ಇತಿಹಾಸ ಪ್ರಸಿದ್ಧ ವಿವಾಹ

ಇತಿಹಾಸ ಪ್ರಸಿದ್ಧ ವಿವಾಹ

ಗ್ರಂಥ -ಕುಲಕ್ಕೆ ತಿಲಕ
ಸಮಗಾರ ಹರಳಯ್ಯ
ಲೇಖಕರು ಡಾ ಎಸ್.ಬಿ ಹೊಸಮನಿ

(ಡಾ.ಎಸ್.ಬಿ.ಹೊಸಮನಿ ಅವರ ಪುಸ್ತಕದಿಂದ ಆಯ್ದ ಭಾಗ)

ಅನುಭವ ಮಂಟಪ, ಶರಣ ಶರಣೆಯರು ಸಾಲಾಗಿ ಶಿಸ್ತಿನಿಂದ ಕುಳಿತುಕೊಂಡಿದ್ದಾರೆ. ಶರಣ ಹರಳಯ್ಯ , ಮದುವಯ್ಯನವರು ಮೊದಲನೆಯ ಸಾಲಿನಲ್ಲಿ ಕುಳಿತಿದ್ದಾರೆ. ಶೂನ್ಯ ಪೀಠಾಧಿಪತಿ, ವೈರಾಗ್ಯಮೂರ್ತಿ ಪ್ರಭುದೇವರು ಅಣ್ಣನವರಿಗೆ ಸಭೆಯನ್ನು ಪ್ರಾರಂಭಿಸಲು ಸೂಚನೆಯನ್ನಿತ್ತರು, ಶುಭಮಂಗಳಗಳೊಂದಿಗೆ ಸಭೆ ಪ್ರಾರಂಭವಾಯಿತು.

ಬಸವೇಶ್ವರರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ”ಪೂಜ್ಯ ಶರಣ ಬಂದುಗಳೇ, ಇಂದಿನ ವಿಶೇಷವೇನೆಂದರೆ ಮಹಾಶರಣರೊಬ್ಬರು ಸ್ವಯಂ – ಸ್ಫೂರ್ತಿಯಿಂದ ನಮ್ಮೊಡನೆ ಸೇರಿ ನಮ್ಮೆಲ್ಲರ ಸಂತೋಷವನ್ನು ಹೆಚ್ಚಿಸಿದ್ದಾರೆ. ನಮಗೆ ಹರನೇ ಮೂಲ. ನಮ್ಮ ಬಳಗವೆಂದರೆ ಪುರಾತನರು ಹಾಗೂ ಮಹಂತರು, ನಮ್ಮಲ್ಲಿ ಎಲ್ಲ ಜಾತಿ, ಮತ, ಕುಲದವರಿಗೂ ಅವಕಾಶವಿದೆ. ಸರ್ವರೂ ಸಮಾನರು, ಮಂತ್ರಿಗಳೂ, ಹಿರಿಯರೂ ಆದಂಥ ಮಾನ್ಯ ಮಧುವಯ್ಯನವರು ಇಂದು ಶಿವಭಕ್ತರಾಗಿದ್ದಾರೆ. ಸ್ವಯಂ ಸ್ಪೂರ್ತಿಯಿಂದ ಅವರು ಶರಣ ಧರ್ಮ ಸ್ವೀಕರಿಸಿ ಶರಣರಾಗಿದ್ದಾರೆ. ಅವರಿಗೆ ತಮ್ಮೆಲ್ಲರ ಪರವಾಗಿ ನಮ್ಮ ಹಾರ್ದಿಕ ಸ್ವಾಗತ”

ಬಸವಣ್ಣನವರು ತಮ್ಮ ಸ್ಥಾನವನ್ನಲಂಕರಿಸಿದರು.

ಮಧುವರಸರು ಮುಗಿದ ಕೈಗಳಿಂದ ಮೇಲಿದ್ದರು. ಶರಣ ಶರಣೆಯರೆಲ್ಲ ಶರಣು ಶಿವಶರಣ ಮಧುವಯ್ಯನವರಿಗೆ’ ಎಂದು ಜಯಘೋಷ ಮಾಡಿದರು. ಮಧುವಯ್ಯನವರು ಮತ್ತೆ ವಂದಿಸಿದರು. ಅವರು ಆನಂದದಿಂದ ನೆರೆದ ಶರಣಸ್ತೋಮವನ್ನು ನೋಡಿದರು. ಎಲ್ಲರ ಹಣೆಯ ಮೇಲೆಯೂ ವಿಭೂತಿಯು ಶುಭ್ರವಾಗಿಯೂ, ಶೋಭಾಯಮಾನವಾಗಿಯೂ ಹೊಳೆಯುತ್ತಿತ್ತು. ಮುಖದ ಮೇಲೆ ಕಾಂತಿ ಚಿಮ್ಮುತ್ತಿತ್ತು. ಮಧುವಯ್ಯನವರು ‘ಬಂಧುಗಳೇ, ಪೂಜ್ಯ ಶರಣರೇ ಯಾವ ಜನ್ಮದ ಪುಣ್ಯವೋ ನಾನರಿಯೇ, ಇದೀಗ ನನ್ನ ಅಜ್ಞಾನದ ಪೊರೆ ಸರಿದು ಜನ್ಮಾಂತರದ ಕಾಳಿಕೆ ಕಳೆದು ಹೋಗಿದೆ. ತಮ್ಮೆಲ್ಲರ ಕೃಪಾಶೀರ್ವಾದಗಳಿಂದ ನಾನು ತಮ್ಮೊಡನೆ ಕೂಡಿಕೊಂಡಿದ್ದೇನೆ. ಇದರ ಸವಿನೆನಹಿಗಾಗಿ ಹಾಗೂ ಈ ಕೃತಜ್ಞತೆ ಯ ಸೂಚನಾರ್ಥವಾಗಿ ನಾನೊಂದು ಕಾರ್ಯವನ್ನು ಸಂಕಲ್ಪಿಸಿದ್ದೇನೆ. ಅದನ್ನು ತಾವೆಲ್ಲರೂ ಪ್ರೀತಿಯಿಂದ ಒಪ್ಪಿ, ನನ್ನನ್ನಪ್ಪಿ ಆಶೀರ್ವದಿಸಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಪರಮಗುರು ನನಗೆ ಪುನರ್ಜನ್ಮವನ್ನಿತ್ತವರು ಮಹಾತ್ಮ ಹರಳಯ್ಯನವರು.ಹರಳಯ್ಯನವರ ಸುಪುತ್ರ ಶೀಲವಂತನಿಗೆ ನನ್ನ ಏಕೈಕ ಪುತ್ರಿ ಲಾವಣ್ಯವತಿಯನ್ನು ಧಾರೆ ಎರೆದುಕೊಡುವುದು ನನ್ನ ಸಂಕಲ್ಪ ಇದಕ್ಕೆ ತಮ್ಮೆಲ್ಲರ ಒಪ್ಪಿಗೆ ಮಹತ್ವವಾದುದು ಹಾಗೂ ಮುಖ್ಯವಾದುದು, ಶರಣರು, ಜಯಪೋಷ ಮಾಡಿದರು, ಆದರೆ ಪ್ರಭುದೇವ ಹಾಗೂ ಬಸವಣ್ಣನವರು ಯೋಚನೆಯಲ್ಲಿದ್ದುದು ಶರಣರ ಗಮನವನ್ನು ಸೆಳೆಯಿತು. ಸಭೆಯಲ್ಲಿ ಸ್ವಲ್ಪ ಕಾಲ ಮೌನ ಆವರಿಸಿತು.

‘ಇದಕ್ಕೆ ನಿನ್ನ ವಿಚಾರವೇನು ಬಸವಣ್ಣ?’ ಪ್ರಭುದೇವರ ಪ್ರಶ್ನೆಗೆ ಬಸವಣ್ಣನವರು. ಇದು ನಿಜವಾಗಿಯೂ ಸಂತಸಕರವಾದ ವಿಷಯ, ಮಾತು ಕೃತಿಗೆ, ವಿಚಾರವನ್ನು ಆಚಾರಕ್ಕೆ ತರಲು ಇದೊಂದು ಸುವರ್ಣ ಸಂದರ್ಭ ಜಾತಿ ಈ ಜಾತಿ ಎಂದು ಕಚ್ಚಾಡುವ, ನಾ ಮೇಲು ನೀ ಮೇಲು ಎಂದು ಕೂಗಾಡುವ ಸದ್ಯದ ಸಂದರ್ಭದಲ್ಲಿ ಸಹ ಭೋಜನಕೂಟ ಏರ್ಪಡಿಸುವುದಾಗಲಿ ವಿವಾಹವೇರ್ಪಡಿಸುವುದಾಗಲೀ ಜಾತೀಯತೆಯ ಕುಲಕಟ್ಟುಗಳು ಸಡಿಲವಾಗುವುದಲ್ಲದೆ ಮದುವೆಯಿಂದ ಜಾತಿಯ ಕಟ್ಟು ಒಡೆದು ಹೋಗುವುದು. ಆತ್ಮೀಯತೆಯು ಬೆಳೆಯುವುದು. ಈಗ ಸಮಾಜ ತುಂಡು-ತುಂಡಾಗಿದೆ. ಜಾತೀಯತೆ ತಾ೦ಡವವಾಡುತ್ತಲಿದೆ. ಈ ಸಂದರ್ಭದಲ್ಲಿ ಈ ವಿವಾಹ ಮಾಡುವುದರಿಂದ ನಾವು ಕೈಕೊಂಡ ಜಾತ್ಯತೀತ ಸಮಾಜ ರಚನೆಗೆ ಅಖಂಡ ವಸ್ತುವಾಗುತ್ತದೆ’ ಉ೦ಬುದು-ಉಡುವುದು, ಕೊ೦ಬುದು-ಕೊಡುವುದು ಎರಡೂ ಬೆಳೆಯಬೇಕು. ಈ ಸುವರ್ಣ ಸಂದರ್ಭಕ್ಕೆ ನಾನು ಬಹುದಿನದಿಂದ ಹಾತೊರೆಯುತ್ತಿದ್ದೆ. ಸುಂದರ ಸಮಾಜ ನಿರ್ಮಾಣವಾಗಬೇಕಾದರೆ ಸಹ ಭೋಜನಗಳು ಹಾಗೂ ವಿವಾಹಾದಿಗಳು ಸಾಧನಗಳು, ನಾವಂತೂ ಈಗ ಪರಸ್ಪರ ಸಹ ಭೋಜನವನ್ನು ಆಚರಣೆಯಲ್ಲಿ ತಂದಿದ್ದೇವೆ. ದಿನ ನಿತ್ಯವೂ ಪರಸ್ಪರ ಭೋಜನಕೂಟಗಳು ನಡೆದೇ ಇವೆ. ಎರಡನೆಯದು ವಿವಾಹ, ಅತಿ ಪ್ರಾಮುಖ್ಯವಾದುದು ಹಾಗೂ ಮಹತ್ವವಾದುದು. ಇದಕ್ಕೆ ಅವಕಾಶ ಇನ್ನೂ ದೊರೆತಿಲ್ಲ. ನನ್ನಷ್ಟಕ್ಕೆ ನಾನೇ ಹೇಳಬೇಕೆಂದರೆ ನನಗೆ ತೃಪ್ತಿಯುಂಟು. ನಮ್ಮ ತತ್ವವು ಕ್ರಿಯಾರೂಪಕ್ಕೆ ಬರಲು ಒಂದು ಮಹಾಕಾಲ ಸನ್ನಿಹಿತವಾಗಿದೆ. ಈ ದೃಷ್ಟಿಯಲ್ಲಿ ನಮ್ಮ ಹೋರಾಟ ಯಶಸ್ವಿಯಾಗುವ ನಿರೀಕ್ಷೆಯೂ ಇದೆ. ಈಗಂತೂ ನಾವುಗಳೆಲ್ಲರೂ ಕೂಡಿಕೊಂಡು ಉತ್ಸಾಹದಿಂದ, ನಿಷ್ಠೆಯಿಂದ ಭಕ್ತಿಯಿಂದ ಮಾನವ ಮಾನವರಲ್ಲಿದ್ದ ಜಾತಿಭೇದ, ವರ್ಣಭೇದ, ಲಿಂಗಭೇದ, ಮೇಲು-ಕೀಳಿನ ಮನೋಭಾವನೆ ಮತ್ತು ಸಾಮಾಜಿಕ, ಆರ್ಥಿಕರಂಗಗಳಲ್ಲಿ ಅಸಮತ-ವಿಷಮತ ಇವುಗಳ ವಿರುದ್ಧ ಹೋರಾಡಿ ಜಯಗಳಿಸತೊಡಗಿದ್ದೇವೆ. ನಾನು ಬಹುದಿನಗಳಿಂದ ಒಂದು ಕನಸ್ಸನ್ನು ಕಾಣುತ್ತಿದ್ದೆ. ಆ ಕನಸಿನ ವಿವರ ಹೀಗಿದೆ ; ‘ವಿಶ್ವಪ್ರೇಮ ಸಾಮರಸ್ಯದ ಬುನಾದಿಯ ಯ ಮೇಲೆ ಸದ್ದುಣ
ಸುವಿಚಾರ ಸದಾಚಾರಗಳ ಇಟ್ಟಂಗಿಯನ್ನು ಜೋಡಿಸಿ ಸ ಹೃದಯತೆಯ ಗೋಡೆಯನ್ನು ಕಟ್ಟಿ ಶಿವಕಾರುಣ್ಯದ ಮೇಲ್ಛಾವಣಿ ಯ ಕೆಳಗೆ ಕಲ್ಯಾಣ ರಾಜ್ಯವನ್ನು ಕಟ್ಟಬೇಕು’ ಎಂಬ ಕನರು ಈಗ ನನಸಾಗತೊಡಗಿದೆ ಈಗ ಈ ವಿವಾಹವೊಂದನ್ನು ನೆರವೇರಿಸಿದರೆ ನಮ್ಮ ತತ್ತ್ವಗೃಹಕ್ಕೆ ಈ ವಿವಾಹವು ಕಳಶಪ್ರಾಯವಾಗುವುದು. ಶರಣರು ಯಾವುದಕ್ಕೂ ಹಿಂಜರಿಯುವವರಲ್ಲ; ಬರಿಯ ಮಾತಿನ ವೀರರಲ್ಲ ಕೃತಿವೀರರೂ ಹೌದೆಂಬ ನುಡಿ ವಿಶ್ವಕ್ಕೆ ವೇದ್ಯವಾದೀತು, ನಿಜ ಇದೆಲ್ಲಾ ಒಳ್ಳೆಯದೇ. ಆದರೆ…

‘ಆದರೇನು ಬಸವಣ್ಣ-ಹೇಳು, ಸಂಕೋಚ ಪಡದೆ ಹೇಳು’ ಎಂದರು. ಪ್ರಭುದೇವರು.

‘ಸಮಾಜವು ನಾವು ತಿಳಿದಷ್ಟು ಪಕ್ವವಾಗಿಲ್ಲ. ಕುರುಡು ನಂಬಿಕೆಗಳನ್ನೇ ಅನುಸರಿಸುತ್ತ ಬಂದಿರುವ ಈ ಸಂಪ್ರದಾಯಬದ್ಧ ಸಮಾಜವು ಇನ್ನೂ ಪಕ್ವವಾಗಬೇಕಾದರೆ ಕಾಲಾವಕಾಶಬೇಕು. ಇಂಥ ಸಮಾಜವು ನಮ್ಮ ಕಾರ್ಯವನ್ನು ನಾವು ಇರಿಸಿಕೊಂಡ ನಿಸ್ವಾರ್ಥ ಸೇವೆಯ ಗುರಿಯನ್ನು, ಕಲ್ಯಾಣದ ದಾರಿಯನ್ನು ಅರ್ಥ ಮಾಡಿಕೊಳ್ಳುವಷ್ಟು ಶಕ್ತಿಯನ್ನು ಪಡೆದಿಲ್ಲ. ಇಂಥದರಲ್ಲಿ ಈ ಕಾರ್ಯವನ್ನು ಕೃತಿಗಿಳಿಸಿದರೆ ಅನೇಕ ವಿಪತ್ತುಗಳು ಬರಬಹುದಲ್ಲದೆ ಕ್ರಾಂತಿಯಾಗುವ ಸಂಭವವೂ ಇದೆ. ಅದು ಕಾರಣ-

‘ಖಂಡಿತವಾಗಿ, ಅಣ್ಣನವರೇ, ನನ್ನದೂ ಇದೇ ಅಭಿಪ್ರಾಯ’ ಹರಳಯ್ಯನವರು ನುಡಿದರು.

ಅದಕ್ಕೆ ಮಧುವಯ್ಯನವರು ‘ಕಾಂತ್ರಿಯಾಗಲಿ ಬಸವಣ್ಣನವರೆ ? ಶರಣರು ಇದಕ್ಕಂಜಿ ತಮ್ಮ ಸತ್ಯದ ದಾರಿಯನ್ನಾಗಲಿ, ತತ್ತ್ವದ ನಿಷ್ಠೆಯನ್ನಾಗಲೀ ಬಿಡಬಹುದೆ? ಅಲ್ಲದೆ ಶರಣರಾದವರು ವಿಪತ್ತಿಗೆ ಹೆದರಬೇಕೆ?’

‘ನಿಜ, ಮಧುವಯ್ಯನವರೆ, ನಿಜ, ವಿಪತ್ತಿಗೆ ನಾನಂಜಲಾರೆ, ಈ ಕಾರ್ಯವನ್ನು ನಾನೇ ಪೂರೈಸುವುದಾಗಿದ್ದರೆ ನಾನಾಗಲೇ ಮುಗಿಸಿಬಿಡುತ್ತಿದ್ದೆ. ಆದರೆ `ಈಗ ತ್ಯಾಗ, ದೃಢ ಮನಸ್ಸು ಬೇಕಾಗಿರುವುದು ನಿಮ್ಮಿಂದ.’

‘ಅಣ್ಣನವರೇ, ನೀವು ನಮ್ಮೆಲ್ಲರ ಹೃದಯ ಸ್ವರೂಪರು. ಶರಣರಾದ ನಾವೆಲ್ಲರೂ ನಿಮ್ಮ ಕಾರ್ಯಾಂಗಗಳು, ಬಿಡಿ ಬಿಡಿ ಅಂಗಗಳು: ಇಡಿಯಾಗಿಯೇ ಇವು ಕಾರ್ಯ ಮಾಡುವವರು, ನಿಮ್ಮ ಸಂಕಲ್ಪದಂತೆಯೇ ನಾವು ಕಾರ್ಯಪ್ರವೃತ್ತರಾಗುವವರು.ಮೇಲಾಗಿ ಈ ತತ್ತ್ವದ ಪ್ರಮಾಣಿಕ ಅನುಯಾಯಿ ಆಗಬೇಕಾದರೆ ತತ್ತ್ವ ದ, ಪಾಲನೆ ಮಾಡಬೇಕಾದರೆ ತತ್ತ್ವದ ಬಗ್ಗೆ ಅಭಿಮಾನ ನಿಷ್ಠೆ ಬೇಕಾದರೆ ಪ್ರಾಣಗಳನ್ನು ತ್ಯಾಗಮಾಡಿಯೇ ಬರಬೇಕು, ಇದಿಲ್ಲದವನು ಇದರ ಅನುಯಾಯಿಯೆಂತಾದನು ? ಹೇಳಿ, ಅಣ್ಣನವರೇ ಮದುವರಸರು ನುಡಿದರು.

‘ಧನ್ಯ ಶರಣ ಮಧುವಯ್ಯ, ಧನ್ಯ ಧನ್ಯ

‘ಅಣ್ಣನವರೇ ನಾನು ನನ್ನ ಹೆಂಡತಿ ಮಕ್ಕಳ ಪ್ರಾಣಕ್ಕಾಗಿ ಹೆದರಲಾರೆನು ನನ್ನ ಅಭಿಪ್ರಾಯವಿಷ್ಟೇ, ಇದರಿಂದಲೇ ಕಲ್ಯಾಣಕ್ಕೆ ಕೆಡಾಯಿತೆಂಬ ಅಪವಾದ ಬಾರದಿರಲೆಂಬ ಆಶಯ, ಹೋಗಲಿ, ಬರೀ ಅಪವಾದಕ್ಕೆ ನಾನಂಜಲಾರೆ ಇಂದು ಕಲ್ಯಾಣಿ ಕಾಲಜ್ಞಾನ ಕಂಡಿದ್ದಾಳಂತೆ’ ಹರಳಯ್ಯನವರು ಹೇಳಿದರು.

‘ನಾನಿಂದು ಇಷ್ಟಲಿಂಗ ಪೂಜೆಯಲ್ಲಿರುವಾಗ ಆ ದರ್ಪಣದಲ್ಲಿ ಭವಿಷ್ಯ ಸೂಚಕ ದೃಶ್ಯಗಳನ್ನು ಕಂಡು ಬೆರಗಾದೆ. ಒಂದು ಪಕ್ಷ ಈ ವಿವಾಹವಾದರೆ ವರ್ಣಸಂಕರವಾಯಿತೆಂಬ ದೃಷ್ಟಿಯಿಂದ ಸಂಪ್ರದಾಯಸ್ಥರು ದೂರನ್ನಿತ್ತು, ರಾಜನನ್ನು ಕೆರಳಿಸುವರು. ಶರಣರ ಕಗ್ಗೊಲೆಯನ್ನು ನಡೆಸುವರಲ್ಲದೆ ಕಲ್ಯಾಣದಲ್ಲಿ ಕ್ರಾಂತಿಯಾಗುವುದು. ರಾಜನ ವಧೆಯೂ ನಡೆಯುವುದು, ಶರಣರು ದಿಕ್ಕು ದಿಕ್ಕಿಗೆ ಅಲೆಯಬೇಕಾಗುವುದು. ಇದು ನಿಶ್ಚಿತವಾದುದು.’ ಕಲ್ಯಾಣಿ ನುಡಿದರು.

‘ಅಣ್ಣನವರೇ, ನಾನಿದಕ್ಕೆ ಹೆದರಲಾರೆ. ಪ್ರಾಣದಾಸೆಗೆ ಬಲಿಯಾಗಿ ಹೊಟ್ಟೆಯ ಹಸಿವೆಗಾಗಿ ಹಾತೊರೆದು ನೂರು ವರುಷ ಬದುಕುವುದಕ್ಕಿಂತಲೂ ಸತ್ಯಕ್ಕಾಗಿ, ತತ್ತ್ವಕ್ಕಾಗಿ ಮೂರೇ ಮೂರು ವರುಷ ಬದುಕಿದರೆ ಸಾಕು. ಅಂಥವನ ಬಾಳು ಸಾರ್ಥಕದ ಬಾಳು, ನೆಮ್ಮದಿಯ ಬಾಳು, ಸತ್ಯವನ್ನು ಸ್ಥಾಪಿಸಲಿಕ್ಕೆ, ತತ್ತ್ವದ ಪರಿಪಾಲನೆಗಾಗಿ ನಮ್ಮ ಬಲಿಯಾದರೂ ಹುತಾತ್ಮರಾಗೋಣ. ಅದಕ್ಕಾಗಿ ನಮ್ಮ ಆತ್ಮಾರ್ಪಣೆಗೈಯೋಣ. ಅದಕ್ಕಾಗಿ ಹೆದರುವುದೇ? ಬಸವ ತತ್ತ್ವಗಳನ್ನು ರೂಪಿಸುವುದು ಹುಲಿಗಳನ್ನಲ್ಲ, ತತ್ತ್ವ ಸಿಂಹವನ್ನು ಎಂದು ಜಗತ್ತು ತಿಳಿಯುವಂತಾಗಲಿ, ಜಾತಿ ರೋಗಕ್ಕೆ ಶರಣರ ತತ್ತ್ವವೆಂಬ ಮಹಾ ಮದ್ದು ಅದಕ್ಕೆ ತಾರಕವಾಗಲಿ’ ಮಧುವರಸರು ಹೇಳಿದರು.

‘ಭಲೆ ಶರಣ, ಮಧುವಯ್ಯ ನೀನು ತತ್ತ್ವಸಿಂಹ; ಧೀರ ಶರಣ ನೀನು. ನನ್ನ ಬಂಧು ನೀನು, ನನ್ನ ಬಳಗ ನೀನು.’

‘ಅಣ್ಣನವರೇ ಈ ವಿವಾಹ ಸಾಂಕೇತಿಕವಾಗಿ ಒಂದು ಘನ ತತ್ತ್ವವನ್ನು ಜಗತ್ತಿಗೆ ಸಾರುವುದಾದರೆ ನಮ್ಮೆಲ್ಲರ ಜೀವ ಅದಕ್ಕೆ ಮುಡಿಪಾಗಲಿ, ನೀವೇ

ಕೇಳದಂತೆ ಮರಣವೇ ಮಹಾನವಮಿಯಾಗಲಿ, ಎಂದಾದರೂ ನಾವು ಸಾಯುವವರೇ, ಆದರೆ ತತ್ತ್ವಕ್ಕಾಗಿ ಸತ್ತರೆ ಅದೇ ಶ್ರೇಯಸ್ಸು ಎಂದರು

ಜಯ ಘೋಷಗಳು ಪ್ರತಿಧ್ವನಿಸಿದವು.

”ಆಕಸ್ಮಿಕವಾದ ವಿಪತ್ತುಗಳನ್ನು ಯಾರಾದರೂ ಎದುರಿಸಬಹುದು. ಅದು ಸಹಜ. ಆದರೆ ವಿಪತ್ತು ಬರುವುದು, ಕ್ರಾಂತಿಯಾಗುವುದು ಗೊತ್ತಿದ್ದೂ ಅದನ್ನೆದುರಿಸಲು ಸಂಕಲ್ಪಿಸುವುದೊಂದು ದೊಡ್ಡ ಸಾಧನೆಯೇ ಸರಿ : ಅಂತೆಯೇ ಯುದ್ಧಕ್ಕೆ ಹೊರಡುವ ಸೈನಿಕನಿಗೆ ಅಮಿತ ಬೆಲೆ, ನಾವೂ ಕೂಡ ಯೋಧರ ಆದರೆ ನಾವು ಧರ್ಮಯೋಧರು’ ಎಂದರು ಮಾಚಿದೇವರು.

‘ನಿಜ ಶರಣರೇ ನಿಜ, ಸಮಾಜದ ಸೇವೆಯಷ್ಟೇ ಅಲ್ಲದೆ ಮಾನವನ ಶರೀರದ ಹೊರಗಾಗಲೀ, ಒಳಗಾಗಲಿ ಯಾವುದೇ ರೀತಿಯ ಪ್ರಗತಿಗೆ ವಿರೋಧಿಸಿದರೂ ಅಂಥ ದುಷ್ಟ ಶಕ್ತಿಯನ್ನು ಮರ್ದಿಸುವುದೇ ನಮ್ಮ ಮಾರ್ಗ ಆದರೆ ಹಿಂಸೆಯಿಂದಲ್ಲ, ಅಹಿಂಸೆಯಿಂದ ಮಾತ್ರ. ಅಹಿಂಸೆಯೇ ನಮ್ಮ ಮೂಲಮಂತ್ರ, ನಮ್ಮ ಬಲಿಯಾದರೂ ಇನ್ನೊಬ್ಬರ ಬಲಿ ಮಾತ್ರ ಬೇಡ, ಈ ಜಾತೀಯತೆಯು ಸಮಾಜವನ್ನು ಬಾಧಿಸುವ ಮಹಾರೋಗದಂತಿದೆ. ಇಂಥದಕ್ಕೆ ಮೈ ಹೋರಾಟ ಹುಮ್ಮಸ್ಸಿನಿಂದ ಅವಿರತವಾಗಿ ಸಾಗಲೇಬೇಕು. ಜಾತಿಯು ದೇವ ರ್ಮಿತವಲ್ಲ. ಅದು ಮಾನವ ಕಲ್ಪಿತವಾದುದು. ಆದರೂ ಈ ಜಾತಿಯ ಬೇರು ಇನ್ನೂ ಕೆಳಗೇ ಇಳಿಯುತ್ತಿದೆ. ಈ ಬೇರನ್ನು ಕೀಳಬೇಕು ಮತ್ತು ಜಾತ್ಯತೀತ ರಾಷ್ಟ್ರ ನಿರ್ಮಾಣವಾಗುವಂತೆ ಪ್ರಯತ್ನಿಸಬೇಕು’ ಚನ್ನಬಸವಣ್ಣ ನುಡಿದರು.

‘ಈ ದೀರ್ಘವಾದ ಆಲೋಚನೆಯಲ್ಲಿ, ಎಲ್ಲ ಶರಣರು ಈ ವಿವಾಹ ವಿಚಾರಕ್ಕೆ ಒಪ್ಪಿಗೆಯನ್ನು ಕರುಣಿಸಿದಂತಾಯಿತು. ಸಂಗಮನಾಥನ ಅನುಗ್ರಹವಿದ್ದರೆ ಹಾವೂ ಕೂಡ ಹೂವಾಗಬಲ್ಲುದು ; ವಿಪತ್ತು ಶುಭ ಪ್ರಸಂಗವಾಗಿ ಮಂಗಳಕರವಾಗಬಹುದು. ಇಲ್ಲವ ಸಂಗನ ಸಂಕಲ್ಪದಲ್ಲಿ ನಮ್ಮೆಲ್ಲರ ಬಲಿದಾನವೇ ಬೇಕಾದರೆ ಅದೇ ಅವನಿಗೆ ನೈವೇದ್ಯವಾಗಲಿ, ಪ್ರೀತಿಯಿಂದ ಅರ್ಪಿಸೋಣ. ಬಾರದು ಬಪ್ಪದು ! ಬಪ್ಪುದು ತಪ್ಪದು ! ಇದಕಂಜಿ ಕೆಡಬೇಡ, ಹೊಸತತ್ತ್ವ, ಆಚರಣೆಗೆ ಬರಬೇಕಾದರೆ, ಅದು ಜನಮನದಲ್ಲಿ ಮೂಡಬೇಕಾದರೆ . ಕ್ರಾಂತಿ ಇಲ್ಲದೆ ಆಚರಣೆಗೆ ಬರುವುದು ಸಾಧ್ಯವಿಲ್ಲ. ತತ್ತ್ವಕ್ಕಾಗಿ ನಮ್ಮನ್ನು ಇನ್ನು ಅರ್ಪಿಸಿಕೊಳ್ಳುವ ಈ ಸುವರ್ಣಾವಕಾಶ ಸಾಮಾನ್ಯವಾದುದಲ್ಲ. ಸಂಪ್ರದಾಯವಾದಿಗಳಿಗೆ ಮನವರಿಕೆ ಮಾಡಿಕೊಳ್ಳೋಣ, ಅವರು ಧಾಮಕರಣೆಯ ಗವಿಯಲ್ಲಿ ಇದ್ದುದರಿಂದ ಅಂಧಾನುಕರಣೆಯ ಗವಿಯಲ್ಲಿಇದ್ದುದರಿಂದ ಅಂಧಕಾರಕ್ಕೆ ಅವರ ಕಣ್ಣುಗಳು

ಒಗ್ಗಿರುತ್ತವೆ. ಇಂಥವರಿಗೆ ಸತ್ಯದ ಬೆಳಕೂ ಸಹಿಸಲಾರದು. ನೂರಾರು ವರುಷ ಅವರ ಅಂಧದ ಆಚರಣೆಯೇ ಇದಕ್ಕೆ ಕಾರಣವಾದುದು. ಇಂಥ ಸಂಪ್ರದಾಯ ಸಮಾಜ ನಮ್ಮ ಸತ್ಯ ಆಚರಣೆಯನ್ನು ಸಹಿಸದೆ ನಮ್ಮನ್ನೇ ಎದುರಿಸುವುದು. ಸಂಗನ ಸಂಕಲ್ಪದಲ್ಲಿ ನಮ್ಮ ಬಲಿದಾನವೇ ಬೇಕಾದರೆ ಅದನ್ನೇ ಪ್ರೀತಿಯಿಂದ ಆತ್ಮ ನೈವೇದ್ಯವಾಗಿ ನೀಡಿ ಧನ್ಯರಾಗೋಣ, ಈ ವಿವಾಹವು ಶರಣರಿಗೆ ಆನಂದವನ್ನೀಯುವಂತಾಗಲಿ, ಈ ವಿವಾಹವು ಚೆನ್ನಾಗಿಯೇ ಆಗಿ ವಧೂ-ವರರಿಗೆ ಆಹ್ಲಾದವನ್ನೂ, ಆನಂದವನ್ನೂ ನೀಡಲಿ, ವಧು-ವರರ ತಂದೆ-ತಾಯಿಗಳಿಗೆ ಸಂತಸದ ಮಳೆಗರೆಯಲಿ, ಏನೇ ಆದರೂ, ಯಾವ ವಿಪತ್ತು ಬಂದರೂ ಅದನ್ನು ನಗುನಗುತ್ತಲೇ ಎದುರಿಸೋಣ, ಸತ್ಯಕ್ಕಾಗಿ, ಧರ್ಮಕ್ಕಾಗಿ, ಪ್ರಾಣಾರ್ಪಣಕ್ಕೂ ಸಿದ್ಧರಾಗೋಣ, ಶರಣಧರ್ಮದ ಹಿರಿಮೆಯನ್ನು ಇಡೀ ಜಗತ್ತಿಗೆ ಸಾರೋಣ ಆದರೆ ಇದಕ್ಕೆ ನಿಮ್ಮೆಲ್ಲರ ಮನಃಪೂರ್ವಕವಾದ ಒಪ್ಪಿಗೆ ಇದೆಯೇ ? ನೀವು ಒಪ್ಪಿದರೆ ಮಾತ್ರ ಈ ಕೃತಿ ಆಚರಣೆಯಲ್ಲಿ ಬರುತ್ತದೆ. ನಿಮ್ಮ ಒಪ್ಪಿಗೆ ಇರದಿರೆ ಇಲ್ಲ. ನಾನು ಹೇಳಿದುದನ್ನೇ ನೀವೆಲ್ಲರೂ ಒಪ್ಪಬೇಕೆಂದೇನೂ ಇಲ್ಲ. ಹಾಗೆ ನಾನೇನೂ ಹೇಳಿಲ್ಲ ಏಕೆ೦ದರೆ ಸರ್ವರಿಗೂ ವಾಕ್ ಸ್ವಾತಂತ್ರ್ಯವಿದೆ. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಿದೆ’ ಬಸವಣ್ಣನವರು ನುಡಿದರು.

ಎಲ್ಲ ಶರಣರು ‘ನಮ್ಮೆಲ್ಲರ ಒಪ್ಪಿಗೆ ಇದೆ’ ಎಂದರು. ಜಯ ಘೋಷಗಳು ಪ್ರತಿಧ್ವನಿಸಿದವು.

”ಅಣ್ಣನವರೇ ಮುಹೂರ್ತವೊಂದನ್ನು ನೋಡಬೇಕಲ್ಲವೆ ??

‘ನೀವೆಲ್ಲ ಗೊತ್ತು ಮಾಡಿದುದೇ ಮುಹೂರ್ತ, ಯಾವುದಾದರೂ ಪ೦ಚಾ೦ಗವನ್ನಾಗಲೀ, ಜಾತಕವನ್ನಾಗಲೀ ನೋಡಕೂಡದು. ಶರಣರು ಒಪ್ಪಿದರೇ ಶುಭ ಮುಹೂರ್ತ, ಶರಣರ ವಾಣಿಯೇ ಪರುಷವಲ್ಲವೇ ಮಧುವಯ್ಯನವರೇ ಎಂದರು ಬಸವಣ್ಣನವರು. ‘ತಾರಾಬಲ ಗ್ರಹಬಲ ಮತ್ತು ಚಂದ್ರಬಲ ನೋಡಬೇಡವೇ ?’ ಎಂದರು

ಮಧುವರಸರು.

ಸೊಡ್ಡಳ ಬಾಚರಸರೆಂದರು :

ಚಂದ್ರ ಬಲ, ತಾರಾಬಲ ಎಂಬರಿ ಎಲೆ ಅಣ್ಗಗಳಿರಾ ಚಂದ್ರಂಗೆ ಯಾರ ಬಲ ಇ೦ದ್ರ೦ಗ ಯಾರ ಬಲ ? ಮುಕುಂದಂಗ ಚ೦ದ್ರ೦ಗೆ
ಬರದೇ ಸೊಡ್ಡಳನ ಬಲವು ಕೇಳಿರಣ್ಣಾ

ಅವರ ಬಲದ ಮುಂದೆ ಯಾರ ಬಲವೂ ನಡೆಯದು.

”ನಿಜ ಮಧುವಯ್ಯನವರೇ ನಿಜ. ಸಮಯದಲ್ಲಿ ಶುಭ ಸಮಯ, ಆಶುಭ ಮಯವೆಂದು ಎಂದಾದರೂ ಉಂಟೇ? ಅದು ನಮ್ಮ ಭೀತಿ ಹಾಗೂ ಭ್ರಮೆ ಬೇರೇನೂ ಅಲ್ಲ. ಈ ಅಂಧ ನಂಬುಗೆಗಳಿಂದ ನಮ್ಮ ಸಂಕಲ್ಪ ಶಕ್ತಿ ದುರ್ಬಲವಾಗುತ್ತದೆ. ಸಂಗಮನ ಅನುಗ್ರಹದ ಮುಂದೆ ಬೇರೆ ಗ್ರಹಗಳ ಬಲಕ್ಕೆ ಬಲವಿಲ್ಲ. ಮೇಲಾಗಿ ಶರಣರು ಒಪ್ಪಿದುದೇ ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ ಎ೦ದರು ಬಸವಣ್ಣನವರು.

ಶರಣರೆಲ್ಲರೂ ಒಪ್ಪಿದರು. ಎಲ್ಲರಿಗೂ ಅನುಕೂಲವಾಗುವ ದಿನ ಹಾಗೂ ಸಮಯವನ್ನು ಗೊತ್ತುಪಡಿಸಿದರು. ಶೀಲವಂತ ಲಾವಣ್ಯವತಿಯರಿಗೆ ಒಟ್ಟಿಗೆ ಧರ್ಮ ದೀಕ್ಷೆಯನ್ನಿತ್ತರು. ಇಬ್ಬರೂ ಶರಣಧರ್ಮದವರಾದರು. ಸಕಲ ಸದ್ಗುಣಗಳ ನಿಧಿಯಂತಿದ್ದ ಅವರೀರ್ವರು ವಿವಾಹಕ್ಕೆ ಅಣಿಯಾದರು. ವಿವಾಹದ ಗುರಿ, ಆಧ್ಯಾತ್ಮ ಸಾಧನೆಯಲ್ಲಿ ಅದರ ಪಾತ್ರ ಹಾಗೂ ಆದರ್ಶ ಬದುಕು ಅವುಗಳ ಬಗೆಗೆ ವಿವೇಚನೆಯನ್ನಿತ್ತು ಮಾಂಗಲ್ಯ ಧಾರೆಯ ಕಾರ್ಯವನ್ನು ನೆರವೇರಿಸಿದರು.

ಶೀಲವಂತ ಆ ಕಾಲದ ಚಿತ್ರಕಲಾಕಾರರಲ್ಲಿ ಅತ್ಯಂತ ಪ್ರಖ್ಯಾತರಾದವರು. ನಿಂತ ನಿಲುವಿನಲ್ಲೇ ಶರಣರ ಚಿತ್ರಗಳನ್ನು ಬರೆದು ತೋರಿಸಿ ಶರಣರಿಗೆ ಪರಿಯನ್ನೂ ಆನಂದವನ್ನೂ ಉಂಟು ಮಾಡುತ್ತಿದ್ದರು. ಅನುಭವ ಮಂಟಪದ ಅಂದಕ್ಕೆ ಶೀಲವಂತನ ಕಲಾಕುಂಚ ಕೆಲಸ ಮಾಡುತ್ತಿತ್ತು. ಹೀಗಾಗಿ ಎಲ್ಲಾ ಶರಣ ನಗರ ಪ್ರೀತಿಗೆ ಪಾತ್ರರಾಗಿದ್ದವನು ಶೀಲವಂತ, ತಾರುಣ್ಯದಲ್ಲಿ ಶ್ರೇಷ್ಠ ಕಲಾವಿದನೆಂಬ ಖ್ಯಾತಿಯೊಂದಿಗೆ ಸ್ಪುರದ್ರೂಪಿಯೂ ಆಗಿದ್ದನು. ಒಮ್ಮೆ ಮಧುವರಸರ ಮಗಳು ಶೀಲವಂತನನ್ನು ನೋಡಿ ಮೋಹಿಸಿದ್ದೂ ಉಂಟು.

ವಿನಯಶೀಲ, ಸುಂದರ ರೂಪವುಳ್ಳ ಶ್ರೇಷ್ಠ ಕಲಾವಿದನಾದ ಶೀಲವಂತ ಇವಣ್ಯವತಿಯರ ಕಂಡು ಅಲ್ಲಿ ನೆರೆದ ಶರಣವೃಂದಕ್ಕೆ ಮಹಾದಾನ೦ದವಾಯಿತು. ಮಧುವಯ್ಯನವರ ಕಣ್ಣುಗಳಲ್ಲಿ ಆನಂದ ಭಾಷ್ಪಗಳು ತುಂಬಿದ್ದವು.ಕಂಠ ತುಂಬಿ ಬಿಗಿದಿತ್ತು. ಅವರು ಆನಂದ ಭಾಷ್ಪಗಳನ್ನು ಸುರಿಸುತ್ತ ಮುಗಿದ ಕೈಗಳಿಂದಲೇ . ಹರಳಯ್ಯನವರಿಗೆ ‘ಮಾಣಿಕ್ಯದ ಹರಳನ್ನು ಮುತ್ತಿನ ಹಾರದಲ್ಲಿ ಬಂಧಿಸಿದಂತಾಯಿತು. ಸ್ವೀಕರಿಸಿ ತಂದೆ ಹರಳಯ್ಯನವರೇ ನಿಮ್ಮ
ಪುತ್ರಿಯೆಂದು ಭಾವಿಸಿ” ಎಂದಾಗ ಹರಳಯ್ಯನವರ ಹೃದಯವೂ ತುಂಬಿತು ಹರಳಯ್ಯನವರಿಗೆ ವಧೂವರರಿಬ್ಬರೂ ನಮಸ್ಕರಿಸಿದರು. ಹರಳಯ್ಯನವರು ಅವರಿಗೆ ಶುಭಾಶೀರ್ವಾದಗಳನ್ನಿತ್ತರು.

ಶೀಲವಂತ ಲಾವಣ್ಯವತಿಯರು ಬಸವಣ್ಣನವರ ಬಳಿ ಬಂದಾಗ ಅತಿ ಹರುಷದಿಂದ ಪ್ರೀತಿಯಿಂದ ‘ಸತಿ ಪುರುಷರಿಬ್ಬರೂ ಪ್ರತಿ ದೃಷ್ಟಿಯಾಗಿ ಮಾಡಬಲ್ಲಡೆ ಅದೇ ಮಾಟ, ಕೂಡಲ ಸಂಗಮದೇವರ ಕೂಡುವ ಕೂಟ” ಎಂದು ಹೇಳಿ ”ಲೌಕಿಕ ಜೀವನವು ಪಾರಮಾರ್ಥ ಜೀವನ ಸಾಧನವಾಗಬೇಕು. ನಿಮ್ಮ ಜೀವನವು ಪಾವನವಾಗಲಿ, ಸಂಗಮ ನಿಮ್ಮನ್ನು ಕರುಣಿಸಿ ಕಾವಾಡಲಿ” ಎಂದು ಆಶೀರ್ವದಿಸಿದರು.

‘ಬಹುದಿನಗಳಿಂದ ನಾನು ಕನಸು ಕಾಣುತ್ತಿರುವುದು ಇಂದು ನನಸಾಯಿತು. ಸಂಗಮನ ಕೃಪೆ, ಬಾರದು ಬಪ್ಪದು, ಬಪ್ಪುದು ತಪ್ಪದು” ಎಂದು ಬಸವಣ್ಣನವರು ತಮ್ಮಲ್ಲಿಯೇ ನುಡಿದುಕೊಂಡರು, ನೆರೆದ ಸಕಲ ಶರಣ ಸಮೂಹಕ್ಕೆಲ್ಲ ಸಂತಸದ ಸಾಗರವೇ ಸಾಗರ. ಪ್ರತಿಯೊಬ್ಬರ ದೃಷ್ಟಿಯಲ್ಲಿಯೂ ಹೊಸ ಬೆಳಕು ಮಿಂಚುತ್ತಿತ್ತು. ಶೀಲವಂತ ಲಾವಣ್ಯವತಿಯರ ವಿವಾಹ ಮಂಗಳಮಯವಾಗಿ ಮುಕ್ತಾಯಗೊಂಡಿತು. ಇದು ಇತಿಹಾಸ ಪ್ರಸಿದ್ಧ ವಿವಾಹವೆಂಬ ಕೀರ್ತಿಗೆ ದಾಖಲಾಯಿತು. ಇಂದಿಗೂ ಇದು ಇತಿಹಾಸ ಪ್ರಸಿದ್ಧವೇ !

ಸಂಗ್ರಹ
-ಸಾವಿತ್ರಿ ಎಂ ಕಮಲಾಪೂರ

Don`t copy text!