ಗಜಲ್
ಅಂದಿನ ಅಸಮಾನತೆ ಕಂಡು ಮರುಗಿದ್ದನು ಬಸವಣ್ಣ
ಶೋಷಿತ ವರ್ಗದ ನೋವಿಗೆ ನೊಂದಿದ್ದನು ಬಸವಣ್ಣ
ಕಾಯವೇ ಕೈಲಾಸವೆನ್ನುತ್ತ ಕಾಯಕಕ್ಕೆ ಮಹತ್ವ ನೀಡಿದ್ದನು
ಮೇಲು ವರ್ಗದ ಕುಟಿಲಕ್ಕೆ ಬೇಸತ್ತು ಸಿಡಿದೆದ್ದಿದ್ದನು ಬಸವಣ್ಣ
ಗುಡಿ ಗುಂಡಾರಗಳ ಮೋಹ ಬಿಟ್ಟು ಬಿಡಿ ಎಂದಿದ್ದನಲ್ಲವೆ
ಇಷ್ಟ ಲಿಂಗದ ಮೂಲಕ ಬೆಳಕು ಕೊಟ್ಟಿದ್ದನು ಬಸವಣ್ಣ
ಮಾದಾರ ಚೆನ್ನಯ್ಯನ ಮಗ ತಾನೆಂದು ಅಂದಿದ್ದು ನೆನಪಿಲ್ಲವೆ
ಮನುಜರೆಲ್ಲರೂ ಒಂದೇ ಕೂಡಿ ಬಾಳಿರಿ ಎಂದಿದ್ದನು ಬಸವಣ್ಣ
ಪಾಪಿಯ ಧನ ಪ್ರಾಯಶ್ಚಿತಕ್ಕೆ ಸಲ್ಲದೆಂದು ಹೇಳಿರಲಿಲ್ಲವೆ
ಪರಸ್ತ್ರಿ ಪರ ಧನದ ಮೋಹ ಸರಿಯಲ್ಲವೆಂದು ನುಡಿದಿದ್ದನು ಬಸವಣ್ಣ
ಅನುಭವ ಮಂಟಪ ಕಟ್ಟಿ ಅನುಭವಾಮೃತವನ್ನೇ ಹರಿಸಿದ್ದನು
ಹೆಣ್ಣು ಮಕ್ಕಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದ್ದನು ಬಸವಣ್ಣ
ಅಂಗ ಲಿಂಗ ಒಂದಾದ ಬಳಿಕ ಜಾತಿ ಧರ್ಮದ ಭೇದ ಅಳಿಸಬೇಕಿದೆ
ಈಶ್ವರ ! ವಚನಗಳ ಸಾರವೇ ನಿಜದರಿವಿನ ಬೆಳಕೆಂದಿದ್ದನು ಬಸವಣ್ಣ
– ಈಶ್ವರ ಮಮದಾಪೂರ , ಗೋಕಾಕ.