ಕೃತಿ ಅವಲೋಕನ:
ಕೃತಿ:ಹರಿದ ಹೊಕ್ಕಳ ಬಳ್ಳಿ
ಲೇಖಕರು: ವರದೇಂದ್ರ ಕೆ.ಮಸ್ಕಿ
ಪ್ರಕಾಶಕರು:ಕಾರ್ಪರ ಪ್ರಕಾಶನ ಮಸ್ಕಿ
ವೆಲೆ:120
ಭೂಮಿ ನುಂಗಿದ ಕಾರ್ಖಾನೆ
ನಿಲ್ದಾಣಗಳು, ಬಡತನ ನುಂಗುವವೇ……?
ಹಸಿವ ನೀಗಿಸುವವೇ……?
ಸುಳ್ಳು ಭರವಸೆಯ ಸಾಗರದಿ ತೇಲಿಸಿ
ಕಂಬನಿಯಲಿ ಮುಳುಗಿಸಿಹರು
ಕಳ್ಳ ತಿಮಿಂಗಿಲಗಳು(ಓಲೆ)
ತಾ ಸುಡುವ ಭಯವಿಲ್ಲದೆ
ಬೆಳಕ ನೀಡುವ ನೇಸರ
ತಾ ಕರಗುವ ಕೊರಗಿಲ್ಲದೆ
ಮನ ತಣಿಸುವ ಚಂದಿರ
ಅಕ್ಷಯ ಸೀರೆ ದ್ರೌಪದಿಗೆ
ಈ ಸೋದರಿಗೇಕಿಲ್ಲ ?
ಮುಸುಕು ಮಾಡಬಾರದಿತ್ತೆ
ಪಾಪಿ ಕಣ್ಣುಗಳ ಅಂಧ ಅನಿರುದ್ಧ ….
ತನ್ನ ಬೆಳಕ ಬಲೆಗೆ ಪರ ನಿಂದೆ ಮಾಡಿ
ಅಸ್ತಿತ್ವ ಕಸಿದ ಗರ್ವಿ ರವಿ
ತನ್ನ ಇರುವಿಕೆ ಉಳಿಸಿ, ತಾರೆ ತೋರಿ ಇದು
ನನ್ನ ಗಗನ ಬಳಗ
ನಾವು ಒಂದೆ ಭೇದ ತರವಲ್ಲ ….
ತ್ಯಾಗಿ ಶಶಿ ನಿಸ್ವಾರ್ಥಿ
ಇಂತಹ ಸೂಕ್ಷ್ಮ ಸಾಲುಗಳ ಮೂಲಕ ಎದುರಾಗುವ ವರದೇಂದ್ರ ಕೆ ಪರಿಸರವನ್ನು ವಿಭಿನ್ನವಾಗಿ ಗಮನಿಸುವ ಹೃದಯಕವಿ. ಮೇಲಾಗಿ ಒಳ್ಳೆಯ ಓದುಗ. ಪುಸ್ತಕ ಅವಲೋಕನ ಹಾಗೂ ಪರಿಚಯದ ಮುಖಾಂತರ ಸಾಹಿತ್ಯ ವಲಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ, ಇನ್ನೂ ವಿಮರ್ಶೆಯ ಮಿಮಾಂಸೆಯನ್ನು ಅಭ್ಯಾಸಿಸಿದರೆ ಭರವಸೆಯ ವಿಮರ್ಶಕರಾಗುವ ಸಾಧ್ಯತೆಯಿರುವ ವರದೇಂದ್ರರವರು ‘ಹರಿದ ಹೊಕ್ಕಳು ಬಳ್ಳಿ’ ಕವನ ಸಂಕಲನದ ಮೂಲಕ ಕಾವ್ಯಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಮೂಲತಃ ವಿಜ್ಞಾನ ವಿದ್ಯಾರ್ಥಿಯಾಗಿರುವ ವರದೇಂದ್ರ ಅವರಲ್ಲಿ ಕಾವ್ಯದ ಬಳ್ಳಿ ಆಪ್ತವಾಗಿ ಅರಳಿದೆ.
ಜಿ.ಎಸ್.ಶಿವರುರಪ್ಪನವರು ‘ಕವಿತೆ ಬರೆಯುವುದೆಂದರೆ ಒಂದು ಪರಂಪರೆಯ ಪ್ರವೇಶ’ ಎನ್ನುತ್ತಾರೆ. ಕಾವ್ಯ ಮೂಲತಃ ಸಂಯೋಜನಾ ಕ್ರಮ. ಒಳ ಹೊರಗಿನ ಬೇಗುದಿಯಲ್ಲಿ ನಡೆಯುವ ತಾಕಲಾಟವನ್ನು ದಾಟಿ ಹೊಸದನ್ನು ಸೃಜಿಸುವ ಕ್ರಿಯೆ. ಅನುಭವದ ಅತ್ಯಂತ ಸ್ಪಷ್ಟವಾದ ರೂಪ. ಹೇಳಲು ಸಾಧ್ಯವಾಗದಿರುವುದನ್ನು ಸಾಧ್ಯವಿರುವ ಸಾಧನಗಳ ಮೂಲಕ ಧ್ವನಿಸುವ ಬಗೆ. ಭಾಷೆಯ ಜೊತೆಗೆ ನಡೆಸುವ ಹುಡುಕಾಟದ ಅನುಸಂಧಾನ. ಖಲೀಲ ಗಿಬ್ರಾನ್ ‘ನಾವು ಬರೆಯುವ ಪದಗಳು ಕಾಲರಹಿತ ಹಾಗೆ ತಿಳಿದು ನಾವು ಹೇಳಬೇಕು ಮತ್ತು ಬರೆಯಬೇಕು’ ಎನ್ನುತ್ತಾರೆ. ಕಾವ್ಯ ಬರೆಯುವವರಿಗೆ ಆ ಎಚ್ಚರ ಸದಾ ಇರಬೇಕು.
ಮೊದಲೆಲ್ಲ ಸಾಹಿತ್ಯ ಅಭ್ಯಾಸ ಮಾಡಿದವರಷ್ಟೆ ಬರೆಯಬಲ್ಲರೂ ಎಂಬ ಮಾತಿತ್ತು. ಆ ಐಡಿಯಾಲಜಿ ಔಟ್ ಡೇಟ್ ಆಗಿದೆ. ಕವಿ ಹೃದಯದ ಸಮಾಜಕ್ಕೆ ಸ್ಪಂದಿಸುವ ಯಾರಾದರೂ ಮನಮುಟ್ಟುವ ಸಾಹಿತ್ಯ ಬರೆಯಬಹುದು. ವಿಜ್ಞಾನ ತಂತ್ರಜ್ಞಾನ ಓದಿದ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನೂ ಅಚ್ಚರಿಯಂದರೆ ಮೂರನೇ ತರಗತಿ ಓದಿಯೂ ಕವಿಯಾಗಿ ಪದ್ಮಶ್ರೀ ಪ್ರಶಸ್ತಿಗೆ, ಗೌರವ ಡಾಕ್ಟರೇಟ್ ಗೆ ಭಾಜನರಾಗಿರುವ ಓರಿಸ್ಸಾದ ‘ಹಲಧರ ನಾಾ, ಹಗಲಲ್ಲಿ ದಿನಗೂಲಿ ಕಾರ್ಮಿಕನಾಗಿ ದುಡಿದು ರಾತ್ರಿವೇಳೆ ಅನುವಾದಕಾರನಾಗಿ ಕೆಲಸ ಮಾಡಿ ಕೇರಳ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಮೂರು ಭಾಷೆ ಬಲ್ಲ ‘ಶಫಿ ಮೊಹಮ್ಮದ್ ಅಲಿಯಾ¸’ ಚೆರುಮಾವಿಲಾಯಿ ಈ ಹೊತ್ತಿನ ಬೆರಗಾಗಿದ್ದಾರೆ.
ಇರಲಿ, ವಂದೇಂದ್ರ ಕೆ ಅವರು ಆರಂಭದ ಕವನ ಸಂಕಲನದಲ್ಲಿಯೆ ಭರವಸೆಯನ್ನು ಹುಟ್ಟಿಸುತ್ತಿದ್ದಾರೆ. ಪ್ರಸ್ತುತ ‘ಹರಿದ ಹೊಕ್ಕಳ ಬಳ್ಳಿ’ ಸಂಕಲನದ ತುಂಬ ಪ್ರೀತಿ ಅಂತಃಕರಣ, ರೈತ ದಮನಿತನ ಬಗ್ಗೆ ಮಾನವೀಯತೆಯ ಭಾವ ಹರಿದಾಡಿದೆ.. ಸಮಾಜದಲ್ಲಿ ನಡೆಯುತ್ತಿರುವ ಅಪಸವ್ಯಗಳಿಗೆ ಸಾತ್ವಿಕ ಪ್ರತಿರೋಧವನ್ನು ತೋರಿದ್ದಾರೆ.
‘ಹೌದು ನಾವ್ ಸರಿ ಇಲ್ಲ ಬಿಡಿ,
ತೆಗ್ಗಿರುವ ಕಡೆಗೇ ನೀರು ಹರಿಯುವುದು
ಇದನ್ನರಿಯದೆ ನಿರೀಕ್ಷೆಯ ಎಣಿಕೆ ಮಾಡಿಕೊಂಡು
ಕಣ್ಣಗಲಿಸಿ ಒಳಿತಿಗಾಗಿ ಕಾಯುತ್ತೀವಲ್ವ…’
ಎನ್ನವು ಕವಿ
ಬದುಕೆಲ್ಲ ತೇಪೆ ಹಚ್ಚುವುದರಲ್ಲಿ ಲೀನ
ಹೆಚ್ಚು ಕಡಿಮೆ ತಾರತಮ್ಯ
ದೂಷಣೆ, ಆರೋಪ, ಅಸಹನೆ
ಎಂಥ ವಿಪರ್ಯಾಸ ಇದಕಿಲ್ಲವೇ ಕಿಡಿಯ ಸ್ಪರ್ಶ ?(ಮನದ ಕಿಚ್ಚಿಗೆ)
ಎಂದು ಪ್ರತಿರೋಧವನ್ನು ತೋರುತ್ತಾರೆ.
ಈ ಸಂಕಲನ ಸಶಕ್ತ ಕವಿತೆ ಪಲ್ಲಂಗಿನಿ. ಆ ಸ್ಥಿತಿಗೆ ಕಾರಣವಾಗಿದ್ದು ಪುರುಷ ಸಮಾಜ. ಪುರುಷ ಸಂಸ್ಕøತಿಗೆ ತತ್ತರಸಿ ಹೋದ ಮಹಿಳೆಯ ಸ್ಥಿತಿಯ ಕರುಣಾಜನಕ ಕವಿತೆ ಇದಾಗಿದೆ.
‘ಹೌದು ಅವನು ಬಂದ
ಸುಖದ ಉತ್ತುಂಗವನ್ನು ತೋರಿದ
ಸವಾರ್ಂಗದಲ್ಲೂ ಅವನು ಇದ್ದು; ಎದ್ದು ಹೋದ
ಮೈಮರೆಸಿ ಬೆವರ್ಹರಿಸಿ ಹೋದವ
ನನ್ನನ್ನರಿವಂತೆ ಮಾಡಿದ್ದ…..’ (ಪಲ್ಲಂಗಿನಿ)
ಅಲ್ಲದೆ ನವಮಾಸ ಹೊತ್ತು ಹೆತ್ತು ಪೋಷಿಸಿದ ಮಮತೆಯ ಮಡಿಲಿಗೆ ಮಾಡುತ್ತಿರುವ ದ್ರೋಹದ ಬಗ್ಗೆ ಸಂಕಲನದ ಶಿರ್ಷಿಕೆಯ ಕವಿತೆಯಲ್ಲಿ ಖಾರವಾಗಿ ಕವಿ ಪ್ರತಿಕ್ರಿಯಿಸುತ್ತಾರೆ.
‘ಹೊಕ್ಕಳ ಬಳ್ಳಿಗೆ ಇಕ್ಕಳ ಹಾಕುವ
ತಿಕ್ಕಳು ಮನಸಿಗೆ ಧಿಕ್ಕಾರ
ಹಿಡಿ ಪ್ರೀತಿ, ಬೊಗಸೆ ತುಂಬ ಅನ್ನ ನೀಡದ
ಉಪವಾಸಕೆಡವಿ ಘಾಸಿ ಮಾಡುವ
ಕ್ರೂರಿ ಹೊಕ್ಕಳ ಬಳ್ಳಿಗೆ ಧಿಕ್ಕಾರ’ (ಹರಿದ ಹೊಕ್ಕಳ ಬಳ್ಳಿ)
ಕವಿ ಸಮಾಜದ ಬಗ್ಗೆ ಎಷ್ಟೆ ಕಠೋರವಾದರೂ ಮತ್ತೆ ಆಶಾ ಭಾವ ಹೊತ್ತು ‘ಬಾ ಯುಗಾದಿ ಮತ್ತೆ’ ಎನ್ನುವ ಮೂಲಕ
‘ಸರಪಳಿಯ ಬಿಡಿಸುವ ಮೊನಚಂತೆ
ಹರಿದ ಸೂತ್ರಕೆ ನೂತನ ಬದುಕು ಕಟ್ಟೋಕೆ
ಮುರಿದ ಚಕ್ರಕೆ ಉರುಳೊ ಹೆಗಲಾಗಿ
ಆದ ನಷ್ಟಕೆ ಗೆಲುವಾಗಿ
ಬಾಡಿದ ಟೊಂಗೆಯಲಿ ಟಿಸಿಲೊಡೆದು
ಅರಿವಿಲ್ಲದ ಬೀಜದೊಳಗೆ ಭರವಸೆಯ ಬೇರಾಗಿ
ಬಾ ಯುಗಾದಿ ಮತ್ತೆ’
ಎನ್ನುವ ಹೊಸ ಆಸೆಯನ್ನು ಕಟ್ಟಿಕೊಳ್ಳುತ್ತಾನೆ
ನಾಯಕರು ಮಾಡುವ ನಾಟಕಕ್ಕೆ ‘ಡೊಂಕುಬಾಲದ ನಾಯಕರು ಕವಿತೆಯಲ್ಲಿ
‘ಪರಿಸರ ಅಸಮತೋಲನದಿ
ಅತಿಮಳೆಯಾಗಿರೆ
ಮುಗಿಲಲಿ ಕುಳಿತು ನೋಡುವಿರಿ
ಭೂಮಿಗೆ ಪಾದವ ಸೋಕಿಸದೆ
ವರದಿಯ ತಯಾರು ಮಾಡುವಿರಿ
ವಾಸ್ತವ ಸಂಗತಿಯನ್ನು ಬಿಚ್ಚಿಡುತ್ತಾರೆ’
ನಾವು ಸರಿಯಿಲ್ಲ ಬಿಡಿ ಎನ್ನುತ್ತಾ ‘ಸಾವಿಗೂ ನಮ್ಮ ಮೇಲೆ ಈರ್ಷೆ’ ಎನ್ನುವ ಕವಿ
‘ಹೊಸ ವರುಷಕೆ
ಲಾಭ ಆಗಿರುವುದು
ಬೇಕರಿಯವನಿಗೆ,
ಪಬ್ಬು ಬಾರಿನವನಿಗೆ, ರೈತನಿಗಲ್ಲ
ಸೊಬಗ ಹೆಚ್ಚಿಸುವ ಹೂವಯ್ಯನಿಗೂ ಅಲ್ಲ
ಸಾಲು ಸಾಲು ನಿಲ್ಲಲಾಗದು ನಮಗೆ
ಮಂದಿರಗಳಲಿ ನಿಲ್ಲಲು.’.
ಹೀಗೆ ಸಾಮಾಜಿಕ ಸಮಸ್ಯೆಗಳು, ಡಾಂಭಿಕತೆ, ಪರಿಸರ, ಸ್ತ್ರೀ, ಹೊಸ ವರ್ಷ ಹೀಗೆ ಹಲವು ಸಂವೇದನಗಳ ಬಗೆಗೆ ಹೊಸ ವಿಷಯಗಳ ಮೇಲೆ ಕಾವ್ಯ ಕಟ್ಟಿರುವ ವರದೇಂದ್ರ ಕೆ ಅವರು ನವ್ಯೋತ್ತರ ಸಂದರ್ಭದ ಕಾವ್ಯಶೈಲಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಕೆಲವು ಕಡೆ ಯಶಸ್ವಿಯಾದರೆ ಕೆಲವು ಕಡೆ…ಗೊಂದಲಕ್ಕೊಳಗಾಗಿದ್ದಾರೆ. ಆರಂಭಿಕ ಕವಿಯ ಈ ಕವನ ಸಂಕಲನ ಅಕ್ಷರ ಲೋಕ ಪ್ರೀತಿಯಿಂದ ಖಂಡಿತವಾಗಿ ಸ್ವಾಗತಿಸಲಿದೆ. ವರದೇಂದ್ರ ಅವರಿಂದ ಕಾವ್ಯದ ಜೊತೆಗೆ ಇನ್ನೂ ಸಾಹಿತ್ಯದ ಹಲವು ಪ್ರಕಾರಗಳತ್ತ ಬರವಣಿಗೆಯನ್ನು ಹಾಯಿಸುವ ಮೂಲಕ ಸಾಹಿತ್ಯದ ಹಾದಿಯಲ್ಲಿ ತಮ್ಮ ಹೆಜ್ಜೆಗಳನ್ನು ಗಟ್ಟಿಗೊಳಿಸಲಿ ಎನ್ನುವ ಆಶಯ ನನ್ನದು.
– ಗುಂಡುರಾವ್ ದೇಸಾಯಿ