ಮಹಾಮೇರು ಬಸವಣ್ಣನವರು

ಮಹಾಮೇರು ಬಸವಣ್ಣನವರು

ಬಸವಣ್ಣನವರ ಜನ್ಮದಿನಾಂಕ ವೈಶಾಖ ಶುದ್ಧ ಅಕ್ಷಯ ತೃತೀಯ. ತಂದೆ ಮಾದರಸ, ತಾಯಿ ಮಾದಲಾ0ಬಿಕೆ. ಮೂಲತಹ ಈಗಿನ ಬಿಜಾಪುರ ಜಿಲ್ಲೆಯ ಬಾಗೇವಾಡಿಯ ಅಗ್ರಹಾರದವರಾದರೂ
ಹುಟ್ಟಿದುದು ತಾಯಿ ತವರು ಮನೆಯಾದ ಇಂಗಳೇಶ್ವರದಲ್ಲಿ.  ಎಂಟನೆಯ ವಯಸ್ಸಿನಲ್ಲಿಯೇ ವೈದಿಕ ಕಂದಾಚಾರಗಳಿಂದ ರೋಸಿಕೊಂಡು, ಪ್ರಖರ ವೈಚಾರಿಕತೆಯಿಂದ
ಉಪನಯನವನ್ನು ಧಿಕ್ಕರಿಸಿ, ಮನೆತನದ ಗುರುಗಳಾಗಿದ್ದ ಈಶಾನ್ಯ ಗುರುಗಳ ಕೂಡಲಸಂಗಮ ಗುರುಕುಲವನ್ನು
ಆಶ್ರಯಿಸಿದರು. ಅಲ್ಲಿ ಜಾತವೇದ ಮುನಿಗಳ ಮಾರ್ಗದರ್ಶನದಲ್ಲಿ ವೇದೋಪನಿಷತ್ _ಪುರಾಣ -ಶಾಸ್ತ್ರ ಪಾರಂಗತರಾಗಿ ಮೈಮುರಿದು ದುಡಿಯಲು ಮನಮಿಡಿದು ತುಡಿಯಲು ತಮ್ಮ ಇಪ್ಪತ್ನಾಲ್ಕನೆಯ ಪ್ರಾಯದಲ್ಲಿ ಅಂದಿನ
ಕಳಚೂರ್ಯ ಅರಸು ಬಿಜ್ಜಳ ರಾಜನ ರಾಜಧಾನಿ
ಮಂಗಳವಾಡ ಪ್ರವೇಶಿಸಿದರು.

ಚಕ್ರವರ್ತಿ ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನವರ ಸೋದರ ಮಾವಂದಿರಾದ ಸಿದ್ಧರಸ ಮತ್ತು ಬಲದೇವರಸರು ಬಹಳ ಮುಖ್ಯ ಸ್ಥಾನದಲ್ಲಿದ್ದರು. ಅವರ ಒಂದಿಷ್ಟು ಪ್ರಭಾವದಿಂದಲೂ ತಮ್ಮ ಕತೃತ್ವ ಸಾಮರ್ಥ್ಯದಿಂದಲೂ, ಬಿಜ್ಜಳ ರಾಜನ ಆಸ್ಥಾನದಲ್ಲಿ ಮೊದಲು ಕರಣಿಕರಾಗಿ
ಸೇರಿದ ಬಸವಣ್ಣನವರು ತಮ್ಮ ಸತ್ಯ ಶುದ್ಧ
ಪ್ರಮಾಣಿಕ ಜೀವನಕ್ರಮದಿಂದ ದಿನೇ ದಿನೇ ಪ್ರಧಾನಿ ಪಟ್ಟದವರೆಗೆ ತಲುಪಿದರು. ಅವರು ಬಲದೇವರಸರ ಮಗಳು ಗಂಗಾ0ಬಿಕೆಯನ್ನೂ, ಸಿದ್ಧರಸರ ಮಗಳು ನೀಲಾ0ಬಿಕೆಯನ್ನೂ ಮದುವೆಯಾಗ ಬೇಕಾಗಿಬಂದಿತು. ಜೊತೆಗೆ ತಾಯಿಯ ಸ್ವರೂಪದಲ್ಲಿದ್ದ ಖಾಸ ಅಕ್ಕ ಅಕ್ಕನಾಗಮ್ಮನವರನ್ನೂ ಆಕೆಯ ಏಕ
ಮಾತ್ರ ಮಗ ಚೆನ್ನಬಸವಣ್ಣನವರನ್ನೂ ಕಲ್ಯಾಣಕ್ಕೆ ಕರೆಯಿಸಿಕೊ0ಡು ಆದರ್ಶಪ್ರಾಯವಾದ ಗೃಹಸ್ಥ ಜೀವನವನ್ನು ಬಾಳಿದರು.

ತಾವು ಕಲ್ಯಾಣದಲ್ಲಿ ಬಾಳಿದ
ಹನ್ನೆರಡು ವರ್ಷಗಳಲ್ಲಿಯೇ ಮುಖ್ಯವಾದ ಧಾರ್ಮಿಕ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಹಿತ್ತಿಕ ಸಾಂಸ್ಕೃತಿಕ ರಂಗಗಳಲ್ಲಿ ಹಲವು ಉತ್ಕ್ರಾಂತಿಗಳನ್ನು ಮಾಡಲು ಅವರಿಗೆ ಸಾಧ್ಯವಾಯಿತೆ0ಬುದು ಅತ್ಯದ್ಭುತದ ಸಂಗತಿಯಾಗಿದೆ.

ಈ ಒಂದು ಅಪೂರ್ವ
ಸಂಘಟನಾ ಸಾಮರ್ಥ್ಯದಿಂದಾಗಿ ಅವರು ಅವತಾರ ಪುರುಷರೂ ಎನಿಸಿದರು, ಕಾರಣಿಕ ಪುರುಷರೂ ಎನಿಸಿದರು.

ಮಹಾತ್ಮಾ ಬುದ್ಧನ ವೈಚಾರಿಕತೆ, ಜಿನಮುನಿ ಮಹಾವೀರರ ದಯೆ-ಅಹಿಂಸೆ, ಜೀಸಸ್ ಏಸುಕ್ರಿಸ್ತರ ಕ್ಷಮೆ ಶಾಂತಿ, ಪ್ರವಾದಿ ಮಹಮ್ಮದ ಪೈಗಂಬರರ ಧೈರ್ಯ ಸಾಹಸ ಮಹಾನುಭಾವ ಬಸವಣ್ಣನವರಲ್ಲಿ ಏಕತ್ರಿತ
ಗೊಂಡಿದ್ದವೆಂಬುದು ಸತ್ಯವಾದಮಾತಾಗಿದೆ. ಅವರು ನುಡಿದಂತೆ ನಡೆದರು ಮಾತ್ರವಲ್ಲ, ಅಂಥ ಏಳು ನೂರಾ ಎಪ್ಪತ್ತು ಅಮರ ಗಣ0ಗಳನ್ನು ಆ ಕಾಲದಲ್ಲಿ ಕಲ್ಯಾಣದಲ್ಲಿ ತಯಾರು ಮಾಡಿದುದು ಹಿಂದೆ ನಡೆಯಲಾರದ ಮುಂದೂ ಸಾಧ್ಯವಾಗದ ಅತ್ಯಗಾಧ ಸಂಗತಿಯಾಗಿದೆ.

ಉತ್ತಮ ಕುಲದಲ್ಲಿ ಹುಟ್ಟಿ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಒಂದೇ ಎಂದು ನಂಬಿ ಬಾಳಿದವರು. ಪ್ರಧಾನಮಂತ್ರಿಯಾಗಿದ್ದು ತನಗಿ0ತ ಕಿರಿಯರಿಲ್ಲ,
ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬನಿಲುವು ತೋರಿದವರು. ಕೂಡಲಸಂಗಮನೊಲಿಸ ಬಂದ ಕಾಯವ ಕೆಡಿಸಲಾಗದು ಎಂದು ಮನುಜ ದೇಹದ ಉತ್ಕೃಷ್ಟತೆಯನ್ನು ಎತ್ತಿಹಿಡಿದು ಗುರು -ಲಿಂಗ – ಜಂಗಮಸೇವೆಯನ್ನು ಚಾಚೂ ತಪ್ಪದೆ ಮಾಡಿ ಬದುಕು ಸಾರ್ಥಕ
ಪಡಿಸಿಕೊಂಡವರು. ಹೊನ್ನಿನೊಳಗೊಂದೊರೆಯ
ಅನ್ನದೊಳಗೊಂದಗುಳ , ಸೀರೆಯೊಳಗೊಂದೆಳೆಯ
ಇಂದಿ0ಗೆ ನಾಳಿ0ಗೆ ಬೇಕೆ0ದೆನಾದಡೆ ನಿಮ್ಮಾಣೆ
ನಿಮ್ಮ ಪುರಾತನರಾಣೆಯೆಂದು ಆಸೆಯನ್ನು ಅಳಿದು
ಈಶನಾಗಿ ಮೆರೆದವರು. ಕುಲವಹುದು ತಪ್ಪದು ಲಿಂಗ ಮುಟ್ಟಲೊಡನೆ , ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ ಎಂದು ಸಾರಿ ಬ್ರಾಹ್ಮಣ
ಕನ್ಯೆಯನ್ನು ಸಮಗಾರ ವರನಿಗೆ ಕೊಡಿಸಿ, ಸಮಾನತೆಯ ಸಂಕೇತವಾಗಿ ಸಮಕ್ಷಮ ನಿಂತು ವಿವಾಹ ನೆರವೇರಿಸಿದವರು. ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ, ನಿಮ್ಮ ಪುರಾತನರಾಣೆ ತಲೆದಂಡ ತಲೆದಂಡ ಎಂದು ಸಾರಿ

ಕಾಯ ಪರಿಶ್ರಮದ ಪ್ರತಿ
ಯೊಂದು ಕಾಯಕವನ್ನು ಉದಾತ್ತೀಕರಿಸಿದವರು.
ಪರ ವಧುವನು ಮಹಾದೇವಿಯೆ0ಬೆ ಎಂದು ಘೋಷಿಸಿ ಹೆಣ್ಣು ಗಂಡುಗಳ ಸಮಾನತೆಯನ್ನು
ಪುರಸ್ಕರಿಸಿದವರು. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು ಹೇಳಿ ಈ ಮರ್ತ್ಯವನ್ನೇ ಮಹರ್ಲೋಕ
ವನ್ನಾಗಿ ಪರಿವರ್ತಿಸಿದವರು.

ಮಹಾನುಭಾವ ಬಸವಣ್ಣನವರು ಈಗಿನ
ಪಾರ್ಲಿಮೆಂಟಿನಂತಿದ್ದ ಅನುಭವಮಂಟಪ ಸ್ಥಾಪಿಸಿ ಅದರ ಮೂಲಕ ಹರಿಯಿಸಿದ ವಿಚಾರಧಾರೆಗಳು ಬಹಳೇ ಬಹಳ ಪ್ರಗತಿಪರವಾಗಿದ್ದವು. ಅವು ಎಷ್ಟು ದೃತಗತಿಯಲ್ಲಿ ಇದ್ದವೆಂದರೆ ಎಂಟು ನೂರು ವರ್ಷ ಮುಂದಿದ್ದವು. ಇಂದು ಇಪ್ಪತ್ತನೆಯ ಶತಮಾನದಲ್ಲಿಯೂ ಕಾರ್ಯರೂಪಕ್ಕೆ ತರಲು ದುಸ್ಸಾಧ್ಯವಾದ ಆಚಾರ -ವಿಚಾರಗಳನ್ನು ಅವರು ತಮ್ಮ ಹನ್ನೆರಡನೆಯ ಶತಮಾನದಲ್ಲಿಯೇ ಕಾರ್ಯಾನ್ವಯ
ಗೊಳಿಸಿದರು.

ಬಸವಣ್ಣನವರ ವಚನಗಳು ಕುಸುಮದ ಕುಡಿಗಳು,
ವೈಚಾರಿಕ ವಜ್ರದ ಕಿಡಿಗಳು. ಅವರ ವಚನರಚನೆಯ
ಪ್ರಭಾವ ಎಷ್ಟೊಂದು ಆಯಿತೆಂದರೆ 770 ಅಮರಗಣ0ಗಳೂ ಅದರಲ್ಲಿ 70 ಜನ ಮಹಿಳೆಯರು
ವಚನಗಳನ್ನು ಬರೆದರು. ಈ ವಚನ ಸಾಹಿತ್ಯದ ಮಹಾಪೂರದ ನಂತರ ಕನ್ನಡ ಸಾಹಿತ್ಯದ ದಿಕ್ಕೇ
ಬದಲಾಯಿತು. ಭಾಷೆಯ ಸ್ವರೂಪ ಬೇರೆಯೇ
ಆಯಿತು.ತಮ್ಮ ವ್ಯಕ್ತಿತ್ವದ ಪಡಿಯಚ್ಚನ್ನು ಭಾರತೀಯ
ಇತಿಹಾಸದಲ್ಲಿ ಮೂಡಿಸಿ ಬಸವಣ್ಣನವರು ಕೂಡಲ ಸಂಗಮನಲ್ಲಿ ಒಂದಾದರು. ಅವರ ವಚನಾ0ಕಿತ
ಕೂಡಲ ಸಂಗಮದೇವ “

ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ
ಲಿಂಗಾನುಭಾವದಿಂದ ನಿಮ್ಮ ಕಂಡು
ಎನ್ನ ಮರೆದೆ ಕೂಡಲ ಸಂಗಮದೇವಾ !

ವಚನ ಚಿಕ್ಕದಾದರೂ ಚೊಕ್ಕದಾದ ವಿಶ್ವ ವಿಶಾಲ
ತತ್ವವನ್ನ ಮಹಾನುಭಾವಿ ಬಸವಣ್ಣನವರು ಪ್ರಸ್ತುತ
ವಚನದ ಮೂಲಕ ಬಿತ್ತರಿಸುತ್ತಲಿದ್ದಾರೆ. ಜ್ಞಾನಕ್ಕೆ ಕೊನೆಯಿಲ್ಲ. ಆದರೆ ಅರಿವಿಗೆ ಅನುಭಾವವೇ ಕೊನೆ ಎಂಬ ಮಾತನ್ನು ಹೇಳುತ್ತಿದ್ದಾರೆ. ಬೇಲೂರಿನ ಚೆನ್ನ ಕೇಶವ ದೇವಾಲಯವನ್ನೇ ಆಗಲಿ, ಎಲ್ಲೋರ ಅಜಂತಾ ಗುಹೆಗಳನ್ನೇ ಆಗಲಿ, ವಿಜಾಪುರದ ಗೋಳ
ಗುಮ್ಮಟವನ್ನೇ ಆಗಲಿಎಷ್ಟು ನೋಡಿದರೂ ಮನಸ್ಸು ತಣಿಯದು. ಕಾಲು ನೊಂದರೂ ಹೊಟ್ಟೆ ಹಸಿದರೂ ಇನ್ನೂ ಮನಸ್ಸು ನೋಡಲು ಹಾತೊರೆಯುತ್ತಿರುತ್ತದೆ.
ಆದರೆ ಕೊನೆಗೆ ಇಂಥ ಒಂದು ಘಟ್ಟಕ್ಕೆ ಬಂದು ತಲುಪುತ್ತೇವೆ ಅಲ್ಲಿ ಇನ್ನು ನೋಡುವುದು ಸಾಕು
ಎನಿಸುತ್ತದೆ. ಈ ಸಾಕು ಎಂಬುದು ಕಾಲು ಸೋತುದರಿಂದ ಅಲ್ಲ, ಕಣ್ಣುಗಳು ನೋಯಿಸುದುದರಿಂದ ಅಲ್ಲ, ಹೊಟ್ಟೆ ಹಸಿದುದರಿಂದಲೂ ಅಲ್ಲ , ಹೃದಯಕ್ಕೇನೇ ಸಾಕು ಎಂಬ ಅನುಭವ ಉಂಟಾದಾಗ ಅದು
ಕೊನೆಗೊಳ್ಳುತ್ತದೆ. ಎಷ್ಟು ನೋಡಿದರೂ ಇಷ್ಟೇ
ಅಲ್ಲವೆ ಎಂಬ ಭಾವ ಬಲಿಯುತ್ತದೆ. ಇಂಥ ಪರಮ ಅನುಭವ ತಲೆದೋರಿದಾಗ ಕಾಲು ಚಲಿಸುವುದಿಲ್ಲ ಕಣ್ಣು ನೋಡುವುದಿಲ್ಲ, ಮಿದುಳು ಬರೆದು ಕೊಳ್ಳುತ್ತಿರುವುದಿಲ್ಲ. ಇದೇ ಅರಿವಿನ ತೃಪ್ತಿ, ಇದೇ ಅನುಭವದ
ಅನುಭಾವ.

ಒಂದು ಮಾತನ್ನು ಮಾತ್ರ ನಾವು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು. ಶರಣರ ಪರಿಭಾಷೆಯಲ್ಲಿ ಜ್ಞಾನವೇ ಬೇರೆ , ಅರಿವೇ ಬೇರೆ. ಜ್ಞಾನ ಬಾಹ್ಯ ಚಕ್ಷುಗಳಿಂದ ಸಂಗ್ರಹವಾಗುತ್ತದೆ. ಅರಿವು ಅಂತ: ಚಕ್ಷುಗಳಿಂದ ಮೂಡಿಬರುತ್ತದೆ. ನೆಲ, ಜಲ, ಅಗ್ನಿ , ಆಕಾಶ , ವಾಯುಗಳನ್ನು ವಿಭಜಿಸಿ ನೋಡುವುದು ಜ್ಞಾನವಾದರೆ ಮನ,
ಪ್ರಾಣ, ಬುದ್ಧಿ , ಭಾವ , ಆತ್ಮಗಳನ್ನು ಒಳಹೊಕ್ಕು ನೋಡುವುದು ಅರಿವು , ಕಣ್ಣು , ಮೂಗು, ಕಿವಿ, ನಾಲಿಗೆ ,ಚರ್ಮಗಳ ಬಗ್ಗೆ ತಿಳಿದುಕೊಳ್ಳುವುದು ಜ್ಞಾನ ಪ್ರಾಣ, ರುಚಿ, ಸ್ಪರ್ಶಗಳ ಬಗ್ಗೆ ತಿಳಿದುಕೊಳ್ಳುವುದು ಅರಿವು. ಜ್ಞಾನಕ್ಕೆ ಇತಿಮಿತಿ ಇಲ್ಲ. ಅರಿವಿಗೆ ಇತಿಮಿತಿ
ಇದೆ. ತೃಪ್ತಿಯೇ ಅರಿವಿನ ಆಶ್ರಯ. ಅದೇ ಅನುಭಾವ.

ಬಸವಣ್ಣನವರ ಅಭಿಪ್ರಾಯದಲ್ಲಿ ಜೀವನದ ಪರಮ ಗಂತವ್ಯವೆಂದರೆ ಅಥವಾ ಮಾನವನ ಬದುಕಿನ ಮುಖ್ಯ ಗುರಿಯೆಂದರೆ ದೇವ ಸಾಕ್ಷಾತ್ಕಾರ ; ಕೂಡಲ
ಸಂಗಮದೇವನನ್ನು ಒಲಿಸ ಬಂದ ಪ್ರಸಾದ ಕಾಯ ಇದು. ಇದನ್ನು ಬಿಟ್ಟರೆ ಕಾಯಕ್ಕೆ ಅನ್ಯ ಸಾರ್ಥಕ್ಯವೇ ಇಲ್ಲ. ಹೊಲ, ಮನೆ ಗಳಿಸುವುದಾಗಲಿ , ಕೂಲಿ ಕು0ಬಳಿ ಮಾಡುವುದಾಗಲಿ , ವಿದ್ಯಾರ್ಜನೆ ಜ್ಞಾನಾ
ರ್ಜನೆಗಳಾಗಲಿ ಕೊನೆಗೆ ದೈವೀ ಸಾಕ್ಷಾತ್ಕಾರದಲ್ಲಿಯೇ ಕೊನೆಗೊಳ್ಳಬೇಕು. ಅದೇ ಜೀವನದ ಧ್ಯೇಯ.

ಹಣ ಸಂಗ್ರಹಿಸುವುದೆಂದರೆ ಕುಳ್ಳು ಉರವಲು ಸಂಗ್ರಹಿಸಿದಂತೆ. ಬ್ರಹ್ಮಾನಂದ ಅಥವಾ ಶಿವಾನಂದವೆಂಬುದು
ಅಡಿಗೆ ಮಾಡಿ ಉಂಡಂತೆ. ಆದರೆ ವಿಷಾದದ ಸಂಗತಿ ಏನೆಂದರೆ ಕುಳ್ಳು ಆರಿಸುವುದರಲ್ಲಿಯೇ ಆಯುಷ್ಯ ಮುಗಿಸಿದವರೇ ಅನೇಕ. ದೇವಸಾಕ್ಷಾತ್ಕಾರವೆಂಬ ಅಡಿಗೆ ಮಾಡಿ ಉಂಡವರು ಲಕ್ಷಕ್ಕೊಬ್ಬ ಭಕ್ತ, ಕೋಟಿ
ಗೊಬ್ಬ ಶರಣ.

ದೈವಿ ಸಾಕ್ಷಾತ್ಕಾರವೆಂದರೆ ಮುಡಿಯಲ್ಲಿ ಗಂಗಾ
ತೊಡೆಯಲ್ಲಿ ಪಾರ್ವತಿ, ಕೊರಳಲ್ಲಿ ಉರಗ, ಕರದಲ್ಲಿ ಡಮರುಗ, ತ್ರಿಶೂಲ ಇದ್ದವನನ್ನು ನೋಡುವುದಲ್ಲ.
ವಿಶ್ವದ ತುಂಬ ವ್ಯಾಪಿಸಿರುವ ವಿಶ್ವೇಶ್ವರನನ್ನು ದರ್ಶಿಸುವುದು,

ವನವೆಲ್ಲ ನೀವೆ , ವನದೊಳಗಣ
ದೇವ ತರುಗಳೆಲ್ಲ ನೀವೆ , ತರುವಿನೊಳಗಣ ಖಗ ಮೃಗಗಳೆಲ್ಲ ನೀವೆ “ ಎಂಬಂತಹ ಅನುಭಾವ. ಭಾವ ಅನುಭಾವಗಳು ತಲೆದೋರಿದಾಗ ಆಹಮ್ಮಿಕೆ ಅಳಿದಿರುತ್ತದೆ. ರಾಗ -ದ್ವೇಷಕಾಣೆಯಾಗಿರುತ್ತದೆ, ತನ್ನನ್ನು ತಾನು ಅರಿತು ಅಥವಾ ತನ್ನನ್ನು ತಾನು ಮರೆತು ತಾನೇ ತಾನಾಗಿರುವುದೇ ಲಿಂಗಾನುಭಾವ.

ಸುಧಾ ಪಾಟೀಲ್
ಬೆಳಗಾವಿ

Don`t copy text!