Blog
ಅರವತ್ತರ ಬತ್ತದ ಪಯಣ- ಭತ್ತದ ನಾಡ ಪರಿಸರ-ಪ್ರಭಾವ
ಅರವತ್ತರ ಬತ್ತದ ಪಯಣ- ಭತ್ತದ ನಾಡ ಪರಿಸರ-ಪ್ರಭಾವ
ಹುಟ್ಟು ಹಬ್ಬ ಏನನ್ನು ಸೂಚಿಸುತ್ತದೆ? ಇದು ಸಡಗರಿಸುವ ಕ್ಷಣವಾ ? ಹೌದು ಎಂದು ಭಾವಿಸಿ ಐರೋಪ್ಯ ಆಚರಣೆಯ ಕ್ಯಾಂಡಲ್ ಊದಿ, ಕೇಕ್ ಕತ್ತರಿಸಿ ಪಾರ್ಟಿ ಮಾಡುತ್ತೇವೆ. ಆದರೆ ವಾಸ್ತವ ಅದಲ್ಲ. ನಾವು ಮೈನಸ್ ಕಡೆಗೆ ಸಾಗುತ್ತೇವೆ ಎಂದೇ ಅರ್ಥ. ಹೀಗೆ ಪ್ರತಿ ವರ್ಷ ಗೆಳೆಯರ ಮಧ್ಯ ಕೇಕು ಕತ್ತರಿಸಿ ಬದುಕಿನ ಮೈನಸ್ ಆಚರಿಸಲು ಆರಂಭಿಸಿ ನಲವತ್ತು ವರ್ಷವಾಯಿತು. ಅದಕ್ಕೂ ಮೊದಲು ಊರಲ್ಲಿ ಕಲಿಯುವಾಗ ‘ಬರ್ಥ್ ಡೇ’ ಸಂಸ್ಕೃತಿ ಇರಲಿಲ್ಲ.
ಕಾರಣ ನಮ್ಮ ಹುಟ್ಟಿದ ದಿನಾಂಕ ನಿಗದಿಯಾಗಿದ್ದು ಪ್ರಾಥಮಿಕ ಶಾಲಾ ಶಿಕ್ಷಕರಿಂದ, ಅದೇ ಜೂನ್ ಒಂದನೇ ತಾರೀಕು. ಆದ್ದರಿಂದ ಅವ್ವ ಹೇಳುವ ದಿನಕ್ಕೆ ಇದು ಮ್ಯಾಚ್ ಆಗುತ್ತಿರಲಿಲ್ಲ. ಧಾರವಾಡ ಕಾಲೇಜಿಗೆ ಬರುವಾಗ ಊರಲ್ಲಿ ಜಾತಕ ಸಿಕ್ಕಿತು, ಅದನ್ನು ಓದಿದೆ, ಆದರೆ ಅದು ಅಷ್ಟೊಂದು ಮಜವಾಗಿರಲಿಲ್ಲ. ನನಗೆ ಮುಖ್ಯ ಮೂಲ ಹುಟ್ಟಿದ ದಿನಾಂಕ ಬೇಕಾಗಿತ್ತು. ಅದನ್ನು ಹಿಡಿದುಕೊಂಡು ಗದುಗಿನ ಪಂಚಾಗ ಪ್ರವೀಣ ಬಸಯ್ಯ ಶಾಸ್ತ್ರಿಗಳ ಕೈಗಿತ್ತೆ. ಅವರು ಆಗ ತೋಂಟದಾರ್ಯ ಮಠದ ಎದುರಿಗೆ ಒಂದು ಡಬ್ಬಿ ಅಂಗಡಿಯಲ್ಲಿ ಕುಳಿತಿರುತ್ತಿದ್ದರು. ಹತ್ತೇ ನಿಮಿಷದಲ್ಲಿ ಡೇಟ್ ಕೈಗೆ ಬಂತು. ಅದನ್ನು ನಾನು ನನ್ನ ಫಸ್ಟ್ ಡೇಟಿಂಗ್ ಎಂದು ಪರಿಗಣಿಸುತ್ತೇನೆ. ‘ ನೀ ಉಗಾದಿ ಪಾಡ್ಯದ ಆಜು ಬಾಜು ಅಂದರೆ 12 ಎಪ್ರಿಲ್ 1965 ರಂದು ಹುಟ್ಟೀದಿ’ ಎಂಬ ಫರ್ಮಾನು ಹೊರಡಿಸಿದರು. ಧಾರವಾಡದ ಗೆಳೆಯರಿಗೆ ರಿಯಲ್ ಹುಟ್ಟಿ ದಿನ ಹೇಳಿ ಖುಷಿ ಪಟ್ಟೆ. ಕಾಲೇಜು ಸಹಪಾಠಿಗಳಾದ ಶಹಪೂರಿನ ಡಿ. ಅಜೇಂದ್ರಸ್ವಾಮಿ ಎಂಬ ಸಿನೀಯರ್ ಮೊದಲ ಗ್ರೀಟಿಂಗ್ ಡಿಸೈನ್ ಮಾಡಿ ಗಿಫ್ಟ್ ಕೊಟ್ಟಾಗ ನೆಲ ಮುಗಿಲ ಸಡಗರ. ಮುಂದೆ ಧಾರವಾಡ ಗೆಳೆಯರು ‘ಹುಚ್ ಸೂಳೆಮಗನ ಪರೀಕ್ಷಾ ಟೆನ್ಷನ್ ಇದ್ದಾಗ ಹುಟ್ಟಿ, ಅವಾಗ ಎಲ್ಲಿ ಪಾರ್ಟಿಯೋ ಮಗನ’ ಎಂದು ಬೈದಾಡಿಕೊಂಡರು. ಒಂದು ವರ್ಷ ಪಿಯುಸಿ ಲಗಾ ಹೊಡೆದು ಬಿ.ಎ. ಗೆ ಬಂದಾಗ ಹುಟ್ಟು ಹಬ್ಬ ಗರಿಗೆದರಿತು. ಗೆಳೆಯ, ಗೆಳತಿಯರು ಹಾರೈಸಲಾರಂಭಿಸಿದರು. ಪರೀಕ್ಷಾ ಹಿಂದು ಮುಂದು ಬರುತ್ತಿದ್ದ ಹುಟ್ಟು ಹಬ್ಬದಂದು ಧಾರವಾಡದಲ್ಲಿ ತಪ್ಪದೇ ಮಳೆ ಸುರಿಯುತ್ತಿತ್ತು. ನನಗದೇ ವರುಣ ದೇವನ ದಿವ್ಯ ಹಾರೈಕೆ.
****
ಆರು ದಶಕದ ಪಯಣದ ಐದು ಭಾಗಗಳು-
ಉಪನ್ಯಾಸಕ ವೃತ್ತಿಯಂದ ಅಧಿಕೃತ ನಿವೃತ್ತಿ., ಓದು-ಬರಹ-ಭಾಷಣ ಪ್ರವೃತ್ತಿಗಳ ಜೊತೆಗೆ ಅಧಿಕೃತ ಸೀನಿಯರ್ ಸಿಟಿಜನ್. ಆದರೆ ಮನಸು ಆ ಸೀನಿಯಾರಿಟಿ ಒಪ್ಪಿಕೊಳ್ಳುತ್ತಿಲ್ಲ. ಮನಸು ಇನ್ನೂ ಮಗುವಾಗಿಯೇ ಇದೆ. ಹಾಗೆ ಇರಬೇಕು ಕೂಡ! ವಯಸ್ಸಾಗುವುದು ದೇಹಕ್ಕೆ ಮಾತ್ರ, ಮನಸಿಗಲ್ಲ.
ಭತ್ತದ ನಾಡಿನ ಭಿತ್ತಿಗಳು- ಅರವತ್ತು ಮತ್ತು ಎಪ್ಪತ್ತರ ದಶಕ ಪೂರ್ಣಗೊಳ್ಳುವತನಕ ನಾ ಬೆಳೆದದ್ದು, ಕಾರಟಗಿ ಮತ್ತು ಕುಷ್ಟಗಿ.
ಅವ್ವನ ತವರು ಮನೆ ಕುಷ್ಟಗಿಯ ಅಜ್ಜನ ಒಡನಾಟ ಅನುಪಮ. ಅಜ್ಜನ ವ್ಯಾಯಾಮ, ನೀಟ್ ಆಗಿ ಕ್ಲೋಸ್ಡ್ ಕಾಲರ್ ಕೋಟು ಹಾಕಿ ಕೋರ್ಟಿಗೆ ಹೋಗುವ ಪರಿಯೇ ಅದ್ಭುತ. ಅಲ್ಲಿ ಯಾವುದೋ ಲೋಕದಿಂದ ಬಂದವರಂತೆ ಕಂಗೊಳಿಸುವ ಜಡ್ಜುಗಳು, ಕರಿ ಕೋಟು ಹಾಕಿಕೊಂಡು ಓಡಾಡುವ ವಕೀಲರು ನನಗೆ ಆದರ್ಶವಾದರು. ಆದರೆ ವಕೀಲನಾಗಿ ‘ಮೈ ಲಾರ್ಡ್’ ಎನ್ನಬೇಕು ಎಂಬ ಕನಸು ಕಾಡಿತು. ಆದರೆ ಶಾಲೆಯ ಆಸಕ್ತಿ ಕಳೆದುಕೊಂಡು ಬರೀ ಕುಷ್ಟಗಿಯ ಓಡಾಟ ಹೆಚ್ಚಾದ್ದರಿಂದ ಜಾಣನಾಗಲೇ ಇಲ್ಲ.
ಭತ್ತದ ನಾಡಿನ ಸರಕಾರಿ ಶಾಲೆ, ಅಲ್ಲಿನ ಬಗೆ ಬಗೆಯ ಶಿಕ್ಷಕರ ಕಂಡರೆ ನನಗೆ ಭಯ-ಭಕ್ತಿ. ಪ್ರಕಾಶಪ್ಪ ಮಾಷ್ಟ್ರು, ರಾಮಣ್ಣ ಸರ್, ಸಾಲಗುಂದಿ ಸಿದ್ದಪ್ಪ ಸರ್ ಹೀಗೆ ಕೆಲವರು ಆಗಾಗ ನೆನಪಾಗಿ ಕಾಡುತ್ತಾರೆ. ಆಗ ಏಳನೇ ತರಗತಿ ಕೂಡ ಬೋರ್ಡ್ ಪರೀಕ್ಷೆ. ಅಲ್ಲಿಂದ ನಂಗೆ ಪರೀಕ್ಷಾ ಭೀತಿ ಆರಂಭವಾಗಲು ಮುಖ್ಯ ಕಾರಣ ಓದದೇ ಇರುವುದು. ಕನ್ನಡ ಬಿಟ್ಟು ಉಳಿಯದ ವಿಷಯಗಳಲಿ ಬಿಗ್ ಜೀರೋ.
ಆದರೂ ಶಿಕ್ಷಕರ ಕೃಪೆಯಿಂದ ಪಲ್ಟಿ ಹೊಡೆಯದೆ ಏಳರ ಬೋರ್ಡ್ ಪರೀಕ್ಷೆ ಪಾಸಾದೆ. ಆಗ ಅದನ್ನು ಮುಲ್ಕಿ ಪರೀಕ್ಷೆ ಎನ್ನುವ ಕಾಲವದು. ಮುಂದೆ ನಿಜವಾದ ಸವಾಲು ಆರಂಭವಾದ ಕಾಲವೇ ಹೈಸ್ಕೂಲಿನಲ್ಲಿ. ಅಲ್ಲಿಯೂ ಅಷ್ಟೇ ಕನ್ನಡದ ಕಾಡಬಸಪ್ಪ ಆರಾಳಗೌಡರು ಮಾತ್ರ ಪ್ರಿಯರಾಗಿ ಕಾಣುತ್ತಿದ್ದರು. ವಿಜ್ಞಾನದ ಬಿ.ಜಿ.ಸಾಲಿಮಠ ಸರ್, ಗಣಿತದ ಚನ್ನಯ್ಯ ಸರ್, ಇಂಗ್ಲಿಷ್ ಭಾಷೆಯ ಬಿ.ಎಂ.ಪಾಟೀಲ ಸರ್ ಕ್ಲಾಸುಗಳೆಂದರೆ ಕಬ್ಬಿಣದ ಕಡಲೆ. ಸಮಾಜಶಾಸ್ತ್ರದ ಮಲ್ಲಿಕಾರ್ಜುನ ತಿಮ್ಮಪೂರ ಸರ್ ಸಹ್ಯ ಎನಿಸಲು ನನ್ನ ಪಾಂಡಿತ್ಯವೇ ಕಾರಣ. ಕನ್ನಡ, ಸಮಾಜವಿಜ್ಞಾನ ಮಾತ್ರ ತಲೆಯಲ್ಲಿ ಹೋಗುತ್ತಿದ್ದ ವಿಷಯಗಳು. ಆದರೂ ಲಾಯರ್ ಆಗಬೇಕು ಎಂಬ ಕನಸು ಮಾತ್ರ ಬತ್ತಿರಲಿಲ್ಲ. ಹಾಗಂತ ಹತ್ತನೇ ವರ್ಗ ಪಾಸಾಗುವ ಯಾವುದೇ ಲಕ್ಷಣಗಳು ಗೋಚರವಾಗಲಿಲ್ಲ.
ಆದರೆ ನಾನು ಶತ ದಡ್ಡನೂ ಅಲ್ಲ. ಶಾಲೆಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ/ ದ್ವೀತಿಯ ಸ್ಥಾನದಲ್ಲಿ ಇರುತ್ತಿದ್ದೆ. ಆ ಶಹಬ್ಬಾಸ್‌ಗಿರಿಯಲ್ಲಿ ಆಗಾಗ ಕಳೆದು ಹೋಗುತ್ತಿದ್ದೆ. ಇನ್ನು ಶಾಲೆಯ ಹೊರಗೆ ಅಂಗಡಿಯಲ್ಲಿ ಕುಂತಾಗ ಪ್ರಪಂಚ ವಾರಪತ್ರಿಕೆ, ಕನ್ನಡಪ್ರಭ ದಿನಪತ್ರಿಕೆ ತಪ್ಪದೇ ಓದಿ ಕರೆಂಟ್ ಅಫೈರ್ಸ್ ಅರ್ಥಮಾಡಿಕೊಳ್ಳಲು ಯಶ ಸಾಧಿಸಿದ್ದೆ. ಅಂಗಡಿ ಎದುರಿಗೆ ಇದ್ದ ಹಿರಿಯ ವರದಿಗಾರರಾದ ಎ.ಜಿ.ಕಾರಟಗಿ ಅವರ ಮಗ ವಿಶ್ವ ಮಧ್ಯಾನ್ಹದ ಹೊತ್ತು ಪತ್ರಿಕೆಗಳನ್ನು ತಂದು ಕೊಡುತ್ತಿದ್ದ. ಮುಖ್ಯವಾಗಿ ‘ರೂಪತಾರಾ’ ಸಿನೆಮಾ ಕುತೂಹಲ ಹೆಚ್ಚಿಸುತ್ತಿತ್ತು. ಖಾದ್ರಿ ಶಾಮಣ್ಣ ಅವರ ಸಂಪಾದಕೀಯ, ಪಾಟೀಲ ಪುಟ್ಟಪ್ಪ ಅವರ ಶಾರ್ಪ್ ಬರಹಗಳೂ ಅರ್ಥವಾಗುತ್ತಿದ್ದವು. ಆದರೆ ಶಾಲಾ ಪುಸ್ತಕಗಳನ್ನು ಹಿಡಿದರೆ ನಿದ್ದೆ ಆವರಿಸುತ್ತಿತ್ತು.
ಆಗ ಶರಣಬಸವೇಶ್ವರ ಪುರಾಣ ಇರುತ್ತಿತ್ತು, ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶಾಸ್ತ್ರಿಗಳು ಪುರಾಣ ಹೇಳಲು ಬರುತ್ತಿದ್ದರು. ಅವರು ಹೇಳುತ್ತಿದ್ದ ಉಪಕತೆಗಳು ಗಮನ ಸೆಳೆಯುತ್ತಿದ್ದವು. ಹರಾಜು ಕೂಗುವ ಮೊದಲು ಸಿ.ಶಿವಪ್ಪ ಅವರ ಸುದೀರ್ಘ ಮಾತುಗಳು ಅಷ್ಟೇ ಕುತೂಹಲ ಮೂಡಿಸುತ್ತಿದ್ದವು. ಶಾಲೆಯಲ್ಲಿ ಕನ್ನಡ ಪಂಡಿತರಾದ ಕಾಡಸಿದ್ದಪ್ಪ ಸರ್ ಅವರ ವ್ಯಂಗ್ಯಭರಿತ ಮಾತುಗಳು ಹೊಸ ಹೊಳವುಗಳನ್ನು ಕಟ್ಟಿ ಕೊಡುತ್ತ ನನ್ನ ಒಳಗೆ ಅಡಗಿದ್ದ ‘ಬರಹಗಾರ’ ಜಾಗ್ರತನಾಗಿರಬಹುದು. ಆದರೂ ನಾನು ‘ದಡ್ಡ ವಿದ್ಯಾರ್ಥಿ’, ಅಂಕಗಳ ಆಧಾರದ ಮೇಲೆ!
ನಮ್ಮೂರ ಇನ್ನೋರ್ವ ಮಾತುಗಾರರಾದ ಗಿರಿಜಾಶಂಕರ ಪಾಟೀಲ ಅವರ ಗತ್ತು ಗೈರತ್ತು, ಅವರ ಆಕರ್ಷಕ ಉಡುಗೆಯ ಜುಬ್ಬಾ, ಧೋತ್ರ, ಬಗಲಲ್ಲಿ ಇಣುಕುತ್ತಿದ್ದ ಪಿಸ್ತೂಲ್ ಮೋಡಿ ಮಾಡಿದ್ದವು. ಅವರು ಮಂಕುತಿಮ್ಮನ ಕಗ್ಗದ ಸಾಲುಗಳನ್ನು ತಮ್ಮದೇ ಆದ ಶೈಲಿಯಲ್ಲಿ, ವಿಶೇಷ ಬಾಡಿ ಲಾಂಗ್ವೇಜ್ ಮೂಲಕ ವಿವರಿಸಿದಾಗ ಆಸಕ್ತಿಯಿಂದ ಕೇಳುತ್ತಿದ್ದೆ. ಹೀಗೆ ನಮ್ಮೂರಿನ ಬಿಸಿಲ ನೆಲದಲ್ಲಿ ಬಿತ್ತಿದ ಸಾಹಿತ್ಯಾಸಕ್ತಿಯ ಬೀಜಗಳು ಈಗ ಹೀಗೆ ಫಲ ಕೊಡಬಹುದೆಂದು ಯಾರೂ ಊಹೆ ಮಾಡಿರಲಿಲ್ಲ, ನಾನೂ ಕೂಡ!
ಇನ್ನು ವ್ಯಾಪಾರ ಮತ್ತು ಜೀವನಾನುಭವಕ್ಕೆ ಸಂಬಂಧಿಸಿದ ಅನೇಕ ವ್ಯಕ್ತಿಗಳ ಮರೆಯಲಾಗದು. ಶ್ರೀಮಂತ ಮನೆತನದ ವೀರಭದ್ರಪ್ಪ ಚಿನಿವಾಲ, ವಕೀಲ ಸೂಗಪ್ಪ,ಕೆ. ಸಣ್ಣ ಸೂಗಪ್ಪ, ಜವಳಿ ಶಂಭಣ್ಣ, ನಮ್ಮ ಪರಿವಾರದ ಅಮರಣ್ಣ ತಾತ, ರಾಜಕೀಯ ಮಾಡುತ್ತಿದ್ದ ಬಸಪ್ಪ ಅರಳಿ, ಓದುವ ಆಸಕ್ತಿ ಹೆಚ್ಚಿಸಿದ ಡಾ. ಮುದಗಲ್, ಪತ್ರಿಕೆ ಬಂಡಲ್ ಹಿಡಿದುಕೊಂಡು ಓಡಾಡುತ್ತಿದ್ದ ಜ್ಞಾನ ದಾಸೋಹಿ ಎ.ಜಿ.ಗುಂಡಪ್ಪ ಹೀಗೆ ಅನೇಕರ ಉದಾಹರಿಸಬಹುದು.
ಬಾಲ್ಯದ ದಡ್ಡತನದ ಆಧಾರದ ಮೇಲೆ ನಾನು ಉನ್ನತ ವ್ಯಾಸಂಗ ಮಾಡುವ ಧೈರ್ಯ ಮಾಡದಿದ್ದರೆ ಅಲ್ಲಿಯೇ ಮಾಯವಾಗಿ ಹೋಗುತ್ತಿದ್ದೆ. ಆದರೆ ಗದುಗಿನ ತೋಂಟದಾರ್ಯ ಮಠದ ಪೂಜ್ಯ ಡಾ. ಸಿದ್ಧಲಿಂಗ ಸ್ವಾಮಿಗಳ ಪ್ರೇರಣೆ ಮತ್ತು ಕೃಪೆ ನನ್ನ ಮೇಲಾಯಿತು.
ಹೈಸ್ಕೂಲ್ ಫೇಲ್ ಆಗಿ ಅಂಗಡಿಯಲ್ಲಿ ಪೊಟ್ಟಣ ಕಟ್ಟುತ್ತಿದ್ದ ನನ್ನನ್ನು ಧಾರವಾಡದ ಪ್ರೊ.ಶಿವಾನಂದ ಗಾಳಿ ಸರ್ ಮೂಲಕ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಬಳಿ ಕಳಿಸಿ ಬದುಕಿನ ಇತಿಹಾಸ ಬದಲಿಸಿದರು. ಅನೇಕ ಬಾರಿ ಪೂಜ್ಯರ ಕುರಿತು ಬರೆದ ಲೇಖನಗಳಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೇನೆ.
ಬದುಕು-ಬರಹಕ್ಕೆ ಕಾಡುವ ಬಾಲ್ಯದ ನೆನಪುಗಳು-
ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದ ಮೇಲೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕಾರ ಮಾಡಿದೆ. ಸೋಲು,ಅವಮಾನ, ಶೈಕ್ಷಣಿಕ ಹಿನ್ನಡೆ, ನೌಕರಿಯ ಸಂಕಷ್ಟ, ಸಾರ್ವಜನಿಕ ಮುಜುಗರ, ವ್ಯಕ್ತಿಗಳ ಮುಖವಾಡ, ದೊಡ್ಡವರ ಸಣ್ಣತನ, ಸಣ್ಣವರ ಔದಾರ್ಯ, ನಂಬಿಕೆ ದ್ರೋಹ, ಭಾವುಕತೆಯ ಅಪಾಯಗಳು, ಪ್ರೀತಿ-ಪ್ರೇಮ-ಪ್ರಣಯ, ಎಡ-ಬಲ ವಿಚಾರಧಾರೆಯ ಹೋರಾಟಗಳು, ಧಾರವಾಡ ವಿದ್ಯಾವರ್ಧಕ ಸಂಘದ ನಿರಂತರ ಕಾರ್ಯಕ್ರಮಗಳು, ಗೆಳೆಯರು ಆಡುತ್ತಿದ್ದ ವೇದಿಕೆ ಮೇಲಿನ ಹಾಗೂ ಕೆಳಗಿನ ನಾಟಕಗಳು. ಅಯ್ಯೋ ದೇವ! ಸಾಕಪ್ಪ ಸಾಕು ಈ ಅನುಭವ ಎನಿಸಿ, ಕದ್ದು ಮುಚ್ಚಿ ಕವಿತೆಗಳ ಬರೆಯಲಾರಂಭಿಸಿದೆ. ಬರೆದ ಕವಿತೆಗಳನ್ನು ಪತ್ರಿಕೆಗೆ ಕಳಿಸುವ ಧೈರ್ಯ ಮಾಡಲಿಲ್ಲ. ವಿಮರ್ಶೆ ಮಾಡುವಾಗ ಅಂದಿನ ಸಾಹಿತ್ಯ ವಲಯದ ವಿಮರ್ಶಕರು ಮಾಡುತ್ತಿದ್ದ ಟೀಕೆ-ಟಿಪ್ಪಣೆಗಳು ನನ್ನನ್ನು ಎಚ್ಚರಿಸಿ, ಕವಿತೆಗಳ ತಿದ್ದಿ ತೀಡಿ ಡೈರಿಯಲ್ಲಿ ಮುಚ್ವಿಡುತ್ತಿದ್ದೆ.
ಇಂಗ್ಲಿಷ್ ಎಂಬ ಮಾಯಾವಿ- ಹತ್ತನೇ ತರಗತಿಯಲ್ಲಿ ನನ್ನನ್ನು ಅವಮಾನ ಮಾಡಿ ಸೋಲಿಸಿದ ಇಂಗ್ಲಿಷ್ ಭಾಷೆಯ ಮೇಲೆ ಭಯಂಕರ ಸಿಟ್ಟಿತ್ತು. ಆದರೆ ಆ ಸಿಟ್ಟನ್ನು ಹೆಂಗ ತೀರಿಸಿಕೊಳ್ಳಬಹುದು? ಎಂಬ ಸಂಚಿನಲ್ಲಿ ಇದ್ದಾಗ ಧಾರವಾಡದ ಗೆಳೆಯರಾದ ಅರುಣ ಹಾನಗಲ್, ಅನಿತಾ ರಾವ್ ಹಾಗೂ ಇತರರು ಇಂಗ್ಲಿಷ್ ಭಾಷೆಯನ್ನು ಅವಮಾನ ಮಾಡದೆ ಕಲಿಸಿದರು. ನಿಧಾನವಾಗಿ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿ ಎಂ.ಎ. ಪಾಸಾದೆ.
ಧಾರವಾಡದ ಯಾತ್ರೆ ಮುಗಿದ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ವಿಲ್ಲಿಂಗ್‌ಡನ್ ಸ್ನಾತಕೋತ್ತರ ಕೇಂದ್ರದಲ್ಲಿ ಪಿ.ಜಿ. ಮುಗಿಸಿದಾಗ ಮರಾಠಿ ಸಾಹಿತ್ಯ ಪರಿಚಯವಾಯಿತು. ಮಹಾರಾಷ್ಟ್ರದ ಗೆಳೆಯರು ಕೊಟ್ಟ ಅನುಭವ, ಚಿಂತನಾ ವ್ಯಾಪ್ತಿಯನ್ನು ಹಿಗ್ಗಿಸಿತು. ದೇಶ ವಿದೇಶಗಳ ಸುತ್ತುವ ಆತ್ಮವಿಶ್ವಾಸವೂ ಬಂತು.
ಸಾಹಿತ್ಯ ಮತ್ತು ಪತ್ರಿಕೋದ್ಯಮ-
ಸಾಹಿತ್ಯ ವಿಮರ್ಶೆ, ಕತೆ,ಕವನಗಳ ಜೊತೆಗೆ ಪತ್ರಿಕೋದ್ಯಮದ ಆಕರ್ಷಣೆ ಹೆಚ್ಚಿಸಿದವರು ಇಂಗ್ಲಿಷ್ ಪ್ರಾಧ್ಯಾಪಕ, ಸಾಹಿತಿ ಪಿ.ಲಂಕೇಶ್ ಹಾಗೂ ಅವರ ಪತ್ರಿಕೆ. ಪ್ರೊ.ಚಂಪಾ, ಸತ್ಯಂಪೇಟೆ ಲಿಂಗಣ್ಣ, ಪುಂಡಲೀಕ ಶೇಟ್, ರವೀಂದ್ರ ರೇಷ್ಮೆ ಅವರ ಬರಹಗಳು ಗಮನ ಸೆಳೆದು ಕಟ್ಟಿ ಹಾಕಿದವು. ಮುಂದೆ ತೊಂಬತ್ತರ ದಶಕದಲ್ಲಿ ಸಿಟಿ ಕೇಬಲ್ ಮೂಲಕ ವಿಡಿಯೋ ಸಂದರ್ಶನ ಆರಂಭಿಸಿ ನಾಡಿನ ಘಟಾನುಘಟಿಗಳ ಸಂದರ್ಶನ ಮಾಡಿದೆ.
ಆಗ ಈ ಖಾಸಗಿ ಚಾನಲ್ ಆರ್ಭಟ ಇರಲಿಲ್ಲ. ‘ಜಾಕ್ ಆಫ್ ಆಲ್, ಮಾಸ್ಟರ್ ಆಫ್ ನನ್’ ಆರೋಪ ಕೇರ್ ಮಾಡದೇ ಸಾಗಿ ಬಂದೆ.
ಮುಂದೇನು ? – ಓದು-ಬರಹ-ಭಾಷಣ ಸಾಗಿಯೇ ಇದೆ. ಜೀವನಶೈಲಿಯ ಪಾಠ,ಪ್ರವಚನ, ವಚನಗಳು ನನ್ನ ಜೀವಾಳ. ವ್ಯಕ್ತಿಗಳು, ಪುಸ್ತಕಗಳ ಪ್ರೇರಣೆ ಇದ್ದೇ ಇದೆ. ಈಗ ವೃತ್ತಿಯಿಂದ ನಿವೃತ್ತನಾಗಿ ಪ್ರವೃತ್ತಿಯನ್ನು ಮುಂದುವರೆಸಿದ್ದೇನೆ, ‘ವಚನ’ ಎಂಬ ಸೋಷಿಯಲ್ ಮೀಡಿಯಾ ಮೂಲಕ ನೂರಾರು ಮನಸುಗಳ ಮಾತನಾಡಿಸಲಿದ್ದೇನೆ. ಅಲ್ಲದೆ ಇಲ್ಲಿಯವರೆಗೆ ಹತ್ತಿರದಿಂದ ಕಂಡು, ಮಾತನಾಡಿದ ವ್ಯಕ್ತಿತ್ವಗಳನ್ನು ಬರಹ ರೂಪದಲ್ಲಿ ದಾಖಲಿಸಿ ಮಾಧ್ಯಮ ಗೆಳೆಯರಿಗೆ ರವಾನಿಸಲಿದ್ದೇನೆ.
ಬತ್ತದ ಮನಸುಗಳ ಗೆಳೆಯ ವೀರೇಂದ್ರನ ಪ್ರೇರಣೆ- ಮನಸುಗಳ ಅನಾವರಣ ಮಾಡಲು ಕಾರಣನಾದ ಸೋದರ ವೀರೇಂದ್ರ ಪಾಟೀಲ ಎದುರಿಗೆ ನೂರಾರು ವ್ಯಕ್ತಿಗಳ ವ್ಯಕ್ತಿತ್ವ ಅಕ್ಷರಗಳಲಿ ಹಿಡಿದು ಕೊಡುವೆ. ನನ್ನೂರ ಬೇರುಗಳ ಬಂಧನ ಸದಾ ಇರಲಿ.
ಈ ಬದುಕೇ ಹೀಗೆ ಬತ್ತದ ಚಿಲುಮೆ. ಬತ್ತದ ಮನಸುಗಳ ಅನುಸಂಧಾನ. ಯಾರೂ ಒಳ್ಳೆಯವರಲ್ಲ, ಹಾಗಂತ ಕೆಟ್ಟವರೂ ಇಲ್ಲ. ಅದು ನಮ್ಮಲ್ಲಿ ಇದೆ. ಯಾರನ್ನೂ ಬೈಯ್ಯದೆ, ಬೇಕಿದ್ದನ್ನು ಸ್ವೀಕರಿಸಿ, ಬೇಡವಾದದ್ದನ್ನು ಅಲ್ಲಿಯೇ ಬಿಟ್ಟು ಮುಂದೆ ಹೋಗ್ತಾ ಇರಬೇಕು ಬದುಕಿನ ಕೊನೆಯ ನಿಲ್ದಾಣ ತಲುಪುವ ತನಕ…