ಕ್ಷಮಿಸಿಬಿಡಿ ಬಾಬಾಸಾಹೇಬ್
ದನಿಯಿಲ್ಲದ ಮನುಜರು ನಾವು
ನಮ್ಮ ರೆಕ್ಕೆ ನಾವೇ ಕತ್ತರಿಸಿಕೊಂಡು
ಹಾರಲಾಗದೆ ಉಳ್ಳವರ
ಕಾಲಡಿ ಸಿಲುಕಿಕೊಂಡಿದ್ದೇವೆ
ಕ್ಷಮಿಸಿಬಿಡಿ ಬಾಬಾಸಾಹೇಬ್
ಗೆದ್ದಲಂಟಿದ ಬುದ್ಧಿಯ ನಾವು
ಗುಲಾಮತೆಯ ಒಪ್ಪಿ
ಬಹುಪರಾಕಿನ ಪರದೆಯಲಿ
ಮರೆಯಾಗಿ ಹೋಗಿದ್ದೇವೆ
ಕ್ಷಮಿಸಿಬಿಡಿ ಬಾಬಾಸಾಹೇಬ್
ಮಾನವೀಯತೆ ಮರೆತ ನಾವು
ಹೃದಯ ಮಾರಿಕೊಂಡು
ಸಮತೆಯ ಸಾಯಿಸುತ್ತ
ಸರಾಗವಾಗಿ ಸಾಗಿದ್ದೇವೆ
ಕ್ಷಮಿಸಿಬಿಡಿ ಬಾಬಾಸಾಹೇಬ್
ಜಾತಿಗಳ ಜಿಡ್ಡಿನಲಿ ನಾವು
ಹಗೆತನದ ಹಗೆಯಲ್ಲಿ
ನೆತ್ತರು ನೆಕ್ಕುವ
ಕಿಚ್ಚಿನ ಕಡಲಲಿ ಕಾಣೆಯಾಗಿದ್ದೇವೆ
ಕ್ಷಮಿಸಿಬಿಡಿ ಬಾಬಾಸಾಹೇಬ್
ಗಲ್ಲಿ ಗಲ್ಲಿಯಲಿ ನಿಂತು ನೀವು
ಸರಿ ದಾರಿ ತೋರುತ್ತಿದ್ದರೂ
ಕೆಡುಕಿನ ದಾರಿ ಹಿಡಿದು
ನಿಮ್ಮ ಕಳವಳಕೆ ಕಾರಣರಾಗಿದ್ದೇವೆ
ಕ್ಷಮಿಸಿಬಿಡಿ ಬಾಬಾಸಾಹೇಬ್
ಗುಣಗಾನದ ಡಿ. ಜೆ. ಸದ್ದಿನಲಿ
ನಿಮ್ಮ ಹೃದಯ ಅಳುವ ಸದ್ದು
ಕೇಳದೆ ಹೋಗಿದೆ
ಮರುಗದಿರಿ, ಬಿಕ್ಕದಿರಿ
ಬದಲಾಗುವೆವು ಇಂದಲ್ಲ ನಾಳೆ
ಕ್ಷಮಿಸಿಬಿಡಿ ಬಾಬಾಸಾಹೇಬ್
–ಉಷಾ ಗೊಬ್ಬೂರ