ಕೈಹಿಡಿದು

ಕೈಹಿಡಿದು

ನನ್ನ ಅವ್ವಳ ಕೈ ಹಿಡಿದು
ನಡೆದೆ ನಂಬಿ
ಅವ್ವಳಿಗೆ ಹುಸಿಕೋಪ
ನನ್ನ ಮೇಲೆ
ಮಕ್ಕಳಿರುವರು ಮನೆಯ ತುಂಬಾ
ಎಲ್ಲವೂ ಬಿಕ್ಕುತ್ತೀವೆ
ಅಮ್ಮನಿಗಾಗಿ ಯಾರನ್ನು
ಸಮಾಧಾನಪಡಿಸುವಳು ? ಅಮ್ಮ
ಅನಾಥ ಭಾವ ನನ್ನಲ್ಲಿ
ಕಪ್ಪುಬಣ್ಣ
ಜಿಗುಪ್ಸೆ ತಾತ್ಸಾರ
ಬೇಡ ಅಂದರೆ ಬಿಡು
ಕೈಬಿಟ್ಟಳು
ಜಾತ್ರೆ ,ದಿಬ್ಬಣ, ಚಿಂತನ-ಮಂಥನ ಗೋಷ್ಠಿ ಹೀಗೆಯೇ
ಹೊರಟು ನಿಂತಳು
ದಟ್ಟಕಾಡಿನ ಇರುಳಿನಲಿ
ಕಂಗೆಟ್ಟು ರೋಧಿಸುವ ಶಿಶುವನು
ತಬ್ಬಿ ಕೊಳ್ಳಲಿಲ್ಲ ಒಪ್ಪಿಕೊಳ್ಳಲಿಲ್ಲ ರಮಿಸುವಳು ಅವ್ವ
ಬರುವೆ ನಿನಗಾಗಿ
ಅಳಬೇಡ ಕಂದ
ಚಿನ್ನು- ಬಂಗಾರ
ಹಸಿರು ಅಂಗಿ
ತರುವೆ ನಿನಗೆ
ಆಸೆ ಮಗುವಿಗೆ
ಅಮ್ಮನೆದೆಗೆ ಅಪ್ಪಿ
ದಃಖ ಮರೆಸುವ
ಪ್ರೀತಿ-ವಾತ್ಸಲ್ಯದ
ಮಮತೆಯ ಕೈಬೆರಳು
ಅಮ್ಮನಿಗೆ ಬೇಡವಾದ
ಮಗಳು ಕೈ ಹಿಡಿಯುವುದು ಯಾರನ್ನು ?
ತಾಯಿಯ ಹಾಲೇ ನಂಜಾದರೆ?
ಇನ್ನಾರಿಗೆ ದೂರು ಹೇಳುವುದು?
ಬಾ ಅಮ್ಮ
ನಿನಗಾಗಿ ಬಳಲಿ ಬಸವಳಿದ
ಕಂದನನ್ನು ಒಮ್ಮೆ
ಬಡಿದು ಬುದ್ಧಿ ಹೇಳು
ಹಠ ಮಾಡದು
ಮುಗ್ದ ಮನ
ನಿಷ್ಕಲ್ಮಶ ಪ್ರೀತಿ
ಕೈ ಹಿಡಿದು ನಡೆಸು
ಕಂದನನು ನಂಬಿರುವೆ
ಅಮ್ಮ ನಿನ್ನನ್ನು

ಸಾವಿತ್ರಿ ಕಮಲಾಪೂರ ಮೂಡಲಗಿ

Don`t copy text!