ಭಾವಪಲ್ಲವ
ಭಾವ ಲಹರಿಯಲಂದು
ಜೊನ್ನ ಕಾಂತಿಯ ತಂದು
ಎದೆಯ ಸಿಂಹಾಸನವೇರಿ
ಮೆರೆದೆ ನೀನು
ಹಚ್ಚ ಹಸಿರನು ಹೊದ್ದು
ಸುರಭಿಯುಸಿರನು ಮೆದ್ದು
ಒಲವ ತೋಟದಲರಳಿ
ಗೆಲಿದೆ ನೀನು
ತಂಗಾಳಿಯಲರನು ಪಿಡಿದು
ಪಿರಿದೊರೆಯಂದವ ಕುಡಿದು
ಮೀನಿನಂದದಿ ಬಾಳ್ಗಡಲ
ಲುಲಿದೆ ನೀನು
ಕಾರ್ಮುಗಿಲ ಕದವ ಸರಿಸಿ
ಬೆಳ್ಮುಗಿಲ ಸುಧೆಯ ಸುರಿಸಿ
ಬಾನಾಡಿಯಂದದೆ ಹಾಡಿ
ನಲಿದೆ ನೀನು
ನಂಜು ಬೀರುವ ಕಣ್ಣು
ಸೇರಿಕೊಳ್ಳಲಿ ಮಣ್ಣು
ಹಾಲು ಜೇನಾಗಿಯೆ ಇರುವ
ನಾನು ನೀನು
-ನೀ. ಶ್ರೀಶೈಲ ಹುಲ್ಲೂರು