” ಕನಕ ದಾಸರು”
ಪುಣ್ಯ ಭೂಮಿ ಕರ್ನಾಟಕದಲ್ಲಿ ಅನೇಕಾನೇಕ ಮಹಾನುಭಾವರು ಜನಿಸಿ ತಮ್ಮ ಲೋಕೋತ್ತರ ನಡೆ-ನುಡಿಗಳಿಂದ ಇಹಲೋಕಕ್ಕೆ ಮಾರ್ಗದರ್ಶನ ನೀಡಿದ್ದಾರೆ .ಅಂತಹ ಅಮೃತ ಶಕ್ತಿಗಳ ಜ್ಯೋತಿರ್ ಮಾಲೆಯಲ್ಲಿ ಚಿರಸ್ಥಾಯಿಯಾಗಿ ಪ್ರಜ್ವಲಿಸುತ್ತಿರುವ ಜ್ಯೋತಿ ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದವರು. ಭಗವಂತನ ಸಾಕ್ಷಾತ್ಕಾರದಿಂದ ಸಂತೃಪ್ತರಾದ ಭಕ್ತರು .ಸಮಾಜದ ಓರೆಕೋರೆಗಳನ್ನು ತಮ್ಮ ಕೀರ್ತನೆಗಳಿಂದ ನುಡಿಮುತ್ತು ಗಳಿಂದ ತಿದ್ದಿದವರು .ಜನತೆಯ ಅಹಂಕಾರ ,ಡಾಂಭಿಕತನ ,ಭಕ್ತಿ ಶೂನ್ಯತೆ ,ಭೋಗ ಪ್ರವೃತ್ತಿ, ಮುಂತಾದವುಗಳನ್ನು ಕಟುವಾಗಿ ವಿಡಂಬನೆ ಮಾಡಿದ್ದಾರೆ .ಭಕ್ತಿ ನಿಷ್ಠೆ ಗಳಿಲ್ಲದೆ ಹೊರಗಿನ ಮಡಿಗೆ ಆಚಾರಕ್ಕೆ ಪ್ರಾಧಾನ್ಯ ಕೊಡುವ ಕಪಟಿಗಳನ್ನು” ಬಟ್ಟೆ ನೀರೊಳಗೆ ಶುದ್ಧಗೊಳಿಸಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ ಹೊಟ್ಟೆಯೊಳಗಿನ ಕಾಮ ಕ್ರೋಧಗಳನ್ನು ಬಿಟ್ಟು ನಡೆದರೆ ಅದು ಮಡಿ “ಎಂದು ಹೇಳಿದ್ದಾರೆ .ಈ ರೀತಿಯಾಗಿ ಟೀಕಿಸಿದ್ದಾರೆ. “ನೇಮವಿಲ್ಲದೆ ಹೋಮ ಇನ್ನೇತಕೆ ರಾಮ ನಾಮವು ಇರದ ಮಂತ್ರವೇ ಕೆ “ಎಂದು ಹಾಗೂ “ಜಪವ ಮಾಡಿದರೇನು ತಪವ ಮಾಡಿದರೇನು ಕಪಟ ಗುಣ ವಿಪರೀತ ಕಲುಷವಿದ್ದವರು” “ಎಂದು ನುಡಿದು ಅಂತರಂಗಶುದ್ಧಿ ಯನ್ನು ಒತ್ತಿ ಹೇಳಿದ್ದಾರೆ .”ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮತ್ತು ಹಿಟ್ಟಿಗಾಗಿ “ಎಂಬ ಕೀರ್ತನೆ ಬಹಳ ಪ್ರಸಿದ್ಧವಾಗಿದೆ. ಕುಲದ ಹಮ್ಮಿನಿಂದ ಬೀಗುವವರನು
ಕಂಡು ದಾಸರು “ಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಮನುಜರಿಗೆ “ಕುಲ ಮುಖ್ಯವಲ್ಲ ಗುಣ ಮುಖ್ಯ ಎಂಬುದನ್ನು ಹೇಳುತ್ತಾ “ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವ ಪಂಚೇಂದ್ರಿಯ ಕುಲವ್ಯಾವುದು ಆತ್ಮ ಅಂತರಾತ್ಮ ನೆಲೆಯಾದ ಕೇಶವ ಪ್ರೀತಿ ನಾದ ಮೇಲೆ ಯಾತರ ಕುಲವೋ ಆತನೊಲಿದ ಮೇಲೆ ಯಾತರ ಕುಲವಯ್ಯ “ಎಂದು ಸಾರಿದರು .ಮಾನವಕುಲದ ಒಳಿತಿಗಾಗಿ ತಂಬೂರಿ ಹಿಡಿದು ಮನೆ ಮನೆಯ ಬಾಗಿಲಿಗೆ ಹೋಗಿ “ಮುತ್ತು ಬಂದಿದೆ ಕೇರಿಗೆ “ಎಂದು ಹಾಡುತ್ತಾ ನುಡಿಮುತ್ತುಗಳನ್ನು ಬಿತ್ತರಿಸಿದರು. ಭಕ್ತಿ ,ಜ್ಞಾನ ,ವೈರಾಗ್ಯ ,ಶೀಲ, ಮೊದಲಾದವನ್ನು ಬೋಧಿಸುವ ಅವರ ಹಾಡುಗಳಲ್ಲಿ ಅನುಕಂಪವಿದೆ ಲೋಕದ ಹಿತ ಚಿಂತನೆಯಿದೆ, ಸರ್ವೋದಯ ದೃಷ್ಟಿಯಿದೆ ,ಕವಿ ಶ್ರೇಷ್ಠರಾದ ಕನಕದಾಸರು” ನಳಚರಿತ್ರೆ “ಮೋಹನತರಂಗಿಣಿ” “ಹರಿಭಕ್ತಿಸಾರ “”ರಾಮಧ್ಯಾನ ಚರಿತೆ ಎಂಬ ಕಾವ್ಯಗಳನ್ನು ರಚಿಸಿದ್ದಾರೆ. “ಏನೂ ಇಲ್ಲದ ಎರಡು ದಿನದ ಸಂಸಾರ ಜ್ಞಾನದಲ್ಲಿ ದಾನ ಧರ್ಮ ಮಾಡಿರಯ್ಯ “ಎಂದು ಬೋಧಿಸಿದ್ದಾರೆ .”ಯಾರು ಹಿತವರು ಎಂದು ನಂಬಬೇಡ ಯಾರಿಗೆ ಯಾರಿಲ್ಲ “ಆಪತ್ತು ಬಂದೊದಗಿದೊಡೆ ಭಗವಂತನೊಬ್ಬನೆ ನಮಗೆ ಆಪ್ತ ಅವನಲ್ಲಿ ತುಂಬು ನಂಬಿಕೆಯನ್ನು ಇಡಬೇಕು .ಎನ್ನುವುದು ಕನಕದಾಸರ ಆಶಯವಾಗಿತ್ತು .”ಆವ ಬಲವಿದ್ದರೇನು ದೈವ ಬಲವಿಲ್ಲದವಗೆ “ಸಜ್ಜನರ ಸಂಘಕ್ಕೆ ಅವರು ಮಹತ್ವ ನೀಡಿದ್ದಾರೆ. “ಅಜ್ಞಾನಿಗಳ ಕೂಡ ಅಧಿಕಾರ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡ ಜಗಳವೇ ಲೇಸು “ಎಂದು ಹೇಳುತ್ತಾ ಸತ್ಪುರುಷರ ಸಂಘದ ಮಹಿಮೆಯನ್ನು ತಿಳಿಸಿದ್ದಾರೆ .
“ತನು ನಿನ್ನದು ಜೀವನ ನಿನ್ನದು” “ತಲ್ಲಣಿಸದಿರು ಕಂಡ್ಯ ತಾಳು ಮನವೇ ” “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ” “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ “ಎಂಬ ಸಾರ್ಥಕ ರಚನೆಗಳಲ್ಲಿ ವ್ಯಕ್ತವಾಗುವ ಸರ್ವಸಮರ್ಪಣೆ ಅನನ್ಯತೆ ಮನೋಭಾವ ದೇವ ಶ್ರದ್ಧೆ ಸೂಕ್ಷ್ಮ ಚಿಂತನೆಗಳು ಮಾನವೀಯತೆಯ ಮಟ್ಟವನ್ನು ಮೀರಿ ದೇವತ್ವದ ಎಡೆಗೆ ಕೊಂಡೊಯ್ಯುತ್ತವೆ .
ಕನಕದಾಸ ಜಯಂತಿಯ ಶುಭಾಶಯಗಳು.
🙏🏻 ಶ್ರೀಮತಿ ಪುಷ್ಪ ಮುರುಗೋಡ🙏🏻