ತೆರಿಗೆ ಕಾಯ್ದೆ ಬಗ್ಗೆ ತಜ್ಞರ ಜತೆಗೆ ಚರ್ಚೆಗೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಬೇಕಿತ್ತು
e- ಸುದ್ದಿ ರಾಯಚೂರು
ಆದಾಯ ತೆರಿಗೆಯಂತಹ ಮಹತ್ವದ ಕಾಯ್ದೆ ಜಾರಿ ತರುವ ಪೂರ್ವ ಈ ಬಗ್ಗೆ ನುರಿತ ತಜ್ಞರ ಮತ್ತು ಈ ಕ್ಷೇತ್ರದಲ್ಲಿ ಅನುಭವಿಗಳ ಮಧ್ಯೆ ಚರ್ಚೆಗೆ ಕೇಂದ್ರ ಸರಕಾರ ಅವಕಾಶ ನೀಡುವ ಅಗತ್ಯವಿತ್ತು ಎಂದು ಸಂಸದ ಜಿ.ಕುಮಾರ್ ನಾಯಕ ಅವರು ಪ್ರತಿಪಾದಿಸಿದರು.
ಅವರು ಇಂದು ನಗರದ ಆಶಾಪೂರ್ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘ ಮತ್ತು ರಾಯಚೂರು ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025ರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಗೆ, ತಿದ್ದುಪಡಿಯ ನೂತ ಆದಾಯ ತೆರಿಗೆ ಕಾಯ್ದೆ-2025 ಜಾರಿ ಸಿದ್ಧತೆ ನಡೆಸಿದೆ.
ಕೇಂದ್ರ ಜಾರಿಗೊಳಿಸಲುದ್ದೇಶಿತ ನೂತನ ಆದಾಯ ತೆರಿಗೆ ಕಾಯ್ದೆ ಚಾರ್ಟರ್ಡ್ ಅಕೌಂಟೆಂಟ್ ಸೇವೆಗೆ ಮಾರಕವಾಗಿದೆ.
ಡಿಜಿಟಲ್ ಡಿವೈಸ್ ತಂತ್ರಜ್ಞಾನ ವ್ಯಾಪಾರಿಗಳ ಖಾಸಗಿ ಜೀವನಕ್ಕೆ ಸಂಚಕಾರವಾಗಿದೆ.
ಇಂತಹ ಮಹತ್ವದ ಕಾಯ್ದೆ ಜಾರಿ ಪೂರ್ವ ಇದರ ಎಲ್ಲಾ ಅಂಶಗಳ ಬಗ್ಗೆ ನೂತನ ಆದಾಯ ತೆರಿಗೆ ಕಾಯ್ದೆ ಜಾರಿಗೆ ಪೂರ್ವ ಚರ್ಚೆ ಅಗತ್ಯವಾಗಿತ್ತು. ಈ ಹಿಂದೆ ವಿರೋಧ ಪಕ್ಷಗಳ ಒತ್ತಾಯದಿಂದ ವಕ್ಫ್ ತಿದ್ದುಪಡೆ ಕಾಯ್ದೆ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು ಎಂದರು.
ನೂತನ ಆದಾಯ ತೆರಿಗೆ ಕಾಯ್ದೆ ಸಾಧಕ-ಬಾಧಕಗಳ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ ಕೂಲಂಕುಶ ಅಧ್ಯಯನ ಮಾಡಿ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರೆ ಲೋಕಸಭೆ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಮುಂದೆ ಸವಾಲಿನ ಪ್ರಶ್ನೆ ಮಂಡಿಸಿ ವಿವರಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಈ ಚರ್ಚಾ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ಚಾರ್ಟರ್ಡ್ ಅಕೌಂಟೆಂಟ್ ಅವರು, ಡಿಜಿಟಲ್ ತಂತ್ರಜ್ಞಾನ ವೈಯಕ್ತಿಕ ಜೀವನಕ್ಕೆ ಬಾಧಕವಾಗದಂತೆ ಗಮನಿಸಬೇಕು ಮತ್ತು ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ಜೀವನದ ಮೇಲೆ ಯಾವುದೇ ಪ್ರಹಾರ ಮಾಡದಂತೆ ತಿದ್ದುಪಡಿ ಪರಿಷ್ಕರಿಸಬೇಕು ಎಂದು ಧ್ವನಿ ಎತ್ತಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕರು ಮಹತ್ವದ ಸಲಹೆಗಳನ್ನು ನೀಡಿದರು. ಕೇಂದ್ರ ಸರ್ಕಾರದ ಮುಂದೆ ಮಂಡಿಸುವ 5 ಪ್ರಶ್ನೆಗಳ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ಮತ್ತು ಅದಕ್ಕೆ ಪೂರಕ ಮಾಹಿತಿ ಒದಗಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಮಚಂದ್ರ ಪ್ರಭು, ಕಮಲ್ ಕುಮಾರ್ ಅವರು ಮಾತನಾಡಿದರು.
ವೇದಿಕೆಯಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಸಾಜಿದ್ ಸಮೀರ್, ಜಂಬಣ್ಣ ಸೇರಿದಂತೆ ಇನ್ನಿತರರು ಚೇತನ್ ದೋಖ ಸಿಎ ಬೋರ್, ಸುಧೀರ್ ಕಸ್ಬೆ, ಯೋಗೇಶ್ ಬಂಗ್, ರಂಜಿತ್, ಸಾವಿತ್ರಿ ಪುರುಷೋತ್ತಮ್, ಕೆಎಂ ಪಾಟೀಲ್, ವಿ ಲಕ್ಷ್ಮೀ ರೆಡ್ಡಿ, ಮಲ್ಲಿಕಾರ್ಜುನ್ ಧೋತ್ರ ಬಂಡಿ, ಎಂ ಎಸ್ ಮೂರ್ತಿ, ಉದಯ್ ಕಿರಣ್, ಉಪಸ್ಥಿತರಿದ್ದರು.