ವಚನ ಸಾಹಿತ್ಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ
ಒಂದು ಅಧ್ಯಯನ
ಆವ ಕುಲವಾದಡೇನು? | ಶಿವಲಿಂಗವಿದ್ದವನೆ ಕುಲಜನು ||
ಕುಲವನರಸುವರೆ ಶರಣರಲ್ಲಿ | ಜಾತಿ ಸಂಕರನಾದ ಬಳಿಕ? ||
“ಶಿವಧರ್ಮ ಕುಲೇ ಜಾತಃ | ಪುನರ್ಜನ್ಮ ವಿವರ್ಜಿತಃ ||
ಉಮಾ ಮಾತಾ ಪಿತ ರುದ್ರಃ | ಐಶ್ವರ್ಯಂ ಕುಲಮೇವಚ” ಎಂದುದಾಗಿ ||
ಒಕ್ಕುದ ಕೊಂಬೆನವರಲ್ಲಿ | ಕೂಸ ಕೊಡುವೆ ||
ಕೂಡಲಸಂಗಮದೇವಾ | ನಂಬುವೆ ನಿಮ್ಮ ಶರಣನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-718)
ಪ್ರಸ್ತುತ ಈ ವಚನದಲ್ಲಿ ಬಸವಣ್ಣನವರು ಮಾನವ ಸಂಪನ್ಮೂಲ ನಿರ್ವಹಣೆಯ ಮಜಲುಗಳನ್ನು ತಿಳಿಸಿದ್ದಾರೆ. ನಾವು ನಿರ್ವಹಿಸುವ ಸಂಘ ಸಂಸ್ಥೆಯಲ್ಲಿ ಮತ್ತು ಸಮಷ್ಠಿಯ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂಬುದೇ ಈ ವಚನದ ಆಶಯ. ಎಲ್ಲರೂ ಒಟ್ಟುಗೂಡಿದಾಗ ಮಾತ್ರ ಸಂಘ ಸಂಸ್ಥೆಯ ನಿರ್ಧಾರಿತ ಗುರಿಯನ್ನು ತಲುಪಲು ಸಾಧ್ಯ. ನಮ್ಮ ನಮ್ಮಲ್ಲಿಯ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಕೆಲಸವನ್ನು ನಿರ್ವಹಿಸಿದಾಗ ಗುರಿಯನ್ನು ತಲುಪಲು ಸಾಧ್ಯ. ಎಲ್ಲರ ಚಿಂತನೆಗಳು ಒಂದೇ ದಿಸೆಯಲ್ಲಿದ್ದಾಗ ಸಂಘ-ಸಂಸ್ಥೆಯಲ್ಲಿ ಸಾಮರಸ್ಯ ಉಂಟಾಗುತ್ತದೆ. ಸರಿ ಸುಮಾರು 95 ಕ್ಕೂ ಹೆಚ್ಚು ಆಯಗಾರರನ್ನು ಒಟ್ಟುಗೂಡಿಸಿ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಬಸವಣ್ಣನವರು 12 ನೇ ಶತಮಾನದಲ್ಲಿ ಮಾಡತಾರೆ. ಈ ಮೂಲಕ ಸಮಾಜದ ಎಲ್ಲ ಸ್ಥರದ ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸಾಮರಸ್ಯದ ತಂಗಾಳಿಯನ್ನು ತಂದರು. ಇದು ಮಾನವ ಸಂಪನ್ಮೂಲ ಅಭಿವೃದ್ಧಿಯ ವಿನೂತನ ಪ್ರಯೋಗ. ಇಂದಿಗೂ ಯಶಸ್ವಿ ಪ್ರಯೋಗ ಅಂತಾ ಹೇಳಬಹುದು.
ಕಲ್ಯಾಣದಲ್ಲಿ ಕ್ರಾಂತಿಯಾಗಿ ಸುಮಾರು 900 ವರ್ಷಗಳು ಕಳೆದಿವೆ. ವಿಶ್ವಮಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಬಗ್ಗೆ ಇಂದಿಗೂ ತುಲನಾತ್ಮಕ ಅಧ್ಯಯನ ನಡೀತಾ ಇದೆ. ಅಂದರೆ ಬಸವಣ್ಣನವರ ನಾಯಕತ್ವ ಎಂಥ ಮಹತ್ವದ್ದಾಗಿತ್ತು, ಎಂಥ ಶ್ರೇಷ್ಠ ಮಟ್ಟದ್ದಾಗಿತ್ತು ಎನ್ನುವುದನ್ನು ತಿಳಿದುಕೊಳ್ಳುವುದು ಈ ಲೇಖನದ ಮೂಲ ಆಶಯ ಮತ್ತು ಅಧ್ಯಯನ. ಬಸವಾದಿ ಶರಣರು ನುಡಿದಂತೆ ನಡೆದರು ಮತ್ತು ನಡೆದಂತೆ ನುಡಿದರು.
ಕಲ್ಯಾಣದ ಕ್ರಾಂತಿಯನ್ನು ಅಧ್ಯಯನವನ್ನು ಮಾಡಿದಾಗ ಕಂಡು ಬರುವ ಮಹತ್ವದ ಅಂಶ ಮಾನವ ಸಂಪನ್ಮೂಲ ಅಭಿವೃದ್ಧಿ. ಕಲ್ಯಾಣದ ಕ್ರಾಂತಿ ನಡೆದದ್ದು ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ನಡೆದದ್ದಲ್ಲ. ಮೇಲಾಗಿ ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಶ್ರೇಣೀಕೃತ ಸಮಾಜದಲ್ಲಿನ ಅಸಮಾನತೆಯನ್ನು ತೆಗೆದು ಹಾಕಿ ಸಮಾನತೆಯನ್ನು ತರುವ ಯಶಸ್ವಿ ಪ್ರಯೋಗ. ಕಲ್ಯಾಣದ ಕ್ರಾಂತಿ ಬಹಳ ಸಂಕೀರ್ಣವಾದದ್ದು.
* ಒಂದು ಕಡೆ ರಾಜರ ಆಡಳಿತ ಇನ್ನೊಂದು ಕಡೆ ತಳಸ್ಥರದ ಪ್ರಜೆಗಳು.
* ಬಸವಣ್ಣನವರ ಸಾಮಾಜಿಕ ಸುಧಾರಣೆಗೆ ಮೇಲ್ವರ್ಗದ ಜನರ ಪ್ರತಿರೋಧ.
* ಶ್ರೇಣೀಕೃತ ಸಮಾಜ.
* ಪ್ರಭುದ್ಧ ಚಿಂತಕರು ಒಂದು ಕಡೆಯಾದರೆ ಇನ್ನೊಂದು ಕಡೆ ಅಶಿಕ್ಷಿತ ಆಯಗಾರರು.
* ಶ್ರೀಮಂತರು ಒಂದು ಕಡೆಯಾದರೆ ಇನ್ನೊಂದು ಕಡೆ ಬಡವರು.
* ತಮ್ಮ ಉಪಜೀವನಕ್ಕೆ ಕುಲಕಸುಬನ್ನು ನಂಬಿದ ಆಯಗಾರರು ಒಂದು ಕಡೆಯಾದರೆ ಇನ್ನೊಂದು ಕಡೆ ವೈದಿಕ ಪರಂಪರೆಯ ಮೂಲಕ ಈ ಜನರನ್ನು ಶೋಷಣೆ ಮಾಡುವ ವೈದಿಕರು.
ಒಟ್ಟಾರೆ, ಅಂದಿನ ಸಮಾಜದಲ್ಲಿ ಒಂದು ಗೊಂದಲದ ವಾತಾವರಣವಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಸವಣ್ಣನವರು ಅತ್ಯಂತ ಶ್ರಮವಹಿಸಿ ಈ ವಾತಾವರಣವನ್ನು ನಿವಾರಿಸಲು ಪ್ರಯತ್ನಿಸಿ ಯಶಸ್ವಿಯಾದರು. ಕಲ್ಯಾಣದ ಕ್ರಾಂತಿಯು ಬಹಳ ವೈವಿಧ್ಯಮಯವಾದದ್ದು.
* ಸಾಹಿತ್ಯ ಕ್ರಾಂತಿ
* ಧಾರ್ಮಿಕ ಕ್ರಾಂತಿ
* ಸಾಮಾಜಿಕ ಕ್ರಾಂತಿ
* ಆರ್ಥಿಕ ಕ್ರಾಂತಿ
* ನೈತಿಕ ಕ್ರಾಂತಿ
ಹೀಗೆ ಹತ್ತು ಹಲವಾರು ಸ್ಥರದಲ್ಲಿ ಕಲ್ಯಾಣ ಕ್ರಾಂತಿಯಾದದ್ದು ಗಮನಾರ್ಹ. ಏಶಿಯಾ ಖಂಡದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ವಿರೋಧಾಭಾಸಗಳು ಕಂಡುಬಂದರೂ ಕೂಡ ತಲ ತಲಾಂತರದಿಂದ ಬೆಳೆದು ಬಂದ ಸಾಮಾನ್ಯ ಜನ-ಜೀವನ ಮತ್ತು ಪಾರಂಪರಿಕ ಸಂಸ್ಕೃತಿ ತನ್ನ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಈ ನಿಟ್ಟಿನಲ್ಲಿ, ಕಳೆದ ಅರವತ್ತು ವರ್ಷಗಳಲ್ಲಿ ನಾವು ಸ್ಥೂಲವಾಗಿ ಎರಡು ವೈವಿಧ್ಯಮಯ ಆಯಾಮಗಳನ್ನು ಕಾಣಬಹುದು.
* ವಸಾಹತುಶಾಹಿಗಳ ವಿಡಂಬನೆ ಮತ್ತು ವಿಮರ್ಷೆ. ವಸಾಹತುಶಾಹಿಗಳ ದಬ್ಬಾಳಿಕೆಯಿಂದ ಭಾರತದ ಸಂಪ್ರದಾಯ, ಸಂಸ್ಕೃತಿಗಳ ಮೇಲೆ ಆದ ದುಷ್ಪರಿಣಾಮಗಳು.
* ಇನ್ನೊಂದು ಕಡೆ ಅದನ್ನು ಸುಧಾರಿಸುವ ಪ್ರಯತ್ನಗಳು ಮತ್ತು ಅದರ ಪ್ರಭಾವವನ್ನು ಹೇಗೆ ತಡೆಗಟ್ಟುವುದರತ್ತ ಚಿಂತನೆಗಳು.
ನಮ್ಮ ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯ ತಳಹದಿಯ ಮೇಲೆ ಮಾನವ ಸಂಪನ್ಮೂಲ ಅಭಿವೃದ್ಧಿ ಈ ಲೇಖನದ ಮೂಲ ಉದ್ದೇಶ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಚಾರ ಮಾಡಿದರೆ ವಚನಗಳಲ್ಲಿ ಆಧುನಿಕ ನಿರ್ವಹಣಾ ವಿಜ್ಞಾನದ ಚಿಂತನೆಗಳು ಅಂತಾನೂ ಹೇಳಬಹುದು. ವಚನಗಳು ಮತ್ತು ಬಸವಾದಿ ಶರಣರ ಸಿದ್ಧಾಂತಗಳು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಮಾನವ ಸಂಪನ್ಮೂಲ ನಿರ್ವಹಣ ವಿಜ್ಞಾನಗಳನ್ನು ನಮಗೆ ತಿಳಿಸುವಲ್ಲಿ ಶಕ್ತವಾಗಿವೆ. ಅವುಗಳನ್ನು ನಾವು ಇಂದು ತಿಳಿದುಕೊಳ್ಳಬೇಕಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಎನ್ನುವ ಅಧ್ಯಯನದಲ್ಲಿ ಎರಡು ಆಯಾಮಗಳಿವೆ. ಒಂದು ನಿರ್ವಹಣಾ ವಿಜ್ಞಾನ (Management Science) ಇನ್ನೊಂದು ಮಾನವ ಸಂಪನ್ಮೂಲ (Human Resource). ಇವೆರಡರ ವ್ಯಾಖ್ಯಾನಗಳನ್ನು ನೋಡೋಣ.
ಯಾವುದೇ ಸಂಸ್ಥೆಯ ಅಥವಾ ಸಂಘಟನೆಯ ಅಥವಾ ಸಮೂಹದ ನೌಕರರಿಂದ ಮತ್ತು ಅಲ್ಲಿರುವ ಮೂಲಭೂತ ಸೌಕರ್ಯ ಮತ್ತು ಸೇವೆಗಳನ್ನು ಬಳಸಿಕೊಂಡು ನಿರ್ಧಾರಿತ ಗುರಿಗಳು ಅಥವಾ ನಿರ್ದಿಷ್ಠ ಉದ್ದೇಶಗಳನ್ನು ಸಾಕಾರಗೊಳಿಸಲು ನಡೆಸುವ ಪ್ರಕ್ರಿಯೆ. “ನಿರ್ವಹಣಾ ವಿಜ್ಞಾನ (Management Science)” ಸಂಸ್ಥೆಯ ನಿರ್ವಹಣೆಯ ನೀತಿಗಳು, ಯೋಜನೆಗಳು, ನಿಯಂತ್ರಣಗಳು ಮತ್ತು ನಿರ್ದಿಷ್ಟ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗುವ ಲಕ್ಷ್ಯಗಳು ಒಂದಕ್ಕೊಂದು ಹೆಣೆದುಕೊಂಡಿವೆ.
“ನಿರ್ವಹಣಾ ವಿಜ್ಞಾನ (Management Science)” ಕ್ಕೆ 3 (ಮೂರು) ಪ್ರಮುಖ ಲಕ್ಷಣಗಳಿವೆ.
• ನಿರ್ಧಾರಿತ ಗುರಿಗಳನ್ನು ತಲುಪಲು ನಿರಂತರವಾಗಿ ನಡೆಯುವ ಪ್ರಕ್ರಿಯೆಗಳು.
• ಸಂಸ್ಥೆಯ ಅಥವಾ ಸಂಘಟನೆಯ ಅಥವಾ ಸಮೂಹದ ಎಲ್ಲ ಲಕ್ಷ್ಯಗಳನ್ನು
ಕೇಂದ್ರೀಕರಿಸಿ ಮತ್ತು ಅಳವಡಿಸಿಕೊಂಡು ಗುರಿಯತ್ತ ಸಾಗುವುದು.
• ಸಂಸ್ಥೆಯ ಅಥವಾ ಸಂಘಟನೆಯ ಅಥವಾ ಸಮೂಹದ ಎಲ್ಲ ಸೌಲಭ್ಯಗಳನ್ನು
ಬಳಸಿಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಗುರಿಯನ್ನು ತಲುಪುವುದು.
ನಿರ್ವಹಣಾ ವಿಜ್ಞಾನವು ವಿವಿಧ ವಿಭಾಗಗಳನ್ನು ಸಮನ್ವಯಗೊಳಿಸುವ ನಿತ್ಯನೂತನ ಕಾರ್ಯಕ್ರಮಗಳ ಸಮೀಕರಣ. ಒಂದು ಸಂಘ-ಸಂಸ್ಥೆಯ ಗುರಿಯನ್ನು ತಲುಪುವ ಪ್ರಕ್ರಿಯೆಯಲ್ಲಿ ಸಾಂಸ್ಥಿಕ ನಿಯಮಗಳು, ಸಂಘಟನೆ, ಯೋಜನೆಗಳು, ನಿಯಂತ್ರಣ ಮತ್ತು ನಿರ್ದೇಶನದಂತಹ ಧೇಯೋದ್ದೇಶಗಳನ್ನು ಒಳಗೊಂಡಿರುತ್ತದೆ.
ಪ್ರಾಚೀನ ಸಾಮಾಜಿಕ ಇತಿಹಾಸವನ್ನು ಅಭ್ಯಾಸ ಮಾಡಿದಾಗ ನಮಗೆ ಕಂಡು ಬರುವ ಸಾಮಾಜಿಕ ಜನ-ಜೀವನ ಅತ್ಯಂತ ಕುತೂಹಲವನ್ನು ಮೂಡಿಸುತ್ತದೆ. ನಮ್ಮ ಪುರಾತನರ ಉದರಂಭರಣ ಹೆಚ್ಚಾಗಿ ತಲ ತಲಾಂತರದಿಂದ ಬಂದಂಥ ಆಯಗಾರ ವೃತ್ತಿಯ ತಳಹದಿಯ ಮೇಲೆ ಬೆಳೆದು ಬಂಧಂಥ ಪರಿಕ್ರಮ. ಈ ಆಯಗಾರರಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆಯ ವಿಧಾನ ಅತ್ಯದ್ಭುತವಾದದ್ದು. ಆಧುನಿಕ ಜಗತ್ತಿನಲ್ಲಿ ಈ ಪ್ರಕ್ರಿಯೆ ದೊಡ್ಡ ದೊಡ್ಡ ಸಾಂಸ್ಥಿಕ (Multi National Corporates) ಪ್ರಕ್ರಿಯೆಯಲ್ಲಿ ಬದಲಾಗಿದ್ದನ್ನು ನಾವು ಗಮನಿಸಬಹುದು.
ಇಂತಹ ದೊಡ್ಡ ದೊಡ್ಡ ಸಾಂಸ್ಥಿಕ (Multi National Corporates) ಸಂಸ್ಥೆಗಳಲ್ಲಿ ಅತಿ ದೊಡ್ಡ ದೊಡ್ಡ ಮಾನವ ಸಂಪನ್ಮೂಲಗಳ ಸಮೂಹವನ್ನೇ ನಾವು ಕಾಣಬಹುದು. ಈ ದಿಸೆಯಲ್ಲಿ ಬಸವಾದಿ ಶರಣರ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯತಂತ್ರಗಳ ಮೂಲಸೆಲೆಯನ್ನು ನಾವು ನೋಡಬಹುದು. ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯ ತಳಹದಿ, ಕಾರ್ಯ ವಿಧಾನಗಳ ಸಂಸ್ಕೃತಿ, ನೈತಿಕತೆ, ಸಾಮಾಜಿಕ ಬದ್ಧತೆ, ಶ್ರಮಿಕ ವರ್ಗಗಳ ಘನತೆಗಳ ಮೇಲೆ ಸರ್ವ ಸಮಾನತೆಯ ಸಮಾಜವನ್ನು ಕಟ್ಟಲು ಈ ತತ್ವಗಳು ನಮಗೆ ಸಹಕಾರಿಯಾಗುತ್ತವೆ.
ಇಂಥ ಒಂದು ಪ್ರಬುದ್ಧ ಸಮಾಜವನ್ನು ಕಟ್ಟಲು ಟೊಂಕ ಕಟ್ಟಿ ನಿಂತ ಬಸವಣ್ಣನವರು ತಮ್ಮ ಕಾರ್ಯವಿಧಾನಗಳು ಮತ್ತು ತತ್ವಗಳನ್ನು ಪ್ರಯೋಗಿಸಿ ಯಶಸ್ವಿಯಾದ ಒಬ್ಬ ಶಕ್ತಿಶಾಲಿ ಸಮಾಜೋ-ಆರ್ಥಿಕ ಚಿಂತಕರು. ಕಾಯಕ ಮತ್ತು ದಾಸೋಹವೆಂಬ ಎರಡು ತತ್ವಗಳನ್ನು ಜಾರಿಗೆ ತರುವ ಮೂಲಕ ಒಂದು ಹೊಸ ಕ್ರಾಂತಿಜ್ಯೋತಿಯನ್ನು ಬೆಳಗಿಸಿ ಸಮಾಜದಲ್ಲಿ ಸರ್ವ ಸಮಾನತೆಯ ನಾಂದಿಯನ್ನು ಹಾಡಿದರು. ಬಸವಣ್ಣನವರ ಈ ವಚನ ಈ ಸರ್ವ ಸಮಾನತೆಯ ಆರ್ಥಿಕ ಕ್ರಾಂತಿಯ ಶಿವನ ಪ್ರಕಾಶವೆನ್ನಬಹುದು.
ನಾನು ಆರಂಭವ ಮಾಡುವೆನಯ್ಯಾ | ಗುರುಪೂಜೆಗೆಂದು ||
ನಾನು ಬೆವಹಾರವ ಮಾ ಡುವೆನಯ್ಯಾ | ಲಿಂಗಾರ್ಚನೆಗೆಂದು ||
ನಾನು ಪರಸೇವೆಯನು ಮಾಡುವೆನಯ್ಯಾ | ಜಂಗಮ ದಾಸೋಹಕ್ಕೆಂದು ||
ನಾನಾವಾವ ಕರ್ಮಂಗಳ | ಮಾಡಿದಡೆಯು ||
ಆ ಕರ್ಮಫಲಭೋಗವ ನೀ ಕೊಡುವೆ | ಎಂಬುದ ನಾನು ಬಲ್ಲೆನು ||
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ | ಮತ್ತೊಂದಕ್ಕೆ ಮಾಡೆನು ||
ನಿಮ್ಮ ಸೊಮ್ಮಿಂಗೆ ಸಲಿಸುವೆನು | ನಿಮ್ಮಾಣೆ ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-65 / ವಚನ ಸಂಖ್ಯೆ-709)
ಈ ವಚನದ ಮೂಲಕ ಸಮಕಾಲೀನ ಶರಣರ ಮತ್ತು ಆಯಗಾರರ ಸಾಮಾಜಿಕ ಜನ-ಜೀವನದ ಬದುಕಿನ ಸುಂದರ ಚಿತ್ರಣವನ್ನು ನಮ್ಮ ಮುಂದೆ ತೆರೆದು ನಿಲ್ಲಿಸುತ್ತಾರೆ ಬಸವಣ್ಣನವರು. ನಾನು ಜೀವನವನ್ನು ಶುರು ಮಾಡುವುದೇ ಎಲ್ಲ ಕೃಷಿ ಸಂಸ್ಕೃತಿಗಳ ತಾಯಿಯಾದ ಕೃಷಿಯಿಂದ ಅನ್ನೋದೇ ಆರ್ಥಿಕ ತಳಹದಿಯ ತತ್ವ. ಕೃಷಿ ತನ್ನ ವಿವಿಧ ಆಯಾಮಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಕೆಲಸ ಮಾಡುವುದು ಜ್ಞಾನವನ್ನು ಪಡೆಯುವುದಕ್ಕೆ. ನೈತಿಕ ಪ್ರಜ್ಞೆಯಿಂದ ವ್ಯವಹಾರಗಳನ್ನು ಮಾಡುವುದು ಮೂಲಭೂತ ಕರ್ತವ್ಯ. ಎಲ್ಲ ವ್ಯವಹಾರಗಳೂ ಪೂಜೆಯಷ್ಟೆ ಪೂಜ್ಯನೀಯ. ಸಾಮಾಜಿಕ ಸೇವೆಯನ್ನು ಮಾಡುವಾಗ ಕೌಟುಂಬಿಕ ಹಿತಾಸಕ್ತಿಯ ಜೊತೆ-ಜೊತೆಗೆ, ಸಮಾಜದ ಹಿತಾಸಕ್ತಿ ಮತ್ತು ಸಮಷ್ಠಿಯ ಹಿತಾಸಕ್ತಿ ಬಹಳ ಮುಖ್ಯವಾದ ಕರ್ತವ್ಯ. ಕೂಡಲಸಂಗಮದೇವಾ ನೀನಿತ್ತ ಸಕಲ ಸೌಭಾಗ್ಯಗಳೂ ಈ ಎಲ್ಲ ಹಿತಾಸಕ್ತಿಗಳ ಅಭಿವೃದ್ಧಿಗಳಿಗೆ ಮಾತ್ರ ಉಪಯೋಗಿಸುತ್ತೇನೆ ಅನ್ನುತ್ತಾರೆ ಬಸವಣ್ಣನವರು. ಬಸವಣ್ಣನವರಿಗೆ ಬಹು ದೊಡ್ಡ ಸಾಮಾಜಿಕ ತಿಳುವಳಿಕೆಯ ಪ್ರಜ್ಞೆ ಇತ್ತು ಎಂದು ಈ ವಚನದ ಮೂಲಕ ವ್ಯಕ್ತವಾಗುತ್ತದೆ.
ಹಿಂದಿನಿಂದಲೂ ನಡೆದು ಬಂದಂಥ ಶ್ರೇಣೀಕೃತ ಸಮಾಜದ ಜಾತಿ-ಧರ್ಮ ಭೇದ, ವರ್ಗ ಭೇದಗಳು ಇಂದಿಗೂ ನಡೆದು ಬಂದಿರುವ ನಡೆ-ನುಡಿಗಳು ಸಮಾಜವನ್ನು ವಿಭಾಜಿಸುತ್ತಿವೆ. ಇದರ ಪರಿಣಾಮದಿಂದ ಸಮಾಜ ಒಡೆದು ಯದ್ಧಗಳ ಭೀತಿಗಳು ಇಂದಿಗೂ ಇದೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ತತ್ವಗಳಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಮಾಡಿದಾಗ ಇಂತಹ ಅಸಮಾನತೆಯಿಂದ ಸಮಾಜ ಸುಧಾರಿಸುತ್ತದೆ. ಆಧುನಿಕ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ನಿರೂಪಿಸಬಹುದು. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* ವರ್ಗ ಮತ್ತು ವರ್ಣ ಭೇದ ರಹಿತ ಸಮಾಜ.
* ಲಿಂಗ ಅಸಮಾನತೆಯಂತಹ ದುಷ್ಪರಿಣಾಮಗಳ ನಿವಾರಣೆ.
* ಸಮಾಜದ ಎಲ್ಲ ವರ್ಗದವರಿಗೂ ಆರ್ಥಿಕ ಸಮಾನತೆ.
* ಸಂಘ-ಸಂಸ್ಥೆಗಳಲ್ಲಿ ಸಮಾನ ಆಡಳಿತ ಮತ್ತು ಅಧಿಕಾರದ ಹಂಚಿಕೆಯ ಕಲ್ಪನೆ.
* ಎಲ್ಲರಿಗೂ ನಿಲುಕುವಂಥ ಮತ್ತು ಎಲ್ಲರೂ ಸ್ವೀಕರಿಸಬಹುದಾದಂಥ ಆಧ್ಯಾತ್ಮಿಕ ಚಿಂತನೆ.
ಇಂಥ ಉದಾತ್ತ ಚಿಂತನೆಗಳಿಂದ ನಮಗೆ ಬಸವಣ್ಣನವರು ಅತಿ ಎತ್ತರದ ಸ್ಥಾನದಲ್ಲಿ ಕಂಡು ಬರುತ್ತಾರೆ. ಇಡೀ ಪ್ರಪಂಚದಲ್ಲಿಯೇ ಮಾನವೀಯ ಮೌಲ್ಯಗಳು ಮತ್ತು ಹಕ್ಕುಗಳಿಗೆ ಅತ್ಯಂತ ಪ್ರಾಶಸ್ತ್ಯವನ್ನು ಕೊಟ್ಟವರಲ್ಲಿ ಬಸವಣ್ಣನವರು ಶ್ರೇಷ್ಠ ಸ್ಥಾನವನ್ನು ಅಲಂಕರಿಸುತ್ತಾರೆ. ಸಂಘ-ಸಂಸ್ಥೆಗಳ ಎಲ್ಲ ಸ್ಥರದ ಆಧುನಿಕ ಮಾನವ ಸಂಪನ್ಮೂಲಗಳ ತತ್ವ ಪರಿಪಾಲನೆಯಲ್ಲಿ ಬದ್ಧತೆ ಮತ್ತು ತತ್ವಾದರ್ಶಗಳು ಬಸವಣ್ಣನವರ ಮತ್ತು ಬಸವಾದಿ ಶರಣರ ತತ್ವಗಳು ಇಂದಿಗೂ ಆದರ್ಶಪ್ರಾಯವಾಗಿವೆ.
ಪ್ರಪಂಚದ ಮೊಟ್ಟ ಮೊದಲನೇ ಪಾರ್ಲಿಮೆಂಟ್ ಎನಿಸಿಕೊಂಡಂಥ 12 ನೇ ಶತಮಾನದ ಸಮಾಜೋ-ಧಾರ್ಮಿಕ ಕೇಂದ್ರ “ಅನುಭವ ಮಂಟಪ” ದಲ್ಲಿ ಎಲ್ಲ ಶರಣರು ಅನುಭಾವ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಈ ಅನುಭಾವ ಗೋಷ್ಠಿಗಳು ಪ್ರಮುಖ ಪಾತ್ರವನ್ನು ವಹಿಸಿದ್ದವು. ಇಲ್ಲಿ ವಚನ ಸಾಹಿತ್ಯವು ತನ್ನ ಅಸ್ತಿತ್ವವನ್ನು ಬೆಳೆಸಿಕೊಂಡಿದ್ದು ಸಾಹಿತ್ಯ ಲೋಕದ ಅನುಪಮ ಕೊಡುಗೆ.
“ಮಾನವ ಸಂಪನ್ಮೂಲ” ಎನ್ನುವ ಶಬ್ದವನ್ನು ಪ್ರಯೋಗಿಸಿದವರು ಅಮೇರಿಕಾದ ಆರ್ಥಿಕ ತಜ್ಞ ಜಾನ್ ಆರ್ ಕಾಮನ್ಸ್. 1893 ರಲ್ಲಿ ಪ್ರಕಾಶಿತವಾದ “The Distribution of Wealth” ಪುಸ್ತಕದಲ್ಲಿ ಈ ಶಬ್ದ ಪ್ರಯೋಗವನ್ನು ನಾವು ಕಾಣಬಹುದು. ಆದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಎನ್ನುವ ವಿಭಾಗ ಪ್ರಾರಂಭವಾಗಿದ್ದು 20 ನೇ ಶತಮಾನದ ಆದಿ ಭಾಗದಲ್ಲಿ. ಕಾರ್ಮಿಕರು ಮತ್ತು ಮಾಲೀಕರ ನಡುವಿನ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವಲ್ಲಿ ಈ ವಿಭಾಗಗಳು ಪ್ರಾರಂಭಿಸಲ್ಪಟ್ಟವು. ಆಧುನಿಕ ಜಗತ್ತಿನಲ್ಲಿ ಉಂಟಾಗುವ ತ್ವರಿತಗತಿಯ ತಾಂತ್ರಿಕ ಬದಲಾವಣೆಗಳು ಮತ್ತು ಉತ್ತಮ ಕಾರ್ಯ ನಿರ್ವಹಿಸುವ ಕುಶಲಕರ್ಮಿಗಳ ಅತ್ಯಂತ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಇದೆ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ವಿಭಾಗದ ಅವಶ್ಯಕತೆ ಇದೆ. ಸ್ಥೂಲವಾಗಿ ಮಾನವ ಸಂಪನ್ಮೂಲವನ್ನು ಹೀಗೆ ವ್ಯಾಖ್ಯಾನಿಸಬಹುದು.
ಸೂಕ್ತ ಜ್ಞಾನವಿರುವ ಕುಶಲ ಕರ್ಮಿಗಳನ್ನು ಹುಡುಕುವ, ಕೆಲಸಕ್ಕೆ ತಕ್ಕಂಥ ಕಾರ್ಯ ಕುಶಲತೆಗಳನ್ನು ವಿಂಗಡಿಸುವ, ಕೆಲಸಕ್ಕೆ ನಿಯುಕ್ತಿಗೊಳಿಸುವುದು, ಅವರಿಗೆ ಸೂಕ್ತ ತರಬೇತಿಯನ್ನು ನೀಡುವ ಕಾರ್ಯವಿಧಾನ, ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮುಂತಾದ ಜವಾಬ್ದರಿಯನ್ನು ನಿರ್ವಹಿಸುವ ವಿಭಾಗವೇ ಮಾನವ ಸಂಪನ್ಮೂಲ ವಿಭಾಗ (Human resources – HR).
ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ “ಸಂಘಟನೆ (organizing) ಅತ್ಯವಶ್ಯಕವಾದ ತತ್ವ. ಲೇಖಕ ಪೀಟರ್ ಎಫ್. ಡ್ರಕರ್ ಹೇಳತಾರೆ: ಸಂಘಟನೆ ಎಂದರೆ, ಮಾನವ ಸಂಪನ್ಮೂಲಗಳನ್ನು, ಧನ ಸಂಪನ್ಮೂಲ (ಬಂಡವಾಳ, ಯಂತ್ರಗಳು, ವಸ್ತುಗಳು) ಗಳನ್ನು ಕ್ರೋಢೀಕರಿಸಿಕೊಂಡು ಸಂಸ್ಥೆಯ ಗುರಿ ಮತ್ತು ಉದ್ದೇಶಿತ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತು ಶಿಸ್ತುಬದ್ಧವಾಗಿ ಅನುಷ್ಠಾನಕ್ಕೆ ತರುವುದು.
ಪೀಟರ್ ಫರ್ಡಿನಾಂಡ್ ಡ್ರಕರ್ (1909-2005) ಆಸ್ಟ್ರಿಯನ್ ಸಂಜಾತ ಅಮೇರಿಕಾದ Management Consultant ಮತ್ತು Founder of Modern Management. ಹಾಗೆಯೇ ಶಿಕ್ಷಣ ತಜ್ಞ ಮತ್ತು ಲೇಖಕರೂ ಹೌದು. ಮೂಲತಃ ನಿರ್ವಹಣಾ ಶಾಸ್ತ್ರ ಮತ್ತು ಆಧುನಿಕ ಸಾಂಸ್ಥೀಕರಣ ನಿರ್ವಹಣೆ ವಿಜ್ಞಾನದ ಬಗ್ಗೆ ಅವರು ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. Management Objectives ಮತ್ತು Self Control ಬಗ್ಗೆ ಬರೆದ ಲೇಖನಗಳು ಪ್ರಸಿದ್ಧವಾಗಿವೆ.
ಸಂಘಟನೆಯ ಬಗ್ಗೆ ವಚನ ಸಾಹಿತ್ಯದಲ್ಲಿ ವಿಪುಲವಾದ ಉಲ್ಲೇಖ ನಮಗೆ ಸಿಗುತ್ತದೆ. “ಅನುಭವ ಮಂಟಪ” ವೇ ಒಂದು ಅತ್ಯುತ್ತಮ ಉದಾಹರಣೆ. 770 ಅಮರ ಗಣಂಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮದ ಚಿಂತನೆಯ ಮೂಲಕ ಸಧೃಢ ಸಮಾಜವನ್ನು ಕಟ್ಟಿದ್ದು ಆಧುನಿಕ ನಿರ್ವಹಣಾ ವಿಜ್ಞಾನದ ಸಂಘಟನೆ (Orgnizing) ಎನ್ನುವ ಕಾರ್ಯತಂತ್ರಕ್ಕೆ ಸಾಕ್ಷಿ.
ಮಾನವ ಸಂಪನ್ಮೂಲ ನಿರ್ವಹಣಾ ವಿಜ್ಞಾನದ ಸಂಘಟನೆ (Orgnizing) ಎನ್ನುವ ಕಾರ್ಯತಂತ್ರಕ್ಕೆ ವಚನ ಸಾಹಿತ್ಯದಲ್ಲಿ ಎರಡು ರೀತಿಯಲ್ಲಿ ಪ್ರಸ್ತಾವನೆ ಇದೆ. ಒಂದು ಎಲ್ಲರನ್ನೂ ಸಮಾನವಾಗಿ ಸ್ವೀಕರಿಸಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ನೀಡುವ ಜವಾಬ್ದಾರಿ. ಇನ್ನೊಂದು ಸಂಸ್ಕೃತಿಯ ತಳಹದಿಯ ಮೇಲೆ ಕಾರ್ಯತಂತ್ರವನ್ನು ರೂಪಿಸುವುದು. ಬಸವಾದಿ ಶರಣರು ಈ ಎರಡೂ ಸೂತ್ರಗಳನ್ನು ಬಳಸಿ ಸಂಘಟನೆ (Orgnizing) ಯನ್ನು ಮಾಡತಾರೆ.
ಅರೆವನಯ್ಯಾ | ಸಣ್ಣವಹನ್ನಕ್ಕ ||
ಒರೆವನಯ್ಯಾ | ಬಣ್ಣಗಾಬನ್ನಕ್ಕ ||
ಅರೆದಡೆ ಸಣ್ಣವಾಗಿ | ಒರೆದಡೆ ಬಣ್ಣವಾದಡೆ ||
ಕೂಡಲಸಂಗಮದೇವನೊಲಿದು | ಸಲುಹುವನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-687)
“ಗಂಧ ತೀಡಿದಾಂಗ” ಎನ್ನುವ ನಮ್ಮ ಜಾನಪದರ ನಾಣ್ಣುಡಿಯಂತೆ, ಗಂಧವನ್ನು ತೇಯುವ ಹಾಗೆ ನನ್ನನ್ನು ನಾನೇ ಅರೆದುಕೊಂಡು ಸೇವೆಯನ್ನು ಮಾಡುವೆನು. “ಒರೆವನಯ್ಯಾ ಬಣ್ಣ ಗಾಬನ್ನಕ್ಕ” ಎನ್ನುವಲ್ಲಿ ಅಕ್ಕಸಾಲಿಗನು ಚಿನ್ನವನ್ನು ತಿಕ್ಕಿ ತಿಕ್ಕಿ ಪರೀಕ್ಷಿಸುವಂತೆ ನನ್ನನ್ನು ನಾನು ಪರೀಕ್ಷೆಗೆ ಒಳಪಡುವೆ ಎಂದು ಹೇಳುತ್ತಾರೆ ಬಸವಣ್ಣನವರು. ಈ ಎರಡೂ ತತ್ವಗಳು ಸಂಘಟನೆ (Orgnizing) ಯ ಉನ್ನತ ತತ್ವಗಳು. ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರು ತಮ್ಮೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಕೆಲಸ ಮಾಡುವುದರಿಂದ ಗುರಿ ಮತ್ತು ಉದ್ದೇಶಗಳನ್ನು ತಲುಪುವುದಕ್ಕೆ ಸಹಾಯಕವಾಗುತ್ತದೆ.
ಇನ್ನು ಸಂಸ್ಕೃತಿಯ ತಳಹದಿಯ ಮೇಲೆ ಸಂಘಟನೆಯನ್ನು ಮಾಡುವುದು. ಯಾವಾಗ ಸಂಸ್ಥೆಯಲ್ಲಿ ಗುರಿಯನ್ನು ತಲುಪುವ ವ್ಯವಸ್ಥೆ ಪರಂಪರೆ ಮತ್ತು ಸಂಸ್ಕೃತಿಯ ಮೇಲೆ ಅವಲಂಬಿತವಾಗುತ್ತದೆಯೋ ಅಲ್ಲಿ ಗುರಿ ಮತ್ತು ಉದ್ದೇಶಗಳು ಯಶಸ್ವಿಯಾಗುತ್ತವೆ ಎನ್ನುವುದಕ್ಕೆ Infosys, Microsoft, Wipro ಮತ್ತು TCS ನಂಥ ಹಲವಾರು Multi National Company ಗಳ ಯಶಸ್ಸು ನಮ್ಮ ಕಣ್ಣ ಮುಂದಿವೆ. ಅಲ್ಲಿರುವ ಎಲ್ಲ ಸ್ಥರದಲ್ಲಿ ಕೆಲಸ ಮಾಡುವವರನ್ನು ಮಾತನಾಡಿಸಿದರೆ ಒಂದೇ ತರಹದ ಗುರಿ ಮತ್ತು ಉದ್ದೇಶ ತಲುಪುವುದರ ಬಗ್ಗೆ ಹೇಳುವ ಸಂಸ್ಕೃತಿಯನ್ನು ಕಾಣಬಹುದು.
ಇದನ್ನೇ ಆಧುನಿಕ ನಿರ್ವಹಣಾ ವಿಜ್ಞಾನ (Modern Scientific Management System) ನಾವು “ಕಾಯಕ ಸಂಸ್ಕೃತಿ” (Work Culture) ಎನ್ನುತ್ತೇವೆ. ಇದನ್ನೇ ಬಸವಣ್ಣನವರ ಎರಡು ವಚನಗಳು ಪ್ರಭುದ್ಧವಾಗಿ ಚಿತ್ರಿಸುತ್ತದೆ.
ಲಿಂಗವಶದಿಂದ | ಬಂದ ನಡೆಗಳು ||
ಲಿಂಗವಶದಿಂದ | ಬಂದ ನುಡಿಗಳು ||
ಲಿಂಗವಂತರು | ತಾವು ಅಂಜಲದೇಕೆ? ||
ಲಿಂಗವಿರಿಸಿದಂತಿಪ್ಪುದಲ್ಲದೆ | ಕೂಡಲಸಂಗಮದೇವ ||
ಭಕ್ತರಭಿಮಾನ | ತನ್ನದೆಂಬನಾಗಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-685)
ಲಿಂಗಕ್ಕಲ್ಲದೆ | ಮಾಡೆನೀ ಮನವನು ||
ಜಂಗಮಕ್ಕಲ್ಲದೆ | ಮಾಡೆನೀ ಧನವನು ||
ಪ್ರಸಾದಕ್ಕಲ್ಲದೆ | ಮಾಡೆನೀ ತನುವನು ||
ಲಿಂಗಜಂಗಮ ಪ್ರಸಾದಕ್ಕಲ್ಲದೆ | ಬಾಯ್ದೆರೆಯೆನೆಂಬುದೆನ್ನ ಭಾಷೆ ||
ಅನರ್ಪಿತವಾದಡೆ | ತಪ್ಪೆನ್ನದು ||
ಮೂಗ ಕೊಯಿ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-728)
ಅರಿವೇ ಗುರು, ಆಚಾರವೇ ಲಿಂಗ, ಸಮಾಜ ಮತ್ತು ಸಮಷ್ಠಿಯ ಉತ್ಥಾನವೇ ಜಂಗಮ ಎನ್ನುವುದು ಅಷ್ಟಾವರಣದ ಒಂದು ಶ್ರೇಷ್ಠ ತತ್ವ. ಲಿಂಗ ಎನ್ನುವುದು ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ. ಹಾಗಾಗಿ ಗುರು ಲಿಂಗ ಜಂಗಮವೆನ್ನುವದು ಸಂಘಟನೆಯಲ್ಲಿರುವ ಜನರ ಅರಿವು, ಸಂಸ್ಕೃತಿ ಮತ್ತು ಗುರಿ ಮತ್ತು ಉದ್ದೇಶಗಳನ್ನು ಈಡೇರಿಸುವ ಹಾಗೂ ಸಫಲತೆಯೆಡೆಗೆ ಒಯ್ಯುವ ಸಂಸ್ಕೃತಿಯನ್ನು ಸಂಘಟನೆಯಲ್ಲಿ ಇರಬೇಕಾದ ಅವಶ್ಯಕತೆಯನ್ನು ಬಸವಾದಿ ಶರಣರು 12 ನೇ ಶತಮಾನದಲ್ಲಿ ಕಂಡುಕೊಂಡಿದ್ದರು. ಹಾಗಾಗಿ “ಮಹಾಮನೆ” ಮತ್ತು “ಅನುಭವ ಮಂಟಪ” ಎನ್ನುವ ಎರಡು ಉದಾತ್ತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಇದು ಆಧುನಿಕ ನಿರ್ವಹಣಾ ವಿಜ್ಞಾನ (Modern Scientific Management System) ಕ್ಕೆ ಒಂದು Proto Type Model ಎನ್ನಬಹುದು. ಅದಕ್ಕಾಗಿ ಈಗಲೂ ನಾವು ಈ ಎರಡೂ ಸಂಸ್ಥೆಗಳನ್ನು ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇವೆ.
ಆಧುನಿಕ ಮಾನವ ಸಂಪನ್ಮೂಲ ಅಭಿವೃದ್ಧಿಯ ಚಿಂತನೆಯಲ್ಲಿಯೂ ಕೂಡ ನಾವು ಅಷ್ಟಾವರಣಗಳ ತತ್ವ ಸಿದ್ಧಾಂತಗಳನ್ನು ಕಾಣಬಹುದು. ಎಲ್ಲ ಸ್ಥರಗಳಲ್ಲಿ ಈ ಅಷ್ಟಾವರಣಗಳ ಅನುಷ್ಠಾನ ಮತ್ತು ಆಚರಣೆಗಳನ್ನು ಕುಶಲ ಕರ್ಮಿಗಳು ಅಳವಡಿಸಿಕೊಳ್ಳುವುದರಿಂದ ಸಂಘಟನೆಗಳ ಕಾರ್ಯ-ಕೌಶಲ್ಯತೆ ಉತ್ತಮ ಮಟ್ಟವನ್ನು ತಲುಪುವುದಕ್ಕೆ ಮಾರ್ಗದರ್ಶಿಯಾಗುತ್ತವೆ. ಅಷ್ಟಾವರಣಗಳು:
* ಗುರು, ಲಿಂಗ, ಜಂಗಮ
*ವಿಭೂತಿ, ರುದ್ರಾಕ್ಷಿ, ಮಂತ್ರ
*ಪಾದೋದಕ, ಪ್ರಸಾದ.
ಇವುಗಳು ಶರಣ ಸಿದ್ಧಾಂತದ ಬಹು ಮುಖ್ಯ ತತ್ವಗಳು. ಈ ಒಂದೊಂದು ತತ್ವವೂ ಒಂದೊಂದು ಗುಣಧರ್ಮವನ್ನು ತಿಳಿಸುತ್ತಾ ಭಕ್ತನನ್ನು ಶರಣನನ್ನಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅರಿವೇ ಗುರುವಾಗಿ, ಆತ್ಮವೇ ಲಿಂಗವಾಗಿ, ಸುಜ್ಞಾನವೇ ಜಂಗಮವಾಗಿ, ದೈವೀಸಂಪತ್ತೇ ವಿಭೂತಿಯಾಗಿ, ಜ್ಞಾನ ನೇತ್ರವೇ ರುದ್ರಾಕ್ಷಿಯಾಗಿ, ಪ್ರಣವ ನಾದವೇ ಮಂತ್ರವಾಗಿ, ಅಂತಃಕರಣವೇ ಪಾದೋದಕವಾಗಿ, ಪ್ರಸನ್ನ ಚಿತ್ತವೇ ಪ್ರಸಾದ ಆಗಿರುತ್ತದೆ. ಅಂತರಂಗದ ಅರಿವಿಗೆ ಅಷ್ಟಾವರಣಗಳು ಆವಶ್ಯಕ, ಸಹಾಯಕ ಮತ್ತು ಪೂರಕ. ಭವಿಯಿಂದ ಭಕ್ತ, ಭಕ್ತನಿಂದ ಶರಣನಾಗಲು ಅಷ್ಟಾವರಣಗಳ ಸಂಸ್ಕಾರ ಅತ್ಯಗತ್ಯ. ನಾನ್ಯಾರು ಎಂಬ ಅರಿವು ಮೂಡಿದಾಗ ಅವನು ಆತ್ಮ ಚಿಂತನೆ ಮಾಡುವ ಅನುಭಾವಿಯಾಗುತ್ತಾನೆ.
ಆಧುನಿಕ ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ವಹಣೆಯಲ್ಲಿ ಈ ಅಷ್ಟಾವರಣಗಳು ವೇಗವರ್ಧಕಗಳಂತೆ ಕೆಲಸ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ನಾವು ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ವಹಣಾ ವಿಜ್ಞಾನದಲ್ಲಿ 8 ಪ್ರಾಥಮಿಕ ಅಂಶಗಳು ಅಥವಾ ಸೂತ್ರಗಳನ್ನು ಕಾಣಬಹುದು:
1. ಕೌಶಲ್ಯದ ಚಿಂತನೆ ಮತ್ತು ಅಳವಡಿಕೆ (Acquisition).
2. ನೇಮಕಾತಿ (Recruiting – Internal & External).
3. ಸಾಮಾಜಿಕ ಮನ್ನಣೆ ಮತ್ತು ಘನತೆ (Employee Social Status Development).
4. ವೃತ್ತಿ ಕೌಶಲ್ಯಾಭಿವೃದ್ಧಿ (Career Development).
5. ಪ್ರೇರಣೆ (Motivation).
6. ನಿರ್ವಹಣೆ (Maintainance-Safety and Health, Employee / Labor Relations).
7. ಸಂಭಾವನೆ (Renumeration).
8. ನೈತಿಕತೆ (Esprit de Corps-Morale).
1. ಕೌಶಲ್ಯದ ಚಿಂತನೆ ಮತ್ತು ಅಳವಡಿಕೆ (Acquisition):
ಕೌಶಲ್ಯದ ಚಿಂತನೆ ಮತ್ತು ಅಳವಡಿಕೆಯಲ್ಲಿ ನಾಲ್ಕು ಹಂತಗಳನ್ನು ನಾವು ಕಾಣಬಹುದು. ಮೊದಲನೇಯದ್ದು ಈಗಿರುವ ಕುಶಲ ಕಾರ್ಮಿಗಳ ಅವಶ್ಯಕತೆ, ಎರಡನೇಯದ್ದು ಮುಂದೆ ಬೇಕಾಗುವ ಕುಶಲ ಕರ್ಮಿಗಳ ಅವಶ್ಯಕತೆ, ಮೂರನೇಯದ್ದು ಈಗ ಇರುವ ಮತ್ತು ಬೇಕಾಗುವ ಕುಶಲ ಕರ್ಮಿಗಳ ಸಮತೋಲನತೆ ಮತ್ತು ನಾಲ್ಕನೇಯದ್ದು ಕುಶಲ ಕರ್ಮಿಗಳ ಸದ್ಬಳಕೆ ಮತ್ತು ವರನ್ನು ಉಳಿಸಿಕೊಂಡು ಸಂ-ಸಂಸ್ಥೆಯ ಗುರಿಯತ್ತ ಸಾಗುವ ಚಿಂತನೆ.
ಇಲ್ಲಿ ಗಮನಿಸಬೇಕಾದ ವಾಸ್ತವ ಅಂದರೆ, ಯಾವುದೇ ಸಂಘ-ಸಂಸ್ಥೆಯ ಬೆಳವಣಿಗೆಯಲ್ಲಿ ಕುಶಲ ಕರ್ಮಿಗಳ ಅಥವಾ ಮಾಣವ ಸಂಪನ್ಮೂಲದ ಪಾತ್ರ ಅತ್ಯಮೂಲ್ಯ. ಉತ್ತಮ ಅಭ್ಯರ್ಥಿಗಳ ಆಯ್ಕೆ ಮತ್ತು ಅವರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರ ಅತ್ಯಂತ ಸೂಕ್ಷ್ಮವಾದದ್ದು. 12 ನೇ ಶತಮಾನದ ವಚನ ಸಾಹಿತ್ಯದಲ್ಲಿ ಇದರ ಮಹತ್ವ ಉಲ್ಲೇಖವಾಗಿದ್ದನ್ನು ಕಾಣಬಹುದು. ಶರಣ ವೀರ ಗೊಲ್ಲಾಳರ ಈ ವಚನ ಈ ಮಹತ್ವವನ್ನು ಹೇಳುತ್ತದೆ:
ಕಂಥೆಯ ಕಟ್ಟಿ | ತಿತ್ತಿಯ ಹೊತ್ತು ||
ಮರಿಯ ನಡಸುತ್ತ | ದೊಡ್ಡೆಯ ಹೊಡೆವುತ್ತ ||
ಅಡ್ಡಗೋಲಿನಲ್ಲಿ ಹೋಹ | ಚುಕ್ಕಿ ಬೊಟ್ಟಿನವ ತಿಟ್ಟುತ್ತ ||
ಹಿಂಡನಗಲಿ | ಹೋಹ ದಿಂಡೆಯ ||
ಮಣೆಘಟ್ಟನ ಅಭಿಸಂದಿಯ | ಕೋಲಿನಲ್ಲಿಡುತ್ತ ||
ಈ ಹಿಂಡಿನೊಳಗೆ | ತಿರುಗಾಡುತಿದ್ದೇನೆ ||
ಈ ವಿಕಾರದ | ಹಿಂಡ ಬಿಡಿಸಿ ||
ನಿಜನಿಳಯ ನಿಮ್ಮಂಗವ | ತೋರಿ ಸುಸಂಗದಲ್ಲಿರಿಸು ||
ಎನ್ನೊಡೆಯ | ವೀರಬೀರೇಶ್ವರಲಿಂಗಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1623 / ವಚನ ಸಂಖ್ಯೆ-87)
ಆಧ್ಯಾತ್ಮಿಕ ಸೊಗಡಿರುವ ಶರಣ ವೀರ ಗೊಲ್ಲಾಳರ ಈ ವಚನದಲ್ಲಿ ಮಾನವನು ಜೀವನದ ಅಂತರಂಗ ಮತ್ತು ಬಹಿರಂಗವನ್ನೂ ನೋಡಿಕೊಂಡು ಗುರಿಯನ್ನು ತಲುಪಬೇಕೆನ್ನುವ ಆಶಯವನ್ನು ವ್ಯಕ್ತಪಡಿಸುತ್ತಾನೆ. ಚರ್ಮದ ಚೀಲವನ್ನು ಹೊತ್ತ ದೇಹವನ್ನು ಸಂಸ್ಥೆಯೆನ್ನುವದಕ್ಕೆ ಹೋಲಿಸಬಹುದು. ವಿವಿಧ ಸ್ಥರದ ಮತ್ತು ವಿವಿಧ ತರಹದ ಮನಸ್ಥಿತಿಯುಳ್ಳ ನೌಕರ ವರ್ಗವನ್ನು ಸಂಸ್ಥೆಯು ಹೊಂದಿರುತ್ತದೆ. ಕೆಲವರು ಅಹಂಕಾರದಿಂದ ಕೂಡಿದವರಾಗಿದ್ದರೆ, ಇನ್ನು ಕೆಲವರು ಕೆಲಸ ಮಾಡದೇ ಕುಂತಲ್ಲಿಯೇ ದುಂಡಗಾದವರಿರುತ್ತಾರೆ. ಇನ್ನೂ ಹಲವರು ಜಾತ್ರೆಗಳಲ್ಲಿ ಸೇರಿದ ಜನರಂತೆ ಗದ್ದಲ ಮಾಡಿ ಸಂಸ್ಥೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೋಗುವವರಿರುತ್ತಾರೆ. ಇನ್ನೂ ಕೆಲವರು ಸಂತೋಷದಿಂದ ಅವರ ಕೆಲಸ ಮಾಡಿಕೊಂಡು ಹೊಗುವವರಿರುತ್ತಾರೆ. ಹೀಗೆ ಹಲವು ಮನಸ್ಥಿತಿಯವರನ್ನು ಶರಣ ವೀರಗೊಲ್ಲಾಳರು ಕುರಿಯನ್ನು ಕಾಯುವ ಮೇಲ್ವಿಚಾರಕ (Supervision) ನಂತೆ ನಮಗೆ ಗೋಚರವಾಗುತ್ತಾರೆ. ಹಿಂಡನಗಲಿ ಹೋಗುವವರನ್ನು ಪ್ರೇರೇಪಿಸಿ ತನ್ನಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿ ಮೇಲ್ವಿಚಾರಕನ ಮೇಲಿರುತ್ತದೆ. ಇಂಥ ಅನುಪಮ ವಚನದ ಮೂಲಕ ಮೇಲ್ವಿಚಾರಣೆಯೆಂಬ ತತ್ವವನ್ನು ಆಧ್ಯಾತ್ಮದ ಮೂಲಕ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
2. ನೇಮಕಾತಿ (Recruiting – Internal & External):
ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕೌಶಲ್ಯವನ್ನು ಗುರುತಿಸುವ, ಆಹ್ವಾನಿಸುವ, ಸಂದರ್ಶನ ಮಾಡುವ ಮತ್ತು ಆಯ್ಕೆ ಮಾಡುವ ವಿಧಿ-ವಿಧಾನಗಳನ್ನು ಹೊಂದಿದೆ. ಎಲ್ಲ ಹಂತಗಳಲ್ಲಿ ಅಭ್ಯರ್ಥಿ ಮಾನದಂಡಕ್ಕಿಂತ ಸಂಘ-ಸಂಸ್ಥೆಯ ಅವಶ್ಯಕತೆಯನ್ನು ಅಭ್ಯರ್ಥಿ ಹೇಗೆ ನಿಭಾಯಿಸುತ್ತಾನೆ ಎನ್ನುವುದನ್ನು ಹೆಚ್ಚಾಗಿ ನಾವು ಕಾಣಬಹುದು.
ಇಂಥದ್ದೇ ಒಂದು ಪ್ರಸಂಗವನ್ನು ನಾವು ಶೂನ್ಯ ಸಂಪಾದನೆಯಲ್ಲಿ ಬರುವ “ಅಕ್ಕಮಹಾದೇವಿಯವರ ಸಾಂಗತ್ಯ” ಎನ್ನುವ ಅಧ್ಯಾಯದಲ್ಲಿ ನೋಡಬಹುದು. ಅನುಭವ ಮಂಟಪಕ್ಕೆ ಬರ ಮಾಡಿಕೊಳ್ಳುವ ಮುನ್ನ ಅಲ್ಲಮಪ್ರಭುಗಳು ಅಕ್ಕಮಹಾದೇವಿಯವರಿಗೆ ಎಂತೆಂಥಾ ಕಠಿಣ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಎಲ್ಲ ಪ್ರಶ್ನೆಗಳಿಗೆ ಅಕ್ಕಮಹಾದೇವಿಯವರು ಸೂಕ್ತ ಉತ್ತರಗಳನ್ನು ನೀಡಿ ಅಲ್ಲಮ ಪ್ರಭುಗಳಿಗೇನೇ ಸವಾಲು ಹಾಕುವಷ್ಟು ಪ್ರಭುದ್ಧತೆಯನ್ನು ಪ್ರದರ್ಶಿಸಿದ್ದನ್ನು ನಾವು ಕಾಣಬಹುದು.
ಉದಮದದ | ಯೌವನವನೊಳಕೊಂಡ ಸತಿ ||
ನೀನು ಇತ್ತಲೇಕೆ | ಬಂದೆಯವ್ವಾ? ||
ಸತಿ ಎಂದಡೆ ಮುನಿವರು | ನಮ್ಮ ಶರಣರು ||
ನಿನ್ನ ಪತಿಯ | ಕುರುಹು ಹೇಳಿದಡೆ ||
ಬಂದು ಕುಳ್ಳಿರು | ಅಲ್ಲದಡೆ ತೊಲಗು ತಾಯೆ ||
ನಮ್ಮ ಗುಹೇಶ್ವರನ | ಶರಣರಲ್ಲಿ ||
ಸಂಗಸುಖ ಸನ್ನಿಹಿತವ | ಬಯಸುವಡೆ ||
ನಿನ್ನ ಪತಿ ಯಾರೆಂಬುದ || ಹೇಳೆ ಎಲೆ ಅವ್ವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-226 / ವಚನ ಸಂಖ್ಯೆ-956)
ಅಭ್ಯರ್ಥಿಯ ಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳು ಮತ್ತು ಹಾನಿಗಳನ್ನು ಸಂದರ್ಶನದ ವೇಳೆ ಕೇಳಲಾಗುತ್ತದೆ. ಸೂಕ್ತ ಉತ್ತರದ ಮೇಲೆ ಅಭ್ಯರ್ಥಿಯ ಆಯ್ಕೆನಿಂತಿರುತ್ತದೆ. ಇಂಥ ಪ್ರಶನೆಗಳನ್ನು ಅಕ್ಕಮಹಾದೇವಿಯವರು ಎದುರಿಸಿ ಗೆದ್ದ ಉದಾಹರಣೆ ವಚನ ಸಾಹಿತ್ಯದಲ್ಲಿದೆ. ಅಸಾಧಾರಣ ಬುದ್ಧಿಮತ್ತೆ ಮತ್ತು ಧೈರ್ಯದಿಂದ ಎಂಥ ಸವಾಲುಗಳನ್ನೂ ಎದುರಿಸುವ ಸಾಮರ್ಥವಿತ್ತು ಎನ್ನುವುದನ್ನು ಅಕ್ಕಮಹಾದೇವಿಯವರು ನಿರೂಪಿಸಿದ್ದಾರೆ.
ನಾವು ಯಾಕೆ ನಿಮಗೆ ಈ ಕೆಲಸ ನೀಡಬೇಕೆಂಬ ಅತ್ಯಂತ ಸರಳ ಪ್ರಶ್ನೆ ಎದುರಾಗುವದು. ಇಂಥ ಪ್ರಶ್ನೆಗಳಿಗೆ ಅಕ್ಕಮಹಾದೇವಿಯವರು ಕೊಟ್ಟ ಉತ್ತರ ನಮಗೆ ಮಾರ್ಗದರ್ಶಿಯಾಗಬಹುದು. ಇತ್ತಲೇಕೆ ಬಂದೆಯವ್ವ ಅಂತ ಅಲ್ಲಮಪ್ರಭುಗಳ ಪ್ರಶ್ನೆಗೆ ಅವರ ಉತ್ತರ ಅದ್ಭುತ ಮತ್ತು ಅನುಪಮ.
ಆಡುವುದು ಹಾಡುವುದು | ಹೇಳುವುದು ಕೇಳುವುದು ||
ನಡೆವುದು ನುಡಿವುದು | ಸರಸ ಸಮ್ಮೇಳನವಾಗಿಪ್ಪುದಯ್ಯಾ ||
ಶರಣರೊಡನೆ | ಚೆನ್ನಮಲ್ಲಿಕಾರ್ಜುನಯ್ಯಾ ||
ನೀ ಕೊಟ್ಟ | ಆಯುಷ್ಯವುಳ್ಳನ್ನಕ್ಕರ ||
ಲಿಂಗಸುಖಿಗಳ ಸಂಗದಲ್ಲಿ | ದಿನಗಳ ಕಳೆವೆನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-792 / ವಚನ ಸಂಖ್ಯೆ-54)
ನನಗೆ ಸಕಲ ಸಂಪನ್ನರಾದ ಶರಣರ ಸಂಗದಲ್ಲಿ ನನ್ನ ವಿಚಾರಧಾರೆಗಳು ಇನ್ನಷ್ಟು ಹೊಳಪುಗೊಳ್ಳುತ್ತವೆ. ನನ್ನ ಸೂಕ್ಷ್ಮ ಮನಸ್ಸಿನ ಅಂತರಂಗವನ್ನು ಅರ್ಥ ಮಾಡಿಕೊಳ್ಳುವ ಶರಣರ ಸಂಗದಲ್ಲಿದ್ದರೆ ನನಗೆ ಆಸಕ್ತಿದಾಯಕ ವಿಷಯಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಕ್ಕು ಆತ್ಮ ಸಂತೃಪ್ತಿ ಪಡೆಯುತ್ತದೆ ಎಂದು ಹೇಳುವುದರ ಮೂಲಕ ಸಂಘಟನೆಯ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ವ್ಯಕ್ತ ಪಡಿಸುತ್ತಾರೆ ಅಕ್ಕಮಹಾದೇವಿಯವರು. ಇದೇ ತತ್ವ ಸಿದ್ಧಾಂತವನ್ನು ಆಧುನಿಕ ಮಾನವ ಸಂಪನ್ಮೂಲ ವಿಜ್ಞಾನದಲ್ಲಿ ಅಳವಡಿಸಿಕೊಂಡರೆ ಉತ್ತಮ. 12 ನೇ ಶತಮಾನದ ವಚನ ಸಾಹಿತ್ಯದಲ್ಲಿ ಇಂಥ ಹಲವಾರು ಉದಾಹರಣೆಗಳು ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತವೆ.
3. ಸಾಮಾಜಿಕ ಮನ್ನಣೆ ಮತ್ತು ಘನತೆ (Employee Social Status Development):
ಕೆಲಸ ಕೊಟ್ಟ ಮೇಲೆ, ಸಂಘ-ಸಂಸ್ಥೆಯವರು ನೌಕರರ ಸಾಮಾಜಿಕ ಮನ್ನಣೆ ಮತ್ತು ಘನತೆಯನ್ನು ಕಾಪಾಡುವ ಹೋಣೆಯನ್ನು ಹೊರಬೇಕಾಗುತ್ತದೆ. ನೌಕರರ ನಿರ್ದಿಷ್ಠ ಗುರಿ, ನಿರ್ವಹಣೆ ಮತ್ತು ಕಾರ್ಯಕುಶಲತೆಯನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ಇದಕ್ಕಾಗಿ ತರಬೇತಿ ಮುಂತಾದ ವಿದಾನಗಳನ್ನು ಸಂಸ್ಥೆಯಲ್ಲಿ ಮಾಡಬೇಕಾಗುತ್ತದೆ. ಅದರಂತೆ ನೌಕರರೂ ಕೂಡ ಸಂಘ-ಸಂಸ್ಥೆಗಳ ಆಶಯಗಳನ್ನು ಪೂರೈಸಬೇಕಾದ ಕರ್ತವ್ಯ ನಿಷ್ಠೆಯನ್ನು ಹೊಂದಿರಬೇಕು. ಇದರ ಮೂಲಕ ಅವರ ವೃತ್ತಿ ಬದುಕನ್ನು ಇನ್ನಷ್ಟು ಉಜ್ವಲ ಮಾಡಿಕೊಳ್ಳುವತ್ತ ಗಮನ ಹರಿಸಬೇಕಾಗುತ್ತದೆ. ಇದನ್ನು ವೀರ ಗಣಾಚಾರಿ ಅಂಬಿಗರ ಚೌಡಯ್ಯನವರು ಅತ್ಯಂತ ಕಠಿಣ ಶಬ್ದಗಳಲ್ಲಿ ವರ್ಣಿಸಿದ್ದಾರೆ.
ಅಂಗವ ಅಂದ | ಮಾಡಿಕೊಂಡು ತಿರುಗುವ ||
ಭಂಗಗೇಡಿಗಳು | ನೀವು ಕೇಳಿರೋ ||
ಅಂಗಕ್ಕೆ | ಅಂದವಾವುದೆಂದರೆ ||
ಗುರುವಿಗೆ ತನುವ | ಕೊಟ್ಟಿರುವುದೆ ಚೆಂದ ||
ಲಿಂಗಕ್ಕೆ ಮನವ | ಕೊಟ್ಟಿರುವುದೆ ಚೆಂದ ||
ಜಂಗಮಕ್ಕೆ ಧನವ | ಕೊಟ್ಟಿರುವುದೆ ಚೆಂದ ||
ಅಷ್ಟಾವರಣದಲ್ಲಿ | ನಿಬ್ಬೆರಗಿನಿಂದ ಕೂಡಿ ||
ಭಕ್ತಿಯೆಂಬ ಸಮುದ್ರದಲ್ಲಿ | ಈಸಾಡುವುದೆ ಚೆಂದ ||
ಶಿವನ ಪಾದವ | ಹೊಂದುವುದೆ ಚೆಂದ ||
ಈ ಮಾರ್ಗವ ಬಿಟ್ಟು | ಸಂಸಾರವೇ ಅಧಿಕವೆಂದು ||
ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು | [ತ] ನಗೆ ಶಾಶ್ವತವೆಂದು ತಿಳಿದು ||
ಒಂದು ಕಾಸನಾದರೂ ಪರರಿಗೆ ಕೊಡದೆ | ತಾನೇ ತಿಂದು ನೆಲದಲ್ಲಿ ಮಡಗಿ ||
ಕಡೆಗೆ ಯಮನ ಕೈಯಲಿ ಸಿಲ್ಕಿ | ನರಕ ಕೊಂಡದಲ್ಲಿ ಮುಳುಗೇಳುವುದೇ ನಿಶ್ಚಯ ||
ಇಂತಹ ಅಂದಗೇಡಿಗಳ | ಮುಖವ ನೋಡಲಾಗದೆಂದಾತ ||
ನಮ್ಮ ಅಂಬಿಗರ | ಚೌಡಯ್ಯ ನಿಜಶರಣನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-945 / ವಚನ ಸಂಖ್ಯೆ-14)
ನೌಕರರು ತಮ್ಮ ಕಾರ್ಯ ಕ್ಷೇತ್ರಕ್ಕನುಗುಣವಾಗಿ ಕರ್ತವ್ಯಗಳನ್ನು ನಿಭಾಯಿಸಬೇಕೆಂದು ಈ ವಚನವು ನಿರೂಪಿಸುತ್ತದೆ. ಸನ್ಮಾರ್ಗದಲ್ಲಿ ನಡೆದು ಸಂಘ-ಸಂಸ್ಥೆಗಳ ಗುರಿಗಳನ್ನು ತಲುಪಲು ಅವಶ್ಯಕವಾದ ನೈತಿಕತೆಯಿಂದ ನಡೆದುಕೊಂಡು ಸಮಾಜದಲ್ಲಿ ಗೌರವ-ಘನತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಲಹೆಯನ್ನು ಈ ವಚನದಲ್ಲಿ ನೀಡಲಾಗಿದೆ.
5. ಪ್ರೇರಣೆ (Motivation):
ಪ್ರೇರಣಾತ್ಮಕ (Motivational) ಚಿಂತನೆಗಳು ಸಂಸ್ಥೆಗಳ ಅವಿಭಾಜ್ಯ ಅಂಗ. ಇದು ಸಾಮರ್ಥ್ಯವುಳ್ಳ ನೌಕರರನ್ನು ಹಿಡಿದಿಟ್ಟುಕೊಳ್ಳುವಲ್ಲಿ (Work Force Retention) ಅಮೂಲ್ಯ ಕೊಡುಗೆ ನೀಡುತ್ತದೆ. ಇದಕ್ಕೆ ನಿರ್ವಹಣಾ ಶಾಸ್ತ್ರದಲ್ಲಿ ಹಲವಾರು ನೀತಿಗಳು ಇದ್ದರೂ ಸಹ ನಿಷ್ಠೆ ಎನ್ನುವ ತತ್ವ ಬಹಳ ಮುಖ್ಯವಾದದ್ದು.
ನಿಷ್ಠೆಯಿಂದ | ಲಿಂಗವ ಪೂಜಿಸಿ ||
ಮತ್ತೊಂದು | ಪಥವನರಿಯದ ಶರಣರು ||
ಸರ್ಪನ ಹೆಡೆಯ ಮಾಣಿಕದಂತೆ | ಇಪ್ಪರು ಭೂಷಣರಾಗಿ ||
ದರ್ಪಣದೊಳಗಣ | ಪ್ರತಿಬಿಂಬದಂತೆ ಹಿಂಗದಿಪ್ಪರು ||
ಕೂಡಲಸಂಗಮದೇವಾ | ನಿಮ್ಮ ಶರಣರು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-68 / ವಚನ ಸಂಖ್ಯೆ-746)
ಸಂಸ್ಥೆಯನ್ನು ಬಿಟ್ಟು ಹೋಗುವವರನ್ನು ಬಸವಣ್ಣನವರು ಸರ್ಪದ ಮೇಲಿನ ಮಣಿಯಂತೆ ಪ್ರಯೋಜನಕ್ಕೆ ಬಾರದವರೆಂದು ಹೇಳುವ ಮೂಲಕ ನೌಕರರನ್ನು ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವೆನ್ನುವುದನ್ನು ತಿಳಿಸಿದ್ದಾರೆ. ಲಿಂಗಪಥವೆನ್ನುವ ಏಕೋಭಾವದ ನಂಬುಗೆಯ ಸಂಸ್ಥೆಯ ಗುರಿ ಮತ್ತು ಉದ್ದೇಶಗಳು ನೌಕರರ ಮನಕ್ಕೆ ತಾಕಿದಾಗ ಅವರು ಸಂಸ್ಥೆಯನ್ನು ಬಿಟ್ಟು ಹೋಗುವುದಿಲ್ಲ. ಇದನ್ನು ಉಪಯೋಗಿಸಿಕೊಂಡು ಅವರನ್ನು ಪ್ರೇರೇಪಿಸಬೇಕೆನ್ನುವ ಸದಾಶಯ ಬಸವಣ್ಣನವರ ಈ ವಚನದಲ್ಲಿದೆ.
ನಾಯಕತ್ವ ಗುಣಗಳು (Leadership Qualities) ನಾಯಕತ್ವ ಸಂಸ್ಥೆಯನ್ನು ನಡೆಸುವ ಹಿರಿಯರಲ್ಲಿ ಇರಬೇಕಾದದ್ದು ಅತ್ಯವಶ್ಯಕ.
ಮೇಲಾಗಲೊಲ್ಲೆನು | ಕೀಳಾಗಲಲ್ಲದೆ ||
ಕೀಳಿಂಗಲ್ಲದೆ | ಹಯನು ಕರೆವುದೆ ||
ಮೇಲಾಗಿ | ನರಕದಲೋಲಾಡಲಾರೆನು ||
ನಿಮ್ಮ ಶರಣರ | ಪಾದಕ್ಕೆ ಕೀಳಾಗಿಸು ||
ಮಹಾದಾನಿ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-37 / ವಚನ ಸಂಖ್ಯೆ-360)
“Modern Servant Leadership Movement” ನ ಸಂಸ್ಥಾಪಕ ಅಮೇರಿಕಾದ Robert Greenleaf ಹೇಳುವಂತೆ “Good leaders must first become good servants” ಎನ್ನುವ ನೀತಿಯನ್ನು ಅಕ್ಷರಶಃ ತಮ್ಮ ಆಚರಣೆಯಲ್ಲಿ ತಂದವರು ಬಸವಣ್ಣನವರು. “ಕೀಳಿಂಗಲ್ಲದೆ ಹಯನು ಕರೆವುದೆ” ಹಸು ತನ್ನ ಕರುವಿಗೆ ಮಾತ್ರ ಹಾಲು ನೀಡುವಂತೆ ನನ್ನನ್ನೂ ಕರುವಂತೆ ಕಾಣಿರಿ ಎಂದು ಬಸವಣ್ಣನವರು ಬೇಡಿಕೊಳ್ಳುತ್ತಾರೆ. ಇನ್ನೂ ಮುಂದೆ ಹೋಗಿ ನಿಮ್ಮ ಶರಣರ ಪಾದಕ್ಕೆ ಕೀಳಾಗಿಸು ಎಂದು ಕೂಡಲ ಸಂಗಮದೇವರನ್ನು ಬೇಡುತ್ತಾರೆ. ಸರಳಾತಿ ಸರಳ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಹೋಗುವ ಬಸವಣ್ಣನವರ ನಾಯಕತ್ವದ ದಿವ್ಯ ವ್ಯಕ್ತಿತ್ವವನ್ನು ಈ ವಚನ ನಿರೂಪಿಸುತ್ತದೆ.
6. ನಿರ್ವಹಣೆ (Maintainance-Safety and Health, Employee / Labor Relations):
ಬಹುಮುಖ್ಯವಾದದ್ದು ನೌಕರರ ರಕ್ಷಣೆ ಮತ್ತು ಹಿತರಕ್ಷಣೆ. ಆಂತರಿಕ ಮತ್ತು ಬಾಃಯ ರಕ್ಷಣೆಗಳೆರಡೂ ಬಹಳ ಮುಖ್ಯ. ಕಾನೂನುರೀತ್ಯ ನೌಕರರ ರಕ್ಷಣೆ ಮಾಡುವಂತಹದ್ದು ಸಂಘ-ಸಂಸ್ಥೆಗಳ ಬಹುದೊಡ್ಡ ಜಾವಾಬ್ದಾರಿ. ಇದು ನೌಕರರ ಮತ್ತು ಸಂಘ-ಸಂಸ್ಥೆಗಳ ಮೂಲಭೂತ ಕರ್ತವ್ಯವೂ ಹೌದು. ಇದನ್ನು ಬಸವಣ್ಣನವರು ಈ ವಚನದಲ್ಲಿ ನಿರೂಪಣೆ ಮಾಡಿದ್ದಾರೆ.
ಒಡಲುಗೊಂಡು ಹುಟ್ಟಿದ | ಘಟಕ್ಕೆ ಅಷ್ಟೋತ್ತರ ಶತವ್ಯಾಧಿ ||
ಅದಕ್ಕೆ ನಾನಾ ಔಷಧಿಯ | ತಂದು ಹೊರೆವರು ||
ಆ ಪರಿಯ ನಾನದ ಹೊರೆಯೆನು | ಅದೇನು ಕಾರಣವೆಂದೆಡೆ ||
ಭವರೋಗ ವೈದ್ಯ | ಭವಹರನೆಂಬ ಬಿರುದು ನಿಮ್ಮದಾಗಿ ||
ಇದು ಕಾರಣ | ಕೂಡಲಸಂಗಮದೇವಾ ||
ನಿಮ್ಮ ಪುರಾತನರ ಪ್ರಸಾದವಲ್ಲದೆ | ಕೊಂಡಡೆ ನಿಮ್ಮಾಣೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-100 / ವಚನ ಸಂಖ್ಯೆ-1109)
ವೈದ್ಯ ವೃತಿಯ ಹಲವಾರು ವಿಷಯವನ್ನೊಳಗೊಂಡಂತೆ ರಕ್ಷಣೆಯ ವಿಷಯವನ್ನೂ ಸಹ ಈ ವಚನ ತಿಳಿಸುತ್ತದೆ. ಅದರಂತೆ ನೌಕರರೂ ಮತ್ತು ಸಂಘ-ಸಂಸ್ಥೆಗಳೂ ಕೂಡ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು.
7. ಸಂಭಾವನೆ (Renumeration).
ಎಲ್ಲ ಕಾರ್ಯಗಳಿಗೆ ಅವರವರ ಕಾರ್ಯಕ್ಕೆ ತಕ್ಕಂತೆ ಸಂಭಾವನೆ ಸಿಗುವ ವ್ಯವಸ್ಥೆಯನ್ನು ಸಂಸ್ಥೆಗಳು ಮಾಡಬೇಕಾಗುತ್ತದೆ. ಇದು ಅತಿ ಮುಖ್ಯವಾದ ತತ್ವ. ಪ್ರಪಂಚದ ಎಲ್ಲ ಸಂಸ್ಥೆಗಳ ಯಶಸ್ಸಿನ ಗುಟ್ಟೆಂದರೆ ಅವರ ನೌಕರರಿಗೆ ಕೊಡುವ ನಿರ್ಧಾರಿತ ಮೊತ್ತ ಮತ್ತು ನಿರ್ಧಾರಿತ ಸಮಯದಲ್ಲಿ ಸಂಬಳದ ವಿತರಣೆ.
ಎಲ್ಲಾರು ಮಾಡುವುದು ಹೊಟ್ಟಗಾಗಿ ಗೇಣು ಬಟ್ಟೆಗಾಗಿ ಅಂತಾ ದಾಸ ಸಾಹಿತ್ಯದ ಶ್ರೇಷ್ಠ ದಾಸರಲ್ಲಿ ಒಬ್ಬರಾದ ಕನಕದಾಸರು ಹೇಳುವ ಹಾಗೆ ಸಂಭಾವನೆ ಪ್ರಮುಖ ವಿಷಯ.
ಎಲ್ಲಾರು ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ವೇದಶಾಸ್ತ್ರ ಪಂಚಾಂಗವ | ಓದಿಕೊಂಡು ||
ಅನ್ಯರಿಗೆ ಬೋಧನೆಯ ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಚಂಡಭಟರಾಗಿ ನಡೆದು | ಕತ್ತಿ ಢಾಲು ಕೈಲಿ ಹಿಡಿದು ||
ಖಂಡ ತುಂಡ ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಅಂಗಡಿ ಮುಂಗಟ್ಟನ್ಹೂಡಿ | ವ್ಯಂಗ್ಯ ಮಾತುಗಳನ್ನಾಡಿ ||
ಭಂಗ ಬಿದ್ದು ಗಳಿಸುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಕುಂಟೆ ತುದಿಗೆ ಕೊರಡು ಹಾಕಿ | ಹೆಂಟೆ ಮಣ್ಣು ಸಮನು ಮಾಡಿ ||
ರೆಂಟೆ ಹೊಡೆದು ಬೆಳೆಸುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಬೆಲ್ಲದಂತೆ ಮಾತಾನಾಡಿ | ಎಲ್ಲರನ್ನು ಮರುಳು ಮಾಡಿ ||
ಸುಳ್ಳು ಬೊಗಳಿ ತಿಂಬುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಕೊಟ್ಟಣವನು ಕುಟ್ಟಿಕೊಂಡು | ಕಟ್ಟಿಗೆಯನು ಹೊತ್ತುಕೊಂಡು ||
ಕಷ್ಟ ಮಾಡಿ ಉಣ್ಣುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ತಾಳ ದಂಡಿಗೆ ಶ್ರುತಿ ಮೇಳ | ತಂಬೂರಿಯ ಹಿಡಿದುಕೊಂಡು ||
ಸೂಳೆಯಂತೆ ಕುಣಿಯುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಸನ್ಯಾಸಿ ಜಂಗಮ ಜೋಗಿ | ಜಟ್ಟಿ ಮೊಂಡ ಬೈರಾಗಿ ||
ನಾನಾ ವೇಷಗಳೆಲ್ಲ | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಹಳ್ಳದಲ್ಲಿ ಕುಳಿತುಕೊಂಡು | ಕಲ್ಲು ದೊಣ್ಣೆ ಹಿಡಿದುಕೊಂಡು ||
ಕಳ್ಳತನವ ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಅಂದಣ ಪಲ್ಲಕ್ಕಿ ಏರಿ | ಮಂದಿ ಮಾರ್ಬಲ ಕೂಡಿ ||
ಚಂದದಿಂದ ಮೆರೆಯುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
ಉನ್ನತ ಕಾಗಿನೆಲೆಯಾದಿಕೇಶವನಾ | ಧ್ಯಾನವನ್ನು ||
ಮನಮುಟ್ಟಿ ಮಾಡುವುದು | ಮುಕ್ತಿಗಾಗಿ ಆನಂದಕಾಗಿ ||
ಪ್ರಪಂಚದ ಎಲ್ಲ ದುಡಿಯುವ ಮತ್ತು ಕಾಯಕ ವರ್ಗದವರಿಗೆ ಸೇರಬೇಕಾದದ್ದು ನಿಯತ ಕಾಲದಲ್ಲಿ ಬರುವ ಸಂಭಾವನೆ ಅಥವಾ ವರಮಾನ. ಈ ತತ್ವ ಸಿದ್ಧಾಂತವನ್ನೇ 12 ನೇ ಶತಮಾನದಲ್ಲಿ ಅಲ್ಲಮ ಪ್ರಭುಗಳ ಈ ವಚನ ಪ್ರಶ್ನಾರ್ಥಕವಾಗಿ ನಿರೂಪಿಸಿದೆ. ಅಂದರೆ ಈ ಎಲ್ಲ ಸಿದ್ಧಾಂತಗಳನ್ನೂ ನಾವು ಪಾಲಿಸಿದಾಗ ಮಾತ್ರ ಸಮಾಜವನ್ನು ಉನ್ನತ ಮಟ್ಟದಲ್ಲಿ ನೋಡಲು ಸಾಧ್ಯ ಎನ್ನುವದಕ್ಕೆ ಉದಾಹರಣೆ.
ಬೆವಸಾಯವ ಮಾಡಿ ಮನೆಯ | ಬೀಯಕ್ಕೆ ಬತ್ತವಿಲ್ಲದಿರ್ದಡೆ ||
ಆ ಬೆವಸಾಯದ | ಘೋರವೇತಕ್ಕಯ್ಯಾ? ||
ಕ್ರಯವಿಕ್ರಯವ ಮಾಡಿ | ಮನೆಯಸಂಚ ನಡೆಯದನ್ನಕ್ಕ ||
ಆ ಕ್ರಯವಿಕ್ರಯದ | ಘೋರವೇತಕ್ಕಯ್ಯಾ? ||
ಒಡೆಯನನೋಲೈಸಿ ತನುವಿಂಗೆ | ಅಷ್ಟಭೋಗವ ಪಡೆಯದಿರ್ದಡೆ ||
ಆ ಓಲಗದ | ಘೋರವೇತಕ್ಕಯ್ಯಾ? ||
ಭಕ್ತನಾಗಿ ಭವಂ | ನಾಸ್ತಿಯಾಗದಿರ್ದಡೆ ||
ಆ ಉಪದೇಶವ ಕೊಟ್ಟ ಗುರು | ಕೊಂಡ ಶಿಷ್ಯ ||
ಇವರಿಬ್ಬರ ಮನೆಯಲಿ | ಮಾರಿ ಹೊಗಲಿ ||
ಗುಹೇಶ್ವರನೆಂಬವನತ್ತಲೆ | ಹೋಗಲಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65)
ವ್ಯವಸಾಯದಿಂದ ಉತ್ಪನ್ನವಿಲ್ಲದಿದ್ದರೆ, ವ್ಯಾಪಾರ ಮಾಡಿ ಲಾಭವಿಲ್ಲದಿದ್ದರೆ, ಒಡೆಯರನ್ನು ಸಂತುಷ್ಟಗೊಳಿಸಿ ಕಾಣಿಕೆಗಳನ್ನು ಪಡೆಯದಿದ್ದರೆ, ಗುರುವಿನಿಂದ ಪಾಠ ಕಲಿಯಲು ಅವಕಾಶವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಅಂತೆಯೇ ಸಮಾಜದ ಎಲ್ಲ ಚರಾಚರ ವಸ್ತುಗಳಿಂದ, ಎಲ್ಲ ವರ್ಗಗಳವರ ಸಹಯೋಗದಿಂದ ಲಾಭವಾದಾಗ ಮಾತ್ರ ಸುಖಿ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಈ ವಚನದಲ್ಲಿ ನಿರೂಪಿಸಿದ್ದಾರೆ ಅಲ್ಲಮ ಪ್ರಭುಗಳು.
ಎಲ್ಲವೂ ಆಧುನಿಕ ಮತ್ತು ನಾವೇ ಶ್ರೇಷ್ಠ ಮತ್ತು ವೈಜ್ಞಾನಿಕ ಸೂತ್ರಗಳನ್ನು ಅನುಷ್ಠಾನಗೊಳಿಸಿಕೊಂಡಿದ್ದೇವೆ ಎನ್ನುವದು ನಮ್ಮ ಇಂದಿನ ಭ್ರಾಂತಿ ಎಂದರೆ ತಪ್ಪಾಗಲಾರದು. ನಾವು ಅಥವಾ ಹಿರಿಯ ಸಾಮಾಜಿಕ ಮತ್ತು ಆರ್ಥಿಕ ತಜ್ಞರು ಅಥವಾ ವಿಜ್ಞಾನಿಗಳು ಹೇಳಿರುವ ಎಲ್ಲ ಸೂತ್ರಸಿದ್ಧಾಂತಗಳನ್ನು 12 ನೇ ಶತಮಾನದ ಬಸವಾದಿ ಶರಣರು ಅನುಷ್ಠಾನಗೊಳಿಸಿ ಸುಖಿ ಮತ್ತು ಸಮ ಸಮಾಜವನ್ನು ನಿರ್ಮಾಣ ಮಾಡಿದ್ದು ನಮಗೆ ವಚನ ಸಾಹಿತ್ಯ ಮತ್ತ ಇತಿಹಾಸದಿಂದ ತಿಳಿದು ಬರುತ್ತದೆ.
8. ನೈತಿಕತೆ (Esprit de Corps-Morale).
ಸಂಸ್ಥೆಯ ಮತ್ತು ನೌಕರ ವರ್ಗದವರ ಉನ್ನತ ಮಟ್ಟದ ನೈತಿಕತೆ ಮತ್ತು ಉನ್ನತ ಮಟ್ಟದ ಆದರ್ಶಗಳು ಆ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಬೆಳೆಸುವಲ್ಲಿ ಅತ್ಯಂತ ಅವಶ್ಯಕ ತತ್ವ. ಉತ್ತಮ ಬೇಳೆ ತೆಗೆಯಲು ಫಲವತ್ತಾದ ಹೊಲ ಹೇಗೆ ಬೇಕೋ ಹಾಗೇಯೇ ಈ ಉನ್ನತ ಮಟ್ಟದ ನೈತಿಕತೆ ಮತ್ತು ಉನ್ನತ ಮಟ್ಟದ ಆದರ್ಶಗಳು ಸಂಸ್ಥೆಯನ್ನು ಉನ್ನತಕ್ಕೇರಿಸಲು ಸಹಾಯಕವಾಗುತ್ತವೆ.
ಕಾಯಕ ತತ್ವದ ರಾಯಭಾರಿಯಾಗಿರುವ “ಆಯ್ದಕ್ಕಿ ಲಕ್ಕಮ್ಮ” ನವರ ಕಾಯಕ ನಿಷ್ಠೆ, ನೈತಿಕತೆಯ ಪ್ರಜ್ಞೆ ಅನುಪಮ ಮತ್ತು ಅಲೌಕಿಕವಾದದ್ದು. ಅದ್ಭುತ ವಚನದ ಮೂಲಕ ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale) ಹೇಗಿರಬೇಕೆಂಬುದನ್ನು ನಿರೂಪಿದ್ದಾರೆ. ಮನಃಶುದ್ಧಿಯಿಂದ ಕಾಯಕ ಮಾಡಿದರೆ ಎಲ್ಲೆಡೆ ಸಂಪತ್ತಿನ ಮಳೆಯಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ.
ಮನ ಶುದ್ಧವಿಲ್ಲದವಂಗೆ | ದ್ರವ್ಯದ ಬಡತನವಲ್ಲದೆ ||
ಚಿತ್ತಶುದ್ಧದಲ್ಲಿ | ಕಾಯಕವ ಮಾಡುವಲ್ಲಿ ||
ಸದ್ಭಕ್ತಂಗೆ ಎತ್ತ ನೋಡಿದತ್ತತ್ತ | ಲಕ್ಷ್ಮಿ ತಾನಾಗಿಪ್ಪಳು ||
ಮಾರಯ್ಯಪ್ರಿಯ ಅಮರೇಶ್ವರಲಿಂಗದ | ಸೇವೆಯುಳ್ಳನ್ನಕ್ಕರ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-867 / ವಚನ ಸಂಖ್ಯೆ-724)
ಸಂಸ್ಥೆಯಲ್ಲಿ ಕೆಲಸ ಮಾಡುವವರು ಸದ್ಭಕ್ತರ ಹಾಗಿರಬೇಕೆಂಬುದು ಈ ವಚನದ ಸಾರಾಂಶ. ಇದೇ ಆಧುನಿಕ ಮಾನವ ಸಂಪನ್ಮೂಲ ನಿರ್ವಣಾ ವಿಜ್ಞಾನದ ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale) ಎನ್ನುವ ತತ್ವ. ನೈತಿಕ ಶುದ್ಧವಿದ್ದಲ್ಲಿ ಸಂಘ ಮತ್ತು ಸಂಸ್ಥೆಗಳು ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವೇ ಬೇಡ. ಇಂಥ ಉದಾತ್ತ ಚಿಂತನೆಯನ್ನು ಶರಣೆ ಆಯ್ದಕ್ಕಿ ಲಕ್ಕಮ್ಮನವರು 12 ನೇ ಶತಮಾನದಲ್ಲಿಯೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಇಡೀ ಪ್ರಪಂಚದ ಎಲ್ಲ ದೇಶಗಳು ಪರಂಪರೆ ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ರೀತಿ ನೀತಿಗಳನ್ನು ರೂಪಿಸುವುದರಲ್ಲಿ ತೊಡಗಿಸಿಕೊಂಡಿವೆ. ಆದರೆ ಭಾರತದ ಮಾದರಿಗಳು (Models) ಮತ್ತು ನೀತಿಗಳು (Policies) ಸರಿ ಸುಮಾರು 7500 ವರ್ಷಗಳಿಂದ ಇದೇ ತಳಹದಿಯ ಮೇಲೆ ನಡೆದು ಬಂದಿರುವುದನ್ನು ನಾವು ಕಾಣಬಹುದು. 1800 ವರ್ಷಗಳ ಸಮಗ್ರ ನೀತಿಗಳ ಇತಿಹಾಸವಿರುವ ಭಾರತದ ಮಾದರಿಗಳು ಎಲ್ಲ ರೀತಿಯಿಂದಲೂ ಪರಿಕ್ಷೆಗೊಳಪಟ್ಟು ಸಧೃಢವಾಗಿ ಅನುಷ್ಠಾನಗೊಂಡಿರುವ ಮಾದರಿಗಳು (Articulated, Tested and Successfully Implimented Policies and Models). ಪ್ರಪಂಚದ ವ್ಯವಸ್ಥೆಗಳು ತಲ್ಲಣಗೊಂಡಿರುವ ಈ ಸಂಕಷ್ಟ ಕಾಲದಲ್ಲಿ ಎಲ್ಲ ದೇಶಗಳು ಭಾರತದ ಮಾದರಿಗಳತ್ತ ನೋಡುವಂತಾಗಿದೆ. ಪ್ರಪಂಚದಲ್ಲಿ ಸಂಸ್ಕೃತಿ, ಪರಂಪರೆ ಮತ್ತು ನೈತಿಕತೆಯ ತಳಹದಿಗಳು ಕುಸಿದಿರುವ ಈ ಸಂಕಷ್ಟ ಕಾಲದಲ್ಲಿ ಇವಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತಕ್ಕೆ ಎಲ್ಲ ಅವಕಾಶಗಳ ಬಾಗಿಲುಗಳು ತೆರೆದುಕೊಂಡಿವೆ. ಅತ್ಯಂತ ಕುತೂಹಲಕರ ಘಟ್ಟದಲ್ಲಿ ನಾವಿದ್ದೇವೆ. ಮುಂದಿನ 20 ವರ್ಷಗಳು ಭಾರತಕ್ಕೆ ಪರೀಕ್ಷೆಯ ಸಮಯ. ಭಾರತವು ಮತ್ತೇ ಉನ್ನತ ಮಟ್ಟಕ್ಕೇರುವ ಎಲ್ಲ ಸಾಧ್ಯತೆ ಮತ್ತು ಅವಕಾಶಗಳೂ ಇವೆ. ಆದರೆ ಭಾರತ ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎನ್ನುವುದೇ ಸಧ್ಯದ ಸವಾಲು.
“ಜಾತಸ್ಯ ಮರಣಂ ಧೃವಂ” ಎನ್ನುವ ನಾಣ್ಣುಡಿಯಂತೆ ನಾವೆಲ್ಲರೂ ಒಂದು ದಿನ ನಿರ್ಗಮಿಸುವವರೆ. ಆದರೆ ಹೋಗುವ ಮುನ್ನ ಸಮಾಜಕ್ಕೆ ಮತ್ತು ಸಮಷ್ಠಿಯಲ್ಲಿ ನಾವು ಬದುಕಿದ್ದೆವು ಎನ್ನುವುದಕ್ಕೆ ಏನಾದರೂ ಸಾಧನೆಯನ್ನು ಅಥವಾ ಸಮಾಜಕ್ಕೆ ಕೊಡುಗೆಯನ್ನು ನೀಡಿ ಹೋಗಬೇಕೆಂಬ ಸದಾಶಯವನ್ನುಳ್ಳ ಬಸವಣ್ಣನವರ ಈ ಅದ್ಭುತ ಮತ್ತು ಅನುಪಮ ವಚನದ ಮೂಲಕ ಲೇಖನಕ್ಕೆ ವಿರಾಮ ಹೇಳುತ್ತೇನೆ.
ಹೊತ್ತಾರೆ ಎದ್ದು | ಅಗ್ಘವಣೆ ಪತ್ರೆಯ ತಂದು ||
ಹೊತ್ತು ಹೋಗದ ಮುನ್ನ | ಪೂಜಿಸು ಲಿಂಗವ ||
ಹೊತ್ತು ಹೋದ ಬಳಿಕ | ನಿನ್ನನಾರು ಬಲ್ಲರು? ||
ಹೊತ್ತು ಹೋಗದ ಮುನ್ನ | ಮೃತ್ಯುವೊಯ್ಯದ ಮುನ್ನ ||
ತೊತ್ತುಗೆಲಸವ ಮಾಡು | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-172)
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋ. ನಂ : 9741 357 132
ಈ-ಮೇಲ್ : vijikammar@gmail.com
References:
The Distribution of Wealth – John R Commons.
The Age of Discontinuity – Peter Drucker.
Basavanna Yugada Vachana Mahasamputa-1, Kannada Pustaka Pradhikara-2016. Editor in Chief: Dr. M. M. Kalburgi.
Economics and World History: Myths & Paradoxes – Paul Bairoch.
The World Economy: The Millennium Perspective – Angus Maddison.
Development Research Group, the World Bank, and Kennedy School of Government, Harvard University. Paper submitted by Woolcock & Narayan in the year 2000 – “The place of Social Capital in Understanding Social and Economic Outcomes”
Down Fall of Hindu India – C V Vaidya.
Marketing Management – Philip Kotler & Kelvin Lane Keller.
Marketing Problem Solver – Cochrane Chase & Kenneth L Barasch.
The Commanding Heights – Daniel Yergin & Joseph Stanislaw.
ಅಲ್ಲಮ ಪ್ರಭುದೇವರ ವಚನ ನಿರ್ವಚನ – ಶ್ರೀ ಸಿದ್ಧೇಶ್ವರ ಸ್ವಾಮಿಗಳು.
ಶೂನ್ಯ ಸಂಪಾದನೆಯ ಪರಾಮರ್ಶೆ – ಪ್ರೊ. ಸಂ ಶಿ ಭೂಸನೂರಮಠ.