ಗೌಡೂರು ಗ್ರಾಮ ಪಂಚಾಯಿತಿ ಪಿಡಿಒ ಸೇವೆಯಿಂದ ಅಮಾನತು

ಗೌಡೂರು ಗ್ರಾಮ ಪಂಚಾಯಿತಿ ಪಿಡಿಒ ಸೇವೆಯಿಂದ ಅಮಾನತು

e-ಸುದ್ದಿ ಲಿಂಗಸುಗುರು

ಲಿಂಗಸುಗೂರು ತಾಲ್ಲೂಕಿನ ಗೌಡೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಇಸಾಕ್ ಅವರನ್ನು ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಆದೇಶ ಹೊರಡಿಸಿದ್ದಾರೆ.

ತತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ ಮುಂದಿನ ಆದೇಶದ ವರೆಗೂ ಅಮಾನತಿನಲ್ಲಿಡಲು ಆದೇಶದ ಪ್ರತಿಯಲ್ಲಿ ಸೂಚಿಸಲಾಗಿದೆ.

ಘಟನೆ ಹಿನ್ನೆಲೆ -ಲಿಂಗಸುಗೂರಿನ ಸಹಾಯಕ ಆಯುಕ್ತರಾದ ಸಿಂಧೆ ಅವಿನಾಶ್ ಸಂಜೀವನ್ ಅವರು ಶನಿವಾರದಂದು ಮುಂಬರುವ ವಿಧಾನಸಭಾ ಚುನಾವಣೆಗಳ ನಿಮಿತ್ತ ಮತಗಟ್ಟೆಗಳ ವಿಕ್ಷಣೆ ಹಾಗೂ ಪರಿಶೀಲನೆಗಾಗಿ ಗುರುಗುಂಟಾ ಹೋಬಳಿಯ ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮತಗಟ್ಟೆಗಳ ವಿಕ್ಷಣೆಗೆ ತೆರಳಿದಂತಹ ಸಂದರ್ಭದಲ್ಲಿ ಗೌಡೂರು ಗ್ರಾಮ ಪಂಚಾಯಿತಿ ಮುಖ್ಯ ಕಛೇರಿಯ ಕಟ್ಟಡವೊಂದರಲ್ಲಿ ಇರುವ ಮತಗಟ್ಟೆಯ ಸಂಖ್ಯೆ 37 ನ್ನು ಪರಿಶೀಲನೆ ಮಾಡಲು ತೆರಳಿದ್ದರು.

ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಹಾಯಕ ಆಯುಕ್ತರು ಮತಗಟ್ಟೆಯ ಪರಿಶಿಲನೆಗೆ ಹೋದಾಗ ಗ್ರಾಮ ಪಂಚಾಯಿತಿ ಕಛೇರಿ ಗೆ ಬೀಗ ಹಾಕಲಾಗಿತ್ತು. ಅಲ್ಲಿ ಪಿಡಿಒ ಸಹಿತ ಯಾವೊಬ್ಬ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ಹಾಜರಿರಲಿಲ್ಲ. ಗೌಡೂರು ಗ್ರಾಮ ಲೆಕ್ಕಾಧಿಕಾರಿಗಳು ಪಿಡಿಒ ರವರಿಗೆ ನಾಲ್ಕೈದು ಬಾರಿ ಕರೆ ಮಾಡಿದರು ಫೋನ್ ಸ್ವಿಕರಿಸಿರಲಿಲ್ಲ. ಸುಮಾರು ಅರ್ಧ ಗಂಟೆ ಕಾದು ಕಾದು ಸುಸ್ತಾದ ಸಹಾಯಕ ಆಯುಕ್ತರು ಸ್ಥಳದಲ್ಲಿ ಇದ್ದ ತಮ್ಮ ಸಿಬ್ಬಂದಿಗಳ ಮೂಲಕ ಬೀಗವನ್ನು ತೆಗೆಸಿ ಒಳ ನಡೆದರು.

ನಡೆದಿರುವ ಘಟನೆಯ ಬಗ್ಗೆ ಸಹಾಯಕ ಆಯುಕ್ತರು ಗ್ರಾಮ ಪಂಚಾಯಿತಿ ಕಛೇರಿ ಯಲ್ಲಿಯೇ ಕುಳಿತು ಅಭಿವೃದ್ಧಿ ಅಧಿಕಾರಿಗಳ ಸಹಿತ 17 ಸಿಬ್ಬಂದಿಗಳ ಗೈರೀನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಂಚನಾಮೆ ಸಹಿತ ಲಿಖಿತ ರೂಪದಲ್ಲಿ ಪತ್ರ ಬರೆದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ರವಾನಿಸಿದ್ದಾರೆ .ಅದರ ಪ್ರತಿ eಸುದ್ದಿಗೂ ಲಭ್ಯವಾಗಿದೆ

ವಾಸ್ತವಾಂಶವನ್ನು ಗಮನಿಸಿದ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಅವರು ಅಂದೇ ಸಂಜೆ ವಿಚಾರಣೆ ಕಾಯ್ದಿರಿಸಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವರದಿ-ವೀರೇಶ ಅಂಗಡಿ ಗೌಡುರು

Don`t copy text!