣ. ಇಂತಹ ಗುರುತರ ಕಾರಣವೊಂದಕ್ಕೂ ಇಚ್ಛಾಶಕ್ತಿ ಕಾರಣ ಎಂಬುದನ್ನು ಮರೆಯಲಾಗದು. ಇಷ್ಟುಮಾತ್ರ ಖರೇ : ಮೊದಲ ಪ್ರಯತ್ನದ ಫಲವು ಅಷ್ಟೇ ಪ್ರಮಾಣದ ಕೆಲವು ಪಾಠಗಳನ್ನು ಸಹಿತ ಕಲಿಸಿಕೊಟ್ಟಿತು. ಮತ್ತೆ ನಮ್ಮ ರಿಹರ್ಸಲ್ ಗೆ ಬರೋದಾದರೆ ರೀಡಿಂಗ್ ರೌಂಡ್ ಮುಗಿಯುತ್ತಿದ್ದಂಗೆ ಬ್ಲಾಕಿಂಗ್. ದೃಶ್ಯಗಳನ್ನು ಕಟ್ಟುವ ಕೆಲಸ ಮುಖ್ಯವಾದುದು. ಸಣ್ಣ ಸಣ್ಣ ಸಂಗತಿಗಳೂ ಅಲ್ಲಿ ಮುಖ್ಯವೇ. ಅದೆಲ್ಲವೂ ರಂಗತಾಲೀಮಿಗೆ ಮುನ್ನುಡಿ.
ಮಾಲತೇಶ ಬಡಿಗೇರ ನಮ್ಮ ಪ್ರತಿಗಂಧರ್ವ ನಾಟಕದ ನಿರ್ದೇಶಕ. ರವಿ ಮುರೂರು ಸಂಗೀತ ನಿರ್ದೇಶಕ. ರವಿಯ ರಾಗ ಸಂಯೋಜನೆ ಹೃದಯಸ್ಪರ್ಶಿ. ಹನ್ನೊಂದು ಹಾಡುಗಳು. ಅವಕ್ಕೆಲ್ಲ ಶಾಸ್ತ್ರೀಯ ಸಂಗೀತದ ಹೃಸ್ಪರ್ಶ. ಒಂದಲ್ಲ ಎರಡಲ್ಲ ಎಲ್ಲಾ ಹನ್ನೊಂದು ಹಾಡುಗಳು ಎಂಥವರನ್ನೂ ಕೆಲಕ್ಷಣ ಹಿಡಿದಿಡುವ ಆರ್ದ್ರತೆ ತುಂಬಿ ಕೊಂಡಿದ್ದವು. ಗೋಹರಬಾಯಿ ಮತ್ತು ಅಮೀರಬಾಯಿ ಪಾತ್ರ ಮಾಡಿದ ಶ್ರುತಿ ರಾಜ್ ಮತ್ತು ಸುಜಾತಾ ಇಬ್ಬರೂ ಹಾಡುನಟಿಯರೇ. ಶ್ರುತಿಗೆ ಶಾಸ್ತ್ರೀಯ ಸಂಗೀತದ ಪ್ರಾವಿಣ್ಯತೆ. ರಂಗನಾಟಕವೊಂದಕ್ಕೆ ಬೇಕಾದ ರಂಗಸಂಗೀತದ ಅಗತ್ಯ ಮಟ್ಟುಗಳ ಪರಿಚಯ ಸುಜಾತಾಗೆ. ಇಬ್ಬರೂ ಪ್ರತಿಗಂಧರ್ವ ನಾಟಕದ ರಂಗ ಸಂಪತ್ತೇ ಆಗಿದ್ದಾರೆ. ಹಿರಿಯ ರಂಗನಟಿ ಕಲ್ಪನಾ ನಾಕೋಡ ಸಹಿತ ರಂಗಸಂಗೀತದಲ್ಲಿ ಹಿಂದೆ ಬಿದ್ದವರೇನಲ್ಲ.
ಪುರುಷ ಸ್ವರದ ಹಾಡುಗಾರಿಕೆಯಲ್ಲಿ ಮುಖೇಶ ಕುಮಾರದು ಕಮ್ಮಿ ಪ್ರತಿಭೆಯೇನಲ್ಲ. ಅಷ್ಟಕ್ಕೂ ಈ ಎಲ್ಲರೂ ಕಳೆದ ವರ್ಷ ನಮ್ಮ ರಂಗಾಯಣ ತಿಂಗಳೊಪ್ಪತ್ತು ಏರ್ಪಡಿಸಿದ್ದ ರಂಗಸಂಗೀತ ಕಾರ್ಯಾಗಾರದಲ್ಲಿ ಪಳಗಿದ ಪ್ರತಿಭೆಗಳು. ದಾವಣಗೆರೆಯವರಾದ ಮತ್ತು ಕನ್ನಡದ ಪ್ರಥಮ ಸಾಮಾಜಿಕ ನಾಟಕಕಾರ ಕೋಲ ಶಾಂತಪ್ಪ ವಿರಚಿತ ನಾಂದಿಪದವನ್ನು ಆರಂಭಕ್ಕೆ ಸಾಮೂಹಿಕವಾಗಿ ಹಾಡುವ ಮೂಲಕ ವೃತ್ತಿ ರಂಗಭೂಮಿಯ ಹುಲುಸನ್ನು ರಂಗಸ್ಥಳದ ತುಂಬಾ ಪಸರಿಸಿದರು. ಕಡೆಯಲ್ಲಿ ಮಂಗಳ ಗೀತೆ ಹಾಡಿ ನಮ್ಮ ರಂಗಾಯಣಕ್ಕೆ ಜೈಕಾರ ಹಾಕುವುದೇ ನಮಗೆಲ್ಲ ಸಂಭ್ರಮ. ಅದೆಲ್ಲವೂ ನನಗಂತೂ ವೃತ್ತಿ ರಂಗಭೂಮಿ ಪರಂಪರೆಯ ಅಪ್ಪಟ ಅಸ್ಮಿತೆಯಂತೆ ತೋರುತ್ತಿತ್ತು.
ವಾರದ ಮುನ್ನವೇ ನಾಟಕದ ಸಿದ್ಧತೆಯ ಪ್ರಚಾರ ಎಲ್ಲ ಕಡೆಗೂ ಹಬ್ಬ ತೊಡಗಿತು. ಪ್ರದರ್ಶನಕ್ಕೆ ಮೊದಲೇ ಮೈಸೂರು, ಬೆಂಗಳೂರಲ್ಲಿ ನಾಟಕ ಪ್ರದರ್ಶನಕ್ಕೆ ಆಹ್ವಾನ. ಪ್ರಚಾರ ಕಾರ್ಯದಲ್ಲಿ ಕ್ರಿಯಾಶೀಲರಾಗಿ ನೆರವಾದವರು ರೀಲ್ ಜೆಟ್ ನ ಸುದೀಪ್ ರಾಜೂರ್ ಟೀಮ್ ಮತ್ತು ಆಪ್ತಮಿತ್ರ ಆರ್. ಟಿ. ಅರುಣಕುಮಾರ್. ನಮ್ಮ ಮೊದಲ ಸಾಹಸವನ್ನು ಮನಗಂಡು ನಾಟಕ ನೋಡಲು ದೂರದ ಊರುಗಳಿಂದ ಬರುವವರ ಫೋನ್ ಕರೆಗಳು. ಅದರಲ್ಲೂ ಪ್ರಮುಖವಾಗಿ ನಮ್ಮ ನಡುವಿನ ಹೆಸರಾಂತ ಅಭಿನೇತ್ರಿ ಗುಬ್ಬಿ ವೀರಣ್ಣ ನಾಟಕ ಕಂಪನಿಯ ಮಹತ್ವದ ಕುಡಿ ಬಿ. ಜಯಶ್ರೀ ಅಮ್ಮ. ಅದರಿಂದ ನಮ್ಮ ಜವಾಬ್ದಾರಿ ಹೆಚ್ಚಿತು ಮಾತ್ರವಲ್ಲ ಅಂಥವರು ಬಂದಾಗ ನಮ್ಮ ಪರ್ಫಾರ್ಮನ್ಸ್ ಹೇಗಿರಬೇಕೆಂಬ ಜಿಜ್ಞಾಸೆ ಹೆಚ್ಚಾಯ್ತು. ಅಂದು ಅವರು ಅನಿರೀಕ್ಷಿತವಾಗಿ ಪ್ರತಿಗಂಧರ್ವ ಉದ್ಘಾಟನೆ ಮಾಡಿದಾಗ ನನಗಾದ ಸಂತಸಕ್ಕೆ ಎಣೆ ಇರಲಿಲ್ಲ. ನಮ್ಮ ವಿಶೇಷಾಧಿಕಾರಿ ರವಿಚಂದ್ರ ಅವರಿಗೂ ಅಂತಹದೇ ಸಂತಸ.
ಹಿಂದಿನ ದಿನವೂ ಮಾಲತೇಶ ಫೈನಲ್ ಟಚ್ ಎನ್ನುವಂತೆ ಮತ್ತೆ ಮತ್ತೆ ರನ್ ಥ್ರೂ ಜೊತೆಗೆ ಸ್ಟೇಜ್ ಕ್ರಾಫ್ಟ್ ಸಿದ್ದತೆಯತ್ತ ಗಮನ ಹರಿಸುತ್ತಿದ್ದರು. ಕಲಾವಿದರ ಕೈಗೆ ಕುಂಚ ಕೊಟ್ಟು ಸೀನರಿ ಪರದೆಗಳಿಗೆ ಬಣ್ಣ ತುಂಬಿಸುತ್ತಿದ್ದರು. ಹೌದು ಒಂದು ನಾಟಕವೆಂದರೆ ಬರೀ ಅಭಿನಯ ಮಾತ್ರವಲ್ಲ. ಕಲಾವಿದರಾದವರಿಗೆ ನಾಟಕದ ಎಲ್ಲ ಮಗ್ಗಲುಗಳ ಪರಿಚಯ ಇರಬೇಕೆಂಬುದನ್ನು ನಮ್ಮ ಮೊದಲ ನಾಟಕ ಪ್ರತಿಗಂಧರ್ವ ಅಕ್ಷರಶಃ ಕಲಿಸಿಕೊಟ್ಟಿತು. ನಾಟಕ ಪ್ರದರ್ಶನ ಒಂದೆರಡು ದಿನ ಇರುವಾಗ ತಾಲೀಮಿನ ವಿಶಾಲ ಖೋಲಿಯ ತುಂಬಾ ಮದುವೆ ಮನೆಯ ವಾತಾವರಣ. ಪ್ರತಿಗಂಧರ್ವ ನಾಟಕದ ರಚಯಿತೃ ಡಾ. ರಾಜಪ್ಪ ದಳವಾಯಿ ಒಂದೆರಡು ದಿನ ಮೊದಲೇ ಬೀಗರಂತೆ ಬಂದಿಳಿದು ತಾಲೀಮು ನೋಡಿ ಸಂಭ್ರಮಿಸಿದರು. ಅವರೊಂದಿಗೆ ಪದ ದೇವರಾಜ, ಶ್ರೀಧರ ಬಂದಿದ್ದರು. ಮೈಸೂರು ಹೆಲನ್ ಮತ್ತು ತಂಡದ ಅನೇಕ ರಂಗಾಸಕ್ತರು ಆಗಮಿಸಿ ನಮಗೆ ಹುರುಪು ಉಲ್ಲಾಸ ಹುರಿದುಂಬಿಸಿದರು. ನಾಟಕದ ದಿನವೇ ಸಂಜೆಹೊತ್ತಿಗೆ ಬರುವುದಾಗಿ ಡಾ. ರಹಮತ್ ತರಿಕೇರಿ “ತಾವು ಉಳಿದುಕೊಳ್ಳಲು ನಾವು ಮಾಡಿರುವ ಖೋಲಿ ಇತರೆ ಯಾರಿಗಾದರೂ ಕೊಡ್ರಿ, ನಾನು ನಮ್ಮ ಬೀಗರ ಮನೆಯಲ್ಲಿ ಉಳಿದುಕೊಳ್ಳುವೆ” ಎಂದು ಫೋನಲ್ಲಿ ತಿಳಿಸಿದ್ರು.
ಪಾತ್ರ ಸಣ್ಣದು ದೊಡ್ಡದು, ಅಂತಲ್ಲ, ಪ್ರತಿಗಂಧರ್ವ ತಂಡದ ಎಲ್ಲರಲ್ಲೂ ಅದೇನೋ ಹೇಳದಿರಲಾಗದ ಸಂಭ್ರಮ. ಹಬ್ಬಕ್ಕೆ ಹೊಸಬಟ್ಟೆ ತೊಟ್ಟು ಸಂಭ್ರಮಿಸುವಂತೆ ಕಲಾವಿದರು ತಮ್ಮ ತಮ್ಮ ವೇಷಭೂಷಣ ತೊಟ್ಟು ನೋಡುವ ಸಿದ್ಧತೆಯ ಸಡಗರ. ತಾನು ದೇವರಿಗೆ ವ್ರತದಂತೆ ಬಿಟ್ಟಿದ್ದ ದಾಡಿ ಬೋಳಿಸಲಾರೆ ಎಂದಿದ್ದ ಮಲ್ಲೇಶಿ ನುಣ್ಣಗೆ ದಾಡಿ ಮೀಸೆ ತೆಗೆಸಿದ್ದ. ಅಂದು ಸಂಜೆ ಬಣ್ಣಕ್ಕೆ ಕೂಡುವ ಚಣಹೊತ್ತು ಮುನ್ನ ಮೀಸೆ ತೆಗೆಯುವುದಾಗಿ ಹೇಳಿದ್ದ ಗಂಧರ್ವ ಸುರೇಂದ್ರಗೌಡ ಒಂದಿನ ಮೊದಲೇ ಮೀಸೆ ತೆಗೆದು ಅಚ್ಚರಿ ಮೂಡಿಸಿದ್ದ. ಅವನದು ಆರಂಭಕ್ಕೆ ಒಂದು ಸೀನ್ ನೃತ್ಯದ ಸ್ತ್ರೀ ಪಾತ್ರ.
ಅದೇಕೋ ನಮ್ಮ ನಾನಾ ಛಾಪೇಕರ್ ಕಾಸ್ಟ್ಯುಮ್ ಸರಿ ಅನಿಸಲಿಲ್ಲ. ಆದರೆ ನುರಿತ ಶೈಲಿಯಲ್ಲಿ ನಮ್ಮ ಸೋಮಣ್ಣ ಛಾಪೇಕರ್ ಪಾತ್ರ ಅಭಿನಯಿಸಿದ್ದು ಮಾತ್ರ ಮರೆಯಲಾಗದು. ಅಪ್ರಸ್ತುತ ಭಯಕ್ಕೋ ಇನ್ನೇನಕ್ಕೋ ಗೊತ್ತಿಲ್ಲ, ಪ್ರಾಕ್ಟೀಸ್ ಮಾಡುವಾಗ ಮಾತು ಮಾತಿಗೂ ಉಗ್ಗುತ್ತಿದ್ದ ಸಂಗನಾಳ ಸಂತೋಷನ ‘ಉಗ್ಗು’ ಪ್ರದರ್ಶನದ ವೇಳೆ ಮಂಗಮಾಯ. ಒಂದೇ ಒಂದು ಕೋರ್ಟ್ ದೃಶ್ಯದಲ್ಲಿ ಜಡ್ಜ್ ಪಾತ್ರಕ್ಕೆ ಕಲ್ಪನಾ ನಾಕೋಡ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಬೆಂಚ್ ಕ್ಲರ್ಕ್ ಪಾತ್ರದಿಂದ ಹಿಡಿದು ಕಂಪನಿ ನಾಟಕದ ಪ್ರಚಾರ ಮಾಡುವ ಪಾತ್ರದ ನಮ್ಮ ಕಡ್ಲೇಬಾಳು ಬಸವರಾಜ(ಈತನನ್ನು ಪಂಪಕವಿ ಅಂತ ಅಡ್ಡ ಹೆಸರಿಂದ ಕರೀತಿದ್ವಿ), ಸಿನೆಮಾ ಡೈರೆಕ್ಟರ್ ಶ್ವೇತಾ, ಸೌಂಡ್ ಎಂಜಿನಿಯರ್ ಕರಣ್, ಸೂತ್ರದಾರ ಅಮಿತ್ ಕುಮಾರ್ ಒಬ್ರೆ ಇಬ್ರೆ ಎಲ್ಲರೂ ಮನದುಂಬಿ ಅಭಿನಯಿಸಿ ಮೊದಲ ಯತ್ನದ ಯಶಸ್ಸಿಗೆ ಕಾರಣರಾದರು.
ರಾಜಧಾನಿ ಬೆಂಗಳೂರಿಂದ ನಾಟಕಕ್ಕೆ ಬಂದಿದ್ದ ಧ್ವನಿ ಮತ್ತು ಬೆಳಕು ಪೂರ್ ಆಗಿತ್ತು ಎಂದು ಹೇಳದಿದ್ರೆ ತಪ್ಪಾಗುತ್ತದೆ. ಕೆಲವೊಬ್ಬರಿಗೆ ಎರಡು ಮೂರು ಪಾತ್ರಗಳು. ದೊರೆತ ಎಲ್ಲ ಪಾತ್ರಗಳನ್ನು ಶ್ರದ್ಧೆಯಿಂದ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಕೃತಜ್ಞತೆಗಳು ಅಂತ ಹೇಳಿದರೆ ಅದು ಔಪಚಾರಿಕ ಮಾತೆಂದು ಭಾವಿಸಬಾರದು. ಅದೆಲ್ಲವೂ ಅಕ್ಷರ ಮಾತುಗಳನ್ನು ಮೀರಿದ ಅಂತಃಕರಣವೆಂದು ನಾನಂತೂ ಅಂದುಕೊಂಡಿರುವೆ. ಬನ್ನಿ ಮತ್ತೆ ಮೈಸೂರಲ್ಲಿ ಸೇರೋಣ. ಪ್ರತಿಗಂಧರ್ವ ಸಂಭ್ರಮಿಸೋಣ.
–ಮಲ್ಲಿಕಾರ್ಜುನ ಕಡಕೋಳ
9341010712



