ಎಡೆಯೂರು ಸಿದ್ಧಲಿಂಗೇಶ್ವರ : ಜೀವನ ಮತ್ತು ಸಂದೇಶ

ಶ್ರಾವಣಮಾಸದ ಚಿಂತನೆ- ೨

ಎಡೆಯೂರು ಸಿದ್ಧಲಿಂಗೇಶ್ವರ : ಜೀವನ ಮತ್ತು ಸಂದೇಶ

 

 

 

 

 

 

 

 

 

 

ಅಧ್ಯಾಯ – ೧. ಬಸವೋತ್ತರ ಯುಗ-ಗೋಸಲ ಸಿದ್ಧೇಶ್ವರ ಪರಂಪರೆ

ಶ್ರೀ ಮದನಾದಿ ಸಿದ್ಧಲಿಂಗಸ್ತವನಮ್

ಜಗಜ್ಜಾಲಪಾಲಂ ಜನಸ್ತುತ್ಯಶೀಲಂ
ಭವಾರಣ್ಯದಾವಂ ಭೃತ ಸ್ವಾನುಭಾವಂ
ಶಿವಾನಂದಕೋಶಂ ದಿನೇಶಪ್ರಕಾಶಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೧||

ಸ್ವತಂತ್ರ ಸ್ವಲೀಲಂ ಗಣೇಂದ್ರಾನುಕೂಲಂ
ಮಿಲನ್ಮೂಲಮಂತ್ರಂ ಪ್ರಣೀತೇಶ ತಂತ್ರಂ
ಶಿವಧ್ಯಾನಸಕ್ತಂ ಪರಾನಾದಿಮುಕ್ತಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೨||

ಪರಿವ್ರಾಡ್ವರೇಣ್ಯಂ ಗಣೇಶಾಗ್ರಗಣ್ಯಂ
ಸದಾಸತ್ಯಭಾಷಂ ಶಿವಜ್ಞಾನಭೂಷಂ
ಸರುದ್ರಾಕ್ಷಮಾಲಂ ಲಸದ್ಭಸ್ಮಫಾಲಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೩||

ಶಿವಾಚಾರಪಕ್ಷಂ ಕೃಪಾಭೃತ್ಕಟಾಕ್ಷಂ
ಷಢಧ್ವಾದಿಬೀಜಂ ನತಾಮರ್ತ್ಯಭೂಜಂ
ಪರಿತ್ಯಕ್ತರಾಗಂ ಪರಬ್ರಹ್ಮಯೋಗಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೪||

ಕಲಾಸತ್ಕಲಾಪಂ ಕಪರ್ದಿಸ್ವರೂಪಂ
ಮನೋವೃತ್ತಿಶೂನ್ಯಂ ಮುನಿವ್ರಾತಮಾನ್ಯಂ
ಸಮಂಚದ್ಗುಣಾಂಕಂ ಸದಾ ನಿಷ್ಕಲಂಕಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೫||

ಪವಿತ್ರಾಭಿಧೇಯಂ ಪರಾಮ್ನಾಯಗೇಯಂ
ನಿರಸ್ತಾಂಗಜಾತಂ ಸುಧಾಸ್ಫೀತಗೀತಂ
ಪರಿಚ್ಛಿನ್ನಪಾಶಂ ಸಮಸ್ತಾಮರೇಶಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೬||

ಪವಿತ್ರಸ್ವಗಾತ್ರಂ ಬುಧಸ್ತೋತ್ರಪಾತ್ರಂ
ನಿಕೃತ್ತಾವರೋಧಂ ನಿಸರ್ಗಾವಬೋಧಂ
ಚಿದಾಮೋದಭಾಜಂ ಚರಾಚಾರ್ಯರಾಜಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೭||

ಜಿತಾರಾತಿವರ್ಗಂ ಗೃಹೀತಾದ್ಯಮಾರ್ಗಂ
ತತಾಮ್ನಾಯಸಾರಂ ತಮೋಸ್ತೋಮದೂರಂ
ಪರಾಷಟ್ ಸ್ಥಲ ನಿರಾತಂಕಶಂಕಂ
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೮||

ಭುಜಂಗಪ್ರಯಾತಂ ಸ್ತವಂ ಸಿದ್ಧಲಿಂಗಂ
ಪ್ರಭೋರ್ಮೂಲಮಂತ್ರಾಭಿಧಾನೇನ ಕ್ಲುಪ್ತಂ
ಭುಜಂಗಾಶ್ರಮಸ್ಥಸ್ಯ ಯೋವಾಪಠೇ ತ್ಸ್ಯೋ
ಪ್ಯವಾಪ್ನೋತ್ಯಭೀಷ್ಟಂ ಚ ಭೋಗಂ ಚ ಮೋಕ್ಷಂ ||೯||

(ಉಭಯ ಕವಿತಾವಿಶಾರದ ಷಡಕ್ಷರದೇವ )

೧೨ನೇ ಶತಮಾನದ ಬಸವಾದಿ ಶಿವಶರಣರ ಕ್ರಾಂತಿಯಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮ ಸಂಸ್ಕೃತಿಗಳನ್ನು ೧೫ನೇ ಶತಮಾನದಲ್ಲಿ ಪುನರುಜ್ಜೀವನಗೊಳಿಸಿದ ಕೀರ್ತಿ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರಿಗೆ ಸಲ್ಲುತ್ತದೆ. ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗವನ್ನು ಲೋಕಕ್ಕೆ ಪರಿಚಯಿಸಿದ ಶ್ರೇಯಸ್ಸು ಸಿದ್ಧಲಿಂಗ ಯತಿಗಳವರದು. ಅಂತೆಯೆ ಅವರನ್ನು “ದ್ವಿತೀಯ ಅಲ್ಲಮ” “ತೋಂಟದ ಅಲ್ಲಮ” ಎಂದು ಕವಿಗಳು ಗುರುತಿಸಿದ್ದು ಸರಿಯಾಗಿಯೇ ಇದೆ. ಬಸವಾದಿ ಶಿವಶರಣರ ವಚನ ಸಾಹಿತ್ಯ ಕಾಲಗರ್ಭದಲ್ಲಿ ಲೀನವಾಗಿ ಹೋಗಿತ್ತು. ಅಂತಹ ಸಾಹಿತ್ಯಕ್ಕೆ ಪುನಶ್ಚೇತನ ಕೊಟ್ಟವರು ತೋಂಟದ ಸಿದ್ಧಲಿಂಗ ಯತಿಗಳು.

ಲಿಂಗಾಯತ ಧರ್ಮದ ಬೆಳವಣಿಗೆಯಲ್ಲಿ ಬಸವಾದಿ ಪ್ರಮಥರಷ್ಟೇ ಪ್ರಮುಖ ಪಾತ್ರವಹಿಸಿದವರು ಸಿದ್ಧಲಿಂಗೇಶ್ವರರು. ೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರ ವಚನ ಸಾಹಿತ್ಯವನ್ನು ಪಟ್ಟಭದ್ರರು ಹಾಳು ಮಾಡಿದ ಕಾರಣವಾಗಿ, ೧೩ ಮತ್ತು ೧೪ನೇ ಶತಮಾನದಲ್ಲಿ ವಚನ ಸಾಹಿತ್ಯವು ಗುಪ್ತಗಾಮಿನಿಯಾಗಿ ಉಳಿಯುವ ಪ್ರಸಂಗ ಬಂತು. ಹರಿಹರ-ರಾಘವಾಂಕರಂತಹ ಕವಿಗಳು ಕಾವ್ಯ ರಚನೆ ಮೂಲಕ ಬಸವಾದಿ ಶಿವಶರಣರ ಚರಿತ್ರೆಗಳನ್ನು ದಾಖಲಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದಿಕ್ಕು ದಿಸೆ ತೋರಿಸುವ ಕಾರ್ಯ ಮಾಡಿದರು. ಆದರೆ ವಚನ ಸಾಹಿತ್ಯದ ಸಂರಕ್ಷಣೆಯ ವಿಷಯದಲ್ಲಿ ಕನ್ನಡ ಕವಿಗಳು ಮುಂದಾಗಲಿಲ್ಲವೆನ್ನುವುದು ಕೌತುಕದ ಪ್ರಶ್ನೆಯಾಗಿ ಉಳಿದಿದೆ.

೧೫ನೇ ಶತಮಾನದ ಹೊತ್ತಿಗೆ ಯವನರ ದಾಳಿಗೆ ಕನ್ನಡ ನಾಡು ಸಿಲುಕಿರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರ ಜೀವನವು ಅಲ್ಲೋಲ ಕಲ್ಲೋಲ ವಾಯಿತು. ಯವನರ ಉಪಟಳ ಕನ್ನಡ ನಾಡಿನ ಜನರ ಮೇಲೆ ಎಷ್ಟು ಘೋರ ಪರಿಣಾಮ ಬೀರಿತ್ತೆಂದು ಪಾಂಚಾಳಗಂಗ ಎಂಬ ಕವಿ ಬರೆದ ಕುಮಾರರಾಮನ ಸಾಂಗತ್ಯ ಗ್ರಂಥದಲ್ಲಿ ಸುದೀರ್ಘವಾಗಿ ವರ್ಣಿತಗೊಂಡಿದೆ. ಯವನರ ಕಿರಿಕಿರಿಗೆ ಬೇಸತ್ತ ಕನ್ನಡಿಗರು ತಮ್ಮ ಬೇರೆ ಬೇರೆ ವೃತ್ತಿಯನ್ನು ತ್ಯಜಿಸಿ ಗುಳೆ ಹೋದರೆಂದು ತಿಳಿದು ಬರುತ್ತದೆ. ವಿದ್ಯಾವಂತರಾದವರು ತಮ್ಮ ತಮ್ಮ ಧಾರ್ಮಿಕ ಸಾಹಿತ್ಯವನ್ನು ಸಂರಕ್ಷಿಸಲು ದಿಕ್ಕು ದಿಕ್ಕಿಗೆ ಚದುರಿದರೆಂದೂ ಕುಮಾರರಾಮನ ಸಾಂಗತ್ಯ ತಿಳಿಸುತ್ತದೆ. ಯವನರ ಕಾಟಕ್ಕೆ ತಮ್ಮ ತಮ್ಮ ಮತೀಯ ಗ್ರಂಥಗಳನ್ನು ರಕ್ಷಿಸುವ ಪ್ರಯತ್ನ ಮಾಡಿರುವುದು ಸಹಜ. ಈ ಸಂದರ್ಭದಲ್ಲಿ ಲಿಂಗಾಯತರು ಕೂಡ ತಮ್ಮ ಧರ್ಮದ ಮೂಲಪಠ್ಯ ವಚನ ಸಾಹಿತ್ಯವನ್ನು ಸಂರಕ್ಷಿಸುವ ಸಲುವಾಗಿ ಹಸ್ತಪ್ರತಿಗಳನ್ನು ತೆಗೆದುಕೊಂಡು ಗುಳೆ ಹೋಗಿರಬಹುದಾದ ಸಾಧ್ಯತೆಯೂ ಇದೆ. ಈ ಓಡಾಟದಲ್ಲಿ ಕೆಲವು ವಚನ ಹಸ್ತಪ್ರತಿಗಳು ನಾಶವಾಗಿರುವ ಸಾಧ್ಯತೆಯೂ ಇದೆ.

ಈ ಸಂಕ್ರಮಣ ಕಾಲದಲ್ಲಿ ಹಂಪೆಯಲ್ಲಿ ವಿಜಯನಗರ ಸಾಮ್ರಾಜ್ಯ ವಿಸ್ತಾರ ವಾಗುತ್ತಿತ್ತು. ಸಂಗಮ ವಂಶದ ಪ್ರೌಢದೇವರಾಯನು ಸಾಹಿತ್ಯ ಸಂಸ್ಕೃತಿಗಳ ಕುರಿತು ಕಾಳಜಿ ವಹಿಸಿದನು. ತನ್ನ ಮಂತ್ರಿ ಮಂಡಳದಲ್ಲಿ ಇಬ್ಬರು ಪ್ರಧಾನ ಅಮಾತ್ಯರಾದ ಲಕ್ಕಣ್ಣ ದಂಡೇಶ ಮತ್ತು ಜಕ್ಕಣ್ಣಾರ್ಯರು ಲಿಂಗಾಯತ ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಯೋಜನೆಗಳನ್ನು ರೂಪಿಸಿದರು. ಉಭಯತರೂ ಸ್ವತಃ ಸಾಹಿತಿಗಳಾಗಿದ್ದರಿಂದ ವಚನಗಳ ಕುರಿತು, ಶರಣರ ಜೀವನ ಕುರಿತು ಕಾವ್ಯ ರಚನೆಗೆ ತೊಡಗಿದರು. ಈ ಸಂದರ್ಭದಲ್ಲಿ ವಚನಗಳ ಸಂಕಲನ, ಸಂಗ್ರಹ, ಸಂಪಾದನೆ, ವ್ಯಾಖ್ಯಾನ, ಟೀಕೆ, ಭಾಷ್ಯ ಮೊದಲಾದ ಕಾರ್ಯಗಳು ಜರುಗಿದವು.

ಮುಸ್ಲಿಂರ ಘೋರ ಆಕ್ರಮಣಗಳಿಂದ ಇಡೀ ದಕ್ಷಿಣ ಭಾರತ ನಡುಗಿ ಹೋಯಿತು. ಇಲ್ಲಿ ಆಳುತ್ತಿದ್ದ ಯಾದವ, ಕಾಕತೀಯ, ಹೊಯ್ಸಳ, ಪಾಂಡ್ಯ ಮೊದಲಾದ ರಾಜಮನೆತನಗಳು ಮೂಲೆಗುಂಪಾದವು. ಯಾದವರ ದೇವಗಿರಿಯು ಮಲ್ಲಿಕಾಫರನ ದಾಳಿಯಿಂದ ಸರ್ವನಾಶವಾಯಿತು(ಕ್ರಿ.ಶ.೧೩೦೭). ಅದೇ ರೀತಿ ಹೊಯ್ಸಳರ ರಾಜಧಾನಿಯಾಗಿದ್ದ ದ್ವಾರಸಮುದ್ರವೂ ಕ್ರಿ.ಶ. ೧೩೧೦ರಲ್ಲಿ ಅವನಿಂದಲೇ ದಾಳಿಗೊಳಗಾಗಿ ಲೂಟಿಯಾಯಿತು. ಮಧುರೆ, ರಾಮೇಶ್ವರ ಮೊದಲಾದ ಹಿಂದೂ ಧಾರ್ಮಿಕ ಕ್ಷೇತ್ರಗಳು ಮಲ್ಲಿಕಾಫರನ ಕೈವಶವಾದವು. ಅಲ್ಲಿರುವ ಎಲ್ಲ ಹಿಂದೂ ದೇವಾಲಯಗಳನ್ನು ಸರ್ವನಾಶ ಮಾಡಿ, ಕೆಡವಿ, ಮಸೀದಿಗಳನ್ನು ನಿರ್ಮಾಣ ಮಾಡಿದನು. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಎಲ್ಲ ಸಂಸ್ಕೃತಿಗಳು ಧರ್ಮಗಳು ಮತಗಳು ಪತನಗೊಂಡು, ಹೀನಾಯ ಸ್ಥಿತಿಯನ್ನು ಅನುಭವಿಸಿದವು. ಈ ವಿಷಯವಾಗಿ ಉತ್ತರ ಭಾರತದ ಹಿರಿಯ ವಿದ್ವಾಂಸರಾದ ಡಾ. ಹಜಾರಿಪ್ರಸಾದ ದ್ವಿವೇದಿ ಅವರು ತಮ್ಮ “ಭಾರತೀಯ ಸಂಸ್ಕೃತಿ” ಎಂಬ ಬೃಹತ್ ಕೃತಿಯಲ್ಲಿ ಒಂದು ಮಾತು ಬರೆಯುತ್ತಾರೆ- ೧೫ನೇ ಶತಮಾನದ ಹೊತ್ತಿಗೆ ಬಹುತೇಕ ಭಾರತವು ಮಹಮ್ಮದೀಯರ ಆಡಳಿತಕ್ಕೆ ಒಳಪಟ್ಟಿತು. ಹೀಗಾಗಿ ಭಾರತದಲ್ಲಿದ್ದ ಎಲ್ಲ ಮೂಲ ಧರ್ಮಗಳು, ಮತಗಳು, ಪಂಥ ಪಂಗಡಗಳು ಒಂದು ಬೃಹತ್ ನೆಲೆಯ ಆಶ್ರಯವನ್ನು ಬಯಸಿದವು. ಆಗ ಅಸ್ತಿತ್ವಕ್ಕೆ ಬಂದಿದ್ದೆ ಈ “ಹಿಂದೂ” ಎಂಬ ಒಗ್ಗಟ್ಟಿನ ಮಂತ್ರ. “ನಾವೆಲ್ಲ ಹಿಂದೂಗಳು, ಮಹಮ್ಮದೀಯರು ವಿದೇಶದಿಂದ ಬಂದ ಯವನರು” ಎಂಬ ಸ್ಪಷ್ಟವಾದ ಪರಿಕಲ್ಪನೆ ನೀಡುವುದಕ್ಕಾಗಿ ಹಿಂದೂ ಎಂಬ ಬೃಹತ್ ಆಲದ ಮರದ ಆಶ್ರಯವನ್ನು ಸಣ್ಣ ಪುಟ್ಟ ಮತ-ಧರ್ಮಗಳು ಆಶ್ರಯಿಸಿದವು. ಈ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜರ ಪಾತ್ರವನ್ನು ಇದೇ ಹಿನ್ನೆಲೆಯಲ್ಲಿಯೇ ಪರಿಭಾವಿಸಬೇಕು.

ಮಹಮ್ಮದೀಯರ ದಾಳಿಯಿಂದ ತತ್ತರಿಸಿ ಹೋಗಿದ್ದ ದಕ್ಷಿಣ ಭಾರತದಲ್ಲಿ ವಿಜಯ ನಗರ ಸಾಮ್ರಾಜ್ಯದ ದೊರೆಗಳು ಉಳಿದೆಲ್ಲ ಮತ ಧರ್ಮಗಳವರಿಗೆ ಅಭಯವನ್ನು ನೀಡಿದರು. ವಿಜಯನಗರದ ಅರಸರಿಗೆ ಆಜನ್ಮ ಶತ್ರುಗಳಾಗಿದ್ದ ಕಲಬುರ್ಗಿಯ ಬಹುಮನಿ ಸುಲ್ತಾನರನ್ನು ಕೃಷ್ಣಾ ನದಿಯಾಚೆಗೆ ತಳ್ಳಿ ಸಮಗ್ರ ದಕ್ಷಿಣ ಪ್ರಾಂತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.

ವಿಜಯನಗರದ ಸಂಗಮ ವಂಶದ ಇಮ್ಮಡಿ ದೇವರಾಯ ಅಥವಾ ಪ್ರೌಢದೇವರಾಯನ ಕಾಲಕ್ಕೆ ನೂರೊಂದು ವಿರಕ್ತರು ಕೂಡಿ ಲಿಂಗಾಯತ ಧರ್ಮ ಸಂಸ್ಕೃತಿಗಳನ್ನು ತೇಜೋಜ್ವಲವಾಗಿ ಬೆಳಗುವ ಪ್ರಯತ್ನ ಮಾಡಿದರು. ಪ್ರೌಢದೇವರಯನ ಆಳ್ವಿಕೆಯು ಕ್ರಿ.ಶ. ೧೪೪೬ರಲ್ಲಿ ಕೊನೆಗೊಂಡಿತು. ಆತನ ತರುವಾಯ ಅವನ ಮಗ ಮಲ್ಲಿಕಾರ್ಜುನ ಅಧಿಕಾರಕ್ಕೆ ಬಂದ. ಈ ಸಂದರ್ಭದಲ್ಲಿ ನೂರೊಂದು ವಿರಕ್ತರ ಪುಣ್ಯವೂ ತೀರಿ, ಮತ್ತೆ ಲಿಂಗಾಯತ ಧರ್ಮ ಸಾಹಿತ್ಯ ಸಂಸ್ಕೃತಿಗಳು ಅವನತಿಯತ್ತ ಸಾಗಿದವು. ಧರೆಯೊಳಗೆ ಅನಾಚಾರ ಹೆಚ್ಚಾಗಿ, ಪರವಾದಿಗಳು ಘನವಾಗಿ ಲಿಂಗಾಯತ ಸಂಸ್ಕೃತಿ ಕುಂದುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂಕ್ರಮಣ ಸಂದರ್ಭದಲ್ಲಿ ಚನ್ನಬಸವ ಪುರಾಣದ ಕರ್ತೃ ವಿರೂಪಾಕ್ಷ ಪಂಡಿತ “ಷಟ್ಸ್ಥಲವನುದ್ಧರಿಸಲೆಂದು ನಿರಂಜನಗಣೇಶನೊಡನೆ ವರಗಣೇಶ್ವರ ರನ್ನೇಳ್ನೂರ್ವರಂ ಕೂಡಿಕೊಂಡಿರದೆ ಭೂಮಿಯೊಳುದಿಸಿ ಜಂಗಮಸ್ಥಲವಾಂತು ಪರಮ ಷಟ್ಸ್ಥಲವನುದ್ಧರಿಸೆಂದು ಕಳುಹಲವರೊಡಗೂಡಿ ಭೂಮಿಗಿಳಿದು ಸಿದ್ಧಲಿಂಗರು ಬಂದರೆಂದು” ಹೇಳುತ್ತಾನೆ.

ವಿರೂಪಾಕ್ಷ ಪಂಡಿತನು ತನ್ನ ಚನ್ನಬಸವ ಪುರಾಣದಲ್ಲಿ ಕೆಲವು ಚಾರಿತ್ರಿಕ ಸಂಗತಿಗಳನ್ನು ಹೇಳಿರುವುದು ಗಮನಾರ್ಹ. ವಿರೂಪಾಕ್ಷ ಪಂಡಿತನ ಅಭಿಪ್ರಾಯದಂತೆ, ಇಮ್ಮಡಿ ದೇವರಾಯ ಅಥವಾ ಪ್ರೌಢದೇವೇಂದ್ರನು ಅಳಿವನು, ಅವನ ವಂಶೋದ್ಭವನಾದ ವಿರೂಪಾಕ್ಷರಾಯನೆಂಬುವನು ದೇಶವನ್ನಾಳುತ್ತಿರುವಲ್ಲಿ ನರಸಣ್ಣರಾಯನೆಂಬುವನು ಅವನನ್ನು ಸೋಲಿಸಿ ವಿದ್ಯಾನಗರಿಯನ್ನು ತಾನು ಹಿಡಿದುಕೊಳ್ಳುವನು. ಅವನ ಮಗನು ೫೧ ವರ್ಷಗಳವರೆಗೆ ಆ ರಾಜ್ಯವನ್ನಾಳುವನು. ಅವನ ವಂಶಕ್ಕೆ ಅಚ್ಯುತರಾಜನೇ ಕಡೆಯುವನು. ಪ್ರೌಢದೇವರಾಯನು ಆಳಿದ ಬಳಿಕ ರಾಜ್ಯದಲ್ಲಿ ಅನಾಚಾರವು ಹೆಚ್ಚ, ಲಿಂಗಾಯತ ಮತವು ಕುಗ್ಗಿ, ಪರಮತವಾದಿಗಳು ಪ್ರಬಲಿಸುವರು. ಅಗ ನಾರದನು ಕೈಲಾಸಕ್ಕೆ ಹೋಗಿ, ಶಿವನಿಗೆ ಭಕ್ತಿಯಿಂದ ನಮಸ್ಕರಿಸಿ, ಭೂಲೋಕದಲ್ಲಿ ಶಿವಾಚಾರವು ತಗ್ಗಿ, ಅನಾಚಾರವು ಹೆಚ್ಚಿಕೊಂಡಿರುವುದರಿಂದ ನೀನೇ ಭೂಮಿಯಲ್ಲವತರಿಸಿ ಷಟಸ್ಥಲಾಚಾರವನ್ನುದ್ಧರಿಸಬೇಕೆಂದು ಬಿನ್ನೈಸುವನು. ಆಗ ಶಂಕರನು ನಿರಂಜನಗಣೇಶನನ್ನು ಕರೆದು, ನೀನು ಏಳ್ನೂರು ಮಂದಿ ಗಣೇಶ್ವರರನ್ನು ಕರೆದುಕೊಂಡು ಭೂಲೋಕಕ್ಕೆ ಹೋಗಿ, ಜಂಗಮಸ್ಥಲವನ್ನಾಶ್ರೈಸಿ, ಷಟ್ ಸ್ಥಲಾಚಾರನ್ನುದ್ಧರಿಸಿ ಬಾರೆಂದು ಅಪ್ಪಣೆ ಮಾಡುವನು. ಅದರಂತೆ ನಿರಂಜನ ಗಣೇಶ್ವರನು ಸಿದ್ಧೇಶನೆಂಬ ಹೆಸರಿನಿಂದ ಗೋಸಲಚೆನ್ನಬಸವೇಶ್ವರ ಶಿಷ್ಯನಾಗಿ ಅವತರಿಸಿ ಕಗ್ಗೆರೆಯ ಗ್ರಾಮದ ತೋಟಕ್ಕೆ ಬರುವನು- ಎಂದು ವಿರೂಪಾಕ್ಷ ಪಂಡಿತ ಹೇಳುತ್ತಾನೆ.

ಬಸವೋತ್ತರ ಕಾಲಘಟ್ಟದ ಪರಿಸ್ಥಿತಿಯನ್ನು ವಿರಕ್ತ ತೋಂಟದಾರ್ಯನು ತನ್ನ ಸಿದ್ಧೇಶ್ವರ ಪುರಾಣದಲ್ಲಿ ಹೀಗೆ ವಿವರಿಸಿದ್ದಾನೆ:

ಜಾತಿಸೂತಕವ ಶಿವಭಕ್ತರೊಳು ಕಲ್ಪಿಸುತೆ|
ಪೂತವಹ ಜಂಗಮಂ ಕಂಡೊಡೆಂ ವಂದಿಸದೆ
ಪ್ರೀತಿಯಿಂ ಪಾದೋದಕ ಪ್ರಸಾದವ
ಎಂಜಲೆಂದಾ ದೂಷಿಸುತಮನ್ಯ||
ಜತಿಯಂಗನೆಯರುಚ್ಛಿಷ್ಟಮಂ ಭುಂಜಿಸಿಯ
ನೀತಿಯಿಂ ಪರಮತವ ನೆಮ್ಮಿ ನರಕಕ್ಕಿಳಿವ
ಪಾತಕರ ನಲ್ಲದೆಲ್ಲಿಯು ಕಾಣೆ
ಶಿವಭಕ್ತರುಗಳ ಪರಿಭಾವಿಸಿದೊಡೆ||

ಹೀಗೆ ದಿಕ್ಕು ದಿಸೆಯಿಲ್ಲದೆ ಅನಾಥಪ್ರಜ್ಞೆ ಅನುಭವಿಸುತ್ತಿದ್ದ ಲಿಂಗಾಯತ ಸಂಸ್ಕೃತಿಯ ಜಾಗೃತಿಗೆ ಒಬ್ಬ ಮಹಾನುಭಾವನ ಹುಟ್ಟು ಅನಿವಾರ್ಯವಾಗಿತ್ತು. ಆಗ ಪರಶಿವನ ಚಿತ್ಕಳೆಯ ಸ್ವರೂಪವಾಗಿಯೇ ಸಿದ್ಧಲಿಂಗೇಶ್ವರರು ಜನಿಸುತ್ತಾರೆ.

೧೫ನೇ ಶತಮಾನದ ಉತ್ತರಾರ್ಧದಲ್ಲಿ ಎಡೆಯೂರು ಸಿದ್ಧಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ಲಿಂಗಾಯತ ಧರ್ಮ ಸಂಸ್ಕೃತಿಗಳು ಉನ್ನತೀಕರಣಗೊಂಡವು. ಪ್ರಾಯಶಃ ಲಿಂಗಾಯತ ಧರ್ಮದ ಬೆಳವಣಿಗೆಯ ಇತಿಹಾಸದಲ್ಲಿ ಪ್ರಭುದೇವರನ್ನು ಬಿಟ್ಟರೆ ಸಿದ್ಧಲಿಂಗೇಶ್ವರರೇ ಪ್ರಭಾವಶಾಲಿಗಳಾಗಿ ಮಿಂಚಿದರು. ಸಿದ್ಧಲಿಂಗೇಶ್ವರರ ಸಮಕಾಲೀನ ಶಿಷ್ಯರಾದ ವಿರಕ್ತ ತೋಂಟದಾರ್ಯ ಮತ್ತು ಶಾಂತೇಶ ಎಂಬ ಕವಿಗಳು ಎರಡು ಪುರಾಣಗಳನ್ನು ರಚಿಸಿದ್ದು, ಚೆನ್ನವೀರ ದೇಶಿಕನು ಷಟ್ಸ್ಥಲ ವಲ್ಲಭ ಎಂಬ ಕೃತಿ ರಚಿಸಿದ್ದು ಗಮನಾರ್ಹ. ಶಾಂತೇಶ ಕವಿಯು ತೋಂಟದ ಸಿದ್ಧಲಿಂಗೇಶ್ವರರ ಶಿಷ್ಯನಾದ ಗುಬ್ಬಿಯ ಮಲ್ಲಣ್ಣನ ಮೊಮ್ಮಗನಾದ ಮಲ್ಲಣಾರ್ಯನ ಮಗ ಎನ್ನುವುದು ಇನ್ನೂ ವಿಶೇಷ.

ಸಿದ್ಧಲಿಂಗೇಶ್ವರರು ಬಸವಾದಿ ಶಿವಶರಣರ ವಚನಗಳನ್ನು ಉಳಿಸುವುದರ ಜೊತೆಗೆ ತಾವೂ ಸ್ವತಃ ಸ್ವಾನುಭಾವದ ನೆಲೆಯಲ್ಲಿ ವಚನ ರಚನೆ ಮಾಡಿ, ಅವುಗಳನ್ನು ಸ್ಥಲಾನುಗುಣವಾಗಿ ವಿಂಗಡಿಸಿ, ಆ ವಚನ ಸಂಕಲನಕ್ಕೆ “ಷಟ್ಸ್ಥಲ ಜ್ಞಾನಸಾರಾಮೃತ” ಎಂಬ ಮೌಲಿಕ ಹೆಸರಿಟ್ಟಿರುವುದು ಬಸವೋತ್ತರ ಯುಗದ ವಚನ ಸಾಹಿತ್ಯ ಪರಂಪರೆಗೆ ಒಂದು ಮಾದರಿಯನ್ನು ಒದಗಿಸಿತು. ಈ ಸಂಕಲನದಲ್ಲಿ ಒಟ್ಟು ೭೦೧ ವಚನಗಳೂ ೭ ವೃತ್ತಗಳೂ ಇವೆ. ಸಿದ್ಧಲಿಂಗೇಶ್ವರರು ೭೦೧ ವಿರಕ್ತರ ಪಡೆಯನ್ನು ಸಿದ್ಧಗೊಳಿಸಿದರು. ಇವರಿಗಿಂತ ಮೊದಲು ನೂರೊಂದು ವಿರಕ್ತರು ಆಗಲೇ ಒಂದಿಷ್ಟು ಶರಣ ಸಾಹಿತ್ಯದ ಪುನರುತ್ಥಾನದ ಕಾರ್ಯ ಮಾಡಿದ್ದರು. ಇವರ ಮುಂದುವರಿದ ಭಾಗವೆಂಬಂತೆ ೭೦೧ ವಿರಕ್ತರು ಕೋಳಿ ಕೂಗಿದಲ್ಲೆಡೆ ಒಂದು ಮಠ ನಿರ್ಮಾಣ ಮಾಡಿ, ಶರಣ ಸಂಸ್ಕೃತಿಯನ್ನು ಉಳಿಸಬೇಕೆಂಬ ಆಶಯವನ್ನು ಸಿದ್ಧಲಿಂಗೇಶ್ವರರು ಹೊಂದಿದ್ದರು.

ಬಸವಾದಿ ಪ್ರಮಥರು ಏಳುನೂರಾ ಎಪ್ಪತ್ತು ಅಮರಗಣಂಗಳು, ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರು ಕೂಡಿ ಕಟ್ಟಿದ ಲಿಂಗಾಯತ ಧರ್ಮವನ್ನು ಉಳಿಸಲು ಗೃಹಸ್ಥಾಶ್ರಮಿ ಭಕ್ತರಿಂದ ಸಾಧ್ಯವಾಗದು. ಆದ್ದರಿಂದ ಮಠ ಪರಿಕಲ್ಪನೆಯ ಮೂಲಕ ಈ ಧರ್ಮವನ್ನು ಸಾಂಸ್ಥೀಕರಣ ಮಾಡಬೇಕೆಂದು ಸಿದ್ಧಲಿಂಗೇಶ್ವರರು ಅಪೇಕ್ಷೆ ಪಟ್ಟರು. ಯಾವುದೇ ಒಂದು ಧರ್ಮ ಭಕ್ತರ ಸಂಸಾರದ ಜಂಜಾಟದಲ್ಲಿ ಅಸ್ತಿತ್ವ ಕಳೆದುಕೊಳ್ಳ ಬಾರದು ಎಂಬ ಕಾರಣಕ್ಕಾಗಿ, ವಿರಕ್ತರಾದವರ ಕೈಯಲ್ಲಿ ಈ ಧರ್ಮ ಹೆಚ್ಚು ಸಂರಕ್ಷಣಾತ್ಮಕ ನೆಲೆಯಿಂದ ಉಳಿಯಬಹುದು. ಸಂಸಾರ ತ್ಯಾಗ ಮಾಡಿದ ವಿರಕ್ತರಲ್ಲಿ ವ್ಯಾಮೋಹ ಅಹಂಕಾರ ಮಮಕಾರಗಳು ಕಡಿಮೆಯಾಗುವ ಕಾರಣ, ಲಿಂಗಾಯತ ಧರ್ಮವು ಹೆಚ್ಚು ವಿಸ್ತಾರವಾಗಿ ಬೆಳೆಯಬಹುದು ಎಂದು ಸಿದ್ಧಲಿಂಗೇಶ್ವರರು ಅಲ್ಲಮ ಏರಿದ ಶೂನ್ಯಪೀಠಕ್ಕೆ ಮರುಜೀವ ನೀಡಿ, ಶೂನ್ಯಪೀಠದ ನಿರಂಜನ ಪರಂಪರೆಯನ್ನು ಸ್ಥಾಪಿಸುವ ಮೂಲಕ ಈ ಧರ್ಮವನ್ನು ಸಾಂಸ್ಥೀಕರಣಗೊಳಿಸಿದರು.

ಗೋಸಲ ಸಿದ್ಧೇಶ್ವರ ಪರಂಪರೆ :

ತೋಂಟದ ಸಿದ್ಧಲಿಂಗೇಶ್ವರರು ತಮ್ಮ ಷಟ್ಸ್ಥಲ ಜ್ಞಾನಸಾರಾಮೃತ ಕೃತಿಯಲ್ಲಿ ಮತ್ತು ಎಳಂದೂರು ಪರ್ವತ ಶಿವಯೋಗಿ ತನ್ನ ಏಕೋತ್ತರ ಶತಸ್ಥಲ ಕೃತಿಯಲ್ಲಿ “ಹರದನಹಳ್ಳಿಯ ಗೋಸಲದೇವರು” ಎಂಬ ಗುರುಪರಂಪರೆಯ ಹೆಸರನ್ನು ಹೇಳುತ್ತಾರೆ. ಹರದನಹಳ್ಳಿಯಲ್ಲಿ ವಾಸವಾಗಿದ್ದ ಗೋಸಲ ಸಿದ್ಧೇಶ್ವರರೇ ಈ ಗೋಸಲ ಪರಂಪರೆಯ ಸ್ಥಾಪಕರು. ಗೋಸಲ ಶಬ್ದ ನಿಷ್ಪತ್ತಿ ಬಗ್ಗೆ ಪ್ರೊ. ಸಿ. ಮಹಾದೇವಪ್ಪನವರು ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ವಜ್ರ ಮಹೋತ್ಸವ ಸಮಾರಂಭದ ನಿಮಿತ್ಯ ಸಮರ್ಪಿಸಿದ “ದಾಸೋಹ ಸಿರಿ” ಎಂಬ ಬೃಹತ್ ಅಭಿನಂದನ ಸಂಪುಟದಲ್ಲಿ ಸುದೀರ್ಘವಾದ ಒಂದು ಲೇಖನವನ್ನೇ ಬರೆದಿದ್ದಾರೆ. ಬೌದ್ಧ-ಜೈನ ಧರ್ಮಗಳು ಉಗಮಗೊಂಡ ಕ್ರಿ.ಪೂ. ಕಾಲದಲ್ಲಿಯೇ ಆಜೀವಕರು ಎಂಬ ಒಂದು ಪಂಗಡವಿತ್ತು. ಆ ಪಂಗಡವೇ ಮುಂದೆ ಬೆಳೆಯುತ್ತ ಈ ಗೋಸಲ ಪರಂಪರೆ ಮುನ್ನಡೆಸಿತು ಎಂದು ಬರೆದಿದ್ದಾರೆ. ಗೋಸಲ ಶಬ್ದದ ನಿಷ್ಪತ್ತಿ ಬಗ್ಗೆ ವಿವೇಚಿಸಲು ಅವರು ಬೃಹತ್ ಕಾಂತಾರವನ್ನೇ ಪ್ರವೇಶಿಸಿದ್ದಾರೆ. ಅವರ ನಿಷ್ಪತ್ತಿ ವಿವರಗಳನ್ನು ಅರ್ಥೈಸಿಕೊಳ್ಳುವುದು ತುಂಬ ಕಷ್ಟ. ಆದರೂ ಒಂದು ಮಹತ್ವದ ಸಂಗತಿಯತ್ತ ಅವರು ಗಮನ ಸೆಳೆಯುತ್ತಾರೆ.

ಗೋಸಲ ಸಿದ್ಧೇಶ್ವರರು ಬೆಳಗಾವಿ ಜಿಲ್ಲೆಯ ಮುನವಳ್ಳಿ ಪಂಚಲಿಂಗೇಶ್ವರ ದೇವಸ್ಥಾನದ ಸಾನ್ನಿಧ್ಯದಲ್ಲಿ ನಿರಂಜನ ಪಟ್ಟಾಧಿಕಾರವನ್ನು ಸ್ವೀಕರಿಸಿದರೆಂದು, ಅವರು ಮುನವಳ್ಳಿ ಸಮೀಪವಿರುವ ಸೊಗಲ ಕ್ಷೇತ್ರದಲ್ಲಿ ತಪಸ್ಸು ಮಾಡಿದರೆಂದು ದಾಖಲಿಸಿದ್ದಾರೆ. ಗೋಸಲ ಎಂಬ ಶಬ್ದವು ಪಲ್ಲಟವಾಗಿ ಆಧುನಿಕ ಕಾಲದಲ್ಲಿ ಸೊಗಲವಾಗಿರಬಹುದು ಎಂಬ ತೀರ್ಮಾನಕ್ಕೆ ಪ್ರೊ. ಸಿ. ಮಹಾದೇವಪ್ಪ ಮತ್ತು ಚನ್ನಪ್ಪ ಎರೇಸೀಮೆ ಅವರು ಬರುತ್ತಾರೆ. ಈ ಕುರಿತು ಇನ್ನೂ ಸಾಕಷ್ಟು ಚರ್ಚೆಯಾಗಿ ನಿಷ್ಕರ್ಷೆಯಾಗಬೇಕಾದ ಅನಿವಾರ್ಯತೆ ಇದೆ.

ಗೋಸಲ ಸಿದ್ಧೇಶ್ವರರೇ ಸಿದ್ಧಗಂಗಾಮಠವನ್ನು ಸ್ಥಾಪಿಸಿದರೆಂದು ಚನ್ನಪ್ಪ ಎರೇಸೀಮೆ ಮೊದಲಾದವರು ಹೇಳುತ್ತಾರೆ. ಆದರೆ ತುಮಕೂರಿನ ಹಿರಿಯ ಸಂಶೋಧಕರಾದ ಡಾ. ಯೋಗೀಶ್ವರಪ್ಪ ಅವರು ಇತ್ತೀಚೆಗೆ ಹೊಸ ಶಾಸನ ಸಂಶೋಧನೆ ಮಾಡಿ, ಎಡೆಯೂರು ಸಿದ್ಧಲಿಂಗೇಶ್ವರರೇ ಸಿದ್ಧಗಂಗಾಮಠವನ್ನೂ ಸ್ಥಾಪಿಸಿದ್ದಾರೆಂದು ಹೇಳುತ್ತಾರೆ.

ಜಂಗಮ ಎಂಬ ಪದಕ್ಕೆ ಎಡೆಯೂರು ಸಿದ್ಧಲಿಂಗೇಶ್ವರರು ಹೊಸ ಭಾಷ್ಯವನ್ನೇ ಬರೆದರು. ಅಲ್ಲಿಯವರೆಗೆ ಜಂಗಮ ಎಂದರೆ ಒಂದು ಜಾತಿಯಲ್ಲಿ ಹುಟ್ಟಿದವರೆಂಬ ಪರಿಕಲ್ಪನೆಗೆ ಬದಲಾಗಿ, ಯಾರು ಬೇಕಾದರೂ ಷಟ್ಸ್ಥಲ ಸಿದ್ಧಾಂತದ ಸಾಧನೆ ಮಾಡುವ ಮೂಲಕ ಜಂಗಮಸ್ಥಲಕ್ಕೆ ಏರಬಹುದೆಂಬುದನ್ನು ಸಿದ್ಧಲಿಂಗರು ತೋರಿಸಿಕೊಟ್ಟರು. ಹೀಗಾಗಿ ವಿರಕ್ತ ತೋಂಟದಾರ್ಯನು ತನ್ನ ಸಿದ್ಧೇಶ್ವರ ಮಹಾಪುರಾಣದುದ್ದಕ್ಕೂ ಸಿದ್ಧಲಿಂಗ ಶಿವಯೋಗಿಗಳನ್ನು ಶ್ರೇಷ್ಠ ಜಂಗಮರೆಂದೇ ಕರೆದಿರುವುದನ್ನು ಗಮನಿಸಬಹುದು. ಸಿದ್ಧಲಿಂಗ ಶಿವಯೋಗಿಗಳ ಈ ಜಂಗಮಸ್ಥಲದ ಸಾಧನೆಯಿಂದ ವಿರಕ್ತರೇ ನಿಜವಾಗಿಯೂ ಜಂಗಮ ಪದಕ್ಕೆ ಅರ್ಹರೆಂಬ ನಂಬಿಕೆ ನಮ್ಮ ಉತ್ತರ ಕರ್ನಾಟಕದಲ್ಲಿ ಉಳಿದು ಬಂದಿದೆ.

ಪ್ರಾಯಶಃ ಕರ್ನಾಟಕದಲ್ಲಿ ಇಂದು ಅಸ್ತಿತ್ವದಲ್ಲಿರುವ ಎಲ್ಲ ಲಿಂಗಾಯತ ಮಠಗಳು ಸಿದ್ಧಲಿಂಗೇಶ್ವರರ ತರುವಾಯವೇ ಹುಟ್ಟಿಕೊಂಡಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ವೀರಶೈವ ಗುರುಪೀಠಗಳಲ್ಲಿ ಒಂದಾದ ರಂಭಾಪುರಿ ಬಾಳೇಹಳ್ಳಿ ಪೀಠವೂ ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣದ ಪ್ರಕಾರ ೧೫ನೇ ಶತಮಾನದಲ್ಲಿಯೇ ಹುಟ್ಟಿರುವಂತಹದು. ೧೮ನೇ ಶತಮಾನದವರಿಗೂ ಚತುರಚಾರ್ಯ ಪೀಠಗಳಷ್ಟೇ ಅಸ್ತಿತ್ವದಲ್ಲಿದ್ದವು. ಆ ನಾಲ್ಕು ಪೀಠಗಳು ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಿದ ನಾಮ್ನಾಯ ಪೀಠಗಳಂತೆ ಪರಿಭಾವಿಸಲಾಗಿತ್ತು. ಆದರೆ ಈ ನಾಲ್ಕೂ ಮಠಗಳ ಮೂಲವು ಕಾಳಾಮುಖ ಸಂಪ್ರದಾಯದಿಂದ ಬಂದಿದ್ದ ಕಾರಣ, ಕಾಳಾಮುಖರಲ್ಲಿ ಪಂಚಕಳಶ, ಪಂಚಸೂತ್ರ, ಪಂಚತತ್ವ ಎಂಬ ಪರಿಭಾಷೆಗಳಿರುವುದರಿಂದ ತದನಂತರ ಕಾಶಿ ವಿಶ್ವಾರಾಧ್ಯಪೀಠವನ್ನು ಸೇರಿಸಿ, ಪಂಚಪೀಠಗಳೆಂದು ಪರಿಗಣಿಸಲಾಯಿತು.

ಹೀಗಾಗಿ ಲಿಂಗಾಯತ (ವೀರಶೈವರ ಗುರುಪೀಠಗಳನ್ನೂ ಒಳಗೊಂಡಂತೆ) ಎಲ್ಲ ಮಠಗಳು ಅಸ್ತಿತ್ವಕ್ಕೆ ಬಂದಿದ್ದು ತೋಂಟದ ಸಿದ್ಧಲಿಂಗ ಶಿವಯೋಗಿಗಳ ತರುವಾಯವೇ. ಹೀಗಾಗಿ ಡಾ. ಎಂ. ಚಿದಾನಂದಮೂರ್ತಿಗಳು “ಜಂಗಮ ಜಾತಿಯಲ್ಲಿ ಅನುಶ್ರೇಣಿ” ಎಂಬ ಸಂಶೋಧನಾತ್ಮಕ ಲೇಖನದಲ್ಲಿ ಗುರುಪೀಠದವರಿಗಿಂತ ಹೆಚ್ಚಿನ ಗೌರವ ಸ್ಥಾನ ಮಾನ ವಿರಕ್ತಮಠಾಧೀಶರಿಗೆ ಸಲ್ಲುತ್ತದೆ ಎಂದು ನಿಷ್ಪಕ್ಷಪಾತ ಶೋಧ ದೃಷ್ಟಿಯಿಂದ ಪ್ರತಿಪಾದಿಸಿದ್ದಾರೆ.

“ಒಬ್ಬ ಜಂಗಮನಾಗಲಿ ಭಕ್ತನಾಗಲಿ “ವಿರಕ್ತ” ದೀಕ್ಷೆಯನ್ನು ಪಡೆದ ಮೇಲೆ ಅವನು ನಿರಾಭಾರಿಯೂ ನಿರಂಜನನೂ ಆಗುತ್ತಾನೆ. ಅವನ ಪೂರ್ವಾಶ್ರಮದ ತಂದೆ ತಾಯಿ ಇತ್ಯಾದಿ ಸಂಬಂಧಗಳೆಲ್ಲ ಕಡಿದು ಹೋಗುವುದಲ್ಲದೆ ಅವನು ಜಂಗಮನಾಗಿದ್ದರೆ ಎಲ್ಲ ಗೋತ್ರ, ಸೂತ್ರ, ಪ್ರವರಗಳನ್ನು ಕಳೆದುಕೊಳ್ಳುತ್ತಾನೆ. ಪಟ್ಟಾಧ್ಯಕ್ಷರದು ಕರ್ಮದೀಕ್ಷೆ ಯೆನ್ನಿಸಿಕೊಂಡರೆ ವಿರಕ್ತನದನ್ನು “ಲಯದೀಕ್ಷೆ” ಎಂದು ಕರೆಯಲಾಗುತ್ತದೆ. ಪಂಚಪೀಠಾಧ್ಯಕ್ಷರಿಗೆ “ಸಿಂಹಾಸನ” ಗೌರವವಿದ್ದರೆ, ವಿರಕ್ತನಿಗೆ “ಶೂನ್ಯಸಿಂಹಾಸನ”ವಿದೆ. …..ಹಿಂದೂ ಸಮಾಜದಲ್ಲಿ ಎಲ್ಲವೂ ಇರುವ ರಾಜನಿಗೇ ಪ್ರಥಮ ಸ್ಥಾನವಿದ್ದರೂ, ಅಂತಹ ರಾಜನೂ ಏನೂ ಇಲ್ಲದ ಸನ್ಯಾಸಿಯ ಮುಂದೆ ಬಾಗಲೇಬೇಕು; ಸನ್ಯಾಸಿಯ ಹಿರಿಮೆಯನ್ನು ಒಪ್ಪಿಕೊಳ್ಳಬೇಕು. ಈ ದೃಷ್ಟಿಯಿಂದ ನೋಡಿದರೆ, *ತಾತ್ವಿಕವಾಗಿ ಅನುಶ್ರೇಣಿಯಲ್ಲಿ ವಿರಕ್ತರು ಪೀಠಾಧ್ಯಕ್ಷರಿಗಿಂತ ಮೇಲೆ ಇರಬೇಕಾಗುತ್ತದೆ* . ವಿರಕ್ತನಿಗೆ ಪೂರ್ವಾಶ್ರಮದ ಬಾಲ್ಯದಲ್ಲಿ (ಅವನು ಜಂಗಮನಾಗಿದ್ದರೆ) ಪಟ್ಟದ್ದೇವರಿಂದ ದೀಕ್ಷೆ ಆಗಿದ್ದರೂ ಮುಂದೆ ವಿರಕ್ತ ದೀಕ್ಷೆಯನ್ನು ಕೊಡುವಾತ ಇನ್ನೊಬ್ಬ ವಿರಕ್ತನೇ ಹೊರತು ಪಟ್ಟದ್ದೇವರಲ್ಲ. ಒಂದು ಊರಿಗೆ ವಿರಕ್ತರು ಬಂದರೆ ಅವರನ್ನು ಪಟ್ಟಾಧ್ಯಕ್ಷನಾಗಲಿ ಇತರ ಜಂಗಮನಾಗಲಿ ಹೋಗಿ ಇದಿರುಕೊಂಡು ಬರಬೇಕೆಂದು ಹಿರೇಮಠರೇ ಒಪ್ಪಿಕೊಳ್ಳುತ್ತಾರೆ….. *ತಾತ್ವಿಕವಾಗಿ ಅನುಶ್ರೇಣಿಯ ಪ್ರಶ್ನೆ ಬಂದಾಗ ವಿರಕ್ತಪೀಠಗಳಿಗೆ ಮೊದಲ ಸ್ಥಾನ* ” (ಡಾ. ಎಂ. ಚಿದಾನಂದಮೂರ್ತಿ : ವೀರಶೈವ ಗುರುಮಠಗಳು ಮತ್ತು ವಿರಕ್ತಮಠಗಳು ಲೇಖನ ವೀರಶೈವ ವಿಚಾರ ಸಂಕಿರಣ ಕೃತಿ ಪು. ೧೪೫-೧೪೭)

ತೋಂಟದ ಸಿದ್ಧಲಿಂಗೇಶ್ವರರು ಬರದೇ ಹೋಗಿದ್ದರೆ, ಲಿಂಗಾಯತ ಧರ್ಮವು ನಾಮಾವಶೇಷವಾಗುತ್ತಿತ್ತು. ಈ ಧರ್ಮವನ್ನು ಮತ್ತೆ ಉಳಿಸಿ ಬೆಳೆಸಿ, ಇಲ್ಲಿಯವರೆಗೆ ಮುನ್ನಡೆಸಿದ ಮಹಾಶಕ್ತಿ ಸಿದ್ಧಲಿಂಗೇಶ್ವರರೆ ಆಗಿರುವುದು ಸಮಸ್ತ ಲಿಂಗಾಯತರು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: 9902130041

Don`t copy text!