ದಾಸ ಪುರಂದರ

ದಾಸ ಪುರಂದರ

ಬಲು ದೊಡ್ಡ ಸಾಹುಕಾರನೀತ
ಚಿನ್ನ ಬೆಳ್ಳಿಗಳ ವ್ಯಾಪಾರನಿರತ
ಜಿಪುಣರಲಿ ಜಿಪುಣನು ಈತ
ಉಡಲು ತೊಡಲು ಹಿಂಜರಿವನೀತ || 1 ||

ತಿನಲು ಉಣಲು ಲೆಕ್ಕ ಹಾಕುವನೀತ
ದುಡಿದು ದುಡಿದು ಬಲು ಗಳಿಸಿರುವನೀತ
ಬಿಡಿಗಾಸು ಬಿಚ್ಚದೇ ಜೀವನ ಸಾಗಿಸುತ
ಕಡು ಬಡವರಂತೆ ನಡೆಯುವವನೀತ || 2 ||

ಬಡ ಬ್ರಾಹ್ಮಣ ಬಂದು, ಧನ ಸಹಾಯ ಬೇಡಿದ
ಇವ ಕೊಡದಲೇ ಅವನ ಸಾಗಹಾಕಿದ
ಮರುದಿನವೂ ಬಡವ ಬಂದು ಬೇಡಿದ
ದಿನದಿನವೂ ಈತ ಅವನ ತಿರುಗಿ ಕಳಿಸಿದ || 3 ||

ಬೇಸರಿಸದೇ ಬಡವ ಕಾಡಿದನು ಧನಿಕನp
ಕೊಡದಲೇ ಇವನು ತಿರುಗಿ ಕಳಿಸುತ ಬಡವನ
ಬಿಡದೆ ಬಡವ ಕಂಡ ಧನಿಕನ ಸತಿಯನ
ಏನಾದರೂ ಕೊಡಲು ಕೇಳಿದ ಬಿಡದೆ ನಮಿಸುತ || 4 ||

ಧನಿಕಾನಾ ಸತಿ ಬಲು ಚಡಪಡಿಸುತಲಿ
ಮನೆಯಲಿ ಏನೇನೂ ಇಲ್ಲವೆನುತಲಿ
ಬಿಡದೇ ಬೇಡಿದ ಬಡವ ಅವಳ ಕಾಡುತಲಿ
ಕರುಣದಿ ಒಡನೆ ತನ್ನ ಮೂಗುತಿ ಕೊಡುತಲಿ || 5 ||

ಮೂಗುತಿಯನು ಪಡೆದ ಬಡವನಾಗ
ಸಾಗಿದನು ಸಾಹುಕಾರನಂಗಡಿಗೆ ಬೇಗ
ತೆಗೆದುಕೊ ಇದನು ನನಗೆ ಹಣ ನೀಡು ಈಗ
ನೀಡಿದನು ಮೂಗುತಿಯ ಹಣವ ಬೇಡಿದನಾಗ || 6 ||

ಮೂಗಿನ ನತ್ತನು ನೋಡುತಲಿ ಧನಿಕನು
ನೋಡುತ ನೋಡುತಲಿ ಗುರುತಿಸಿದ ನತ್ತನು
ಗಡಬಡಿಸಿ ಮೂಗುತಿಯ ಭದ್ರತೆಯಲಿರಿಸಿದನು
ಬಡವಗೆ ಕೂಡಲು ಹೇಳಿ ಮನೆಗೆ ತೆರಳಿದನು || 7 ||

ತಡಬಡಿಸಿ ಬಂದ ಪತಿಯನು ಕಂಡ
ಹೆದರಿದಳು ಅವನ ಸತಿ ಗಾಬರಿಗೊಂಡು
ಬೇಡಿದವಳಿಗೆ ನಿನ್ನ ಮೂಗುತಿಯ ತೋರೆಂದು
ಹೇಳಿದಳು ಸತಿಯು ಈಗ ಕೊಡುವೆನೆಂದು || 8 ||

ಕೊಡುವೆ ಕೂಡಿರಿ ಎಂದು ಪತಿಗೆ ಹೇಳುತ
ಸರಿದಳು ಒಳಕೋಣೆಗೆ ಗಾಬರಿ ಪಡುತ
ಬಿಡದೆ ಇವನು ಶಿಕ್ಷೆಕೊಡುವನು ಎನುತ
ಎತ್ತಿದಳು ಭಡನೆ ಬಟ್ಟಲವ ವಿಷದ ಸಹಿತ || 9 ||

ನೋಡುತಲಿರೆ ವಿಷದ ಬಟ್ಟಲನು ತಾನು
ಕಂಡಳಾ ಸತಿಯು ಬಟ್ಟಲದಿ ತಾನಿತ್ತ ನತ್ತನು
ಬಿಡನೆ ಹರುಷದಿ ನತ್ತನು ಇತ್ತಳು ತಾನು
ಬಿಡಬಿಡದೆ ನೋಡುತಲಿ ಧನಿಕ ನತ್ತನು ತಾನು || 10 ||

ದುಡುದುಡುನೆ ಓಡುತ ಬಂದ ಅಂಗಡಿಗೆ ತಾನು
ಹುಡುಕಿದನು ಭದ್ರವಿರಿಸಿದ ನತ್ತನು ತಾನು
ಸಿಗದಿರದೆ ಕಾಣದದನು ಚಡಪಡಿಸುತ ತಾನು
ಮನದಲಿ ಮಿಡಿಯುತ ಆಕ್ಷಣದಿ ತಾನು || 11 ||

ಮನವು ಮುದುಡಿತು ತಿಳಿದು ತನ್ನನು ತಾನು
ಇದು ದೇವನ ಮಹಿಮೆಯಂದರಿಯುತಲಿ ತಾನು
ಕ್ಷಣ ಬಿಡದೆ ನಮಿಸುತ ದೇವರಿಗೆ ತಾನು
ಬಿಡದೇ ರಕ್ಷಿಸಲು ಪರಿಪರಿಯಲಿ ಬೇಡಿದ ತಾನು || 12 ||

ನವಕೋಟಿ ನಾರಾಯಣ ಧನಿಕ ತಾನು
ಎಲ್ಲವನೂ ತೊರೆದು ಹರಿಯ ಸೇವಿಸಿದ ತಾನು
ಗೆಜ್ಜೆಗಳ ಕಟ್ಟುತ ತಂಬೂರಿ ಮೀಟುತ ತಾನು
ಹರಿಯ ಸೇವಕನಾಗಿ ಗೋಪಾಳ ಬುಟ್ಟಿಯ ಹಿಡಿದ ತಾನು || 13 ||

“ ಇವರೇ ದಾಸರ ದಾಸ ಪುರಂದರದಾಸ “
ದಾಸಕೂಟದ ಪ್ರಮುಖದಾಸ ಪುರಂದರದಾಸ
ಹರಿಯ ಸೇವಕನಾಗಿ ಪರಿ ಪರಿ ಪೂಜಿಸುತ
ಹರಿಯನೇ ನೆನೆಯುತ ಹರಿಪಾದ ಸೇರುತ || 14 ||

-ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473

Don`t copy text!