ಚುಂಬಕ ಗಾಳಿಯು ಬೀಸುವುದೇ…

ಚುಂಬಕ ಗಾಳಿಯು ಬೀಸುವುದೇ…
(ಕಥೆ)

ಮಹೇಶ ಹಳ್ಳಿಯಲ್ಲೇ ಹುಟ್ಟಿದ, ಹಳ್ಳಿಗಾಡಿನಲ್ಲೇ ಬೆಳೆದ, ಸಧ್ಯ ಹಳ್ಳಿಯಲ್ಲದಿದ್ದರೂ ದೊಡ್ಡ ಪಟ್ಟಣದಂತಿರುವ ತಾಲೂಕು ಕೇಂದ್ರವೊಂದರ ಸರಕಾರಿ ಕಛೇರಿಯಲ್ಲಿ ಅಧಿಕಾರಿಯಾಗಿರುವವ. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು ಚಿಕ್ಕ ವಯಸ್ಸಿಗೇ ಜೀವನದ ಬಹುದೊಡ್ಡ ಪಾಠ ಕಲಿತವ. ಕಟ್ಟುಮಸ್ತಾದ ಆಳು, ಸ್ಪುರದ್ರೂಪಿ. ನೋಡಿದ ತಕ್ಷಣ ಹುಡುಗಿಯರು ಆಸೆಪಡುವಷ್ಟು, ಹುಡುಗರು ಹೊಟ್ಟೆಕಿಚ್ಚುಪಡುವಷ್ಟು ಸುಂದರ. ಆದರೆ ಅದ್ಯಾವ ಬಾಧೆ ಅವನ ಜೀವನದಲ್ಲಿ ಕಾಡಿತ್ತೋ ಕಾಣೆ ವಯಸ್ಸು ನಲವತ್ಮೂರನ್ನು ದಾಟುವ ಹಂತ ಬಂದರೂ ಇನ್ನೂ ಬ್ರಹ್ಮಚಾರಿ! ಮದುವೆಯಾಗುವುದಿರಲಿ ಹೆಣ್ಣುಮಕ್ಕಳ ಕಡೆ ಕಣ್ಣೆತ್ತಿಯೂ ನೋಡದಷ್ಟು ಶುದ್ಧ ಪರಿಶುದ್ಧ. ಎಲ್ಲರೂ ಹೇಳುತ್ತಿದ್ದದ್ದು ; ಮದುವೆ ವಿಚಾರದಲ್ಲಿ ಅವನು ಸ್ವಲ್ಪ ಕಠೋರವೇ. ಸಾಕಷ್ಟು ಹಿರಿಯರು ಮಹೇಶನನ್ನು ಮದುವೆಗೆ ಅಣಿಗೊಳಿಸಲು ಪ್ರಯತ್ನಿಸಿ ಸೋತವರೇ. ಈ ಪ್ರಯತ್ನದಲ್ಲಿ ಗೆಳೆಯರೂ ಹೊರತಲ್ಲ. ಗೆಳೆಯರಂತೂ ಒಂದು ಹೆಜ್ಜೆ ಮುಂದೆ ಹೋಗಿ, “ ಲೇ ಮಗನೇ ಮಹೇಶಾ ಮದುವಿ ಅಂದ್ರ ವಲ್ಯ ಅಂತ ಓಡೆ ಹೋಗತೀಯಲ್ಲಲೇ………ಮತ್ತ ಯಾವಾಗ ಸುಖ ಕಾಣತೀಯಲೇ. ಮಗನ ಹಿಂಗ ಹೊಕ್ಕೀ ನೋಡಲೇ, ಹರಿಗುಣಿಗೆ ಹಾಕ್ತಾರ ನಿನ್ನ” ಅಂತ ನೇರಾನೇರವಾಗಿ ಬಯ್ಯೋರು. ಇನ್ನು ಸಲಿಗೆ ಇದ್ದವರಂತೂ ತೀರಾ ಅನ್ ಪಾರ‍್ಲಿಮೆಂಟರಿ ಶಬ್ದಗಳನ್ನೆಲ್ಲಾ ಸೇರಿಸಿ ಬಯ್ಯೋರು. ಒಬ್ಬನಂತೂ, “ ಲೇ ಮಯ್ಯಾ (ಮಹೇಶ) ನಿನಗ ಅದು ಐತಾ ಇಲ್ಲಲೇ ಮಗನೇ” ಪಾಪ ಅವನ ಗಂಡಸುತನಕ್ಕೇ ಸವಾಲು ಹಾಕೋರು. ಎಲ್ಲರಿಗೂ ಮಹೇಶನ ಮುಗುಳುನಗೆಯೇ ಉತ್ತರವಾಗಿರುತ್ತಿತ್ತು. ಆ ನಗು ಮದುವೆಯಾದವರೇನು ಭಾರೀ ಸುಖಿಗಳಾ…… ಅಂತ ವ್ಯಂಗ್ಯವಾಡುತ್ತಿತ್ತು. ಯಾರೆಷ್ಟೇ ಹೇಳಿದರೂ ಮಹೇಶನಿಗೆ ಮದುವೆ ಅವಶ್ಯವೆನಿಸಲೇ ಇಲ್ಲ. ತಾನಾಯಿತು ತನ್ನ ಕೆಲಸವಾಯಿತು.

ಇಂತಹ ಮಹೇಶನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದವಳು ಶ್ಯಾಮಲ. ಚಿಕ್ಕ ಹುಡುಗಿ. ಇಪ್ಪತ್ತೊಂದು, ಇಪ್ಪತ್ತೆರಡರ ಆಸುಪಾಸು. ತೀರಾ ತ್ರಿಪುರ ಸುಂದರಿಯೇನಲ್ಲ. ಆದರೆ ಹೆಸರಿಗೆ ತಕ್ಕಂತೆ ಶ್ಯಾಮಲೆ, ಶಾಂತೆ. ಕಛೇರಿಯಲ್ಲಿ ಅವಳ ಮಾತು ಅಪರೂಪ. ಅವಳದು ಅಚ್ಚುಕಟ್ಟಾದ ಕೆಲಸ. ಮಹೇಶ ಕೆಲಸ ಹೇಳುವುದೇ ತಡ ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸುತ್ತಿದ್ದಳು. ಹೀಗಾಗಿ ಶ್ಯಾಮಲಾ ಎಂದರೆ ಮಹೇಶನಿಗೆ ಪ್ರೀತಿ. ಕೆಲಸದ ವಿಷಯಕ್ಕೆ ಮಾತ್ರ. ಶ್ಯಾಮಲಾಳೂ ಅಷ್ಟೇ ಮಹೇಶನೆಂದರೆ ತುಂಬು ಗೌರವ. ಮಹೇಶನೆಂದರೆ ಭರವಸೆ. ಹೀಗಾಗಿ ಅವರಿಬ್ಬರ ಮಧ್ಯೆ ಒಂದಷ್ಟು ಸಲುಗೆ. ಸಹಜ ಸರಳ ಸುಂದರಿ ಶ್ಯಾಮಲ ಮಹಾ ಮೌನಿ. ಆದರೆ ಅವಳ ಕಣ್ಣುಗಳೋ ಕೋಲ್ಮಿಂಚಿನ ಸೆಲೆ! ಅವಳ ತುಟಿಗಳಲ್ಲಿ ಅಪರೂಪಕ್ಕೆ ಅರಳುವ ಮುಗುಳುನಗೆಯ ಕಂಡು ಆಗತಾನೇ ಅರಳಿದ ಘಮಘಮಿತ ದುಂಡು ಮಲ್ಲಿಗೆಯೂ ನಾಚಿಕೊಳ್ಳಲೇ ಬೇಕು. ಕೋಪ-ತಾಪ ಗಳೇ ಮಹೇಶನ ಅಸ್ತ್ರಗಳಾದರೆ ಮೌನ-ಮುಗುಳುನಗೆಯೇ ಅವಳ ಪ್ರತ್ಯಸ್ತ. ಒಟ್ಟಾರೆ ಅವಳದು ಉತ್ತರ ಧೃವ ಇವನದು ದಕ್ಷಿಣ ಧೃವ. ಈ ಧೃವಗಳ ಮಧ್ಯೆ ಚುಂಬಕ ಗಾಳಿಯು ಬೀಸುವದೇ ? ಅಸಾಧ್ಯದ ಮಾತು.

ಇತ್ತ ಶ್ಯಾಮಲಾಳ ಮನೆಯಲ್ಲೂ ಅವಳಿಗೆ ಗಂಡು ನೋಡಲು ಶುರು ಮಾಡಿದರು. ತನಗೆ ಗಂಡು ನೋಡುತ್ತಿದ್ದಾರೆ ಅನ್ನುವ ವಿಷಯವನ್ನು ಶ್ಯಾಮಲಾ ಸಹಜವಾಗಿಯೇ ಮಹೇಶನಿಗೆ ಹೇಳಿದಳು. ಮಹೇಶ ತುಂಬಾ ಸಂತೋಷಪಟ್ಟ. ಶುಭಶ್ಯ ಶೀಘ್ರಂ ಎಂದು ಹರಸಿದ. ಅವಳೂ ಮುಕ್ತ ಮನಸ್ಸಿನಿಂದಲೇ ಅವನ ಹಾರೈಕೆಗಳನ್ನು ಸ್ವೀಕರಿಸಿದ್ದಳು. ಎರಡೂ ಜೀವಗಳ ಮಧ್ಯೆ ನಿಷ್ಕಲ್ಮಶ ಬಾಂಧವ್ಯ. ಮೊದಲು ಬಂದ ವರ ಸೆಟ್ ಆಗಲಿಲ್ಲ. ಅದು ಜೀವನದ ಒಂದು ಭಾಗವಷ್ಟೇ. ಮತ್ತೇ ಯಥಾಪ್ರಕಾರ ಆಫೀಸು, ಆಫೀಸಿನಲ್ಲಿ ಮಹೇಶನ ಸಿಡಿಮಿಡಿ. ಬೈಸಿಕೊಂಡವರ ಹ್ಯಾಪು ಮೋರೆ. ಎಲ್ಲರ ಮನತಣಿಸುವ ಶ್ಯಾಮಲಾಳ ಮುಗುಳು ನಗೆ. ಮತ್ತದೇ ಸಲುಗೆ, ಪ್ರೀತಿ ನಿಷ್ಕಲ್ಮಶ ಬಾಂಧವ್ಯ. ಈ ಮಧ್ಯೆ ಮಹೇಶನ ಗೆಳೆಯ ತನ್ನ ಮಗನಿಗೆ ಕನ್ಯಾ ಹುಡುಕುತ್ತಿರುತ್ತಾರೆ. ಅದು ಮಹೇಶನಿಗೆ ಗೊತ್ತಾಗುತ್ತೆ. ಇನಫ್ಯಾಕ್ಟ್ ಜಾತಿಯಿಂದ ಅವರು ಶ್ಯಾಮಲಾಳ ಸಮುದಾಯದವರೇ ಆಗಿರುತ್ತಾರೆ. ಅಂದಮೇಲೆ ಮಹೇಶ ಸುಮ್ಮನಿರುತ್ತಾನೆಯೇ ತಾನೇ ಮಧ್ಯಸ್ತಿಕೆವಹಿಸಿ ತನ್ನ ಗೆಳೆಯನ ಮಗನಿಗೆ ಶ್ಯಾಮಲಾಳನ್ನು ತೋರಿಸುವ ಕೆಲಸ ಮಾಡುತ್ತಾನೆ. ಹುಡುಗ-ಹುಡುಗಿ ತಕ್ಕುದಾದ ಜೋಡಿ. ನೋಡುತ್ತಲೇ ಖುಷಿ ಪಡುವಂತಿರುತ್ತೆ ಅವರೀರ್ವರ ಜೋಡಿ. ಆದರೆ ಮಹಾನ್ ಕಾಲಜ್ಞಾನಿಯೊಬ್ಬ ಜೋತಿಷಿಯ ರೂಪದಲ್ಲಿ ಬಂದು ಇವರ ನಡುವಿನ ಗುಣಗಳು ಅಷ್ಟಾಗಿ ಬರೊಲ್ಲ. ಮದುವೆಯಾದರೆ ಅಷ್ಟೇನೂ ಶ್ರೇಯಸ್ಸಲ್ಲ ಅಂತ ಫರ್ಮಾನು ಹೊರಡಿಸಿಬಿಡುತ್ತಾನೆ. ಇದರಿಂದ ನೊಂದುಕೊಂಡದ್ದು ಶ್ಯಾಮಲಾ ಮತ್ತು ಅವರ ಮನೆಯವರಿಗಿಂತ ಈ ಮಹೇಶನೇ. ಮೌಢ್ಯ ಒಂದು ಸುಂದರ ಜೀವನವನ್ನು ಬಲಿತಗೆದುಕೊಂಡಿತಷ್ಟೆ..

ಶ್ಯಾಮಲಾಳ ಮನೆಯವರಿಗೋ ಆದಷ್ಟು ಬೇಗ ಅವಳ ಮದುವೆ ಮಾಡಿಬಿಡಬೇಕು, ಹೆಣ್ಣುಮಗು ತುಂಬಾ ದಿನ ಬಿಡಬಾರದು ಅನ್ನೋ ಧೋರಣೆ. ಅವರ ಅವಸರದ ಹುಡುಕಾಟಕ್ಕೆ ಆಗರ್ಭ ಶ್ರೀಮಂತ ಹುಡುಗನೇ ವರವಾಗಿ ಸಿಗುತ್ತಾನೆ ಶ್ಯಾಮಲಾಳಿಗೆ. ನೂರೈವತ್ತು ಎಕರೆ ಅದೂ ಪೂರ್ಣ ನೀರಾವರಿ ಹೊಂದಿದ ಫಲವತ್ತಾದ ಗದ್ದೆ ಹೊಂದಿದ ಜಮೀನುದಾರ. ಅಷ್ಟೂ ಆಸ್ತಿಗೆ ಅವನೊಬ್ಬನೇ ವಾರಸುದಾರ, ಕಾರಣ ಏಕಮಾತ್ರ ಪುತ್ರ. ಏನೇ ಆಗಲಿ ಈ ಸಂಬಂಧವನ್ನು ಬಿಡಬಾರದು ಆ ಜೋತಿಷಿಯನ್ನು ಕೇಳೋಣ, ಗುಣಗಳು ಹೊಂದಾಣಿಕೆಯಾದರೆ ಸಾಕು ಮುರಿದುಕೊಳ್ಳುವ ಮಾತೇ ಇಲ್ಲ ಅಂತ ಅಪ್ಪ ಅಮ್ಮ ಮಾತನಾಡಿಕೊಳ್ಳುತ್ತಿದ್ದುದು ಶ್ಯಾಮಲಾಳಿಗೆ ಕೇಳುತ್ತಿತ್ತು. ಇವಳ ಮನಸ್ಸಿನಲ್ಲಿ ಏನಿದೆ ? ಆ ಹುಡುಗ ಒಪ್ಪಿಗೆಯಾಗಿದ್ದಾನಾ, ಇಲ್ವಾ ? ಅಂತ ಒಂದು ಮಾತನ್ನಾದರೂ ಶ್ಯಾಮಲಾಳನ್ನು ಕೇಳಬೇಕು ಅಂತ ಆ ಅಪ್ಪ ಅಮ್ಮನಿಗೆ ಅನ್ನಿಸಲೇ ಇಲ್ಲ. ಹೋಗಲಿ ಆ ಜಮೀನುದಾರರ ಮಗನಿಗೆ ಒಂದು ಕಾಲು ಇಲ್ಲವಲ್ಲ ? ಅದೂ ಕಾಣಲಿಲ್ಲ ಆ ಪಾಲಕರಿಗೆ. ಒಂದು ಕಾಲಿಲ್ಲದಿದ್ದರೆ ಏನಾತು, ಅಷ್ಟು ದೊಡ್ಡ ಶ್ರೀಮಂತರು, ಮೇಲಾಗಿ ಒಬ್ಬನೇ ಮಗ. ಇಂಥಾ ಸಂಬಂಧ ಬಿಟ್ರೆ ಮತ್ತೆ ಸಿಗುತ್ತೇನು ? ಅನ್ನೋ ಧಾವಂತ. ಅಷ್ಟಕ್ಕೂ ಪಾಪ ಮೊದ್ಲು ಆ ಹುಡುಗ ಚೆನ್ನಾಗೇ ಇದ್ದನಂತೆ. ಬೈಕ್ ಆಕ್ಷಿಡೆಂಟ್ ಒಂದರಲ್ಲಿ ಒಂದು ಕಾಲು ಕಳೆದುಕೊಂಡಿದ್ದನಂತೆ. ಇದಕ್ಕಿಂತ ಹೆಚ್ಚಾಗಿ ಹುಡಗ ಇವಳಿಗಿಂತ ಹದಿನಾಲ್ಕು ವರ್ಷ ದೊಡ್ಡವ ! ಎಲ್ಲ ಗೊತ್ತಾಗಿಯೂ ಶ್ರೀಮಂತರ ಮನೆ ಹುಡುಗ ಅನ್ನೋ ಒಂದೇ ಕಾರಣಕ್ಕೆ ಶ್ಯಾಮಲಾಳನ್ನು ಆ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಿಶ್ಚಯಿಸಿಬಿಟ್ಟರು ಅಪ್ಪ-ಅಮ್ಮ. ಬಿಟ್ಟರೆ ನೂರೈವತ್ತು ಎಕರೆ ಜಮೀನು ಸಿಗತೈತೆನು ? ಅನ್ನುವ ಅವರ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಆ ಜ್ಯೋತಿಷಿಯೂ ಇವರ ಮಧ್ಯೆ ಭಾರೀ ಗುಣಗಳು ಬರತಾವ ದೇವಗಣ ಐತೆ. ಭಾಳ ಛಲೋ ಆಕ್ಕೈತಿ ಮುಂದುವರೀರಿ ಅಂದ. ಇಷ್ಟು ಹೇಳಿದ ಮ್ಯಾಲೂ ಸುಮ್ಮನಿರುತ್ತಾರೆಯೇ ಅಪ್ಪ-ಅಮ್ಮ ? ಮದುವೆ ಗೊತ್ತು ಮಾಡಿಯೇ ಬಿಟ್ಟರು. ಇದನ್ನು ಕೇಳಿ ಜೀವನದಲ್ಲಿ ಪ್ರಥಮ ಬಾರಿಗೆ ಕಣ್ಣೀರಾದವನು ಮಹೇಶ.

ಕೋಮಲ ಶ್ಯಾಮಲೆ ಹರಕೆಯ ಕುರಿಯಂತೆ. ಅವಳ ಅಭಿಪ್ರಾಯವನ್ನು ಕೇಳುವವರೇ ಇಲ್ಲ. ಇನ್ನು ಬೆಲೆ ಎಲ್ಲಿಯ ಮಾತು. ಮದುವೆಯನ್ನು ಧಾಂ ಧೂಂ ಆಗಿಯೇ ಮಾಡಲು ನಿಶ್ಚಯಿಸಿದರು ಜಮೀನ್ದಾರ ಬೀಗರು. ಅಂದೊಂದು ದಿನ ಶ್ಯಾಮಲ ಮಹೇಶನಿಗೆ ಒಂದು ತಿಂಗಳ ರಜೆ ಬೇಕು ಎಂದು ಕೇಳಿದಳು. ಸಹಜವೇ,….. ಹೆಣ್ಮಗು, ಮದುವೆ ತಯಾರಿಗೆ, ಮದುವೆಗೆ, ಮದುವೆ ನಂತರದ ಶಾಸ್ತ್ರಗಳಿಗೆ ಒಂದು ತಿಂಗಳು ಬೇಕೇ ಬೇಕು. ಮಹೇಶ ಯಾವ ಮಾತೂ ಆಡದೇ ರಜೆ ಮಂಜೂರು ಮಾಡಿದ. ಮರುದಿನ ಎಂದಿನಂತೆ ತನ್ನ ಕಛೇರಿಗೆ ಬಂದಿದ್ದ ಮಹೇಶ. ಅವತ್ತು ಆಫೀಸು ಯಾಕೋ ಬಣ ಬಣ ಅನಿಸುತ್ತಿತ್ತು ಅವನಿಗೆ. ಹಾಗೇನಿಲ್ಲ ಬಿಡು ದಿನಾ ಇರುತ್ತಿದ್ದ ಶ್ಯಾಮಲಾ ಇಂದು ಇಲ್ಲದ್ದರಿಂದ ಹಾಗಾಗಿದೆ ಅಂದುಕೊಂಡ. ಅಷ್ಟೇ ಆಗಿದ್ದರೆ ಚಿಂತೆಯಿರಲಿಲ್ಲ. ಅವತ್ತು ಅವಳ ಅನುಪಸ್ಥಿತಿ ಮಹೇಶನನ್ನು ಬಹುವಾಗಿ ಕಾಡಿತು. ಯಾವ ಹುಡುಗಿಯರನ್ನೂ ಕಣ್ಣೆತ್ತಿಯೂ ನೋಡದ ನಾನು ಇಂದೇಕೆ ವಿಚಲಿತನಾಗುತ್ತಿದ್ದೇನೆ. ತನ್ನನ್ನು ತಾನೇ ಕೇಳಿಕೊಂಡ. ಉತ್ತರ ಸಿಗಲಿಲ್ಲ. ಮನಸ್ಸಿನ ತುಮುಲ ತಹಬಂದಿಗೆ ಬರಲಿಲ್ಲ ಅವನದು. ಒಂದೆರಡು ದಿನ ಮಾತ್ರ ಮಹೇಶ ತುಂಬಾ ವಿಚಲಿತನಾಗಿದ್ದ. ನಿಧಾನಕ್ಕೆ ಸಹಜ ಸ್ಥಿತಿಗೆ ಬಂದ.

ಹೀಗೊಂದು ದಿನ ಮಹೇಶ ಮತ್ತವನ ಸಹವರ್ತಿಗಳು ಆಫೀಸಿನಲ್ಲಿ ಕುಳಿತಿದ್ದರು. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತಲ್ಲೀನವಾಗಿದ್ದರು. ಇದ್ದಕ್ಕಿದ್ದಂತೆ ಘಂ….. ಎನ್ನುವ ತಂಗಾಳಿ, ಹೃದಯ ಅರಳಿಸುವ ಕಾಲ್ಗೆಜ್ಜೆನಾದ, ಎದೆ ಝಲ್ ಎನಿಸುವ ಕೈ ಬಳೆ ಸದ್ದು. ಬಂದದ್ದು ಅದೇ ಶ್ಯಾಮಲೆ. ಮದುವೆ ಹೆಣ್ಣು, ಸಾಕ್ಷಾತ್ ಮಹಾಲಕ್ಷ್ಮಿಯಂತೆ ಸಿಂಗಾರ ಗೊಂಡು ತನ್ನ ಲಗ್ನ ಪತ್ರಿಕೆಯೊಂದಿಗೆ ಬಂದಿದ್ದಳು, ಇವರನ್ನೆಲ್ಲ ಆಹ್ವಾನಿಸಲೆಂದು. ಅವಳದು ಅದೇ ನಗು, ಅದೇ ಕಣ್ಮಿಂಚು. ಮಹೇಶ ತುಂಬಾ ಖುಷಿ ಪಟ್ಟ. ಮದುವೆಗೆ ಒಂದು ದಿನ ಮುಂಚೆಯೇ ಬರುತ್ತೇವೆ ಎಂದು ಹೇಳಿ ಅವಳನ್ನು ಬೀಳ್ಕೊಟ್ಟ.

ಅದು ಆ ಊರಿನ ಬಹು ದೊಡ್ಡ ಕಲ್ಯಾಣ ಮಂಟಪ. ಮದುವೆಗೆ ಬಂದ ಸಾವಿರಾರು ಅತಿಥಿಗಳು, ಎಲ್ಲರ ಮುಖದಲ್ಲೂ ಖುಷಿ. ಎಲ್ಲರು ಪರಸ್ಪರ ಮಾತಾನಾಡುತ್ತಾ, ಉಭಯಕುಶಲೋಪರಿಯೊಂದಿಗೆ ನಗುತ್ತಾ ಇದ್ದರು. ಎಲ್ಲ ಸಂಭ್ರಮದ ಮಧ್ಯೆ ಮಹೇಶ ಮದುವೆ ಹೆಣ್ಣು ಶ್ಯಾಮಲಾಳನ್ನು ಹುಡುಕುತ್ತಿದ್ದ. ಕೆಲವೇ ಕ್ಷಣಗಳಲ್ಲಿ ಸರ್ವಾಲಂಕೃತ ಶ್ಯಾಮಲ ಗೆಳತಿಯರೊಂದಿಗೆ ಸ್ಟೇಜ್‌ಗೆ ಬಂದಳು. ಅವಳ ಮುಖದಲ್ಲೊಂದು ಖಳೆಯಿತ್ತು. ನಗುವಿನಲ್ಲೊಂದು ಮಿಂಚಿತ್ತು. ಹುಡುಗನನ್ನು ಇನ್ನೂ ಕರೆತಂದಿರಲಿಲ್ಲ. ಹುಡುಗ ಬಂದ ಮೇಲೆ ಸ್ಟೇಜ್‌ಗೆ ಹೋಗಿ ಇಬ್ಬರನ್ನೂ ವಿಶ್ ಮಾಡಿದರಾಯಿತು ಅಂತ ಕಾಯುತ್ತಾ ಕುಳಿತರು ಮಹೇಶ ಮತ್ತು ಅವನ ಸಹವರ್ತಿಗಳು. ಹುಡುಗ ಬಂದ !…….. ವ್ಹೀಲ್ ಛೇರ್ ಮೇಲೆ ! ಛೇ ! ನವ ದಂಪತಿಗಳು ಸೋಫಾದಂತಹ ಛೇರ್ ಮೇಲೆ ಕುಳಿತರು. ಶ್ಯಾಮಲೆಯ ಮುಖದಲ್ಲಿ ಒಂದಿನಿತೂ ಖಳೆ ಕಮ್ಮಿಯಾಗಲಿಲ್ಲ. ಅವಳು ಮಾನಸಿಕವಾಗಿ ಸಿದ್ಧವಾಗಿಯೇ ಇದ್ದಳು. ಘಾಸಿಗೊಂಡದ್ದು ಮಹೇಶ. ಅನಿವಾರ್ಯ,….. ವಿಶ್ ಮಾಡಿ ಊಟ ಮಾಡಿ ಮನೆಗೆ ಬಂದ. ಯಾರ ಹಣೆಬರಹದಲ್ಲಿ ಆ ದೇವರು ಏನು ಬರೆದಿರುತ್ತಾನೋ ಬಲ್ಲವರಾರು ಅಂದುಕೊಳ್ಳುತ್ತಾ. ವಾಸ್ತವದ ಕಡೆ ಹೊರಳಿ ತನ್ನ ಕರ್ತವ್ಯದಲ್ಲಿ ತಲ್ಲೀನನಾದ ಮಹೇಶ.

ನಿಜ ಒಂದು ತಿಂಗಳು ಕಳೆದದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಶ್ಯಾಮಲಾ ಕರ್ತವ್ಯಕ್ಕೆ ಬಂದಾಗಲೇ ಗೊತ್ತಾದದ್ದು ತಿಂಗಳಾಯಿತು ಎಂದು! ಈ ಬಾರಿ ಶ್ಯಾಮಲಾಳ ಮುಖದ ಮೇಲೆ ವಿಶೇಷ ಖಳೆ. ಅಪ್ಪಟ ಭಾರತೀಯ ನಾರಿ, ಕೈಎತ್ತಿ ಮುಗಿಯಬೇಕು. ಮತ್ತೆ ಆಫೀಸಿನಲ್ಲಿ ನಗೆ ಬುಗ್ಗೆ. ಖುಷಿಯ ಮಾತುಗಳು. ಈಗ ಗೌಡತಿಯಾಗಿರುವ ಶ್ಯಾಮಲಾಳ ಮನೆಯಿಂದ ಆವಾಗಾವಾಗ ಸಿಹಿತಿನಿಸುಗಳು. ಅವಳ ಮೌನ. ಅವಳ ಮುಗುಳುನಗು. ಹೀಗೇ ನಡೆದಿರುವಾಗ ಒಂದು ದಿನ ಆಫೀಸಿನ ಮುಂದೆ ಕಾರೊಂದು ಬಂತು. ಅದರಲ್ಲಿ ಶ್ಯಾಮಲಾ ದಂಪತಿಗಳು. ಮದುವೆಯಾಗಿ ಆರೇಳು ತಿಂಗಳಾಯಿತಲ್ಲವೇ ? ಶ್ಯಾಮಲಾ ಈಗ ಕ್ಯಾರಿಯಿಂಗು. ಖುಷಿಯಿಂದ ಸ್ವೀಟ್ಸ್ ತಂದಿದ್ದ ಶ್ಯಾಮಲಳ ಗಂಡ. ನಗು ನಗುತ್ತಾ ಸ್ವೀಟ್ ತಿಂದ ಎಲ್ಲರೂ ಗಂಡು ಮಗುವೇ ಆಗಲಿ ಎಂದು ಹರಸಿದರು. ಯಾಕೆ ನಮ್ಮ ಸಮಾಜ ಇವತ್ತಿಗೂ ಗಂಡುಮಗುವನ್ನೇ ಬಯಸುತ್ತದೋ…….ಉತ್ತರವಿಲ್ಲದ ಯಕ್ಷ ಪ್ರಶ್ನೆ.

ದಿನಗಳುರುಳುತ್ತಿದ್ದವು. ಒಂದುದಿನ ಮಹೇಶನಿಗೆ ಶ್ಯಾಮಲಾಳಿಂದ ಕಾಲ್ ಬಂತು. ಒಂದು ವಾರ ಆಗಬಹುದು ಅಥವಾ ಇನ್ನೂ ಹೆಚ್ಚಿನ ದಿನಗಳಾಗಬಹುದು ಸರ್, ಆಫೀಸಿಗೆ ಬರೋಕಾಗಲ್ಲ ರಜೆ ಬೇಕು ಅಂದಳು ಶ್ಯಾಮಲ. ತುಂಬು ಬಸುರಿ. ಆದರೂ ಅವಳ ಧ್ವನಿ ಎಂದಿನಂತಿರಲಿಲ್ಲ. ಆ ದನಿಯಲ್ಲಿ ಆತಂಕವಿತ್ತು, ದುಃಖವಿತ್ತು. ಇನ್ನಷ್ಟು ಕೆದಕಿ ಕೇಳಿದ್ದರೆ ಅತ್ತೇಬಿಡುತ್ತಿದ್ದಳೇನೋ, ಮಹೇಶ ಏನನ್ನೂ ಕೇಳಲಿಲ್ಲ. ಆಯ್ತು ನೀವು ಆರಾಮಾದಮೇಲೆ ಬನ್ನಿ ಎಂದಷ್ಟೇ ಹೇಳಿದ. ಸ್ವಲ್ಪ ಹೊತ್ತಿನ ನಂತರ ವಿಚಾರ ಮಾಡಹತ್ತಿದ. ಏನಾಗಿರಬಹುದು ಶ್ಯಾಮಲಾಳಿಗೆ? ತೊಂದರೆಯಲ್ಲೇನಾದರೂ ಸಿಲುಕಿಕೊಂಡಿರಬಹುದೇ ? ವಿಚಾರಮಾಡುವ, ಎಂದು ಅವಳಿಗೆ ಫೋನಾಯಿಸಿದ. ಆ ಕಡೆಯಿಂದ ಸ್ವಿಚ್‌ಡ್ ಆಫ್ ! ಕುಳಿತಲ್ಲೇ ಚಡಪಡಿಸತೊಡಗಿದ ಮಹೇಶ. ತನ್ನ ಆಫೀಸಿನ ಹುಡುಗನನ್ನು ಶ್ಯಾಮಲಾಳ ಮನೆಗೆ ಕಳಿಸಿದ ವಸ್ತುಸ್ಥಿತಿಯನ್ನು ನೋಡಿಕೊಂಡುಬರಲು. ಆ ಹುಡುಗ ತಂದ ಮೆಸೇಜು ಮಹೇಶನನ್ನು ಇನ್ನಷ್ಟು ಆತಂಕಕ್ಕೀಡು ಮಾಡಿತು. ಶ್ಯಾಮಲಾ ತಮ್ಮ ತಂದೆಯನ್ನು ಕರೆದುಕೊಂಡು ಕೋರ್ಟಿಗೆ ಹೋಗಿದ್ದಳಂತೆ ಲಾಯರ್‌ನ ಬೇಟಿಯಾಗಲು. ದಿಗಿಲು ಬಡಿದಂತಾಯಿತು ಮಹೇಶನಿಗೆ. ಶ್ಯಾಮಲಾಳಿಗೆ ಕೋರ್ಟಿಗೆ ಹೋಗುವ ಅವಸರವೇನಿತ್ತು ಅನ್ನೋದೇ ಚಿಂತೆ. ಆದರೆ ಆ ರಾತ್ರಿ ಹೊತ್ತಿಗೆ ಶ್ಯಾಮಲಾ ಕೋರ್ಟಿಗೇಕೆ ಹೋಗಿದ್ದಳು ಎನ್ನುವ ಸಂಪೂರ್ಣ ಮಾಹಿತಿ ಪಡೆದುಕೊಂಡಾಗ ಅವನ ಆತಂಕ ಮತ್ತಷ್ಟು ಹೆಚ್ಚಾಯಿತು. ವಿಧಿ ಅದೆಂಥ ಕ್ರೂರಿ ಅಂದುಕೊಂಡ. ನಡೆಯಬಾರದ ಘಟನೆ ಶ್ಯಾಮಲಾಳ ಬದುಕಿನಲ್ಲಿ ನಡೆದು ಹೋಗಿತ್ತು. ಮದುವೆಯಾದ ಆರೇಳು ತಿಂಗಳಿಗೆ ಪ್ರೀತಿಯ ನಾಟಕವಾಡಿದ ಆ ತೈಮೂರ ಗಂಡ ಇವಳ ಗರ್ಭಕ್ಕೊಂದು ಮಗುವನ್ನು ಕರುಣಿಸಿದ್ದ. ತನಗೇಕೆ ರಜೆ? ಎನ್ನುವ ಧಿಮಾಕಿನಲ್ಲಿ ಮನೆಯ ಕೆಲಸದಾಳು ಬಸ್ಸಮ್ಮಳ ಮಗಳೊಂದಿಗೆ ಸಂಬಂಧವಿರಿಸಿಕೊಂಡಿದ್ದ ! ಅವರ ಕಳ್ಳ್ಳಾಟವನ್ನು ಖುದ್ದು ಶ್ಯಾಮಲಾಳೇ ನೋಡಿ ಬೆಚ್ಚಿ ಮೂರ್ಛೆ ಹೋಗಿದ್ದಳು. ಅವರ ಮಾತುಗಳನ್ನು ಕಿವಿಯಾರೆ ಕೇಳಿಸಿಕೊಂಡಿದ್ದ ಶ್ಯಾಮಲಾ ಸಾಕು ಇನ್ನು ಇವನ ಜೊತೆ ಬಾಳಲಾರೆ ಅಂತ ನಿರ್ಧರಿಸಿಯೇ ಡಿವರ್ಸಿಗೆ ಅಪ್ಲೈ ಮಾಡಲು ಲಾಯರ್ ಹತ್ರ ಹೋಗಿದ್ಲು.

ವಿಷಯ ತಿಳಿದು ದಿಗಿಲುಗೊಂಡಿದ್ದ ಮಹೇಶ ಮೌನಿಯಾದ. ಆದರೆ ಮನಸ್ಸು ಊಹುಂ ಇವನನ್ನು ಸುಮ್ಮನಿರಲು ಬಿಡಲಿಲ್ಲ. ಆದದ್ದು ಆಯ್ತು ಇನ್ನು ಮುಂದೆ ಹೀಗಾಗದಂತೆ ತಾಕೀತು ಮಾಡಿ ಮತ್ತೆ ಅವರನ್ನು ಒಂದು ಮಾಡಬೇಕು ಎಂದು ನಿರ್ಧರಿಸಿದ. ಅದು ಇವನ ನಿರ್ಧಾರವಾಗಿತ್ತೇ ವಿನಃ ಶ್ಯಾಮಲಾಳ ನಿರ್ಧಾರವಾಗಿರಲಿಲ್ಲ. ಗಟ್ಟಿಗಿತ್ತಿ ಅವಳು ಯಾರ ಮಾತನ್ನೂ ಕೇಳಲಿಲ್ಲ, ಕೊನೆಗೆ ಮಹೇಶನ ಮಾತನ್ನೂ ಕೂಡ. ಮಹಾ ಮೌನಿ ಶ್ಯಾಮಲಾಳದ್ದು ಒಂದೇ ಮಾತು, ಒಂದೇ ನಿರ್ಧಾರ. “ಕಾಲು ಮುರಿದವನ ಜೊತೆ ಬದುಕಬಹುದು ಮನಸು ಮುರಿದವನ ಜೊತೆ ಬದುಕಲಾರೆ.” ಎರಡು-ಮೂರು ತಿಂಗಳು ಕಳೆಯುವಷ್ಟರಲ್ಲಿ ಶ್ಯಾಮಲ ಮುದ್ದಾದ ಹೆಣ್ಣುಮಗುವಿನ ತಾಯಿಯಾದಳು. ತನ್ನ ಗಂಡನ ನೆರಳೂ ಮಗುವಿನ ಮೇಲೆ ಬೀಳದಂತೆ ನೋಡಿಕೊಂಡಳು. ಕಾಲಚಕ್ರ ಉರುಳಿತು. ಕೋರ್ಟು ಅವಳಿಷ್ಟದಂತೆ ಅವರ ದಾಂಪತ್ಯಕ್ಕೆ ಪೂರ್ಣವಿರಾಮ ಹಾಕಿತು.

ವಿಷಯ ತಿಳಿದ ಮಹೇಶ ವಿಲವಿಲನೆ ಒದ್ದಾಡಿದ. ಶ್ಯಾಮಲಾಳ ಬಾಳು ಹೀಗಾಯಿತಲ್ಲ ಎಂದು ಚಿಂತಿಸತೊಡಗಿದ. ಏನಾಯಿತೋ ಒಂದು ದಿನ ಸಂಜೆ ಖುದ್ದು ತಾನೇ ಶ್ಯಾಮಲಾಳ ಮನೆಗೆ ಹೋದ. ಅವಳ ಜೊತೆ ತೀರಾ ವಯ್ಯಕ್ತಿಕವಾಗಿ ಮಾತನಾಡುವುದಿದೆ ಎಂದು ಹೇಳಿಕೊಂಡ. ನಿರ್ಲಿಪ್ತ ಶ್ಯಾಮಲೆ ಮೌನವಾಗಿಯೇ ಒಪ್ಪಿಕೊಂಡಳು. ಮಹಡಿಯ ಮೇಲಿನ ರೂಮಿನಲ್ಲಿ ಮಹೇಶ, ಶ್ಯಾಮಲಾ ಮತ್ತು ಮಡಿಲಲ್ಲಿ ಅವಳ ಮುದ್ದಾದ ಮಗು. ಗಾಢ ಮೌನ. ಆ ಮೌನ ಮುರಿದವನು ಮಹೇಶನೇ, “ನೋಡು ಶ್ಯಾಮಲಾ ನನಗೆ ಸುತ್ತಿ ಬಳಸಿ ಮಾತನಾಡಲು ಬರೊಲ್ಲ. ನಿನಗೆ ಗೊತ್ತಿರೋ ಹಾಗೆ ನಾನು ಯಾವ ಹೆಣ್ಣು ಮಕ್ಕಳನ್ನೂ ಕಣ್ಣೆತ್ತಿ ನೋಡುವವನಲ್ಲ. ನನ್ನ ವಯಸ್ಸು ನಲವತ್ನಾಲ್ಕು ದಾಟಿದರೂ ಮದುವೆಯ ಯೋಚನೆಯನ್ನೂ ಮಾಡದವನು ನಾನು. ನನಗೆ ಮಾತ್ರ ಗೊತ್ತು. ಮದುವೆ ನನಗಾಗುವುದಲ್ಲ. ಮದುವೆಯನ್ನು ಮಾಡಿಕೊಂಡು ಸಂಸಾರವನ್ನು ನಿಭಾಯಿಸುವ ಶಕ್ತಿ ನನಗಿಲ್ಲ. ಯಾವ ಹೆಣ್ಣಿಗೂ ನಾನು ದೈಹಿಕ ಸುಖ ನೀಡಲಾರೆ. ಆ ಶಕ್ತಿ ನನ್ನಲ್ಲಿಲ್ಲ. ಆದರೆ ನನಗೆ ಮನುಷ್ಯತ್ವವಿದೆ. ನಿನ್ನ ಮೇಲೆ ಪ್ರೀತಿ ಇದೆ. ಅದು ದೈಹಿಕ ಸುಖ ಅರಸುವ ಪ್ರೀತಿ ಅಲ್ಲವೇ ಅಲ್ಲ. ನಾನು ನಿನ್ನ ಗಂಡನಾಗಲಿಕ್ಕಿಲ್ಲ ಆದರೆ ನಿನ್ನ ಈ ಮಗುವಿಗೆ ತಂದೆಯಾಗಬಲ್ಲೆ. ನೀನೊಪ್ಪಿದರೆ ನಾವು ಜೀವನ ಪೂರ್ತಿ ಕೂಡಿ ಬಾಳಬಹುದು. ಇಂಥ ನಿರ್ಧಾರವನ್ನು ಈಗಲೇ ಹೇಳಬೇಕು ಎಂದೂ ನಾನು ಹೇಳುವುದಿಲ್ಲ. ನೀನು ಮೂರು ದಿನ ಕಾಲಾವಕಾಶ ತಗೋ. ಯಾವುದಕ್ಕೂ ನಿನ್ನ ನಿರ್ಧಾರ ತಿಳಿಸು.” ಅವನ ಧ್ವನಿಯಲ್ಲಿ ಅವಳ ಬಗೆಗಿನ ಪ್ರೀತಿಯಿತ್ತು, ಕಾಳಜಿಯಿತ್ತು, ಮಮತೆಯಿತ್ತು.
ಅವನ ಮಾತಿಗೆ ಯಾವುದೇ ಮಿಂಚಿಲ್ಲದ ಶುಷ್ಕ ನಗೆ ನಕ್ಕಳು ಶ್ಯಾಮಲಾ, “ನನ್ನ ಬಗ್ಗೆ ನಿಮ್ಮ ಕನ್ಸರ್ನಗೆ ತುಂಬಾ ಥ್ಯಾಂಕ್ಸ್ ಸರ್. ಆದರೆ ಇದು ಆಗೋ ಮಾತಲ್ಲ. ಅಫ್‌ಕೋರ್ಸ ನೀವು ಮನಸ್ಸು ಬಿಚ್ಚಿ ಮಾತನಾಡಿದ್ರಿ, ತುಂಬಾ ಸಂತೋಷ. ವಿಧಿಯಾಟ ಈ ದೇಹ ಮಲಿನವಾಗಿದೆ. ಇದು ಮತ್ತೊಮ್ಮೆ ನಿಮ್ಮಿಂದ ಮಲಿನವಾಲಿಕ್ಕಿಲ್ಲ, ಆದರೆ ಮನಸ್ಸು?…….ಕ್ಷಮಿಸಿ. ನನ್ನ ಈ ನಿರ್ಧಾರ ಮೂರು ದಿವಸ ಆದ ಮೇಲೂ ಇದೇ ಇರುತ್ತೆ ಮೂರು ವರ್ಷ ಆದ ಮೇಲೂ ಇದೇ ಇರುತ್ತೆ. ಮತ್ತೊಮ್ಮ ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಥ್ಯಾಂಕ್ಸ್ ಸರ್.” ಎಂದಳು ಬಾಧಿತ ಶ್ಯಾಮಲೆ.

ಮತ್ತೆ ಮೌನದ ಮೆರವಣಿಗೆ. ಅರ್ಧ ಗಂಟೆಯ ನಂತರ ಮಹೇಶ ಎದ್ದು ಶ್ಯಾಮಲಾಳಿಗೆ ಕೈಮುಗಿದ. ಆ ಮಗುವನ್ನು ಎತ್ತಿಕೊಂಡ. ತನ್ನ ಜೇಬಿನಲ್ಲಿದ್ದ ಹಣವನ್ನೆಲ್ಲಾ ಆ ಮಗುವಿನ ಕೈಗಿಟ್ಟು ಮುತ್ತು ಕೊಟ್ಟ. ಬರುತ್ತೇನೆ ಅಂತ ಹೇಳಿ ಅವಳ ನಗುವನ್ನೂ ನಿರೀಕ್ಷಿಸದೇ ಕೆಳಗಿಳಿದ.

ಅಲ್ಲಿಂದ ಮಹೇಶ ಸೀದಾ ಹೋಗಿದ್ದು ಮಣಿಕಂಠಪುರದ ಸ್ವಾಮಿನಾಥ ದೇವಾಲಯಕ್ಕೆ. ದೇವಾಲಯಕ್ಕೆ ಹೊಂದಿಕೊಂಡಿರುವ ಮಠದ ಪೀಠಾಧಿಪತಿಗಳು ಮಹೇಶನನ್ನು ತುಂಬಾ ದಿನಗಳಿಂದ ಬಲ್ಲವರು. ಇವನನ್ನು ಮದುವೆಗೆ ಒಪ್ಪಿಸುವಲ್ಲಿ ಸೋತವರ ಲಿಸ್ಟ್ ನಲ್ಲಿ ಆ ಸ್ವಾಮಿಗಳೂ ಉಂಟು. ಖಿನ್ನವದನನಾಗಿ ಬಂದ ಮಹೇಶನನ್ನು ಸ್ವಾಮೀಜಿಗಳು ಆದರದಿಂದ ಬರಮಾಡಿಕೊಂಡರು. ಊಟೋಪಚಾರ ಮುಗಿದ ಮೇಲೆ ಮಾತಿಗಿಳಿದರು ಸ್ವಾಮೀಜಿಯವರು. “ಯಾಕೋ ಒಂಥರಾ ಇದೀರಾ ಮಹೇಶ ?”

“ಅಪ್ಪಾಜಿ ಜೀವನ ಬೇಸರವಾಗಿದೆ. ಯಾರಿಗಾಗಿ, ಏತಕ್ಕಾಗಿ, ಯಾವ ಪುರುಷಾರ್ಥಕ್ಕಾಗಿ ಈ ಬದುಕು. ಎನಿಸುತ್ತಿದೆ ಅಪ್ಪಾಜಿ” ಅಂದ

ಸ್ವಾಮೀಜಿಗಳು ತುಂಬಾ ಶಾಂತವಾಗಿ ಧೀರ್ಘ ಉಸಿರು ತೆಗೆದುಕೊಳ್ಳುತ್ತಾ, “ದೇವರು ನಿನ್ನನ್ನು ಸೃಷ್ಟಿಸಿರುವುದೇ ಬದುಕಲಿಕ್ಕಾಗಿ. ಈ ಬದುಕು ಸಾಕಾಗಬಾರದು. ನಿನಗಾಗಿ ಬೇಡವೋ, ಸರಿ, ಸಮಾಜಕ್ಕೋಸ್ಕರ ಬದುಕು. ದೀನರ, ಬೆಂದವರ, ನೊಂದವರ ಬೆಳಕಾಗಲು ಬದುಕು”

“ಹೇಗೆ ಅಪ್ಪಾಜೀ ?”

“ನಿನ್ನದಲ್ಲದ್ದನ್ನು ನಿನ್ನದು ಎಂದು ಸುಳ್ಳೇ ಪರಿಭಾವಿಸಿರುವ ನೀನು ಅವೆಲ್ಲವನ್ನೂ ಬಿಟ್ಟು ಬರುವೆಯಾ ? ಭಗವಂತನೆಡೆಗಿನ ನಮ್ಮ ಪಯಣದಲಿ ನಮ್ಮನ್ನು ಕೂಡುವೆಯಾ? ಅವಸರ ಬೇಡ ಮೂರು ದಿನ ಕಾಲಾವಕಾಶವನ್ನು ತಗೆದುಕೋ ನಂತರ ನಿನ್ನ ನಿರ್ಧಾರ ತಿಳಿಸು” ಎಂದು ಅಪ್ಪಣೆ ಕೊಟ್ಟರು ಗುರುಗಳು.

“ಆಯ್ತು ಅಪ್ಪಾಜಿ ಮೂರು ದಿನಗಳು ಬಿಟ್ಟು ನಿಮ್ಮನ್ನು ಕೂಡಿಕೋಳ್ಳುತ್ತೇನೆ” ಎಂದ ಮಹೇಶ

ಸ್ವಾಮೀಜಿಗಳು ನಗುತ್ತ, “ಮೂರು ದಿನಗಳ ನಂತರ ಫೋನ್ ಮಾಡು” ಎನ್ನುತ್ತಾ ಹರಸಿದರು

ನಮಸ್ಕರಿಸಿ ಮನೆಗೆ ಬಂದ ಮಹೇಶನಿಗೆ ಮೂರು ದಿನ ಕಳೆಯುವುದು ಮೂರು ಯುಗ ಕಳೆದಂತೆ ಭಾಸವಾಗುತ್ತಿತ್ತು. ಆ ಮೂರು ದಿನಗಳೂ ಭಗವಂತ, ಧ್ಯಾನ, ಮೋಕ್ಷ, ಆಧ್ಯಾತ್ಮ…ದ ರಿಂಗಣ ಮಹೇಶನ ತಲೆಯಲ್ಲಿ. ಮೂರನೆಯ ದಿನ ಬೆಳಗಿನ ಜಾವ ಐದು ಗಂಟೆಯ ಸುಮಾರು ಎಲ್ಲವನ್ನೂ ತ್ಯಜಿಸ ಹೊರಟಿರುವ ಮಹೇಶ ಸ್ನಾನ ಮಾಡಿ ಪೂಜೆ ಮಾಡಿ ನಿರ್ಮಲ ಮನಸ್ಸಿನಿಂದ ಗುರುಗಳಿಗೆ ಫೋನು ಮಾಡಿದ,

“ ಗುರುಗಳೇ ಇನ್ನರ್ಧಗಂಟೆ ನಾನು ನಿಮ್ಮ ಜೊತೆ ಹೆಜ್ಜೆ ಹಾಕಲು ಬರುವೆ” ಎಂದ

“ಬಾ……” ಎಂದ ಗುರುಗಳು ಮತ್ತೇನನ್ನೂ ಹೇಳಲಿಲ್ಲ ಸಣ್ಣಗೆ ನಕ್ಕಂತೆ ಭಾಸವಾಗುತ್ತಿತ್ತು.

ಸಿದ್ಧನಾಗುತ್ತಿದ್ದ ಮಹೇಶನ ಫೋನಿಗೆ ಮೆಸೇಜ್ ಒಂದು ಬಂದಿತ್ತು. ಓದಿದ. ಧಡಕ್ಕನೆ ಸೋಫಾದ ಮೇಲೆ ಕುಸಿದು ಬಿದ್ದ. ಏನು ಮಾಡುವುದೆಂದು ತಿಳಿಯದೇ ದಿಗ್ಭ್ರಾಂತನಾದ!, ಅದು ಶ್ಯಾಮಲಾಳಿಂದ ಬಂದ ಮೆಸೇಜಾಗಿತ್ತು! ಅದರಲ್ಲಿ ಅವಳು,…….. “ಐ ಲವ್ ಯು” ಎಂದು ಬರೆದಿದ್ದಳು!

✍️ ಆದಪ್ಪ ಹೆಂಬಾ ಮಸ್ಕಿ

One thought on “ಚುಂಬಕ ಗಾಳಿಯು ಬೀಸುವುದೇ…

  1. ಬದುಕಿನಲ್ಲಿ ಹುಟ್ಟುವ ವಿಧವಿಧ ತರಂಗಗಳು ಕಥೆಯಲ್ಲಿ ಅಪ್ಪಳಿಸಿವೆ. ಮನಸು ಎಂತಹದ್ದು, ಹೇಗೆ‌‌ ಬದಲಾಗುತ್ತದೆ? ಬದುಕಿನ ದಿಕ್ಕನ್ನು ಹೇಗೆ ಬದಲಿಸುತ್ತದೆ ಎಂಬುದನ್ನು ಅಮೋಘವಾಗಿ ಕಥಾ ನಾಯಕ ನಾಯಕಿಯ ಮೂಲಕ ತಿಳಿಯುಂವಂತೆ ಲೇಖಕರು ಸೂಕ್ಷ್ಮವಾಗಿ ಮತ್ತು ಪರಿಣಾಮಾತ್ಮಕವಾಗಿ ತಿಳಿಸಿದ್ದಾರೆ.

    ಮದುವೆಯೇ ಬೇಡೆಂದ ಮಹೇಶನ ಮನಸಲ್ಲಿ ಮನೆ ಮಾಡಿಕೊಂಡ ಶ್ಯಾಮಲೆಗೆ ತನ್ನ ಪ್ರೇಮವನ್ನು ಹೇಳುವುದು ತಡವಾಯಿತು… ಅವಳ ಅನುಪಸ್ಥಿತಿ ಕಚೇರಿಯಲ್ಲಿ ಕಾಡಿದಾಗಲೇ ಹೇಳಿದ್ದರೆ! ಶ್ಯಾಮಲ ಕೋಮಲವಾಗಿಯೇ ಮಹೇಶನಲ್ಲಿ ಲೀನವಾಗುತ್ತಿದ್ದಳು. ಆದರೆ‌ ಲೇಖಕರು ಒಂದು ಆದರ್ಶವನ್ನು ಕಥೆಯಲ್ಲಿ ಪ್ರಸ್ತುತ ಪಡಿಸುತ್ತಾರೆ. ಮದುವೆಯಾಗದೇ ನಲವತ್ತು ವರ್ಷದಲ್ಲಿ ತನ್ನನ್ನು ಹತೋಟಿಯಲ್ಲಿಟ್ಟುಕೊಂಡವನೆಲ್ಲಿ? ಮಡದಿ ಇದ್ದೂ‌ ಬೇರೆ ಸಂಬಂಧಕ್ಕೆ‌ ಜೋತು ಬೀಳುವ ನೂರೈವತ್ತು ಎಕರೆ ಒಡೆಯನೆಲ್ಲಿ? ಕುಂಟನಿಗೆ ಎಂಟು ಚಾಳಿ ಎನ್ನುವಂತಹ ಗಂಡನಿಗೆ ಶ್ಯಾಮಲಾ ಒಳ್ಳೆ ಪಾಠ ಕಲಿಸಿದ್ದಾಳೆ. ದಿಟ್ಟೆ, ಕ್ಷಮಿಸಿ ತನಗೆ‌ ಮೀಸಲು ಮಾಡಿಕೊಳ್ಳದೆ, ಮನಸಿಲ್ಲದಲನಲ್ಲಿ ಮತ್ತೆ ಮಲಗಲಾರೆ ಎಂಬ ಅವಳ ನಿರ್ಧಾಕ್ಕೆ ಓದುಗ ತಲೆದೂಗುತ್ತಾನೆ.

    ಬೇಸರದಿ ಸನ್ಯಾಸಕ್ಕೆ ಹೊರಟ ಮನದಲ್ಲಿ ಮತ್ತೆ‌ ಪ್ರೇಮದ ಬೆಸುಗೆ ಹಾಕಿದ ಮೆಸೇಜು ಕೂಡ ಓದುಗನನ್ನು ಖುಷಿಪಡಿಸುತ್ತದೆ… ಅಭಿನಂದನೆಗಳು ಸರ್… ಸೂಪರ್

Comments are closed.

Don`t copy text!