ಶುಭ ಕೋರು ಜನ್ಮದಿನಕೆ

ಇಂದೆನಗೆ ಜನುಮದಿನ
ನೆನೆಯುವೆ ನನ್ನವ್ವ ಅನುದಿನ

ಜನ್ಮ ಕೊಟ್ಟು ಮರೆಯಾದೆ
ದೂರ ಹೋದೆ ಸಾವು ನೋಡದೆ
ಬಿದ್ದಾಗ,ಅತ್ತಾಗ ಓಡೋಡಿ ಬಂದೆ
ಈಗೇಕೆ ಮೌನವಾದೆ?

ಹಾದಿ-ಬೀದಿಯ ನಾಯಿಯಂತೆ
ಎದೆಗವಚಿ ಹಾರುವ ಕೋತಿಯಂತೆ
ಮರಿ ಕಾಯುವ ಘಟ ಸರ್ಪದಂತೆ
ಸಲುಹಿದೆ, ತಾಯಿ ದೇವತೆಯಂತೆ

ಒಗ್ಗಟ್ಟಿನ ಮಂತ್ರ ಕಾಗೆ ಬಳಗದಂತೆ
ಕಾಯಕ ತತ್ಪರತೆ ಕತ್ತೆಯಂತೆ
ದಾಸೋಹ ಕಲಿಸಿದೆ ಆಮೆಯಂತೆ
ಬದುಕಿಗೆ ಬಣ್ಣ ಕೊಟ್ಟೆ ನವಿಲಿನಂತೆ

ತ್ಯಾಗಮಯಿ ನೀ ಚೇಳಿನಂತೆ
ರಕ್ಷಣೆಗೆ ನಿಂತರೆ ಸಿಂಹಿಣಿಯಂತೆ
ಪ್ರೀತಿಗೆ ಬನದ ಕರಡಿಯಂತೆ
ತುತ್ತು ಕೊಟ್ಟೆ ತಿಪ್ಪೆಯ ಕುಕ್ಕುಟದಂತೆ

ನೊಂದು ಮಲಗಿದೆ ಮೃದ್ವಂಗಿಯಂತೆ
ಕಷ್ಟ ಎದುರಿಸಿದೆ ಸರಿಸೃಪದಂತೆ
ಹೊತ್ತುತಂದೆ ಅನ್ನವ ಇರುವೆಯಂತೆ
ಜೀವನ ಕೊಟ್ಟೆ ಸಿಹಿ ಜೇನಿನಂತೆ

ಕನಿಷ್ಠದಲಿ ಉತ್ಕೃಷ್ಟ ತೋರಿದಾಕೆ
ಕಹಿಯುಂಡು ಸಿಹಿ ನೀಡಿದಾಕೆ
ಉಸಿರು ಕೊಟ್ಟು ಉಸಿರು ಬಿಟ್ಟಾಕೆ
ಸಹಿಸಲಾರೆ ತಾಯಿ ನಿನ್ನ ಅಗಲಿಕೆ

ರವೀಂದ್ರ. ಆರ್. ಪಟ್ಟಣ.
ಮುಳಗುಂದ–ರಾಮದುರ್ಗ

Don`t copy text!