ಶರಣು…. ಶರಣಾರ್ಥಿ- ೧

ಕಾದಂಬರಿ

ಶರಣು…. ಶರಣಾರ್ಥಿ- ೧

ಅದು ಎಪ್ಪತ್ತರ ದಶಕ, ಆ ಹಳ್ಳಿಯಲ್ಲಿದ್ದುದು ಮೂವತ್ತು ಮತ್ತೊಂದು ಮನೆಗಳಷ್ಟೆ. ಊರಾಚೆಯಿದ್ದ ಆ ಮೂವತ್ತೊಂದನೆ ಮನೆಯೇ ಮಹದೇವಪ್ಪನದು. ಈ ಹಿಂದೆ ಆ ಊರು ಹೈನುಗಾರಿಕೆಗೆ ಬಹಳ ಹೆಸರುವಾಸಿಯಾಗಿತ್ತು. ಪ್ರತಿ ಮನೆಯಲ್ಲೂ ನಾಲ್ಕಾರು ಆಕಳುಗಳು, ಎಮ್ಮೆಗಳು ಇರುತ್ತಿದ್ದವು. ಪಕ್ಕದ ಪಟ್ಟಣಕ್ಕೆ ಹಾಲು, ಮೊಸರು, ಬೆಣ್ಣೆ, ತುಪ್ಪ ಈ ಊರಿನಿಂದಲೇ ಹೋಗುತ್ತಿತ್ತು. ಹೀಗಾಗಿ ಆ ಊರ ಹೆಸರೇ “ಹಾಲೂರು” ಅಂತಿತ್ತು. ಆದರೀಗ ? ಬರಗಾಲದ ಛಾಯೆ ಮಳೆಯಿಲ್ಲ, ಬೆಳೆಯಿಲ್ಲ. ಜನರಿಗೆ ತಿನ್ನಲು ಅನ್ನವಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಇಂಥ ಪರಿಸ್ಥಿತಿಯಿಂದಾಗಿ ಹೈನುಗಾರಿಕೆಯಿಂದ ಸಮೃದ್ಧವಾಗಿದ್ದ ಹಾಲೂರು ಈಗ ಹಾಳೂರಾಗಿದೆ. ಬಹುತೇಕರ ಮನೆಗಳಲ್ಲಿ ಈಗ ದನಕರುಗಳಿಲ್ಲ. ಅವುಗಳನ್ನೆಲ್ಲ ಪಕ್ಕದ ಪಟ್ಟಣದ ಸಂತೆಯಲ್ಲಿ ಕೇಳಿದ ರೇಟಿಗೆ ಮಾರಿಬಂದಿದ್ದರು. ಊರವರ ಕಣ್ಣೀಗ ಆಕಾಶ ನೋಡುತ್ತಿದ್ದವು. ದೇವರು ಕಣ್ಬಿಟ್ಟರೆ ಉಣಲುಂಟು ಇಲ್ಲವೇ ಗಂಟು ಮೂಟೆ ಕಟ್ಡಿಕೊಂಡು ಕೂಲಿ ಕೆಲಸಕ್ಕೆ ದೂರದೂರಿಗೆ ಗುಳೆ ಹೋಗಬೇಕು. ಬೇರೆ ದಾರಿಯೇ ಇರಲಿಲ್ಲ. ಅಂತಹುದರಲ್ಲಿ ಈ ಮಹದೇವಪ್ಪನಿಗೆ ಈಗಾಗಲೇ ಹನ್ನೊಂದು ಮಕ್ಕಳು. ಅಫ್ಕೋರ್ಸ್ ಐದು ಮಕ್ಕಳು ಹುಟ್ಟಿದ ಕೂಡಲೇ ತೀರಿಹೋಗಿದ್ದವು. ಅದು ಆ ಕಾಲದ ವೈದ್ಯಕೀಯ ಸೌಲಭ್ಯದ ಅಲಭ್ಯತೆಯ ಪ್ರತಿಬಿಂಬವಾಗಿತ್ತು. ಮಹದೇವಪ್ಪನಿಗೆ ಹೆಮ್ಮಾರಿಯಂತಹ ಬಡತನದ ಜೊತೆಗೆ ಆರು ಮಕ್ಕಳೂ ಇದ್ದವು, ಬದುಕಿದ್ದವು. ಆದರೂ ಮುಗ್ಧೆ ಪಾರ್ವತಮ್ಮನ ಗರ್ಭದಲ್ಲಿ ಹನ್ನೆರಡನೆ ಮಗು ಮಿಸುಕಾಡುತ್ತಿತ್ತು. “ಮಕ್ಳು ಸಾಕನಾಕ ನಮ್ ಕೈಯ್ಯಾಗೇನೈತಪಾ…. ದೇವ್ರು ಕೊಡತಾನ ಬ್ಯಾಡನಾಕ್ ಬರತ್ತನು?” ಎನ್ನುವಷ್ಟು ಮುಗ್ಧ ಅವಿವೇಕ! ಕುಟುಂಬಯೋಜನೆ ಅಂತ ಒಂದಿದೆ ಎಂಬುದೂ ಗೊತ್ತಿರದಷ್ಟು ಮುಗ್ಧರು ಆ ಕಾಲದ ಜನರು. ಅದರಲ್ಲಿ ಮಹದೇವಪ್ಪನೂ ಒಬ್ಬ.

ಆ ಕಾಲದಲ್ಲಿ ಬಹುತೇಕ ಮನೆಗಳು ಗುಡಿಸಲಲ್ಲದಿದ್ದರೂ ಸಣ್ಣ ಮನೆಗಳೇ. ಈಗಿನಂತೆ ಬೆಡ್ ರೂಮುಗಳು, ಕಿಚನ್ನು, ಹಾಲೂ….. ಅಂತೇನಿರುತ್ತಿದ್ದಿಲ್ಲ. ಒಂದು ಅಡುಗೆ ಮನೆ, ಅದರಲ್ಲೇ, ಬಚ್ಚಲು ಮುಂದೆ ಒಂದು ದೊಡ್ಡ ಕೋಣೆ ಇಷ್ಟಿದ್ದವನೇ ಆ ಕಾಲದ ಸ್ಥಿತಿವಂತ. ಅಡುಗೆನೆಯಲ್ಲೊಂದು, ಮುಂದಿನ ಕೋಣೆಲ್ಲೊಂದು ಫಿಲ್ಯಾಮೆಂಟ್ ನಿಂದ ಮಿಣುಕುತ್ತಿದ್ದ ಬಲ್ಬುಗಳು ಇರುತ್ತಿದ್ದವು. ಮಹದೇವಪ್ಪನ ಮನೆಯಲ್ಲೂ ಇಪ್ಪತೈದು ವಾಟ್ಸ್ ನ ಬಲ್ಬುಗಳು ಸಣ್ಣಗೆ ಮಿಣುತ್ತಿದ್ದವು. ನಲವತ್ತು ವಾಟ್ಸು, ಅರವತ್ತು ವಾಟ್ಸೂ ನೂರು ವಾಟ್ಸು ಸಾಮರ್ಥ್ಯದ ಬಲ್ಬುಗಳು ಆ ಕಾಲಕ್ಕೆ ಸಿಗುತ್ತಿದ್ದರೂ “ಅವೇನಿದ್ದರೂ ಶ್ರೀಮಂತರು ಮನ್ಯಾಗ ಹಾಕವಪಾ….. ನಮ್ಮಂತೋರ ಮನ್ಯಾಗ ಹಾಕಿದ್ರ ಕರೆಂಟ್ ಬಿಲ್ ಕಟ್ಟಾಕರ ಆಗ್ತೈತನು?” ಅನ್ನುವಷ್ಟು ಬಡತನದ ಬಿಸಿ. ಆ ಬಿಸಿಗೆ ಮೆತ್ತಗಾಗಿ ಹೋಗಿದ್ದ ಮಹದೇವಪ್ಪ. ಇಂತಹ ಕಷ್ಟದಲ್ಲೇ ತುಂಬು ಬಸುರಿ ಹೆಂಗಸಿರುವ ಆ ಮನೆಯಲ್ಲಿ ಅಡುಗೆ ಮನೆಯಲ್ಲಿದ್ದ ಬಲ್ಬು ಆಫ್ ಆಗೋಯ್ತು. ಮಹದೇವಪ್ಪನಿಗೆ ಚಿಂತೆಯಾಯ್ತು. ಹೊಸ ಬಲ್ಬು ತರಲು ಮೂರು ರೂಪಾಯಿ ಬೇಕಿತ್ತು. ಅವನ ಜೇಬಿನಲ್ಲಿದ್ದುದೇ ಐದು ರೂಪಾಯಿ ಅದರಲ್ಲಿ ಸಂತೆಗೆ ಹೋಗಿ ತರಕಾರಿ, ಮತ್ತು ಒಂದಷ್ಟು ಅತ್ಯಗತ್ಯ ದಿನಸಿ ಸಾಮಾನುಗಳನ್ನು ಮಾತ್ರ ತರಬೇಕು ಅಂದು ಕೊಂಡಿದ್ದ. ಈಗೇನು ಮಾಡುವುದು ಎಂದು ತಿಳಿಯಲಿಲ್ಲ ಮಹದೇವಪ್ಪನಿಗೆ. ಅಷ್ಟರಲ್ಲಿ ಅವನ ಹಿರಿಮಗ
“ನಾನು ರಿಪೇರಿ ಮಾಡತೀನಿ ತಡಿ” ಅಂತೇಳಿ ಆ ಬಲ್ಬನ್ನು ಸ್ವಲ್ಪ ಹಾಗೆ ಹೀಗೆ ನಿಧಾನಕ್ಕೆ ಅಲುಗಾಡಿಸಿದ ಹೇಗೆಂದರೆ ಕರೆಂಟಿನ ತಾಪಕ್ಕೆ ಬೆದರಿ, ಉದುರಿ ಜೋತಾಡುತ್ತಿದ್ದ ಫಿಲ್ಯಾಮೆಂಟು ಮತ್ತೆ ಅದರ ಇನ್ನೊಂದು ತುದಿಗೆ ಕನೆಕ್ಟ್ ಆಗಬೇಕು, ಅದು ಆಗುವತನಕ ಬಲ್ಬನ್ನು ಹಾಗೂ ಹೀಗೂ ನಿಧಾನವಾಗಿ ಅಲುಗಾಡಿಸಿದ. ಜೋತಾಡುತ್ತಿದ್ದ ಆ ಫಿಲ್ಯಾಮೆಂಟು ಮತ್ತೆ ತನ್ನ ಮೂಲದೊಂದಿಗೆ ಕೂಡಿಕೊಂಡಿತು. ಬಲ್ಬು ಮತ್ತೆ ಮಿನುಗಲು ಶುರುವಾಯಿತು. ಎಲ್ಲರಿಗೂ ಖುಷಿಯೋ ಖುಷಿ. ಮಹದೇವಪ್ಪ ಖುಷಿಯಿಂದ, “ಚೊಲ ಆತ್ ಬುಡಪ, ಪುಣ್ಯ ಬರ್ಲಿ ನಿನಗ ಸೆಂತಿ ತರಾಕಂತ ಈ ರೊಕ್ಕ ತಗೆದಿಟ್ಟಿದ್ದೆ, ಇವನೌನ್ ಹಿಂಗಾತಲಾ…. ಹೆಂಗಮಾಡಬೇಕಪಾ ಅಂತ ಅನಕಳಾಕತ್ತಿದ್ದೆ, ನೀನು ಚೊಲೊ ಮಾಡಿದಿನೋಡ್” ಎನ್ನುತ್ತಾ ತನ್ನ ಜೇಬು ಮುಟ್ಟಿಕೊಂಡ. ಅದರಲ್ಲಿದ್ದ ಐದು ರುಪಾಯಿ ನೋಡು ಸಣ್ಣಗೆ ನಗುತ್ತಿತ್ತು.

 

 

 

 

 

 

 

 

 

–ಆದಪ್ಪ ಹೆಂಬಾ

——-_——————————————————

ಓದುಗ ಪ್ರಭುಗಳೇ,

ಮಿತ್ರ ಆದಪ್ಪ ಹೆಂಬಾ ಮಸ್ಕಿ ತಾಲ್ಲೂಕಿನ ಉದ್ಬಾಳ ಗ್ರಾಮದ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ಬರವಣಿಗೆಯ ಪ್ರವೃತ್ತಿ ರೂಢಿಸಿಕೊಂಡು ಕಾದಂಬರಿಕಾರರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾದವರು.

ಈಗಾಗಲೇ ಎರಡು ಕಾದಂಬರಿ ಮತ್ತು ಒಂದು ಐತಿಹಾಸಿಕ ದೇವಸ್ಥಾನ ಕುರಿತು ಸ್ಥಳ ಪರಿಚಯ ಪುಸ್ತಕ ಪ್ರಕಟಿಸಿದ್ದಾರೆ.
ಈಗ ಮೂರನೇ ಕಾದಂಬರಿ ರಚನೆಯಲ್ಲಿ ತೊಡಗಿದ್ದು
e- ಸುದ್ದಿ ಓದುಗರಿಗಾಗಿ ಪ್ರತಿದಿನ ಹಲವು ಕಂತುಗಳಲ್ಲಿ ಪ್ರಕಟವಾಗಲಿದೆ. ಓದುಗರು ತಮ್ಮ‌ ಅಭಿಪ್ರಾಯ ವನ್ನು ಬರದು ತಿಳಿಸಿದರೆ ಲೇಖಕರ ಗಮನಕ್ಕೆ ತರಲಾಗುತ್ತದೆ. ನಿಮ್ಮ ಅಭಿಪ್ರಾಯ ಅವರಿಗೆ ಹೊಸ ವಿಷಯ ಪ್ರಯೋಗಕ್ಕೆ ಬೆಳಕು ನೀಡಬಹುದಾಗಿದೆ.

–ಸಂಪಾದಕ

Don`t copy text!