ಪರೀಕ್ಷೆ ಯುದ್ಧವಲ್ಲ ಮಕ್ಕಳೆ, ಭಯ ಬೇಡ.

ಪರೀಕ್ಷೆ ಯುದ್ಧವಲ್ಲ ಮಕ್ಕಳೆ, ಭಯ ಬೇಡ

(ಸಾಂದರ್ಭಿಕ ಚಿತ್ರ)

‌ ಇಂದಿನ ಮಕ್ಕಳು ನಾಳಿನ ನಾಡ ಬೆಳಗುವ ನಾಯಕರು. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು. ಶಾಲೆಯಲ್ಲಿ ಗುರುಗಳು ಮನೆಯಲ್ಲಿ ಪಾಲಕರು ಮಕ್ಕಳ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಹುಟ್ಟಿದ ಪ್ರತಿ ಮಗುವಿನಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಅವನನ್ನು ಭಾವಿಭವಿಷ್ಯತ್ತಿಗೆ ಅಣಿಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಹಾಗೂ ಪಾಲಕರ ಮೇಲಿದೆ. ಮಗ/ಳು ಶಾಲೆಗೆ ಹೋಗುತ್ತಾರೆ ಅಂದರೆ ಅವರ ಬಗ್ಗೆ ಪಾಲಕರ ಕಾಳಜಿ ಬೇಕೆಬೇಕು. ಅವರನ್ನು ನೀಟಾಗಿ ತಯಾರಿ ಮಾಡಿ ಶಾಲೆಗೆ ಕಳಿಸಿದರೆ ಜವಾಬ್ದಾರಿ ಮುಗಿತು ಅವರು ಕೇಳಿದ್ದೆಲ್ಲ ಕೊಡಿಸಿದರೆ ಆಯ್ತಲ್ಲವಾ ಅನ್ನಬೇಡಿ.

ನಿಮ್ಮ ಮಗು ನಿಮ್ಮ ಜವಾಬ್ದಾರಿ ಎನ್ನುವದು ನೆನಪಿರಲಿ. ಶಾಲೆಯಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಿನ ಸಮಯ ಮನೆಯಲ್ಲಿ ಕಳೆಯುತ್ತಾರೆ. ಅವರನ್ನು ಓದಿಸುವ ಅರ್ಥಾತ ಹೋಮವರ್ಕ ಮಾಡಿಸುವ ಹಾಗೂ ಇಡೀ ದಿನ ಶಾಲೆಯಲ್ಲಿ ಮಗ/ಳು ಏನು ಮಾಡಿದಳು/ನು ಎನ್ನುವ ಪರಿವೆಯಿಂದ ಪ್ರತಿದಿನ ಅಂದಿನ ಕ್ಲಾಸವರ್ಕ ಚೆಕ್ ಮಾಡುತ್ತಾ ಇದ್ದರೆ ಪರೀಕ್ಷೆ ಸಮಯದಲ್ಲಿ ಯಾವುದೇ ತೊಂದರೆ ಇರಲ್ಲ.
ಈ ವರ್ಷದ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಮಾರ್ಚ್೩೧ ರಿಂದ ಪ್ರಾರಂಭವಾಗಿ ಎಪ್ರಿಲ್ ೧೫ ಕ್ಕೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಮಕ್ಕಳು ಮೊಬೈಲ್ ಹಾಗೂ ಟಿವಿಯಿಂದ ದೂರವಿರಿ.ಆದರೆ ನಿಮಗಾಗಿ ಬಿತ್ತರಿಸುವ ರೇಡಿಯೋ ಪಾಠಗಳನ್ನು ಚಾಚೂ ತಪ್ಪದೆ ಕೇಳಿ. ಪರೀಕ್ಷಾ ಪೇ ಚರ್ಚಾ ಎಂಬ ಅಮೂಲ್ಯವಾದ ವಿಚಾರ ಸಂಕಿರಣ ಮಕ್ಕಳಲ್ಲಿ ಧೈರ್ಯವನ್ನ ತುಂಬಿತು.
‌‌
ಪತ್ರಿಕೆಯಲ್ಲಿ ಪರೀಕ್ಷಾ ತಯಾರಿ ಹೇಗಿರಬೇಕು ಹಾಗೂ ಪ್ರತಿ ವಿಷಯಗಳ ಕುರಿತು ಪ್ರಶ್ನೋತ್ತರ ಮಾದರಿಯಲ್ಲಿ ಬಂದಿರುವ ಕಟಿಂಗ್ಸ್ ಗಳನ್ನು ತೆಗೆದಿಟ್ಟುಕೊಂಡು ಪುನರಾವರ್ತನೆ ಮಾಡಬೇಕು. ಬೆಳಿಗ್ಗೆ ಬೇಗ ಎದ್ದು ಪದ್ಯಗಳನ್ನು ಕಂಠಪಾಠ ಮಾಡುವುದು ಹಾಗೂ ರಾತ್ರಿ ಬರೆಯುವುದನ್ನು ರೂಢಿಸಿಕೊಳ್ಳಬೇಕು.

ತಮ್ಮ ಎಂಟನೆಯ ಹಾಗೂ ಒಂಬತ್ತನೆಯ ವಾರ್ಷಿಕ ಪರೀಕ್ಷೆ ಗಳನ್ನು ಬರೆಯದೆ ಪಾಸಾಗಿದ್ದು ಈ ವರ್ಷದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೂ ಹಾಗೂ ಅವರ ಪಾಲಕರಿಗೂ ಆತಂಕ ಇರುವುದು ಸಹಜವೇ ಆದರೂ ಈ ವರ್ಷ ಚೆನ್ನಾಗಿ ಪಾಠಗಳು ನಡೆದು ಎಲ್ಲಾ ಪರೀಕ್ಷೆಗಳು ಅಂದರೆ ಸರಣಿ ಪರೀಕ್ಷೆ ಸ್ಟೇಟ್ ಹಾಗೂ ಡಿಸ್ಟ್ರಿಕ್ಟ್ ಪೂರ್ವ ಭಾವಿ ಪರೀಕ್ಷೆ ಮುಗಿದಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕಪಡುವ ಪ್ರಮೇಯವೇ ಬೇಡ. ಪಾಲಕರು ಆದಷ್ಟು ತಮ್ಮ ಮಗ ಅಥವಾ ಮಗಳಿಗೆ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ತುಂಬಿ ಪರೀಕ್ಷೆಗೆ ಕಳಿಸುವುದರಿಂದ ಮಗು ಚೆನ್ನಾಗಿ ಬರೆಯುತ್ತದೆ.

ಶಾಲೆಯಲ್ಲಿ ಪ್ರತಿಯೊಂದು ವಿಷಯದ ಶಿಕ್ಷಕರು ವಿದ್ಯಾರ್ಥಿಗಳಿಗೆ ಚೆನ್ನಾಗಿ ಪಾಠ ಮಾಡಿರುತ್ತಾರೆ ಅಲ್ಲದೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಕೂಡ ಮಾಡಿದ್ದಾರೆ ಅಷ್ಟೇ ಅಲ್ಲ ಅವರಿಗೆ ಪರೀಕ್ಷಾ ನಿಯಮಗಳ ಕುರಿತು ಹಾಗೂ ಪರೀಕ್ಷೆಯಲ್ಲಿ ಹೇಗೆ ಬರೆಯಬೇಕು ಎಂಬುದರ ಕುರಿತು ಸಾಕಷ್ಟು ಮಾಹಿತಿಗಳನ್ನು ಕೊಟ್ಟಿರುತ್ತಾರೆ. ಅಲ್ಲದೆ ಜನವರಿ ತಿಂಗಳಿಂದ ಬೆಳಗ್ಗೆ ಪ್ರತಿಯೊಂದು ವಿಷಯದ ಶಿಕ್ಷಕರು ವಿಶೇಷ ಕ್ಲಾಸ ಗಳನ್ನು ಹಾಕಿ ಮಕ್ಕಳಿಗೆ ತರಬೇತಿಗೊಳಿಸಿದ್ದಾರೆ. ಸಾಯಂಕಾಲ ಕೂಡ ವಿಶೇಷ ಕ್ಲಾಸುಗಳನ್ನು ತೆಗೆದುಕೊಂಡು ರಸಪ್ರಶ್ನೆ ಹಾಗೂ ಗುಂಪು ಚರ್ಚೆಗಳನ್ನು ಕೂಡ ಮಾಡಿಸಿರುತ್ತಾರೆ ಹೀಗಾಗಿ ಮಕ್ಕಳು ಭಯ ಪಡುವ ಕಾರಣವಿಲ್ಲ.ಪ್ರತಿ ವಿದ್ಯಾರ್ಥಿಗೂ ಪ್ರತಿಯೊಂದು ವಿಷಯದ ಶಿಕ್ಷಕರು fa1 fa2 fa3 fa4 ಹೀಗೆ ನಾಲ್ಕು ಹಂತಗಳಲ್ಲಿ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸಿರುತ್ತಾರೆ. ಆದರೂ ಪಾಲಕರು ತಮ್ಮ ಮಕ್ಕಳ ಬಗ್ಗೆ ಸದಾ ಕಾಳಜಿ ವಹಿಸಬೇಕು.

ವರ್ಷವಿಡೀ ಓದಿದರೂ ಆತಂಕ ಮಾತ್ರ ಇದ್ದೆಇರುತ್ತದೆ. ಆತಂಕ, ಖಿನ್ನತೆ ದೂರ ಮಾಡಲು ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡುವದು ಒಳ್ಳೆಯದು. ಈಗ ಶಾಲೆಯಲ್ಲಿಯೂ ಇವುಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ನಿಯಮಿತವಾದ ಓದು, ನಿಯಮಿತವಾದ ವ್ಯಾಯಾಮ ಹಾಗೂ ಸ್ವಯಂ ಶಿಸ್ತು ಮಕ್ಕಳನ್ನು ಕಲಿಕೆಯಲ್ಲಿ ಮುಂಚೂಣಿಯಲ್ಲಿರಿಸುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಪ್ರೋಟಿನಯುಕ್ತ ಆಹಾರ ಕೂಡ ಮಕ್ಕಳ ಆರೋಗ್ಯಕ್ಕೆ ಹಿತವಾಗಿರುತ್ತದೆ. ರಾತ್ರಿ ಲಘು ಆಹಾರ ನೀಡುವದರಿಂದ ಓದಲು ಅನುಕೂಲವಾಗುತ್ತದೆ.
ಸುಸ್ತು, ಆಯಾಸ ತಡೆಯುತ್ತದೆ.

ಓದು ಬೇಜಾರಾದಾಗ ಸ್ವಲ್ಪ ಲಘು ಮನರಂಜನೆ ಸಾಕು. ಮತ್ತೆ ಮನಸ್ಸು ಶಾಂತವಾಗಿ ಓದಿನೆಡೆ ಪ್ರೇರಿತವಾಗುತ್ತದೆ. ವಿಷಯಗಳ ಬದಲಾವಣೆಯೇ ವಿಶ್ರಾಂತಿ ಅಂತ ನಮ್ಮ ಗಾಂಧೀ ತಾತ ಹೇಳಿದ್ದಾರೆ. ಸರಳ ವಿಷಯದಿಂದ ಕಠಿಣ ವಿಷಯದೆಡೆಗೆ ಸಾಗಿದರೆ ಬೇಜಾರ ಬರಲ್ಲ. ನಡುವೆ ಟೀ, ಕಾಫಿಗಳು ಬೇಡ. ಓದುವಾಗ ಮನಸ್ಸು ಹಗುರವಾಗಿದ್ದು ಏಕಾಗ್ರತೆ ಇದ್ದರೆ ಸಾಕು. ಓದಿದ್ದೆಲ್ಲ ಮರೆತರೆ ಎಂಬ ಗಿಲ್ಟ ಬೇಡವೆ ಬೇಡ. ಪರೀಕ್ಷೆ ಎಂದರೆ ಒಂದು ಪಿಕನಿಕ್ ಅಂತ ಎದುರಿಸಿ ಹಬ್ಬದಂತೆ ಖುಷಿಪಡಿ. ಆಗ ನೋಡಿ ಆತಂಕವೇ ಇರಲ್ಲ

ಟಿವಿ, ಮೊಬೈಲ ಬಳಕೆ ತುಂಬಾ ಕಡಿಮೆ ಮಾಡಿ. ಮಕ್ಕಳೆ, ಚಿನ್ನದಂತ ಬದುಕಿನ ಚಿಣ್ಣರು ನೀವು ನೆನಪಿರಲಿ. ಖುಷಿ ಜೀವನದ ಹರವನ್ನು ಹೆಚ್ಚಿಸುತ್ತದೆ. ಆತಂಕ ಬದುಕಿನ ಅದಮ್ಯ ಖುಷಿಯನ್ನ ನುಂಗಿಹಾಕುತ್ತದೆ. ಆರಾಮಾಗಿರಿ ಯಾರ ಮಾತಿಗೂ ಭಯಬೀಳದಿರಿ. ಪರೀಕ್ಷಾ ಹಾಲಿನಲಿ ನೀಟಾಗಿ ಕೂತು ಪ್ರಶ್ನೆ ಪತ್ರಿಕೆ ಕೂಲಂಕುಷವಾಗಿ ಮೊದಲು ಓದಿ ನಂತರ ಬರೆಯಲು ಪ್ರಾರಂಬಿಸಿ. ಭಯ ನಿಮ್ಮನ್ನ ನೋಡಿ ಹೆದರಲಿ ವಿನಃ ನೀವೂ ಹೆದರಬೇಡಿ.
ಒಂದು ವರ್ಷ ಓದಿದ ಅಭ್ಯಾಸ ಪರೀಕ್ಷೆಯಲ್ಲಿ ಮೂರು ಗಂಟೆಯಲ್ಲಿ ಬರೆದು ಯಶೋಗಾಥೆ ರೂಪಿಸಬೆಕಿದೆ.ಪರೀಕ್ಷೆಯ ಓದಿಗೆ ನಿಮ್ಮದೆ ನಿರ್ದಿಷ್ಟ ವೇಳಾಪಟ್ಟಿ ಇರಲಿ.ಅದರ ಪ್ರಕಾರ ಓದು ಸಾಗಲಿ. “ಧೈರ್ಯ ವಂ ಸರ್ವತ್ರ ಸಾಧನಂ” ನಿಮ್ಮ ಬೆನ್ನಿಗಿರಲಿ.

ನಾನು ಸರಿಯಾಗಿ ಓದಿಲ್ಲ ಪರೀಕ್ಷೆಯಲಿ ಫೇಲಾದರೆ ಅಂತ ಆತಂಕದಿಂದ ಆತ್ಮಹತ್ಯೆಯಂಥ ಹೀನ ಕಾರ್ಯಕ್ಕೆ ಕೈ ಹಾಕಬೇಡಿ.ಆತ್ಮಸ್ಥೈರ್ಯ ಇರಲಿ. ನೀವೇ ಧೈರ್ಯ ಕಳಕೊಂಡರೆ ಪಾಲಕರ ಗತಿಯೇನು? ಅವರ ಹೆತ್ತೊಡಲ ಸ್ಥಿತಿಯೇನು? ಪರೀಕ್ಷೆಯಲಿ ಫೇಲಾದರೆ ಮತ್ತೇ ಬರೆದು ಪಾಸಾಗಬಹುದು. ಜೀವವನ್ನೆ ಕಳೆದುಕೊಂಡರೆ ಮರಳಿ ತರಬಹುದೇ? ಇಲ್ಲ ತಾನೆ. ಹಾಗಾದರೆ ಸದೃಡ ಮನಸ್ಸನ್ನು ಹೊಂದಿ ಸದೃಡವಾಗಿರಿ. ಹೆತ್ತವರಿಗೆ ಅಮೂಲ್ಯ ಆಸ್ತಿ ನೀವು. ನೀವೇ ಹೀಗೆ ಬದುಕಿಗೆ ವಿಮುಖರಾದರೆ ಹೇಗೆ. ಬದುಕು ದೇವರು ಕೊಟ್ಟ ಕಾಣಿಕೆ. ಅದನ್ನು ಸುಂದರವಾಗಿಸಿಕೊಳ್ಳಿ ಸಫಲವಾಗಿಸಿಕೊಳ್ಳಿ ಅದು ನಿಮ್ಮ ಕೈಲಿದೆ. ಜೊತೆಗೆ ಹೆತ್ತವರ ಮಾರ್ಗದರ್ಶನ ಇದ್ದೆ ಇರುತ್ತೆ. ಸದಾ ಬೆಂಗಾವಲಾಗಿರ್ತಾರೆ. ಇಂಥ ಅಮೂಲ್ಯ ಜೀವನ ಬದುಕಿರಿ. ನಿಮ್ಮನ್ನ ನಂಬಿದವರಿಗೆ ಬೆಳಕಾಗಿರಿ. ಜೀವನದ ಯಶಸ್ಸಿನ ಏಣಿ ಏರಿರಿ. ಮತ್ತೊಬ್ಬರಿಗೆ ಮಾದರಿಯಾಗಿರಿ. ಪರೀಕ್ಷೆಯನ್ನ ಚೆನ್ನಾಗಿ ಬರಿತಿರಲ್ಲವಾ.ಶುಭವಾಗಲಿ ಮಕ್ಕಳೆ..

ಜಯಶ್ರೀ ಭ. ಭಂಡಾರಿ.
ಬಾದಾಮಿ.

 

Don`t copy text!