ಪುಸ್ತಕ ಪರಿಚಯ:
ಡಾ.ಸುಜಾತ ಅಕ್ಕಿ ಅವರ ವಿಶಿಷ್ಟ ಕೃತಿ
ಚಾಮಲದೇವಿ-ಬಯಲಾಟ
ಕರ್ನಾಟಕವು ಜಾನಪದ ಕಲೆಗೆ ಹೆಸರುವಾಸಿ. ಜಾನಪದದಲ್ಲಿ ಹಲವು ಪ್ರಕಾರಗಳು.ಅದರಲ್ಲಿ ಅತ್ಯಂತ ವೈವಿದ್ಯದಿಂದ ಕೂಡಿದ ಗಂಡುಕಲೆ ಅಂದರೆ ” ಬಯಲಾಟ” . ಇದರಲ್ಲಿ ಸಂಗೀತ, ನೃತ್ಯಗಳು ಮೇಳೈಸಿರುತ್ತವೆ. ಇದೊಂದು ಗ್ರಾಮೀಣ ಭಾಗದ ಕಲಾವಿದರ ಹವ್ಯಾಸಿ ಕಲೆ. ಬಯಲು ನಾಟಕ ಪ್ರದರ್ಶನಕ್ಕೆ ತುಂಬ ಪರಿಶ್ರಮವಿರುತ್ತದೆ. ಇತ್ತೀಚಿಗೆ ಈ ಕಲೆಗೆ ಬರುತ್ತಿರುವವರು ಕಡಿಮೆ. ಬಯಲಾಟಕ್ಕೆ ಕಥಾವಸ್ತುವಾಗಿ ಮಹಾಕಾವ್ಯದ ಕಥೆಗಳು , ಪುರಾಣಗಳು ಆಕರವಾಗಿರುತ್ತವೆ.
ಬಯಲು ನಾಟಕವೇ ಬಯಲಾಟ. ಇದನ್ನು ವೇದಿಕೆಗೆ ನಾಟಕವಾಗಿ ಪ್ರದರ್ಶಿಸಬೇಕಾದಲ್ಲಿ , ಕಥಾ ರಚನೆಯಲ್ಲಿ, ಪಾತ್ರವರ್ಗ , ವೇಷಭೂಷಣ, ವಾದ್ಯ, ಹಿಮ್ಮೇಳ, ಕುಣಿತ, ರಂಗಮಂಟಪ , ಕಥಾವಸ್ತು ಮುಖ್ಯವಾಗಿರುತ್ತದೆ. ಇಲ್ಲಿ ಕಥಾವಸ್ತುವನ್ನು ರಚಿಸುವುದು ಸುಲಭವಲ್ಲ. ಈ ಸಾಹಸಕ್ಕಿಳಿದು “ಚಾಮಲದೇವಿ” ಎಂಬ ಬಯಲಾಟದ ಕೃತಿ ರಚಿಸಿ ಕೈಗಿತ್ತವರು ವಿಭಿನ್ನ ಬರಹಗಾರತಿ ಎಂದೇ ಹೆಸರಾದ ಡಾ.ಸುಜಾತ ಅಕ್ಕಿ. ಇವರೊಬ್ಬ ಅಪರೂಪದ ಲೇಖಕಿ ಪರಂಪರೆಯ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಸುಜಾತ ಅವರ ಸಾಹಿತ್ಯ ಬರಹ ಕೂಡ ಅಷ್ಟೇ ವೈಶಿಷ್ಟಮಯ.
ಬದುಕಿನಲ್ಲಿ ಸಂಘರ್ಷಮಯ ದಾರಿಯಲ್ಲಿ ಸಾಗಿಬಂದಿರುವ ಮೂರು ಎಂ.ಎ ಪಧವಿಧರೆಯಾದ ಸುಜಾತ , “ಬಳ್ಳಾರಿ ಜಿಲ್ಲೆಯ ರಂಗ ನಟಿಯರು” ಎಂಬ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿ ಪಡೆದಿರುವರು.ಅವರ ವಿಶಿಷ್ಟ ಕೃತಿ ” ಚಾಮಲದೇವಿ” ಬಯಲಾಟ. ಚಾಮಲದೇವಿ ನೊಳಂಬ ಅರಸರ ರಾಜಕುಮಾರಿ. ಇಂದಿನ ಕಂಚಿನಗರದಿಂದ ಹಿಡಿದು ಕರ್ನಾಟಕದ ಬಳ್ಳಾರಿವರೆಗೂ ಅವರ ಆಳ್ವಿಕೆಯಿತ್ತು. ರಾಜಕುಮಾರಿ ಚಾಮಲದೇವಿಯನ್ನು ಸೊನ್ನಲಿಗೆಯ ಅರಸ ನನ್ನಿದೇವನಿಗೆ ಕೊಟ್ಟು ವಿವಾಹ ಮಾಡಿದ್ದರು. ಶರಣರಾದ ಸೊನ್ನಲಿಗೆ ಸಿದ್ಧರಾಮರನ್ನು ತಮ್ಮ ರಾಜಗುರುಗಳನ್ನಾಗಿಸಿಕೊಂಡರು. ರಾಣಿಯ ಸಹಕಾರದಿಂದ ಅನೇಕ ಜನಪರ ಕಾರ್ಯ ಮಾಡಿ ಕಾಯಕ ಪ್ರತಿನಿಧಿಯಾದರು. ಚಾಮಲದೇವಿ ವಚನಕಟ್ಟುಗಳನ್ನು ರಕ್ಷಿಸುವುದರೊಂದಿಗೆ ಶರಣರನ್ನೂ ರಕ್ಷಿಸುವ ಜಬಬ್ದಾರಿ ಹೊತ್ತರು. ವಚನ ಸಾಹಿತ್ಯ ಇಂದಿಗೂ ಉಳಿದು ಬರುವಲ್ಲಿ ಚಾಮಲದೇವಿಯ ಪಾತ್ರ ಮುಖ್ಯವಾಗಿದೆ. ಆದ್ದರಿಂದ ಚಾಮಲದೇವಿಯ ಕುರಿತು ಈ ಕೃತಿ ರಚಿತವಾಗಿದೆ.
ಡಾ.ಸುಜಾತ ಅಕ್ಕಿ ರಚಿತ ಈ ಕೃತಿ ” ಚಾಮಲದೇವಿ” ಬಯಲಾಟವು ಹನ್ನೆರಡನೆ ಶತಮಾನದ ಕೃತಿ. ಮಹಾರಾಷ್ಟ್ರದ ಸೊಲ್ಲಾಪೂರದ ಮಹಾರಾಣಿಯಾದ ಚಾಮಲದೇವಿ ಇಲ್ಲಿ ಕಥಾನಾಯಕಿ. ವಚನ ಸಾಹಿತ್ಯದ ಉಳಿವಿಗೆ ಶ್ರಮಿಸಿದವರಲ್ಲಿ ಇವಳೂ ಒಬ್ಬಳು. ೯೬ ಪುಟಗಳ ಈ ಕೃತಿಯನ್ನು ಮೈಸೂರಿನ ” ಬೊಂಬೆ ಪ್ರಕಾಶನ” ದವರು ತುಂಬ ಆಕರ್ಷಕವಾಗಿ ಸಿಂಹಾಸನಾರೂಢ ಚಾಮಲದೇವಿಯ ಮುಖಪುಟದೊಂದಿಗೆ ಮುದ್ರಿಸಿದ್ದಾರೆ. ಬೆಲೆ. ರೂ ೯೫ . ಹದಿನೈದು ದೃಶ್ಯಗಳಲ್ಲಿ ಈ ಒಂದು ಬಯಲಾಟವನ್ನು ಕಟ್ಟಿಕೊಟ್ಟಿದ್ದಾರೆ.
ಬಯಲಾಟಕ್ಕೆ ಕಥೆಗಾರ, ಮೇಳ, ಗಣೇಶ, ಸಾರಥಿ, ಭಕ್ತ, ಗುಂಪು, ಚಾಮಲದೇವಿ, ಸಿದ್ಧರಾಮ, ಮಂತ್ರಿ, ಸೇವಕ, ಅಲ್ಲಮಪ್ರಭುದೇವ, ಶಿಷ್ಯ-೧, ಶಿಷ್ಯರು, ಕೊರವಂಜಿ, ನೊಳಂಬರಾಜರು, ಯುವರಾಜ, ಸೇನಾಧಿಪತಿ, ಬಸವಣ್ಣ, ಚನ್ನಬಸವಣ್ಣ, ಪಶುಪತಿ, ರುದ್ರಮುನಿ, ಶಿವಶರಣೆಯರು, ಲಿಂಗಮ್ಮ-ಗುಡ್ಡಾಪೂರ ದಾನಮ್ಮ, ಮಹಾದೇವಿ ಹಾಗುಇ ಹಿನ್ನಲೆ ಹೀಗೆ ಇಪ್ಪತ್ತೈದು ಪಾತ್ರಗಳನ್ನು ಸೃಷ್ಟಿಸಿದ್ದಾರೆ.
ಈ ಕೃತಿಗೆ ಮುನ್ನುಡಿಯನ್ನು ವಚನ ಚಿಂತಕರಾದ ವಿಜಯಕುಮಾರ ಕಮ್ಮಾರ ಬರೆದಿದ್ದು , ಶರಣ ಸಿದ್ಧರಾಮೇಶ್ವರ ಶಿವಯೋಗಿಗಳು ಮಹಾರಾಣಿ ಚಾಮಲದೇವಿಯವರ ನೇತೃತ್ವದಲ್ಲಿ ವಚನ ಕಟ್ಟುಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗಾಗಿ ಬಸವಾದಿ ಶರಣರ ಕ್ರಾಂತಿಯ ಹೆಜ್ಜೆ ಗುರುತುಗಳೇ ಬಯಲಾಟದ ಮೂಲಸೆಲೆ ಎಂದಿದ್ದಾರೆ. ಬೆನ್ನುಡಿಯನ್ನು ಅಂತರಾಷ್ಟ್ರೀಯ ವಚನ ವಿಶ್ಲೇಷಣೆ ಸಂಘಟನೆಯ ಮುಂಬಯಿಯ ಶರಣ ರುದ್ರಮೂರ್ತಿ ಬರೆದಿದ್ದು, ” ವಚನ ಕಾಲದಲ್ಲಿಯ ಘಟನೆ ಆದರಿಸಿದ ಕಥಾವಸ್ತು. ಇದನ್ನು ಜಾನಪದ ಕಲೆಗೆ ಅನ್ವಯಿಸಿ ಬರೆಯುವ ಪ್ರಯತ್ನ ಮೆಚ್ಚುವಂತದಾಗಿದೆ ಎಂದಿದ್ದಾರೆ.
ಕಥೆ , ಕವನ, ಕಾದಂಬರಿ ಬರೆಯಬಹುದು ಆದರೆ ಬಯಲಾಟ ಬರೆಯುವುದು ಸ್ವಲ್ಪ ಕಷ್ಟವೇ ಸರಿ. ಇಲ್ಲಿ ಶೈಲಿಯೂ ಕೂಡ ತುಂಬ ಪ್ರಮುಖವಾದುದು. ಆ ಶೈಲಿ ಎಲ್ಲರಿಗೂ ಸಿದ್ಧಿಸುವಂತಹದಲ್ಲ. ಆದರೆ ಸುಜಾತ ಅಕ್ಕ ಅವರ ಪರಿಶ್ರಮವಿಲ್ಲಿ ಫಲ ನೀಡಿದೆ.
ದೃಶ್ಯ ೧ ರಲ್ಲಿ ಮೇಳ ನೃತ್ಯದೊಂದಿಗೆ ಮೇಳ ನೃತ್ಯದೊಂದಿಗೆ ಗಣೇಶನ ಪ್ರಾರ್ಥನೆ, ದೃಶ್ಯ ೨ ರಲ್ಲಿ ಬಯಲಾಟದ ಸ್ತ್ರೀ ಕುಣಿತ. ಇಲ್ಲಿ ವಿಶೇಷವಾಗಿದೆ. ದೃಶ್ಯ ೩ ರಲ್ಲಿ ದೇಶಮುಖ ಮನೆತನದ ಕೊಲ್ಹಾಪೂರದ ಮಹಾರಾಣಿ ಚಾಮಲದೇವಿ ಆಸ್ಥಾನ, ದೃಶ ೪ ರಲ್ಲಿ ಚಾಮಲದೇವಿಯು ಕೆರೆಯನ್ನು ಕಟ್ಟಲು ಸಿದ್ಧರಾಮನಿಗೆ ಹೇಳಿ ಭೂಮಿಯನ್ನು ನೀಡುವ ಪ್ರಸಂಗ, ದೃಶ್ಯ ೬ ರಲ್ಲಿ ಮಧುಗಿರಿಯ ನೊಳಂಬವಾಡಿ ಅರಸರನ್ನು ಸಿದ್ಧರಾಮರು ಭೇಟಿಯಾಗುವ ಸಂದರ್ಭ, ದೃಶ್ಯ ೭ ರಲ್ಲಿ ಅಲ್ಲಮಪ್ರಭು ಮತ್ತು ಸಿದ್ಧರಾಮರ ಸಂವಾದ, ದೃಶ್ಯ ೮ ರಲ್ಲಿ ಪ್ರಭುದೇವ ಮತ್ತು ಸಿದ್ಧರಾಮರ ಉತ್ತುಂಗದ ಚರ್ಚೆ, ದೃಶ್ಯ ೯ ರಲ್ಲಿ ಸಿದ್ಧರಾಮರು ಸೊಲ್ಲಾಪೂರಕ್ಕೆ ಹಿಂತಿರುಗುವ ಪ್ರಸಂಗ, ದೃಶ್ಯ ೧೦ ರಲ್ಲಿ ಸೊಲ್ಲಾಪೂರದ ಬಗ್ಗೆ ಬಸವಣ್ಣ ಮತ್ತು ಚನ್ನಬಸವಣ್ಣವರ ಸಂವಾದ, ದೃಶ್ಯ ೧೧ ದೃಷ್ಟಿಯೋಗವನ್ನು ಕಲಿಯಲು ಲಿಂಗಮ್ಮ ಸಿದ್ಧರಾಮೇಶ್ವರರನ್ನು ಭೇಟಿಯಾದ ಸಂದರ್ಭ, ದೃಶ್ಯ ೧೨ ದೃಷ್ಟಿಯೋಗ ವಿದ್ಯೆ ಕಲಿತು ಲಿಂಗಮ್ಮ ಕಲ್ಯಾಣಕ್ಕೆ ಬರುತ್ತಾಳೆ. ದೃಶ್ಯ ೧೩ ರಲ್ಲಿ ಕಲ್ಯಾಣದಲ್ಲಿ ಮಹಾಮನೆಯ ದೃಶ್ಯ, ದೃಶ್ಯ ೧೪ ರಲ್ಲಿ ಚಾಮಲದೇವಿ ಆಸ್ಥಾನ , ಕೊನೆಯದಾಗಿ ದೃಶ್ಯ ೧೫ ರಲ್ಲಿ ಚಾಮಲದೇವಿ ಮತ್ತು ಗುಡ್ಡಾಪೂರ ದಾನಮ್ಮರು ಶರಣ ವಿರೋಧಿಗಳೊಂದಿಗೆ ಯುದ್ಧ ಮಾಡುತ್ತಿರುವ ದೃಶ್ಯ. ಹೀಗೆ ಬಯಲಾಟದ ಕಥಾ ಹಂದರವಿದೆ.
ಬಯಲಾಟದಲ್ಲಿ ಅವಶ್ಯವಿರುವ ವಿಘ್ನನಿರ್ವಾ ಣ ಪ್ರಾರ್ಥನೆ , ಮೇಳ, ಹಿಮ್ಮೇಳ, ಕೊರವಂಜಿ, ಕಥೆಗಾರ, ಗುಂಪು ಇವುಗಳನ್ನು ಅಲ್ಲಲ್ಲಿ ಸಂದರ್ಭೋಚಿತವಾಗಿ ಬಳಸಿರುವ ಕೌಶಲ್ಯದ ಜಾಣ್ಮೆ ಮೆಚ್ಚುವಂತದ್ದು.
ಶರಣರ ಕಾಲಘಟಕ ಒಂದು ಪಾತ್ರದ ಜಾಡನ್ನು ಹಿಡಿದು ಹೊರಟ ಲೇಖಕಿ ಡಾ. ಸುಜಾತ ಅವರು ಆ ಕಥಾವಸ್ತುವನ್ನು ಜಾನಪದ ಕಲೆ ಬಯಲಾಟಕ್ಕೆ ಅಂತ ಬರೆಯ ಹೊರಟ ಕಾರ್ಯ ಪ್ರಶಂಸನೀಯ. ಇಲ್ಲಿ ಒಳನೋಟಗಳನ್ನು ಅನಾವರಣಗೊಳಿಸಿದ್ದಾರೆ. ಓದುಗರಿಗೆ ಹೊಸ ಹೊಳಹುಗಳನ್ನು ಬಿಚ್ಚಿಡುತ್ತದೆ.
ಇಲ್ಲಿಯವರೆಗೆ ಕಲ್ಯಾಣಕ್ರಾಂತಿ ನಡೆದಾಗ ಶಿವಶರಣರ ವಚನಗಳ ಸಂರಕ್ಣೆ ಮಾಡಿದವರಲ್ಲಿ ಒಬ್ಬಳಾಗಿ ಚಾಮಲದೇವಿಯ ಹೆಸರಿರುತ್ತಿತ್ತು. ಆದರೆ ಅವಳಾರು? ಏನು ಮಾಡಿದಳು ಎಂಬುದು ಸಾಕಷ್ಟು ಜನರಿಗೆ ತಿಳಿದಿರಲಿಲ್ಲ. ಕೆಲವು ಪುಸ್ತಕಗಳಲ್ಲಿ ಎರಡು ಸಾಲಿನ ಉಲ್ಲೇಖದಲ್ಲಿತ್ತಷ್ಟೆ. ಚಾಮಲದೇವಿ ಹೆಸರು ಕೇಳಿದ ಸುಜಾತಕ್ಕ ಈ ಕುರಿತಾಗಿ ಆಸಕ್ತಿ ಹೊಂದಿ ಆಳ ಅಧ್ಯಯನ , ಕ್ಷೇತ್ರದರ್ಶನ ಮಾಡಿವಚರ್ಚಿಸಿ ಈ ಕೃತಿ ರಚಿಸಿದ್ದಾರೆ.
ಬಯಲಾಟಕ್ಕೆ ಪೌರಾಣಿಕ , ರಾಮಾಯಣ, ಮಹಾಭಾರತ ಕಥಾವಸ್ತು ಹೊರತುಪಡಿಸಿ ೧೨ ನೇ ಶತಮಾನದ ವಚನ ಸಾಹಿತ್ಯದ ಉಳಿವಿಗೆ ಸೇವೆಗೈದ ಸಂದರ್ಭವನ್ನು ಕಥಾವಸ್ತುವನ್ನಾಗಿಸುವ ಬಯಲಾಟ ಕಲೆಗೆ ಹೊಸ ಆಯಾಮದಲ್ಲಿ ಘನತೆ ತಂದುಕೊಟ್ಟಿದ್ದಾರೆ. ಡಾ. ಸುಜಾತ ಅಕ್ಕಿ ಅವರ ಈ ವಿಭಿನ್ನ ಪ್ರಯತ್ನ ನಿಜಕ್ಕೂ ಸಾಹಸಮಯದು ಆ ಕಾರಣಕ್ಕಾಗಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಕನಾರ್ಟಕ ಏಕೀಕರಣ ಟ್ರಸ್ಟ್ ಮಾಡಿ ಸ್ಮರಣೆಯ ಮ್ಯೂಜಿಯಂ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದಕ್ಕೂ ಅಭಿನಂದನಾರ್ಹರು. ಅವರಿಂದ ಇನ್ನೂ ಹೆಚ್ಚಿನ ಇಂತಹ ವಿಶೇಷ ಕೃತಿಗಳು ಹೊರಬಂದು ಸಾಹಿತ್ಯ ಸಿರಿದೇವಿಯ ಉಡಿತುಂಬಲಿ ಎಂದು ಹಾರೈಸೋಣ.
–ರೋಹಿಣಿ ಯಾದವಾಡ
*ಅಥಣಿ* . ಮೊ. ೯೫೯೧೫೩೬೧೫೬.