ಗಣಪನಿಗೊಂದು ಪತ್ರ
ನನ್ನ ಪ್ರೀತಿಯ ಗಣೇಶ,
ನಿನಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಇನ್ನೇನು ಕೆಲವೇ ಗಂಟೆಗಳಲ್ಲಿ ನೀನು ಭೂಮಿಗೆ ಇಳಿದು ಬರುವೆ. ಈಗಾಗಲೇ ಮನೆ ಮನೆಗಳಲ್ಲಿ ನಿನ್ನ ಆಗಮನಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. ಪ್ರತಿಯೊಬ್ಬರುಗಳಲ್ಲಿ ಪ್ರತಿ ಗಲ್ಲಿಗಳಲ್ಲಿ ನಿನ್ನನ್ನು ಕೂರಿಸಲು ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.
ನನ್ನ ಅಮ್ಮ ಮನೆಯ ಎಲ್ಲ ಕೋಣೆಗಳಲ್ಲಿನ ಜೇಡರ ಬಲೆಗಳನ್ನು ತೆಗೆದು ಚೊಕ್ಕಟಗೊಳಿಸಿದ್ದಾರೆ. ಅಪ್ಪ, ದೊಡ್ಡಪ್ಪಂದಿರ ಸಹಾಯದಿಂದ ನನ್ನ ಅಣ್ಣಂದಿರು ನಿನ್ನನ್ನು ಕೂರಿಸಲು ಅಲಂಕೃತ ಮಂಟಪವನ್ನು ತಯಾರಿಸುತ್ತಿದ್ದಾರೆ. ಹೊಲದಿಂದ ತಂದ ಮಾವಿನ ಮತ್ತು ಚಂಡು ಹೂವಿನ ತೋರಣಗಳನ್ನು ಮಾಡಿ ಮನೆಯ ತಲೆ ಬಾಗಿಲು ಮತ್ತಿತರ ಕಡೆಗಳಲ್ಲಿ ಕಟ್ಟುತ್ತಿದ್ದಾರೆ.
ಇನ್ನು ನನ್ನ ಅಜ್ಜಿಯಂತೂ ಅಮ್ಮ ದೊಡ್ಡಮ್ಮಂದಿರೊಂದಿಗೆ ಸೇರಿ ನಿನಗೆ ನೈವೇದ್ಯಕ್ಕಾಗಿ ಮೋದಕ, ಕರ್ಜಿಕಾಯಿ, ಚಕ್ಕುಲಿ, ಕೊಬ್ಬರಿ ಉಂಡೆ, ಪಂಚ ಕಜ್ಜಾಯಗಳನ್ನು ಮಾಡಿ ಎತ್ತಿಡುತ್ತಿದ್ದಾರೆ. ಮನೆಯಲ್ಲಿ ಪೂಜೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ನಾವು ಮಕ್ಕಳೆಲ್ಲ ಚಿಕ್ಕಪ್ಪನೊಂದಿಗೆ ಅಂಗಡಿಗೆ ಹೋಗಿ ಸಣ್ಣಪುಟ್ಟ ಪಟಾಕಿಗಳು, ಭೂ ಚಕ್ರ, ಹೂ ಕುಂಡಗಳನ್ನು, ಹಾಗೂ ಮತಾಪುಗಳನ್ನು ತಂದು ಇಟ್ಟುಕೊಂಡಿದ್ದೇವೆ.
ಇನ್ನೇನು ಕೆಲವೇ ಗಂಟೆಗಳಲ್ಲಿ ನಿನ್ನನ್ನು ಮನೆಗೆ ಕರೆತಂದು ಪೂಜಿಸುತ್ತೇವೆ. ಮಂಗಳಾರತಿ ಮಾಡಿ ಭಕ್ತಿಯಿಂದ ಭಜಿಸಿ 21 ಬಾರಿ ಉಟಾ ಬೈಸ್ ಹಾಕಿ ನಮಸ್ಕರಿಸಿ ನಮ್ಮನ್ನು ಕೈ ಹಿಡಿದು ನಡೆಸು ಎಂದು ಬೇಡಿಕೊಳ್ಳುತ್ತೇವೆ. ನಿನಗೆ ನೈವೇದ್ಯ ಅರ್ಪಿಸಿ ನಾವು ಪ್ರಸಾದ ರೂಪದಲ್ಲಿ ಅದನ್ನು ಸೇವಿಸುತ್ತೇವೆ. ಎಲ್ಲವೂ ಸರಿಯೇ.
ಈಗಾಗಲೇ ನನ್ನೂರಿನ ಎಲ್ಲ ರಸ್ತೆಗಳಲ್ಲಿ ದೊಡ್ಡ ದೊಡ್ಡ ಪೆಂಡಾಲುಗಳನ್ನು ಹಾಕಿ ರಸ್ತೆಗಳನ್ನು ಬಂದು ಮಾಡಿ ದೊಡ್ಡ ದೊಡ್ಡ ಗಾತ್ರದ ನಿನ್ನ ಪ್ರತಿಕೃತಿಗಳನ್ನು ಲಾರಿಯಲ್ಲಿ ತರಿಸಿ ನಿಗದಿತ ಜಾಗದಲ್ಲಿ ಇಟ್ಟಿದ್ದಾರೆ. ನಾಳೆ ಡೋಲು ಬ್ಯಾಂಡು ಬಾಜಿಗಳೊಂದಿಗೆ ಕಿವಿಗಡಚಿಕ್ಕುವ
ಶಬ್ದವನ್ನು ಹೊರಡಿಸುವ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ಹಚ್ಚಿ ಜೋರಾಗಿ ಹಾಡು ಕುಣಿತಗಳ ಸಂಭ್ರಮದೊಂದಿಗೆ ನಿನ್ನನ್ನು ಕರೆ ತರುತ್ತಾರೆ. ಪೂಜಿಸುತ್ತಾರೆ. ಅಂದವಾಗಿ ಅಲಂಕರಿಸಿದ ಪೆಂಡಾಲುಗಳಲ್ಲಿ ನಿನ್ನನ್ನು ಕೂರಿಸಿ ಪೂಜಿಸುತ್ತಾರೆ. ಸಾವಿರಾರು ರೂಗಳ ಪಟಾಕಿಗಳನ್ನು ಸುಟ್ಟು ಸಂಭ್ರಮಿಸುತ್ತಾರೆ. ಪ್ರತಿದಿನ ಸಾಯಂಕಾಲ ಸಾವಿರಾರು ಜನ ನಿನ್ನ ದರ್ಶನ ಮಾಡುತ್ತಾರೆ ಅನ್ನ ಸಂತರ್ಪಣೆಗಳು ನಡೆಯುತ್ತವೆ. ವಿವಿಧ ಬಗೆಯ ಸ್ಪರ್ಧೆಗಳನ್ನು ನಡೆಸಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಎಲ್ಲವೂ ಸರಿಯೇ.
ಆದರೆ ಧರ್ಮದ ಅದಿದೇವತೆಯಾದ ನಿನ್ನ ಮುಂದೆ ಐಟಂ ಹಾಡುಗಳನ್ನು ಹಚ್ಚಿ ಕುಡಿದು ಕುಣಿದು, ಇಸ್ಪೀಟ್ ಆಡುವುದು ತರವೆ?
ನಿನ್ನನ್ನು ಕೂರಿಸುವ ನಿಯಮವಿರದ ಹಲವಾರು ಮನೆಗಳಲ್ಲಿ ಅಡುಗೆ ತಯಾರಿಸಿ ನೈವೇದ್ಯ ಮಾಡಲು ಕೊಟ್ಟು ಕಳುಹಿಸುವ ಅಮ್ಮಂದಿರು ತಮ್ಮ ಮಕ್ಕಳು ಗಣೇಶನನ್ನು ಕಾಯುತ್ತಿದ್ದಾರೆ ಎಂದೇ ಸಮಾಧಾನದಿಂದ ಇರುತ್ತಾರೆ ಆದರೆ ನಿನ್ನ ಪೆಂಡಾಲುಗಳು .. ಗಣಪತಿಯನ್ನು ಕಾಯುವ ನೆಪದಲ್ಲಿ ಪಡ್ಡೆ ಹೈಕಳ ಜೂಜಾಟ ಇಸ್ಪೀಟ್ಗಳಂತಹ ಪೋಲಿ ಕೆಲಸಗಳಿಗೆ ಎಳಸುವ ಅಡ್ಡ ಆಗದಿರಲಿ.ವಿದ್ಯಾ ಬುದ್ಧಿಗಳ ಅರಿದೇವತೆಯಾದ ನೀನು ಅಂತಹ ನಿನ್ನ ಮಕ್ಕಳ ಕನಸಿನಲ್ಲಿ ಬಂದು ಅವರ ಕಿವಿ ಹಿಂಡಿ ಬುದ್ದಿ ಕಲಿಸು ಎಂದು ಬೇಡಿಕೊಳ್ಳುತ್ತೇನೆ ಬಪ್ಪ.
ಇನ್ನು ಗಣೇಶನನ್ನು ಕಾಯುವ ನೆಪದಲ್ಲಿ ಗಣೇಶನನ್ನು ಕರೆತರುವ ಮತ್ತು ವಿಸರ್ಜಿಸುವ ದಿನಗಳಲ್ಲಿ ಪೈಪೋಟಿಗೆ ಬಿದ್ದವರಂತೆ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ತರಿಸಿ ಕಿವಿಗಡಚಿಕ್ಕುವಂತಹ ಸಂಗೀತವನ್ನು ಇಡೀ ಊರಿಗೆ ಕೇಳುವಂತೆ ಮೊಳಗಿಸುವವರಿಗೂ ಕೂಡ ನೀನೆ ಒಳ್ಳೆಯ ಬುದ್ದಿ ಕೊಡು. ಗಣೇಶ ಹಬ್ಬದ ಆ ಕೆಲವು ದಿನಗಳ ಮೊದಲು ಮತ್ತು ನಂತರ ನನ್ನ ಅಜ್ಜ ಅಜ್ಜಿಯಂತಹ ವಯಸ್ಸಾದವರು ದೈಹಿಕವಾಗಿ ಕಾಡುವ ವಯೋಸಹಜ ತೊಂದರೆಗಳ ಜೊತೆ ಜೊತೆಗೆ ಈ ದ್ವನಿವರ್ಧಕಗಳ ಶಬ್ದದಿಂದಾಗಿ ಕಿವಿ ತಮಟೆ ಒಡೆದು ಹೋಗುವಂತಹ ನೋವನ್ನು ಅವರು ಅನುಭವಿಸುತ್ತಾರೆ. ಅವರ ಎದೆ ಬಡಿತ ಹೆಚ್ಚಾಗಿ ಆರೋಗ್ಯದಲ್ಲಿ ಅಲ್ಲೋಲಕಲ್ಲೋಲ್ಲ ಉಂಟಾಗುವುದೂ ಇದೆ. ಎಷ್ಟೋ ಜನ ಹೃದಯ ಸ್ತಂಬನಕ್ಕೆ ಒಳಗಾಗಿದ್ದೂ ಉಂಟು. ಅಂತಹವರು ನಿನ್ನ ಹಬ್ಬ ಬಂದರೆ ನಿನ್ನ ಮೇಲೆ ಅದೆಷ್ಟೇ ಭಕ್ತಿ,ಪ್ರೀತಿ ಇದ್ದರೂ ಕೂಡ , ಯಾಕಾದರೂ ಗಣೇಶನ ಹಬ್ಬ ಬಂತು ಎಂದು ನಿನ್ನ ಭಕ್ತರನ್ನು ಶಪಿಸುವುದೂ ಉಂಟು. ಪ್ಲೀಸ್ ನಿನ್ನ ಹುಡುಗು ಬುದ್ದಿಯ ಭಕ್ತರಿಗೆ ನೀನೆ ಬುದ್ಧಿ ಹೇಳು.
ಇನ್ನು ಪೈಪೋಟಿಯಿಂದ ಸಾವಿರಾರು ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ತಂದ ಪಟಾಕಿಗಳನ್ನು ಅದರಲ್ಲೂ ದೊಡ್ಡ ದೊಡ್ಡ ಶಬ್ದ ಮಾಡುತ್ತಾ ಸಿಡಿಯುವ ಬಾಂಬುಗಳ ಶಬ್ದಕ್ಕೆ ಮನೆಯಲ್ಲಿರುವ ನಾಯಿ, ಬೆಕ್ಕುಗಳು, ದನ ಕರುಗಳು ಬೆದರಿ ನಡುಗುತ್ತವೆ ಒಂದೇ ಸಮನೆ ಕೂಗಿ ತಮ್ಮ ಅಳಲನ್ನು ಹೇಳಿಕೊಳ್ಳುತ್ತವೆ. ನಮ್ಮ ಮನೆಯ ಪುಟ್ಟ ನಾಯಿಮರಿಯನ್ನು ಅವುಚಿ ಹಿಡಿದುಕೊಂಡರೂ ಅದರ ನಡುಕ ನಿಲ್ಲುವುದಿಲ್ಲ. ಪಾಪದ ಮೂಕ ಪ್ರಾಣಿಗಳು ಹೇಳಿಕೊಳ್ಳಲೂ ಆಗದೆ ಬಿಡಲೂ ಆಗದೆ ನರಕ ಯಾತನೆಯನ್ನು ಅನುಭವಿಸುತ್ತವೆ. ಇನ್ನು ಬೀದಿಯಲ್ಲಿ ಓಡಾಡುವ ಪ್ರಾಣಿಗಳ ಪಾಡೇನು? ಹಬ್ಬದ ಆ ಸಮಯದಲ್ಲಿ ಅದೆಷ್ಟೋ ಪ್ರಾಣಿಗಳು ಸತ್ತು ಬಿದ್ದಿರಲು ಕಾರಣ ನಿನ್ನ ಭಕ್ತರು ಬಾಡಿಗೆಗೆ ತಂದು ಹಚ್ಚಿರುವ ಧ್ವನಿ ವರ್ಧಕಗಳು ಎಂದರೆ ನಿನಗೆ ಬೇಸರವಿಲ್ಲವಷ್ಟೇ..ನೀನು ಕೂಡ ಆ ಪಶು ಪ್ರಾಣಿಗಳಿಂದ ನಿನ್ನ ದೇಹದ ಮುಖ್ಯ ಭಾಗವನ್ನು ಎರವಲು ಪಡೆದವನು. ನಿನಗೆ ಅವುಗಳ ಸಂಕಟ ನೋವು ಅರಿವಾಗುತ್ತದೆ ಅಲ್ವೇ ?
ಮತ್ತೆ ನೀನ್ಯಾಕೆ ಅವರ ಕಿವಿಹಿಂಡಿ ಅವರಿಗೆ ಬುದ್ಧಿ ಹೇಳುವುದಿಲ್ಲ.ಪ್ಲೀಸ್ ಗಣಪ್ಪ…ನಿನಗೆ ಕೈಮುಗಿದು ಬೇಡಿಕೊಳ್ಳುತ್ತೇನೆ ಅವರಿಗೆ ಬುದ್ಧಿ ಹೇಳಿ ವಯಸ್ಸಾದವರ, ರೋಗಿಗಳ, ಮೂಕ ಪ್ರಾಣಿಗಳ ನೋವನ್ನು ಅವರಿಗೆ ತಿಳಿಸಿ ಹೇಳು.
ಹಾಂ! ಮತ್ತೊಂದು ವಿಷಯ ಹೇಳುವುದನ್ನು ಮರೆತುಬಿಡುತ್ತಿದ್ದೆ. ಪಟಾಕಿ ಹಚ್ಚುವಾಗ ಕೈಕಾಲು, ಮುಖದ ಭಾಗಗಳನ್ನು ಸುಟ್ಟುಕೊಂಡವರು, ಕಣ್ಣು ಕಿವಿಗಳನ್ನು ಕಳೆದುಕೊಂಡವರು ಇದ್ದಾರೆ. ಇಂತಹ ಅವಘಡಗಳು ಸಂಭವಿಸದಂತೆ ಜಾಗರೂಕತೆಯಿಂದ ಹಬ್ಬವನ್ನು ಸಂಭ್ರಮಿಸಲು ನಿನ್ನ ಭಕ್ತರಿಗೆ ನೀನು ಹೇಳಲೇಬೇಕು ನೋಡು…. ಇದು ನಿನ್ನ ಕರ್ತವ್ಯ ಅಲ್ವೇ?
ನನ್ನ ಅಪ್ಪ ಹೇಳ್ತಿದ್ರು… ಸ್ವತಂತ್ರ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಜನರಿಗೆ ತಮ್ಮ ಚಟುವಟಿಕೆಗಳನ್ನು ನಡೆಸಲು, ಸಂದೇಶಗಳನ್ನು ರವಾನಿಸಲು, ಜನರಲ್ಲಿ ದೇಶಪ್ರೇಮದ ಕಿಡಿಯನ್ನು ಹಚ್ಚಲು ಮನೆ ಮನೆಗಳಲ್ಲಿ ಆಚರಿಸುತ್ತಿದ್ದ ಗಣೇಶೋತ್ಸವವನ್ನು ಗಲ್ಲಿ ಗಲ್ಲಿಗಳಿಗೆ ಕರೆತಂದು ಅರ್ಥಪೂರ್ಣವಾಗಿ ಆಚರಿಸಲು ಆರಂಭಿಸಿದರಂತೆ. ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಗಣೇಶ ದೇವರನ್ನು ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರನನ್ನಾಗಿಸಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಾಲಗಂಗಾಧರ ತಿಲಕರು. ಒಂದು ಧಾರ್ಮಿಕ ಧರ್ಮಾಚರಣೆಗೆ ಅರ್ಥಪೂರ್ಣ ಚೌಕಟ್ಟನ್ನು ಕೂರಿಸಿಕೊಟ್ಟ ಅವರ ಪ್ರಯತ್ನಗಳು ಇಂದು ಆಡಂಬರದ, ಮೌಢ್ಯದ, ಅನವಶ್ಯಕ ಅಟಾಟೋಪಗಳ ಕಾರ್ಯಕ್ರಮವಾಗಿ ಬದಲಾಗಬಾರದು ಅಲ್ವೇ?
ಶ್ರಾವಣ ಮಾಸದಲ್ಲಿ ತವರಿನ ಉಡಿಯನ್ನು, ಪ್ರೀತಿಯನ್ನು ತನ್ನ ಮಡಿಲಲ್ಲಿ ತುಂಬಿಕೊಂಡು ಹೋಗಲು ತವರಿಗೆ ಬಂದಿದ್ದ ನಿನ್ನಮ್ಮ ಗೌರಿ ದೇವಿಯನ್ನು ಕರೆದೊಯ್ಯಲು ಬಂದ ನೀನು ನಿನ್ನನ್ನು ಮೆರೆಸುವ ಭಕ್ತರ ಭಕ್ತಿ ಮತ್ತು ಪ್ರೀತಿಯಲ್ಲಿ ಮುಳುಗಿ ಏಳುತ್ತೀಯಷ್ಟೇ. ನಿನ್ನೆಲ್ಲ ಭಕ್ತರಿಗೆ ಜ್ಞಾನ, ಸದ್ಬುದ್ಧಿ ಮತ್ತು ವಿವೇಕವನ್ನು ನೀಡು.
“ವಿವೇಕವೇ ಇಲ್ಲದ ಜ್ಞಾನ ಅಪಾಯಕ್ಕೆ ದಾರಿ” ಮಾಡಿಕೊಡುತ್ತದೆ… ಅಂತೆಯೇ ನಿನ್ನ ಭಕ್ತರು ನಿನ್ನನ್ನು ಪ್ರತಿಷ್ಠಾಪಿಸುವ ಮತ್ತು ಮರಳಿ ವಿಸರ್ಜಿಸುವ ಸಮಯದಲ್ಲಿ ಅಜ್ಞಾನಿಗಳಂತೆ ಕುಡಿದು ಕುಣಿದು ಕುಪ್ಪಳಿಸಿ ಕೆಲವೊಮ್ಮೆ ಪೊಲೀಸರ ಲಾಠಿ ಏಟು ತಿಂದು ಮನೆಗೆ ಮರಳುವುದು ಬೇಡ. ನಿನ್ನ ಭಕ್ತಿಯ ಶಕ್ತಿಯನ್ನು ಕೋರುವ ಗೀತ ಗಾಯನಗಳು ಎಲ್ಲೆಡೆ ಮೊಳಗಲಿ.
ಸಾಮಾಜಿಕ ಶಾಂತಿ ಸೌಹಾರ್ದತೆ ಮತ್ತು ಸಾಮರಸ್ಯಗಳನ್ನು ಬಿಂಬಿಸುವ ಜೊತೆ ಜೊತೆಗೆ ನಾಡಿನ ಎಲ್ಲ ಜನರ ನೆಮ್ಮದಿ ಮತ್ತು ಸಂತೋಷಗಳಿಗೆ ನಿನ್ನ ಹಬ್ಬ ಕಾರಣವಾಗಲಿ….. ಏನಂತೀಯಾ?
ನಿನಗೂ ಈ ಆಡಂಬರಗಳು ಬೇಕಿಲ್ಲ ಎಂಬುದು ನಮಗೆ ಗೊತ್ತು. ಗರಿಕೆ ಹುಲ್ಲಿಗೆ ತೃಪ್ತನಾಗುವ ನೀನು ಯಾವ ಭೋಗ ಭಾಗ್ಯಗಳನ್ನು ಬಯಸುವುದಿಲ್ಲ ಎಂಬುದು ನಿಜ… ಆದರೂ ನಿನ್ನ ಹೆಸರಿನಲ್ಲಿ ಅಪಚಾರಗಳು ನಡೆಯುವುದು ಬೇಡ ಎಂಬುದು ನನ್ನ ಕಳಕಳಿ.
ಪತ್ರ ತುಂಬಾ ಉದ್ದವಾಯಿತು ಎಂದು ಓದದೆ ಇರಬೇಡ ಬಪ್ಪ. ನನ್ನ ಪುಟ್ಟ ಸ್ನೇಹಿತ ನೀನು, ನನ್ನ ಆರಾಧ್ಯ ದೈವವೂ ನೀನೇ. ನಿನ್ನ ಮೇಲಿನ ನನ್ನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಿನ್ನ ಭಕ್ತರಿಗೆ ನೀನೆ ಬುದ್ಧಿ ಹೇಳಿ ಮನವರಿಕೆ ಮಾಡಿಕೊಡು.
ಬೇಗ ಬಾ…ನಿನಗಾಗಿ ಕಾಯುತ್ತಿರುವೆವು.
ಇಂತಿ ನಿನ್ನ ಪ್ರೀತಿಯ ಭಕ್ತ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್