ಅಖಂಡ ಜ್ಞಾನಿ ಷಣ್ಮುಖ ಶಿವಯೋಗಿಗಳು….
ಕಲ್ಬುರ್ಗಿ ಜಿಲ್ಲೆಯದು ಪುಣ್ಯವೇ ಇರಬಹುದು. ಅದು ಆದ್ಯ ವಚನಕಾರರನ್ನು ತಾನೇ ಕೊಟ್ಟಂತೆ ಕೊನೆಯ ವಚನಕಾರನಿಗೂ ತಾನೇ ಜನ್ಮ ನೀಡಿದೆ. ಕಾಲಗರ್ಭದಲ್ಲಿ ಎಂತೆಂತಹ ಮುತ್ತುಗಳು ಅವಿತು ಕುಂತಿವೆಯೋ ಏನೋ , ಕೊನೆಯ ವಚನಕಾರ ಎಂದು ಹೇಳುವುದು ಈಗಲೇ ದಾರ್ಷ್ಟ್ಯದ ಮಾತೆನಿಸಬಹುದಾದರೂ ಷಣ್ಮುಖ ಶಿವಯೋಗಿಗಳ ಜ್ಞಾನದೆತ್ತರಕ್ಕೆ, ತ್ಯಾಗದೆತ್ತರಕ್ಕೆ, ಯೋಗದೆತ್ತರಕ್ಕೆ ಏರುವ ವಚನಕಾರರು ಮುಂದಿನ ದಿನಗಳಲ್ಲಿ ಹುಟ್ಟುತ್ತಾರೆಯೆಂಬುದಕ್ಕೆ ನಂಬುಗೆ ತತ್ತರಿಸುತ್ತದೆ.
ಲಿಂಗವನ್ನು ನೆನೆ ನೆನೆದು ಲಿಂಗವೇ ತಾನಾದಂತೆ , ಗುರುವನ್ನೇ ನೆನೆನೆನೆದು ಗುರುವೇ ತಾನಾದಂತೆ ಬಸವಾ ಬಸವಾ ಎಂದು ಅನುದಿನ ಬಸವಣ್ಣನವರನ್ನು ನೆನೆ ನೆನೆದು ವಚನ ರಚನೆಯಲ್ಲಿ ಮಾತ್ರ ಪ್ರತಿ ಬಸವಣ್ಣನಾದವರು ಷಣ್ಮುಖ ಶಿವಯೋಗಿಗಳು.
ಅವರ ವಚನದ ಶಿಲ್ಪ, ಸ್ವರೂಪ, ಶೈಲಿ, ತಂತ್ರ , ಶಬ್ದಾಲಂಕಾರ, ಅರ್ಥಾಲಂಕಾರಗಳೆಲ್ಲವೂ ನಮ್ಮನ್ನು ಹನ್ನೆರಡನೆಯ ಶತಮಾನಕ್ಕೆ ಕೊಂಡೊಯ್ಯುತ್ತವೆ. ಷಣ್ಮುಖ ಶಿವಯೋಗಿಗಳು ತಾವೇ ಹೇಳಿಕೊಂಡಂತೆ…..
” ಬಸವನ ನಾಮವು ಕಾಮಧೇನು ಕಾಣಿರೋ,
ಬಸವನ ನಾಮವು ಕಲ್ಪವೃಕ್ಷ ಕಾಣಿರೋ
ಬಸವನ ನಾಮವು ಚಿಂತಾಮಣಿ ಕಾಣಿರೋ,
ಬಸವನ ನಾಮವು ಪರುಷದ ಖಣಿ ಕಾಣಿರೋ
ಬಸವನ ನಾಮವು ಸಂಜೀವಿನಿ ಮೂಲಿಕೆ ಕಾಣಿರೋ “
ಇಂತಪ್ಪ ಬಸವ ನಾಮಾಮೃತವನ್ನು ತಮ್ಮ ಸರ್ವಾಂಗದ ರೋಮ ಕುಳಿಗಳಲ್ಲೆಲ್ಲ ತುಂಬಿಕೊಂಡು ಬಸವಾ , ಬಸವಾ ಎಂದು ಭವಸಾಗರವ ದಾಟಿದ ಷಣ್ಮುಖ ಶಿವಯೋಗಿಗಳಿಗಲ್ಲದೆ ಮತ್ತಾರಿಗೆ ಆ ವಚನ
ರಚನಾರುಚಿ ಸಿಧ್ದಿಸೀತು ?
ಷಣ್ಮುಖ ಶಿವಯೋಗಿಗಳು ಹುಟ್ಟಿದುದು ಇಂದಿನ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ. ತಂದೆ ಮಲಶೆಟ್ಟಿ, ತಾಯಿ ದೊಡ್ಡಮಾಂಬೆ. ಈ ದಂಪತಿಗಳಿಗೆ ಬಹಳ ದಿವಸ ಮಕ್ಕಳಾಗದಿರಲು ಊರಿನ ಅಖಂಡೇಶ್ವರ ಗುರುಗಳಿಗೆ ಶರಣು ಹೋಗಿ ಬಂಜೆಯೆಂಬ ಶಬ್ದ ಅಳಿಸಿದರೆ , ಹುಟ್ಟಿದ ಮಗುವನ್ನು ಮಠಕ್ಕೆ ಒಪ್ಪಿಸುವುದಾಗಿ ಹರಕೆ ಹೊತ್ತರು.
ಬೆಳಗಾವಿ ಜಿಲ್ಲೆಯ ಯಾವುದೋ ಊರಿನವರಾದ ಅಖಂಡೇಶ್ವರ ಗುರುಗಳು ಬಸವಕಲ್ಯಾಣಕ್ಕೆ ಹೊರಟವರು ಜೇವರ್ಗಿ
ಜನರ ಭಕ್ತಿಗೆ ಮಾರು ಹೋಗಿ ಜೇವರ್ಗಿಯಲ್ಲೇ ನೆಲೆ ನಿಂತರು. ಅವರ ಮಠ ಕ್ರಿ. ಶ . 1631 ರಲ್ಲಿ ಕಟ್ಟಲ್ಪಟ್ಟರೆ ಕ್ರಿ. ಶ. 1639ರಲ್ಲಿ ಷಣ್ಮುಖ ಶಿವಯೋಗಿಗಳು ಜನಿಸಿದರು. ಅಖಂಡೇಶ್ವರರ ಸಂಪೂರ್ಣಾನುಗ್ರಹ ಷಣ್ಮುಖ ಶಿವಯೋಗಿಗಳಿಗೆ ಲಭಿಸಿತು. ದೀಕ್ಷಾ ಗುರುಗಳೂ ಮೋಕ್ಷಾ ಗುರುಗಳೂ ಅವರೇ ಆದರು.
ಷಣ್ಮುಖ ಶಿವಯೋಗಿಗಳು ಬಾಲ್ಯದಿಂದಲೇ ನಿವೃತ್ತಿ ಮಾರ್ಗದಲ್ಲಿದ್ದರು. ಭಕ್ತಿ , ಜ್ಞಾನ, ವೈರಾಗ್ಯಗಳೇ ಅವರ ತ್ರಿವಿಧ ಧ್ಯೇಯಗಳಾದವು. ಗುರುವ ಹಿಡಿದು ಕುರುಹನ್ನು ಕಂಡರು ಕುರುಹಿನಿಂದ ಅರುಹನ್ನು ಕಂಡರು , ಅರುಹಿನಿಂದ ಆಚಾರವ ಕಂಡರು., ಆಚಾರ ದಿಂದ ನಿಜವ ಕಂಡರು. ನಿಜದಿಂದ ಅಖಂಡೇಶ್ವರನ ಕೂಡಿದರು. ಕೂಡಿದರಷ್ಟೇ ಅಲ್ಲ ಅಖಂಡೇಶ್ವರರೇ ತಾವಾದರು. ಅಂತೆಯೇ ತಮ್ಮ ವಚನಾಂಕಿತವಾಗಿ ” ಅಖಂಡೇಶ್ವರಾ “ ಎಂಬ ನಾಮವನ್ನು ಇಟ್ಟುಕೊಂಡರು. ಅಖಂಡೇಶ್ವರ ವಚನಗಳ ಒಂದು ವೈಶಿಷ್ಟ್ಯವೆಂದರೆ ಅವು ಬಸವಣ್ಣನವರ ಷಟಸ್ಥಲ
ವಚನಗಳು ಪ್ರಕಟವಾಗುವ ಪೂರ್ವದಲ್ಲಿಯೇ ಪ್ರಕಟವಾಗಿ ಜನರ ಕೈ ಸೇರಿದ್ದವು. ಲಿಂಗಾಯತ ಧರ್ಮದ ಧರ್ಮ ಗ್ರಂಥವೆಂದರೆ ಅಖಂಡೇಶ್ವರ ವಚನಗಳು ಎಂಬಷ್ಟು ಅವು ಜನಪ್ರಿಯವಾಗಿದ್ದವು.
ಎಲ್ಲ ಹದಿನಾಲ್ಕು ಸ್ಥಲಕಟ್ಟುಗಳಿಗೆ ಅನುಗುಣವಾಗಿ ವಚನಕಾರರೇ ವಚನಗಳನ್ನು ವಿಂಗಡಿಸಿದ್ದರಿಂದ ಅವು ” ಶಿವಾನುಭವ ಸಿದ್ಧಾಂತ ” ಎಂದು ಕರೆಸಿಕೊಂಡವು.
ಷಣ್ಮುಖ ಶಿವಯೋಗಿಗಳು ಗುರುಕರಕಂಜ ಸಂಜಾತರಾಗಿ ಒಂದು ರಾತ್ರೋರಾತ್ರಿ ಅಖಂಡ ಜ್ಞಾನಿ ಗಳಾಗಲಿಲ್ಲ. ಗುರುವಿನ ಅಡಿಯಲ್ಲಿ ಸರ್ವವನ್ನು ಸಮರ್ಪಿಸಿಕೊಂಡು ವೇದಾಗಮ ಶಾಸ್ತ್ರಗಳ ಅಧ್ಯಯನ ಮಾಡಿದರು. ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನಲ್ಲದೆ , ತೋಂಟದ ಸಿದ್ಧಲಿಂಗಯತಿಗಳು ಮತ್ತು ಅವರ ಶಿಷ್ಯರ ವಚನಗಳನ್ನೂ ಪಠಣ ಮಾಡಿದರು. ಅಷ್ಟೇ ಅಲ್ಲ ಗುರೂಪದೇಶದಂತೆ ದೇಶದ ಜಾಗೃತ ಸ್ಥಳಗಳ ಸಂದರ್ಶನ ಮಾಡಿ ಶಿವಾನುಭವವನ್ನು ವಿಸ್ತರಿಸಿಕೊಂಡರು. ಕೊನೆಯಲ್ಲಿ ಜೇವರ್ಗಿ ಸಮೀಪದಲ್ಲಿಯೇ ಇರುವ ಜೋಗಿ ಕೊಳ್ಳ
ದಲ್ಲಿ ಯೋಗ ಸಾಧನೆ ಮಾಡಿದರು. ಅಲ್ಲಿಯೇ ಅವರಿಗೆ ಭಗವದ್ ಸಾಕ್ಷಾತ್ಕಾರವಾಯಿತು. ಆ ದಿನದ ನಿರೀಕ್ಷೆಯಲ್ಲಿಯೇ ಇದ್ದರೆಂಬಂತೆ ಕ್ರಿ. ಶ. 1659 ರಲ್ಲಿ ಅಖಂಡೇಶ್ವರರು ಷಣ್ಮುಖ ಶಿವಯೋಗಿಗಳಿಗೆ ಉತ್ತರಾಧಿಕಾರವನ್ನು ನೀಡಿ ಅದೇ ವರ್ಷ ತಾವು ಲಿಂಗದೊಳಗಾದರು.
ಷಣ್ಮುಖ ಶಿವಯೋಗಿಗಳು ಪೀಠದ ಅಧಿಕಾರವನ್ನು ಸುಖದ ಸುಪ್ಪತ್ತಿಗೆಯಾಗಿ ತೆಗೆದುಕೊಳ್ಳಲಿಲ್ಲ. ಸರ್ವರಿಗೆ
ಸಮಬಾಳು , ಸರ್ವರಿಗೆ ಸಮಪಾಲು ಇರುವ ಕಲ್ಯಾಣ ಸಂಸ್ಕೃತಿಯನ್ನು ಜೇವರ್ಗಿಯಲ್ಲಿ ಮೈಗೂಡಿಸಲು ಪ್ರಯತ್ನಿಸಿದರು. ಅಸ್ಪೃಶ್ಯತೆ ನಿವಾರಣೆ ಅವರ ಮೊದಲ ಆದ್ಯತೆಯಾಗಿತ್ತು. ಕುಲ -ಜಾತಿ – ಮತ- ಪಂಥಗಳಲ್ಲಿ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದರು. ಸುರಪುರದ ಬೇಡ ಜನಾಂಗದ ದೊರೆಗಳು ರಾಜ ಗುರುಗಳ ಮನ್ನಣೆ ನೀಡಿದಾಗ ಅದನ್ನು ಸಂತೋಷದಿಂದ ಸ್ವೀಕರಿಸಿ ಅವರನ್ನು ಆಶೀರ್ವದಿಸಿದರು.
ಷಣ್ಮುಖ ಶಿವಯೋಗಿಗಳ ಧರ್ಮಬೋಧೆ ಪರಿಣಾಮ ಕಾರಿಯಾಗಿರುತ್ತಿತ್ತು. ಅವರು ಹೇಳುವುದನ್ನು ನೇರವಾಗಿಯೂ ದೃಷ್ಟಾಂತಗಳ ಮೂಲಕವಾಗಿಯೂ ಹೇಳುತ್ತಿದ್ದುದರಿಂದ ಜನರಿಗೆ ಒಪ್ಪಿಕೊಳ್ಳದೆ ಗತ್ಯಂತರವೇ ಇರುತ್ತಿರಲಿಲ್ಲ. ಅವರ ಬೋಧನೆಯ ರೀತಿಯೆಂದರೆ ….
ಕಾಲನೆಂಬ ಜಾಲಗಾರನು, ಕರ್ಮವೆಂಬ ಬಲೆಯ ಬೀಸಿ, ಸಂಸಾರ ಶರಧಿಯಲ್ಲಿಪ್ಪ
ಸಕಲ ಪ್ರಾಣಿಗಳೆಂಬ ಮೀನುಗಳನ್ನು ಹಿಡಿದು ಹಿಡಿದು ಕೊಲ್ಲುತ್ತಿದ್ದಾನೆ.
ಕಾಮನೆಂಬ ಬೇಟೆಗಾರನು ಕಂಗಳ ಕೋಡಿನಲ್ಲಿ ನಿಂದು, ಕಳವಳದ ಬಾಣವೆಸೆದು
ಭವವೆಂಬ ಅರಣ್ಯದಲ್ಲಿ ಕೆಡಹಿ ಕೊಲ್ಲುತ್ತಿದ್ದಾನೆ
ಮಾಯೆಯೆಂಬ ರಕ್ಕಸಿ, ಸಕಲ ಪ್ರಾಣಿಗಳ ಸಾರವ ಹೀರಿ ಹಿಪ್ಪೆ ಮಾಡಿ ಉಪ್ಹೆಂದು ಊದುತ್ತಿದ್ದಾಳೆ.
ಷಣ್ಮುಖ ಶಿವಯೋಗಿಗಳ ವಚನಗಳು ಧಾರ್ಮಿಕ ಕ್ರಾಂತಿಯನ್ನೇ ಎಸಗಿದವು. ಮುಂದಿನ ಶತಮಾನಗಳಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ಅಸಂಖ್ಯಾತ ತತ್ವ ಪದಕಾರರು ಆಗಿಹೋಗಲು ಈ ಕ್ರಾಂತಿಕಾರಕ ಸಾಹಿತ್ಯವೇ ಕಾರಣವಾಯಿತು. ಕ್ರಿ. ಶ. 1711 ರಲ್ಲಿ ಅವರು ಜೇವರ್ಗಿಯಲ್ಲಿಯೇ ಲಿಂಗೈಕ್ಯ ರಾದರು.
ವಚನ ವಿಶ್ಲೇಷಣೆ
ಕ್ರಿಯೆಯೇ ಅಧಿಕವೆಂಬ ಗೊಡ್ಡು ಸಿದ್ಧಾಂತಿಗಳ ಮಾತು
ಸೊಗಸದಯ್ಯಾ ಎನಗೆ !
ಜ್ಞಾನವೇ ಅಧಿಕವೆಂಬ ದಡ್ಡ ವೇದಾಂತಿಗಳ ಮಾತೂ
ಸೊಗಸದಯ್ಯಾ ಎನಗೆ !!
ಅದೇನು ಕಾರಣವೆಂದರೆ ;
ಆವುದಾನೊಂದು ಪಕ್ಷಿ ಉಭಯರೆಕ್ಕೆಯಿಂದ ಗಗನಕ್ಕೆ
ಹಾರುವಂತೆ
ಅಂತರಂಗದಲ್ಲಿ ಸಮ್ಯಕ್ ಜ್ಞಾನ , ಬಹಿರಂಗದಲ್ಲಿ ಶಿವ
ಸತ್ ಕ್ರಿಯೆ,
ಸನ್ನಿಹಿತವಿಲ್ಲದೆ ಪರ ವಸ್ತುವ ಕೂಡಬಾರದಾಗಿ , ಸತ್ ಕ್ರಿಯಾ ಸಮ್ಯಕ್ ಜ್ಞಾನ
ಸಂಪನ್ನರಾದ ಶರಣರ ತೋರಿ ಬದುಕಿಸಯ್ಯಾ ಅಖಂಡೇಶ್ವರಾ !
ಇಲ್ಲಿ ಕ್ರಿಯೆಯೆಂದರೆ ಇಷ್ಟಲಿಂಗಾರ್ಚನೆ ಮೊದಲಾದ
ಧಾರ್ಮಿಕ ಪ್ರಕ್ರಿಯೆಗಳು ಮತ್ತು ಜ್ಞಾನವೆಂದರೆ ಸತ್ಯ
ಶುದ್ಧ ಪ್ರಾಮಾಣಿಕ ರೀತಿಯಲ್ಲಿ ನಡೆಯುವ ಸಾಮಾಜಿಕ ಸಂಬಂಧಗಳು. ಒಂದು ಪಕ್ಷಿಯು ಎರಡು ರೆಕ್ಕೆಯಿಂದ ಹಾರುವಂತೆ ಮನುಷ್ಯ ಪರಿಪೂರ್ಣನೆನಿಸ ಬೇಕಾದರೆ ಅರ್ಥಾತ್ ಶರಣ ಸ್ಥಲಕ್ಕೆ ಸಲ್ಲಬೇಕಾದರೆ
ಎರಡೂ ಅವಶ್ಯವೆಂಬ ಮಾತನ್ನು ಪ್ರಸ್ತುತ ವಚನದಲ್ಲಿ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಪ್ರತಿಪಾದಿಸಿ
ರುವರು.
ದುರ್ದೈವದ ಸಂಗತಿಯೇನೆಂದರೆ ಲಿಂಗಾಯತ ಧರ್ಮದಲ್ಲಿಯೇ ಕೆಲವು ಜನರು ಹೊಸ ಹೊಸ ಆಯಾಮಗಳೊಂದಿಗೆ ಶರಣ ಧರ್ಮವನ್ನು ವಿವರಿಸುತ್ತಿರುವರು.
ಕೆಲವರಿಗೆ ಲಿಂಗಾಯತ ತತ್ವ ಬೇಕು ; ಗುರು -ಲಿಂಗ-ಜಂಗಮ ಮೊದಲಾದ ಅಷ್ಟಾವರಣಗಳ ಉಸಾಬರಿ ಬೇಡ . ಶಿವಶರಣರ ವೈಚಾರಿಕ ಕ್ರಾಂತಿ ಚೆನ್ನಾಗಿದೆ ಆದರೆ ಅವರ ಧಾರ್ಮಿಕ ವಿಧಿ ವಿಧಾನಗಳ ಗೊಡವೆ
ಬೇಡ. ಇಂಥ ಗೊಡ್ಡು ಸಿದ್ಧಾಂತಿಗಳೂ ಮತ್ತು ದಡ್ದ ವೇದಾಂತಿಗಳೂ ಹದಿನೇಳನೆಯ ಶತಮಾನದಲ್ಲಿಯೂ ಇದ್ದುದರಿಂದ ಷಣ್ಮುಖ ಶಿವಯೋಗಿಗಳು ಈ ವಚನ
ಬರೆಯುವ ಅವಸರ ಬಂದಿರಬಹುದು.
ಆಳವಾಗಿ ವಿಚಾರ ಮಾಡಿದಾಗ ಇಷ್ಟಲಿಂಗ ಜಾತಿಯ ಕುರುಹಲ್ಲ. ಶಿವಯೋಗ ಸಾಧನೆಯಲ್ಲಿ ಅದು ಮನಸ್ಸಿಗೆ ಶಾಂತಿ , ಸಮಾಧಾನ, ನಿಶ್ಚಲತೆ , ಆನಂದ ನೀಡುವ ಶ್ರೇಷ್ಠ ಸಾಧನಾ ಪರಿಕರವಾಗಿದೆ. ಬ್ರಹ್ಮಾಂಡ ವ್ಯಾಪಿಸಿರುವ ಪರಮಾತ್ಮನ ಸಂಕ್ಷಿಪ್ತ ಸ್ವರೂಪವೇ
ಇಷ್ಟಲಿಂಗ. ಅದು ಸಾಕಾರವೂ ಅಲ್ಲ ; ನಿರಾಕಾರವೂ ಅಲ್ಲ. ಅದು ನಮ್ಮ ಕೈಗೆ ಬಂದರೆ ತೀರ್ಥ, ಕ್ಷೇತ್ರ, ಯಾತ್ರೆ , ಗುಡಿಗುಂಡಾರ ತಿರುಗುವ ಅವಶ್ಯಕತೆ ಇಲ್ಲ.
ಅದೊಂದು ಭಾರವಾದ ವಸ್ತುವೂ ಅಲ್ಲ. ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಕಾಗುವ ಸಂಭವವವೂ ಇಲ್ಲ. ಕರಡಿಗೆ ಇದ್ದರೆ ಕೊರಳಲ್ಲಿ ಧರಿಸಬಹುದು , ಇರದಿದ್ದರೆ ಬಟ್ಟೆಯಲ್ಲಿ ರಟ್ಟೆಗೆ ಕಟ್ಟಿಕೊಳ್ಳ
ಬಹುದು ಎಂದ ಮೇಲೆ ಅದನ್ನು ಧರಿಸುವುದರಿಂದಾಗುವ ನಷ್ಟಗಳಾದರೂ ಏನು ?
ಅನುಭವ ಮಂಟಪ , ಕಾಯಕ ತತ್ವ , ಜಾತ್ಯಾತೀತ ಸಮಾಜ ರಚನೆ , ಮೌಢ್ಯ ಉಚ್ಚಾಟನೆ, ಪ್ರಗತಿಶೀಲ ವಿಚಾರಗಳ ಪ್ರತಿಪಾದನೆ ಮೊದಲಾದವುಗಳೆಲ್ಲವೂ
ಇಷ್ಟಲಿಂಗಾರ್ಚನೆಯೆಂಬ ಶಿವಸತ್ ಕ್ರಿಯೆಗಳೊಂದಿಗೆ ಜೋತು ಬಿದ್ದಿರುವುದರಿಂದ ನಾವು ಕೇವಲ ಸತ್ಯ ಶುದ್ಧ ಪ್ರಾಮಾಣಿಕತೆಯೆಂಬ ಸಚ್ಚಾರಿತ್ರ್ಯ ಜ್ಞಾನಕ್ಕೆ ಮಾತ್ರ ಮಹತ್ವ ಕೊಡುತ್ತೇವೆ ಎಂಬುದು ಪಕ್ಷಿಯು ಒಂದೇ ರೆಕ್ಕೆಯಿಂದ ಹಾರುತ್ತೇನೆ ಎಂಬಷ್ಟು ಅಸಾಧ್ಯ
ಕಾರ್ಯವಾಗುತ್ತದೆ ಎಂಬುದು ಷಣ್ಮುಖ ಶಿವಯೋಗಿಗಳ ವಿಚಾರಧಾರೆ. ಅದಕ್ಕಾಗಿ ಭಕ್ತನಾದವನಿಗೆ ಸಮ್ಯಕ್ ಜ್ಞಾನ ಮತ್ತು ಸತ್ ಕ್ರಿಯೆ ಎರಡೂ ಅವಶ್ಯ.
–ಸುಧಾ ಪಾಟೀಲ್
ಬೆಳಗಾವಿ