ಯುಗಾದಿ

ಯುಗಾದಿ

ಯುಗಾದಿ ಹಿಂದುಗಳ ಹೊಸ ವರ್ಷದ ಆರಂಭ. ವರ್ಷದ ಮೊದಲ ಹಬ್ಬ. ಬೇವು ಬೆಲ್ಲ , ಎಣ್ಣೆ ನೀರು ಹಾಕಿಕೊಳ್ಳುವುದು ಹೊಸ ಬಟ್ಟೆ ಉಟ್ಟು ದೇವಸ್ಥಾನಕ್ಕೆ ಹೋಗುವುದು ಗುರು ಹಿರಿಯರಿಗೆ ನಮಸ್ಕರಿಸುವುದು. ಹೋಳಿಗೆ ಊಟ ಮಾಡುವುದು.

ಹಿಂದು ರೀತಿಯಲ್ಲಿ ನವ ಚಿಗುರಿನಿಂದ ಹೊಸ ವರ್ಷದ ಆರಂಭ. ಚೈತ್ರ ಮಾಸದಿಂದ ಹೊಸ ಪರ್ವ ಹೊಸ ದಿನ. ಹಿಂದುಗಳ್ಲಲಿ ಸಂವತ್ಸರಗಳು, ಮಾಸಗಳು, ಎರಡು ಪಕ್ಷಗಳು ಇವೆಲ್ಲವೂ ಹಿಂದು ಪಂಚಾಂಗ. ನವ ವರ್ಷವನ್ನು ಚೈತ್ರದ ಚಿಗುರಿನಿಂದ ಸ್ವಾಗತಿಸುತ್ತೇವೆ.

ಮೊದಲಿಗೆ ಮುಂಜಾನೆ ಎದ್ದು ನಮ್ಮ ಮನೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ ಮನೆಯ ಮುಂದೆ ಸೊಗಸಾದ ರಂಗೋಲಿಯನ್ನು ಹಾಕಿ ಮನೆಯನ್ನು ಅಲಂಕರಿಸುತ್ತೇವೆ. ಮುಂಜಾನೆ ಎಣ್ಣೆ ನೀರನ್ನು ಹಾಕಿ ಮಿಂದು ಹೊಸ ಬಟ್ಟೆಯುಟ್ಟು ದೇವರನ್ನು ಪೂಜಿಸುತ್ತೇವೆ. ದೇವರಿಗೆ ಹೊಸದಾದ ಬಟ್ಟೆ (ದೇವರ ವಸ್ತ್ರವನ್ನ) ಸಮರ್ಪಿಸಿ ವಿವಿಧ ಹಣ್ಣುಗಳು, ಪಾನಕ ಕೋಸಂಬರಿ ಹೋಳಿಗೆ ಆಂಬೊಡೆಗಳ ಜೊತೆಗೆ ವಿಶೇಷವಾಗಿ ಬೇವು ಬೆಲ್ಲವನ್ನು ನಿವೇದಿಸಿ ಅದನ್ನು ನಾವು ಸ್ವೀಕರಿಸಿ ಮನೆ ಮಂದಿ ಬಂಧು ಬಾಂಧವರಿಗೆಲ್ಲರಿಗೂ ಹಂಚಿ ತಿನ್ನುತ್ತೇವೆ.
ನಮ್ಮ ಪ್ರತಿಯೊಂದು ಆಚರಣೆಗೂ ಇಂದು ವೈಜ್ಞಾನಿಕ ಹಿನ್ನಲೆ ಇದೆ. ಇಂತಹ ಕಾರಣ ತಿಳಿದು ಹಬ್ಬವನ್ನು ಆಚರಿಸೋಣ. ಈಗಷ್ಟೇ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಮುಂಜಾನೆ ಯಾವುದೇ ವಿಶೇಷವಾದ ಎಣ್ಣೆಯನ್ನು ದೇವರಿಗೆ ಅರ್ಪಿಸಿದ್ದು ಇದ್ದರೆ ಶ್ರೇಷ್ಠ ಅದನ್ನು ತಲೆ ಮೈ ಕೈಗೆ ಲೇಪಿಸಿ ಉತ್ತಮವಾದ ಸಿಗೇ ಕಾಯಿಯಿಂದ ಅಭ್ಯಂಗ ಮಾಡಿದರೆ ದೇಹದಲ್ಲಿರುವ ಉಷ್ಣಾಂಶವು ಕಡಿಮೆಯಗಿ ದೇಹದಲ್ಲಿ ಚೈತನ್ಯ ತುಂಬುತ್ತದೆ. ಹೊಸ ಬಟ್ಟೆಯನ್ನು ಧರಿಸುವುದು ಅದರಿಂದ ಮನವು ಆನಂದಿತವಾಗುತ್ತದೆ. ನಂತರ ಬೇವು ಬೆಲ್ಲವನ್ನು ಸೇವಿಸುವುದರಿಂದ ನಮ್ಮ ಮೈಯಲ್ಲಿ ಇರುವ ರೋಗಾಣುಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬರಬಹುದಾದ ರೋಗಗಳನ್ನು ನಿರೋಧಿಸುತ್ತದೆ. ಉತ್ತಮವಾದ ಪೌಷ್ಠಿಕ ಆಹಾರವನ್ನು ತಿನುವುದು ಅದೂ ಕೂಡ ಬಂಧು ಬಾಂಧವರೊಂದಿಗೆ ಉತ್ತಮ ಸಮಯವನ್ನು ಕಳೇಯುವುದು. ಅದರಲ್ಲೂ ಬೆಳೆಯ ಹೋಳಿಗೆ ಕೋಸಂಬರಿ ಆಂಬೊಡೆಗಳಿಂದ ಪ್ರೊಟೀನ್ ದೊರೆತರೆ, ನಿಂಬೆ ಮಾವುಗಳಿಂದ ಜೀರ್ಣ ಕ್ರಿಯೆಗೆ ಸಹಾಯವಾಗುತ್ತದೆ. ದೇವಸ್ಥಾನಕ್ಕೆ ಹೋಗುವದು ಪಂಚಾಂಗ ಶ್ರವಣವನ್ನು ಮಾಡುವುದು ಇವೆಲ್ಲವೂ ವಿಶೇಷ ಮಹತ್ವವನ್ನು ಪಡೆಯುತ್ತದೆ. ಪಂಚಾಂಗ ಪಠಣ ಇದು ನಮ್ಮ ವರ್ಷದ ಕಾರ್ಯಕ್ರಮಗಳನ್ನು ತಯಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಳೆ ಬೆಳೆ ಹಬ್ಬ ಎಲ್ಲವೂ ಇರುತ್ತದೆ. ಇಂದಿನ ಜನರು ಜ್ಯೋತಿಷ್ಯವನ್ನು ನಂಬದಿದ್ದರೂ ಪಂಚಾಂಗದಂತಹ ಉತ್ತಮ ಇಯರ ಪ್ಲಾನರ್‌ ಮತ್ತೊಂದಿಲ್ಲ. ನಮ್ಮ ಮಕ್ಕಳ ಹುಟ್ಟುಹಬ್ಬ ಮನೆಯಲ್ಲಿ ಹಿರಿಯರ ಕಾರ್ಯಗಳು ವಿಶೇಷ ಸಂಭ್ರಮದ ತಯಾರಿಯನ್ನು ಕೂಡಾ ಹೊಸ ಪಂಚಾಂಗ ಬಂದಕೂಡಲೇ ಮಾಡುತ್ತಾರೆ. ಪ್ರತಿ ವರ್ಷದಂತೆ ಇನ್ನು ಹೆಚ್ಚು ಶ್ರದ್ದೆಯಿಂದ ನವ ವರ್ಷವನ್ನು ಸ್ವಾಗತಿಸೋಣ.

ಎಲ್ಲರಿಗೂ ಶೋಭನ ಕೃತ್ ನಾಮ ಸಂವತ್ಸರದ ಶುಭಾಶಯಗಳು

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!