ಗಜಲ್
ಅವನ ಕಣ್ಣಲಿ ಕನಸು ಹುಡುಕಿದ್ದು ನನ್ನದೇ ತಪ್ಪು
ಸುಣ್ಣವನು ಬೆಣ್ಣೆ ಎಂದು ತಿಳಿದಿದ್ದು ನನ್ನದೇ ತಪ್ಪು
ಚಂದಿರನ ತಂಬೆಳಕೆಂದು ಅವನ ಅಪ್ಪಿ ಮುದ್ದಾಡಿದೆ
ಬೆಂಕಿಯ ಸಂಗಡ ಸರಸವಾಡಿದ್ದು ನನ್ನದೇ ತಪ್ಪು
ಮಾತಿಗೆ ಮರುಳಾಗಿ ಪಾದಕ್ಕೆ ಅರಳಿದ ಹೂ ಅಪಿ೯ಸಿದೆ
ಗೋಮುಖ ವ್ಯಾಘ್ರವನು ನಂಬಿದ್ದು ನನ್ನದೇ ತಪ್ಪು
ಒಯ್ಯಾರದಲಿ ದಾವಣಿಯನು ಬಾನಲಿ ತೇಲಾಡಿಸಿದೆ
ಸೆರಗು ಮುಳ್ಳುಕಂಟಿ ಮೇಲೆ ಹಾಕಿದ್ದು ನನ್ನದೇ ತಪ್ಪು
ಮರವ ತಬ್ಬಿ ಹುಲುಸಾಗಿ ಬೆಳೆದು ಬಳುಕಾಡ ಬಯಸಿದೆ
ಗೆದ್ದಲು ಹಿಡಿದ ವೃಕ್ಷಕ್ಕೆ ಅಂಟಿದ್ದು ನನ್ನದೇ ತಪ್ರು
ಶಾಂತವಾಗಿ ಹರಿವ ಸಾಗರಕೆ ಇಳಿದು ಸಂತಸಪಟ್ಟೆ
ವಾರಿಧಿ ಒಳಗಿನ ಸುಳಿಗೆ ಸಿಲುಕಿದ್ದು ನನ್ನದೇ ತಪ್ಪು
ಹೃದಯ ಗೂಡಲಿ ಒಲವ ಹಣತೆ ಹಚ್ಚ ಬೇಕಿತ್ತು”ಪ್ರಭೆ”
ಬಯಲಲಿ ಗಾಳಿಗೆ ದೀಪ ಇಟ್ಟಿದ್ದು ನನ್ನದೇ ತಪ್ಪು
-ಪ್ರಭಾವತಿ ಎಸ್ ದೇಸಾಯಿ ವಿಜಯಪುರ
ಮೊ.೮೪೦೮೮ ೫೪೧೦೮