ಇಂದು ವಿಶ್ವ ರೇಡಿಯೋ ದಿನ
ಇಂದು ಫೆಬ್ರವರಿ 13 ವಿಶ್ವ ರೇಡಿಯೋ ದಿನ.
ರೇಡಿಯೋ ಒಂದು ಕಾಲದಲ್ಲಿ ದಿಲ್ಲಿಯಿಂದ ಹಳ್ಳಿಗೆ ಸಮಗ್ರ ಮಾಹಿತಿ ಒದಗಿಸುವ ಸಂಪರ್ಕ ಮಾಧ್ಯಮವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದ ಸಾಧನವಾಗಿತ್ತು. ಗ್ರಾಮೀಣ ಪ್ರದೇಶದ ಜನರಿಗೆ ಸರಳವಾಗಿ ಕನ್ನಡ ಭಾಷೆಯಲ್ಲಿ ಅರ್ಥಪೂರ್ಣವಾಗಿ ಪ್ರತಿ ನಿತ್ಯ ನಡೆಯುತ್ತಿದ್ದ ದೇಶ,ವಿದೇಶ,ರಾಜ್ಯ, ಅಂತಾರಾಜ್ಯ ಸೇರಿದಂತೆ ಸುತ್ತ ಮುತ್ತಲಿನ ಹಾಗು ಹೋಗುಗಳ ಬಗ್ಗೆ ಮನೆಯಲ್ಲೇ ಕುಳಿತು ಕುಟುಂಬ ಸಮೇತರಾಗಿ ಕೇಳಿ ಆನಂದಿಸುತ್ತಿದ್ದರು.
ರೇಡಿಯೋ ಇತಿಹಾಸ:-ರೇಡಿಯೋ ವನ್ನು ಇಟಲಿ ದೇಶದ ಜಿ.ಮಾರ್ಕೋನಿ ಎಂಬ ವಿಜ್ಞಾನಿಯೂ 1888 ರಲ್ಲಿ ಅನ್ವೇಷಣೆ ಮಾಡುವ ಮೂಲಕ ಜಗತ್ತಿಗೆ ಪರಿಚಯಿಸಿದರು. ಭಾರತ ದೇಶದಲ್ಲಿ ಪ್ರಪ್ರಥಮ ಬಾರಿಗೆ ರೇಡಿಯೋ 1923 ರಲ್ಲಿ ಮುಂಬೈನಲ್ಲಿ ಆರಂಭವಾಯಿತು. ಇಂಡಿಯನ್ ಬ್ರಾಡ್ಕಾಸ್ಟಿಂಗ್ ಸರ್ವಿಸ್ ಎಂಬ ಹೆಸರಿನಿಂದ 1930ರಲ್ಲಿ ದೆಹಲಿಯಲ್ಲಿ ಪ್ರಾರಂಭವಾಯಿತು.1930ರಲ್ಲಿ ರೇಡಿಯೋ ಅನ್ನು ರಾಷ್ಟ್ರೀಕರಣ ಗೊಳಿಸಲಾಯಿತು. ನಮ್ಮ ರಾಜ್ಯದ ಮೈಸೂರಿನಲ್ಲಿ 1935 ರಲ್ಲಿ ಆಕಾಶವಾಣಿ ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು. 1936 ರಲ್ಲಿ ಎ.ಐ.ಆರ್ ಆಲ್ ಇಂಡಿಯಾ ರೇಡಿಯೋ ಎಂದು ಮರು ನಾಮಕರಣ ಮಾಡಲಾಯಿತು. ಯುನೆಸ್ಕೋ 2011ರ ನವೆಂಬರ್ 3ರಂದು ತನ್ನ 36ನೇ ಸಮ್ಮೇಳನದಲ್ಲಿ ಪ್ರತಿವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವಾಗಿ ಆಚರಿಸಲು ಅಧಿಕೃತ ಘೋಷಣೆ ಮಾಡಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಪೂರ್ವಜರ ಕಾಲದಿಂದಲೂ ಶ್ರವಣ ಮಾಧ್ಯಮವಾದ ಆಕಾಶವಾಣಿ (ರೇಡಿಯೋ)
ಇತ್ತೀಚಿನ ದಿನಗಳಲ್ಲಿ ದೃಶ್ಯ ಮತ್ತು ಶ್ರವಣ ಮಾಧ್ಯಮವಾದ ಟೆಲಿವಿಜನ್, ಗಣಕಯಂತ್ರ, ಮೊಬೈಲ್ ಫೋನ್, ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗ ತೊಡಗಿದಂತೆಲ್ಲಾ ರೇಡಿಯೋ ಬಳಕೆ ಕ್ಷೀಣಿಸುತ್ತಾ ಹೋಯಿತು.
ಶಾಲೆಗಳಿಲ್ಲಿ ಮಕ್ಕಳಿಗೆ ಪಠ್ಯಾಧಾರಿತ ಭಾನುಲಿ ಸರಣಿಗಳು ತುಂಬಾ ಉಪಯುಕ್ತವಾದವು. ತರಗತಿಗೆ ಅನುಗುಣವಾಗಿ ಪ್ರತಿದಿನ ಒಂದೊಂದು ಪಠ್ಯದ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬರುತ್ತವೆ.ಸುಗಮ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ ಸೇರಿದಂತೆ
ಪ್ರತಿದಿನ ಸಾಯಂಕಾಲ ಕೇಳಿ ಬರುತ್ತಿದ್ದ ಕರಿಯತ್ತ ಕಾಳಿಂಗ, ಬಿಳಿಯತ್ತ ಮಾಲಿಂಗ ಎಂಬ ಎಂಬ ರೈತನ ಹಾಡಿನ ಸಾಲುಗಳು ಇಂದಿಗೂ ಕೂಡ ಜನ ಮಾನಸದಲ್ಲಿ ಉಳಿದಿವೆ.
ಪ್ರತಿ ರವಿವಾರ ಮಧ್ಯಾಹ್ನ ಚಿತ್ರ ಮಂಜರಿ ಧ್ವನಿ ಮುದ್ರಣ, ರಸಮಂಜರಿ, ವಾರ್ತೆಗಳು, ಸಾಧಕರ ಸಂದರ್ಶನಗಳು, ವಿಶೇಷ ಕಾರ್ಯಕ್ರಮಗಳ ಕುರಿತ ವರದಿಗಳು ಕೇಳುಗರ ಮನ ತಣಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಏನೇ ಆಗಲಿ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ರೇಡಿಯೋದ ಬಳಕೆ ಬಹುತೇಕ ಕಡಿಮೆ ಆಗುತ್ತಾ ಬಂದಿದ್ದು ಅಲ್ಲಲ್ಲಿ ಕಾಣ ಸಿಗುತ್ತಿದ್ದ ರೇಡಿಯೋಗಳು ಕಣ್ಮರೆಯಾಗುತ್ತಿರುವದರಿಂದ ಮುಂದಿನ ಪೀಳಿಗೆಗೆ ಅವುಗಳನ್ನು ನಾವು ಕೇವಲ ಪ್ರದರ್ಶನದ ವಸ್ತುಗಳಾಗಿ ತೋರಿಸದೇ ಅವುಗಳ ಉಪಯುಕ್ತತೆ ಬಳಕೆ ಕುರಿತು ಮನವರಿಕೆ ಮಾಡಿಕೊಡುವದು ಒಳಿತು ಎಂಬುದು ನಮ್ಮ ಆಶಯ.

