ಮನವೇ ಲಿಂಗವೆಂದ ಷಟಸ್ಥಲ ಜ್ಞಾನಿ ಕಿನ್ನರಿ ಬ್ರಹ್ಮಯ್ಯ
ಕರ್ನಾಟಕದ ಇತಿಹಾಸದಲ್ಲಿ ೧೨ನೇ ಶತಮಾನಕ್ಕೆ ತನ್ನದೇ ಆದ ವಿಶೇಷತೆ ಇದೆ. ಜಾತಿ, ವರ್ಗ, ಲಿಂಗ ಬೇಧವಿಲ್ಲದ ಸ ಸಮಾಜವನ್ನು ಕಟ್ಟಿ ಪ್ರಗತಿಪರ ಆಲೋಚನೆಗಳನ್ನು ತಮ್ಮ ವಚನಗಳಲ್ಲಿ ದಾಖಲಿಸಿ, ಕನ್ನಡ ಭಾಷೆಯನ್ನು ಹುಲುಸಾಗಿ ಬೆಳೆಸಿದರು ಶರಣರು. ಬಸವಣ್ಣನವರ ಕಾಯಕ ದಾಸೋಹ ತತ್ವಕ್ಕೆ ಮನಸೋತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗುಜರಾತಿನಿಂದ ಬಂಗಾಳಕೊಲ್ಲಿಯವರೆಗಿನ ಜನರೆಲ್ಲ ಕಲ್ಯಾಣಕ್ಕೆ ಬಂದು ಶರಣತತ್ವವನ್ನು ಸ್ವೀಕರಿಸಿದರು. ನುಡಿದಂತೆ ನಡೆದರು. ಕಾಯಕ ದಾಸೋಹದಲ್ಲಿ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಂಡರು.
ಬಸವಣ್ಣನವರು ಕಟ್ಟಬಯಸಿದ ವರ್ಗ ಬೇಧ, ಜಾತಿ ಬೇಧವಿಲ್ಲದ ಶರಣ ಸಮಾಜಕ್ಕೆ ಆಕರ್ಷೀತನಾಗಿ ಬಂದವನು ಆಂದ್ರದ ಕಿನ್ನರಿ ಬ್ರಹ್ಮಯ್ಯ. ಕಿನ್ನರಿ ಬ್ರಹ್ಮಯ್ಯ ಆಂದ್ರಪ್ರದೇಶದ ಪೂಡುರು ಎಂಬ ಗ್ರಾಮದವನು. ಬಸವಣ್ಣನವರ ಸಮಕಾಲೀನನವನು. ಇವನ ತಾಯಿಯ ಹೆಸರು ಕಲಿದೇವಿ. ತಂದೆಯ ಹೆಸರು ತಿಳಿದುಬಂದಿಲ್ಲ. ವೃತ್ತಿಯಿಂದ ಅಕ್ಕಸಾಲಿಗನಾದ ಬ್ರಹ್ಮಯ್ಯನು, ಪ್ರವೃತ್ತಿಯಿಂದ ಕಿನ್ನರಿ ವಾದ್ಯವನ್ನು ನುಡಿಸುವವನಾಗಿದ್ದನು. ತ್ರಿಪುರಾಂತಕ ಲಿಂಗ ಎನ್ನುವ ಅಂಕಿತನಾಮದಲ್ಲಿ ರಚಿಸಿರುವ ೧೮ ವಚನಗಳು ದೊರೆತಿವೆ.
ಷಟ್‌ಸ್ಥಲ ಜ್ಞಾನಿ : ಬಸವಣ್ಣ, ಚೆನ್ನಬಸವಣ್ಣ, ಮಡಿವಾಳ ಮಾಚೀದೇವ, ಮೇದಾರ ಕೇತಯ್ಯ ಮತ್ತು ಕಿನ್ನರಿ ಬ್ರಹ್ಮಯ್ಯ ಈ ಐದು ಜನರು ಷಟ್‌ಸ್ಥಲ ಜ್ಞಾನಿಗಳಾಗಿದ್ದಾರೆ.
ಕಿನ್ನರಿ ನುಡಿಸಿ ದೇವರಿಂದ ಕಾಣಿಕೆಯನ್ನು ಪಡೆಯುತ್ತಿದ್ದ ಎನ್ನುವ ಕಾರಣದಿಂದಾಗಿ ಕಿನ್ನರಿ ಬ್ರಹ್ಮಯ್ಯ ಎಂದು ಪ್ರಸಿದ್ಧರಾಗಿದ್ದಾರೆ.
ತನು ಸೆಜ್ಜೆ ಮನ ಲಿಂಗವಾದ ಬಳಿಕ
ಆನು ಮತ್ತೆ ಬೇರೆ ಅರಸಲುಂಟೆ?
ತನುವೆ ಬಸವಣ್ಣ ಮನವೇ ಪ್ರಭುದೇವರೆಂಬ
ಮಹಾ ಘನವನೊಳಕೊಂಡಿರ್ದ ಬಳಿಕ
ಗುಣಾವಗುಣವ ಸಂಪಾದಿಸುವರೇ?
ಮಹಾಲಿಂಗ ತ್ರಿಪುರಾಂತಕದೇವ, ಸಂಗನ ಬಸವಣ್ಣನಲ್ಲಿ
ನಿಮ್ಮಡಿಗಳಲ್ಲಿ ಸಂದು ಸಂಶಯವುಂಟೆ?
ಬಿಜಯಂಗ್ಯವುದಯ್ಯಾ ಪ್ರಭುವೆ.
ತನು ಸೆಜ್ಜೆ ಮನ ಲಿಂಗವಾದ ಬಳಿಕ
ಆನು ಮತ್ತೆ ಬೇರೆ ಅರಸಲುಂಟೆ?
ಕಿನ್ನರಿ ಬ್ರಹ್ಮಯ್ಯನು ತನ್ನ ದೇಹವು ಲಿಂಗವನ್ನಿಡುವ ಕರಡಿಗೆಯಾಗಿದೆ. ಮನವೇ ಲಿಂಗವಾಗಿದೆ. ಮನ ಲಿಂಗವಾಗುವುದೆಂದರೆ ಮನದ ವಿಕಾರಗಳು ಕಳೆದು ಮನ ಪರಿಶುದ್ಧವಾಗುವುದು. ಮನವನ್ನು ಶುದ್ಧಗೊಳಿಸಿ ಪರಿಶುದ್ಧವಾಗುವ ಪ್ರಕ್ರಿಯೆಗೆ ತನ್ನನ್ನು ಒಡ್ಡಿಕೊಳ್ಳುವುದು ಸಾಮಾನ್ಯವಾದುದಲ್ಲ. ಆದರೆ ಶರಣರ ಸಂಗದಿಂದ ಇದನ್ನು ಸಾಧ್ಯಮಾಡಿಕೊಂಡಿರುವ ತಾನು ಬಾಹ್ಯವಾದ ಭೌತಿಕ ಕುರುವಾದ ಲಿಂಗವನ್ನು ಆರಾಧಿಸುವುದಿಲ್ಲವೆಂದು ಹೇಳುತ್ತಾನೆ.
ತನುವೇ ಬಸವಣ್ಣ, ಮನವೇ ಪ್ರಭುದೇವರೆಂಬ ಮಹಾಘನವನೊಳಕೊಂಡಿರ್ದ ಬಳಿಕ ಗುಣಾಗುಣವ ಸಂಪಾದಿಸುವರೇ?
ತನ್ನ ದೇಹವು ಬಸವಣ್ಣನ ಕಾಯಕ ಮತ್ತು ದಾಸೋಹದ ತತ್ವಗಳನ್ನು ಅಳವಡಿಸಿಕೊಂಡಿರುವುದರಿಂದ ತನುವೇ ಬಸವಣ್ಣನಲ್ಲಿ ಅಧೀನವಾಗಿದೆ. ಮನದ ಎಲ್ಲ ವ್ಯಾಪಾರಗಳನ್ನು ಜಯಿಸಿದ ಪ್ರಭುದೇವರ ತತ್ವ ವಿಚಾರಗಳು ತನ್ನ ಮನಸ್ಸನ್ನು ಪ್ರಭಾವಿಸಿರುವುದರಿಂದ ಪ್ರಭುದೇವರು ಮಹಾಘನ ಅವರನ್ನು ತಾನು ಸೇರಿರುವುದರಿಂದ, ತನುಮನದಲ್ಲಿ ನನ್ನದೆನ್ನುವ ಅಸ್ತಿತ್ವವು ಅಳಿದು ಹೊಗಿರವವನು ತಾನು. ತನ್ನಲ್ಲಿ ಗುಣ ಅವಗುಣಗಳು ಎಣಿಸುವುದು ಸರಿಯೇ ಎಂದು ಪ್ರಶ್ನಿಸುತ್ತಾನೆ.
ಮಹಾಲಿಂಗ ತ್ರಿಪುರಾಂತಕ ದೇವಾ, ಸಂಗನಬಸವಣ್ಣನಲ್ಲಿ ನಿಮ್ಮಡಿಗಳಲ್ಲಿ ಸಂದು ಸಂಶಯವುಂಟೆ?
ಬಿಜಯಂಗ್ಯೆವುದಯ್ಯ ಪ್ರಭುವೇ
ಮಹಾಲಿಂಗ ತ್ರಿಪುರಾಂತಕ ದೇವಾ ನೀನು ಕೃಪೆ ತೋರಲು ಯಾತಕ್ಕೆ ಸಂಶಯಪಡುತ್ತಿರುವೆ. ಪ್ರಭುವೇ ನಾನು ನಿನ್ನಲ್ಲಿ ಸಂಗನ ಬಸವಣ್ಣನಲ್ಲಿ ಶರಣಾದವನು. ತನ್ನ ಮೇಲೆ ದಯೇ ತೋರಿಸು ಸಂಶಯ ಪಡುವ ಅಗತ್ಯವಿಲ್ಲ. ನಾನು ನಿನ್ನ ಕೃಪೆಗೆ ಪಾತ್ರನಾಗಲು ಯೋಗ್ಯನಾದವನೆಂದು ಪರಿಗಣಿಸು ಎಂದು ನೀವೇದನೆ ಮಾಡಿಕೊಳ್ಳುತ್ತಾನೆ.
ಇದೊಂದು ವಿಶಿಷ್ಠ ವಚನ.
ಭಕ್ತನೊಬ್ಬ ತನ್ನ ಆರಾಧ್ಯ ದೈವಕ್ಕೆ, ತನಗೆ ಕೃಪೆ ತೋರಲು ತನ್ನನ್ನು ತಾನು ಪ್ರಮಾಣಿಕರಿಸಿಕೊಳ್ಳುವ ವಚನ. ಅದಕ್ಕೆ ಬಸವಣ್ಣ ಮತ್ತೆ ಪ್ರಭುದೇವರಂತ ಘನಮಹಿಮರ ಆಧಾರಗಳನ್ನು ನೀಡುತ್ತಾನೆ.
ಕಾಯದಲ್ಲಿ ಕಳವಳವಿರಲು
ಪ್ರಾಣದಲ್ಲಿ ಮಾಯೆಯಿರಲು
ಏತರ ಗಮನ ಏತರ ನಿರ್ವಾಣ
ಮಹಾಲಿಂಗ
ಕಾಯದಲ್ಲಿ ಕಳವಳವಿರಲು
ಪ್ರಾಣದಲ್ಲಿ ಮಾಯೆಯಿರಲು
ಏತರ ಗಮನ ಏತರ ನಿರ್ವಾಣ
ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ
ಸಜ್ಜೆನೆಯೆಂದು ಕೈವಿಡಿವನಲ್ಲ.
ಈ ವಚನದಲ್ಲಿ ಕಿನ್ನರಿ ಬ್ರಹ್ಮಯ್ಯನವರು ಅಕ್ಕಮಹಾದೇವಿಯ ಕುರಿತಾಗಿ ಹೇಳಿರುವಂತೆ ಕಂಡುಬರುತ್ತದೆ. ಕಾಯದ ಕಳವಳವೆಂದರೆ, ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ. ವಿಷಯಾದಿ ಸುಖಗಳಾದ ಹಸಿವು, ತೃಷೆ, ನಿದ್ರೆ, ಲೈಂಗಿಕ ಬಯಕೆ ಮುಂತಾದ ವಿಷಯಗಳ ಕುರಿತು ಸದಾ ಚಿಂತಿಸುವ ಸ್ಥಿತಿ.
ಏತರ ಗಮನ ಏತರ ನಿರ್ವಾಣ.
ಮನಸ್ಸು ಚಿಂತೆ ಮತ್ತು ಭ್ರಾಂತಿಗಳಲ್ಲಿ ತಲ್ಲೀನವಾದಾಗ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲವನ್ನು ತೊರೆದು ನಿರ್ವಾಣ ಹೊಂದುವುದೆಂದರೆ ಭೌತಿಕ ಜಗತ್ತಿನ ಸಂಬಂಧಗಳನ್ನು ತೊರೆದಲ್ಲದೇ ಜೀವಾತ್ಮವು ದೇಹವನ್ನು ತೊರೆಯುವುದು ಅಷ್ಟು ಸುಲಭವಾದುದಲ್ಲ.
ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ ಸಜ್ಜೆನೆಯಂದು ಕೈ ಹಿಡಿದವನಲ್ಲ.
ಮಹಾಲಿಂಗ ತ್ರಿಪುರಾಂತಕ ದೇವನು ನೀನು ಕಾಯದ ಕಳವಳ ಮತ್ತು ಪ್ರಾಣದಲ್ಲಿರುವ ಮಾಯೆಯನ್ನು ಸಂಹಾರ ಮಾಡಬಲ್ಲವಳೆಂಬುದನ್ನು ಬಲ್ಲ. ಅದಕ್ಕೆ ನಿನ್ನ ಸಂಹಾರಿ ಎಂದು ಕೈಹಿಡಿದಿರುವನು. ಕಾಯದ ಕಳವಳ ಪ್ರಾಣದಲ್ಲಿಯ ಮಾಯೆಯನ್ನು ಸಜ್ಜನೆಯಿಂದ ಗೆಲ್ಲಲು ಸಾಧ್ಯವಿಲ್ಲ. ಅವುಗಳನ್ನು ನಾಶ ಮಾಡುವ ಸಾಮರ್ಥ್ಯವಿರುವವಳು ನೀನು ಮಾತ್ರ.
ಈ ವಚನದಲ್ಲಿ ಕಿನ್ನರಿ ಬ್ರಹ್ಮಯ್ಯನು ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ಮನೋಜ್ಞವಾಗಿ ಚಿತ್ರಿಸಿದ್ದಾನೆ. ಅಕ್ಕನ ವ್ಯಕ್ತಿತ್ವವು ಸಜ್ಜನೆಯಾಗಿರುವುದಕ್ಕಿಂತ ಕಾಯದ ಕಳವಳಗಳನ್ನು ಸಂಹರಿಸುವ ಧೈರ್ಯ ಸಾಮರ್ಥ್ಯವುಳ್ಳ ವಿಭಿನ್ನ ಮಹಿಳೆ ಎಂದು ಅವಳನ್ನು ವರ್ಣಿಸುತ್ತಾನೆ.
ಆಶ್ರಯ ನಿರಾಶ್ರಯ ಹರಪುರತರಿಗಲ್ಲದೆ ಕಿರಾತಕರಿಗುಂಟೆ
ಆಶ್ರಯಿಸಬಹುದು ಪ್ರಭುವಿನ ನುಡಿಯ
ಆಶ್ರಯಿಸಬಹುದು ಹರಗಣಗಂಳ ನುಡಿಯ
ಆದೇನು ಕಾರಣವೆಂದಡೆ ಕಾರಣವಿಲ್ಲದ ಕಂಡಂತಾದರು
ತ್ರಿಪುರಾಂತಕಲಿಂಗ ಶರಣರು ಚೆನ್ನಬಸವಯ್ಯ.
ಆಶ್ರಯ ನಿರಾಶ್ರಯ ಎನ್ನುವ ಭಾವ ಹರನಭಕ್ತರಾದ ಪುರಾತರಿಗೆ ಇದೆ. ಕಿರಾತಕನಿಗೆ ಯಾವ ಆಶ್ರಯದ ಅವಶ್ಯಕತೆಯಿಲ್ಲ. ಅವನು ತನ್ನ ಕೃತ್ಯಗಳಿಗೆ ಯಾರನ್ನೂ ಆಶ್ರಯಿಸುವುದಿಲ್ಲ. ಹರನ ಭಕ್ತರು, ಶರಣರು ಯಾರನ್ನು ಆಶ್ರಯಿಸಬೇಕು ಎಂದರೆ ಅಲ್ಲಮ ಪ್ರಭುಗಳ ನುಡಿಗಳನ್ನು ಆಶ್ರಯಿಸಿ ಅವುಗಳಂತೆ ನಡೆಯಬೇಕು. ಶರಣರ ನುಡಿಗಳನ್ನು ಆಶ್ರಯಿಸಬೇಕು. ಅವರನ್ನು ಆಶ್ರಯಿಸಲು ಕಾರಣಗಳು ಬೇಕಿಲ್ಲ ಎನ್ನುವುದನ್ನು ಈ ವಚನದಲ್ಲಿ ಹೇಳುತ್ತಾರೆ.
ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣನ
ಸಿರಿಯ ಸಂತೋಷದ ಕರಿ ತುರಗ ರಥ ಪದಾತಿಯ ನೆರವಿಯ
ಸತಿ ಸುತ ಬಂಧುಗಳ ಸಮೂಹದ
ನಿನ್ನ ಕುಲಭಿಮಾನದ ಗರ್ವವ ಬಿಡು ಮರುಳಾಗದಿರು
ಅಕಟಕಟಾ ರೋಮಜನಿಂದ ಹಿರಿಯನೇ?
ಮದನ ನಿಂ ಚೆಲುವನೆ
ಸುರಪತಿಯಿಂ ಸಂಪನ್ನನೆ
ವಾಮದೇವ ವಷಿಷ್ಠರಿಂ ಕುಲಜನೆ
ಅಂತಕನ ದೂತರು ಬಂದು ಕೈವಿಡಿದೆಳದೊಯುವಾಗ
ನುಡಿ ತಡವಿಲ್ಲ ಕೇಳೋ ನರನೆ
ಎನ್ನ ಮಹಾಲಿಂಗ ತ್ರಿಪುರಾಂತಕದೇವರ
ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ.
ಈ ವಚನದಲ್ಲಿ ಮನುಷ್ಯನನ್ನು ಆವರಿಸಿ ವರ್ಗದಿಂದ ವರ್ತಿಸುವಂತೆ ಮಾಡುವ ಅಷ್ಠ ಮದಗಳು ಕುರಿತು ಕಿನ್ನರಿ ಬ್ರಹ್ಮಯ್ಯ ಹೇಳುತ್ತಾನೆ. ಹರೆಯದ ಸೌಂದರ್ಯದ ವಿದ್ಯೆ, ಸಿರಿ, ಸಂಪತ್ತು, ಆನೆ, ಕುದುರೆ ಪದಾತಿದಳ ಬಲ, ಹೆಂಡತಿ ಮಕ್ಕಳು ಬಂದುಬಳಗ ಪರಿವಾರ, ಕುಲದ ಬಗ್ಗೆ ಗರ್ವ ಪಡದಿರು ಮರುಳೆ.
ರೋಮಜನಿಂ ಹರೆಯನೇ?
ರೋಮಜಮಹಾಮುನಿಯಂತ ಶಾಶ್ವತವಾದ ಹರೆಯನ್ನು ಹೊಂದಲು ನಮಗೆ ಸಾಧ್ಯವಿಲ್ಲ. ಮಾನವ ಜನ್ಮದಲ್ಲಿ ಹರೆಯ ಒಂದು ಅವಧಿಗೆ ಬಂದು ಹೋಗುವುದು ಹರೆಯ ಮದದಿಂದ ವರ್ತಿಸಬೇಡ.
ಮದನನಿಂ ಚಲುವನೆ?
ಕುಂದದ, ಶಾಶ್ವತ ಸೌಂದರ್ಯಕ್ಕೆ ಚೆಲುವಿಗೆ ಹೆಸರಾದವನು ಮದನ. ಮನುಷ್ಯನ ಸೌಂದರ್ಯವು ತಾತ್ಕಾಲಿಕ. ಸೌಂದರ್ಯವು ಮಾಸಿ ಹೋಗುವುದು. ಹಾಗಾಗಿ ಸೌಂದರ್ಯವಿದೆ ಎಂದು ಜಂಭ ಪಟ್ಟುಕೊಳ್ಳಬೇಡ.
ಸುರಪತಿಯಿಂ ಸಂಪನ್ನನೇ?
ಮನುಷ್ಯ ಸಂಪಾದಿಸಿದ ಸಂಪತ್ತು ಸುರಪತಿಯಾದ ಇಂದ್ರನ ಸಂಪತ್ತಿನ ಮುಂದೆ ಗೌಣ. ಅವನನ್ನು ಮೀರಿಸುವ ಸಂಪತ್ತಿನ ಒಡೆಯರು ನಾವಾಗಲು ಸಾಧ್ಯವಿಲ್ಲ.
ವಾಮದೇವ ವಷಿಷ್ಠರಿಂ ಕುಲಜನೆ
ವಾವದೇವ ವಷಿಷ್ಠರಂತ ಋಷಿಗಳು ಉತ್ತಮೋತ್ತಮ ಕುಲದಲ್ಲಿ ಹುಟ್ಟಿದವರು. ಅಂತಕನ ದೂತರು ಬಂದು ಕೈವಿಡಿದೆಳದೊಯುವಾಗ
ಅಂತಕನ ದೂರತು ಅಂದರೆ ಯಮನ ದೂತರ ಬಂದು ಪ್ರಾಣವನ್ನು ಎಳೆದುಕೊಂಡು ಹೋಗುವಾಗ ಈ ಮದಗಳಿಂದ ಅವರನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಮನುಜನೇ ಈ ಮದಗಳನ್ನೆಲ್ಲ ತೊರೆದು ತ್ರಿಪುರಾಂತಕನನ್ನು ಪೂಜಿಸಿದರೆ ನಿನಗೆ ಒಳ್ಳೆಯ ಪದ ದೊರಕುವುದು ಸದ್ಗತಿ ಉಂಟಾಗುವುದೆಂದು ಕಿನ್ನರಿ ಬ್ರಹ್ಮಯ್ಯ ಈ ವಚನದಲ್ಲಿ ಹೇಳಿದ್ದಾನೆ.
ಹೀಗೆ ಕಿನ್ನರಿ ಬ್ರಹ್ಮಯ್ಯನವರು ಬಸವಣ್ಣನವರು ನೀಡಿದ ಕರೆಗೆ ಓಗೋಟ್ಟು ಕಲ್ಯಾಣಕ್ಕೆ ಬಂದು, ಕಿನ್ನರಿ ನುಡಿಸುವ ಕಾಯಕದಲ್ಲಿ ನಿರತನಾಗಿ ದಾಸೋಹವನ್ನು ಮಾಡುತ್ತ, ಮಹಾಮನೆಯಲ್ಲಿ ಒಬ್ಬರಾಗಿ ತಮ್ಮ ಅನುಭಾವದಿಂದ ವಚನಗಳನ್ನು ರಚಿಸಿದರು.
ಕಲ್ಯಾಣದಲ್ಲಿ ಕ್ರಾಂತಿ ನಡೆದಾಗ, ಶರಣರೆಲ್ಲರೂ ಕಲ್ಯಾಣವನ್ನು ತೊರೆಯುವ ಸಂದರ್ಭದಲ್ಲಿ ದಂಡಿನ ದಳಪತಿಯಾಗಿದ್ದ ಚೆನ್ನಬಸವಣ್ಣನು, ದಂಡಿನ ಉಸ್ತುವಾರಿಯನ್ನು ಕಿನ್ನರಿ ಬ್ರಹ್ಮಯ್ಯನಿಗೆ ವಹಿಸಿಕೊಡುತ್ತಾನೆ. ದಂಡಿನ ದಳಪತಿಯಾದ ಕಿನ್ನರಿ ಬ್ರಹ್ಮಯ್ಯನು ಉಳುವಿಯಲ್ಲಿ ತನ್ನ ದಂಡಿನ ನೆರವಿನಿಂದ ನದಿಯ ದಿಕ್ಕನ್ನು ಬದಲಿಸುತ್ತಾನೆ. ಇದರಿಂದಾಗಿ ಶತೃಗಳಿಗೆ ಅಪಾರ ನಷ್ಠ ಸಂಬವಿಸುತ್ತದೆ. ಉಳುವಿಯಲ್ಲಿಯೇ ಕೊನೆಯುಸಿರೆಳೆದ ಬ್ರಹ್ಮಯ್ಯನ ಸಮಾಧಿ ಈಗಲೂ ಉಳುವಿಯಲ್ಲಿದೆ. ಈತ ತಿರುಗಿಸಿದ ಹೊಳೆಯನ್ನು ಕಿನ್ನರಿ ಬ್ರಹ್ಮಯ್ಯನ ಹೊಳೆ ಎಂದೇ ಜನ ಕರೆಯುತ್ತಾರೆ. ವಚನಗಳ ಕಟ್ಟುಗಳನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದಾನೆ.
–ಡಾ.ನಿರ್ಮಲ ಬಟ್ಟಲ