ಪುಸ್ತಕ ಪರಿಚಯ: ಅವಧೇಶ್ವರಿ
ಲೇಖಕರು- ಶಂಕರ ಮೊಕಾಶಿ ಪುಣೆಕರ
ಇದು ವೇದ ಕಾಲೀನ ರಾಜಕೀಯ ಕಾದಂಬರಿ. ಋಗ್ವೇದದ ಮಂತ್ರಗಳು ಮತ್ತು ಹರಪ್ಪ ಕಾಲದ ಮುದ್ರಿಕೆಗಳು ಈ ಕೃತಿಗೆ ಆಧಾರ.
ಬಹು ಕಾಲದ ಹಿಂದೆ, ಶ್ರೀರಾಮನ ಪೂರ್ವಜನಾದ ಪುರುಕುತ್ಸನು ಅಯೋಧ್ಯೆಯನ್ನು ಆಳುತಿದ್ದ ರಾಜ. ಅವನ ತಂಗಿ ಪುರುಕುತ್ಸಾನಿಯೇ ಅವನ ಪತ್ನಿ. ರಾಜ ಮನೆತನದ ಆಗಿನ ಪದ್ದತಿಯಂತೆ ಸೋದರ-ಸೋದರಿಯ ನಡುವೆ ವಿವಾಹ ಜರುಗಿತ್ತು. ಆದರೆ ದಾಂಪತ್ಯ ಜೀವನ ಅವರಿಂದ ಸಾಧ್ಯವಾಗದೆ, ಪುರುಕುತ್ಸನು ವಿಲಾಸಿ ಜೀವನದಲ್ಲಿ ಮುಳುಗುತ್ತಾನೆ. ರಾಜ್ಯ ನಿಭಾಯಿಸುವ ಹೊಣೆ ಹಂತ ಹಂತವಾಗಿ ರಾಣಿಯ ಕಡೆಗೆ ವಾಲುತ್ತದೆ. ಶತ್ರು ದೇಶದ ಆಕ್ರಮಣವೊಂದರಲ್ಲಿ, ಪುರುಕುತ್ಸ ಬಂಧಿಯಾಗಿ ಅಯೋಧ್ಯೆಯಿಂದ ಬೇರ್ಪಡುತ್ತಾನೆ. ಆಗ ರಾಜ್ಯದ ಸಂಪೂರ್ಣ ಜವಾಬ್ದಾರಿ ರಾಣಿಯ ಹೆಗಲೇರುತ್ತದೆ.
ತುಂಬ ಮುಂದಾಲೋಚಾನೆಯಿದ್ದ ರಾಣಿ, ಅಯೋಧ್ಯೆಯ ಹಿತವನ್ನು ಸಮರ್ಥವಾಗಿ ಕಾಪಾಡಿ ಕೊಂಡು ಬರುತ್ತಾಳೆ. ರಾಜ್ಯದ ಆಂತರಿಕ ಸಮಸ್ಯೆಗಳನ್ನು ಮತ್ತು ಹೊರ ಶತ್ರುಗಳ ಭಾಧೆಯನ್ನು ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳುತ್ತಾಳೆ. ಆದರೆ ಅವಳಿಗಿರುವ ನೋವೆಂದರೆ ಸಂತಾನವಿಲ್ಲದಿರುವುದು. ಇದಕ್ಕೆ ಪರಿಹಾರವಾಗಿ ನಿಯೋಗದಿಂದ ಸಂತಾನ ಪಡೆಯುವಂತೆ ಸೂಚಿಸುತ್ತಾರೆ ಅವಳ ಧರ್ಮ ಗುರುಗಳು. ಹೊರ ಲೋಕಕ್ಕೆ ರಾಜ ಪುರುಕುತ್ಸನೇ ಗರ್ಭಧಾರಣೆಗಾಗಿ ಕೆಲ ಕಾಲ ಸೆರೆಯಿಂದ ಹೊರಬಂದಂತೆ ಸನ್ನಿವೇಶ ಸ್ರಷ್ಟಿಸಿ, ಸಿಂಹಭಟ್ಟನೆಂಬ ಬ್ರಾಹ್ಮಣನಿಂದ ಪುತ್ರ ಸಂತಾನವನ್ನು ಪಡೆಯುವ ರಾಣಿ ಮಗುವಿನ ಬೆಳವಣಿಗೆಯಲ್ಲಿ, ರಾಜ್ಯದ ಪಾಲನೆಯಲ್ಲಿ ಮುಳುಗಿ ಹೋಗುತ್ತಾಳೆ.ಅವಳ ಮಗ ತ್ರಸದಸ್ಸ್ಯು ಬೆಳೆದು, ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳುತ್ತಾನೆ. ತಾಯಿಯ ಬಲಗೈ ಬಂಟ ತಾರ್ಕ್ಷ್ಯನೇ ಅವನಿಗೆ ಸಮರ ಕಲೆಗಳನ್ನು ಕಲಿಸುವ ಗುರುವಾಗುತ್ತಾನೆ. ತದ ನಂತರ ರಾಣಿ ಪುರುಕುತ್ಸಾನಿ ರಾಜಕೀಯವನ್ನು ತೊರೆದು ಆಶ್ರಮವಾಸಿಯಗುತ್ತಾಳೆ. ಹಲವಾರು ವರುಷಗಳ ನಂತರದ ಬೆಳವಣಿಗೆಗಳು ರಾಣಿಯನ್ನು ಮತ್ತೆ ರಾಜಕೀಯಕ್ಕೆ ಮರಳುವಂತೆ ಮಾಡುತ್ತವೆ.
ಇದೊಂದು ವಿಶಿಷ್ಟ ಕೃತಿ. ಲೇಖಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ತಂದು ಕೊಟ್ಟ ಕಾದಂಬರಿ. ಇದು ಪ್ರಾಚೀನ ಕಾಲದ ಜನರ ಜೀವನ ಶೈಲಿ, ಅವರ ನ್ಯಾಯ-ಅನ್ಯಾಯದ ವಿಮರ್ಶೆ, ಋಗ್ವೇದದ ದೇವರುಗಳು ಮತ್ತು ಅಥರ್ವ ವೇದದ ಕ್ಷುದ್ರ ಶಕ್ತಿಗಳ ಆರಾಧನೆ, ಇತಿಹಾಸವನ್ನು ದಾಖಲಿಸಲು ಮೊಹರು, ಫಲಕಗಳ ಬಳಕೆ ಮುಂತಾದ ವಿಷಯಗಳ ಮೇಲೆ ಅರಿವು ಮೂಡಿಸುತ್ತದೆ. ಲೇಖಕರು ಇದನ್ನು ಇತಿಹಾಸದಂತೆ ಓದದೆ, ಕಾಲ್ಪನಿಕ ಕೃತಿಯಂತೆ ಓದುವ ಸಲಹೆ ನೀಡುತ್ತರಾದರೂ, ಈ ಪುಸ್ತಕ ನೀಡುವ ಮಾಹಿತಿ ಅಲ್ಲಗೆಳೆಯುವಂತಿಲ್ಲ. ಅದರಲ್ಲಿ ಗಮನಿಸ ಬೇಕಾದ ಒಂದು ಅಂಶವೆಂದರೆ, ಋಗ್ವೇದದ ಎಲ್ಲ ಶ್ಲೋಕಗಳು ದೇವರ ಕೀರ್ತನೆಯಲ್ಲ. ಮನುಷ್ಯ ಶೋಕದ ಆಲಾಪಗಳು ಸೇರಿವೆ ಎನ್ನುವುದು.
ಶಂಕರ ಮೊಕಾಶಿ ಪುಣೆಕರ ಅವರ ಸಂಶೋಧನಾ ಸಾಮರ್ಥ್ಯ ಅದ್ಭುತವಾದದ್ದು. ‘ಗಂಗವ್ವ ಗಂಗಾಮಾಯಿ’ ಕಾದಂಬರಿಯಿಂದ ಜನಪ್ರಿಯತೆ ಪಡೆದ ಅವರು, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇನ್ನು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಧಾರವಾಡ ಅವರ ಹುಟ್ಟೂರು. ವೃತ್ತಿಯಿಂದ ಶಿಕ್ಷಕರು. ಅವರ ಸಾಹಿತ್ಯ ಸೇವೆ ಅವರನ್ನು ಅಜರಾಮರನ್ನಾಗಿಸಿದೆ.
ಕೃತಿ ಪರಿಚಯ- ಆನಂದ ಮರಳದ ಬೆಂಗಳೂರು