ಕಾಗೆಯ ತಿಂದವನಲ್ಲದೆ ಭಕ್ತನಲ್ಲ

ಕಾಗೆಯ ತಿಂದವನಲ್ಲದೆ ಭಕ್ತನಲ್ಲ

ಕಾಗೆಯ ತಿಂದವನಲ್ಲದೆ | ಭಕ್ತನಲ್ಲ
ಕೋಣವ ತಿಂದವನಲ್ಲದೆ | ಮಹೇಶ್ವರನಲ್ಲ
ಕೋಡಗ ತಿಂದವನಲ್ಲದೆ | ಪ್ರಸಾದಿಯಲ್ಲ
ನಾಯ ತಿಂದವನಲ್ಲದೆ | ಪ್ರಾಣಲಿಂಗಿಯಲ್ಲ
ಹೇಯವ ತಿಂದವನಲ್ಲದೆ | ಶರಣನಲ್ಲ
ಇಂತೈವರ ತಿಂದವನಲ್ಲದೆ | ಲಿಂಗೈಕ್ಯನಲ್ಲ ಗುಹೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-236 / ವಚನ ಸಂಖ್ಯೆ-1061)

ಅಲ್ಲಮಪ್ರಭುಗಳ ಈ ವಚನವು ಷಟ್ ಸ್ಥಲ ವಿಮರ್ಶೆಯ ಮೂಲಕ ಸಾಮಾಜಿಕ ವಾಸ್ತವಗಳನ್ನು ಬೆಡಗಿನ ಮನಸ್ತಿತಿ ಮೂಲಕ ಪ್ರವೇಶಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಮನುಷ್ಯರ ಶರೀರದಲ್ಲಿ ಮೃಗ. ಮತ್ತು ಪಕ್ಷಿಯ ಸ್ವಭಾವಗಳು ವಾಸವಾಗಿರುತ್ತವೆ. ಪ್ರಾಣಿ ಪಕ್ಷಿ ಸಂಕುಲಗಳನ್ನು ಆಧ್ಯಾತ್ಮಿಕ ಮನೋಲೋಕದಲ್ಲಿ “ಕಾಗೆಯನ್ನು ತಿಂದವನಲ್ಲದೆ ಭಕ್ತನಾಗಲು ಸಾಧ್ಯವಾಗವಾಗುವುದಿಲ್ಲ ಎನ್ನುವ ವ್ಯಂಗೋಕ್ತಿಯ ಪರಿಕ್ರಮವಿಲ್ಲಿ ಕಾಣಬಹುದು. ಪಕ್ಷಿ ಪ್ರಪಂಚದ ವಾಸ್ತವತೆಯ ಚಿತ್ರಣವನ್ನು ಕೊಡುವುದರ ಮೂಲಕ ಕಾಗೆಯ ಸ್ವಭಾವ ಭಕ್ತಸ್ಥಲದ ಮೂಲಕ ಮುಖಾಮುಖಿಯಾಗುತ್ತದೆ. ಪ್ರಾಪಂಚಿಕ ಸನ್ನಿವೇಶದಲ್ಲಿ ಕಾಗೆ ಮನುಷ್ಯನ ಸಂದೇಶ ವಾಹಕವಾದರೂ ತಾತ್ವಿಕ ಭಕ್ತಿಯ ಸ್ವತಂತ್ರತೆಗೆ ಭಾವನಾತ್ಮಕ ಸಂಬಂಧದ ಮೂಲಕ ಭಕ್ತಿಯ ವಿಕಸನದಲ್ಲಿ ಮುನ್ನುಗ್ಗುವ ಪರಿಕ್ರಮವಿದು.

ಸಾಧಕನು ಭಕ್ತಸ್ಥಲದಲ್ಲಿ ಅಜ್ಞಾನ ಅಹಂಕಾರದಲ್ಲಿ ಮೈ ಮರೆತವನು ಶರಣನಾಗಲು ಸಾಧ್ಯವಾಗುವುದಿಲ್ಲ. ಕಾಗೆ ಸಾಮಾನ್ಯರ ಲೋಕದಲ್ಲಿ ಕರಿ, ಅಪಶಕುನ, ಕೆಟ್ಟ ಮನುಷ್ಯರ ಸ್ವಭಾವಗಳನ್ನು ಪತ್ತೆ ಹಚ್ಚುವ ಪ್ರಾಣಿ. ಬಸವಣ್ಣನವರು ಹೇಳುವಂತೆ “ಕಾಗೆ ಒಂದಗಳು ಅನ್ನವನು ಕಂಡರೆ ಕರೆಯುವುದು ತನ್ನ ಬಳಗವನ್ನು” ಕಾಗೆಯಲ್ಲಿ ಕಾಣುವ ಲೌಕಿಕ ಅಪಶಕುನಗಳನ್ನು ಕಿತ್ತೊಗೆದು ಭಕ್ತ ಸಾಧಕ ಶರಣನಾದವನು. ತನ್ನ ಶರಣ ಬಳಗವನ್ನು ಗಟ್ಟಿಗೊಳಿಸುವ ಪರಿಕ್ರಮ. ಭಕ್ತಸ್ಥಲದಲ್ಲಿ ಗುರು ಲಿಂಗ ಜಂಗಮರನ್ನು ಭಕ್ತಿಯ ಪಥದಲ್ಲಿ ಸ್ಥಿರವಾಗಿಸುವ ಮನೋವ್ಯಾಂಛೆ ಇದಾಗಿದೆ.

ಅಜ್ಞಾನ ಹುಂಬತನವೇ ಕೋಣ. ಇಲ್ಲಿಯ ಕಾಗೆ ಕೋಡಗ ಕೋಣ ನಾಯಿಗಳು ನಮ್ಮ ಒಡನಾಟದ ಪ್ರಾಪಂಚಿಕ ಪ್ರಾಣಿಗಳು. ಮೇಲು ನೋಟಕ್ಕೆ ಒಂದು ಅರ್ಥವ್ಯಾಪ್ತಿ ವ್ಯಾಖ್ಯಾನಗಳಾದರೂ ಮಹೇಶ್ವರ ಸ್ಥಲದಲ್ಲಿ ಭಕ್ತನು ನೈತಿಕ ಧರ್ಮವನ್ನು ಬಿಡದವನಾಗಿರಬೇಕು.

ಈ ಕಾಯ ಶಿವಮಯವಾಗಿರಬೇಕು. ಅಂಗ ಲಿಂಗ ಸಂಗವಾಗಬೇಕು. ಹಾಗೆ ಆಗದಿದ್ದಾಗ ಆಧ್ಯಾತ್ಮಿಕ ಅರಿವು ಕೋಣದ ಭಾವವಾಗುವುದು. ಇದನ್ನೇ ಅನುಭಾವಿಕ ವರ್ತುಲದಲ್ಲಿ ಪಶುಭಾವವೆಂದು ಹೇಳಲಾಗುತ್ತದೆ.

ಮಹೇಶ್ವರ ಸ್ಥಲದಲ್ಲಿ ಭಕ್ತನು ಅಧಾರ್ಮಿಕ ಆಚರಣೆಗಳಿಂದ ದೂರವಿರಬೇಕು. ಅನುಭಾವಿಕ ನೆಲೆಯಿಂದ ಮಹೇಶ್ವರನಾಗಬೇಕು. ಈ ಎರಡರ ನಿಜ ಮನಸ್ಥಿತಿಯನ್ನು ಶರಣ ಧರ್ಮದ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅಲ್ಲಮ ಪ್ರಭುಗಳು ಎಚ್ಚರಿಸುತ್ತಾರೆ.

ಕೋಣವ ತಿಂದವನಲ್ಲದೆ ಮಹೇಶ್ವರನಲ್ಲ.” ಕೋಡಗ ಮನವೆಂಬ ಮರ್ಕಟವಾಗಿದೆ. ನಮ್ಮ ಅರಿಷಟ್ ಸ್ವಭಾವಗಳು ಮನೋವಿಕಾರಗಕ್ಕೆಒಳಗಾಗಿ ಸಂಸಾರದಲ್ಲಿ ನೆಮ್ಮದಿ ಕಳೆದು ಕೊಳ್ಳಬೇಕಾಗುತ್ತದೆ. ಕೋಡಗದಂತಹ ಮನಸ್ಸನು ಕಟ್ಟಿಹಾಕುವುದು ಕಷ್ಟಕರವಾದದ್ದು. ಮನದ ಅರಿಷಟ್ ಸ್ವಭಾವಗಳನ್ನು ಕಿತ್ತೊಗೆದಾಗ ಅತೀಂದ್ರಿಯ ಶಕ್ತಿ ಲಭಿಸುತ್ತದೆ. ಅಂತಃಕರಣ ಭಾವವೇ ಮನಸ್ಸು “ಕೋಡಗ ತಿಂದವನಲ್ಲದೆ ಪ್ರಸಾದಿಯಾಗಲು ಸಾದ್ಯವಿಲ್ಲ”

ಅಲ್ಲಮರಿಗೆ ಸಂಸಾರದ ಬಗ್ಗೆ ಮೋಹವಿಲ್ಲ ಭೀತಿಯಿದೆ. ಚಂಚಲವಾದ ಮನಸ್ಸನ್ನು ಕಟ್ಟಿಹಾಕಬೇಕಾದರೆ ಗುಹೇಶ್ವರನೆಂಬ ಸಂಕಲ್ಪಿತ ಪ್ರಸಾದಿ ಭಾವ ಹೊಂದಿರಬೇಕು. ಹೀಗಾಗಿ ಮನಸ್ಸು ನಿಗೂಢ ಪಯಣ. ಕೋಡಗದಂತಹ ಮನಸ್ಸನ್ನು ಪ್ರಸಾದಿ ಭಾವವಾಗಿಸಬೇಕಾದರೆ, ಭೌತಿಕ ತಿಕ್ಕಾಟಗಳಲ್ಲಿ ಶರಣ ಧರ್ಮದ ಸ್ಥಲಗಳು ಮನೋಮಯವಾಗಿರಬೇಕು. ಕೋಡಗದಂತಹ ವೈರುದ್ಯಗಳು ದಾಳಿ ಮಾಡಲು ಪ್ರಾರಂಬಿಸಿದಾಗ ಈ ಕಾಯವನ್ನೇ ಪ್ರಸಾದಿ ಸ್ಥಲವಾಗಿಸಿ ಹೃನ್ಮನವನ್ನು ಗುಹೇಶ್ವರನಿಗೆ ಅರ್ಪಿಸ ಬೇಕು.

ಪ್ರಭುವಿನ ವಚನದ ಬೆಡಗಿನಲ್ಲಿ ನಾಯಿಯ ಶೋಧಿತ ಪ್ರಸ್ತಾಪ ವ್ಯಂಗ್ಯವಾಗಿ ಸುತ್ತುತ್ತಿರುತ್ತದೆ. ಇಂದ್ರಿಯ ಚಾಪಲ್ಯವುಳ್ಳ ನಾಯಿಯ ಮನಸ್ಥಿತಿಯ ಬಗ್ಗೆ ಪ್ರಭುವಿಗೆ ವಿಷಾದವಿದೆ. ಲೌಕಿಕರಲ್ಲಿ ನಿಸ್ವಾರ್ಥ ಪ್ರೀತಿ ಪ್ರಾಮಾಣಿಕತೆಗೆ ಇನ್ನೊಂದು ಹೆಸರೆ ನಾಯಿ. ಅನುಭಾವಿಕ ಲೋಕದಲ್ಲಿ ನಾಯಿಯನ್ನು ಮೈಲಿಗೆಯಾಗಿ ಕಂಡು ತಿರಸ್ಕರಿಸಿದ್ದಾರೆ. ಆದರೂ ಅಲ್ಲಮಪ್ರಭು ತಮ್ಮ ವಚನಗಳಲ್ಲಿ “ಹಾಳೂರೊಳಗೆ ನಾಯ ಜಗಳವ ಕಂಡೆ. ಇದೇನು ಸೋಜಿಗ ಹೇಳಾ ಗುಹೇಶ್ವರ” ಎಂದು ವಿಸ್ಮಯದ ತರ್ಕ ಮಾಡುತ್ತಾರೆ. ನಾಯಿಯ ಉಪಮೆ ಮತ್ತು ರೂಪಕದ ಮೂಲಕ ಲೌಕಿಕ ಮನಸ್ತಿತಿಯ ಊರು ಹಾಳಾಗುವುದಕ್ಕಿಂತ ಮೊದಲು ಭಕ್ತನಾಗಿ ಪ್ರಾಣ ಲಿಂಗ ಸ್ಥಲದಲ್ಲಿ ಲಿಂಗವೇ ಪ್ರಾಣ ಪ್ರಾಣವೇ ಲಿಂಗಮಯವಾಗಿ ಕಾಣುತ್ತದೆ. ಇಂದ್ರಿಯ ಚಾಪಲ್ಯದ ನಾಯಿ. ಊರನ್ನು ಸುತ್ತುವುದಕ್ಕೆ ಬಿಟ್ಟರೆ ಅದು ಊರನ್ನು ಹಾಳು ಮಾಡುತ್ತದೆ. ಇದನ್ನೇ ಪ್ರಭು ಹೇಳುವುದು “ನಾಯ ತಿಂದವನಲ್ಲದೆ ಪ್ರಾಣ ಲಿಂಗಿಯಲ್ಲ” ಪ್ರಾಣ ಲಿಂಗ ಸ್ಥಲದಲ್ಲಿ ಲಿಂಗವೇ ಗುಹೇಶ್ವರನಾಗ ಬೇಕಾದರೆ ನಿಸ್ವಾರ್ಥ ಮನಸ್ದಿನ ನಾಯಿಯ ಸ್ವಾಭಾವಗಳನ್ನು ಅಳವಡಿಸಿಕೊಳ್ಳಬೇಕು.

ಶರಣ ಸಾಹಿತ್ಯದಲ್ಲಿ ಷಟ್ ಸ್ಥಲಗಳು ಭಕ್ತಿ ಪರಂಪರೆಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದುಕೊಂಡವುಗಳಾಗಿವೆ. ಶರಣ ಧರ್ಮದಲ್ಲಿಯೇ ಭಕ್ತನ ಆರಾಧಕಾ ಮನಸ್ಥಿತಿಯ ಸ್ವತಂತ್ರ ಭೋದನೆಗಳಾಗಿ ನಮ್ಮನ್ನು ಸದಾ ಎಚ್ಚರಿಸುತ್ತವೆ. ಆಧ್ಯಾತ್ಮಿಕ ಬದುಕಿಗೆ ಸ್ಥಲಗಳು ಶಿವನ ಆರಾಧನಾ ಸ್ಥಲಗಳೆಂದು ಹೇಳಲಾಗುತ್ತದೆ. ಹೀಗಾಗಿ ಅಲ್ಲಮರ ಈ ವಚನದಲ್ಲಿ ಅರಿವು ಮತ್ತು ಭಕ್ತಿಯ ಅನುಸಂಧಾನದಲ್ಲಿ “ಹೇಯ ತಿಂದವನಲ್ಲದೆ ಶರಣನಲ್ಲ ” ಎಂಬ ಎಚ್ಚರಿಕೆಯದು. ರಕ್ಕಸ ಪ್ರವೃತ್ತಿಗಳು ದೇಹದಲ್ಲಿ ವಾಸವಾಗಿವೆ ಎನ್ನದೆ ಹೇಯ ತಿಂದವನಲ್ಲದೆ ಕ್ರೌರ್ಯ ರಕ್ಕಸ ಭಾವಗಳುಳ್ಳವನು ಎಂದಿಗೂ ಶರಣನಾಗಲಾರ. ಶರಣ ಸತಿ ಲಿಂಗ ಪತಿ ಭಾವಳಿದು ಕುಲ ಛಲ ಮದ ಮತ್ಸರ ಅಹಂಕಾರವಳಿದಾಗ ಸತ್ಯ ಒಂದೇ ಉಳಿಯುತ್ತದೆ. ಅರಿವೇ ಇಲ್ಲಿ ಶಾಶ್ವತ ಸ್ಥಾನವನ್ನು ಪಡೆಯುತ್ತದೆ. ಅದುವೇ ಶರಣ ಸ್ಥಲವಾಗುತ್ತದೆ.

ಐಕ್ಯಸ್ಥಲದಲ್ಲಿ ಸಮರಸ ಭಕ್ತಿಯು ಪ್ರಧಾನವಾದದ್ದು. ಚೆನ್ನ ಬಸವಣ್ಣನವರು ಹೇಳುವಂತೆ “ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ.” ಶಿವಸ್ವರೂಪಿಯಾದ ಭಕ್ತನು ಶಿವೈಕ್ಯನೆನಿಸಿಕೊಳ್ಳುತ್ತಾನೆ. ಅಲ್ಲಮ ಪ್ರಭು ಲೌಕಿಕ ಮತ್ತು ತಾತ್ವಿತೆಯ ಜೊತೆಗೆ ಷಟ್ ಸ್ಥಲಗಳ ಸೋಪಾನಗಳನ್ನು ಮನೋವಿಜ್ಞಾನದ ಮೂಲಕ ತರ್ಕ ಮಾಡುತ್ತಾರೆ. ನೈತಿಕತತೆಯನ್ನು ಮುಂದು ಮಾಡುತ್ತಾ ಪ್ರಾಣಿ ಪಕ್ಷಿ ರೂಪಕಗಳ ಮೂಲಕ ರೋಮಾಂಚಕ ಭ್ರಮೆಗಳನ್ನು ಮನುಷ್ಯ ಸ್ವಭಾವದ ಜೊತೆಗೆ ಹೋಲಿಸುತ್ತಾರೆ. ಗುಹೇಶ್ವರನನ್ನು ಷಟ್ ಸ್ಥಲಗಳ

ಸೋಪಾನಕಾರ ಎಂದು ಹೇಳುವುದನ್ನು ನಿರಾಕರಿಸಿ “ಇಂತೈವರ ತಿಂದವನಲ್ಲದೆ ಲಿಂಗೈಕ್ಯನಲ್ಲ ಗುಹೇಶ್ವರ” _ ಆಧ್ಯಾತ್ಮದ ಐಕ್ಯಸ್ಥಲದ ಅರ್ಥ ವ್ಯಾಪಕತೆಯನ್ನು ಮರು ವಿಸ್ತರಿಸುವ ಪರಿಕ್ರಮವಿದಾಗಿದೆ.

ಪ್ರತಿ ಸಾಲಿನಲ್ಲೂ ತಿಂದವನಲ್ಲದೆ ತಿಂದವನಲ್ಲದೆ ಪುನರಾವರ್ತಿತ ಸ್ಥಲಗಳ ಸಂಕೇತ ಮತ್ತು ಪ್ರಾಣಿ ಪಕ್ಷಿ ರೂಪಕಗಳಾಗಿ ವ್ಯಾಖ್ಯಾನಿಸಲ್ಪಡುತ್ತವೆ.

-ಡಾ. ಸರ್ವಮಂಗಳಾ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು
ಮೋಬೈಲ್ ಸಂ : +91 94499 46839

Don`t copy text!