ಕಲ್ಲಂಗಡಿ ರಕ್ತ

ಬೀದಿ ಬದಿಯಲಿ ಸಿಡಿ ಸಿಡಿದು
ಬೀಳುತ್ತಿರುವುದು
ಕೇವಲ ಕೆಂಪು ಕಲ್ಲಂಗಡಿ ಹಣ್ಣುಗಳಲ್ಲ
ಗೆಳೆಯರೆ

ಐದು ವರ್ಷಕ್ಕೊಮ್ಮೆ ಬಂದು ಹೋಗುವ
ವಸಂತ ಋತುವಿಗೆ
ಡೊಗ್ಗು ಸಲಾಮು ಹೊಡೆಯುವ
ನಮ್ಮ ನಿಮ್ಮಂಥವರ
ಬಡಪಾಯಿ ಹೃದಯ!

ಅಸಲಿ ದೇಶದ್ರೋಹಿಗಳಿಗಷ್ಟೇ ಅಲ್ಲ
ನಕಲಿ ದೇಶಭಕ್ತರಿಗೂ ಗೊತ್ತು:
ರಕ್ತ ಚೆಲ್ಲದಿದ್ದರೇನಾಯಿತು
ರಸ್ತೆಯ ಮೇಲೆ
ರಕ್ತದ ಬಣ್ಣಚೆಲ್ಲಿದರೂ ಸಾಕು!

‘…ಬಾಬಾ,ದುವಾ ಮಾಡಿ
ದುವಾ ಮಾಡಿ ಬಾಬಾ’
ಈ ಬೀದಿಯಲಿ ಇಂದು ಹರಿದ ಕಲ್ಲಂಗಡಿ ರಕ್ತ
ನಾಳೆ ನಮ್ಮದೂ ಆಗದಿರಲೆಂದು!

ಆರಿಫ್ ರಾಜಾ


Don`t copy text!