ಸದಾಚಾರಿಯಾಗು
ಅಂಗ ಸಂಗಿ ಯಾದವಂಗೆ, ಲಿಂಗ ಸಂಗವಿಲ್ಲ
ಲಿಂಗ ಸಂಗಿಯಾದವಂಗೆ ಅಂಗಸಂಗವಿಲ್ಲ
ಅಂಗ ಸಂಗವೆಂಬುದೇ ಅನಾಚಾರ
ಲಿಂಗ ಸಂಗವೆಂಬುದೇ ಸದಾಚಾರ
ಇದು ಕಾರಣಮಾಗಿ, ಅಂಗಸಂಗಮಂ ಬಿಟ್ಟು
ಲಿಂಗಸಗವಾಗಿರಬೇಕು ನಮ್ಮ ಕೂಡಲ ಚೆನ್ನಸಂಗಯ್ಯ ನಲ್ಲಿ.
ಅಂಗಕ್ಕೆ ಆಚಾರವೇ ಚೆಲುವು.
ಆ ಎಂದರೆ ಅಲ್ಲಿಯವರೆಗೆ, ಚರ ಎಂದರೆ ಚಲಿಸುವುದು ಎಂದರ್ಥ. ಪರಮ ಸತ್ಯದವರೆಗೆ ಯಾವುದು ನಮ್ಮನ್ನು ಕರೆದುಕೊಂಡು ಹೋಗುವುದೋ ಅದೇ ಆಚಾರ. ನಡೆ- ನುಡಿ -ಮಾಟ – ಕೂಟ ಎಲ್ಲವನ್ನು ಇದು ಒಳಗೊಂಡಿದೆ.
ಪರಮ ಸತ್ಯದ ಸಂಗ ಬಯಸುವವನು ಮೊದಲು ತ್ಯಾಗ ಗುಣವನ್ನಳವಡಿಸಿಕೊಳ್ಳಬೇಕ. ಅದಕ್ಕಾಗಿಯೇ ಷಟಸ್ಥಲದಲ್ಲಿಯ ಭಕ್ತ- ಮಹೇಶ ಸ್ಥಲಗಳು ತ್ಯಾಗಾಂಗಗಳೆನಿಸಿವೆ. ಏನನ್ನು ತ್ಯಜಿಸಬೇಕು ಎಂದರೆ, ಅಂಗ ಗುಣಗಳನ್ನು, ಅಂಗ ಸಂಗವನ್ನು ತ್ಯಜಿಸಬೇಕು. ಅಂಗಗುಣಗಳಾವುವು ಎಂಬುದಕ್ಕೆ ಗುರು ಬಸವಣ್ಣನವರು,
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ, ಅಂಗ ವಿದ್ಯೆಯನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ
ಕೈ ತೊಳೆದಲ್ಲದೆ ಮುಟ್ಟಲೀಯ,
ಕಾಲ ತೊಳೆದಲ್ಲದೆ ಹೊಂದಲೀಯ,
ಇಂತೀ ಸರ್ವಂಗ ತಲೆದೊಳೆದ ಕಾರಣ
ಕೂಡಲ ಸಂಗಮ ದೇವನೆನ್ನ ಕೂಡಿಕೊಂಡನವ್ವಾ.
ಅಂಗವಿದ್ಯೆ ಎಂದರೆ ಪ್ರಪಂಚವನ್ನು ವಿಸ್ತರಿಸಿಕೊಳ್ಳುವ,ಕನಕ ಕಾಂಚನ ಕಾಮಿನಿಯರನ್ನು ಒಲಿಸಿಕೊಳ್ಳುವ, ಗಳಿಸಿಕೊಳ್ಳುವ ವಿದ್ಯೆ. ಸಾಮಾನ್ಯವಾಗಿ ನಾವು ಜಗತ್ತಿನಲ್ಲಿ, ಗಳಿಸುವ ವಿದ್ಯೆ ಎಲ್ಲವೂ ಅಂಗ ಪೋಷಣೆಯ ವಿದ್ಯೆಯೇ ಹೊರತು, ಆತ್ಮ ವಿದ್ಯೆಯಲ್ಲ. ‘ ಆವ ವಿದ್ಯೆ ಕಲಿತಡೂ ಸಾವ ವಿದ್ಯೆ ಬೆನ್ನ ಬಿಡದು ‘ ಎಂಬ ಅಕ್ಕನ ವಾಣಿಯಂತೆ, ಒಬ್ಬೊಬ್ಬರು ಇಪ್ಪತ್ತೈದು ಡಾಕ್ಟರೇಟ್ಗಳನ್ನು ಗಳಿಸಿದರೂ, ಎಪ್ಪತ್ತೆoಭತ್ತು ಕೋಟಿ ಲಕ್ಷ ಗಳಿಸಿದರೂ, ಸಾವು ಬಿಟ್ಟಿಲ್ಲ.
ಸಾವಾಗಿ ದುಃಖ ತಪ್ಪಿಲ್ಲ. ಅಷ್ಟೇ ಅಲ್ಲ, ಬದುಕಿದ್ದಾಗಲೂ ವಿದ್ಯೆ ಹೆಚ್ಚಾದಂತೆಲ್ಲ, ಮನುಷ್ಯ ಅನಾಚಾರಿಯಾಗುತ್ತಾ, ಜೀವನವನ್ನು ನರಕ ಮಾಡಿಕೊಂಡಿದ್ದನ್ನು ಕಾಣುತ್ತೇವೆ. ಶರಣರ ದೃಷ್ಟಿಯಲ್ಲಿ ಹೃದಯ ಸಣ್ಣದಾಗಿಸಿ, ತಲೆ ದೊಡ್ಡದಾಗಿಸುವ ಈ ಲೌಕಿಕ ವಿದ್ಯೆಯೇ ಶಾಶ್ವತವಲ್ಲ. ಇದನ್ನು ಕಲಿತವನಿಗೆ ದೇವನೊಲಿಯುತ್ತಾನೆಂಬುದಿಲ್ಲ.
ಅಲ್ಲಿ ಈ ವಿದ್ಯೆಯ ಕೆಲಸವಿಲ್ಲ. ” ಕೂಡಲ ಸಂಗಮದೇವಾ ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ “ ಆದ್ದರಿಂದ ದೇವನನ್ನ ರಿಯಲು ಸಹಾಯಕವಾಗುವ ವಿದ್ಯೆಯೇ ನಿಜ ವಿದ್ಯೆ. ಅದುವೇ ಆತ್ಮವಿದ್ಯೆ, ಲಿಂಗ ವಿದ್ಯೆ, ಉಳಿದುದೆಲ್ಲ ಅವಿದ್ಯೆ, ಅಂಗವಿದ್ಯೆ. ಈ ಅಂಗವಿದ್ಯೆಯ ಚತುರತೆ – ಚಾಣಾಕ್ಷತೆಗಳಿಗೆ ದೇವನೊಲಿಯಲಾರ.
ಕಸ ಬಿದ್ದ ಕಣ್ಣಿಗೆ ವಸ್ತು ಕಾಣಿಸದು. ಕಂಡರೂ ಸ್ಪಷ್ಟವಾಗಿರದು. ಕಣ್ಣೊಳಗಿನ ಕಸವ ತೆಗೆಯಬೇಕು. ಅಲ್ಲಿಯವರೆಗೆ ಅವನು ತನ್ನನ್ನು ತಾ ತೋರಿಸಲಾರ. ಕಂಗಳೊಳಗಿನ ಕಸವೆಂದರೆ ಕಾಮ ಭಾವ, ಅಥವಾ ಬಯಕೆ. ವಿಷಯ ವಾಸನೆಯ ಮೂಲವೇ ಕಣ್ಣು. ಅದು ನೋಡಿದಾಗಲೇ ಮನ ಬಯಸುತ್ತದೆ. ಆದ್ದರಿಂದ ಕಣ್ಣು ಕಾಮ ರಹಿತವಾಗಿರಬೇಕು. ನೋಡಿ ಆನಂದಿಸಬೇಕೇ ಹೊರತು, ಪಡೆಯುವ ಆಸೆ ಅದರಲ್ಲಿ ಚಿಗುರಬಾರದು. ಶರಣನು ನೋಡುತ್ತಾನೆ. ಆದರೆ ತನಗೆ ಬೇಕೆಂಬ ಭಾವವಿರಹಿತನಾಗಿ ನೋಡುತ್ತಾನೆ. ಆನಂದಿಸುತ್ತಾನೆ. ಬೇಕೆಂಬ ಆಸೆಯೇ ಕಣ್ಣೊಳಗಿನ ಕಸ. ಇದನ್ನು ತೆಗೆಯದಿದ್ದಾಗ ಪರಮ ದರ್ಶನ ದುರ್ಲಭ.
ಕೈಯು ನೀಡುವ ಕಾರ್ಯದ ಪ್ರತೀಕ. ನಮ್ಮ ಪ್ರತಿಯೊಂದು ನೀಡುವಿಕೆಯೂ ನಿಷ್ಕಾಮದಿಂದ ಕೂಡಿರಬೇಕು. ಇಲ್ಲದಿದ್ದರೆ ಬೆರಳ ನೀಡಿ ಕೈಯ ಕೊಂಡಂತೆ, ಸ್ವಲ್ಪ ನೀಡಿ ಬಹಳ ಪಡೆಯುವ ದುರಾಸೆಯಿಂದ ನೀಡಿದರೆ, ಪರಮಾತ್ಮ ಸ್ವೀಕರಿಸಲಾರ. ಅಷ್ಟು ಕೊಟ್ಟರೆ ಇಷ್ಟು ಕೊಡುವೆನೆಂದು ಹರಕೆ ಮಾಡಿಕೊಳ್ಳುವುದು ಹಾದರದ ಭಕ್ತಿ ಎನ್ನುತ್ತಾರೆ ಶರಣರು.
ಎಲ್ಲವನ್ನು ಕೊಟ್ಟು ಏನನ್ನೂ ಬೇ ಡದಿರುವುದೇ ಶ್ರೇಷ್ಠ ಭಕ್ತಿ, ಬೇಡುವ ಬಯಕೆಯಿಂದ ನೀಡಿದ್ದನ್ನು ದೇವರು ಮುಟ್ಟಲಾರ. ಕಾಲು ನಡೆಯುವ ಕ್ರಿಯೆಯ ಸಂಕೇತ. ಕಾಲು ಸತ್ಕಾರ್ಯಕ್ಕಾಗಿ ನಡೆದು ಸವೆಯಬೇಕು. ದೇವ ಪ್ರತಿರೂಪವಾದ ಮರ್ತ್ಯದ ಸೇವೆಗೆ ಮುಂದಾಗಬೇಕು. ಅನಾಚಾರದ ಕಾರ್ಯಕ್ಕೆ ಹೆಳವನಾಗಬೇಕು. ಆಗ ದೇವರು ನಮ್ಮನ್ನು ಸ್ವೀಕರಿಸುತ್ತಾನೆ. ಇಲ್ಲಿ ಕಣ್ಣು, ಕೈ – ಕಾಲುಗಳ ಬಗ್ಗೆ ತಿಳಿಸಲಾಗಿದೆ. ಇವು ನೋಡುವ – ನೀಡುವ – ಮಾಡುವ ಕ್ರಿಯೆಗಳಿಗೆ ಸಂಬಂಧಿಸಿದ್ದು, ಶುದ್ಧವಾಗಿರಬೇಕು. ಆಗ ಈ ದೇಹವೆಂಬ ಅರಮನೆಯ ಅರಸನಾದ ದೇವರು ಒಲಿಯುವನು. ಅಂಗ ಸಂಗವನ್ನು ಬಿಟ್ಟು ಲಿಂಗ ಸಂಗಿಯಾದವನಿಗೆ ಅಂಗದ ಕ್ರಿಯೆಗಳಿರಲಾರವು ಎಂದಲ್ಲ. ಆದರೆ ಅವೆಲ್ಲವೂ ಲಿಂಗ ಕ್ರಿಯೆಗಳಾಗುತ್ತವೆ. ಭಕ್ತ ತನ್ನನ್ನು ತಾನು ಲಿಂಗದಲ್ಲಿ ಅರ್ಥಾತ್ ದೇವರಲ್ಲಿ ಸಮರಸ ಮಾಡಿಕೊಂಡಿರುತ್ತಾನೆ.
ಉಡುವೆ ನಾನು ಲಿಂಗಕ್ಕೆಂದು,
ತೊಡುವೆ ನಾನು ಲಿಂಗಾಕ್ಕೆಂದು,
ಮಾಡುವೆ ನಾನು ಲಿಂಗಕ್ಕೆಂದು,
ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ,
ಆನೆನ್ನ ಚೆನ್ನಾಮಲ್ಲಿಕಾರ್ಜುನನೊಳಗಗಿ
ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ.
ಉಡುವ – ತೊಡುವ ಮಾಡುವ ಕಾರ್ಯಗಳೆಲ್ಲವೂ ಲಿಂಗ ಭಾವ ಭರಿತವಾಗಿರುತ್ತವೆ. ಲೋಕದಲ್ಲಿದ್ದರೂ ಲೌಕಿಕನಾಗಿರಲಾರ. ಹನ್ನೊಂದು ಹತ್ತರೊಳಗಿದ್ದರೂ ಅದು ಹತ್ತಲ್ಲ ಎಂಬಂಥ ವೈಶಿಷ್ಟ ಪೂರ್ಣವಾದ ಬದುಕಾಗುತ್ತದೆ. ಹೀಗೆ ಅಂಗ ಸಂಗವ ತೊರೆದು ಅರ್ಥಾತ್ ದೇಹ ಭಾವವ ಮರೆತು, ದೇವ ಭಾವಿಯಾಗಿರುವುದೇ ಸದಾಚಾರ. ಇಂಥ ಸದಾಚಾರಿಗೆ ಪ್ರಪಂಚದಲ್ಲಿ ಪರಮಾತ್ಮನ ಹೊರತು ಮತ್ತೇನೂ ಕಾಣದು. ಆದ್ದರಿಂದಲೇ ಕದಿಯಲು ಬಂದ ಕಳ್ಳನೂ, ಕೊಲೆ ಗೈಯಲು ಬಂದ ಕೊಲೆಗಡುಕನೂ, ಗುರು ಬಸವಣ್ಣನವರಿಗೆ ಕೂಡಲಸಂಗನಾಗಿಯೇ ಕಂಡರು.
ಎತ್ತೆತ್ತ ನೋಡಿದರೂ ಅನ್ಯವೆಂಬುದು ತೋರದಿರುವಾಗ, ಯಾರಿಗೆ ಕೇಡು ಮಾಡುತ್ತಾನೆ? ಯಾರನ್ನು ದೂಷಿಸುತ್ತಾನೆ. ಅವನಿಗೆ ಜಗದ ಜನ, ಸಚರಾಚರವೆಲ್ಲವೂ ಲಿಂಗ ಚೈತನ್ಯವಾಗಿಯೇ ಕಾಣುತ್ತದೆ. ‘” ಜಗವೆಂದಡುಂ ತಾನೆ, ಜಗದೀಶನುಂ ತಾನೆ, ಜಗದಾತ್ಮರೆಲ್ಲರೂ ತಾನೆಂದು ಬಗೆವನು ಉತ್ತಮನು ನೋಡಾ ” ಎಂಬಂತೆ ದೃಷ್ಟಿ ಬದಲಾದಾಗ ಸೃಷ್ಟಿ ತಾನೇ ಬದಲಾಗುತ್ತದೆ. ಆದ್ದರಿಂದ ಸೃಷ್ಟಿ ಬದಲಾಯಿಸುವ ವ್ಯರ್ಥ ಪ್ರಯತ್ನ ಮಾಡಬಾರದು. ನಮ್ಮ ದೃಷ್ಟಿ ಬದಲಾಯಿಸಿಕೊಳ್ಳಬೇಕು. ಆಗ ಶತ್ರುಗಳ್ಯಾರು ಇರುವುದಿಲ್ಲ. ಸರ್ವರೂ ಮಿತ್ರರೇ.
ಅಷ್ಟೇ ಅಲ್ಲ. ದೇವ ಸ್ವರೂಪಿಗಳೇ ಆಗಿ ಕಾಣುತ್ತಾರೆ. ಇದೇ ಸದಾಚಾರ. ದೇಹ ಭಾವವೇ ಅನಾಚಾರ. ದೇವ ಭಾವವೇ ಸದಾಚಾರ.
–ಶ್ರೀಮತಿ ರೇಖಾ ಶಿವಯೋಗಿ ವಡಕಣ್ಣವರ್.
ಲಕ್ಷ್ಮೇಶ್ಚರ