ಅಂತರಂಗದ ಅರಿವು ೧೨
ಜ್ಞಾನದ ಬಲದಿಂದ ಅಜ್ಞಾನದ ಕೇಡು
ಜ್ಞಾನದ ಬಲದಿಂದ ಅಜ್ಞಾನದ
ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
– ಬಸವಣ್ಣನವರು
ನಾವು ಎಂಥವರ ಸಹವಾಸ ಮಾಡಬೇಕೆಂದರೆ ಅವರಲ್ಲಿರುವ ಒಳ್ಳೆಯತನ, ಧನಾತ್ಮಕ ಶಕ್ತಿಯಾಗಿ ನಮ್ಮ ಮೇಲೆ ಪ್ರಭಾವವನ್ನು ಬೀರಬೇಕು. ಅದರಿಂದ ನಮ್ಮ ಒಳಗಿರುವ ದೌರ್ಬಲ್ಯ ಕಡಿಮೆಯಾಗಬೇಕು.ನಮಗೆ ಒಳಿತಾಗಬೇಕು.ತಮ್ಮೊಂದಿಗೆ ಧನಾತ್ಮಕ ಶಕ್ತಿಯನ್ನು ಪಸರಿಸುವವರ ಸಂಗದಲ್ಲಿರಬೇಕು. ಅಂತ ಶಕ್ತಿ ಇರುವುದು ನಡೆ-ನುಡಿ ಒಂದಾದ ಶರಣರಲ್ಲಿ ಮಾತ್ರ.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ವ್ಯಕ್ತಿ ತನ್ನಲ್ಲಿರುವ ಜ್ಞಾನದ ಸಹಾಯದಿಂದ ತನ್ನ ಸುತ್ತಲಿರುವ ಅಂಧಕಾರವನ್ನು ಓಡಿಸಲು ಸಾಧ್ಯ.
ಜ್ಞಾನವು ಹಲವಾರು ಸಂದರ್ಭಗಳಲ್ಲಿ ಮನುಷ್ಯನಿಗೆ ಅಸ್ತ್ರವಾಗಿ , ಶಕ್ತಿಯಾಗಿ ಸಹಾಯವನ್ನು ಮಾಡುತ್ತದೆ. ಒಬ್ಬ ಜ್ಞಾನಿ ಒಂದು ಸಮುದಾಯದ ಆಲೋಚನಾ ಶಕ್ತಿಯನ್ನು ಹೆಚ್ಚಿಸಬಲ್ಲ ಮತ್ತು ಆಲೋಚನಾ ಕ್ರಮವನ್ನು ಬದಲಿಸಬಲ್ಲ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ನಮ್ಮ ಸುತ್ತಲೂ ಆವರಿಸಿರುವ ಎಂತದ್ದೇ ಗಾಢಾಂಧಕಾರವನ್ನು ಒಂದು ಪುಟ್ಟ ಜ್ಯೋತಿಯ ಸಹಾಯದಿಂದ ಓಡಿಸಬಹುದು. ಆ ಅಂಧಕಾರವನ್ನು ಓಡಿಸುವ ಶಕ್ತಿ, ಸಾಮರ್ಥ್ಯ ಜ್ಯೋತಿಗಿದೆ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಸುಳ್ಳು ಎಷ್ಟೇ ವೇಷಹಾಕಿ ವಿಜ್ರಂಭಿಸಿದರು ಅದು
ಸುಳ್ಳಿನ ತಾತ್ಕಾಲಿಕ ವಿಜಯವಾಗಿರುತ್ತದೆ. ಸತ್ಯದ ಮುಂದೆ ತನ್ನ ಅವನತಿಯನ್ನು ಕಾಣುತ್ತದೆ ಸತ್ಯ ಬೆಳಕಿಗೆ ಬಂದಾಗ ಸುಳ್ಳಿಗೆ ಅಂತ್ಯವಾಗುತ್ತದೆ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಪರುಷ ಅಪರೂಪದ ಮಣಿ ತನ್ನನ್ನ ಸೋಕಿದ ಎಂತಹದ್ದೇ ಲೋಹವನ್ನು ಚಿನ್ನ ವಾಗಿಸುವ ಸಾಮರ್ಥ್ಯ ಅದಕ್ಕಿದೆ. ಪರುಷದ ಸ್ಪರ್ಶದಿಂದ ಕೆಟ್ಟ ಲೋಹವು ಕೂಡ ಒಳ್ಳೆಯ ಲೋಹವಾಗಿ ಪರಿವರ್ತನೆ ಹೊಂದುತ್ತದೆ. ಆ ಸಾಮರ್ಥ್ಯ ಪರುಷ ಮಣಿಯ ಸ್ಪರ್ಶಕ್ಕೆ ಇದೆ.
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
ಶರಣರ ಅನುಭಾವಕ್ಕೆ ಎಂತಹ ಶಕ್ತಿ ಇದೆ ಎಂದರೆ ಅವರ ಸಂಪರ್ಕಕ್ಕೆ ಬಂದರೆ ಎನ್ನ ಪ್ರಾಪಂಚಿಕ ತೊಂದರೆಗಳು, ಕಷ್ಟಗಳು ದೂರವಾಗುತ್ತವೆ.ಅಂತಹ ಶಕ್ತಿ ಕೂಡಲ ಸಂಗನ ಶರಣರಿಗಿದೆ.ಶರಣರ ಅನುಭಾವದಲ್ಲಿ ಜ್ಞಾನವಿದೆ, ಬೆಳಕಿದೆ, ಪರಿವರ್ತಿಸುವ ಶಕ್ತಿ ಇದೆ ಎಂದು ಬಸವಣ್ಣನವರು ಹೇಳಿದ್ದಾರೆ.
–ಡಾ. ನಿರ್ಮಲ ಬಟ್ಟಲ