ಖ್ಯಾತ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯಇನ್ನಿಲ್ಲ
ಬಂಡಾಯ ಸಾಹಿತಿ ಎಂದೇ ಖ್ಯಾತರಾಗಿದ್ದ ಸಿದ್ದಲಿಂಗಯ್ಯ
e-ಸುದ್ದಿ, ಬೆಂಗಳೂರು
ಬಂಡಾಯ ಸಾಹಿತಿ, ಹಿರಿಯ ಕವಿ ಡಾ.ಸಿದ್ದಲಿಂಗಯ್ಯ(6೭) ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
ಕೆಲ ದಿನಗಳಿಂದ ಕರೊನಾ ಸೋಂಕಿನಿಂದ ಬಳಲುತಿದ್ದ ಡಾ.ಸಿದ್ದಲಿಂಗಯ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದ ಅವರಿಗೆ ಮತ್ತೆ ಉಸಿರಾಟದ ತೊಂದರೆ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
ದಲಿತ ಧ್ವನಿ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ದಲಿಂಗಯ್ಯ ಸಾಮಾಜಿಕ ಸಮಾನತೆ, ಹೋರಾಟದ ಬಗ್ಗೆ ಕಾವ್ಯ, ಸಾಹಿತ್ಯಗಳ ಮೂಲಕ ಗಮನ ಸೆಳೆದಿದ್ದರು. ನಾಟಕ, ಪ್ರಬಂಧ, ವಿಮರ್ಷೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದರು.
ಸಿದ್ದಲಿಂಗಯ್ಯ ಅವರು ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು. ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ 1954ರಲ್ಲಿ ಜನಿಸಿದ್ದರು.
ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಅಲ್ಲೆಕುಂತವರೆ ಸಿದ್ದಲಿಂಗಯ್ಯ ಅವರ ಪ್ರಮುಖ ಕವನ ಸಂಕಲನಗಳು. ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ ವಿಮರ್ಶನಾ ಕೃತಿಗಳು. ಅವತಾರಗಳು ಸದನದಲ್ಲಿ ಸಿದ್ದಲಿಂಗಯ್ಯ ಲೇಖನಗಳ ಸಂಕಲನಗಳಾಗಿದ್ದು, ಏಕಲವ್ಯ ಹಾಗೂ ನೆಲಸಮ ಪ್ರಮುಖ ನಾಟಕ ಕೃತಿಗಳಾಗಿವೆ.
ಪ್ರಶಸ್ತಿಗಳು
* ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
* ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
* ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
* ಜಾನಪದ ತಜ್ಞ ಪ್ರಶಸ್ತಿ -2001
* ಸಂದೇಶ್ ಪ್ರಶಸ್ತಿ -2001
ಹಾಗೂ ಇನ್ನೂ ಅನೇಕ ಪ್ರಶಸ್ತಿ ಗಳಿಗೆ ಭಾಜನರಾಗಿದ್ದರು.
ಡಾ.ಸಿದ್ದಲಿಂಗಯ್ಯ ಅವರಿಗೆ ಮಸ್ಕಿಯ ಪ್ರಗತಿಪರ ಕವಿ ಸಿ.ದಾನಪ್ಪ, ಮಹಾಂತೇಶ ಮಸ್ಕಿ, ಗುಂಡುರಾವ್ ದೇಸಾಯಿ, ಆದಪ್ಪ ಹೆಂಬಾ, ಘನಮಠದಯ್ಯ ಸಾಲಿಮಠ, ವೀರೇಶ ಸೌದ್ರಿ ಸಂತಾಪ ಸೂಚಿಸಿದ್ದಾರೆ.
—————————_——–_————————————–