ಈಶ್ವರ ದೇವಸ್ಥಾನದ ರಜತ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾವೇಶ

ಈಶ್ವರ ದೇವಸ್ಥಾನದ ರಜತ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾವೇಶ

e-ಸುದ್ದಿ ಲಿಂಗಸುಗೂರು

ಲಿಂಗಸುಗೂರು ಪಟ್ಟಣದ ಶ್ರೀ ಈಶ್ವರ ದೇವಸ್ಥಾನದ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಕುಷ್ಟಗಿ ಕ್ಷೇತ್ರದ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಠಗಳಿಗೆ ಹಾಗೂ ಮಠಾಧೀಶರಿಗೆ ಭಕ್ತರೆ ಆಸರೆಯಾಗಿದ್ದು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಕಾರ್ಯ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಧರ್ಮ,ಮಠ, ಮಂದಿರಗಳ ಮೂಲಕ ಸುಂದರ ಸಮಾಜ ಕಟ್ಟುವಂತಹ ಕೇಲಸ ಆಗಬೇಕಾಗಿದೆ.ರಾಜಕೀಯ ಲಾಭಕ್ಕಾಗಿ ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ ವ್ಯವಸ್ಥೆಯನ್ನು ಧಿಕ್ಕರಿಸಬೇಕು.ಸನಾತನ ಕಾಲದ ಧರ್ಮ,ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಲು ಭಕ್ತ ಸಮೂಹ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕಾಶಿ ಪೀಠದ ಡಾ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶಿರ್ವಚನ ನೀಡುತ್ತಾ ಮಠ, ಮಂದಿರಗಳನ್ನು ಭಕ್ತರು ಹೆಚ್ಚು ಪ್ರೋತ್ಸಾಹಿಸುತ್ತಿರುವದು ಮತ್ತೊಂದು ಹಂತದಲ್ಲಿ ಧರ್ಮ ಪುನರೋತ್ಥಾನ ನಡೆಯುತ್ತಿದೆ ಎನಿಸುತ್ತದೆ ಎಂದರು.

ಮೆರವಣಿಗೆ  :ಈಶ್ವರೀಯ ವಿಶ್ವ ವಿದ್ಯಾಲಯದಿಂದ ಡಾ.ಚಂದ್ರಶೆಖರ ಶಿವಾಚಾರ್ಯರು ರಥದಲ್ಲಿ ಆಸೀನರಾಗುತಿದ್ದಂತೆ ಭವ್ಯ ಮೆರವಣಿಗೆಯು ಆರಂಭವಾಯಿತು. ಬೆಂಗಳೂರು ಬೈ ಪಾಸ್ ರಸ್ತೆ, ಬಸ್ ನಿಲ್ದಾಣ ವೃತ್ತದಿಂದ ಈಶ್ವರ ದೇವಸ್ಥಾನ ತಲುಪಿತು. ವಿವಿಧ ಕಲಾ ತಂಡಗಳು, ಕುಂಭಮೇಳ, ಡೊಳ್ಳು ಕುಣಿತ,ನಂದಿ ಕೋಲು ಕುಣಿತ ನೋಡುಗರ ಕಣ್ಮನ ಸೆಳೆದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಲಹಳ್ಳಿಯ ಶ್ರೀ ಜಯಶಾಂತಲಿಂಗ ಶಿವಾಚಾರ್ಯರು ವಹಿಸಿದ್ದರು.ಸಂತೆಕೆಲ್ಲೂರಿನ ಮಹಾಂತಲಿಂಗ ಶಿವಾಚಾರ್ಯರು,ಅಂಕಲಿಮಠದ ವೀರಭದ್ರ ಸ್ವಾಮೀಜಿ,ದೇವರ ಭೂಪರದ ಅಭಿನವ ಗಜದಂಡ ಶಿವಾಚಾರ್ಯರು, ಹುನುಕುಂಟಿಯ ಶರಣಯ್ಯ ತಾತ, ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ, ಮಾಜಿ ಶಾಸಕ ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಬಸಪ್ಪ ಹೆಸರೂರು ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು.

Don`t copy text!