ಗುರುಪುರದ ಮಲ್ಲಯ್ಯ

ಶ್ರಾವಣ ಚಿಂತನ ಮಾಲಿಕೆ-2

ಗುರುಪುರದ ಮಲ್ಲಯ್ಯ

 

ನಮ್ಮ ಅರಿವೇ ನಮಗೆ ಗುರು .
ನಾವು ತಿಳಿದುಕೊಂಡ ಹಾಗೆ
ಹಲವಾರು ಶಿಷ್ಯರನ್ನು ತಯಾರು ಮಾಡುವವನೇ ಗುರುವು.ಎಂದು
ನಮ್ಮೊಳಗಿನ ಆಂತರಿಕ ಅರಿವನ್ನು ಮೊದಲು ನಾವು ಬಡಿದು ಎಚ್ಚರಿಸಿಕೊಳ್ಳಬೇಕು .
ನಂತರ ನಮ್ಮ ನಮ್ಮ ಆತ್ಮೋನ್ನತಿಯನ್ನು ನಾವು ಮಾಡಿಕೊಂಡಾಗ ನಿಜದ ಅರಿವು ನಮಗಾಗುವುದು .
ಒಂದು ಅಕ್ಷರ ವ ಕಲಿಸಿದಾತ ಎಮಗೆ ಗುರು .

ಈ ಗುರುವಿಗೆ ತನ್ನದೇ ಆದ ಒಂದು ಘನತೆ ಇದೆ, ಗೌರವ ಇದೆ ಅದನ್ನು ನಾವು ಯಾವತ್ತೂ ಕಳೆದು ಕೊಳ್ಳಬಾರದು.
ಸಮಾಜವು ಯಾರು ಹೇಳಿದ ಮಾತನ್ನು ಕೇಳಲಾರದು. ಆದರೆ ಗುರುವು ಹೇಳಿದ ಮಾತುಗಳನ್ನು ನಂಬಿ ನಡೆಯುತ್ತದೆ. ಆ ಗುರುವಿನ ಮೇಲೆ ಸಂಪೂರ್ಣ ವಿಶ್ವಾಸ ಇಡುತ್ತದೆ .ಆತನಲ್ಲಿರುವ ಜ್ಞಾನ ವನ್ನು ಪಡೆಯಲು ಗೋಗರೆಯುತ್ತದೆ. ಉದಾ ನೋಡಲಾಗಿ (ಏಕಲವ್ಯ ಹಾಗೂ ಗುರುದ್ರೋಣರ ಒಂದು ಸಂಬಂಧ ವನ್ನು ನೋಡಬಹುದು )ಕೊನೆಗೆ ಗುರುವನ್ನು ಮೀರಿಸುವ ವಿದ್ಯೆಯನ್ನು ಪಡೆದುಕೊಳ್ಳುವ ಶಿಷ್ಯ ,ಕೊನೆಗೆ ತಾನೇ ಮಠದ ಅಧಿಕಾರ ವನ್ನು ಪಡೆದುಕೊಂಡ ಉರಿಲಿಂಗ ಪೆದ್ದಿ, ಸಂತ ಶರೀಫ ಮತ್ತು ಗುರು ಗೋವಿಂಧ ಭಟ್ಟ. ಸ್ವಾಮಿ ವಿವೇಕಾನಂದ ಹಾಗೂ ಪರಮಹಂಸರು ಇವರೆಲ್ಲರೂ ನಮಗೆ ಆದರ್ಶ.
ಗುರು ಶಿಷ್ಯರ ಸಂಬಂಧ ವನ್ನು ನೋಡಲಾಗಿ
ಅನೇಕ ಶಿಷ್ಯ ಬಳಗವನ್ನು ಹೊಂದಿ ಪ್ರಸಿದ್ಧಿ ಪಡೆದ ಸ್ವಾಮಿವಿವೇಕಾನಂದರು ಹಾಗೂ ಗೌತಮ ಬುದ್ಧ ಇವರ ಜೀವನ ಹಲವಾರು ಶಿಷ್ಯ ವರ್ಗವನ್ನು ಕಾಣುವ ರೀತಿ ನಿಜಕ್ಕೂ ಅಚ್ಚರಿಯೇ ಸರಿ .

ಹಲವಾರು ಶಿಷ್ಯರನ್ನು ತಯಾರು ಮಾಡುವವನೇ ಗುರುವು .
ತನ್ನ ಆತ್ಮದ ಅರಿವೇ, ಅವನ ಗುರು. ಅವನಿಗೆ ಬೇರೆ ಗುರುಗಳ ಅವಶ್ಯಕತೆ ಬೀಳುವವದಿಲ್ಲ .

ಹಾಗೇ 12 ನೇ ಶತಮಾನದ ಶ್ರೇಷ್ಠ ಶರಣರು, ನಮಗೆ ಗುರುಸ್ಥಾನದಲ್ಲಿ ನಿಂತು ಕೈ ಮಾಡಿ ಕರೆದಂತೆ ಭಾಸವಾಗುತ್ತದೆ .

ಗುರುಪುರದ ಮಲ್ಲಯ್ಯ, ಅವರ ವೈಯಕ್ತಿಕ ವಿಷಯದ ಬಗ್ಗೆ ನಮಗೆ ಅಷ್ಟೊಂದು ವಿವರಣೆಯು ಸಿಕ್ಕಿಲ್ಲ.
ಇವರು ಬರೆದ ವಚನಗಳನ್ನೇ, ಆಧರಿಸಿ ಇವರ ಕಾಲವನ್ನು ನಾವು ಗುರುತಿಸಿ, 12 ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರು ಅಂತಾ ಗುರುತಿಸಿ ಹೇಳಬಹುದು .
ಇವರ ಕಾಲ :- 12 ನೇ ಶತಮಾನ ಕ್ರ ಶ 1160 .
ವಚನಗಳ ಅಂಕಿತನಾಮ:- ಪುರದ ಮಲ್ಲಯ್ಯ.
ಇವರು ಹುಟ್ಟಿದ ಸ್ಥಳ ಹಾಗೂ ಐಕ್ಯ ಸ್ಥಳ ನನಗೆ ತಿಳಿದು ಬಂದಿಲ್ಲ.
ವಚನಗಳ ಲಕ್ಷಣ :- ಕಾಲಕ್ಕೆ ತಕ್ಕಂತೆ ಬದಲಾಗುವ ವ್ಯಕ್ತಿಯ ನಡೆ ನುಡಿ ಒಳ್ಳೆಯದು ಕೆಟ್ಟದು ಎನ್ನುವ ಮನ ತಿಳಿಸುವುದು .
ದೊರೆತ ವಚನಗಳು :- ನಾಲ್ಕು

ಹೊತ್ತಿಂಗೊಂದು ಪರಿಯಹ ಮನವ ಕಂಡು ದಿನಕ್ಕೊಂದು ಪರಿಯಹ ತನುವ ಕಂಡು ಅಂದಂದಿಗೆ ಭಯದೋರುತ್ತಿದೆ. ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು ಅಂದಂದಿಂಗೆ ಭಯವಾಗುತ್ತಿದೆ. ಈ ಮನ ನಿಮ್ಮ ನೆನೆಯಲೀಯದು, ಮನ ಹಗೆಯಾದುದಯ್ಯಾ ಸದ್ಗುರುವೆ ಪುರದ ಮಲ್ಲಯ್ಯಾ!
ಹೊತ್ತಿಗೊಂದು ಪರಿಯಹ ಮನವ ಕಂಡು ದಿನಕ್ಕೊಂದು ಪರಿಯಹ ತನುವ ಕಂಡು ಈ ಕಾಲ ಎನ್ನುವುದು ಪ್ರತಿ ನಿತ್ಯ, ಪ್ರತಿ ದಿವಸ, ಪ್ರತಿ ಕ್ಷಣ, ನಿಂತಲ್ಲೇ ನಿಲ್ಲದು .ಹಾಗೇ ಒಬ್ಬ ವ್ಯಕ್ತಿಯ ಮನವೂ ಕೂಡಾ ಚಂಚಲವಾಗುತ್ತ, ಬದಲಾಗುತ್ತ ಹೋಗುತ್ತದೆ .ಪ್ರಕೃತಿ ಪುರುಷನ ಎದುರು ಎದೆ ತಟ್ಟಿ ನಿಲ್ಲುವ ಎದೆಗಾರಿಕೆ ಯಾರಿಗೆ ಇದೆ .

ಪ್ರತಿ ನಿಮಿಷ ನಿಮಿಷಕ್ಕೂ ಸಮಯ ಜಾರಿ ಹೋಗುವಂತೆ ವ್ಯಕ್ತಿಯ ಮನಸ್ಸೂ ಕೂಡಾ ಬದಲಾಗುತ್ತ , ಬೇಸರಿಸುತ್ತ ಹೋಗುವುದನ್ನು ಗುರುಪುರದ ಮಲ್ಲಯ್ಯ ನವರ ವಚಗಳಲ್ಲಿ ನಾವು ಕಾಣಬಹುದು .

ಮಾನವನ ಸ್ವಭಾವವೇ ಹಾಗೇ ಹಿಂದಿನದನ್ನು ಮರೆಯುವುದಿಲ್ಲ. ಮುಂದೆ ಆಗುವ ಕಾರ್ಯದ ಬಗ್ಗೆ ಗೊಣಗುಡುತ್ತ ,ನೂರೆಂಟು ರಗಳೆಗಳನ್ನು, ತಲೆಗೆ ತುರುಕುತ್ತ ಆತಂಕ ,ಭಯ ,ತಲ್ಲಣ ಗಳಲ್ಲಿಯೇ ಬದುಕು ಸವೆಸುತ್ತ ನಡೆಯುವ ಮಾನವ. ಅದೇ ಚಿಂತೆ ,ಚಿಂತನದಲ್ಲಿ ತನ್ನ ಸಂತಸವನ್ನು ಮರೆಯುತ್ತ ಸಾಗುವ, ದುರಿತ ಕಾಯಕವನ್ನು ಮಾಡುತ್ತ ಚಡಪಡಿಸುತ್ತ ,
ತನ್ನ ಸಂತಸದ ದಿನಗಳನ್ನು ಕಳೆಯುತ್ತ, ಹುಟ್ಟಿನಿಂದ ಸಾಯುವವರೆಗೆ ಒಂದಿಲ್ಲದ ಒಂದು ಚಿಂತೆಯಲ್ಲಿ ತನ್ನ ಮನಸ್ಸನ್ನು ಕೆಡಿಸಿಕೊಂಡು ಭಯಗೊಂಡು ತಿರುಗುವ ಮಾನವನ ಬುದ್ಧಿಗೆ ಏನನ್ನಲಿ ಮಲ್ಲಯ್ಯ ಎನ್ನುವರು ಶರಣ ಗುರುಪುರದ ಮಲ್ಲಯ್ಯ.

ಕಾಲಕ್ಕೆ ತಕ್ಕಂತೆ ವ್ಯಕ್ತಿಯ ಮನ ಬದಲಾಗುತ್ತ ಹೋಗುವ, ಮನದ ತಲ್ಲಣ, ಆತಂಕ ,ಭಯ ,ದುಗುಡ, ದುಮ್ಮಾನ, ಒಳ್ಳೆಯದು ,ಕೆಟ್ಟದ್ದು ಹೀಗೆ ಹಿಂದಿನದನ್ನು ಮೆಲಕು ಹಾಕುತ್ತ ನೂರೆಂಟು ವಿಚಾರಗಳ ಒಳಮಿಡಿತ ಭಾವಕ್ಕೆ ಮನಸ್ಸು ಚಡಪಡಿಸುತ್ತ ಹೋಗುತ್ತದೆ .

ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು ಅಂದಂದಿಗೆ ಭಯವಾಗುತ್ತಿದೆ

ಒಂದು ನಿಮಿಷದ ಯೋಚನೆ ಸಾವಿರ ಕೆಲಸವನ್ನೂ ಮಾಡಬಲ್ಲದು .ಒಂದು ನಿಮಿಷದ ಯೋಚನೆ ಸಾವಿರ ದಾಳಗಳನ್ನೂ ಹೊಡೆದು ಉರುಳಿಸಲೂ ಬಹುದು .
ಒಳಗಿನ ಅಂತರಾತ್ಮದ ಅರಿವಿನ ಪರಿವೇ ಇಲ್ಲದೇ ಮಾತನಾಡುವ ಮನ ನೂರು ಯೋಚನವ ಮಾಡಿ ,ಮಾತನು ಹೊರ ಗೆಡವಬೇಕು. ಬೇಕು ಬೇಡಗಳ ಲೆಕ್ಕ ಹಾಕುತ್ತ ಎದುರಿಗಿಲ್ಲದವರ ನೆನೆಯುತ್ತ, ಬಯ್ಯುತ್ತ ಭಯದ ವಾತಾವರಣವ ಸೃಷ್ಟಿಸುತ್ತ ನಡೆವ ಪರಕಾಯ ಪ್ರವೇಶ ಎಂಬಂತೆ
ನಡೆವ ಮನವನೊಮ್ಮೆ ಆಲೋಚನೆಗೆ ತೊಡಗಿಸಿಕೊಂಡರೆ ಭಯ ಆಗದಿರಲು ಬಿಟ್ಟಿತೆ?
ಹಗೆಯಿಲ್ಲದ ನುಡಿಗೆ ಬೆದರದಿರು
ಇನಿತು ಬೇಸರವ ಪಡದೆ ,ಸಂತಸವ ನೀ ಕಾಣು .
ಇಬ್ಬಗೆಯ ದ್ವಂದ್ವ ಗಳ ಮಧ್ಯ ಗಟ್ಟಿ ಧ್ವನಿಯನು ನೀ ಕೂಗಿ ಹೊಯ್ದಾಡುವಂತೆ ಮಾಡಿದೆ ನಿನ್ನಯ ಮನ .
ಕಾಣು ನೀ ಸಂತಸ ನೂರು ರಗಳೆಯವ ದೂಡು .ಒಳಿತು ಕೆಡಕುಗಳ ತಟ್ಟೆಯಲಿ ನೀ ತೂಗು .
ಹೂವಾಗು ಮೃದು ಧೋರಣೆಯ ಮನಕ್ಕೆ ಶರಣಾಗು ಗುರು ಮಲ್ಲಯ್ಯ ನಿಗೆ .
ನೀತಿ ಪಾಠದಲಿ ವೇದ್ಯ ವಾಕ್ಯವ ನೀ ಪಾಲಿಸು. ಹಗಲು ಇರುಳು ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಮಯ್ಯ ಮನದ ಕಾಂತಿ ,ತೇಜಸ್ಸು, ಶಕ್ತಿ-ಸಾಮರ್ಥ್ಯ ಇದ್ದ ಸಮಯದಲ್ಲಿ ಇರದು ,ಕಾಲ ಚಲನೆಯಲಿ ಬದಲಾಗುವ ಬಾಲ್ಯದ ವಯಸ್ಸು ,ಹರೆಯ ,ಮುಪ್ಪು ವಿವಿಧ ತಿರುಳಿನಲಿ ಸಂಚರಿಸುವ ನುಡಿ ಮಾತುಗಳನು ಹೇಳುತ್ತಿರುವೆ ಗುರುಪುರದ ಮಲ್ಲಯ್ಯ ನೀ ಕೇಳು ಲಿಂಗವೇ ಎಂದೆನು .

ಈ ಮನ ನಿಮ್ಮ ನೆನೆಯಲೀಯದು ,ಮನ ಹಗೆಯಾದುದಯ್ಯಾ ಸದ್ಗುರುವೆ ಪುರದ ಮಲ್ಲಯ್ಯಾ

ಕ್ಷಣಕ್ಕೂ ಬದಲಾಗುವ ಮಾನವ ಕುಲ ಮನವು ನಿನ್ನ ನೆನೆಯದು ಮಲ್ಲಯ್ಯ. ಅದಾವ ಪರಿಯ ಹಗೆಯೂ ಎನಗಿಲ್ಲ .ದುಷ್ಟ ದುರುಳರ ನಡೆಯನೊಮ್ಮೆ ತಿದ್ದಿ ತೀಡಲು ಎದ್ದು ಬಾ ಮಲ್ಲಯ್ಯ.
ಓ ಸದ್ಗುರುವೆ ದುರಿತ ಪಾಪ ಕರ್ಮವ ಫಲವ ನಾ ನಂಬೆನು . ಭವಿ ಬಂಧನದ ನಿತ್ಯ ಜಂಜಾಟದಲಿ ಮನ ದ್ವೇಷ ಆಗುತ್ತಿದೆ ಮನುಜ ಮಾನವರ ನಡೆ .ಸತ್ಯಕಾಯಕವೇ ಪುಣ್ಯ ಎನ್ನುವೆನು ಮಲ್ಲಯ್ಯ.
ನನ್ನ ಮನದಲ್ಲಿ ಒಳಿತಿನ ನಡೆ ನುಡಿಗಳಿಗೆ ನನ್ನ ಮನದಲ್ಲಿ ತುಡಿಯುವ ಕೆಡುಕಿನ ಒಳ ಮಿಡಿತಗಳೇ ಹಗೆಯಾದುದಯ್ಯ ಮಲ್ಲಯ್ಯ. ನೂರಾರು ಆಲೋಚನೆಯ ಒಳಿತು ಕೆಡಕುಗಳ ತುಯ್ದಾಟದ ಎನ್ನ ಅಂತರಾತ್ಮದ ಮನ .ಬಳಸುವ ಪದ ನುಡಿಗಳು ಹಗೆಯಾಗುತ್ತಿದೆ ಮಲ್ಲಯ್ಯ.

ಓ ಗುರುವೇ ರೂಪಿಸು ಒಳ್ಳೆಯ ಗುಣ ವ್ಯಕ್ತಿತ್ವವ .ಸೋತು ಕಂಗೆಡುವ ಮನುಜ ಮನವನೊಮ್ಮೆ ನೀ ತಿದ್ದಿ ನಡೆಸು ಗುರುಪಟ್ಟಣದ ಮಲ್ಲಯ್ಯ.

ಅವಿಚಾರತೆಯಿಂ ಲೋಕದ ಜಡಮಾನವರಿಗೆ ಎರಗದಿಹುದುಳ್ಳೊಡೆ

ಶಿವಲಿಂಗದ ಮಸ್ತಕದಲ್ಲಿ ಧರಿಸುವದೀ ಕ್ರಮವರಿದು
ಧರಿಸಿದವರು ಶಿವತತ್ತ್ವದ ಮೂಲಜ್ಜಾನದ ಸಂಭವಸಂಧಿಗಳೆನಿಸುವರಾ
ನಿಜಮಹಿಮರ ಚರಣಕೆ ಶರಣೆಂಬೆನು
ಸದ್ಗುರುವೆ ,ಪುರದ ಮಲ್ಲಯ್ಯಾ

ಈ ಸಮಾಜದಲ್ಲಿರುವ ಮಾನವನು ಮಂಗಳಕರವಾದ ಲಿಂಗವನ್ನು ಧರಿಸಿ ,ಭಸ್ಮ ಲೇಪಿತ ಗೊಂಡು ಅವಿಚಾರದಿಂದ ನಡೆಯುವವ, ಶಿವಭಕ್ತಿಯ ಪಥವ ಅರಿದವನ ಪಾದಕ್ಕೆ ನಾನು ಎರಗಲಾರೆ ಮಲ್ಲಯ್ಯ.

ನಿಜವಾದ ಭಕ್ತರಿಗೆ ಶರಣೆಂದು ನಡೆದರೆ ಬೇಡಿದ್ದು ನೀಡುವ ನಮ್ಮ ಗುರು ಮಲ್ಲಯ್ಯ.
ಆ ವಿಚಾರ ಈ ವಿಚಾರ ದುಷ್ಟ ವಿಚಾರದಲ್ಲಿ ಕೈ ಹಾಕಿ ಕಾಲು ಮುಗಿಯುವ ಮೊಗವನೊಮ್ಮೆ ನನಗೆ ತೋರದಿರು ಮಲ್ಲಯ್ಯ.ಎಂದೆನ್ನುವರು

ನಿಜ ಮಹಿಮರ ಭಕ್ತಿಗೆ ಶರಣೆನ್ನುವೆ ಮಲ್ಲಯ್ಯ.
ಶಿವ ಜ್ಞಾನ ಶಿವ ಭಕ್ತಿಯ ಪಥವನರಿಯದ ಮನುಜ ಮಾನವ ನೀ ಒಮ್ಮೆ ಅರಿತು ಸಾಗು.
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ .ಗಂಧ ಲೇಪಿತ ಭಸ್ಮ ಲೇಪಿತ ಮೊಗದಲಿ ಇನಿತು ಕಾಣೆನು ಭಕ್ತಿಯ .ದ್ವೇಷ ಮತ್ಸರವ ಆಚೆ ದೂಡಿ, ಮನದ ಸಂಕೀರ್ಥವ ನೀ ಹೆಚ್ಚಿಸು ಮಲ್ಲಯ್ಯ.
ಲಿಂಗದಲಿ ಜ್ಞಾನಾಮುಖಿ .ಪರಮ ಸುಖಿ .ಕೆಡುಕಿಲ್ಲದ ನಗೆಗೆ ಹುಸಿಯಾಗದಿರಲಿ ಬದುಕು .ಬಿದ್ದು ಎದ್ದು ಗೆದ್ದು ಸಾಗಿಸು ಜಗವ ನೀ ತಂದೆ .
ಇರುಳಾದರೇನು? ಹಗಲಾದರೇನು? ಭಕ್ತಿಯಲಿ ಮೈ ಮರೆವ ಮನವ ನೀ ಸಂತೈಸು .
ಭಕ್ತಿಯಲಿ ಅಪಚಾರ ನುಡಿಯಲ್ಲಿ ಕಾಣದ ಸತ್ಯ ,ಎರಗಲಾರೆ ಚರಣಕೆ .ಕಟ್ಟಿದ ಲಿಂಗವ ಬಿಟ್ಟು ಸುತ್ತಲಾರೆ ಗಿರಿ ಕಾನನವ ,ಎದ್ದು ಬಂದಿರುವೆ ಸತ್ಯದಲಿ ಸಾವಿತ್ರಿ. ಮಿತ್ಯವಲ್ಲದ ಕಾಯಕ ಭಕ್ತಿಯಿಂದಲೇ ಪಾದ ಸೇವೆ ನಾ ,ಮುಟ್ಟಿ ಮಾಡುವೆ ಎಲೆ ಲಿಂಗವೇ ಮಲ್ಲಯ್ಯ .ಎರಗಲಾರೆ ಚರಣಕೆ, ಭಕ್ತಿಯಿಲ್ಲದವರ ನಡೆ ಮುಟ್ಟಲಾರೆ ಪಾದವ ,ಸೊಂಕದು ಮೈ ಮನ ,ಬಸವಳಿದು ಬಂದಿರುವೆ ನಿತ್ಯ ಕಾಯಕ ಸೇವೆಯಲಿ.ನಡೆಯಲಿ ನುಡಿ ಅರಿತು ನುಡಿಯಲ್ಲಿ ನಡೆ ಅರಿತು ಸಾಗು ಸಾಗುತ್ತಿರುವೆ. ಎಚ್ಚರದ ಗಂಟಾಘೋಷ. ಸಹಿಸಲಾರದು ಅಪವಾದ. ಅಪಕೀರ್ತಿಯ ನಾ ಕಾಣೆ ಗುರು ಮಲ್ಲಯ್ಯ. ನಿಜ ಮಹಿಮರ ಭಕ್ತಿಯನು ಅರಸಿ ಬಂದೆ ಗುರುದೇವ .

ಗುರು ಭಕ್ತನಲ್ಲ, ವಿರಕ್ತನಲ್ಲ,
ನಿಶ್ಚಿಂತೆಯಲ್ಲ, ದುಶ್ಚಿಂತೆಯಲ್ಲ,
ದಿಟವೆಂಬುದಿಲ್ಲ, ಡಂಬುಳದೆಲ್ಲಾ
ಏನೆಂಬೆ! ಎನ್ನ ಮನವೆಯ್ದೆ ಹೊಲ್ಲ.
ಎನಗೊಡೆಯರಿಲ್ಲ, ನಿಮ್ಮ ಬಿಡುವುದಿಲ್ಲ,
ಸದ್ಗುರುವೆ ನೀ ಕರುಣಿಸು ಪುರದ ಮಲ್ಲಯ್ಯಾ.

ಈ ಒಂದು ವಚನದಲ್ಲಿ ಗುರುಪುರ ಮಲ್ಲಯ್ಯನವರು ತಮ್ಮ ಕರಸ್ಥಲದಲ್ಲಿರುವ ಲಿಂಗವನ್ನೇ ತನ್ನ ಗುರುವೆಂದು ಅರುಹಿ,
ನೀನು ಭಕ್ತನಲ್ಲ .ವಿರುಕ್ತನೂ ಅಲ್ಲ
ನಿನಗೆ ಯಾವುದರ ಚಿಂತೆಯೂ ಇಲ್ಲ ,ನಿಶ್ಚಿಂತೆಯಿಂದ ಇರುವ ನಿನ್ನನ್ನು ನಾನು ಬಿಡುವುದಿಲ್ಲ ಲಿಂಗಯ್ಯ .ಬೋಗ ಭಾಗ್ಯವ ನಿನಗಿಲ್ಲ .ಸತ್ಯವೂ ಅಲ್ಲ ನಾನು ಡಾಂಭಿಕನು ಅಲ್ಲ ತಿಳಿಯೇನು .ನನಗೆ ನೀನೇ ಬಂಧು ನನಗೆ ನೀನೇ ಒಡೆಯ ಮಲ್ಲಯ್ಯ. ಎಂಬೆನ್ನೆನ್ನುವೆ .

ಕಾಣದು ನನಗೆ ಅರಿವಿನ ಮಾರ್ಗ ಎನಂಬೆ ಮಲ್ಲಯ್ಯ ಬಿಡೆನು ನಿನ್ನನು .ನನಗಾವ ಒಡೆಯರಿಲ್ಲ. ಬಂಧುವಿಲ್ಲ, ಬಳಗವಿಲ್ಲ, ನೀನೇ ನನ್ನ ಒಡೆಯ. ಕರುಣಿಸು ಸದ್ಗುರುವೆ .
ನಾನು ನಿನ್ನ ಭಕ್ತ ನೆನಿಸಿಕೊಳ್ಳಲು ಅರ್ಹ ನಿಲ್ಲವೇ ? ಮಲ್ಲಯ್ಯ. ಅದಾವ ಪರಿಯಲ್ಲಿ ನನ್ನನ್ನು ಪರೀಕ್ಷಿಸುವೆ .ನನಗಾವ ಕೆಟ್ಟ ಚಿಂತೆಗಳಿಲ್ಲ ಲಿಂಗಯ್ಯ .ನಾನು ವಿರಕ್ತ ನಲ್ಲವೇ ? ಭಕ್ತನಲ್ಲವೇ ? ಸತ್ಯ ವೆಂಬುವುದು ಇಲ್ಲವೇ ಮಲ್ಲಯ್ಯ? .
ಭಜಿಸಿದೆ ಭಕ್ತಿಯ ಭಜನೆಯನು ಮುಕ್ತಿಯನು ನಾ ಕಾಣದೇ ಇರುಳೆನ್ನದೇ ಹಗಲೆನ್ನದೇ ನಿತ್ಯ ಸತ್ಯದಲಿ ಎದ್ದು ಧ್ಯಾನಿಸಿದೆ, ಪೂಜಿಸಿದೆ .ನಾನು ಡಂಭಕನಾದೆಯಾ ? ಗುರುವೇ ?
ನಾ ಸತ್ಯ ದಿಂದಲೇ ಉಸುರುವೆ .ಮಿತ್ಯವಲ್ಲದ ಕಾಯಕವ ನಾ ಮಾಡೆನು ತಂದೆ .ಮನ್ನಿಸು ಅಭಯವಿತ್ತು ರಕ್ಷಿಸು ಗುರುದೇವ .
ಅದಾವ ಬೇಸರದ ಚಿಂತೆಯಲಿ ಧ್ವನಿ ಕಳೆದುಕೊಂಡೆ ಕೂಗುತ್ತಿರುವೆ. ಕೇಳಿಸದೇ ನನ್ನ ಮಾರ್ದನಿ .ಬೊಬ್ಬಿರಿದು ಕೂಗುತ್ತಿರುವೆ ಬಿಡೆನು ನಾನು ನೀನೇ ಎನ್ನ ಒಡೆಯ .
ಅದಾವ ಒಡೆಯರು ಎನಗಿಲ್ಲ ಗುರುದೇವಾ, ಬಂಧುವೆಂದೆ ಬಳಗವೆಂದೆ ,ತಂದೆ ಎಂದೆ ,ತಾಯಿ ಎಂದೆ .ಒಲವಿನಿಂದ ಅಪ್ಪಿ ಒಪ್ಪಿದ ಈ ಕಾಯಕದಲಿ ಲಿಂಗವಾಗಿ ಬಂದೆ ಮಲ್ಲಯ್ಯ. ನಿತ್ಯ ಕಾಣುತ್ತಿರುವೆ ಕರುಣೆಯ ಭಕ್ತಿಯ ಭಾವ .ಭಯವಾಗುತ್ತಿದೆ ಎನಗೆ ಚಿಂತೆಯೂ ಎನಗಿಲ್ಲ. ನಿಶ್ಚಿಂತೆಯೂ ಅಲ್ಲ ,ನಿನ್ನ ಮನದಲಿ ಮೂಡಿದ ಡಾಂಭಿಕ ಭಕ್ತ ನಲ್ಲಯ್ಯ. ಅನುದಿನವೂ ಹಂಬಲಿಸುವ ಮನವನೊಮ್ಮೆ ಸಂತೈಸು ಬಾರಾ ಮಲ್ಲಯ್ಯ. ಕಳೆಯು ಕಟ್ಟಿದೆ ಮೊಗ ,ಕುಂದಿ ಹೋಗಿದೆ ಮನದ ಭಾವ, ತಬ್ಬಿನಡೆದ ಸವಿ ಸುಖ ದಿಂದ ದೂಡಿ ಬಿಟ್ಟೆ ಮಲ್ಲಯ್ಯ. ಕರುಣಿಸು ವೀರಪುತ್ರ ಜ್ಞಾನಿ ಲಿಂಗಯ್ಯ .ಎನೆಂಬೆ .ಡಾಂಭಿಕ ಎಂದರೆ ಬಿಡೆನು ನಾನು ಬೇಡುವೆ ಮುನಿಸಾದರೇನು ? ಕದವ ತೆರೆ ಪೂಜಿಪೆ ಲಿಂಗಯ್ಯ. ಮಬ್ಬು ಮುಸುಕಿದ ಕಾರ್ಮೋಡದಲಿ ,ಕೆಸರಾಗಿದೆ ಮಲೀನ ಮನ ಭಾವ ತೊಳೆದು ಬಿಡು ಹರಿದು ಹೋಗಲು ಮನದ ಕೊಳೆ ಸುಭ್ರ ತಿಳಿಕೊಳದ ನೀರು ತಂಪಾಗಿ ಹರಿದು ಬರಲು ಅರಳಲಿ ಮತ್ತೆ ಕಮಲ .
_______________

ಎನ್ನ ಪಾದವೆ ಪದಶಿಲೆಯಾಗಿ
ಎನ್ನ ಕಲೆ ಕಡಹದ ಕಂಬಂಗಳಾಗಿ
ಎನ್ನ ತೋಳೆ ನಾಗವೇದಿಕೆಯಾಗಿ
ಎನ್ನ ಅಸ್ಥಿಯೆ ಸುತ್ತಳ ಜಂತಿಯಾಗಿ
ಎನ್ನ ಅಧರವೆ ಒಳಬಾಗಿಲಾಗಿ
ಎನ್ನ ಗುರುಕರುಣವೆ ಲಿಂಗವಾಗಿ
ಎನ್ನ ಅಂಗವೆ ರಂಗಮಧ್ಯವಾಗಿ
ಎನ್ನ ಹೃದಯಕಮಲವೆ ಪೂಜೆಯಾಗಿ
ಎನ್ನ ಕಿವಿಗಳೆ ಕೀರ್ತಿಮುಖವಾಗಿ
ಎನ್ನ ನೆನವ ನಾಲಗೆಯ ಘಂಟೆಯಾಗಿ
ಎನ್ನ ಶಿರವೆ ಸುವರ್ಣದ ಕಳಸವಾಗಿ
ಎನ್ನ ನಯನವೆ ಕುಂದದ ಜ್ಯೋತಿಯಾಗಿ
ಎನ್ನ ಚರ್ಮವೆ ನಿರ್ಮಲ ಹೊದಕೆಯಾಗಿ
ಎನ್ನ ನೆನಹೆ ನಿಮಗೆ ಉಪಾಹಾರವಾಗಿ
ಗುರುಪುರದ ಮಲ್ಲಯ್ಯ ನಿದ್ದನಾಗಿ

ಅನುಭವ ಮಂಟಪದಲ್ಲಿ ಚರ್ಚೆಯಲ್ಲಿ ತೊಡಗಿದ ಗುರು ಮಲ್ಲಯ್ಯನವರು .ಈ ಒಂದು ವಚನವನ್ನು ಹೇಳುವ ಮುಖ್ಯ ಕಾರಣ .
12 ನೇ ಶತಮಾನದ ಕಾಲ ದೇವಾಲಯದ ಯುಗವಾಗಿತ್ತು.
ದೇವಾಲಯಗಳಿಂದ ಹರಿದು ಬರುವ ಹಣ ಪಾಪದ ಹಣ .ಇದನ್ನು ಕಂಡ ವಿಶ್ವಗುರು ಬಸವಣ್ಣನವರು ಬಡವರ ಪರ ನಿಂತು ಧ್ವನಿಯಾಗಿ .ಕಲ್ಲಿನಿಂದ ತಯಾರಿಸಿದ ದೇವಾಲಯಗಳನ್ನು ಅಲ್ಲಗಳೆದಂತೆ ಗುರುಪುರದ ಮಲ್ಲಯ್ಯನವರೂ ಕೂಡಾ
ತಮ್ಮ ದೇಹವನ್ನೇ ದೇವಾಲಯ ರೂಪದಲ್ಲಿ ಮಾಡಿರುವುದು ಕಂಡು ಬಂದಿದೆ .ಈ ದೇಹ ದೇವಾಲಯ ಆಗಬೇಕಾದರೆ ,ಅದು ಚಲನಶೀಲವಾಗಿರಬೇಕು .ಅಂದರೆ ನಮ್ಮೊಳಗಿರುವ ವ್ಯಕ್ತಿತ್ವ ಪರಿವರ್ತನೆಯಾಗಬೇಕು .ಆಗ ಮಾತ್ರ ಈ ದೇಹವೆಂಬ ದೇವಾಲಯಕ್ಕೆ ಅಳಿವು ಇರಲಾರದು ಎನ್ನುವ ಸತ್ಯವಾದ ಮಾತು .
ನನ್ನ ಪಾದವೇ ಈ ದೇಹವೆಂಬ ಗುಡಿಗೆ ಶಿಲೆಯಾಗಿ, ನನ್ನ ಕಾಲುಗಳೇ ಕಂಬಗಳಾಗಿ ,ನನ್ನ ತೋಳುಗಳೇ ನಾಗವೇದಿಕೆಯಾಗಿ ,ನನ್ನ ಮೂಳೆಗಳೇ ಜಂತಿಯಾಗಿ ,
ಎನ್ನ ತುಟಿಗಳೇ ಈ ದೇಹವೆಂಬ ಮಂದಿರದ ಒಳಬಾಗಿಲಾಗಿ ನಿಂತಿವೆ .
ಎನ್ನ ಗುರುವಿನ ಕರುಣವೇ ಲಿಂಗವಾಗಿ
ಎನ್ನ ಶರೀರದ ಅಂಗವೇ ರಂಗಮಧ್ಯವಾಗಿ ,
ನನ್ನ ಹೃದಯ ಎಂಬ ಕಮಲವೇ ನಿಮ್ಮ ಪೂಜೆಗೆ ಅರ್ಪಿತ ಮಲ್ಲಯ್ಯ.
ಎನ್ನ ಕಿವಿಗಳೇ ಕೀರ್ತಿಗೆ ಕಾರಣವಾಗಿ
ನಿಮ್ಮನ್ನು ಸದಾ ನೆನೆದು ನಾಮಸ್ಮರಣೆ ಮಾಡುವ ನನ್ನ ನಾಲಿಗೆಯೇ ಘಂಟೆಯಾಗಿ ,
ನನ್ನ ತಲೆಯೇ ಬಂಗಾರ ದ ಕಳಶವಾಗಿ ಶುಶೋಭಿತ ಗೊಂಡಿದೆ .
ನನ್ನ ಕಣ್ಣುಗಳೇ ಆರದ ಜ್ಯೋತಿಯಾಗಿ ,
ನನ್ನ ಮೃದು ಚರ್ಮವೇ ಪವಿತ್ರವಾದ ಮೇಲುಹೊದಿಕೆಯಾಗಿ ,
ನಿಮ್ಮನ್ನು ನೆನೆದರೆ ಸಾಕು ನನ್ನ ಹೊಟ್ಟೆ ತುಂಬಿ ಬಿಡುವುದು ಮಲ್ಲಯ್ಯ .ಇದರಿಂದ ಉಪಹಾರದ ಅವಶ್ಯಕತೆಯೇ ಬೇಡ ಎಂದೆನ್ನುವೆ ಗುರುಪುರದ ಮಲ್ಲಯ್ಯ. ನೀನೇ ನನ್ನ ಜೊತೆಗೆ ಇದ್ದರೆ, ನನಗೆ ಮತ್ತಾವ ಹಸಿವೂ ಇಲ್ಲ ಗುರುಪುರದ ಮಲ್ಲಯ್ಯ.

ಡಾ ಸಾವಿತ್ರಿ ಎಂ ಕಮಲಾಪೂರ
ಪ್ರಾಚಾರ್ಯರು
____________

ಆಕರ
ಸಮಗ್ರ ವಚನ ಸಂಪುಟ

Don`t copy text!