ಅಂದು ಅರ್ಧಕ್ಕೆ ನಿಂತ ಕಡಕೋಳ ತೇರು ಪಾದಗಟ್ಟೆ ಮುಟ್ಟುವುದು ಇಂದು
ಬಂಡಾಯ ಸಾಹಿತ್ಯ ಎಂಬ ಹೆಸರು ಕಾಯಿನ್ ಆಗುವ ಪೂರ್ವದಲ್ಲೇ ‘ಕ್ರಾಂತಿ’ ದೈನಿಕದಲ್ಲಿ “ಬಂಡಾಯದ ಸಂತ ಕಡಕೋಳ ಮಡಿವಾಳಪ್ಪ” ಎಂಬ ಲೇಖನ ಬರೆದು ನಮಗೆಲ್ಲ ದಂಗು ಬಡಿಸಿದ ಮಲ್ಲಣ್ಣನ ಬರಹದ ರೋಮಾಂಚನ ಈ ಕ್ಷಣಕೂ ಮಾಸಿಲ್ಲ. ಆತನ ಬರಹಕ್ಕೆ ಮೊಗಲಾಯಿ ನೆಲದ ಕಾವು-ಕಸುವು, ಹ್ಯಾವ-ಹಿರಿಸು, ಮಿಗಿಲಾಗಿ ನಿತಾಂತ ಸೌಂದರ್ಯ. ಮಡಿವಾಳಪ್ಪನ ಕಡಕೋಳದ ಮಲ್ಲಿಕಾರ್ಜುನ ಭೌತಿಕವಾಗಿ ಎಲ್ಲೇ ಇದ್ದರೂ ಭಾವನಾತ್ಮಕವಾಗಿ ಮಡಿವಾಳಪ್ಪನ ತತ್ವಪದಗಳು ಮತ್ತು ಕಡಕೋಳ, ಖೈನೂರು, ಯಡ್ರಾಮಿ, ಅಳಗುಂಡಗಿ, ಲಂಡೇನ್ಹಳ್ಳ, ಪುಂಡಿಪಲ್ಲೆ, ಬೆಲ್ಲದ ಜಿಲೇಬಿ, ಮಿರ್ಚಿಗಳ ಸೀಮೆಯಲ್ಲೇ ಇರೋದು.
ತತ್ವಪದಗಳ ಟಂಕಸಾಲೆಯಂತಿದ್ದ ಕಡಕೋಳದ ಮಣ್ಣಿನಲ್ಲಿ ಇವತ್ತಿಗೂ ಕಾವ್ಯಧಾರೆ ಅಂತಃಶ್ರೋತವಾಗಿ ಹರಿಯುತ್ತಿದೆ ಎಂಬುದಕ್ಕೆ ನಮ್ಮ ಕಡಕೋಳ ಮಲ್ಲಿಕಾರ್ಜುನ ಅವರ ಮುದನೀಡುವ ಮತ್ತು ಅನುಭಾವಜನ್ಯವಾದ ಕಾವ್ಯ ಪಯಣವೇ ಸಾಕ್ಷಿ. ಆತನ ಅನುಭವ ಕಣಜದ ಕೆಲವು ಬರಹಗಳು ಈಗ ಪ್ರಕಟಗೊಂಡಿವೆ. ಆದರೆ ಮಹಾಂತ – ಮಡಿವಾಳತನದ ಗುಂಗಿನ ಚುಂಗು ಹಿಡಿದು ಹೊಂಟರೆ ಹತ್ತು ಸಂಪುಟಗಳಷ್ಟು ಹಾಳತವಾಗಿ ಬರೆದು ತರಬಲ್ಲ ತಾಕತ್ತು ಆತನದು. ಒಣ ಗ್ರಾಂಥಿಕತೆ ಮತ್ತು ಭ್ರಾಮಕತೆ ಬಿಟ್ಹಾಕಿ ನಮ್ಮ ಹೈದ್ರಾಬಾದ್ ಕರ್ನಾಟಕ ನೆಲದ ನಾಲಗೆಯಿಂದ ಬರೆವ ಮಲ್ಲಣ್ಣನದು ಅಪ್ಪಟ ಜವಾರೀ ಶೈಲಿ.
ನಮ್ಮ ಬಟಾಬಯಲ ಬದುಕಿನ ಅಸದಳ ಸಂಕಟ, ಅಸಹಾಯಕತೆಗೆ ಕಾರಣರಾದ ಆಳರಸರ ದರ್ಪ – ದಬ್ಬಾಳಿಕೆ, ಪುರೋಹಿತಶಾಹಿ, ಜಮೀನ್ದಾರಿ ವ್ಯವಸ್ಥೆಯ ಕ್ರೌರ್ಯಗಳನ್ನು ಅನಾವರಣಗೊಳಿಸುವುದು ದೊಡ್ಡ ಸವಾಲು. ನಮ್ಮ ನಿತ್ಯದ ಬವಣೆಗಳನ್ನು ಬರೆದರೆ ಸಾಕು ಕೆಲವರಿಗೆ ನಮ್ಮದೊಂದು ಆಫ್ರಿಕಾದ ಬದುಕಿನ ಕತೆಯಂತಾಗುತ್ತದೆ. ಆದರೆ ನಿಮ್ಮಹಾಗೆ ಹೇಳಿಕೊಳ್ಳದಿದ್ದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. ನೀವು ನಿಮ್ಮ ಅನುಭವಜನ್ಯ ಪ್ರತಿಭೆಗೆ ಜನಹಿತದ ಸಾಣೆ ಹಿಡಿಸಿಕೊಂಡಿದ್ದರಿಂದ ನಿಮ್ಮ ಬರವಣಿಗೆಗೆ ದಿವ್ಯ ತಾಕತ್ತು ಪ್ರಾಪ್ತವಾಗಿದೆ. ಬಯಲ ಬದುಕಿನ ರೂಕ್ಷತೆಯನ್ನು ಅದೆಷ್ಟು ಸಮರ್ಥವಾಗಿ ಹಿಡಿದಿಡಬಹುದೆಂಬುದಕ್ಕೆ “ಯಡ್ರಾಮಿ ಸೀಮೆ ಕಥನಗಳು” ಎಂಬ ಈ ಕೃತಿ ಜೀವಂತ ನಿದರ್ಶನ. ಇದು ಏಕ್ ಜಿಂದಾ ಮಿಸಾಲ್ ಕಹಾನಿ.
ಕಟ್ಟ ಕಡೀಗೊಂದು ಮಾತು ಹೇಳಬೇಕೆಂದರೆ ಮಲ್ಲಿಕಾರ್ಜುನಾ ! ನಾವೆಲ್ಲಾ ಬರೆದದ್ದಕ್ಕಿಂತ ಬರೇಯದೇ ಬಿಟ್ಟದ್ದೇ ಭಾಳ ಅದ. ಮುಂದಾದರೂ ನೀವು ಅದೆಲ್ಲವನ್ನು ಅಕ್ಷರಕ್ಕೆ ದಕ್ಕಿಸಬಲ್ಲಿರಿ ಎಂದುಕೊಳ್ಳಲೇ? ಅಂದಿನ ಆ ಕಡಕೋಳ, ಚಿಣಮಗೇರಿ ಸೀಮೆಗಳಲ್ಲಿ ನಾವು ಹಾಕಿದ ಹೆಜ್ಜೆಗಳು, ಹಸಿ ಹಸಿಯಾದ ಮುಗ್ದ ಭಾಷಣಗಳು. ಏನೇನೋ ಮಾತಾಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿ ಗಾಬರಿ ಬಿದ್ದದ್ದು. ಮಡಿವಾಳಪ್ಪನೇ ನಮ್ಮನ್ನು ಬಚಾವ್ ಮಾಡಿದ್ದು. ಹೀಗೆ ಒಂದೇ, ಎರಡೇ ಊಫ್ ಅಸಂಖ್ಯ ನೆನಪುಗಳ ತೇರು. ಅಂದು ಅರ್ಧಕ್ಕೆ ನಿಂತ ಆ ತೇರು ಪಾದಗಟ್ಟೆಗೆ ಮುಟ್ಟುವುದೆಂದು.?

ಇವು ಈಗ್ಗೆ ಆರೇಳು ವರುಷಗಳ ಹಿಂದೆ ಯಡ್ರಾಮಿ ಸೀಮೆ ಕಥನಗಳು ಎಂಬ ಕೃತಿಗೆ ಡಾ. ಮೀನಾಕ್ಷಿ ಬಾಳಿ ಬರೆದ ಬೆನ್ನುಡಿಯ ಸಾಲುಗಳು. ಈ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ರುಪಾಯಿ ಇಪ್ಪತ್ತೈದು ಸಹಸ್ರ ಗೌರವಧನ ಮತ್ತು ಪ್ರಶಸ್ತಿ ನೀಡಿ ಗೌರವಿಸಿತು. ಅಷ್ಟು ಮಾತ್ರವಲ್ಲ ನನಗೆ ಓದುಗರಿಂದ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಣ ತಂದು ಕೊಟ್ಟಿತು ಈ ಪುಸ್ತಕ. ಅದೆಲ್ಲಕ್ಕೂ ಮಿಗಿಲಾಗಿ ಶಿವಮೊಗ್ಗೆಯ ಕುವೆಂಪು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಮತ್ತು ಕಲಬುರಗಿಯ ‘ಗುಲಬರ್ಗಾ ವಿಶ್ವ ವಿದ್ಯಾಲಯದ’ ಪದವಿ ತರಗತಿಗಳಿಗೆ ಈ ಪುಸ್ತಕದ ಪ್ರಬಂಧಗಳು ಪಠ್ಯ ಆಗಿವೆ. ಆ ಮೂಲಕ ನನ್ನ ನೆಲದ ಕಥನಗಳು ಕರ್ನಾಟಕದ ತುಂಬಾ ಅನೇಕ ವಿದ್ಯಾರ್ಥಿಗಳ ಭಾವ ಸಂವೇದನೆಗಳಿಗೆ ಪೌಷ್ಟಿಕಾಂಶ ತುಂಬಿದ ವಿಚಾರಗಳಾಗಿವೆ. ಇನ್ನೂ ಮುಂದುವರೆದು ಹೇಳುವುದಾದರೆ ಪುಸ್ತಕಕ್ಕೆ ಮೊದಲು ಆನ್ ಲೈನ್ ಪತ್ರಿಕೆಗಳ ಮೂಲಕ ಈ ಕಥನಗಳನ್ನು ಓದಿದ ದಕ್ಷಿಣ ಕನ್ನಡದಂತಹ ದೂರದ ಕರಾವಳಿ ಜಿಲ್ಲೆಯ ಓದುಗರು ಸೇರಿದಂತೆ ನಾಡಿನಾದ್ಯಂತ ಸಹಸ್ರಾರು ಓದುಗರ ಮೆಚ್ಚುಗೆಗೆ ಪಾತ್ರವಾದುದು ಯಡ್ರಾಮಿ ಸೀಮೆ ಕಥನಗಳು ಎಂಬ ಪುಸ್ತಕ.
ಇದನ್ನೆಲ್ಲ ಈಗ ಪ್ರಸ್ತಾಪಿಸಲು ಬಲವಾದ ಕಾರಣವೊಂದಿದೆ. ಅದೇನೆಂದರೆ ಅಂದು ಅರ್ಧಕ್ಕೆ ನಿಂತ ಆ ತೇರು ಪಾದಗಟ್ಟೆ ಸೇರುವುದೆಂದು.? ಎಂಬ ಬೆನ್ನುಡಿಯ ಈ ಬರಹ ಗ್ರಾಮ ಭಾರತದ ಬದುಕಿನ ಮೇಲೆ ಹೊಸಬೆಳಕು ಚೆಲ್ಲಿದ ರೂಪಕದಂತಿರುವುದನ್ನು ಪ್ರತಿಪಾದಿಸಿದೆ. ಈ ಮಾತುಗಳ ಹಿಂದೆ ಈಡೇರದ ಕನಸುಗಳ ಕನವರಿಕೆ. ಪ್ರಸ್ತುತ ಪ್ರತಿಪಾದನೆಗೆ ಸಂವಾದಿಯಾಗಿ ಈಗ್ಗೆ ತಿಂಗಳೊಪ್ಪತ್ತು ಹಿಂದೆ ಅರ್ಧಕ್ಕೆ ನಿಂತ ಕಡಕೋಳದ ಆ ತೇರು ಅಂತಹ ರೂಪಕದ ಪ್ರತಿರೂಪವೆನಿಸಿತು. ಇದೀಗ ಸದರಿ ರೂಪಕದ ಪ್ರತಿ ಉತ್ತರದಂತೆ ದುರಸ್ತಿಗೊಂಡ ತೇರು ಇದೇ ಫೆಬ್ರವರಿ ೧೫ ರಂದು ಶಿವರಾತ್ರಿಯ ಶಿವಯೋಗದಂದು ಪಾದಗಟ್ಟೆ ಸೇರುತ್ತಲಿದೆ. ಅಂದಹಾಗೆ ಎರಡು ತಿಂಗಳ ಹಿಂದೆ ೨೦೨೫ ರ ಡಿಸೆಂಬರ್ ೧೨ ರಂದು ಗೋದೂಳಿ ಸಮಯದಲ್ಲಿ ಕಡಕೋಳ ಮಡಿವಾಳಪ್ಪನ ಜಾತ್ರೆಯ ರಥೋತ್ಸವ ಜರುಗಿತು.
ಅಂದು ವಾಡಿಕೆಯಂತೆ ರಥ ಸಾಗುವ ಮುಸ್ಸಂಜೆಗೆ ಸಿಂಗಾರಗೊಂಡ ರಥದೆದುರು ಮುಂಬಯಿ ಭಕುತರಿಂದ ಮದ್ದು ಸುಡುವ ಸಡಗರ. ಪಟಾಕಿ, ಸುರುಸುರು ಬತ್ತಿ ಇತ್ಯಾದಿ ಮತಾಪುಗಳು ಮುಗಿಲು ತುಂಬಾ ವರ್ಣರಂಜಿತ ವಿಜೃಂಭಣೆಯಿಂದ ಸಂಭ್ರಮ ಪಡುತ್ತವೆ. ಅದಾದ ಮೇಲೆ ಮಠದ ಪೂಜ್ಯರಾದ ಷ. ಬ್ರ. ರುದ್ರಮುನಿ ಶಿವಾಚಾರ್ಯರು, ಶಿವಯೋಗಿ ಮಡಿವಾಳೇಶ್ವರರ ಪಾವನ ರಥಕ್ಕೆ ಪೂಜೆ ಸಲ್ಲಿಸಿ ರಥವೇರುತ್ತಾರೆ. ರಥ ಸಾಗುವಂತೆ ಪೂಜ್ಯರು ಹಸಿರು ನಿಶಾನೆ ತೋರಿಸುತ್ತಾರೆ. ಆಗ ರಥ ಸಾಗುತ್ತದೆ. ಬಹುಪಾಲು ಯುವಕರೇ ಎಳೆಯುವ ರಥ, ಸಂಭ್ರಮದಿಂದಲೇ ಸಾಗುತ್ತದೆ. ತೇರು ಪಾದಗಟ್ಟೆ ಮುಟ್ಟಿ ಪಾದಗಟ್ಟೆಯ ಪೂಜೆ ಗೈಯ್ದ ಮೇಲೆ ಮರಳಿ ಮಠದ ಮುಂದಿನ ತನ್ನ ಜಾಗ ಸೇರಬೇಕು. ಇದು ಅನೂಚಾನವಾಗಿ ಇನ್ನೂರು ವರುಷಗಳಿಂದಲೂ ನಡೆದು ಬಂದಿರುವ ಆಚರಣೆ. ಯುವಕರು ಅಂದು ಎಳೆದು ತಂದ ತೇರು ಪಾದಗಟ್ಟೆ ಸೇರದೇ ಅರ್ಧ ಹಾದಿಗೆ ನಿಂತಿತು. ಇಂತಹ ಪರಂಪರಾಗತ ಮತ್ತು ಭಾವಪೂರ್ಣ ಆಚರಣೆಗೆ ಯಾವತ್ತೂ ಅಡ್ಡಿ ಬಂದ ನೆನಪು ನನಗಂತೂ ಇಲ್ಲವೇ ಇಲ್ಲ.
* * *
ತಮ್ಮೂರು ಮತ್ತು ತವರೂರಿನ ಜಾತ್ರೆಗೆ ಬಂದ ಯುವತಿಯರ ಸಂಭ್ರಮವಂತೂ ವರ್ಣಿಸಲದಳ. ಅದರಲ್ಲೂ ಅವರು ರಥೋತ್ಸವ ವೀಕ್ಷಿಸಲು ಅಲಂಕಾರಭರಿತರಾಗಿ ಬಂದು ಕಜ್ಜ ಭಜ್ಜಿ ಉಂಡಷ್ಟೇ ಪ್ರಸನ್ನಗೊಳ್ಳುತ್ತಾರೆ. ನಾಡಿನ ಬೇರೆ, ಬೇರೆ ಊರುಗಳಿಂದ ರಥೋತ್ಸವದ ಸಡಗರಕ್ಕೆ ಸಾಕ್ಷಿಯಾಗುವ ಸಹಸ್ರಾರು ಭಕ್ತರ ಹೃನ್ಮನಗಳ ಸಮಾಗಮ. ಉತ್ತತ್ತಿ, ಬೋರೆ, ಬಾಳೆ ಹಣ್ಣುಗಳನ್ನು ತೇರು ಸಾಗಿದೊಡನೆ ತೇರಿಗೆಸೆಯುತ್ತಾ ಫಲಪ್ರೋಕ್ಷದ ಭಕ್ತಿ ಸಮರ್ಪಿಸುತ್ತಾರೆ. ಅದು ಸಂಪ್ರದಾಯವಾಗಿ ನಡೆದುಬಂದ ಪದ್ಧತಿ. ಅದೆಲ್ಲ ಪ್ರಕ್ರಿಯೆ ಜರುಗುತ್ತಿದ್ದಂತೆ ತೇರು ಮೆಲ್ಲ ಮೆಲ್ಲಗೆ ಸಾಗಿ, ಶಾಕ್ತಪಂಥದ ಅವಧೂತ ಭೀಮಾಶಂಕರ ಗವಿಯ ಬಳಿ ಬರುತ್ತಿದ್ದಂತೆ ತೇರು ಮುಂದೆ ಸಾಗಲೇ ಇಲ್ಲ. ಇದ್ದಕ್ಕಿದ್ದಂತೆ ತಟಸ್ಥಗೊಂಡಿತು. ಅದೆಷ್ಟೇ ಜೈಘೋಷಗಳನ್ನು ಹಾಕಿದರೂ ಜಪ್ಪೆನ್ನಲಿಲ್ಲ. ನೆರೆದ ಸಹಸ್ರಾರು ಭಕ್ತರ ಮಾನಸದಲ್ಲಿ ಅಪಶಕುನದ ದುರ್ದಮ್ಯ ಭಾವ ಆವರಿಸಿತು. ಭಾವುಕ ಭಕ್ತರ ಮನದೊಳಗೆ ಭಯಮಿಶ್ರಿತ ಅಸಂತುಷ್ಟಿಯ ಆಲೋಚನೆ. ಜಾತ್ರೆಯ ತುಂಬೆಲ್ಲ ಅದೇ ಚರ್ಚೆ, ಆತಂಕದ ವಾತಾವರಣ ನಿರ್ಮಾಣ.
ನಮ್ಮ ಭಾಗದಲ್ಲಿ ಬಹುತೇಕ ಹಿರಿಯರು ಮಡಿವಾಳಪ್ಪನ ತೇರು ಎಳೆದು ಅದು ಪಾದಗಟ್ಟೆ ಸೇರುವವರೆಗೂ ಉಪವಾಸ ಮಾಡುತ್ತಾರೆ. ಜಾತ್ರೆಗೆ ಬಾರದ ಹಿರೀಕರೂ ತಾವಿದ್ದ ತಾಣಗಳಲ್ಲೇ ಒಂದ್ಹೊತ್ತು ಅರ್ಥಾತ್ ಒಪ್ಪತ್ತನು ಆಚರಿಸುತ್ತಾರೆ. ಅದು ಕೇವಲ ಉಪವಾಸ ಹರಕೆಯ ವ್ರತಾಚರಣೆ ಮಾತ್ರವಲ್ಲ. ಅದನ್ನು ಮೀರಿದ ಲೋಕೋತ್ತರ ಹರಕೆ ಅದಾಗಿರುತ್ತದೆ. ಅಷ್ಟೇಯಾಕೆ ಕಡಕೋಳ ಶ್ರೀ ಮಠದ ಪೂಜ್ಯರು ಸಹಿತ ಅವತ್ತು ಒಪ್ಪತ್ತು ಉಪವಾಸ ಆಚರಿಸುತ್ತಾರೆ. ಆದರೆ ಅವತ್ತು ತೇರು ಚಲಿಸಿ ಅರ್ಧಕ್ಕೆ ನಿಂತುದು ಅಚ್ಚುಗಾಲಿ ಗಡ್ಡೆಯ ತಾಂತ್ರಿಕ ದೋಷವೇ ಆಗಿದ್ದರೂ ಸಂಪ್ರದಾಯಸ್ಥ ಭಕುತರಲಿ ಅದೇನೋ ಹೇಳಲಾಗದ ಆತಂಕ, ಅಪ್ರಸ್ತುತ ಭಯವಂತೂ ಕಾಡಿದ್ದು ಮಾತ್ರ ಖರೇ. ಇಂತಹದರ ನಡುವೆಯೂ ಸಣ್ಣದೊಂದು ‘ಸಮಾಧಾನ’ ಪವಾಡದಂತೆ ಓಡಾಡಿದ್ದೂ ಅಷ್ಟೇ ಖರೇ. ರಥದ ಕಲ್ಲು ಗಾಲಿಗಳ ಅಚ್ಚು ಮುರಿದುದರ ಪರಿಣಾಮ ರಥವೇ ಉರುಳಿ ಬಿದ್ದಿದ್ರೆ ಅದೆಷ್ಟು ಅನಾಹುತ ಘಟಿಸಿ ಬಿಡುತ್ತಿತ್ತು.!? ಅಂತಹ ಅಕಸ್ಮಿಕ ಘಟಿಸದಿರುವುದೇ ಎಲ್ಲಾ ಭಾವುಕರ ನಾಲಗೆ ತುಂಬಾ ಸುಳಿದಾಡಿದ ಪವಾಡ ಸದೃಶ ಮಾತುಗಳ ಬಾಹುಳ್ಯ.
* * *
ಈ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ವಿಚಾರವೆಂಬ ಬೀದಿಯಲಿ ತೇರು ಸಾಗಿತಮ್ಮ ನೋಡಿರೆ/ ನೋಡಿರಮ್ಮ ನೀವು ನೋಡಿರೆ// ಎಂಬ ತತ್ವಪದವೊಂದು ನನ್ನನ್ನು ಗಾಢವಾಗಿ ಕಾಡ ತೊಡಗಿದೆ. ಪಾದಗಟ್ಟೆ ಮುಟ್ಟುವ ಸಂಕಲ್ಪ ಪ್ರತಿಪಾದನೆಯು ಅಂತಹ ವಿಚಾರ ಬೀದಿಯಲಿ ಸಾಗಿ ಬಂದುದಾಗಿರಬೇಕು. ಅಂತಹದೇ ಈ ತೇರು ಮಡಿವಾಳಪ್ಪನ ವಿಚಾರಧಾರೆಯ ತೇರು. ಅದಕ್ಕೆ ಭಾವುಕ ಭಕ್ತರು ತೋರುವ ಜೀವಸಂವೇದನೆಯ ಪ್ರೀತಿಯೂ ಅಷ್ಟೇ ಪ್ರಾಮುಖ್ಯತೆ ಪಡೆದಿರುತ್ತದೆಂಬುದನ್ನು ವೈಚಾರಿಕ ಪ್ರಜ್ಞೆಯ ಎಲ್ಲರೂ ಅರಿಯುವ ಅಗತ್ಯವಿದೆ. ಆ ದಿಕ್ಕಿನಲ್ಲಿ ತೇರು ಕೇವಲ ಧಾರ್ಮಿಕ ಆಚರಣೆ ಆಗಿರದೇ ಸರ್ವರೂ ಸಹೃದಯ ಸೋಹಂ ಭಾವದಲಿ ಒಗ್ಗಟ್ಟಾಗಿ ತೇರೆಳೆಯುವುದು ಸಾಮರಸ್ಯ ಮತ್ತು ಸೌಹಾರ್ದತೆಯ ಸುದೀಪ್ತ ಸಂಕೇತವೇ ಆಗಿದೆ.
ಇಂತಹದ್ದೊಂದು ಸಂಕ್ರಮಣ ಕಾಲದಲ್ಲಿ ಕಡಕೋಳ ಶ್ರೀಮಠದ ಪೂಜ್ಯರು ತೆಗೆದುಕೊಂಡ ನಿರ್ಣಯ ಮಹತ್ವದ ಬೆಳವಣಿಗೆ ಹೊಂದಿದೆ. ಅದೇನೆಂದರೆ : ಅರ್ಧಕ್ಕೆ ನಿಂತ ರಥವನ್ನು ಪಾದಗಟ್ಟೆಗೆ ಮುಟ್ಟಿಸುವ ಮೂಲಕ ಇದೇ ಶಿವರಾತ್ರಿಯಂದು ಬದಲಾದ ಜಾತ್ರಾ ಮಹೋತ್ಸವ ಆಚರಿಸಲು ಕಡಕೋಳ ಶ್ರೀಗಳು ತೀರ್ಮಾನಿಸಿದ್ದಾರೆ. ಈ ಹಿಂದೆ ಆಚರಿಸುತ್ತಿದ್ದ ಹೊಸ್ತಿಲ ಹುಣ್ಣಿಮೆಯಾದ ಸಪ್ತಮಿಗೆ ಖಾಂಡ ಮತ್ತು ಅಷ್ಟಮಿಗೆ ರಥೋತ್ಸವಕ್ಕೆ ಬದಲು ಇನ್ಮುಂದೆ ಭರತ ಹುಣ್ಣಿಮೆಯಾದ ಸಪ್ತಮಿಗೆ ಖಾಂಡ, ಅಷ್ಟಮಿಗೆ ರಥೋತ್ಸವ. ಹೀಗೆ ಕಡಕೋಳ ಮಡಿವಾಳಪ್ಪನ ಜಾತ್ರಾ ಮಹೋತ್ಸವದ ಕಾಲಾವಧಿ ಬದಲಾಯಿಸಿ ಆಚರಿಸಲು ಪೂಜ್ಯರು ನಿರ್ಣಯ ಮಾಡಿದ್ದಾರೆ.
–ಮಲ್ಲಿಕಾರ್ಜುನ ಕಡಕೋಳ
9341010712


