ಹರಿಹರ ಬಸ್ ನಿಲ್ದಾಣದಲ್ಲಿ ಕಳ್ಳರು ದೋಚಿದ ಪರ್ಸಿನಲ್ಲಿ ಇದ್ದದ್ದು ಹಣ ಮಾತ್ರವಲ್ಲ
ಅವತ್ತು ನಟ್ಟ ನಡುರಾತ್ರಿ. ಅಜಮಾಸು ಒಂದು ಗಂಟೆ ಮೀರಿದ ಅಪರಾತ್ರಿಯ ಸಮಯ. ಚುರುಕಾಗಿ ಕೊರೆಯುವ ನವೆಂಬರ್ ತಿಂಗಳಕಡೆಯ ಕಡುಚಳಿ. ಹರಿಹರ ಬಸ್ ನಿಲ್ದಾಣದಲ್ಲಿ ಕೆಂಪು ಬಸ್ಸು ಹತ್ತುವ ಧಾವಂತ ನನ್ನದು. ಬಸ್ಸಿನ ಬಾಗಿಲ ಬಳಿ ದಾಳಿಕೋರರಂತೆ ಏಕಾಏಕಿ ನುಗ್ಗಿ ಮುಗಿಬಿದ್ದ ಜನಜಂಗುಳಿ. ಅವರಲ್ಲಿ ಕಳ್ಳರೂ ಇದ್ದರೆಂಬ ಕಿಂಚಿತ್ತೂ ಸುಳಿವು, ತಿಳಿವಳಿಕೆಯಾಗಲಿ, ಹರಿಹರ ಬಸ್ ಸ್ಟ್ಯಾಂಡಿನ ಇಂಥ ಕೃತ್ಯ ಕುರಿತ ಕ್ರೂರ ದ್ಯಾಸವಾಗಲಿ ನನಗಿರಲಿಲ್ಲ. ಮಿಂಚಿ ಮಾಯವಾದಂತೆ ಪ್ಯಾಂಟಿನ ಎಡಗಿಸೆಯ ಕೆಂಪು ಪರ್ಸ್ ಕಳ್ಳರ ಕೈಸೇರಿತ್ತು. ಬಸ್ ಸೀಟಲ್ಲಿ ಕುಂತು ಇನ್ನೇನು ತಿಕೀಟು ತೆಗೆಸಲು ಪರ್ಸ್ ತಡಕಾಡಿದೆ. ಖರೇನ ಎದಿ ಧಸಕ್ಕಂತು. ಎಡಗಿಸೆ ಖಾಲಿ ಖಾಲಿ, ಬಸ್ ಹತ್ತುವಾಗಲೇ ನನ್ನ ಕೆಂಪು ಪರ್ಸ್ ಕಳ್ಳರ ಕೈ ಸೇರಿತ್ತು.
ಎಲ್ಲ ನೋಟುಗಳನ್ನು ಕೆಂಪು ಪರ್ಸಿನಲ್ಲೇ ತುರುಕಿದ್ದೆ. ಪ್ಯಾಂಟಿನ ಬಲಗಿಸೆ ಕೈ ಮುಟ್ಟಿ ತಡಕಾಡಿದೆ. ಸಧ್ಯ ಮೊಬೈಲ್ ಫೋನ್ ಇತ್ತು. ನನಗದುವೇ ಸಣ್ಣ ಸಮಾಧಾನ. ಆ ಸಮಾಧಾನವನ್ನು ನನಗೆ ನಾನೇ ಮಾಡಿಕೊಂಡೆ. ಅದೇನಪಾಂದ್ರ ಸಧ್ಯಕ್ಕೆ ಸೆಲ್ ಫೋನ್ ಕದ್ದಿಲ್ಲ ಎಂಬುದು. ಅದರಲ್ಲಂತೂ ಎಲ್ಲೂ ಪ್ರಕಟವಾಗದಿರುವ ಅಪರೂಪದ ಮುನ್ನೂರಕ್ಕೂ ಹೆಚ್ಚು ಬರಹಗಳು ಫೋನಿನ ನೋಟ್ ಪ್ಯಾಡಲ್ಲಿ ಠಿಕಾಣಿ ಹೂಡಿವೆ. ಅವನ್ನೆಲ್ಲ ಪುಸ್ತಕ ರೂಪದಲ್ಲಿ ತಂದು ಮುಕ್ತಿ ದೊರಕಿಸಲು ಸಧ್ಯಕ್ಕೆ ಸಮಯ ಸಾಲುತ್ತಿಲ್ಲ. ಅಂದ್ಹಾಂಗ ಅದರ ಹಿಂದಿನ ದಿನ ಧಾರವಾಡದ ಸಕ್ರಿ ಬಾಳಾಚಾರ್ಯ ಟ್ರಸ್ಟ್ ಮತ್ತು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ಶಾಂತಕವಿ ನಾಟಕೋತ್ಸವದ ಉದ್ಘಾಟನಾ ಸಮಾರಂಭ. ಅದನ್ನು ಮುಗಿಸಿ, ಅವತ್ತು ಜಡಭರತರ “ಆ ಊರು ಈ ಊರು” ಎಂಬ ಹುಲುಗಪ್ಪ ಕಟ್ಟೀಮನಿ ಕಟ್ಟಿದ ನಾಟಕ ನೋಡುವುದನ್ನು ಅರ್ಧಕ್ಕೆ ಬಿಟ್ಟು ಬಂದಿದ್ದೆ.
ಹಾಗೆ ಬಿಟ್ಟು ಬರಲು ಖರೇ ಖರೇ ಕಾರಣವಿತ್ತು. ಇನ್ನೇನು ಅವತ್ತು ರಾತ್ರಿ ನಾಟಕ ಮುಗಿವ ಮೊದಲೇ ನಾನಿದ್ದ ಕೊಠಡಿ ಖಾಲಿ ಮಾಡುವಂತೆ ನನ್ನನ್ನು ಕರೆಸಿದ ವ್ಯವಸ್ಥಾಪಕ ಮಹಾಶಯ ಮುಂಗಡವೇ ರೂಮಿನ ಲೆಕ್ಕ ಚುಕ್ತ ಮಾಡಿದ್ದರು. ಹೀಗಾಗಿ “ಆ ಊರು ಈ ಊರು” ನಾಟಕ ಅರ್ಧಕ್ಕೆ ಬಿಟ್ಟು ನಮ್ಮೂರು ದಾವಣಗೇರಿಗೆ ಹೊರಟು ಬಿಟ್ಟಿದ್ದೆ. ಆದರೆ ನನಗೋ ನಮ್ಮ ಹಳೆಯ ಬಿಜಾಪುರವೆಂಬ ಇಂಗರೇಜಿ ಆಳ್ವಿಕೆ, ಬರ ಮತ್ತು ಬಿಸಿಲನಾಡಿನ ಬಿಸುಪು ಭಾಷೆಯ ಕತೆ, ಕಾದಂಬರಿ, ನಾಟಕಗಳೆಂದರೆ ಹಂಡೆ ‘ಹಾಲುಹುಗ್ಗಿ’ ಉಂಡ ಖಂಡುಗ ಖುಷಿ. ಬಾಲ್ಯದಲ್ಲೇ ರಾವಬಹಾದ್ದೂರರ ಗ್ರಾಮಾಯಣ, ಮಿರ್ಜಿ ಅಣ್ಣಾರಾಯರ ಅಶೋಕ ಚಕ್ರ, ದು.ನಿಂ. ಬೆಳಗಲಿಯವರ ಮೌನಕ್ರಾಂತಿ, ಪುಂಡಲೀಕ ಬಸನಗೌಡ ಧುತ್ತರಗಿ ಅವರ ಹರಗಿರಿಜೆ ಮತ್ತು ಮಲಮಗಳು ಓದಿ ಖಂಡುಗಗಟ್ಟಲೇ ಖುಷಿಪಟ್ಟವನು ನಾನು. ಕೃಷ್ಣೆ, ಮಲಪ್ರಭೆ ನೆಲದ ಬದುಕಿನ ಹಸಿರು, ಜೀವದುಸಿರು ತುಂಬಿದ ಸಂವೇದನೆಗಳನ್ನು ಮನದುಂಬಿಸಿಕೊಳ್ಳುವುದೆಂದರೆ ಹರಿಗಡಿಯದ ಸಂತಸ. ಅವಿಭಜಿತ ಬಿಜಾಪುರದ ಭಾವಧ್ವನಿಗಳು ದಟ್ಟವಾಗಿ ಗೂಡುಗಟ್ಟುವಲ್ಲಿ ಅವು ನನ್ನೊಳಗೆ ಗುದುಮುರಗಿ ಹಾಕುತ್ತಲೇ ಭರಪೂರಗೊಳ್ಳುತ್ತವೆ.
ಅದರಲ್ಲೂ ಮಾಧ್ವ ಬ್ರಾಹ್ಮಣರ ‘ಎಲೈಟ್ ಜವಾರಿ’ ಮಿಸಾಳ ಭಾಜಿ ಭಾಷೆಯ ಸೂಕ್ಷ್ಮ ಬಳಕೆಯಂತೂ ವಂಡರ್ಫುಲ್. ಪ್ರಾಯಶಃ ರಂಗಪಠ್ಯದ ಸಂದರ್ಭದಲ್ಲಿ ಅದು ನಮ್ಮ ಜಡಭರತರೆಂಬ ಜಿ.ಬಿ. ಜೋಶಿ ಅವರಿಗೆ ಮಾತ್ರ ಸಾಧ್ಯವೆಂದರೆ ಅತ್ಯುಕ್ತಿಯಲ್ಲ. ಅದನ್ನು ಅಷ್ಟೇ ಹಾಳತವಾಗಿ ನಾಟಕವಾಗಿಸುವುದು ನಮ್ಮ ಹಗರಿ ಬೊಮ್ಮನಹಳ್ಳಿಯ ರಂಗಚಿಂತಕ ಹುಲುಗಪ್ಪ ಕಟ್ಟೀಮನಿಗೆ ಬರೋಬ್ಬರಿ ಒಲಿತ ರಂಗವಿದ್ಯೆ. ಹುಲುಗಪ್ಪ ಈ ಬಾರಿ ತೀರ್ಥಹಳ್ಳಿ ರಂಗತಂಡಕ್ಕೆ ನಿರ್ದೇಶಿಸಿದ ಅಂತಹ ಅಪರೂಪದ “ಆ ಊರು ಈ ಊರು” ನಾಟಕ ನೋಡಲು ಸಾವಿರ, ಐನೂರು, ಇನ್ನೂರು ರುಪಾಯಿಗಳ ತಿಕೀಟು ತಗೊಂಡು ಬಂದ ಐದಾರು ನೂರು ಮಂದಿಯಿಂದ ಸೃಜನಾ ರಂಗಮಂದಿರ ತುಂಬಿ ತುಳುಕ್ಯಾಡಿತ್ತು. ಅದಕ್ಕೆಲ್ಲ ಯುವಮಿತ್ರ ಸಮೀರ ಜೋಶಿಯ ಶ್ಯಾಣೇತನ ಮತ್ತು ಅಗಾಧವಾದ ಪರಿಶ್ರಮವಿತ್ತು.
ಅದೆಲ್ಲ ‘ಸಜೋ’ ಎಂಬ ಸಮೀರ ಜೋಶಿಯ ಶ್ರಮದ ಫಲ. ಹೌದು ವರ್ತಮಾನದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಅಭಿರುಚಿಗಳನ್ನು ಸಜೋ ತರಹದ ತರುಣರು ಮಾತ್ರ ಹೆಚ್ಚು ಸಂವೇದಿಸಬಲ್ಲರು. ಆದರೆ ಅಲ್ಲಿ ನನಗೆ ಪತ್ರಕರ್ತ ಕಮ್ ಸಾಹಿತಿ ಎಂಬಂತೆ ಬಿಂಬಿಸಿಗೊಂಡ ಹಿರಿಯನೊಬ್ಬನು “ಸಾಹೇಬರೇ ಇಲ್ಲಿ ಬಂದವರೆಲ್ಲ ಒಂದೇ ಜಾತಿ, ಜನಾಂಗದವರೆಂದು” ಕಟಕಿದರು. ಅದೆಲ್ಲ ಒತ್ತಟ್ಟಿಗಿರಲಿ ಆದರೆ ನಾನು ನಾಟಕ ನೋಡುವುದನ್ನು ಅರ್ಧಕ್ಕೆ ಬಿಟ್ಟು ಬರಬಾರದಿತ್ತು. ಅದಕ್ಕೆಲ್ಲ ಅಲ್ಲಿನ ವ್ಯವಸ್ಥಾಪಕರು ಅಂದು ಮಾಡಿದ ಕೊಠಡಿಯ ಲೆಕ್ಕಚುಕ್ತವೇ ಹೆಚ್ಚು ಕಾರಣವಾಗಿತ್ತು. ಆಗಲಿ ಇನ್ನೇನು ಮಾಡೋದು ರಾತ್ರಿಯೇ ದಾವಣಗೆರೆ ತಲುಪಿ, ಮರುದಿನ ಮುಂಜಾನೆ ರಂಗಾಯಣದ ನಿತ್ಯ ಕೆಲಸಗಳನ್ನು ಅಟೆಂಡ್ ಮಾಡಿದರಾಯಿತೆಂಬ ಸಣ್ಣ ಇರಾದೆಯೊಂದು ಸಮಜಾಯಿಷಿ ತಂದಿತ್ತು. ಅದೇನೇ ಇರಲಿ ಹೊರಟು ನಿಂತಾಗ ಎದುರಾದ ಗಲಿಬಿಲಿಯ ವಿಘ್ನಗಳು ಮಾತ್ರ ಕಂಗೆಡಿಸಿದವು.
ಅವತ್ತು ರವಿವಾರ ಬೇರೆ. ಎಲ್ಲ ದಾರಿಗಳು ಬೆಂಗಳೂರಿಗೆ ಖುಲ್ಲಾ. ಬೆಳಗಾವಿ ಮತ್ತು ಬೇರೆ ಕಡೆಯಿಂದ ಧಾರವಾಡದ ಕಡೆಗೆ ಬರುವ ಎಲ್ಲಾ ಬಸ್ಸುಗಳು ತುಂಬಿ ತುಳುಕ್ಯಾಡಿಕೊಂಡೇ ಭರ್ತಿಯಾಗಿ ಬರ್ತಿದ್ದವು. ಮಲಗಿಕೊಂಡು ಹೋಗಲು ಅಲ್ಲ, ಕುಂತುಕೊಂಡೋ ನಿಂತುಕೊಂಡೋ ಹೋಗಲಿಕ್ಕೂ ಸ್ಥಳಾವಕಾಶ ಇಲ್ಲದಷ್ಟು ಗೌಜು ಗರ್ದಿ. ಹ್ಯಂಗ್ಯಂಗೋ ಮಾಡಿ ಹುಬ್ಬಳ್ಳಿಮಟ ಹೋದರೆ ಸಾಕು. ಅಲ್ಲಿಂದ ಬೆಂಗಳೂರು ಕಡೆಗೆ ಹೋಗುವ ರಹದಾರಿ ಸಿಗಬಹುದೆಂದು ಹುಬ್ಬಳ್ಳಿಗೆ ಹೊಂಟೇ ಬಿಟ್ಟೆ. ಧಾರವಾಡದಿಂದ ಹುಬ್ಬಳ್ಳಿ ಕೇವಲ ಇಪ್ಪತ್ತು ಕಿ. ಮೀ. ದೂರ ಇದ್ದೀತು. ಅಷ್ಟು ದೂರ ತಲುಪಲು ನಾನು ಕುಂತ ಕೆಂಪು ಬಸ್ಸು ಬರೋಬ್ಬರಿ ಒಂದು ತಾಸು ಹತ್ತು ಮಿನಿಟು ಸಮಯ ಪಡೆದುಕೊಂಡಿತ್ತು. ಅದೇಕೋ ವಿಷಯ ಮತ್ತು ಸಮಯ ಅಕ್ಷರಶಃ ಆಶಾದಾಯಕ ಆಗಿರಲಿಲ್ಲ. ಮರುದಿನ ಮುಂಜಾನೆ ಬೆಂಗಳೂರು ಬದುಕಿಗೆ ಹಾತೊರೆದವರಿಂದ ಎಲ್ಲ ಹೈಟೆಕ್ ಬಿಳಿಯ ಬಸ್ಸುಗಳು ತುಂಬಿ ಹೋಗುತ್ತಿದ್ದವು. ಎಲ್ಲವೂ ಡೈರೆಕ್ಟ್ ಬೆಂಗಳೂರಿಗೆ ಹೋಗುವವರಿಂದಲೇ ಭರತಿಯಾಗಿ ಬರುತ್ತಿದ್ದವು. ಎಲ್ಲಾ ಬಸ್ಸುಗಳದು ನಾನ್ ಸ್ಟಾಪ್ ಮತ್ತು ಬೈಪಾಸ್ ಪ್ರಯಾಣ. ಆದರೆ ದಾವಣಗೆರೆ ಶಹರದ ಮೂಲಕ ಹೋಗಬೇಕಾದ ಅವು ಯಾವೂ ದಾವಣಗೆರೆಯಲ್ಲಿ ನಿಲುಗಡೆ ಇಲ್ಲದೇ ಬೆಂಗಳೂರು ಕಡೆಗೆ ಮುಖಮಾಡಿ ಹೋಗುವ ತುರುಸಿನಲ್ಲಿದ್ದವು.
ಅಂಥದರಲ್ಲೂ ಗೋಕಾಕ ಯರಗಟ್ಟಿ ಕಡೆಯಿಂದ ಒಂದು ಕೆಂಪು ಬಸ್ ಬಂತು. ಅದಕ್ಕೆ ದಾವಣಗೆರೆ ಬೋರ್ಡ್ ಹಾಕಿತ್ತು. ಆದರೆ ಅದು ಹರಿಹರದ ತನಕ ಹೋಗುವುದೆಂದು ಕಂಡಕ್ಟರ್ ಹೇಳಿದ್ದು. ಅಲ್ಲಿಂದ ದಾವಣಗೆರೆ ಹೋಗುವುದು ಅದಿನ್ನೆಷ್ಟು ದೂರದ ದಾರಿ, ಹೋದರಾಯಿತೆಂದು ಬಸ್ ಏರಿ ಕುಂತ ಮೇಲೆಯೇ ಅದರ ಸಾಧಾರಣ ವೇಗದ ಪರಿಚಯ. ನಟ್ಟ ನಡುರಾತ್ರಿ ಮೀರಿ ಸರಿಯಾಗಿ ಒಂದುಗಂಟೆಗೆ ಹರಿಹರ ಬಸ್ ನಿಲ್ದಾಣ ತಲುಪಿದ್ದು. ಅರ್ಧ ತಾಸು ಕಾಯ್ದು, ಕಾಯ್ದು ಸುಸ್ತು. ಆಗ ದಾವಣಗೆರೆ ಕಡೆಗೆ ಹೋಗುವ ಮತ್ತೊಂದು ಕೆಂಪು ಬಸ್ ಆಗಮನ. ಅದೆಲ್ಲಿಂದ ಬಂದರೋ ಜನ ಜಮಾಯಿಸಿ ನುಗ್ಗಿ ಬಂದರು. ಎಲ್ಲರಿಗೂ ಬಸ್ ಏರಿ ಕೂರುವ ಅತ್ಯವಸರ.
ಕಳ್ಳರಿಗೆ ಅದುವೇ ಕಳ್ತನಕ್ಕೆ ಅಧಿಕ ಅವಕಾಶ. ಪ್ರಯಾಣಿಕರ ಪೂರ್ಣಚಿತ್ತ ಬಸ್ ಏರಿ ಕೂರುವತ್ತ. ಕಳ್ಳರ ಚಿತ್ತ ಪ್ರಯಾಣಿಕರ ಕಿಸೆಗಳತ್ತ. ಅದ್ಯಾವ ಮಾಯೆಯಲ್ಲಿ ನನ್ನ ಪರ್ಸ್ ಯಾಮಾರಿಸಿದರೋ ಗದ್ದಲದಲ್ಲಿ ಗೊತ್ತಾಗಲಿಲ್ಲ. ಬಸ್ ಹತ್ತಿ ತಿಕೀಟು ತೆಗೆಸಲು ಕಿಸೆಗೆ ಕೈ ಹಾಕಿದಾಗಲೇ ಗೊತ್ತಾಗಿದ್ದು ಪರ್ಸ್ ಇಲ್ಲವೆಂದು. ತಿಕೀಟಿಗೆ ಹಣವಿಲ್ಲದೇ ಪರದಾಡಿದೆ. ಮೊಬೈಲ್ ಮೂಲಕ ಹಾಕಲು ಚಾರ್ಜ್ ಪೂರ್ತಿ ಖಾಲಿಯಾಗಿದೆ. ಆಗಂತೂ ನನ್ನ ಸ್ಥಿತಿ ಅಯೋಮಯ. ಅದು ತುಂಬಾ ಗಂಭೀರವಾದ ಸಂಕಟದ ಗಳಿಗೆ. ಮಾತಾಡಲು ಸಾಧ್ಯವಾಗುತ್ತಿರಲಿಲ್ಲ. ಅಂಥದರಲ್ಲಿ ಕಂಡಕ್ಟರ್ ನನ್ನ ಸ್ಥಿತಿ ಅರ್ಥ ಮಾಡಿಕೊಂಡು “ಕೆಳಗೆ ಇಳಿದು ಕಂಪ್ಲೇಂಟ್ ಕೊಟ್ಟು ಬರ್ರಿ ಅಂತಲೂ ಇಲ್ಲಿ ರಾತ್ರಿ ಹೊತ್ತು ಯಾವತ್ತೂ ಕಳ್ಳರ ಹಾವಳಿ ಹೆಚ್ಚಿದೆ ಅಂತಲೂ” ಹೇಳಿದರು. ಅದ್ಯಾವುದು ನನಗೆ ಪರಿಣಾಮ ಬೀರುತ್ತಿರಲಿಲ್ಲ. ಆ ಮಾತುಗಳು ಅದೇನೋ ಸಾಂತ್ವನದಂತೆ ಕೇಳಿ ಬಂದವು. ಇಪ್ಪತ್ತು ರುಪಾಯಿಯ “ಈ ಟಿಕೆಟ್ ಇಟ್ಟುಕೊಳ್ಳಿ” ಎಂದು ಟಿಕೆಟ್ ಕೊಟ್ಟು ಕಂಡಕ್ಟರ್ ಔದಾರ್ಯ ಮೆರೆದರು. ನನ್ನ ಬಳಿ ಅವರಿಗೆ ಕೊಡಲು ಹಣವಿರಲಿಲ್ಲ.
ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ವಿವರಿಸಿ ಮನವಿ ಮಾಡಿಕೊಂಡೆ. ನನ್ನ ಮನವಿಗೆ ಸ್ಪಂದಿಸಿದ ಆತ ನಾನಿರುವ ಸಿದ್ಧವೀರಪ್ಪ ಬಡಾವಣೆಯ ಮನೆಗೆ ತಲುಪಿಸಿದರು. ಮರುದಿನ ಮುಂಜಾನೆ ಆತನ ಮೊಬೈಲಿಗೆ ಅಗತ್ಯಕ್ಕಿಂತ ಹೆಚ್ಚು ಹಣ ಕಳಿಸಿದೆ. ಹಾಗೆ ನೋಡಿದರೆ ಇದನ್ನೆಲ್ಲ ವಿವರಿಸುವ ಮಹತ್ವದ ಸಂಗತಿಯೇನಲ್ಲ. ಹಾಗಂತ ಓದುಗರಿಗೆ ಅನಿಸಬಹುದು.
ಅಷ್ಟಕ್ಕೂ ನಾನು ಕಳೆದುಕೊಂಡದ್ದು ರುಪಾಯಿ ಹದಿನೈದು ಸಾವಿರವಿದ್ದ ಪರ್ಸ್ ಮತ್ತು ಎಟಿಎಂ, ಆಧಾರ ಕಾರ್ಡುಗಳು ಮಾತ್ರವಲ್ಲ. ಅದೆಲ್ಲವನ್ನು ಮೀರಿದ ಕಳ್ಳುಬಳ್ಳಿಯಂಥ ಜೀವಾಂತಃಕರಣದ ಭಾವಚಿತ್ರ. ಅದು ಅತ್ಯಪರೂಪದ ಭಾವಚಿತ್ರ. ಕಳೆದ ಹತ್ತು ವರುಷಗಳಿಂದ ಪರ್ಸಿನಲ್ಲಿ ಜತನವಾಗಿರಿಸಿಕೊಂಡು ಬಂದ ಭಾವಚಿತ್ರವದು. ಅದು ನನ್ನ ಹಡೆದವ್ವಳ ಪಾಸ್ ಪೋರ್ಟ್ ಅಳತೆಯ ಫೋಟೋ. ಪ್ರತಿದಿನವೂ ಬೆಳಗ್ಗೆ ಎದ್ದೊಡನೆ ಅವ್ವನ ಭಾವಚಿತ್ರ ಒಂದು ಬಾರಿ ನೋಡಿ ನಮಿಸಿದ ಮೇಲೆಯೇ ನಿತ್ಯದ ಬದುಕಿನ ದಿನಚರಿ ಆರಂಭವಾಗುತ್ತಿತ್ತು. ಆದರೆ ಅವತ್ತು ಮುಂಜಾನೆ ಅದಕ್ಕೆ ಬ್ರೇಕ್ ಬಿತ್ತು. ಅದೇಕೋ ಅವ್ವ ಸತ್ತಾಗ ಬಿಕ್ಕಿ ಬಿಕ್ಕಿಸಿ ಅತ್ತ ಎಲ್ಲ ನೆನಪುಗಳು ಉಮ್ಮಳಿಸಿ ಬಂದವು. ಒಬ್ಬನೇ ಕುಂತು ಕಣ್ಣೀರುಗರೆದೆ.
ನನ್ನ ತಾಯಿಯ ಅನೇಕ ಫೋಟೋಗಳು ನನ್ನ ಬಳಿ ಇವೆ. ಆದರೆ ಅದೇಕೋ ಕಳೆದ ಹತ್ತು ವರುಷಗಳಿಂದ ಪರ್ಸಿನಲ್ಲಿ ಅದೇ ಫೋಟೋವನ್ನು ಜತನವಾಗಿರಿಸಿಕೊಂಡು ದಿನನಿತ್ಯವೂ ಒಂದುಬಾರಿ ಅದನ್ನು ನೋಡುತ್ತಾ ಬಂದ ನನ್ನೊಂದಿಗಿನ ತಾದಾತ್ಮ್ಯತೆಯೊಂದು ಭಾವಪೂರ್ಣ ಬಂಧವನ್ನು ಸ್ಥಾಯಿಗೊಳಿಸಿತ್ತು. ಅಳುವು ತಡೆಯಲಾಗುತ್ತಿರಲಿಲ್ಲ. ಮತ್ತೆ ಅತ್ತು ತುಸು ಹಗುರಗೊಂಡೆ. ಕೆಲವರಿಗದು ಸಿಲ್ಲಿ ಸೆಂಟಿಮೆಂಟ್ ಅನಿಸಬಹುದು. ನನಗೆ ಹಾಗನಿಸಿಲ್ಲ. ವಾರದ ಹಿಂದೆ ತೀರಿಹೋದ ನನ್ನ ಅಕ್ಕನ ಭಾವಚಿತ್ರವೂ ಅಮ್ಮನ ಫೋಟೋದೊಂದಿಗೆ ಸೇರಿಕೊಂಡಿತ್ತು. ಹೌದು ಎಂಬತ್ತೈದು ವರುಷಗಳ ಕಾಲ ಸಂಕಟಗಳನ್ನೇ ಬದುಕಿದ ಅವ್ವನಂತಹ ಅಕ್ಕ ವಾರಕಾಲ “ಮಲ್ಲಣ್ಣ ಬಂದನೇ, ಬಂದನೇ” ಅಂತ ಹಾಲುಗಳ್ಳಿನಿಂದ ನನ್ನನ್ನು ನೆನಪಿಸಿಕೊಂಡು ಪ್ರಾಣಬಿಟ್ಟಿದ್ದಳು. ರಂಗಾಯಣದ ಜವಾಬುದಾರಿಯ ಭರದಲ್ಲಿ ಅಕ್ಕ ಬದುಕಿದ್ದಾಗಲೇ ಹೋಗಲಾಗಲಿಲ್ಲ ಎಂಬ ಪಶ್ಚಾತ್ತಾಪದ ಜತೆಗೆ ಅಕ್ಕನ ಫೋಟೋ ಸಹಿತ ಕಳ್ಳರ ಕೈಸೇರಿತಲ್ಲ ಎಂಬ ಹಳಹಳಿ.
–ಮಲ್ಲಿಕಾರ್ಜುನ ಕಡಕೋಳ
9341010712


