ಸದ್ವಿನಯವೇ ಸದಾಚಾರ
ಭಾರತೀಯ ಭಕ್ತಿ ಸಾಹಿತ್ಯದ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಚಂಪೂ ಸಾಹಿತ್ಯದ ನಂತರ ಸಾಮಾನ್ಯರಿಗೂ ಅರ್ಥವಾಗುವ ದೇಸೀ ಭಾಷೆಯಲ್ಲಿ ಸಮಾಜದ ಹತ್ತಿರಕ್ಕೆ ತಂದವರೆಂದರೆ ವಚನಕಾರರು. ಶರಣರ ನೇರ, ಸರಳ, ಭಕ್ತಿ ನಿಷ್ಠೆ ಈ ಎಲ್ಲಾ ಮೌಲ್ಯ ಆದರ್ಶಗಳು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ.
ಈ ಕಾಲ ಕ್ರಾಂತಿಯುಗವೂ ಹೌದು. ಭಕ್ತಿ ಚಳುವಳಿಯ ಕಾಲವೂ ಹೌದು. ಅಂದು ಭಾರತೀಯ ಚರಿತ್ರೆಯಲ್ಲಿ ನಿರಂತರವಾಗಿ ಮಹಿಳಾ ಶೋಷಣೆಗೆ ಒಳಗಾದ ಸಂದರ್ಭದಲ್ಲಿ ಅಕ್ಕ ಮಹಾದೇವಿ ಸ್ಥ್ರೀ ಶಕ್ತಿ ಪ್ರತೀಕವಾಗಿ ಪುರುಷ ಪ್ರಧಾನ ವ್ಯವಸ್ತೆಯನ್ನು ಕೆಡವಿ ಹೊಸ ಮುನ್ನುಡಿಗೆ ಕಾರಣಳಾದವಳು ಅಕ್ಕ. ಸ್ತ್ರೀ ವಿಮೋಚನೆಗೆ ಸಮರ್ಥವಾಗಿ ಆಕೆ ಬಳಸಿಕೊಂಡ ಮಾದ್ಯಮವೆ ಭಕ್ತಿ ಮತ್ತು ಬರವಣಿಗೆಯಾಗಿತ್ತು. ಜ್ಞಾನದ ಮೂಲಕ ಮನೋಭೂಮಿಕೆಯ ಅನುಸಂಧಾನ ಮಾಡಿದ ಮೊದಲ ವಚನಕಾರ್ತಿ. ನಾನೀಗ ಅಕ್ಕಮಹಾದೇವಿಯ ವಚನಗಳಲ್ಲಿ ಸದಾಚಾರ ಮೀಮಾಂಸೆಯ ಮೂಲಕ ಚರ್ಚೆಗೆತಿಕೊಳ್ಳುತ್ತಿದ್ದೇನೆ.
ಶರಣ ಧರ್ಮದ ಧಾರ್ಮಿಕ ಆಚರಣೆಯಲ್ಲಿ ನೀತಿಗೆ ಪ್ರಮುಖ ಸ್ಥಾನವಿದೆ. ನೈತಿಕತೆಯೇ ಶರಣರ ಜೀವಾಳ . ಪಂಚಾಚಾರವೇ ಪ್ರಾಣವೆಂಬ ಮಾತು ಶರಣರದು. ತಮ್ಮ ಬದುಕಿನ ಅನುಭವಗಳನ್ನು ಹೇಳಿರುವ ವಚನಕಾರರು ಶರಣ ಧರ್ಮಕ್ಕೊಂದು ಹೊಸ ಚೈತನ್ಯವನ್ನು ತಂದು ಕೊಟ್ಟರು. ವಿಚಾರಪೂರಿತ ಮಹತ್ವವನು ಆಚಾರಕ್ಕೆ ಕೊಟ್ಟರು. ಹಾಗೆಂದು ಶರಣ ಧರ್ಮ ಪಾಲನೆ ಅಷ್ಟು ಸುಲಭದ್ದಲ್ಲ. ಅದು ಸುಲಭದ ನುಡಿ ಕಠಿಣದ ನಡೆ. ಬಸವಾದಿ ಶರಣರೆಲ್ಲಾ ವಚನಗಳ ಸಾರವನ್ನು ಪಾಲಿಸುವಾಗ ಆಚರಿಸುವಾಗ ಏನೆಲ್ಲವನ್ನು ಅನುಸರಿಸಬೇಕೆಂಬ ವಾಸ್ತವತೆ ತೆರೆದಿಟ್ಟರು. ಧರ್ಮ ಸಿದ್ದಾಂತದ ಪ್ರತಿಫಲನ ಆಚಾರವೆ ಪಂಚಾಚಾರಗಳು. ಶರಣರ ಆದ್ಯಾತ್ಮಿಕ ಚಿಂತನೆಯ ಬಹುಮುಖಿ ಚಚರ್ಚೆಯ ಪ್ರತಿಫಲನದ ಆಚಾರವೇ ಪಂಚಾಚಾರ. ಅವೇ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಬೃತ್ಯಾಚಾರಗಳೆಂಬ ಐದು ಆಚಾರಗಳು.
ಸದಾಚಾರದ ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸ ಬೇಕಾದರೆ ಅವನ ವ್ಯಕ್ತಿತ್ವ. ಮೌಲ್ಯಯುತವಾದ ಬದುಕು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ನಡೆ ನುಡಿಗಳಾಗಿದ್ದಾಗ ಮಾತ್ರ ಸದಾಚಾರ ವ್ಯಕ್ತಿ ಎಂದು ಒಪ್ಪಿಕೊಳ್ಳುತ್ತೇವೆ. ಅಂದರೆ ಜೀವನ ದಲ್ಲಿ ಕೆಲವು ಶಾಶ್ವತ ಮೌಲ್ಯಗಳಿವೆ. ಜೀವನವೆಂಬ ಧರ್ಮದಲ್ಲಿ ಅಚಲ ಗುರಿಯನ್ನು ಕಂಡುಕೊಳ್ಳುವ ಪ್ರಯತ್ನ ವೇ ಸದಾಚಾರದ ಉಗಮಕ್ಕೆ ಕಾರಣವಾಯಿತೆನ್ನಬಹುದು. ಅಕ್ಕನ ಈ ವಚನ ಗಮನಿಸ ಬೇಕು.
ಸಜ್ಜನನಾಗಿ | ಮಜ್ಜನಕ್ಕೆರೆವೆ ||
ಶಾಂತಳಾಗಿ | ಪೂಜೆಯ ಮಾಡುವೆ ||
ಸಮರತಿಯಿಂದ | ನಿಮ್ಮ ಹಾಡುವೆ ||
ಈ ವಚನವು ಲೌಕಿಕ ಕಾವ್ಯ ಮೀಮಾಂಸೆಗೆ ಉಪಯುಕ್ತವಾದ ಗುಣಗಳಿದ್ದರೂ ಆದ್ಯಾತ್ಮ ಶಬ್ದಗಳ ಜೊತೆ ಮಾತನಾಡುತ್ತಾಳೆ. ಅಕ್ಕ ಚೆನ್ನಮಲ್ಲಿಕಾರ್ಜುನನ ಸಾಂಗತ್ಯದಲ್ಲಿ ಒಳ್ಳೆ ನಡೆಯ ಪತಿವ್ರತೆಯಾಗುತ್ತಾಳೆ. ಕರಸ್ಥಲದ ಲಿಂಗವನ್ನು ಕಾಯದಲ್ಲಿ ಸಂಕಲ್ಪಿಸಿಕೊಂಡು ಜಲೋಧಕದಿಂದ ಮಜ್ಜನ ಮಾಡುತ್ತಾಳೆ. ಹೂ,ಫಲ,ಪುಷ್ಪಗಲಳಿಂದ ಪೂಜಿಸಿ ತನು ನಿಮ್ಮ ರೂಪಾದ ಬಳಿಕ ಯಾರಿಗೆ ಮಾಡುವೆ ಎನ್ನುವ ನಿವೇದನೆ. ಇದು ಅಕ್ಕನ ಸಮರತಿ ಭಾವ. ಅಂದರೆ ದೇವರನ್ನು ಸಂಗೀತದ ಮೂಲಕ ಒಲವನ್ನು ಪಡೆಯುವ ಕ್ರಿಯೆ. ಅಕ್ಕನ ಕಾವ್ಯ ಶಕ್ತಿಯ ಆರಾಧನೆ ಇದು ಸಮರಥಿ ಭಾವವು ಇದು. ಶಿವನ ಮೂಲಕ ತಮ್ಮನ್ನು ಅರ್ಪಿಸಿಕೊಳ್ಳುವ ಈ ಸಾಂಕೇತಿಕಕ್ಕೆ ಶರಣರು ಆಚಾರವೆಂದು ಕರೆದಿದ್ದಾರೆ. ಸದಾಚಾರವೆಂದರೆ ಕೇವಲ ನೈತಿಕ ನಿಯಮಗಳ ಪಾಲನೆಯಲ್ಲ. ನೈತಿಕ ನಿಷ್ಠೆ ಧಾರ್ಮಿಕ ಅನುಸಂಧಾನಗಳೆರಡೂ ಒಳಗೊಳ್ಳುವ ಪೂರ್ಣ ದೃಷ್ಟಿ.
ಧರ್ಮದ ಆಚಾರವೂ ಸಹಿತ ಇದರ ಸಂವಾದಿಯಾಗಿ ಬರುತ್ತದೆ. ಸದಾಚಾರ ಸಿದ್ದಾಂತದಿಂದ ಪೂರ್ಣ ಪ್ರಯೋಗ ಮಾಡಿದ ಶರಣರು ನಡೆ ನುಡಿ ಮನುಷ್ಯನ ಅರಿವಿನ ಅನುಸಂಧಾನಗಳು. ಹೀಗಾಗಿ ಶಿವಭಕ್ತರಾದವರೆಲ್ಲರೂ ಸಮಾನರೆಂದು ಸಮರ್ಥಿಸಿದರು.
ಅಯ್ಯಾ ಸದಾಚಾರ | ಸದ್ಭಕ್ತಿ ಸತ್ಕ್ರಿಯ ||
ಸಮ್ಯಕಜ್ಞಾನ ಸದ್ವರ್ತನೆ | ಸದ್ಗುಣ ನಿರ್ಗುಣ ||
ಸಚ್ಚಾರಿತ್ರ ಸದ್ಭಾವ | ಕ್ರೋಧ ಸತ್ಯ ವಚನ ||
ಕ್ಷಮೆ ದಮೆ ಭವಿ ಭಕ್ತ | ಭೇದ ಸತ್ಪಾತ್ರದ್ರವ್ಯಾರ್ಪಣ ||
ಅಕ್ಕನ ಈ ವಚನ ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿತವಾದ ಭಕ್ತಿಯ ತುರೀಯಾವಸ್ತೆ. ಅಸಾಮಾನ್ಯ ಅನುಭವಗಳನ್ನು ಸಾಧಾರಣೀಕರಿಸುವುದು ಕವಿ ಪ್ರತಿಭೆಗೆ ಮಾತ್ರ ಸಾದ್ಯ. ಆಕೆಯ ಭಾಷೆಯ ಬಳಕೆಯಲ್ಲಿ ಸದಾಚಾರದ ರೂಪಕದ ಶಕ್ತಿ ಇದೆ. ಅರಿವಿದೆ ಸದಾಚಾರ ವರ್ಣನೆಯಲ್ಲಿ ಶಿವನೊಂದಿಗೆ ತನ್ನ ಪ್ರೀತಿ ಭಕ್ತಿಯನ್ನು ವ್ಯಕ್ತಪಡಿಸುತ್ತಾಳೆ. ಭಕ್ತನಾದವನಿಗೆ ಆಧ್ಯಾತ್ಮ ಜ್ಞಾನದ ಅರಿವಿನ ಅಗತ್ಯತೆಯನ್ನು ಸಮ್ಯಕ್ ಜ್ಞಾನದ ಮೂಲಕ ಸ್ಪಷ್ಟ ಪಡಿಸುತ್ತಾಳೆ.
ಸದಾಚಾರಿಯಾದವನಿಗೆ ಒಳ್ಳೆಯ ನಡೆ ನುಡಿ ಅಸಾಯಕರಿಗೆ ಸ್ತ್ರೀಯರಿಗೆ ಅಮಾಯಕರಿಗೆ ಸಹಾಯಮಾಡುವ ವಿಶಾಲವಾದ ಹೃದಯವಿರಬೇಕು. ಸಚ್ಛಾರಿತ್ರ್ಯ ವಿರಬೇಕು ಎಂಬ ಹಂಬಲ ಅಕ್ಕನದು. ನುಡಿದಂತೆ ನಡೆಯುವ ಶ್ರೇಷ್ಠ ಮೌಲ್ಯಯುತವಾದ ಸಂದೇಶ. ಇದು ಸದಾಚಾರದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ವ್ಯಕ್ತಿಯ ಸತ್ಪಾತ್ರದ ಜೊತೆಗೆ ವ್ಯಕ್ತಿತ್ವ ವಿಕಸನವಾಗುವ ಶರಣ ಸಿದ್ದಾಂತವಾಗಿದೆ. ಇದು ಅಕ್ಕನ ಮನಸ್ಥಿತಿಯೂ ಹೌದು. ಸದಾಚಾರ ಸದ್ಗುಣಗಳನ್ನು ಅರ್ಪಿಸಿಕೊಂಡು ಕೆಟ್ಟ ಗುಣಗಳಿಂದ ಮುಕ್ತತೆಯನ್ನು ಪಡೆಯಬೇಕೆಂಬ ಉತ್ಸಾಹ ಅಕ್ಕನದು.
ವಿಶ್ವ ಸಂದೇಶ ಸಾರಿದ ಬಸವಣ್ಣನಂಥ ಮಹಾ ಚೇತನರು ವಿಶ್ವಮಾನವರಾಗಿ ಭಕ್ತಿ ಸಿದ್ದಾಂತದಲ್ಲಿ ಗುರುತಿಸಿ ಕೊಂಡದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಶರಣ ಧರ್ಮದ ಮೊದಲ ಪ್ರತಿಪಾದನೆ “ದಯಾಭಾವ”. ಸಕಲ ಜೀವ ರಾಶಿಗಳಿಗೆ ಲೇಸನ್ನು ಬಯಸುವ ಉದಾರತೆ ಈ ಧರ್ಮದ ತಿರುಳು. ಸಪ್ತವ್ಯಸನಗಳನ್ನು ಸುಟ್ಟುಕೊಂಡು ಅದರ ಬೂದಿಯನ್ನು ಅನುಭೂತಿಯನ್ನಾಗಿಸಿ ಕೊಂಡವರು ಶರಣರು. ಬಹಿರಂಗದೊಂದಿಗೆ ಅಂತರಂಗದಲ್ಲೂ ಸರಳತೆಯ ಆಚಾರ ವನ್ನನುಸರಿಸುವುದೇ ಸದಾಚಾರ. ಒಳ್ಳೆಯ ಆಚಾರವಿಲ್ಲದಿದ್ದರೆ ಅದು ಕೇವಲ ತೋರಿಕೆಯ ಭಕ್ತಿಯಾಗುತ್ತದೆ. ಹಣೆಯ ಮೇಲೆ ವಿಭೂತಿ ಇದ್ದು ನಡೆಯಲ್ಲಿ ಅನುಭೂತಿ ಇಲ್ಲದಿದ್ದರೆ ಕೊರಳಲ್ಲಿ ಲಿಂಗವಿದ್ದು ನಡೆಯಲ್ಲಿ ಗುಣವಿಲ್ಲದಿದ್ದರೆ ಇದೆಂಥಾ ಸದಾಚರವಾಗುವುದು. ಅಕ್ಕನ ಈ ವಚನ ಗಮನಿಸ ಬೇಕು.
ಕಲ್ಯಾಣಕ್ಕೆ ಕೈಲಾಸವೆಂಬ | ನುಡಿ ಹಸನಾಯಿತ್ತು ||
ಒಳಗೂ ಕಲ್ಯಾಣ | ಹೊರಗೂ ಕಲ್ಯಾಣ ||
ಇದರಂತುವನಾರು | ಬಲ್ಲವರಯ್ಯ ||
ನಿಮ್ಮ ಸತ್ಯ ಶರಣರ | ಸುಳುಹು ತೋರುತ್ತಿದೆಯಯ್ಯಾ ||
ನಿಮ್ಮ ಶರಣ | ಬಸವಣ್ಣನೆಂಬ ಕಾಂಬೆನೆಂಬ ||
ತವಕ ವೆನಗಾಯಿತು ಕೇಳಾ | ಚೆನ್ನಮಲ್ಲಿಕಾರ್ಜುನ ||
ಅಕ್ಕನಿಗೆ ಕಲ್ಯಾಣ ಪಟ್ಟಣ ಎನುವುದು ಸಂಕೇತ. ಕಲ್ಯಾಣವೆನ್ನುವುದು ಕನ್ನಡ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿದ ನಿಜ ಕಲ್ಪನೆ. ಬಸವಾದಿ ಪ್ರಮಥರ ಸದ್ವಿಚಾರ ಗೋಷ್ಠಿಯ ನೆನಪಿನ ಅಂಗಳವದು. ಕಲ್ಯಾಣ ವೆನ್ನುವುದು ಇಷ್ಟಲಿಂಗದ ಚಾರಿತ್ರಿಕ ರೂಪ. ಕಲ್ಯಾಣವೆನ್ನುವುದು ಜಂಗಮ ತತ್ವ. ಇವೆಲ್ಲಾ ಅಕ್ಕನಿಗೆ ಶಾಶ್ವತವಾಗಿ ಉಳಿದಿರುವ ಸ್ಥಿತಿ.
ಅಕ್ಕನ ಪ್ರಕಾರ ಕಲ್ಯಾಣ ವೆನ್ನುವುದು “ಸಾವಿಲ್ಲದ ಕೇಡಿಲ್ಲದ ಆಧ್ಯಾತ್ಮಿಕ ಆದರ್ಶ”. ಆದ್ದರಿಂದ ಅಕ್ಕನಿಗೆ ಆಧ್ಯಾತ್ಮದ ಜಗತ್ತು ಕಲ್ಯಾಣವೇ. “ಕಲ್ಯಾಣಕ್ಕೆ ಕೈಲಾಸವೆಂಬ ನುಡಿ ಹಸನಾಯಿತ್ತು” ಎನ್ನುತ್ತಾಳೆ”. ಮನೋಮಯನಾದ ಶಿವನವಾಸ ಸ್ಥಾನವದು ಆಕೆಗೆ. ಅಕ್ಕನ ಭಾವುಕತೆಯ ಕ್ಷೇತ್ರ. ಸರ್ವಾಚಾರ ಸಂಪತ್ತಿನ ಚೆನ್ನಮಲ್ಲಿಕಾರ್ಜುನನ ಕೈಲಾಸವಾಗಿದೆ. ಹೀಗಾಗಿ ಮುಗ್ದ ಶ್ರದ್ದೆಯ ಮೂಲಕ ಭಕ್ತಿಯ ಪದವಿಯನೇರುವುದಕ್ಕೆ ಶ್ರೀ ಗುರು ಹೇಳಿದ ಸದಾಚಾರವೇ ಸೋಪಾನ ಅಕ್ಕನಿಗೆ.
ಈ ಹಿನ್ನೆಲೆಯಲಿ ಪಂಚ ಕೋಶಗಳು ಪ್ರಕೃತಿಯ ಗುಣಗಳು ಆದ್ಯಾತ್ಮದ ಶಕ್ತಿಗಳು. ಅಮೂರ್ತ ವಿಶ್ವ ಪಯಣ. ಅನ್ನಮಯ ಪ್ರಾಣಮಯ ಕೋಶಗಳು ಅವಶ್ಯಕತೆಗಳನ್ನು ಪೂರೈಯಿಸುವದಕ್ಕೆ ಅಷ್ಟೇ ದುಡಿಯುವಂತಾಗಬಾರದು. ಮನೋಮಯ ವಿಜ್ಞಾನಮಯ ಆನಂದ ಮಯ ಕೋಶಗಳತ್ತಲೂ ಮೇಲೇರುವಂತಾಗಬೇಕು. ಅನ್ನಮಯಕ್ಕಾಗಿ ಮಾಡುವ ಕರ್ಮಗಳು ಆನಂದಮಯ ದತ್ತ ಕೊಂಡೊಯುವಂತಿರ ಬೇಕು. ಅಂಗಗುಣಗಳು ಲಿಂಗ ಗುಣ ಗಳಾಗಿ ಪರಿವರ್ತಿತವಾಗಬೇಕು. ಅದೇ ನಿಜವಾದ ಸದಾಚಾರ .
ಸದಾಚಾರದ ಆರ್ಥತೆ ನಮ್ಮ ನಿತ್ಯ ಜೀವನದ ಬಳುವಳಿಯಾಗಿದೆ. ಅವುಗಳನ್ನು ಎಂಟು ವಿಭಾಗ ಮಾಡಲಾಗಿದೆ. ಉತ್ಪನ್ನ ಶೀಲ, ಆಚಾರ ಶೀಲ, ಉದ್ಯೋಗ ಶೀಲ, ಉತ್ಕುಲ ಶೀಲ, ಸಂಬಂದ ಶೀಲ, ಪ್ರಸನ್ನ ಶೀಲ, ಉತ್ತಮ ಶೀಲ, ಜ್ಞಾನ ಶೀಲವಾಗಿದೆ. ಈ ಹಿನ್ನೆಲೆಯಲ್ಲಿ ಶರಣರು ಸದಾಚಾರವನ್ನು ಮುಕ್ತ ಮನಸ್ಸಿನಿಂದ ಪ್ರಕಟಿಸುತ್ತಾರೆ. ಅದರಲ್ಲಿ ಈ ಎಂಟು ಬಗೆಗಳು ದೀಕ್ಷನು ಪಡೆದ ನಂತರ ಲಿಂಗ ಪೂಜೆ ಧ್ಯಾನಗಳಿಂದ ಲಿಂಗಗುಣಗಳನ್ನು ಅಳವಡಿಸಿಕೊಳ್ಲುವ ಪ್ರಯತ್ನ ಉನ್ನತ ಶೀಲವೆಂದು ಕರೆಯಲಾಗಿದೆ. ತಾನೊಬ್ಬನೆ ಮಾತ್ರವಲ್ಲದೆ ಎತರರನ್ನು ತೊಡಗಿಸಲು ನೆರವಾಗುವುದು ಆಚಾರಶೀಲ.
ಉದ್ಯೋಗಶೀಲ ಸದಾಚಾರದಲ್ಲಿ ಬಹಳ ಮಹತ್ವವಿದೆ. ಪರಾವಲಂಬಿಯಗದೆ ಯಾವುದಾದರು ಒಂದು ಉದ್ಯೋಗವನ್ನು ಕೈಕೊಂಡು ಸತ್ಯ ಶುದ್ದವಾದ ಕಾಯಕ ಮಾಡುವದು ಶರಣರ ಕಾಯಕ ಸಿದ್ದಾಂತಕ್ಕೆ ಅದ್ವಿತೀಯವಾದ ಕಾಣಿಕೆ ಇದು. ಉತ್ಕಲಶೀಲ ಜೀವನದ ಸಮಗ್ರ ದೃಷ್ಟಿಯನ್ನು ಕುರಿತು ನೈತಿಕ ನಿಯಮಗಳು ಉಕ್ತವಾಗಿವೆ.
ಈ ಎಲ್ಲಾ ನೈತಿಕ ಅಂಶಗಳು “ಬಸವಣ್ನನವರ ಕಳಬೇಡ ಕೊಲಬೇಡ”- ಇಂಥಹ ಅನೇಕ ವಚನಗಳಲ್ಲಿ ಸದಾಚಾರದ ಅಂಶಗಳು ಸೂಚಿತವಾಗಿವೆ. ಅಂದು ಶರಣರು ತಮ್ಮ ಸಮಕಾಲೀನ ಹಿರಿಯರೊಂದಿಗೆ ಸದಾಚಾರ ಸದ್ಗುಣಗಳನ್ನು ಅರಗಿಸಿಕೊಂಡು ಕೆಟ್ಟ ಗುಣಗಳಿಂದ ಮುಕ್ತತೆ ಪಡೆದರು. ಅವರ ಪ್ರಕಾರ ಸರಳ ಶಾಂತ ಸಾತ್ವಿಕ ಜೀವನವನ್ನು ರೂಪಿಸಿಕೊಳ್ಲಬೇಕೆಂಬುದು ಸದಾಚಾರದ ಸಂಕೇತ ಭಾಷೆಯಾಗಿದೆ.
ಶರಣ ಧರ್ಮದ ಸದಾಚಾರ ನಮ್ಮ ಭಾರತೀಯ ಸಂಸಕೃತಿಯ ತೌಲನಿಕ ತಾತ್ವಿಕತೆಯಾಗಿದೆ. ಸಂಸ್ಕಾರದಿಂದ ಸಂಸ್ಕೃತಿಯೆಂದು ಪವಿತ್ರೀಕರಿಸಿ ಹೇಳುತ್ತೇವೆ. ನಮ್ಮ ನಡೆ ನುಡಿ ಆಚಾರ ವಿಚಾರ ಗುರು ಹಿರಿಯರನ್ನು ಗೌರವ ಆದರಗಳಿಂದ ಕಾಣುವುದು ಅತಿಥಿಗಳನ್ನು ಗೌರವಿಸಿ ಯೋಗ ಕ್ಷೇಮ ಕುಶಲತೆಗಳನ್ನು ಕೇಳುವುದು ನಮ್ಮ ಧರ್ಮದ ಸಂಸ್ಕ್ರತಿಯಾಗಿದೆ. ಇದು ಶರಣರ ಸದಾಚಾರ ಭಕ್ತಿಯ ಅನುಕರಣೀಯವೂ ಹೌದು.
ಹೀಗಾಗಿ ಒಬ್ಬ ವ್ಯಕ್ತಿಯ ಸಂಸ್ಕ್ರುತಿ ನಿಖರವಾಗಿ ವ್ಯಕ್ತವಾಗುವುದು ಆ ವ್ಯಕ್ತಿ ಸುಸಂಸ್ಕೃತ ಎನಿಸಿ ಕೊಂಡಾಗ ಮಾತ್ರ ಸದಾಚಾರವೆಂಬ ಸಂಸ್ಕೃತಿಯನ್ನು ಅಪೇಕ್ಷಿಸುವುದು ನಮ್ಮ ಪಂಚೇಂದ್ರಿಯ ಅತೀಂದ್ರಿಯ ಶಕ್ತಿಗಳು. ಕಣ್ಣು, ಕವಿ, ಮೂಗು, ನಾಲಿಗೆ ಮತ್ತು ಚರ್ಮ. ಇವುಗಳ ಕಾರ್ಯ ತತ್ಪರತೆಗಳನ್ನು ಗಮನಿಸಿದರೆ ಸದಾಚಾರದ ಪರಿಚಯ ವಾಗುತ್ತದೆ. ಆದ್ದರಿಂದ ಶರಣರು ಪಂಚೇಂದ್ರಿಯಗಳನ್ನು ಗೆದ್ದು ಮನಃ ಶಾಸ್ತ್ರವನ್ನು ಅರಿತವರಾಗಿದ್ದರು. ಮನೋಮಯನಾದ ಶಿವನನ್ನು ಪಂಚಮುಖಿ ಪಂಚಾಚಾರದ ದೈವವೆಂದು ತಿಳಿದಿದ್ದರು. ಹೀಗಾಗಿ ಸಾಧಕನನ್ನು ಭಕ್ತ ಸ್ಥಲಕ್ಕೆ ಅರ್ಹನನ್ನಾಗಿ ಮಾಡಿ ಅವನಿಗೆ ಪಾರಾಮಾರ್ಥಿಕ ಅರ್ಹತೆಯನ್ನು ಅನುಭಾವದ ಶಕ್ತಿಯನ್ನು ಹೆಚ್ಚಿಸಿದೇ ಪಂಚಾಚಾರವಾಗಿದೆ.
-ಡಾ.ಸರ್ವಮಂಗಳ ಸಕ್ರಿ, ಕನ್ನಡ ಉಪನ್ಯಾಸಕರು
ರಾಯಚೂರು
—————————————————————————-