ವಚನಗಳ ಕಂಪನ್ನು ನಾಡಿನಾದ್ಯಂತ ಪಸರಿಸಿದ ವೀರ ಗಣಾಚಾರಿಣಿ ದಾನಮ್ಮ
ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಶಿವಶರಣರು ಅದಕ್ಕಾಗಿ ೧೨ ನೆಯ ಶತಮಾನದಲ್ಲಿ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಉಂಟುಮಾಡಿದರು.ಈ ಕ್ರಾಂತಿಯ ಹರಿಕಾರರಾದ ಶರಣರಿಗೆ ಕಾಯಕನಿಷ್ಠೆ ,ಸಮತಾವಾದ, ಸರ್ವೋದಯ ಗಳೆ ಕ್ರಾಂತಿಯ ಸೂತ್ರಗಳಾಗಿದ್ದವು.ಇವುಗಳ ಮೂಲಕ ಸಮಾಜದ ದೋಷಗಳನ್ನು ತಿದ್ದಿ ಸರ್ವಸಮಾನತೆಯ ಕಲ್ಯಾಣ ರಾಜ್ಯ ನಿರ್ಮಿಸಲು ಬಯಸಿದರು. ಆ ಕಾರ್ಯಕ್ಕಾಗಿ ಅವರು ಆಯ್ದುಕೊಂಡ ಸಾಧನಗಳೇ ವಚನಗಳು. ವಚನಗಳ ಮೂಲಕ ತಮ್ಮ ಕನಸಿನ ಸಮಾಜದ ತತ್ವಗಳನ್ನು ಜನರಿಗೆ ತಿಳಿಸಲು ಪ್ರಯತ್ನಿಸಿದರು.
ಜೊತೆಗೆ ಸರ್ವರಿಗೂ ವಚನಗಳ ರಚನೆಗೆ ಅವಕಾಶ ಕಲ್ಪಿಸಿದರು. ಪರಿಣಾಮವಾಗಿ ಅರಮನೆಯ ಅಟ್ಟದಲ್ಲಿನ ಸಾಹಿತ್ಯ ಶ್ರೀಸಾಮಾನ್ಯನ ಅಂಗೈಯನ್ನು ಅಲಂಕರಿಸಿತು.ಜಾತಿ, ಮತ,ಲಿಂಗ ಬೇಧಗಳನ್ನು ಮೀರಿ ನೂರಾರು ಶಿವಶರಣರು ವಚನಗಳ ರಚನೆಯಲ್ಲಿ ತೊಡಗಿದರು. ಬಹುತೇಕ ಶಿವಶರಣರು ವಚನಗಳ ರಚನೆ ಮಾಡಿದರೆ,ಕೆಲವು ಶಿವಶರಣರು ಆ ವಚನಗಳ ತತ್ವವನ್ನು, ಮಹತ್ವವನ್ನು ನಾಡಿನಾದ್ಯಂತ ಪ್ರಸಾರ ಮಾಡುವ, ಕಲ್ಯಾಣ ಕ್ರಾಂತಿಯ ನಂತರ ಅವುಗಳನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾದರು. ಹಾಗೆ ನಾಡಿನಾದ್ಯಂತ ವಚನಗಳ ಪ್ರಸಾರ ಮಾಡಿ ,ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವೀರಗಣಾಚಾರಿಣಿ ಆಗಿ ಶಸ್ತ್ರಾಸ್ತ್ರ ಹಿಡಿದು ಹೋರಾಡಿ ವಚನಗಳ ರಕ್ಷಣೆ ಮಾಡಿದವರಲ್ಲಿ ಶಿವಶರಣೆ ದಾನಮ್ಮ ಒಬ್ಬಳಾಗಿದ್ದಾಳೆ.
ಅಣ್ಣನ ನೇತೃತ್ವದಲ್ಲಿ ಉದಯಿಸಿದ ಲಿಂಗಾಯತ ಧರ್ಮವು ಸಮಾಜದಲ್ಲಿ ಸ್ತ್ರೀಯರಿಗೆ ಪುರುಷರಷ್ಟೆ ಸಮಾನ ಸ್ಥಾನಮಾನವನ್ನು ಕಲ್ಪಿಸಿತು. ಶರಣರ ಸಂಗಡ ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿತು. ಪರಿಣಾಮವಾಗಿ ಅಕ್ಕ ಮಹಾದೇವಿ, ಅಕ್ಕ ನಾಗಮ್ಮ,ಗಂಗಾಂಬಿಕೆ,ನೀಲಾಂಬಿಕೆ,ಸೂಳೆ ಸಂಕಮ್ಮ,ಆಯ್ದಕ್ಕಿ ಲಕ್ಕಮ್ಮ ಮುಂತಾದ ೬೦ ಕ್ಕೂ ಹೆಚ್ಚು ಶಿವಶರಣೆಯರು ಲಿಂಗಾಯತ ಧರ್ಮದ ಆಂದೋಲನದಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಉಜ್ವಲಗೊಳಿಸಿದರು.ಇದರಲ್ಲಿ ಜ್ಞಾನಪ್ರಧಾನ ವೃತ್ತಿ ಹೊಂದಿದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಶರಣರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದರೇ,ಕ್ರಿಯಾಪ್ರಧಾನ ವೃತ್ತಿ ಹೊಂದಿದ ಅಕ್ಕನಾಗಮ್ಮ ದಾಸೋಹ ಕಾರ್ಯ ನಿರ್ವಹಿಸುವದರೊಂದಿಗೆ ಕಲ್ಯಾಣ ಕ್ರಾಂತಿಯ ತರುವಾಯ ಶರಣರೊಂದಿಗೆ ಸೇರಿ ಕಾಳಗದಲ್ಲಿ ಹೋರಾಟ ಮಾಡಿದಳು. ಆದರೆ ಶರಣೆಯರಲ್ಲಿ ಶಿವಯೋಗಿಣಿ ಎನಿಸಿದ್ದ ದಾನಮ್ಮ ಲಿಂಗಾಯತ ಧರ್ಮದ ಪ್ರಸಾರ ಮತ್ತು ಪ್ರಚಾರ ಕಾರ್ಯದ ಪ್ರತಿಜ್ಞೆ ಮಾಡಿ ಅನ್ಯಧರ್ಮಿಯರೊಂದಿಗೆ ಹೋರಾಟವನ್ನು ಮಾಡಿದಳು.ಕರ್ನಾಟಕ ದೊಂದಿಗೆ ಆಂಧ್ರಪ್ರದೇಶ,ತಮಿಳುನಾಡು ಗಳಲ್ಲಿ ಸಂಚಾರವನ್ನು ಕೈಗೊಂಡು ಲಿಂಗಾಯತ ಧರ್ಮದ ಪ್ರಚಾರ ಮಾಡಿದಳು.
ಷೊಡಶ ಗಣಂಗಳಲ್ಲಿ ಒಬ್ಬಳಾದ ಶಿವಶರಣೆ ದಾನಮ್ಮನ ಕುರಿತು ಶಾಸನಗಳಲ್ಲಿ ಮತ್ತು ಕೃತಿಗಳಲ್ಲಿ ಪ್ರಸ್ತಾಪವಿದೆ.’ ಸೌಥ್ ಇಂಡಿಯನ್ ಇನ್ ಸ್ಕ್ರಿಪ್ಶನ್ಸ ‘ ಸಂಪುಟ ೧೫ ರಲ್ಲಿ ೫೬ ನೆಯ ನಂಬರಿನ ತಾಳಿಕೋಟೆ ಶಾಸನ (ಕ್ರಿ.ಶ ೧೧೮೪), ಶರಣಸಾಹಿತ್ಯ(ಸಂಪುಟ ೨೧,ಸಂಚಿಕೆ-೧) ದಲ್ಲಿ ಪ್ರಕಟವಾದ ಇಂಗಳಗಿ ಶಾಸನ (ಕ್ರಿ.ಶ ೧೨೦೯), ‘ ಇನ್ ಸ್ಕ್ರಿಪ್ಶನ್ ಇನ್ ನಾರ್ದರ್ನ ಕರ್ನಾಟಕ ಅ್ಯಾಂಡ್ ಕೊಲ್ಹಾಪುರ ಸ್ಟೇಟ್’ ಎಂಬ ಕುಂದಣಗಾರರ ಪುಸ್ತಕದಲ್ಲಿನ ವಿಜಯಪುರ ಶಾಸನಗಳು (ಕ್ರಿ.ಶ ೧೨೭೮) ಹೀಗೆ ೪ ಶಾಸನಗಳು ಶಿವಶರಣೆಯ ವಿವರವನ್ನು ನೀಡುತ್ತವೆ.ಹೀಗಾಗಿ ದಾನಮ್ಮ ಕ್ರಿ.ಶ ೧೧೮೪ ರ ಪೂರ್ವದಲ್ಲಿ ಇದ್ದಳೆಂದು ಭಾವಿಸಲಾಗಿದೆ. ಅಲ್ಲದೆ ಹರಿಹರ ಕವಿಯ ‘ಮಹಾದೇವಿ ಅಕ್ಕನ ರಗಳೆ ‘ ,ಭೀಮ ಕವಿಯ ‘ ಬಸವ ಪುರಾಣ ‘, ‘ ಪದ್ಮರಾಜ ಪುರಾಣ ‘ ‘ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ’ , ‘ ಚೆನ್ನಬಸವ ಪುರಾಣ ‘,ಲಕ್ಕಣ್ಣ ದಂಡೇಶನ ‘ ಶಿವತತ್ವ ಚಿಂತಾಮಣಿ ‘ ಕೃತಿಗಳಲ್ಲಿ ಅವಳ ಚರಿತ್ರೆ, ಸಾಧನೆಗಳ ವಿಷಯ ಸಾಮಗ್ರಿ ದೊರೆಯುತ್ತದೆ. ಜೊತೆಗೆ ಫ.ಗು ಹಳಕಟ್ಟಿಯವರು ‘ ವರದಾನಿ ಗುಡ್ಡವ್ವೆಯ ಚರಿತ್ರೆ’, ಬರೆದಿದ್ದು,ತಮ್ಮ ಶಿವಾನುಭವ ಪತ್ರಿಕೆಯಲ್ಲಿ ಲಕ್ಕಣ್ಣ ದಂಡೇಶನ ‘ ಶಿವತತ್ವ ಚಿಂತಾಮಣಿ’ ಯಲ್ಲಿ ಬರುವ ಗುಡ್ಡವ್ವೆಯ ಕಾವ್ಯ ಭಾಗ ಮತ್ತು ಹೊರ್ತಿ ಗ್ರಾಮದ ಕವಿ ಬರೆದ ಕೃತಿಯಿಂದ ಲೇಖನ ಬರೆದಿದ್ದಾರೆ. ಡಾ.ಎಂ.ಎಂ.ಕಲ್ಬುರ್ಗಿ ಅವರ ‘ಶಾಸನಗಳಲ್ಲಿ ಶಿವಶರಣರು’ (ಕಲ್ಬುರ್ಗಿ ಅವರು ಇವಳನ್ನು ಬಸವಪೂರ್ವಯುಗದ ಶರಣೆ ಎನ್ನುತ್ತಾರೆ),ತ.ಸು.ಶ್ಯಾಮರಾಯರ ‘ ಶಿವಶರಣರ ರತ್ನಕೋಶ’ ,ಡಾ.ಎಲ್ ಬಸವರಾಜ ಅವರ ‘ ಶಿವದಾಸ ಗೀತಾಂಜಲಿ’ ಕೃತಿಗಳಲ್ಲಿ ದಾನಮ್ಮನ ಪ್ರಸ್ತಾಪವಿದೆ. ಜೊತೆಗೆ ಅನೇಕ ಭಕ್ತಿ ಕವಿಗಳು ಪೌರಾಣಿಕ ಪಾತ್ರದ ರೀತಿಯಲ್ಲಿ ಅವಳ ಚರಿತ್ರೆಯನ್ನು ರಚಿಸಿದ್ದಾರೆ. ಹೀಗೆ ಶಾಸನಗಳಲ್ಲಿ ಮತ್ತು ಕಾವ್ಯಗಳಲ್ಲಿ ಅವಳ ಚರಿತ್ರೆ ಉಪಲಬ್ಧ ಇರುವುದರಿಂದ ದಾನಮ್ಮ ಪೌರಾಣಿಕ ಅಥವಾ ಕಾಲ್ಪನಿಕ ವ್ಯಕ್ತಿಯಲ್ಲ ,ಅವಳೊಬ್ಬ ಐತಿಹಾಸಿಕ ವ್ಯಕ್ತಿ ಎಂಬುದು ಸ್ಪಷ್ಟವಾಗುತ್ತದೆ.
ದಾಸೋಹ, ಕಾಯಕ ನಿಷ್ಟೆ,ಧರ್ಮ,ನ್ಯಾಯ ಮೊದಲಾದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಶಿವಶರಣೆ ದಾನಮ್ಮನ ಮೂಲ ಹೆಸರು ಲಿಂಗಮ್ಮ. ಈಕೆ ಜನಿಸಿದ್ದು ಇಂದಿನ ಮಹಾರಾಷ್ಟ್ರ ರಾಜ್ಯದ ಜತ್ತ ತಾಲ್ಲೂಕಿನ ಉಮರಾಣಿ ಗ್ರಾಮದಲ್ಲಿ ಛಟ್ಟಿ ಅಮವಾಸ್ಯೆಯ ದಿನ. ವಿಜಯಪುರದಿಂದ ಸುಮಾರು ೩೦ ಮೈಲಿ ದೂರದಲ್ಲಿರುವ ಉಮರಾಣಿ ಅಂದು ಬಹುತೇಕ ಕನ್ನಡ ಭಾಷಿಗರ ಪ್ರದೇಶವಾಗಿತ್ತು (ಇಂದು ಸಹ ದಾನಮ್ಮನ ಜನ್ಮಸ್ಥಳ ಉಮರಾಣಿ ಮತ್ತು ಐಕ್ಯಸ್ಥಳ ಗುಡ್ಡಾಪುರದಲ್ಲಿ ಕನ್ನಡಿಗರೆ ಇದ್ದು ,ಇತ್ತೀಚಿಗೆ ಮಹಾರಾಷ್ಟ್ರದ ಸುಮಾರು ೩೩ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಮನವಿ ಮಾಡುವ ಉದ್ದೇಶದಿಂದ ಗುಡ್ಡಾಪುರದಲ್ಲಿ ಗ್ರಾಮಸ್ಥರು ಸಭೆ ಸಹ ಸೇರಿದ್ದರು). ತಂದೆ ಜತ್ತ ಸಂಸ್ಥಾನದ ಅಕ್ಕಸಾಲಿಗನಾದ ಅನಂತರಾಯ ಶೀಲವಂತ, ತಾಯಿ ಶಿರಸಮ್ಮ.ಬಹಳ ದಿನಗಳವರೆಗೆ ಮಕ್ಕಳಿರದ ದಂಪತಿಗಳಿಗೆ ಹೆಣ್ಣು ಮಗು ಹುಟ್ಟಿದಾಗ ಅವಳಿಗೆ ಲಿಂಗಮ್ಮ ಎಂದು ನಾಮಕರಣ ಮಾಡುತ್ತಾರೆ. ತಂದೆ ತಾಯಿಗಳು ಶಿವಭಕ್ತರು. ಜೊತೆಗೆ ಈ ವೇಳೆಗೆ ಕರುನಾಡು ಶಿವಶರಣರ ಬೀಡಾಗಿ ಶರಣರ ತತ್ವಗಳು ಹಬ್ಬುತ್ತಿದ್ದವು.ಈ ವೇಳೆಗೆ ಜನಿಸಿದ ಲಿಂಗಮ್ಮ ಶಿವಾನುಭವದ ವಾತಾವರಣದಲ್ಲಿಯೇ ಬೆಳೆಯುತ್ತಿದ್ದಳು.
ಬಾಲ್ಯದಲ್ಲಿಯೇ ಲಿಂಗಮ್ಮ ಶೃದ್ಧಾ ಭಕ್ತಿಯಿಂದ ಇಷ್ಟಲಿಂಗದ ಪೂಜೆ ಮಾಡುತ್ತಿದ್ದಳು.ಅಕ್ಕನಂತೆ ಚನ್ನಮಲ್ಲಿಕಾರ್ಜುನನ ಅನನ್ಯ ಭಕ್ತೆಯಾಗಿದ್ದಳು.ಚಿಕ್ಕಂದಿನಿಂದಲೇ ಶರಣರ ವಚನಗಳನ್ನು ಓದಿಕೊಂಡಳು.ಅದರಿಂದಾಗಿ ಅವಳ ದೃಷ್ಟಿ ಶಿವಯೋಗದ ಕಡೆಗೆ ಹರಿಯಿತು. ಅದೇ ವೇಳೆಗೆ ಒಬ್ಬ ಸಿದ್ಧ ದೃಷ್ಟಿಯೋಗದಿಂದ ಕಲ್ಲನ್ನು ಪುಡಿ ಪುಡಿ ಮಾಡುವುದನ್ನು ನೋಡಿ ಬೆರಗಾಗಿ ಅದರ ಬಗ್ಗೆ ತನ್ನ ಗುರುಗಳಾದ ಶಾಂತವೀರ ಸ್ವಾಮಿಗಳ ಹತ್ತಿರ ಪ್ರಶ್ನಿಸುತ್ತಾಳೆ.ಅವರು ದೃಷ್ಟಿಯೋಗದ ಬಗ್ಗೆ ತಿಳಿಸಿ ಶಿವಯೋಗಿ ಸೊಲ್ಲಾಪುರದ ಸಿದ್ಧರಾಮ ಇದನ್ನು ಸಾಗಿಸಿಕೊಂಡಿದ್ದನ್ಮು ತಿಳಿಸುತ್ತಾರೆ. ಆಗ ದೃಷ್ಟಿಯೋಗ ವಿದ್ಯೆ ಪಡೆಯಲು ಸಿದ್ಧರಾಮರ ಬಳಿಗೆ ಬರುತ್ತಾಳೆ. ಸಿದ್ದರಾಮ ನೀನು ಒಳ್ಳೆಯ ಕಾರ್ಯಗಳಿಗೆ ಇದನ್ನು ಬಳಸುವದಾದರೆ ಕಲಿಸುವೆ ಎಂದಾಗ ಮಾತು ಕೊಟ್ಟು ದೃಷ್ಟಿಯೋಗವನ್ನು ಸಾಧಿಸುತ್ತಾಳೆ.ನಂತರ ಕೊಟ್ಟ ಮಾತಿನಂತೆ ದೃಷ್ಟಿಯೊಗವನ್ನು ಜನಹಿತಕ್ಕಾಗಿ ಮಾತ್ರ ಬಳಸುತ್ತಾಳೆ.
ಸಿದ್ದರಾಮರ ಹತ್ತಿರ ದೃಷ್ಟಿಯೋಗ ಪಡೆಯುವಾಗ ಕಲ್ಯಾಣದಲ್ಲಿ ಶರಣರು ಕೈಗೊಂಡ ಧಾರ್ಮಿಕ ಕಾರ್ಯದ ಬಗ್ಗೆ ತಿಳಿದುಕೊಳ್ಳುತ್ತಾಳೆ.ಅದೇ ವೇಳೆಗೆ ತಂದೆ ತಾಯಿಗಳು ತನ್ನ ಮದುವೆ ಬಗ್ಗೆ ಯೋಚಿಸುತ್ತಿರುವದನ್ಮು ತಿಳಿದು ಸಂಸಾರ ವಿಮುಖ ಭಾವನೆ ಬೆಳೆಸಿಕೊಂಡ ಲಿಂಗಮ್ಮ ಕಲ್ಯಾಣಕ್ಕೆ ಹೋಗಲು ತಂದೆ ತಾಯಿಗಳು ಅಪ್ಪಣೆ ಕೊಡುವದಿಲ್ಲವೆಂದು ಕಲ್ಯಾಣದಲ್ಲಿನ ಬಸವಾದಿ ಶರಣರ ದರ್ಶನ ಪಡೆಯಲು ಏಕಾಂಗಿಯಾಗಿ ಹೊರಡುತ್ತಾಳೆ.ಮಾರ್ಗದಲ್ಲಿ ರೋಗಗ್ರಸ್ತ ಮಹಿಳೆಯ ಆರೈಕೆ ಮಾಡಿ ಕಲ್ಯಾಣದಲ್ಲಿ ಮಹಾದೇವಿ ಎಂಬ ಬಡವಿಯ ಮನೆಯಲ್ಲಿ ಆಶ್ರಯ ಪಡೆಯತ್ತಾಳೆ.ಕಲ್ಯಾಣದ ಸಮೀಪದ ಬಿಲ್ವವನದಲ್ಲಿ ನಿತ್ಯ ಶಿವಯೋಗದಲ್ಲಿ ನಿರತಳಾಗುತ್ತಾಳೆ.ಅಲ್ಲಿ ಕಷ್ಟ ಎಂದು ಹೇಳಿಕೊಂಡು ಬಂದವರಿಗೆಲ್ಲ ಸಹಾಯ ಮಾಡಿ ಕಲ್ಯಾಣದಲ್ಲಿ ಮನೆಮಾತಾಗುತ್ತಾಳೆ.ಇವಳ ಜನಸೇವೆಯನ್ನು ತಿಳಿದ ಮೋಳಿಗೆಯ ಮಾರಯ್ಯ ದಿನನಿತ್ಯ ಕಟ್ಟಿಗೆಯ ಹೊರೆಯನ್ನು ತಂದು ಅವಳಿಗೆ ತಿಳಿಯದಂತೆ ಮಹಾದೇವಿಯ ಕುಟೀರದಲ್ಲಿ ಇಟ್ಟು ಹೋಗುತ್ತಿರುತ್ತಾನೆ.ಇದು ಶರಣ ಮೋಳಿಗೆಯ ಮಾರಯ್ಯನ ಕೆಲಸ ಎಂದರಿತ ಲಿಂಗಮ್ಮ ಮಾರಯ್ಯನನ್ನು ಪ್ರಶ್ನಿಸುತ್ತಾಳೆ.ಆಗ ಮಾರಯ್ಯ’ ನಿನ್ನ ಜನಸೇವೆಗೆ ನನ್ನದೊಂದು ಕಿರುಕಾಣಿಕೆ ‘ ಎನ್ನುತ್ತಾನೆ. ಜೊತೆಗೆ ಅಂದು ಅನುಭವ ಮಂಟಪಕ್ಕೆ ತೆರಳಿದ ಮಾರಯ್ಯ ಗ್ರಾಮದ ಹೊರವಲಯದಲ್ಲಿ ನೆಲಸಿ ಲಿಂಗಮ್ಮ ಮಾಡುತ್ತಿರುವ ಜನಸೇವೆಯನ್ನು ಅಣ್ಣ ಬಸವಣ್ಣನಿಗೆ ತಿಳಿಸುತ್ತಾನೆ. ಇವಳ ಜನಸೇವೆಯನ್ನು ತಿಳಿದು ಬೆರಗಾದ ಅಣ್ಣ ಮಾರಯ್ಯ ನೊಂದಿಗೆ ಅವಳಿರುವ ಸ್ಥಳಕ್ಕೆ ಬರುತ್ತಾನೆ. ಆಗ ಇವಳಿಂದ ಸೇವೆ ಪಡೆದ ಜನರು ಇವಳಿಗೆ ಕಾಣಿಕೆ ಕೊಟ್ಟದ್ದನ್ನು ತನ್ನ ಹತ್ತಿರ ಇಟ್ಟುಕೊಳ್ಳದೆ ದಾನ ಮಾಡುತ್ತಿರುತ್ತಾಳೆ.ತನ್ನ ಜೋಳಿಗೆಯಲ್ಲಿನ ವಸ್ತುಗಳನ್ನು ನಾನು ಎನು ಕೊಡುತ್ತಿದ್ದೆನೆ ಎಂಬುದನ್ನು ಸಹ ನೋಡದೆ ತನ್ಮಯಳಾಗಿ ದಾನ ಮಾಡುತ್ತಿರುತ್ತಾಳೆ.
ಹಳ್ಳಿಯ ಒಬ್ಬ ಸಾಮಾನ್ಯ ಹೆಣ್ಣುಮಗಳು ಇಷ್ಟು ನಿಷ್ಠೆಯಿಂದ ಜನಸೇವೆಯನ್ನು, ದಾನ ಮಾಡುವುದನ್ನು ನೋಡಿ ಬೆರಗಾದ ಅಣ್ಣ ಅವಳಿಗೆ’ “ದಾನಮ್ಮ” ಎಂದು ಕರೆದು ‘ ನೀನು ಇದೇ ಹೆಸರಿನಿಂದ ಇನ್ನೂ ವಿಶ್ವವಿಖ್ಯಾತಿ ಹೊಂದುತ್ತಿ ‘ ಎಂದು ಆಶೀರ್ವಾದ ಮಾಡುತ್ತಾನೆ. ಅಣ್ಣನ ಆಶೀರ್ವಾದ ಪಡೆದು ಲಿಂಗಮ್ಮ ಅಂದಿನಿಂದ ದಾನಮ್ಮಳಾಗುತ್ತಾಳೆ.
ತರುವಾಯ ಅಣ್ಣ ದಾನಮ್ಮನನ್ನು ಅನುಭವ ಮಂಟಪಕ್ಕೆ ಕರೆದೊಯ್ಯೊತ್ತಾನೆ.ಅಲ್ಲಿ ಶರಣರನ್ನು ಭೇಟಿಯಾದ ದಾನಮ್ಮ ಸಾಮಾಜಿಕ ಕಳಕಳಿಯ ವಿಷಯಕ್ಕೆ ಸಂಬಂಧಿಸಿದಂತೆ ತನಗಿದ್ದ ಎಲ್ಲಾ ಪ್ರಶ್ನೆಗಳಿಗೆ ಶರಣರಿಂದ ಸೂಕ್ತ ಉತ್ತರ ಪಡೆಯುತ್ತಾಳೆ.ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸುತ್ತಾಳೆ.ಅನುಭವ. ಮಂಟಪದಲ್ಲಿ ಅಲ್ಲಮಪ್ರಭುಗಳು ದಾನಮ್ಮನಿಗೆ ವಚನಗಳ ರಚನೆಯಲ್ಲಿ ತೊಡಗು ಎಂದು ಸಲಹೆ ನೀಡುತ್ತಾರೆ. ಆಗ ದಾನಮ್ಮ ” ಎಲ್ಲ ಶರಣರು ವಚನಗಳ ರಚನೆಯಲ್ಲಿ ತೊಡಗಿದರೆ ,ವಚನಗಳ ಕಂಪನ್ನು ದೇಶದಾದ್ಯಂತ ಹರಡಲು ಯಾರು ಬೇಡವೇ? ” ಎಂದು ಪ್ರಶ್ನಿಸುತ್ತಾಳೆ. ಇಲ್ಲಿಯವರೆಗೆ ಯಾವ ಶರಣರು ಯೋಚಿಸದ ವಿಚಾರವನ್ನು ಅನುಭವ ಮಂಟಪದ ಶರಣರ ಮುಂದಿಡುತ್ತಾಳೆ. ” ಇನ್ನೂ ಮುಂದೆ ವಚನಗಳ ಮತ್ತು ಶರಣರ ತತ್ವಗಳನ್ನು ನಾಡಿನಾದ್ಯಂತ ಪ್ರಸಾರ ಮತ್ತು ಪ್ರಚಾರ ಮಾಡುವುದೇ ನನ್ನ ಕಾಯಕ ” ಎಂದು ಶರಣರ ಮುಂದೆ ನುಡಿದು ಎಲ್ಲಾ ಶರಣರ ಪ್ರೀತಿಗೆ ಪಾತ್ರಳಾಗುತ್ತಾಳೆ.
ಅಣ್ಣನ ಮನೆಯಲ್ಲಿ ತಾಯಿ ನೀಲಾಂಬಿಕೆ ಅಕ್ಕಮಹಾದೇವಿ ಯೊಂದಿಗೆ ಕಾಲ ಕಳೆಯುತ್ತಾಳೆ.ಅಕ್ಕನಂತೆ ನೀಲಾಂಬಿಕೆಯ ಪ್ರೀತಿಗೆ ಪಾತ್ರಳಾಗುತ್ತಾಳೆ.ಅಕ್ಕನಿಗೆ ವೈಯಕ್ತಿಕವಾಗಿ ಹತ್ತಿರಳಾದ ದಾನಮ್ಮ ಅವೈಜ್ಞಾನಿಕವಾದ ಬಾಲ್ಯವಿವಾಹ, ಮದುವೆಗೆ ಸಂಬಂಧಿಸಿದ ಸಾಮಾಜಿಕ ಕಟ್ಟಳೆಗಳನ್ನು ತಿರಸ್ಕರಿಸಿದ ಅಕ್ಕನ ಹತ್ತಿರ ವಿವಾಹದ ಬಗ್ಗೆ ಪ್ರಸ್ತಾಪಿಸುತ್ತಾಳೆ.ಸಮಾಜ ಸೇವೆಯ ಧ್ಯೇಯ ಉಳ್ಳ ಶರಣರಿಗೆ ವಿವಾಹ ಎಂದು ತೊಡಕಾಗದು ಎಂಬ ಅಕ್ಕನ ಮಾತಿಗೆ ಸಮ್ಮತಿಯಿತ್ತು ವಿವಾಹವಾಗುವ ನಿರ್ಧಾರದಿಂದ ಮತ್ತೆ ಉಮರಾಣಿಗೆ ಆಗಮಿಸುತ್ತಾಳೆ.
ದಾನಮ್ಮ ಉಮರಾಣಿಗೆ ಮರಳಿದಾಗ ತಂದೆ ತಾಯಿಗಳು ಸಂಖದ ಶಿವಭಕ್ತನಾದ ಶರಣ ಸೋಮಲಿಂಗೇಶ್ವರ ನೊಂದಿಗೆ ಆಕೆಯ ವಿವಾಹ ನಿಶ್ಚಯಿಸುತ್ತಾರೆ.ಬಡಜನರ ಮದುವೆಯ ಕಷ್ಟ ಅರಿತಿದ್ದ ದಾನಮ್ಮ ತನ್ನಿಂದ ಬಡವರಿಗೆ ಸಹಾಯ ಆಗಲೆಂದು ನಿರ್ಧರಿಸಿ ,ನನ್ನೊಂದಿಗೆ ೫೫೧ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ನೇರವೆರಿಸಬೇಕೆಂಬ ಕರಾರನ್ನು ತಂದೆಗೆ ಹಾಕುತ್ತಾಳೆ.ತಂದೆ ಅವಳ ಮಾತಿನಂತೆ ಅವಳೊಂದಿಗೆ ೫೫೧ ಜನರ ಸಾಮೂಹಿಕ ವಿವಾಹ ಏರ್ಪಡಿಸುತ್ತಾರೆ.ಈ ಮದುವೆಗೆ ಬಸವಣ್ಣ ಮತ್ತು ನೀಲಾಂಬಿಕೆಯರು ಆಗಮಿಸಿ ದಂಪತಿಗಳಿಗೆ ಆಶೀರ್ವಾದ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಸೋಮಲಿಂಗೇಶ್ವರನ ಊರು ಸಂಖದಲ್ಲಿ ಬಸವಣ್ಣನ ದೇವಸ್ಥಾನ ಇದ್ದು ಅಲ್ಲಿ ಬಸವಣ್ಣ ಮತ್ತು ನೀಲಾಂಬಿಕೆಯರ ಮೂರ್ತಿಗಳಿವೆ.ಆದರೆ ಬಸವಣ್ಣನ ಮೂರ್ತಿ ಮಾತ್ರ ನಂದಿಯ ರೂಪದಲ್ಲಿ ಇರುವದು ದುರದೃಷ್ಟ.
ದಾನಮ್ಮನ ಮದುವೆಯೊಂದಿಗೆ ನಡೆದ ಸಾಮೂಹಿಕ ವಿವಾಹವೇ ಬಹುಶ ಜಾತಿ ಮತಗಳನ್ನು ಮೀರಿ ನಮ್ಮ ನಾಡಿನಲ್ಲಿ ನಡೆದ ಮೊಟ್ಟಮೊದಲ ಸಾಮೂಹಿಕ ವಿವಾಹ ಆಗಿರಬಹುದು.ದಾನಮ್ಮ ಶರಣರ ತತ್ವಗಳನ್ನು ಹಾಸಿ ಹೊದ್ದಿದ್ದರಿಂದಲೇ ಬಡಜನರ ಕಷ್ಟಗಳಿಗೆ ಸ್ಪಂದಿಸುವ ಇಂತಹ ನಿರ್ಮಲವಾದ ಮನಸ್ಸು, ಒಬ್ಬ ಸಾಮಾನ್ಯ ಮಹಿಳೆಯಾಗಿದ್ದು ಇಷ್ಟು ಜನರ ವಿವಾಹ ಮಾಡಿಸುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು.
ಸಂಗತೀರ್ಥದಲ್ಲಿ ಮದುವೆ ಆದ ದಾನಮ್ಮ ತರುವಾಯ ಪತಿಯೊಂದಿಗೆ ಗುಡ್ಡಾಪುರಕ್ಕೆ ಬಂದು ನೆಲೆಸುತ್ತಾಳೆ.ಮಹಾಶಿವಭಕ್ತನು ,ದಾಸೋಹ,ಕಾಯಕನಿಷ್ಟೆ ,ಅತಿಥಿ ಸತ್ಕಾರ ಮೊದಲಾದ ಸದ್ಗುಣಗಳನ್ನು ರೂಢಿಸಿಕೊಂಡಿದ್ದ,ಪತ್ನಿಯ ಕಾರ್ಯದ ಬಗ್ಗೆ ಪ್ರೀತಿ, ಗೌರವ ಹೊಂದಿದ್ದ ಸೋಮನಾಥ ದಾನಮ್ಮನ ಎಲ್ಲಾ ಕಾರ್ಯಗಳಲ್ಲಿ ವಿನಮ್ರನಾಗಿ ಕೈಜೋಡಿಸುತ್ತಾನೆ.ದಂಪತಿಗಳಿಬ್ಬರು ಸೇರಿ ಗುಡ್ಡಾಪುರದಲ್ಲಿ ಬಡವರ,ರೋಗಿಗಳ ಸೇವೆ ಮಾಡುತ್ತಾರೆ.
ಇದೇ ವೇಳೆಗೆ ಕಲ್ಯಾಣದಲ್ಲಿ ಕ್ರಾಂತಿ ನಡೆದು ಅಣ್ಣ ಐಕ್ಯನಾಗಿ ,ಶರಣರು ಕಲ್ಯಾಣದಿಂದ ಚದುರಿದ ಸುದ್ದಿ ದಾನಮ್ಮನಿಗೆ ತಲುಪುತ್ತದೆ. ಈ ಸುದ್ದಿ ಕೇಳಿ ದಾನಮ್ಮ ದಿಗ್ಭ್ರಾಂತಳಾಗುತ್ತಾಳೆ.ದಂಪತಿಗಳಿಬ್ಬರು ಮನೆ,ಮಠ ತೊರೆದು ವಚನ ಸಾಹಿತ್ಯದ ಕಂಪನ್ನು ನಾಡಿನಾದ್ಯಂತ ಹರಡಲು ಹಾಗೂ ಶರಣ ಧರ್ಮವನ್ನು ಪ್ರಚಾರ ಮಾಡಲು ನಿರ್ಧರಿಸುತ್ತಾರೆ. ಪತ್ನಿಯ ನಿರ್ಧಾರಕ್ಕೆ ಪತಿ ಬೆನ್ನೆಲುಬಾಗಿ ನಿಲ್ಲುತ್ತಾನೆ. ಧರ್ಮ ರಕ್ಷಣೆಗಾಗಿ ಹೋರಾಡಲು ಕಂಕಣಬದ್ಧರಾಗಿ ಕಲ್ಯಾಣಕ್ಕೆ ಆಗಮಿಸುತ್ತಾರೆ. ಆಗ ಮಹಾದೇವಿ ಅಕ್ಕ, ಅಲ್ಲಮಪ್ರಭು, ರುದ್ರಮೂರ್ತಿ ಮುಂತಾದವರು ಶ್ರೀಶೈಲದ ಕಡೆಗೆ ತೆರಳಿದ್ದನ್ನು ತಿಳಿದು ಧರ್ಮ ಪ್ರಚಾರಕ್ಕಾಗಿ ಶ್ರೀಶೈಲದತ್ತ ಮುಖ ಮಾಡುತ್ತಾರೆ. ಆದವಾನಿ ಯನ್ನು ತಲುಪಿದಾಗ ಇವಳ ಬಗ್ಗೆ ತಿಳಿದಿದ್ದ ಗ್ರಾಮಸ್ಥರು ಇವಳ ದರ್ಶನಕ್ಕೆ ಬರುತ್ತಾರೆ. ಗ್ರಾಮದ ಬಹುಸಂಖ್ಯಾತರಾದ ನೇಕಾರರು, ಒಕ್ಕಲಿಗರು ಇವಳಿಂದ ಲಿಂಗದೀಕ್ಷೆ ಪಡೆಯುತ್ತಾರೆ. ನಂತರ ಆಲಂಪುರದ ಬ್ರಹ್ಮೇಶ್ವರ ಲಿಂಗವನ್ನು ವೈದಿಕರು ಕಿತ್ತೊಗೆದ ಸುದ್ದಿಯನ್ನು ತಿಳಿದು ಷೋಡಶ ಗಣಂಗಳೊಂದಿಗೆ ಸೇರಿ ಆಲಂಪುರಕ್ಕೆ ಧಾವಿಸಿ ಅಲ್ಲಿಯ ಅನ್ಯಧರ್ಮಿಯರೊಂದಿಗೆ ಹೋರಾಡಿ ಬ್ರಹ್ಮೇಶ್ವರ ಲಿಂಗವನ್ನು ಪುನಃ ಪ್ರತಿಷ್ಟಾಪನೆ ಮಾಡುತ್ತಾಳೆ. ಇದನ್ನು ಲಕ್ಕಣ್ಣ ದಂಡೇಶನು ತನ್ನ ಶಿವತತ್ವ ಚಿಂತಾಮಣಿ ಯಲ್ಲಿ ತಿಳಿಸುತ್ತಾನೆ. ದಾನಮ್ಮ ಅಬ್ಬಲೂರಿನ ಎಕಾಂತರಾಮಯ್ಯ,ಪುಲಿಗೆರೆಯ ಆದಯ್ಯನಂತೆ ಸ್ಥಾವರಲಿಂಗ ಪ್ರತಿಷ್ಟಾಪನೆ ಮಾಡಿದಂತೆ ತೋರುತ್ತದೆ. ಇಲ್ಲದಿದ್ದರೆ ಲಿಂಗಾಯತ ಧರ್ಮದವರಿಗೆ ಅನ್ಯಧರ್ಮಿಯರೊಂದಿಗೆ ಕಲಹಗಳು ನಡೆದಾಗ ವೀರ ಗಣಾಚಾರಿಣಿ ಆದ ದಾನಮ್ಮ ಶಸ್ತ್ರ ಹಿಡಿದು ಅವರೊಂದಿಗೆ ಹೋರಾಡಿ ಧರ್ಮ ರಕ್ಷಣೆ ಮಾಡಿದ್ದು ಲಿಂಗ ಪ್ರತಿಷ್ಟಾಪನೆ ಎಂದು ದಾಖಲಾಗಿರಲುಬಹುದು.
ಆಲಂಪುರದಿಂದ ಹೊರಟ ದಾನಮ್ಮ ರಾಮೇಶ್ವರಕ್ಕೆ ತೆರಳಿ ,ನಂತರ ಚೋಳರ ರಾಜಧಾನಿ ಕಾಂಚಿಗೆ ತೆರಳುತ್ತಾಳೆ.ಅಲ್ಲಿಯ ರಾಜ ರಾಜಾಧಿರಾಜ ಮತ್ತು ವೈದಿಕರಿಗೆ ಲಿಂಗದೀಕ್ಷೆ ನೀಡುತ್ತಾಳೆ. ಅಲ್ಲಿಂದ ಕಾಶಿ,ಗಯಾ,ಪ್ರಯಾಗ ಮುಂತಾದ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲೆಲ್ಲಾ ಬಸವಣ್ಣ ಮತ್ತು ಇತರ ಶರಣರ ವಚನಗಳನ್ನು, ಲಿಂಗಾಯತ ಧರ್ಮದ ತತ್ವಗಳನ್ನು ಜನರಿಗೆ ತಿಳಿಯುವಂತೆ ಪ್ರಚಾರ ಮಾಡುತ್ತಾಳೆ. ಲಿಂಗಾಯತ ಧರ್ಮವನ್ನು ಸ್ವೀಕರಿಸಲು ಬಂದವರಿಗೆ ಲಿಂಗದೀಕ್ಷೆ ನೀಡುತ್ತಾ ಸಾಗುತ್ತಾಳೆ.ನಂತರ ದಕ್ಷಿಣದತ್ತ ಹೊರಳಿ ಕೂಡಲಸಂಗಮಕ್ಕೆ ಬಂದು ಅಲ್ಲಿ ಕೆಲಕಾಲ ತಂಗುತ್ತಾಳೆ.ಅಲ್ಲಿಂದ ಇಲಿಹಾಳ ಬೊಮ್ಮಯ್ಯ,ಚಿಮ್ಮಲಗಿ ಚಂದಿಮರಸ ಮುಂತಾದ ಶರಣರ ಸ್ಥಳಗಳನ್ನು ಸಂದರ್ಶಿಸಿ ಅಣ್ಣನ ಜನ್ಮಸ್ಥಳ ಬಾಗೇವಾಡಿಗೆ ಬರುತ್ತಾಳೆ. ಬಾಗೇವಾಡಿಯಲ್ಲಿ ಅನೇಕರಿಗೆ ಲಿಂಗದೀಕ್ಷೆ ನೀಡಿ ತರುವಾಯ ತನ್ನ ಮೂಲಸ್ಥಳ ಗುಡ್ಡಾಪುರಕ್ಕೆ ಆಗಮಿಸುತ್ತಾಳೆ. ಅಲ್ಲಿ ಮತ್ತೆ ಜನಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ದಾನಮ್ಮ ಕೊನೆಗೆ ಅಲ್ಲಿಯೇ ಐಕ್ಯಳಾಗುತ್ತಾಳೆ.
ಲಕ್ಕಣ್ಣ ದಂಡೇಶನು ,
ಲಿಂಗದಲ್ಲಿ ನುಡಿದು,ಲಿಂಗದಲ್ಲಿ ನಡೆದು
ಲಿಂಗದಲ್ಲಿ ಮುಟ್ಟಿ, ಲಿಂಗದಲ್ಲಿ ವಾಸಿಸಿ
ಲಿಂಗದಲ್ಲಿ ಕೇಳಿ ,ಲಿಂಗವಾಗಿ ನೋಡಿ
ಸರ್ವಾಂಗವು ಲಿಂಗವಾಗಿ ಐಕ್ಯವಾದಳು ವರದಾನಿ ಗುಡ್ಡವ್ವ
ಎಂದು ದಾನಮ್ಮಳು ಐಕ್ಯಳಾದದ್ದನ್ನು ಉಲ್ಲೇಖಿಸುತ್ತಾನೆ.
ಆಗ ವಿಜಯಪುರ ಪ್ರದೇಶವು ದೇವಗಿರಿಯ ಯಾದವರ ವಂಶದವನಾದ ಮಹಾದೇವ ರಾಜನ ಅಧೀನದಲ್ಲಿತ್ತು. ಅವನ ಮಾಂಡಲೀಕನಾದ ಸಾಯಿದೇವನು ಈ ಭಾಗದಲ್ಲಿ ಆಳುತ್ತಿದ್ದನು.ದಾನಮ್ಮ ಐಕ್ಯಳಾದ ನಂತರ ಅವಳ ಬಗ್ಗೆ ಸಾಯಿದೇವನಿಗೆ ಭಕ್ತಿ ಉಂಟಾಗಿ ಅವನು ಭೀಮಾನದಿಯ ತೀರದಲ್ಲಿ ವಾತಾಖ್ಯಪುರ ನಗರ ಕಟ್ಟಿಸಿ ಅಲ್ಲಿ ವರದಾನಿ ಗುಡ್ಡವ್ವೆಯ ದೇವಾಲಯ ಕಟ್ಟಿಸಿ ಅದಕ್ಕೆ ಅನೇಕ ಗ್ರಾಮಗಳನ್ನು ಉಂಬಳಿ ನೀಡಿದನು. ಆ ವಾತಾಖ್ಯಪುರ ಭೀಮಾನದಿಯ ತೀರದಲ್ಲಿ ವಿಜಯಪುರದಿಂದ ೫೦ ಮೈಲಿಗಳ ದೂರದಲ್ಲಿ ಇರುವ ವಾಡಪುರಿಯೇ ಆಗಿದೆ.
ಇಂದು ದಾನಮ್ಮನ ಕಾರ್ಯಕ್ಷೇತ್ರ ಮತ್ತು ಐಕ್ಯಸ್ಥಳವಾದ ಗುಡ್ಡಾಪುರದಲ್ಲಿ ಶರಣೆ ದಾನಮ್ಮನ ದೇವಸ್ಥಾನವಿದೆ. ಜೊತೆಗೆ ಆಕೆಯ ಪತಿ ಸೋಮಲಿಂಗೇಶ್ವರ,ತಂದೆ ತಾಯಿಯ ಆರಾಧ್ಯದೈವ ವೀರಭದ್ರೇಶ್ವರ, ಆಕೆಯ ಆರಾಧ್ಯದೈವ ಶ್ರೀಶೈಲ ಮಲ್ಲಿಕಾರ್ಜುನ,ಗುರುಗಳಾದ ಶಾಂತವೀರ ಸ್ವಾಮಿಗಳ ಪಾದುಕೆ ,ಭಕ್ತ ಅಡಿಗಲ್ಲೇಶ ಮುಂತಾದ ದೇವಾಲಯಗಳು ದೇವಸ್ಥಾನದ ಆವರಣದಲ್ಲಿವೆ.ಅಂದು ಅವಳು ದಾನ ಮಾಡಿದರ ಸಂಕೇತವಾಗಿ ಇಂದು ನಿತ್ಯ ಅಲ್ಲಿ ಅನ್ನದಾಸೋಹ ನೇರವೆರುತ್ತದೆ.
ಅನುಭವ ಮಂಟಪದಲ್ಲಿ ಶರಣರಿಗೆ ಕೊಟ್ಟ ಮಾತಿನಂತೆ ದಾನಮ್ಮ ಶರಣ ಧರ್ಮವನ್ನು ಕನ್ನಡನಾಡಿನ ಗಡಿ ದಾಟಿ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಪ್ರಚಾರ ಮಾಡುತ್ತಾಳೆ.ಶರಣರ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಬೋಧಿಸುತ್ತಾಳೆ. ಧರ್ಮಕ್ಕೆ ಕುತ್ತು ಬಂದಾಗ ವೀರ ಗಣಾಚಾರಿಣಿ ಆಗಿ ಖಡ್ಗ ಹಿಡಿದು ಹೋರಾಟ ಮಾಡುತ್ತಾಳೆ.ಶರಣ ಧರ್ಮವು ಮಹಿಳೆಯರಿಗಂಟಿದ ಮಾಯೆ,ಮೈಲಿಗೆಯ ಕಳಂಕವನ್ನು ತೊರೆದು, ಅವಳಿಗೆ ಗುರು, ಜಂಗಮದ ಸ್ಥಾನವನ್ನು ಕಲ್ಪಿಸಿ ಲಿಂಗದೀಕ್ಷೆ ನೀಡುವ ಅವಕಾಶ ಕೊಟ್ಟದ್ದನ್ನು ಉಪಯೋಗಿಸಿಕೊಂಡು ಶರಣರಿಗೆ,ಶರಣ ಧರ್ಮದ ಆಕಾಂಕ್ಷಿಗಳಿಗೆ ಲಿಂಗದೀಕ್ಷೆ ನೀಡುತ್ತಾಳೆ.ಹೀಗೆ ವಚನಗಳ ಕಂಪನ್ನು ನಾಡಿನಾದ್ಯಂತ ಪಸರಿಸಿ ವೀರ ಗಣಾಚಾರಿಣಿ ಎನಿಸಿಕೊಳ್ಳುತ್ತಾಳೆ.
ಆಕರ ಗ್ರಂಥಗಳು
೧)ವರದಾನಿ ಗುಡ್ಡವ್ವೆ- ಡಾ.ಎಸ್.ಎಂ.ಹುಣಶ್ಯಾಳ, ಬಸವೇಶ್ವರರ ಸಮಕಾಲೀನರು, ಬಸವ ಸಮಿತಿ, ಬೆಂಗಳೂರು-೧, ದ್ವೀತಿಯ ಮುದ್ರಣ-೧೯೭೬
೨)ವರದಾನಿ ಗುಡ್ಡವ್ವೆ ( ಚಾರಿತ್ರಿಕ ವಿವರಗಳು)- ಪ್ರೊ.ಬಿ.ಸಿ.ಜವಳಿ,ಗುಡ್ಡಾಪುರ ದಾನಮ್ಮನ ಪುರಾಣವು ( ಚರಿತ್ರ ಕಾವ್ಯ), ೧೯೭೬
-ಡಾ.ರಾಜೇಶ್ವರಿ ಶೀಲವಂತ
ಬೀಳಗಿ