ಶಾಂತಿ ಚಿಗುರು
ಅದೆಷ್ಟೋ ನನ್ನವರನು ಕಡಿದೊಗೆದೆನೋ
ಅದೆಷ್ಟೋ ಚಿಗುರೆಲೆಗಳ ಸವರಿ ಚೆಲ್ಲಿದೆನೋ
ಕವಲೊಡೆದ ರೆಂಬೆಗಳ ಕತ್ತು ಕೊಯ್ದೆನೋ
ಮುಗುಳು ಅರಳುವ ಮುನ್ನ ಮೊಗ್ಗುಗಳ ಚಿವುಟಿದೆನೋ..
ಭೂತಾಯಿ ಒಡಲು ಬರಿದು ಮಾಡಿ
ಒಣ ಬಯಲಲಿ ತುಕ್ಕು ಹಿಡಿದು ಬಿದ್ದಿರುವೆ..
ಕ್ಷಮಿಸೆನ್ನ ತಾಯೇ ಭೂದೇವಿ
ನನ್ನವ್ವ ಕರುಣಾಮಯಿ
ಹಿಂಸೆಯ ಕೃತ್ಯದಿ ಕುದಿದು ಬೆಂದ
ನನ್ನ ಮನ್ನಿಸು ಸಹನಾಮಯಿ..
ನನ್ನೀ ಹೀನ ಕೆಲಸಕೆ ಕೊನೆ ಇಂದೇ..
ಪ್ರೀತಿ ಸೌಹಾರ್ದದ ಧಾರೆ
ಸುರಿಸು ಸೃಷ್ಟಿದೇವಿಯೇ
ಹಿಂಸೆ ದ್ವೇಷ ರೋಷ ಕರಗಿ
ಚಿಗುರಲಿ ಶಾಂತಿಯ ಹಸಿರು…!
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ