ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು
ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು. ಅದೆಂತೆಂದಡೆ, ಫಲಭೋಗಂಗಳ ಬಯಸುವನಾಗಿ ಫಲವನುಂಡು ಮರಳಿ ಭವಕ್ಕೆ ಬಹನಾಗಿ. ಇದು ಕಾರಣ, ಅರಿದು ಮುಕ್ತಿಯ ಹಡೆವಡೆ ಅನುಭಾವವೇ ಬೇಕು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
–ಉರಿಲಿಂಗಪೆದ್ದಿ
ಉರಿಲಿಂಗ ಪೆದ್ದಿ ಮೂಲತಃ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಕಂದಹಾರದವನು ಎಂದು ತಿಳಿದುಬಂದಿದೆ .ಇವನು ಚೋರವೃತ್ತಿಯವನಾಗಿದ್ದ ಈತ ಉರಿಲಿಂಗದೇವನ ಶಿಷ್ಯತ್ವ ವಹಿಸಿ, ಘನ ವಿದ್ವಾಂಸನೂ, ಅನುಭಾವಿಯೂ ಆಗಿ ಉತ್ತಮ ವಚನಗಳನ್ನು ರಚಿಸಿದ್ದಾನೆ. ಕಾಳವ್ವೆ ಈತನ ಸತಿ. ಉರಿಲಿಂಗದೇವರ ನಂತರ ಪೀಠವನ್ನು ಏರಿದ ಪೆದ್ದಣ್ಣ ಜಾತಿಯಿಂದ ಅಸ್ಪೃಶ್ಯನೆಂದು ತಿಳಿದುಬರುವುದರಿಂದ, ಈ ಪೀಠಾರೋಹಣ ಒಂದು ಕ್ರಾಂತಿಕಾರಿ ಘಟನೆಯೆಂದೇ ಹೇಳಬೇಕು. ಅಸ್ಪೃಶ್ಯ ಲಿಂಗಾಯತರ ಅನೇಕ ಮಠಗಳು ಕರ್ನಾಟಕದಲ್ಲಿ ಇದ್ದು ಅವುಗಳನ್ನು ಉರಿಲಿಂಗಪೆದ್ದಿ ಮಠಗಳೆಂದು ಕರೆಯುತ್ತಾರೆ.
‘ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ’ ಆಂಕಿತದಲ್ಲಿ ಈತ ರಚಿಸಿದ ೩೬೬ ವಚನಗಳು ದೊರೆತಿವೆ. ಅವುಗಳಲ್ಲಿ ಗುರುಮಹಿಮೆಗೆ ಅಗ್ರಸ್ಥಾನ ಸಂದಿದೆ. ಜೊತೆಗೆ ಲಿಂಗ-ಜಂಗಮ ತತ್ವದ ವಿಚಾರ, ಕುಲ-ಜಾತಿ ಸಮಸ್ಯೆ ನಿರೊಪಿತವಾಗಿವೆ. ವಚನಗಳ ಮಧ್ಯದಲ್ಲಿ ಬಳಸಿದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯಕ್ಕೆ ನಿದರ್ಶನವೆನಿಸಿವೆ. ಧರ್ಮ ಹಾಗೂ ಧರ್ಮದ ತತ್ವ, ಆಚರಣೆಗಳ ಪ್ರಚಾರ ಇವನ ವಚನಗಳ ಪ್ರಧಾನ ಆಶಯ. ವಚನಗಳ ನಡುವೆ ಬಳಸುವ ಯಥೇಚ್ಛ ಸಂಸ್ಕೃತ ಶ್ಲೋಕಗಳ ಆಧಾರದಿಂದ ಈತ ದೊಡ್ಡ ಜ್ಞಾನಿ ಎಂದು ಹೇಳಲಾಗದು . ವಚನಗಳ ಸಂಕಲನದ ಸಂದರ್ಭದಲ್ಲಿ ಸಂಸ್ಕೃತ ಸೇರ್ಪಡೆಯನ್ನು ನಾವು ಪುಷ್ಟಿlಕರಿಸಬಹುದು. ಅಂತ್ಯಜನಾಗಿ ಗುರುಪೀಠವನ್ನೇರಿದ ಸಂಗತಿ ಕ್ರಾಂತಿಕಾರಕವಾದುದು. ಈತನಲ್ಲಿ ಸಾಮಾಜಿಕ ವಿಡಂಬನೆ ತೀಕ್ಷ್ಣವಾಗಿದೆ. ತನಗೆ ಸರಿಕಾಣದ್ದನ್ನು ಮುಚ್ಚು ಮರೆಯಿಲ್ಲದೆ ಟೀಕಿಸಿರುವನು. ಇವನಲ್ಲಿ ವೈಚಾರಿಕತೆ ಪ್ರಧಾನವಾಗಿದೆ
ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು.
ಭಕ್ತನು ಸತ್ಯದ ನಿಲುವನ್ನು ಅರಿತು ಆಧ್ಯಾತ್ಮಿಕ ಸಾಧನೆಯನ್ನು ಗುರುತಿಸಿ ಆಯಾ ಸಾಧನೆಗೆ ಪ್ರಾಮಾಣಿಕ ದಿಟ್ಟ ಹೆಜ್ಜೆ ಇಟ್ಟು ಮುನ್ನಡೆ ಸಾಧಿಸುವುದು ಆತನ ಪ್ರಮುಖ ಅದ್ಯತೆಯಾಗಿರಬೇಕು. ಅದನ್ನು ಬಿಟ್ಟು ತನ್ನ ಪ್ರಾಪಂಚಿಕ ವಿಷಯಾದಿಗಳಿಗೆ ಸ್ಪಂದಿಸುವವನು ಭಕ್ತನಲ್ಲ
ತನ್ನ ಮೂಲ ಕಾರಣ ಉದ್ದೇಶವನ್ನೇ ಮರೆತು ಬಿಡುವ ಕೇವಲ ಭವಿಯಾಗುತ್ತಾನೆ. ಶರಣರು ಭಕ್ತ ಮತ್ತು ಭವಿ ಎಂಬ ಎರಡು ಹಾದಿಗಳಲ್ಲಿ ಭಕ್ತ ಮಾರ್ಗ ಶ್ರೇಷ್ಟತೆಯನ್ನು ತನ್ನ ಜ್ಞಾನ ಮತ್ತು ವಿವೇಕದ ಕ್ರಿಯೆಗಳಲ್ಲಿ ರೂಪಿಸಲು ಚಿಂತಿಸಿದ್ದಾರೆ ಅರಿವೇ ಗುರು ಆಚಾರವೇ ಲಿಂಗ ಅನುಭಾವವೆ ಜಂಗಮ. ಗುರು ವ್ಯಕ್ತಿಯಲ್ಲ ಲಿಂಗ ವಸ್ತು ಅಲ್ಲ ಜಂಗಮ ಜಾತಿ ವ್ಯವಸ್ಥೆ ಅಲ್ಲ. ಅರಿವು ಆಚಾರ ಮತ್ತು ಕ್ರಿಯೆಗಳ ಮೂಲಕ ಭಕ್ತ ತನ್ನ ಬದುಕಿನ ಮಾರ್ಗ ಕಂಡು ಕೊಳ್ಳಬೇಕು.
ಅದೆಂತೆಂದಡೆ, ಫಲಭೋಗಂಗಳ ಬಯಸುವನಾಗಿ ಫಲವನುಂಡು ಮರಳಿ ಭವಕ್ಕೆ ಬಹನಾಗಿ.
ಇಂತಹ ದ್ವಂದ್ವ ನಿಲುವು ತಾಳಿದ ಭಕ್ತನು ಹೇಗೆ ಎಂದರೆ ಪರಿಸರ ಸೃಷ್ಟಿ ಪ್ರಕೃತಿ ಬಯಲು ನೀಡಿದ ಅನೇಕ ಫಲಗಳನ್ನು ಉಂಡು ಅನುಭವಿಸಿ ಭೂಮಿಯ ಭೌತಿಕ ಅಸ್ತಿತ್ವಕ್ಕೆ ಮಹತ್ವ ಕೊಟ್ಟು ಅಂತರಂಗದಲ್ಲಿ ಕ್ಷೀಣಿಸುತ್ತಾ ಬದುಕುವ ಮಾನವ ಅಲ್ಪ ತೃಪ್ತಿ . ಜೀವನ ಸಾಧನೆ ಮಾಡುವ ಭಕ್ತ ಆಶೆ ಆಮಿಷ ಹೊರತುಪಡಿಸಿ ತನ್ನ ಅಂತರಂಗ ಬಹಿರಂಗ ಶುದ್ಧೀಕರಿಸಿ ತಾನೇ ದೈವತ್ವವನ್ನು ಸಾಧಿಸಬೇಕು. ಹಾಗಾಗದಿದ್ದಲಿ ವ್ಯಕ್ತಿ ಭವಿಯಾಗಿ ಪ್ರಾಪಂಚಿಕ ಬಂಧನದಲ್ಲಿ ಸಿಲುಕುತ್ತಾನೆ.
ಇದು ಕಾರಣ, ಅರಿದು ಮುಕ್ತಿಯ ಹಡೆವಡೆ ಅನುಭಾವವೇ ಬೇಕು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಬದುಕಿನ ನಿಜ ಮುಕ್ತಿಯ ಮಾರ್ಗ ಸತ್ಯ ಅರಿವು ಮತ್ತು ಸತ್ಕ್ರಿಯೆ . ಕಾಯಕ ದಾಸೋಹ ತತ್ವಗಳನ್ನು ಪಾಲಿಸಿ ಸಮ ಪಾಲು ಸಮ ಬಾಳು ನೀತಿಯನ್ನು ಅನುಸರಿಸಿ ತಾನು ಬದುಕಿ ಉಳಿದ ಸಕಲ ಜೀವ ಜಾಲದ ಜೀವಿಗಳಿಗೆ ಬದುಕುವ ಅವಕಾಶವನ್ನು ಕಲ್ಪಿಸುವ ಮೂಲಕ ಜಂಗಮ ಪ್ರೇಮಿ ಲಿಂಗ ನಿಷ್ಠ ಅಧ್ಯಾತ್ಮ ಸಾಧನೆ ಮಾಡುವ ಆಲೋಚನಾ ಕ್ರಮವನ್ನು ವ್ಯಕ್ತಿ ಹೊಂದಿರಬೇಕು. ಇಂತಹ ಅರಿವನ್ನು ಪಡೆದು ಮುಕ್ತಿಯ ಪಥಕ್ಕೆ ಸಾಗುವುದೇ ಜೀವನ ಇಂತಹ ಸುಂದರ ಬಾಳಿಗೆ ಅನುಭವ ಅಗತ್ಯ ಎಂದಿದ್ದಾರೆ ಉರಿಲಿಂಗ ಪೆದ್ದಿ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ