ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ
-ಬಸವಣ್ಣನವರು
ದೇವರನ್ನು ಮೂರ್ತಿ ರೂಪದಲ್ಲಿ ಪೂಜಿಸುವ ಆಚರಣೆಯ ಕುರಿತು ವಿಡಂಬನೆಯನ್ನು ಈ ವಚನದಲ್ಲಿ ಬಸವಣ್ಣನವರು ಮಾಡಿದ್ದಾರೆ.
ಅರಗು ತಿಂದು ಕರಗುವ ದೈವವ ನೆಂತು ಸರಿ ಎಂಬೆನಯ್ಯ
ಇಷ್ಟ ದೈವವನ್ನು ಮೂರ್ತಿ ರೂಪದಲ್ಲಿ ಪೂಜಿಸುವುದು ಭಕ್ತಿಯ ಸ್ವರೂಪ ಎಂದು ತಿಳಿದಿರುವವರಿಗೆ ಬಸವಣ್ಣನವರು ತಿಳಿ ಹೇಳಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಾರೆ. ದೇವರ ಮೂರ್ತಿಗಳನ್ನ ಮಾಡುವಾಗ , ಲೋಹದ ತೆಳುವಾದ ತಗಡಿನ ಹೊದಿಕೆಯನ್ನು ಮಾಡಿ ಒಳಗೆ ಅರಗನ್ನ ತುಂಬಿ ಮೂರ್ತಿಯನ್ನು ಮಾಡುತ್ತಾರೆ. ದಿನಗಳೆದಂತೆ ಅರಗಿನ ಮೇಲಿನ ಲೋಹದ ಹೋದಿಕೆ ಉದುರಿ ಹೋಗುತ್ತದೆ. ಅಂಥಹ ಅರಗಿನ ಮೂರ್ತಿಯನ್ನು ದೈವವೆಂದು ನಂಬಿ ಭಕ್ತಿ ಭಾವವಾದಿಂದ ಪೂಜಿಸುವುದು ಎಷ್ಟು ಸರಿ.ಅಂತಹ ದೈವವನ್ನು ತಾನು ಒಪ್ಪುವುದಿಲ್ಲ ಎನ್ನುವ ಅಭಿಪ್ರಾಯ ಹೇಳುತ್ತಾರೆ.
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಕೆಲವು ದೇವರ ಮೂರ್ತಿಗಳನ್ನು ಕಾಷ್ಟ/ಕಟ್ಟಿಗೆಯಿಂದ ಮಾಡಲಾಗುತ್ತದೆ.
ಅಂಥಹ ದೇವರ ಮೂರ್ತಿಗಳಿಗೆ ಯಾವಾಗಲೂ ಬೆಂಕಿಯ ಭಯ ಕಾಡುತ್ತಿದೆ. ಬೆಂಕಿ ಸೋಕಿದರೆ ಆ ಮೂರ್ತಿಗಳೆಲ್ಲ ಮುರುಟಿ ತನ್ನ ಅಸ್ತಿತ್ವ ಕಳೆದುಕೊಂಡು. ವಿಕಾರವಾಗುತ್ತವೆ.ಇಲ್ಲವೆ ಬೂದಿಯಾಗುತ್ತವೆ. ಅಂಥಹ ಕಟ್ಟಿಗೆಯ ಮೂರ್ತಿಯಲ್ಲಿ ದೇವರನ್ನ ಕಾಣುವ , ಭಕ್ತಿ ಭಾವದಿಂದ ಪೂಜಿಸುವ ಕ್ರಮವನ್ನ ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ದೇವರ ಮೂರ್ತಿಗಳನ್ನು ಅರಗು ಕಟ್ಟಿಗೆ ಮಾತ್ರವಲ್ಲದೆ, ಬಂಗಾರ, ಬೆಳ್ಳಿ, ಕಂಚು, ತಾಮ್ರ ,ಹಿತ್ತಾಳೆ ಮುಂತಾದ ಬೆಲೆಬಾಳುವ ಲೋಹಗಳಲ್ಲಿಯೂ ಕೂಡ ದೇವರ ಮೂರ್ತಿಗಳನ್ನ ಮಾಡಿ ಪೂಜಿಸುತ್ತಾರೆ. ಆದರೆ ತಮಗೆ ಕಷ್ಟಕಾರ್ಪಣ್ಯಗಳು ಒದಗಿ ಬಂದಾಗ ಆ ದೇವರ ಮೂರ್ತಿಗಳನ್ನ ಮಾರಿ ತಮ್ಮ ಕಷ್ಟಗಳನ್ನ ಪರಿಹರಿಸುಕೊಳ್ಳುತ್ತಾರೆ. ಅಂತಹ ದೇವರನ್ನ ಪೂಜಿಸುವ ಭಕ್ತಿಯನ್ನ ಸರಿ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಬಸವಣ್ಣನವರು ಹೇಳಿದ್ದಾರೆ.
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಬೆಲೆಬಾಳುವ ಲೋಹಗಳಿಂದ ಮಾಡಿದ ದೇವರ ವಿಗ್ರಹಗಳಿಗೆ ಯಾವಾಗಲೂ ಕಳ್ಳ ಕಾಕರ ಭಯವಿರುತ್ತದೆ. ಅಂತಹ ಮೂರ್ತಿಗಳನ್ನು ಪೂಜಿಸುವ ಭಕ್ತನ ಕಳ್ಳ ಕಾಕರ ಭಯಕ್ಕೆ ಒಳಗಾದಾಗ ಅದನ್ನು ನೆಲದಲ್ಲಿ ಕೂತು ಜೋಪಾನವಾಗಿಡಲು ಪ್ರಯತ್ನಿಸುತ್ತಾನೆ. ಅಂತ ಮೂರ್ತಿ ಪೂಜೆಯನ್ನು ಹೇಗೆ ಸರಿ ಎನ್ನುವುದು ಬಸವಣ್ಣನವರ ಪ್ರಶ್ನೆ.
ಸಾಮಾನ್ಯರು ದೇವರನ್ನು ಲೋಹದ ತಗಡಿನೊಳಗೆ ಅರಗು ತುಂಬಿ ಪೂಜಿಸಿದರೆ,ಕೆಳವರ್ಗದ ಜನ ಕಟ್ಟಿಗೆಗಳ ಮೂರ್ತಿಯನ್ನು ಮಾಡಿ ಪೂಜಿಸುತ್ತಾರೆ. ಮೇಲ್ವರ್ಗದ ಜನ ಬೆಲೆಬಾಳುವ ಲೋಹಗಳಲ್ಲಿ ಮೂರ್ತಿಗಳನ್ನ ಮಾಡಿ ಪೂಜಿಸುತ್ತಾರೆ.
ಇಲ್ಲಿ ಮೂರ್ತಿ ಪೂಜೆಯೂ ಕೂಡ
ವರ್ಗಭೇದ, ಸಾಮಾಜಿಕ ಸ್ಥರ ವಿನ್ಯಾಸವನ್ನು ಅವಲಂಬಿಸಿರುತ್ತದೆ
ಎನ್ನುವ ಸೂಕ್ಷ್ಮತೆಯನ್ನು ಕಾಣಬಹುದು.
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ
ಹೀಗೆ ಮೂರ್ತಿ ಪೂಜೆಯ ಕುರಿತು ವೈಚಾರಿಕವಾಗಿ ಪ್ರಶ್ನಿಸುತ್ತಾ ಆ ರೀತಿಯ ಆಚರಣೆಗಳನ್ನು ಮಾಡುವವರಿಗೆ ಚಿಂತನೆಗೆ ಹಚ್ಚುತ್ತಾರೆ. ಭಕ್ತನಾದವನು ಪ್ರಾಥಮಿಕ ಹಂತದಲ್ಲಿ ಭಗವಂತನನ್ನು ಮೂರ್ತಿ ರೂಪದಲ್ಲಿ ಒಂದು ಕುರುಹುವಾಗಿ ಇಟ್ಟುಕೊಂಡು, ತಾನು ಬೇರೆ ಭಗವಂತನೆ ಬೇರೆ ಎನ್ನುವ ಭಾವದಲ್ಲಿ ಪೂಜಿಸಬೇಕು. ಭಕ್ತನಾದವನು ಆಡಂಬರದ ಪೂಜೆಗಳನ್ನು ಮಾಡುತ್ತಾ ಅಲ್ಲಿಯೇ ಉಳಿಯದೆ ಮುಂದಿನ ಹಂತಕ್ಕೆ ಸಾಗಬೇಕು. ಆಧ್ಯಾತ್ಮಿಕ ಸಾಧನೆಯ ಹಂತಗಳನ್ನು ಏರುತ್ತಾ ಸಾಗಬೇಕು.
ದ್ವಿತೀಯ ಹಂತದಲ್ಲಿ ಭಗವಂತ ತನ್ನ ಜೊತೆಗಾರ, ಸಖ ಎನ್ನುವ ಭಾವದಲ್ಲಿ ಪೂಜಿಸಬೇಕು.ಭಗವಂತನ ನಿಜ ಸ್ವರೂಪವನ್ನು ಅರಿಯಲು ಪ್ರಯತ್ನಿಸಬೇಕು. ತನ್ನನ್ನು ತಾನು ಅರಿಯಬೇಕು. ಭಕ್ತನಾದವನು ಇನ್ನೊಂದು ಮೆಟ್ಟಿಲು ಮೇಲೇರಿ ಭಗವಂತ ನನ್ನಲ್ಲಿಯೇ ಇರುವನು ಎನ್ನುವುದನ್ನು ಕಂಡು ಕೊಳ್ಳಬೇಕು ಅದೇ ನಿಜೈಕ್ಯ ಭಾವ. ಆತ್ಮ ಸಾಕ್ಷಾತ್ಕಾರ.
ಮೂರ್ತಿ ರೂಪ ಕುರುಹು, ಪೂಜಾ ಸಲಕರಣೆ, ವ್ರತ ನಿಯಮಗಳಿಗೆ ಅನುಸಾರವಾಗಿ ಪೂಜಿಸುವ ಬಾಹ್ಯ ಪೂಜೆ ಯು ಅವಶ್ಯಕತೆ ಇಲ್ಲ.
ಸಹಜವಾದ ನಿಜ ಭಾವದಲ್ಲಿ ಪೂಜಿಸಿದ್ದೇ ಆದರೆ ಅದೇ ಭಾವ ಪೂಜೆ. ಕೂಡಲಸಂಗಮದೇವನೊಬ್ಬನೆ ದೇವ
ಅಂದರೆ ಮುಕ್ಕೋಟಿ ದೇವತೆಗಳನ್ನು ಪೂಜಿಸುವ ಅವಶ್ಯಕತೆ ಇಲ್ಲ. ಅದರಲ್ಲಿಯೂ ಗಂಡು ದೇವರು ಹೆಣ್ಣು ದೇವರು ಎನ್ನುವ ಭೇದವು ಇಲ್ಲ. ನಿಜೈಕ್ಯನಾದ ಶರಣನಿಗೆ ಭಗವಂತನಲ್ಲಿ ಜಾತಿ ಭೇದ, ಲಿಂಗ ಭೇದ ಕಾಣದು. ಕೂಡಲಸಂಗಮದೇವನೊಬ್ಬನೇ ದೇವ ಎಂದು ಹೇಳುತ್ತಾರೆ ಅಂದರೆ ಶರಣನಾದವನು ಕಲ್ಲು ಕಟ್ಟಿಗೆ ಮಣ್ಣು ಅರಗು ಲೋಹಗಳಿಂದ ಮಾಡಿದ ಮೂರ್ತಿಗಳನ್ನು ಪೂಜೆಯನ್ನು ತೊರೆದು , ಯಾರನ್ನ ಪೂಜಿಸಬೇಕು ಎಂದರೆ ಕೂಡಲಸಂಗಮದೇವನನ್ನ ಮಾತ್ರ ಪೂಜಿಸಬೇಕು ಅವನು ಭಕ್ತನ ಮನೋ ಮಂದಿರದಲ್ಲಿ ಅವನು ಒಟ್ಟಿಗೆ ಸಮ್ಮೇಳಿತನಾಗಿರುವನು. ಅವನೇ ಭಕ್ತನ ನಿಜ ದೈವ ಎಂದು ಹೇಳುತ್ತಾರೆ.