ಸಾರ್ಥಕ ಬದುಕಿನ ಸಾಧಕ- ಶಿಕ್ಷಣದ ಸವ್ಯಸಾಚಿ -ಶ್ರೀ ರಾಮಣ್ಣ ಹವಳೆ
ಮಾನವ ಜನ್ಮದ ಸಾರ್ಥಕತೆ, ಮೌಲ್ಯಯುತ ಜೀವನವನ್ನು ನಡೆಸುವುದರಿಂದ ಮಾತ್ರ ರೂಪಗೊಳ್ಳಬಲ್ಲದು. ಪ್ರತಿಯೊಬ್ಬರಿಗೂ ಸಾಧನೆಯ ಮೆಟ್ಟಿಲೇರುವ ವಿಪುಲ್ಲ ಅವಕಾಶಗಳಿದ್ದರೂ ಸಾಧನೆಯನ್ನು ಸಾಧ್ಯವಾಗಿಸಿಕೊಂಡವರು ಕೆಲವರು ಮಾತ್ರ. ಇಂತಹ ಸಾರ್ಥಕ ಬದುಕನ್ನು ಕಟ್ಟಿಕೊಂಡು ಮೌಲ್ಯಯುತ ಜೀವನ ನಡೆಸಿದ ವ್ಯಕ್ತಿಗಳ ಜೀವನದ ಪ್ರಮುಖ ಘಟನೆಗಳನ್ನು ಬರಹದಲ್ಲಿ ಸೆರೆಹಿಡಿದು ಚಿತ್ರಿಸುವಲ್ಲಿ ನಮ್ಮ ಕನ್ನಡ ಸಾಹಿತ್ಯದ ವ್ಯಕ್ತಿಚಿತ್ರ ಪ್ರಕಾರವಾಗಿ ಶ್ರೀ ರಾಮಣ್ಣ ಹವಳೆ ಅವರ ಜೀವನದ ಸ್ತೂಲ ವಿಚಾರಗಳನ್ನು ಬರೆಯುವ ಪ್ರಯತ್ನ ಮಾಡಿರುವೆ.
ಪ್ರಸ್ತುತ: ೧೪&೧೫ ನವೆಂಬರ್ ೨೯೨೬ರ ನಮ್ಮ ರಾಯಚೂರು ಜಿಲ್ಲೆಯ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ರಾಮಣ್ಣ ಹವಳೆಯವರು 86 ವಯಸ್ಸಿನ ಸಾರ್ಥಕ ಬದುಕಿನ ಸಾಧಕರು.
ಶಿಕ್ಷಕರು, ಸಂಶೋಧಕರು, ವಿದ್ವಾಂಸರಾಗಿ ಸೇವೆಗೈದ ನಿಸ್ಪೃಹ – ನಿರಾಡಂಬರ ಜೀವಿಗಳು. ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ವಿದ್ಯೆಯನ್ನು ಧಾರೆ ಏರಿದ ಅವರ ಕರ್ತೃತ್ವ ಶಕ್ತಿ, ಸಂಘಟನಾ ಸಾಮರ್ಥ್ಯ, ಅಪೂರ್ವ- ಅರ್ಥಪೂರ್ಣ- ಚಿಂತನಶೀಲ ಸೋಪಜ್ಞತೆಯುಳ್ಳ ಗುಣಗ್ರಾಹಿ. ಇವರ ಸಜ್ಜನಿಕೆ ಪ್ರಾಮಾಣಿಕತೆ ಕ್ರಿಯಾಶೀಲತೆ, ವೈಚಾರಿಕ ಮನೋಭಾವ, ಸಾಮಾಜಿಕ ಕಾಳಜಿ ಶೈಕ್ಷಣಿಕ ಶಿಸ್ತು ಅನುಕರಣೀಯ.
*ಬಾಲ್ಯದಿಂದ – ಬೆಳವಣಿಗೆಯತ್ತ*
86ರ ವಸಂತಗಳ ಬದುಕಿನ ಪಯಣದಲ್ಲಿರುವ ಶ್ರೀಯುತರು ಮೂಲತಃ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದವರು. ೧೯೪೧ರ ಫೆಬ್ರವರಿ ೨ರಂದು ಕಿನ್ನಾಳದಲ್ಲಿ ತಂದೆ ನರಸಪ್ಪ ಹವಳೆ ಮತ್ತು ತಾಯಿ ಪಾರ್ವತಮ್ಮ ಇವರ ಮೂರನೇ ಮಗನಾಗಿ ಜನಿಸಿದರು. ಶಾಲಾ ಶಿಕ್ಷಣ ಹುಟ್ಟೂರಿನಲ್ಲಿ ಪೂರೈಸಿ. ಪಿಯುಸಿ ಪದವಿ ಎಲ್ವಿಡಿ ಮಹಾವಿದ್ಯಾಲಯ, ಪದವಿ ದೂರ ಶಿಕ್ಷಣ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ವಿಷಯದಲ್ಲಿ ಎಂಎ ಪದವಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ರಾಮಕೃಷ್ಣ ಆಶ್ರಮ ಮೈಸೂರು ಸಂಸ್ಥೆಯಿಂದ ನೈತಿಕ ಮತ್ತು ಆಧ್ಯಾತ್ಮಿಕ ಎಂಬ ವಿಷಯದ ಡಿಪ್ಲೋಮಾ ಶಿಕ್ಷಣ ಪಡೆದ ಇವರು ಜೀವನಕ್ಕೆ ಲೌಕಿಕ ಮತ್ತು ಆಧ್ಯಾತ್ಮಿಕತೆಯ ಸ್ಪರ್ಶ ನೀಡಿದರು.
ಬದುಕಿನ ಮತ್ತೊಂದು ಹೆಜ್ಜೆಯಾಗಿ 1962 ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಮುನ್ನೂರುವಾಡಿ ಶಾಲೆಗೆ ನೇಮಕಗೊಂಡು 1962 ರಲ್ಲಿ ರಾಯಚೂರಿಗೆ ಬಂದರು. 1962 ರಿಂದ 1999 ರವರೆಗೆ ಶಿಕ್ಷಕರಾಗಿ ಪ್ರೌಢಶಾಲೆ ಅಧ್ಯಾಪಕರಾಗಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ ಪಡೆದು ಸೇವೆಗೈದ ಶ್ರೀಯುತರು 2001 ರಿಂದ 2013ರ ವರೆಗೆ ರಾಯಚೂರು ಮುನ್ನೂರುಕಾಪು ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾಗಿ ಮಾರ್ಗದರ್ಶಕರಾಗಿ ಸೇವೆಗೈದವರು.
ಶಿಕ್ಷಕರಾಗಿ ಸವಾಲುಗಳು ಮತ್ತು ಸಾಧನೆಗಳು
ರಾಮಣ್ಣ ಹವಳೆಯವರ ತಮ್ಮ ಆಕಾಶವಾಣಿ ಸಂದರ್ಶನದ ಹೃದಯಸ್ಪರ್ಶಿಮಾತುಗಳನ್ನು ಇಲ್ಲಿ ಕೆಲವೊಂದನ್ನು ಪ್ರಸ್ತಾಪಿಸಿದ್ದೇನೆ. ರಾಯಚೂರಿಗೆ ಶಿಕ್ಷಕರಾಗಿ ಮುನ್ನೂರುವಾಡಿ ಶಾಲೆಗೆ ಬಂದಾಗ ಕೊಠಡಿ ಕುರ್ಚಿ ಬೆಂಚು ಯಾವುದು ಇರಲಿಲ್ಲ. ಒಂದು ಬಾಡಿಗೆ ಮನೆಯಲ್ಲಿ ಶಾಲೆ ನಡೆಯುತ್ತಿತ್ತು. ಮಕ್ಕಳಿಂದ ಎರಡು ರೂಪಾಯಿ ಸಂಗ್ರಹಿಸಿ ಬಾಡಿಗೆ ನೀಡುವ ಪರಿಸ್ಥಿತಿ ಇತ್ತು. ಶಾಲೆಯ ಹಣ್ಣಿನ ಮುಖ್ಯ ಗುರುಗಳಾದ ಶ್ರೀ ಸದಾಶಿವಪ್ಪ ಅವರನ್ನು ಸ್ಮರಿಸುತ್ತಾ ಅವರೊಂದಿಗೆ ಈ ಪರಿಸ್ಥಿತಿ ಬದಲಾಯಿಸಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಲು ಗಣೇಶ ಚತುರ್ಥಿ ಆಚರಣೆಗೆ ಮುಂದಾದರು. ರಾಯಚೂರಿನಲ್ಲಿ ಪ್ರಥಮ ಬಾರಿಗೆ ಶಾಲೆಯಲ್ಲಿ ಗಣೇಶ ಉತ್ಸವ ಆಚರಿಸುವ ಪರಂಪರೆ ಅಂದಿನಿಂದ ಆರಂಭವಾಯಿತು. ವಿಶಾಲವಾದ ಅಂಗಳದಲ್ಲಿ ಸಾವಿರಾರು ಜನರ ಮಧ್ಯೆ ಆಚರಿಸಲಾಯಿತು. ಜನರಿಂದ ಎರಡು ರೂಪಾಯಿ ಸಂಗ್ರಹಿಸಲಾಯಿತು. ಈ ಗಣೇಶೋತ್ಸವದಲ್ಲಿ ಶಾರದಾದೇವಿ ನಾಟಕವನ್ನು ರಾಮಣ್ಣನವರು ನಿರ್ದೇಶಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆಗೂಡಿ ಅಭಿನಯಿಸಿದರು. ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾದೇವಿ ಒಬ್ಬ ರಾಕ್ಷಸನಂತಹ ಮನುಷ್ಯ ಕೊಲ್ಲಲು ಬಂದಾಗ ಅವನಿಗೆ ಶಾಂತಿ ಬೋಧಿಸಿದ ಪ್ರಸಂಗವನ್ನು ನಾಟಕದ ವಸ್ತು ವಿಷಯವಾಗಿ ಅತ್ಯದ್ಭುತವಾಗಿ ಪ್ರದರ್ಶಿಸಲಾಯಿತು. ನೆರೆದ ಜನಸ್ತೋಮ ನಾಟಕಕ್ಕೆ ಮನಸೋತರು. ಅಲ್ಲದೆ ಗಂಗಾ ನಗರದ ನಾಗಣ್ಣನವರು ಸ್ವಾತಂತ್ರ ಹೋರಾಟಗಾರರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯಲು ಖರ್ಚು ವೆಚ್ಚ ನೀಡುವುದಾಗಿ ಮುಂದೆ ಬಂದರು. ಅದಕ್ಕೆ ರಾಮಣ್ಣನವರು ಖರ್ಚು ಕೊಡುವುದಕ್ಕಿಂತ ಶಾಲೆಯ ಕಟ್ಟಡ ಕಟ್ಟಿಸಲು ಒತ್ತಾಯಿಸಿದರು. ಇದು ಶಾಲೆಯ ನಿರ್ಮಾಣಕ್ಕೆ ತಳಹದಿಯಾಯಿತು. ಅವರ ಜೊತೆಗೂಡಿ 1970ರ ವರೆಗೆ ಶಾಲೆ ನಿರ್ಮಾಣಗೊಂಡಿತು. ಶ್ರದ್ಧ ಹಸ್ಥರಾಗಿ ಹಣ ಸಂಗ್ರಹಿಸಿ ಎಂಟು ಕೊಠಡಿಗಳ ಶಾಲೆ ನಿರ್ಮಾಣಗೊಂಡಿತು. ಆ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಡಾ. ಸಂಗಮೇಶ ಸರದಾರ್ ಶಾಲೆಗೆ ಜಾಗ ನೀಡಿದ ಮಹನೀಯರನ್ನು ರಾಮಣ್ಣನವರು ಸ್ಮರಿಸುತ್ತಾರೆ. ಇಂದು ಆ ಶಾಲೆ ಸಾವಿರಾರು ಮಕ್ಕಳ ವಿದ್ಯಾದಾನಗೈದ ಪುಣ್ಯ ನೆಲವಾಗಿದೆ.
1947 ರ ಗೆಜೆಟಿಯರ್ ದಾಖಲೆ ಪ್ರಕಾರ ನಮ್ಮ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ 9 ರಿಂದ 11 ರಷ್ಟು. ಹೆಣ್ಣು ಮಕ್ಕಳ ಸಾಕ್ಷರತೆ ಪ್ರಮಾಣ 1.04ರಷ್ಟಿತ್ತು. ಅಂದಿನ ಜಿಲ್ಲಾಧಿಕಾರಿಗಳಾದ ಕೆ ರತ್ನಪ್ರಭಾ ಅವರ ಸಹಕಾರದೊಂದಿಗೆ ಸಾಕ್ಷರತಾ ಯೋಜನೆ ಜಾರಿಗೆ ತಂದರು. ಹಳ್ಳಿ ಹಳ್ಳಿಗಳಿಗೆ ಶಿಕ್ಷಣದ ಜಾಗೃತಿ ಮೂಡಿಸಿ ಶಿಕ್ಷಣದ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸಿದರು. ಆಗ ಶೇಕಡ 35 ರಿಂದ 45ಕ್ಕೆ ಜಿಲ್ಲೆಯ ಸಾಕ್ಷರತೆ ಪ್ರಮಾಣ ಹೆಚ್ಚಿತು. ಐದು ವರ್ಷಗಳು ಸಾಕ್ಷರತಾ ಯೋಜನೆಯಲ್ಲಿ ಅವರೊಟ್ಟಿಗೆ ಸೇವೆಗೈದ ತೃಪ್ತಭಾವ ಹವಳೆಯವರಿಗಿದೆ. ಸಾಕ್ಷರತಾ ಯೋಜನೆಯ ಕಾರ್ಯದ ಅನುಭವಗಳೆ ಇವರ ಬರಹದ ಜೀವಾಳ. ಅನುಭವಗಳನ್ನು ಉದ್ದ ಗೊಳಿಸಿ ಪುಸ್ತಕಗಳನ್ನು ಬರೆಯಲು ಆರಂಭಿಸಿದರು.
ಸಾಹಿತ್ಯ ಸಂಪತ್ತು
ಒಟ್ಟು 19 ಕೃತಿಗಳನ್ನು ನೀಡಿದ ಶ್ರೀಯುತರು ಚರಿತ್ರೆ, ಜೀವನ ಚರಿತ್ರೆ, ನಾಟಕಗಳು ಮಕ್ಕಳ ನಾಟಕಗಳು ಅಭಿನಂದನಾ ಗ್ರಂಥಗಳು ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.
ಚರಿತ್ರೆಯ ನಾಧರಿಸಿದ ಪ್ರತಿಯೊಂದು ಕೃತಿಗೂ ಪ್ರಶಸ್ತಿಗಳು ಬಂದಿವೆ ಎನ್ನುತ್ತಾರೆ. ಅವರ ಮೌಲ್ಯಯುತ ಬರಹಕ್ಕೆ ಸಾಕ್ಷಿಯಾಗಿವೆ. ರಾಯಚೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಅವರ ನೆಚ್ಚಿನ ಕೃತಿ ಎನ್ನುತ್ತಾರೆ.
ಕಲಿಕೆ ಎಂಬ ಮಾಸಪತ್ರಿಕೆ ತಮ್ಮ ಸಂಪಾದಕತ್ವದಲ್ಲಿ ಆರಂಭಗೊಂಡಿತು.
ಡಿ ಎಸ್ ಈ ಆರ್ ಟಿ ಯ ೧.೨.೩ ತರಗತಿ ಕನ್ನಡ ಪುಸ್ತಕಗಳು ಅಲ್ಲದೆ ಚೈತನ್ಯ ಎಂಬ ತರಬೇತಿ ಸಂಚಿಕೆ ಪ್ರಕಟವಾದವು.ಇವರು ವಿಭಾಗ ಸಮಿತಿಯ ಸದಸ್ಯರಾಗಿದ್ದರು.
೧ ರಿಂದ ೭ನೇ ತರಗತಿಯ ಮಕ್ಕಳ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಎಂಟು ವರ್ಷಗಳ ಕಾಲ ಸೇವೆಗೈದರು.
ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ೬ ನೇ ತರಗತಿ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿ ಮಕ್ಕಳ ಮನಮುಟ್ಟುವಂತೆ ಪುಸ್ತಕಗಳನ್ನು ರಚಿಸಿ ನೀಡಿದ್ದಾರೆ.
ರಾಯಚೂರು ಜಿಲ್ಲಾ ಪಂಚಾಯಿತಿಯಿಂದ ಪ್ರಕಟವಾಗುತ್ತಿದ್ದ ಪಂಚಾಯತ್ ರಾಜ್ ಪತ್ರಿಕೆಯ ಸಂಪಾದಕರಾಗಿ ೫ ವರ್ಷ ಸೇವೆ ಸಲಿಸಿದ್ದಾರೆ.
ಪ್ರಮುಖ ಕೃತಿಗಳು
೧)ಸ್ವಾತಂತ್ರ್ಯ ಹೋರಾಟದಲ್ಲಿ ಗಜೇಂದ್ರಗಡ ಶಿಬಿರ – ಚರಿತ್ರೆ ಇವರ ಮೊಟ್ಟ ಮೊದಲ ಕೃತಿ.
೨)ಸ್ವಾತಂತ್ರ್ಯ ಸೇನಾನಿ ಪುಂಡಲಿಕಪ್ಪ ಜ್ಞಾನಮೋಠೆ – ಜೀವನ ಚರಿತ್ರೆ
೩) ಡಾ. ಸಂಗಮೇಶ ಸರದಾರ – ಜೀವನ ಚರಿತ್ರೆ
೪) ಕ್ರಾಂತಿದರ್ಶಿ, ಪರಮ ತಪಸ್ವಿ ಮುರಡಿ ಭೀಮಜ್ಜ ಈ ಕೃತಿ ಪ್ರಖಂಡ ಬ್ರಹ್ಮಚಾರಿ ತಪಸ್ವಿಗಳು ಹಾಗೂ ಸ್ವಾತಂತ್ರ ಹೋರಾಟಗಾರರಾದ ಮುರಡಿ ಭೀಮಜ್ಜನವರ ಜೀವನ ಚರಿತ್ರೆ ಆಧರಿಸಿದ ಮಹತ್ವದ ಕೃತಿ.
೫) ಹೈದರಾಬಾದ ಸಂಸ್ಥಾನ ವಿಮೋಚನೆಯಲ್ಲಿ ರಾಯಚೂರು ಜಿಲ್ಲೆಯ ಹೋರಾಟ – ಸಂಶೋಧನಾ ಗ್ರಂಥ
೬) ಕೊಪ್ಪಳ ನಾಡಿನ ಸ್ವಾತಂತ್ರ್ಯ ಹೋರಾಟ – ಚಾರಿತ್ರಿಕ ಕೃತಿ
೭) ಮುಂಡರಗಿ ನಾಡ ಸ್ವಾತಂತ್ರ ಹೋರಾಟ ಈ ಕೃತಿ ವಿವಿಧ ಗಣ್ಯರಿಂದ ಪ್ರಾಧ್ಯಾಪಕರಿಂದ ಮುಂಡರಗಿ ಇತಿಹಾಸ ಬರೆಯಿಸಿ ಹೋರಾಟಗಾರರ ಪರಿಚಯ ಮಾಡಿಕೊಡುವ ಮಹತ್ವದ ಕೃತಿಯಾಗಿದೆ.
ಸಂಪಾದಿತ ಕೃತಿಗಳು
೧)ಸಾಧಕ – ಈ ಕೃತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿದ್ದ ಚಿದ್ರಿ ಶಂಕ್ರಯ್ಯ ಸ್ವಾಮಿ ಅವರ ಅಭಿನಂದನಾ ಗ್ರಂಥ.
೨) ಚೈತನ್ಯ – ಈ ಕೃತಿ, ನಿವೃತ್ತ ಶಿಕ್ಷಣ ನಿರ್ದೇಶಕರಾದ ಕೆ ಶಾಂತಯ್ಯ ಅವರ ಆದರ್ಶ ಬದುಕಿನ ಚಿತ್ರಣ.
೩) ಮುನ್ನೂರು ಮುಂಗಾರು – ಈ ಕೃತಿ ಮುನ್ನೂರು ಕಾಪು ಜನಾಂಗದ ಜೀವನ ಮತ್ತು ಸಾಂಸ್ಕೃತಿಕ ಚರಿತ್ರೆಯ ಅನಾವರಣಗೊಂಡ ಕೃತಿ.
೪) ನೆನಹು – ಕವನ ಸಂಕಲನ ಸಂಪಾದಿತ ಕೃತಿ ಇದು ರಾಯಚೂರು ಪ್ರಾತಿನಿಧಿಕ ಕವನಗಳ ಸಂಕಲನವಾಗಿದೆ.
೫) ಶಿಕ್ಷಕ ಮಾರ್ಗದರ್ಶಿ- ಈ ಕೃತಿ ನಲಿ – ಕಲಿ ತರಬೇತಿಯ ಕುರಿತು ವಿವರಣೆ ಹಾಗೂ ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿವರಣಾತ್ಮಕ ಅಂಶಗಳ ಕೃತಿಯಾಗಿದೆ.
೬) ಆದರ್ಶ ಮಹಿಳೆಯರು- ಈ ಕೃತಿ ಕರ್ನಾಟಕ ರಾಜ್ಯದ ಪ್ರಮುಖ ಸಾಧಕ ಮಹಿಳೆಯರ ಬದುಕು ಮತ್ತು ಅವರ ಕೊಡುಗೆಗಳನ್ನು ಚಿತ್ರಿಸಿದ ಕೃತಿಯಾಗಿದೆ.
ನಾಟಕಗಳು
೧)ನಿರುದ್ಯೋಗಿ ಭೂತ
೨) ಏಕಲವ್ಯ- ಮಕ್ಕಳಿಗಾಗಿ ಬರೆದ ನಾಟಕ
೩) ಅಲ್ಲಮನ ಅಂಗಳದಲ್ಲಿ
ಮಕ್ಕಳ ರಾಮಾಯಣ ಕಥೆಯು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಆಧರಿಸಿದ ಕಥೆಯಾಗಿದ್ದು 1989 ರಲ್ಲಿ ಸುದ್ದಿ ಮೂಲಪತ್ರಿಕೆಯಲ್ಲಿ ದಾರವಾಹಿಯಾಗಿ ಪ್ರಕಟಗೊಂಡಿತು. ಯಾವುದೇ ಪೂರ್ವಗ್ರಹ ಕಲ್ಪನೆ, ಉದ್ವೇಗ ಒತ್ತಡಗಳಿಗೆ ಒಳಗಾಗದೆ ಸತ್ಯ ವಸ್ತುನಿಷ್ಠ ವಿಷಯಗಳನ್ನು ನಿಖರವಾಗಿ ನಿರೂಪಿಸಿದ ಹೆಮ್ಮೆ ಇವರದ್ದಾಗಿದೆ.
ಸಾಮಾಜಿಕ ಚಿಂತಕರಾಗಿ
ವೃತ್ತಿಯಿಂದ ನಿವೃತ್ತಿಗೊಂಡ ನಂತರ ಸಂಪೂರ್ಣವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ರಾಮಣ್ಣ ಹವಳೆಯವರು ನಿವೃತ್ತ ನೌಕರರ ಸಂಘವನ್ನು ಸಂಘಟಿಸಿ ಅದರ ಉಪಾಧ್ಯಕ್ಷರಾಗಿ 2011 ರಿಂದ ಇಂದಿನವರೆಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿವೃತ್ತ ನೌಕರರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಿ ಸರ್ಕಾರದ ಗಮನ ಸೆಳೆಯುವ ಕಾರ್ಯ ನಿರಂತರವಾಗಿ ನಡೆಸಿದ್ದಾರೆ. ಹಿರಿಯ ನಾಗರಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ಹಿರಿಯ ನಾಗರೀಕರನ್ನು ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ವಿಭಾಗ ಮಟ್ಟದಲ್ಲಿ ನಿವೃತ್ತ ನೌಕರರ ಸಮ್ಮೇಳನ ನಡೆಸಿದ ಯಶಸ್ಸು ಇವರದ್ದಾಗಿದೆ.
ರಾಜ್ಯ ಮತ್ತು ರಾಷ್ಟ್ರ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರತಿ ವರ್ಷ ಇದು ಜನ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಪರಂಪರೆ ಬೆಳೆಸಿದ್ದಾರೆ.
ಗೌರವ ಪ್ರಶಸ್ತಿ – ಪುರಸ್ಕಾರಗಳು
ಪ್ರಶಸ್ತಿಗಳು ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವವನ್ನು ಅಳೆಯುವುದಿಲ್ಲ. ಅವರ ಬದುಕು ಮತ್ತು ಬರಹ ಒಂದಾಗಿ ಸಮಾಜಕ್ಕೆ ಪೂರಕವಾದರೆ ಅಭಿವೃದ್ಧಿಗೆ ಬೆಳಗಾದರೆ ಮಾತ್ರ ಆ ಪ್ರಶಸ್ತಿಗೆ ಮತ್ತು ಪಡೆದ ವ್ಯಕ್ತಿಗೆ ಗೌರವ ಇಲ್ಲವಾದಲ್ಲಿ ಅದಕ್ಕೆ ಕೇವಲ ಕಾಗದದಲ್ಲಿ ಮೂಡಿಸಿದ ಬರಹಕ್ಕೆ ಸೀಮಿತವಾದಿತು. ಎನ್ನುವುದು ಹವಳೆಯವರ ಉದಾತ್ತ ವ್ಯಕ್ತಿತ್ವದ ಮಾತುಗಳು. ಹವಳೆಯವರು ರಚಿಸಿದ ಐತಿಹಾಸಿಕ ಪ್ರತಿ ಕೃತಿಗೂ ಪ್ರಶಸ್ತಿಗಳು ಬಂದಿವೆ.
ಪ್ರಮುಖವಾಗಿ
1986 ರಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ
1990ರಲ್ಲಿ ರಾಷ್ಟ್ರ ಶಿಕ್ಷಕ ಪ್ರಶಸ್ತಿ
ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ
ಹೈದರಾಬಾದ್ ಸಂಸ್ಥಾನ ವಿಮೋಚನೆಯಲ್ಲಿ ರಾಯಚೂರು ಜಿಲ್ಲೆಯ ಹೋರಾಟ ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ.
ಮುನ್ನೂರು ಕಾಪು ಸಮಾಜದಿಂದ 2012ರಲ್ಲಿ ಬಲಿಜ ಪ್ರಶಸ್ತಿ
ಜಿಲ್ಲಾ ಪುಸ್ತಕ ಸಾಕ್ಷರತಾ ರತ್ನ ಪ್ರಶಸ್ತಿ.
ಶಿಕ್ಷಣ ಸಂಸ್ಕೃತಿ ಉತ್ಥಾನ ನ್ಯಾಸ ನವದೆಹಲಿ ಪ್ರಶಸ್ತಿ ಫಲಕ,
ಮುಂಡರಗಿ ಮಠ ಪ್ರತಿಷ್ಠಾನ ಪ್ರಶಸ್ತಿ
ಶಿಕ್ಷಣ ಸೇವೆಗೆ ಎ ವೆಂಕಟೇಶ ನಾಯಕ ಸ್ಮರಣಾರ್ಥ ಡಾ. ರಾಜಕುಮಾರ ಪ್ರಶಸ್ತಿ
ಮಹಾಂತ ಶ್ರೀ ಪ್ರಶಸ್ತಿ
ಡಾ ಎಸ್, ನರಸಿಂಹಯ್ಯ ಪ್ರಶಸ್ತಿ ಹತ್ತು ಹಲವು ಪ್ರಶಸ್ತಿಗಳು ಇವರ ಸಾಧನೆಯ ಮುಡಿಗೇರಿವೆ.
*ಸಾಹಿತ್ಯ ಮತ್ತು ಸಾಹಿತಿ*
ಹವಳೆಯವರ ಅನುಭವದ ನುಡಿಗಳಲ್ಲಿ ಸಾಹಿತ್ಯ ಎಂದರೆ ಜೀವನದ ಕನ್ನಡಿ. ಸಮಷ್ಟಿಯ ಜೀವನವನ್ನು ಒಳಗೊಳ್ಳುತ್ತದೆ. ಸಮಾಜವನ್ನು ಬಿಟ್ಟು ಸಾಹಿತಿಗಳು ಇರಲಾರರು ಬದುಕು ಮತ್ತು ಸಾಹಿತ್ಯ ಎರಡು ಜೊತೆ ಜೊತೆಗೆ ಸಾಗುತ್ತವೆ. ಬರಹ ಪುಸ್ತಕ ವಾಗಬಾರದು. ಅದೊಂದು ಸಾಹಿತ್ಯ ವಾಗಬೇಕು ಅಂದಾಗ ಸಾಹಿತಿಯಾಗಲು ಸಾಧ್ಯ. ಸಾಹಿತ್ಯ ನಡೆ-ನುಡಿ ಒಂದಾಗಿದ್ದಾಗ ಮಾತ್ರ ಸಾಹಿತ್ಯ ಜೀವಂತವಾಗಿರಲು ಸಾಧ್ಯ. ಬಹುತೇಕ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಜನಪ್ರತಿನಿಧಿಗಳ ಮಾತು ಮತ್ತು ಕೃತಿ ವಿರುದ್ಧ ದಿಕ್ಕಿನಲ್ಲಿ ಸಾಗುವಂತೆ ಸಾಹಿತಿಗಳು ಕೇವಲ ವೇದಿಕೆ, ಪ್ರತಿಷ್ಠೆ, ಪ್ರಚಾರಕ್ಕೆ ಬರಹವನ್ನು ರೂಢಿಸಿಕೊಂಡವರು ಸಾಹಿತಿಗಳಾಗಲಾರರು. ಅವರ ಬದುಕು ಬರಹದ ಪ್ರತಿರೂಪವಾಗಿರಬೇಕು. ಎನ್ನುತ್ತಾರೆ.
ಹವಳೆಯವರ ಮಹದಾಸೆ
ಅವರ ಜೀವನದ ಆಕಾಂಕ್ಷೆಯಾಗಿ ಉಳಿದಿರುವುದು ರಾಯಚೂರು ಜಿಲ್ಲೆಯಲ್ಲಿ ಔದ್ಯೋಗಿಕವಾಗಿ ಬೆಳೆಯಬೇಕಿದೆ. ಯಾವುದೇ ಕೈಗಾರಿಕೆಗಳಿಲ್ಲದೆ ಉದ್ಯೋಗಾವಕಾಶಗಳಿಲ್ಲದೆ ತುಂಬಾ ಹಿಂದುಳಿದಿದೆ. ಹತ್ತಿ ಬೆಳೆಯುತ್ತಿದ್ದರೂ ಒಂದು ಹತ್ತಿ ಕಾರ್ಖಾನೆಗಳಿಲ್ಲ. ವಿದ್ಯುತ್ ಉತ್ಪಾದನೆಯಿದ್ದರೂ ಸಂಬಂಧಿತ ಕೈಗಾರಿಕೆಗಳಿಲ್ಲ. ಜನಪ್ರತಿನಿಧಿಗಳ ನಿರಾಸಕ್ತಿ ಒಂದೆಡೆಯಾದರೆ ಜಿಲ್ಲೆಯ ಜನತೆ ಕೇಳಲು ಬಾಯಿ ಇಲ್ಲದೆ ನೋಡಲು ಕಣ್ಣಿಲ್ಲದವರಂತೆ ಜೀವಿಸುತ್ತಿದ್ದಾರೆ. ಪ್ರಶ್ನಿಸುವ ಧೈರ್ಯ, ಹೋರಾಟದ ಮನೋಭಾವ ಭಗವಂತ ನಮ್ಮ ಜಿಲ್ಲೆಯ ಜನತೆಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎನ್ನುತ್ತಾರೆ.
ಪ್ರಸ್ತುತ ನಮ್ಮ ಜಿಲ್ಲೆಯ ಹೆಮ್ಮೆಯ ಕನ್ನಡಮ್ಮನ ಕುವರರಾಗಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಸಾರ್ಥಕವೆನಿಸುತ್ತದೆ. ಸಮಾಜದ ಒಡನಾಟ ಆಡಳಿತ ವೃತ್ತಿ ಜವಾಬ್ದಾರಿಗಳ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದೆ ಆದರ್ಶ ಕುಟುಂಬ ಜೀವಿಗಳು. ಪತ್ನಿ ಸುಮ ಬಾಯಿಯವರೊಂದಿಗೆ ಜೀವನ ಸವೆಸಿದವರು. ಮೂರು ಜನ ಹೆಣ್ಣು ಮಕ್ಕಳು ಇಬ್ಬರ ಗಂಡು ಮಕ್ಕಳು ಇಂದು ಮೊಮ್ಮಕ್ಕಳ ಜೊತೆಗೆ ವೃದ್ಧಾಪ್ಯದ ಜೀವನವನ್ನು ಆನಂದಿಸುತ್ತ ಸಾಗಿಸುತ್ತಿದ್ದಾರೆ. ಶ್ರೀಯುತರ ಸಾರ್ಥಕ ಬದುಕಿನ ಹೆಜ್ಜೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಬರಹ ಓದುಗರ ಮನ ಮುಟ್ಟಲಿ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ತಮಗೆ ಹಾರ್ದಿಕ ಅಭಿನಂದನೆಗಳು ಮತ್ತು ಭಗವಂತನ ಕೃಪೆ ಇರಲಿ ಎಂದು ಆಶಿಸುತ್ತೇವೆ.
ಶ್ರೀಮತಿ ರೇಖಾ ಪಾಟೀಲ್ ರಾಯಚೂರ

