ನಮ್ಮದಲ್ಲ ಈ ಜಗವು
ನಮ್ಮದಲ್ಲ ಈ ಜಗವು,
ಕೋಮು ದಳ್ಳುರಿ ನಲುಗುತಿಹುದು
ಜಾತಿ ದ್ವೇಷಕೆ, ಬಳಲುತಿಹುದು .
ಮೋಸ ದರ್ಪ ಲಂಚ ವಂಚನೆ
ಸುಲಿಗೆ ಶೋಷಣೆ ಸುಡುತಿಹುದು.
ಕೆಂಪಾಯಿತು ಈ ನೆಲ
ಹತ್ಯೆ ಕೊಲೆ ರಕ್ತದೋಕುಳಿ
ಅನ್ನವಿಲ್ಲಅಕ್ಷರ ಬಟ್ಟೆಯಿಲ್ಲ
ದೊಡ್ಡವರ ಪಗಡೆಯಾಟಕೆ
ಉರುಳಿಸುವ ದಾಳಗಳು.
ಐದು ವರ್ಷಕೆ ಪ್ರಜಾತಂತ್ರ
ಖಾದಿ ನಡೆಸುವ ಕುತಂತ್ರ
ಮತದಾನ ಪರತಂತ್ರವು .
ನಿತ್ಯ ಸಾಯುವ ಪ್ರಜೆಗಳಿಲ್ಲಿ
ಕನ್ನಡಿಯ ಸ್ವಾತಂತ್ರ್ಯ .
ನೆಲ ಜಲ ಗಣಿಯ ಲೂಟಿ
ತಿಂದು ತೇಗಿ ನುಂಗಿದರು
ಕಾಡು ಮೇಡು ನಾಡುಗಳನು.
ಅಚ್ಚ ಹಸಿರು ಒಣಗಿ ಹೋಯಿತು
ಬೋಳಾಯಿತು ಬರಡು ಭೂಮಿ .
ಬಾಪು ಬಯಸಿದ ಗ್ರಾಮ ರಾಜ್ಯ
ಗಡಿ ತಂಟೆ ಕದನ ವ್ಯಾಜ್ಯ .
ಕಂಡ ಕನಸು ಹಳಸಿ ಹೋದವು
ಬುದ್ಧ ಬಸವರ ಶಾಂತಿ ಮಂತ್ರವು
ಸತ್ಯ ಸಮತೆ ಸಮಾಧಿಯು .
ಹೊಸ ಗಾಳಿ ಬೀಸಬೇಕು
ಹೊಸ ಜಗಕೆ ಹೋಗಬೇಕು
ಸತ್ಯ ಪ್ರೇಮ ಹೊಸ ಬದುಕು
ಹೊಸ ವರುಷಕೆ ಹೊಸ ಹರುಷದಿ.
ಗಟ್ಟಿಕೊಳ್ಳಬೇಕು ಮನಸು
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ