ಬಾವುಟಗಳ ಹಾಡು
ಕೆಂಪಾದ ಬಾವುಟಗಳನೆಲ್ಲ
ಬಿಳಿಯಾದ ಬಾವುಟಗಳೂ
ಗಂಟು ಕಟ್ಟಿ ಮೂಲೆಗೆಸೆದಿವೆ
ಮುದ್ದೆಯಾಗಿ ಮೂಲೆ ಸೇರಿ
ಉಸಿರಿನ ನರಳಾಟದಲಿ ಕರಗಿದರೂ
ಗಾಳಿಗೆ ಮೈಯೊಡ್ಡಲೂ ಬಲಾಢ್ಯವಾದ
ಕೆಲ ಕೆಂಪಾದ ಬಾವುಟಗಳು
ಬಿಳಿಯ ಬಾವುಟಗಳನ್ನೇ
ತೂತಾಗಿರಿಸಿ ಮೇಲೆ ಜಿಗಿಯುತ್ತವೆ
ಜಿಗಿದ ಬಾವುಟಗಳಿಗೆ
ಹಳದಿ ಲೋಹದ ಬಿಲ್ಲೆಯ
ಹೊಳಹಿನ ಮಿಂಚರಿಸಿದ
ಬಿಳಿಯ ಬಾವುಟಗಳು ಮತ್ತೇ
ಮೌನವಾಗಿ ಮುಸಿಮುಸಿ ನಗುತ್ತವೆ
ಕೆಂಪು ಬಾವುಟಗಳೆಲ್ಲ
ಕರಗಿ ಕಣ್ಮರೆಯಾದವೆಂದು
ಆದರೂ
ಮತ್ತೇ ಮತ್ತೇ
ಜಿಗಿಯುತ್ತಾ ಕೆಂಪು ಬಾವುಟಗಳು
ತತ್ತರಿಸಿ ನಿತ್ರಾಣಗೊಂಡರೂ
ಸೆಟೆದು ನಿಲ್ಲುತ್ತವೆ
ಆಗ ಬಿಳಿ ಬಾವುಟಗಳು
ಅವುಗಳ ರಕ್ತದೋಕುಳಿಯಲಿ
ತಮ್ಮ ಚರಿತ್ರೆ ಬರೆದು
ಬಿಳಿ ಬಾವುಟಗಳು ಚರಿತ್ರೆ ಯ ಮೈಲುಗಲ್ಲುಗಳಾಗುತ್ತವೆ.
ಮೈಲುಗಲ್ಲಿನ ಬುಡದಲ್ಲಿ ಸಿಕ್ಕಿರುವ
ಕೆಂಪುಬಾವುಟಗಳು ಆಗಾಗ ಕಿರುಚಿದರೂ
ನವೋತ್ಸಾಹದ ಬಗೆ ಬಗೆಯ ಬಣ್ಣದ
ಬಾವುಟಗಳು ಕೆಂಬಾವುಟಗಳನೇ
ಕಿತ್ತೆಸೆದು ತಮ್ಮ ಸ್ಥಾನಕೆ ಪೈಪೋಟಿ ನಡೆಸಿವೆ
ಈ ಪೈಪೋಟಿಯ ನೋಟದಲ್ಲಿಯೇ
ಮುಸಿ ಮುಸಿ ನಗುತ್ತಲೇ
ಬಿಳಿ ಬಾವುಟಗಳು ಮೇಲೆರುತ್ತಾ ಹೋಗುವುದನು
ಕೆಂಬಾವುಟಗಳು ಹತಾಶೆಯಿಂದ ನೋಡುತ್ತಲೇ
ಒಮ್ಮೆಲೆ ಜಿಗಿಯಬೇಕೆಂದರೂ
ಬಗೆಬಗೆಯ ಬಾವುಟಗಳು
ಅಡ್ಡಲಾಗಿ ಬಿಡುತ್ತವೆ
ಆದರೂ
ಕೆಂಬಾವುಟಗಳು ನಾಳೆಯ
ಹೊಸ ಬದುಕಿಗಾಗಿ ಮುನ್ನುಗ್ಗುತ್ತವೆ.
ಡಾ. ನಾಹೀರಾ ಕುಷ್ಟಗಿ
(ಕಾರ್ಮಿಕರ ದಿನಾಚರಣೆ ನೆನಪಿಗೆ)