ಬಂಗಾರದ ಅಂಗಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ
ಮುಂದಿನ ಪೀಳಿಗೆಗಾಗಿ ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ..– ದೀಪಕ ಚಂದುಕಾಕಾ ಸರಾಫ್ ಶಾಖಾ ವ್ಯವಸ್ಥಾಪಕ.
ವರದಿ : ರೋಹಿಣಿ ಯಾದವಾಡ
ಹಸಿರು ಇದ್ದರೆ ಉಸಿರು ಎನ್ನುವಾಗ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ನೀಟಾಗಿಟ್ಟುಕೊಂಡು ಹಸುರಿನ ಸಮೃದ್ಧಿಯತ್ತ ಗಮನಕೊಡಬೇಕು. ಮುಂದಿನ ಪೀಳಿಗೆಗೆ ಸ್ವಚ್ಛತೆಯ ಸಮೃದ್ಧ ಪರಿಸರ ಆಸ್ತಿಯನ್ನಾಗಿ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ, ಆದ್ದರಿಂದ ಪ್ರತಿಯೊಬ್ಬರು ಪರಿಸರ ಪ್ರೇಮ ಬೆಳೆಸಿಕೊಳ್ಳುವ ಮೂಲಕ ಪರಿಸರ ವಿನಾಶ ತಡೆಗಟ್ಟಬೇಕು ಎಂದು ಚಂದುಕಾಕಾ ಸರಾಫ್ ಅಥಣಿ ಶಾಖೆಯ ವ್ಯವಸ್ಥಾಪಕ ದೀಪಕ ರಯಾಂಡೆಯವರು ಹೇಳಿದರು.
ವಿಶ್ವ ಪರಿಸರ ದಿನಾಚರಣೆಯನ್ನು ಶತಮಾನೋತ್ಸವ ಕಂಡ ಪ್ರತಿಷ್ಠಿತ ಚಂದುಕಾಕಾ ಸರಾಫ್ ಅಥಣಿ ಶಾಖೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಚರಿಸಿದ ಸಮಯದಲ್ಲಿ ಮೇಲಿನಂತೆ ಹೇಳಿದರು.
ಉದ್ಘಾಟನೆಯನ್ನು ನೆರವೇರಿಸಿದ ಸಾಮಾಜಿಕ ಮುಖಂಡರಾದ ಗಿರೀಶ್ ಬುಟಾಳೆಯವರು ಮಾತನಾಡಿ ಮನುಷ್ಯ ತನ್ನ ಸ್ವಾರ್ಥ ಮನೋಭಾವವನ್ನು ಬಿಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಅರಣ್ಯ ಅಧಿಕಾರಿ ಪ್ರಶಾಂತ ಗಾಣಗೇರ ಮನುಷ್ಯನ ಆರೋಗ್ಯಕ್ಕೆ ಹಸಿರಿನ ಅವಶ್ಯಕತೆ ಇದೆ. ಗಿಡಮರ ಸಸ್ಯಗಳು ಜೀವಸಂಕುಲದ ಉಳಿವಿಗೆ ಕಾರಣವಾಗಿದೆ ಆದ್ದರಿಂದ ಪರಿಸರ ಕಾಳಜಿ ಇರಲಿ ಎಂದರು.
ಮಹಿಳಾ ಘಟಕದ ಶುಭಾಂಗಿ ಪಾಟೀಲ ಮುಖ್ಯ ಅತಿಥಿಯಾಗಿ ಆರೋಗ್ಯಮಯ ಜೀವನಕ್ಕೆ ಸ್ವಚ್ಛ ಪರಿಸರ ಅಗತ್ಯವೆಂದು ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.
ಸಾಹಿತಿಗಳಾದ ರೋಹಿಣಿ ಯಾದವಾಡ, ಪ್ರಿಯಂವದಾ ಹುಲಗಬಾಳಿ ಮಾತನಾಡಿ ಸಕಲ ಜೀವಸಂಕುಲ ಪರಿಸರವನ್ನವಲಂಬಿಸಿದೆ. ಹಸಿರು ಇದ್ದಾಗ ಮಾತ್ರ ನಮ್ಮ ಉಸಿರು. ಬಸವಾದಿ ಶರಣರು ಕೂಡ ಪರಿಸರದೊಂದಿಗೆ ಅವಿನಾಭವ ಸಂಬಂಧ ಹೊಂದಿದ್ದರು ಎಂಬುದನ್ನು ಅಕ್ಕನ ಅಲ್ಲಮರ ವಚನಗಳನ್ನು ಉಲ್ಲೇಖಿಸಿದರು. ರಾಜಕೀಯ ಮುಖಂಡರಾದ ಬಸವರಾಜ ಬುಟಾಳಿ ಗಿಡ ಮರಗಳನ್ನು ಸ್ವಂತ ಮಕ್ಕಳಂತೆ ಬೆಳೆಸಬೇಕೆಂದರು.
ರಾಷ್ಟ್ರಪಶಸ್ತಿ ಭೂಷಿತೆ ವಿಶಾಲಾಕ್ಷಿ ಅಂಬಿ ಔಷಧಿ ಸಸ್ಯ, ಗಾಳಿಯನ್ನು ಶುದ್ಧಿಕರಿಸುವ ಸಸ್ಯಗಳ ಮಾಹಿತಿ ನೀಡಿ, ಘಟಕದ ವತಿಯಿಂದ ತುಳಸಿ ಸಸಿಯನ್ನು ಕಾಣಿಕೆಯಾಗಿ ನೀಡಿದರು. ಅರಿಹಂತ ಪಾಟೀಲ ಹಾಗೂ ಮಹಾಲಿಂಗ ಖೋತ ಅವರು ಹೆಣ್ಣುಮಕ್ಕಳಿಗೆ ಪರಿಸರ ಮಹತ್ವದೊಂದಿಗೆ ಚಿನ್ನ ,ಬೆಳ್ಳಿಯ ಕುರಿತಾದ ಜ್ಞಾನವು ಇರಬೇಕೆನ್ನಿತ್ತ ಸವಿವರವಾದ ಮಾಹಿತಿ ಹಾಗೂ ಚಂದುಕಾಕಾ ಸರಾಫ್ ವೈಶಿಷ್ಟಗಳ ಅರಿವು ಮೂಡಿಸಿದರು.
ಸಮಾರಂಭದಲ್ಲಿ ಅಭಾವೀ ಘಟಕದ ಅಧ್ಯಕ್ಷೆ ಶೈಲಾ ನೇಮಗೌಡ, ಇರಾವತಿ ಕೌಲಾಪೂರ, ಮಂಜುಳಾ, ದೀಪಾ ಚೊಳ್ಳಿ ,ಶಶಿಕಲಾ ಹರ್ತಿ, ಸುರೇಖಾ ತಾಂಬಟ, ಅರ್ಚನಾ ಭೂಸನೂರ, ಮಂಗಲ ಯಾದವಾಡ, ಪ್ರಿಯಾಂಕಾ ಮೊದಲಾದವರು ಉಪಸ್ಥಿತರಿದ್ದರು.
ಉಳವೀಶ ಬೆಟಗೇರಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಪಾಲ್ಗೊಂಡ ಪ್ರತಿಯೊರ್ವರಿಗೂ ಮಲ್ಲಿಗೆಯ ಸಸಿಗಳನ್ನು ಕಾಣಿಕೆ ನೀಡಿ ಗೌರವಿಸಿದರು.
ಪರಿಸರ ದಿನಾಚರಣೆಯೊಂದಿಗೆ ಸಸಿಗಳನ್ನು ಕಾಣಿಕೆಯಾಗಿ ಪಡೆಯುವುದರೊಂದಿಗೆ ,ಚಿನ್ನ ಬೆಳ್ಳಿಯ ಕುರಿತಾದ ವಿಶೇಷ ಮಾಹಿತಿಯನ್ನು ಪಡೆದು ಮಹಿಳೆಯರು ಸಂಭ್ರಮಿಸಿದರು. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿತ್ತು.